ಭಜಗೋವಿಂದಂ ಸ್ತೋತ್ರ - ಮೋಹಮುದ್ಗರ
ಪ್ರವೇಶನ :
ಭಜಗೋವಿಂದಂ ಸ್ತೋತ್ರವು, ಅಧ್ಯಾತ್ಮಿಕ ದಿಗ್ಗಜರಾದ ಜಗದ್ಗುರು ಆದಿ ಶಂಕರಾಚಾರ್ಯರ ಸಣ್ಣ ಕೃತಿಗಳಲ್ಲಿ
ಒಂದು. ಇದನ್ನು ಪ್ರಕರಣ ಗ್ರಂಥವೆಂದು ( ಪ್ರಮುಖ
ಕೃತಿಗೆ ಮುನ್ನುಡಿಯಾಗಿ) ವಿಭಾಗಿಸಲಾಗಿದೆ. ಇದನ್ನು ಭಜನೆಯ ರೂಪದಲ್ಲಿ ಪಠಿಸಿದರೂ ಕೂಡಾ ಇದು ವೇದಾಂತದ ಪ್ರಮುಖ ಸಾರವನ್ನೊಳಗೊಂಡಿದೆ
ಹಾಗೂ ಮನುಷ್ಯನನ್ನು ತನ್ನ ಜೀವನದ ಪ್ರಮುಖ ಉದ್ದೇಶವೇನು, ಯಾಕೆ ಆಸ್ತಿಯನ್ನು
ವೃಥಾ ಗಳಿಸುತ್ತಿರುವುದು, ಸಂಸಾರ ಚಕ್ರದಲ್ಲಿ ಸಿಲುಕಿ ಶಾಂತಿ ಇಲ್ಲದಿರುವುದು,
ಜೀವನದ ಉದ್ದೇಶವೇನು, ಯಾವುದು ಸತ್ಯ ಎಂಬುದರ ಬಗೆಗೆ
ಆಳವಾಗಿ ವಿಚಾರಮಾಡಲು ಪ್ರೇರೇಪಿಸುತ್ತದೆ. ಈ ರೀತಿ ವಿಚಾರಮಾಡುವ ಮನುಷ್ಯನು
ಎಚ್ಚೆತ್ತು ಅಂತರ್ಮುಖಿಯಾಗಿ ಭಗವಂತನನ್ನರಿಯುವ ಮಾರ್ಗವನ್ನು ಅನುಸರಿಸತೊಡಗುತ್ತಾನೆ. ಈ ಸ್ತೋತ್ರವು ದೇಶದಾದ್ಯಂತ ಅತ್ಯಂತ ಜನಪ್ರಿಯವಾಗಿ ಭಜನಾ ಮಂಡಳಿಗಳಲ್ಲಿ ಹಾಗೂ ಸತ್ಸಂಗಗಳಲ್ಲಿ
ಸ್ತುತಿಸುವುದು ಸರ್ವೇ ಸಾಮಾನ್ಯ.
ಸಾಮಾನ್ಯ ಭಜನೆಯ ಹಾಡುಗಳಿಗೂ ಭಜಗೋವಿಂದಂ
ಸ್ತೋತ್ರಕ್ಕೂ ವ್ಯತ್ಯಾಸವೇನು? ಅನೇಕ
ವಿಧವಾದ ಭಜನೆಗಳನ್ನು ನಾವು ಗಮನಿಸಬಹುದು - ದೇವರ ಅನೇಕ ನಾಮಗಳು,
ಅವನ ವೈಭವದ ಕಾರ್ಯಗಳು, ಪೌರಾಣಿಕ ಕಥೆಗಳು,
ಸಾಧು ಸಂತರ ಅನುಭವಗಳು ಇವೇ ಮುಂತಾದವುಗಳು. ಭಜಗೋವಿಂದಂ
ಸ್ತೋತ್ರವನ್ನು ಭಜನೆಯ ಶೈಲಿಯಲ್ಲಿ ರಚಿಸಿದ್ದರೂ ಅದರ ಅಂತರಾತ್ಮವು ಭಜನೆಗಿಂತ ಹೆಚ್ಚಿನವು.
ಇದು ಆಧ್ಯಾತ್ಮಿಕ ಅದ್ಯಯನ; ಇಲ್ಲಿ ಮುಖ್ಯ ವಿಷಯವು ಸಾಮಾನ್ಯ
ಮನುಷ್ಯನಿಗೆ ಸಂಬಂಧಿಸಿದ್ದು; ಜೀವನದ ವ್ಯಂಗ್ಯ, ಜೀವನದ ಪೊಳ್ಳುತನ, ಜೀವನದಲ್ಲಿನ ಅಸ್ಥಿರ ಸಂತೋಷಗಳು ಮತ್ತು
ಅನ್ವೇಷಣೆಗಳನ್ನೊಳಗೊಂಡಿರುವುದರಿಂದ ಈ ಹಾಡು ಅತ್ಯಂತ ವೈಶಿಷ್ಟ್ಯ- ಪೂರ್ಣವಾದದ್ದು.
ಈ ಹಾಡಿನಲ್ಲಿ ಆಚಾರ್ಯರು ಹೇಗೆ ಮಾನವನು ಜೀವನವನ್ನು ನಡೆಸಬೇಕು;
ದುರಾಸೆ ಹಾಗೂ ವಿಷಯಾಸಕ್ತಿಗಳನ್ನು ನಿವಾರಿಸಿಕೊಳ್ಳಬಹುದು, ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ. ಅದಕ್ಕಾಗಿಯೇ ಈ ಸ್ತೋತ್ರವನ್ನು " ಮೋಹ - ಮುದ್ಗರಮ್" (ಮಾಯೆಯನ್ನು ನಾಶಮಾಡುವುದು ) ಎಂದೂ ಕರೆಯಲ್ಪಡುತ್ತದೆ. ಭಗವದ್ಗೀತೆಗೆ ಇದು ಸಮಾನಾಂತರ ಸ್ತೋತ್ರ.
ಭಗವಾನ್ ಶ್ರೀಕೃಷ್ಣನು ಮಧುರವಾದ ಹಾಗೂ ಸಂಗೀತಮಯವಾದ ಪದಗಳ ಮೂಲಕ ಅರ್ಜುನನನ್ನು
ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಮನವೊಲಿಸುತ್ತಾನೆ. ಶಂಕರಾಚಾರ್ಯರೂ
ಕೂಡಾ ಇಲ್ಲಿ ಇದೇ ಮಾರ್ಗವನ್ನನುಸರಿಸಿದ್ದಾರೆ. ಈ ಸ್ತೋತ್ರದಲ್ಲಿ ಆಚಾರ್ಯರು
ಸಾಧಕರಿಗೆ ಭಗವದ್ಗೀತೆಯನ್ನು ಅಧ್ಯಯನ ಮಾಡಲು ಪ್ರಚೋದಿಸುತ್ತಾರೆ. ಹಾಗೆ
ನೋಡಿದರೆ ಭಜಗೋವಿಂದಂ ಸ್ತೋತ್ರವು ಭಗವದ್ಗೀತೆಯ ಸಂಕ್ಷಿಪ್ತ ಆವೃತ್ತಿಯೆಂದರೆ ತಪ್ಪಗಲಾರದು ಹಾಗೂ
ಈ ಸ್ತೋತ್ರವು ಸಾಧಕರಿಗೆ ಭಗವದ್ಗೀತೆಯನ್ನು ಗಂಭೀರವಾಗಿ ಅಧ್ಯಯನ ಮಾಡಲು ಪ್ರೇರೇಪಿಸುತ್ತದೆ.
ಭಜಗೋವಿಂದಂ ಸ್ತೋತ್ರವು ಸಾಧಾರಣವಾದದ್ದೆಂದು
ಅನಿಸಿದರೂ ಆಚಾರ್ಯರು ಈ ಸ್ತೋತ್ರದಲ್ಲಿ ಕಾರ್ಯಗತಗೊಳಿಸಬಹುದಾದ ವೇದಾಂತದ ತತ್ವಗಳನ್ನು ಉತ್ತಮವಾಗಿ
ಸಾಂದ್ರೀಕರಿಸಿದ್ದಾರೆ. ಸಾಮಾನ್ಯ ಓದುಗರಿಗೆ ಜ್ಞಾನ ಹಾಗೂ ಭಕ್ತಿಗಳಿಗೆ
ಸಂಬಂಧಿಸಿದ ಪ್ರಮುಖ ತತ್ವಗಳನ್ನು ಸ್ತೋತ್ರದಲ್ಲಿ ತಿಳಿಸಿದ್ದಾರೆ. ಜ್ಞಾನ
ಸಮುದ್ರವನ್ನು ಸಂಪೂರ್ಣವಾಗಿ ಕುಡಿದ ಹಾಗೂ ಪರಮೋಚ್ಛ ಜ್ಞಾನಿಗಳಾದ ಆಚಾರ್ಯರು ತಮ್ಮ ಕಡೆಯ ದಿನಗಳಲ್ಲಿ
ಭಕ್ತಿಗೆ ಸಂಪೂರ್ಣ ಶರಣಾಗಿದ್ದರು. ಅತ್ಯುನ್ನತ ಮಟ್ಟದ ಮಹಾ ಜ್ಞಾನಿಯಾದ
ಶಂಕರರೇ ಭಕ್ತಿಯ ಪ್ರಾಮುಖ್ಯತೆಯನ್ನು ಒಪ್ಪಿಕೊಂಡರೆಂದರೆ ಜ್ಞಾನ ಹಾಗೂ ಭಕ್ತಿಯೆರಡೂ ಒಂದೇ ಎಂಬುದನ್ನು
ಪ್ರತ್ಯೇಕವಾಗಿ ವಿವರಿಸುವ ಅಗತ್ಯವೇ ಇಲ್ಲ. ಯಾರಾದರೂ ಇವೆರಡೂ ಬೇರೆ ಎಂದು
ಭಾವಿಸಿದಲ್ಲಿ ಅವರು ಅಜ್ಞಾನಿಗಳು ಎಂದು ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರು ಬಣ್ಣಿಸಿದ್ದಾರೆ. ಜ್ಞಾನದ ಪರಾಕಾಷ್ಟೆಯು ಭಕ್ತಿ ಮತ್ತು ಭಕ್ತಿಯ ಅತ್ಯುನ್ನತ ಸ್ಥಾನವು ಜ್ಞಾನ.
ಭಜಗೋವಿಂದಂ ಸ್ತೋತ್ರವು ಮನುಷ್ಯನಲ್ಲಿ
ಜೀವನದ ಅಸ್ಥಿರತೆಯಬಗ್ಗೆ, ಪ್ರಾಪಂಚಿಕ ವಸ್ತುಗಳನ್ನು ಭೋಗಿಸುವುದರಲ್ಲಿನ
ಅನಿಶ್ಚತತೆ ಮತ್ತು ಭಗವಂತನಲ್ಲಿ ಧ್ಯಾನ ಮಾಡುವುದರ ಅಗತ್ಯತೆಗಳನ್ನು ಮನದಟ್ಟಾಗು- ವಂತೆ ಸಂದೇಶವನ್ನು ನೀಡುತ್ತದೆ. ಸಂಪೂರ್ಣ ಸ್ತೋತ್ರದಲ್ಲಿ ಇದೇ
ಭಾಷೆಯನ್ನು ಉಪಯೋಗಿಸಲಾಗಿದೆ. ಆಚಾರ್ಯರು ಭೌತಿಕ ಸುಖದ ತತ್ವಗಳನ್ನು ಖಂಡಿಸುವುದಲ್ಲದೇ
ಅವುಗಳಿಂದುಧ್ಬವಿಸುವ ಸಮಸ್ಯೆಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಹಾಗೂ ಭಗವಂತನ ಅರಿವಿಕೆಯನ್ನು
ಮನಗಾಣುವ ಮಾರ್ಗವನ್ನು ಸೂಚಿಸುತ್ತಾರೆ. ಆಚಾರ್ಯರು ಗೃಹಸ್ಥ ಹಾಗೂ ಸಂನ್ಯಾಸಿಗಳಿಬ್ಬರಿಗೂ
ಜೀವನದ ಅತ್ಯುನ್ನತ ಗುರಿಯಾದ ಭಗವಂತನ ಬಗ್ಗೆ ಅರಿವಿಕೆಯನ್ನು ಹೇಗೆ ತಲುಪಬಹುದೆಂಬುದರ ಬಗೆಗೆ ಎಚ್ಚರದಿಂದ
ತಯಾರಿಸಿದ ಯೋಜನೆಯನ್ನು ಪ್ರಸ್ತುತ ಪಡಿಸುತ್ತಾರೆ. ಭಕ್ತಿ-ಜ್ಞಾನ - ಕರ್ಮ - ರಾಜಯೋಗಗಳ ಚತುಷ್ಪಥದ
ಮಾರ್ಗವನ್ನು ಆಚಾರ್ಯರು ತಮ್ಮದೇ ಆದ ರೀತಿಯಲ್ಲಿ ಪ್ರಸ್ತುತ- ಪಡಿಸಿದ್ದಾರೆ.
ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ
ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸಲಾಗಿದೆ. ಪ್ರತಿಯೊಂದು ಶ್ಲೋಕದ ಪಠಣೆಯ ನಂತರ ಇದನ್ನು ಹೇಳಿಕೊಳ್ಳಲಾಗುತ್ತದೆ. ಪಲ್ಲವಿ ಹಾಗೂ ನಂತರದ ಹನ್ನೆರಡು ಶ್ಲೋಕಗಳನ್ನು ಶಂಕರಾಚಾರ್ಯರೇ ರಚಿಸಿರುವರು.
ಹೀಗಾಗಿ ಈ ಭಾಗವನ್ನು "ದ್ವಾದಶ ಮಂಜರಿಕಾ ಸ್ತೋತ್ರ"
( ಹನ್ನೆರಡು ಸುಂದರ ಪುಷ್ಪಗಳ ಪುಷ್ಪಗುಚ್ಛ ) ವೆಂದು
ಕರೆಯಲ್ಪಟ್ಟಿದೆ. ಅವರೊಡನಿದ್ದ ಹದಿನಾಲ್ಕು ಶಿಷ್ಯರೂ ದ್ವಾದಶ ಮಂಜರಿಕಾ
ಸ್ತೋತ್ರದಿಂದ ಸ್ಫೂರ್ತಿ ಗೊಂಡು ಪ್ರತಿಯೊಬ್ಬರೂ ಒಂದೊಂದು ಶ್ಲೋಕಗಳನ್ನು ರಚಿಸಿದರು. ಈ ಹದಿನಾಲ್ಕು ಸ್ತೋತ್ರಗಳನ್ನು "ಚತುರ್ದಶಾ ಮಂಜರಿಕಾ
ಸ್ತೋತ್ರಮ್" ( ಹದಿನಾಲ್ಕು ಪುಷ್ಪಗಳ ಪುಷ್ಪಗುಚ್ಛ ) ಎಂದು ಗುರುತಿಸಲಾಗಿದೆ. ಇದರಿಂದ ಸುಪ್ರಸನ್ನರಾದ ಆಚಾರ್ಯರು
ಮತ್ತೂ ನಾಲ್ಕು ಶ್ಲೋಕಗಳನ್ನು ರಚಿಸಿ ಶಿಷ್ಯರನ್ನು ಆಶೀರ್ವದಿಸಿದರು. ಹೀಗಾಗಿ ಭಜಗೋವಿಂದಂ ಸ್ತೋತ್ರವು 31 ಶ್ಲೋಕಗಳಾಗಿ ಸುಪ್ರಸಿದ್ದವಾಯಿತು.
ಈ ಶ್ಲೋಕಗಳನ್ನು ರಚಿಸಿದ ಶಿಷ್ಯರ ಹೆಸರುಗಳನ್ನು ಪರಾಮರ್ಶಿಸಬಹುದು. ಅವರುಗಳೆಂದರೆ - ಪದ್ಮಪಾದ, ತ್ರೋತಕಾಚಾರ್ಯ,
ಹಸ್ತಾಮಲಕ, ಸುಬೋಧಾಚಾರ್ಯ, ಸುರೇಶ್ವರಾಚಾರ್ಯ (ಮಂಡನ ಮಿಶ್ರ), ನಿತ್ಯಾನಂದ, ನಿತ್ಯನಾಥ, ಆನಂದಗಿರಿ,
ಯೋಗಾನಂದ, ಭಾರತಿವಂಶ, ವಾರ್ತಿಕಕಾರ,
ಸುರೇಂದ್ರ, ಸುಮಾತಿರ್, ಮೇಧಾತೀರ್ಥ
ಮತ್ತು ಭಾರತೀದಾಸ.
ಭಜಗೋವಿಂದಂ ಸ್ತೋತ್ರ ರಚನೆಯ ಹಿನ್ನೆಲೆಯು
ಕುತೂಹಲಕರವಾಗಿದೆ. ಒಮ್ಮೆ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ
ಕಾಶಿಪಟ್ಟಣದ ಇಕ್ಕಟ್ಟಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ವೃದ್ಧನು ಸಂಸ್ಕೃತದ
ಪಾಣಿನೀ ವ್ಯಾಕರಣ ಸೂತ್ರಗಳನ್ನು ಕಂಠಪಾಠ ಮಾಡುತ್ತಿದ್ದುದು ಅವರ ಗಮನಕ್ಕೆ ಬಂತು. ಆಚಾರ್ಯರು ವೃದ್ಧನ ಸ್ಥಿತಿಯನ್ನು ನೋಡಿ ಮನನೊಂದು, ಈ ವೃದ್ಧನು
ತನ್ನ ಬಾಳಿನ ಸಂಜೆಯ ದಿನಗಳನ್ನು ಭಗವಂತನ
ನಾಮಸ್ಮರಣೆಯಲ್ಲಿ ಕಳೆಯುವುದನ್ನು
ಬಿಟ್ಟು ಭಾಷೆಯ ವ್ಯಾಕರಣವನ್ನು ಕಲಿಯಲು ಶ್ರಮಿಸುತ್ತಿರುವನಲ್ಲಾ ಹಾಗೂ ನಿಸ್ಸಾರವಾದ ಕೇವಲ ಬೌದ್ಧಿಕ
ಶ್ರಮದಿಂದ ತನ್ನ ಆಯುಷ್ಯವನ್ನೆಲ್ಲಾ ಕಳೆದು ಆತ್ಮಜ್ಞಾನವನ್ನರಿಯದಂತಾಗುವುದನ್ನು ಕಂಡು ಕನಿಕರವುಂಟಾಗಿ
ಹಾಗೂ ಪ್ರಪಂಚದಲ್ಲಿ ಅನೇಕರು ಕೇವಲ ಬೌದ್ಧಿಕ ಕಸರತ್ತು, ಇಂದ್ರಿಯ ಸುಖೋಪ ಭೋಗಗಳಲ್ಲಿ ಮಗ್ನರಾಗಿ ದೈವಿಕ ಚಿಂತನೆಯಿಂದ ವಂಚಿತರಾಗಿರುವುದನ್ನು ಅರಿತು
ಒಂದು ರೀತಿಯ ಮೂರ್ಖತನದ ಜೀವಿತವನ್ನು ಖಂಡಿಸಿ ಛೀಮಾರಿ ಹಾಕುವ ರೀತಿಯಲ್ಲಿ ರಚಿಸಿದ ಪ್ರಖ್ಯಾತ ಪದ್ಯಗಳೇ
ಭಜಗೋವಿಂದಂ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಆಚಾರ್ಯರು ವೃದ್ದನಿಗೆ
ಈ ಇಳಿವಯಸ್ಸಿನಲ್ಲಿ ಭಾಷಾವ್ಯಾಕರಣವನ್ನು ಕಲಿಯುವುದರ ಬದಲು ಭಗವಂತನ (ಗೋವಿಂದನ) ನಾಮಸ್ಮರಣೆ ಮಾಡಲು ಹುರಿದುಂಬಿಸುತ್ತಾರೆ.
ಆಚಾರ್ಯರು ವೃದ್ಧನನ್ನು ಮೂಢಮತಿ ಎಂದು ಕರೆಯುವುದರ ಮೂಲಕ ಅವನಿಗೆ ಛೀಮಾರಿ ಹಾಕಿದರೆಂದು
ಭಾವಿಸಬಹುದು. ಭಜಗೋವಿಂದಂ ಸ್ತೋತ್ರದ ಧ್ವನಿಯು ಮೃದುವಾದದ್ದಲ್ಲ ಬದಲಾಗಿ
ವಿಲಕ್ಷಣ ಕಾವ್ಯಾತ್ಮಕ ಮತ್ತು ಪರಿಪೂರ್ಣ ಸಂಯೋಜನೆಯಿಂದ ಕೂಡಿದ್ದರೂ ಒಂದುರೀತಿ ಪೆಟ್ಟುಕೊಡುವ ರೀತಿಯಲ್ಲಿದೆ.
ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಏಕೆಂದರೆ ಆಳವಾದ ನಿಷ್ಕ್ರಿಯತೆಯಲ್ಲಿ ರುವವರಿಗೆ
ಇದೇ ರೀತಿಯಲ್ಲಿ ಹೇಳಬೇಕಾಗುತ್ತದೆ. ಮೃದುವಾದ ರೀತಿಯು ಅಷ್ಟು ಪ್ರಭಾವಕಾರಿಯಾಗಿ
ರುವುದಿಲ್ಲ ಹಾಗೂ ಪ್ರಭಾವವನ್ನು ತಡಮಾಡುತ್ತದೆ. ಆಚಾರ್ಯರು ಮುಂದಿನ
ಶ್ಲೋಕಗಳಲ್ಲಿ ವಿವರಿಸಿರುವಂತೆ ಮುನ್ಸೂಚನೆ ನೀಡದೇ ಸಾವಿನ ಘಂಟೆಯು ಬಾರಿಸತೊಡಗಿದಾಗ ವ್ಯಾಕರಣವು
ಮನುಷ್ಯನನ್ನು ರಕ್ಷಿಸುವುದಿಲ್ಲ, ಹಾಗಾಗಿ ವಿಷಯವು ತುರ್ತಾಗಿದೆ.
ಹಾಗಾಗಿ ಸ್ತೋತ್ರವು ಯಾವುದೇ ಪೀಠಿಕೆ ಇಲ್ಲದೇ ಪ್ರಾರಂಭವಾಗುತ್ತದೆ. ಇದೇ ಈ ಸ್ತೋತ್ರದ ವೈಶಿಷ್ಟ್ಯತೆ.
ಸ್ವಯಂಪ್ರಕಾಶ ಸ್ವಾಮಿನ್ ಅವರ ದ್ವಾದಶಮಂಜರಿಕಾ- ವಿವರಣ, ಹಸ್ತಪ್ರತಿ ವ್ಯಾಖ್ಯಾನ
(ಗೌರ್ನಮೆಂಟ್ ಓರಿಯೆಂಟಲ್ ಮೆನುಸ್ಕ್ರಿಪ್ಟ್ ಲೈಬ್ರರಿ, ಮದ್ರಾಸ್; ನಂ.ಡಿ.10067). ಈ ಹಸ್ತಪ್ರತಿಯಲ್ಲಿ ಆಚಾರ್ಯರ ಭಜಗೋವಿಂದಂ ಸ್ತೋತ್ರ
- ದ್ವಾದಶ ಮಂಜರಿಕಾ ಸ್ತೋತ್ರದ ಬಗೆಗೆ ಈ ರೀತಿ ವಿವರಿಸುತ್ತಾರೆ:
ಆಚಾರ್ಯಕೃತಿ-ಸಂಬಂಧಾನ್- ಮದವಾಕ್ಯಮ್
ಸ್ಲಘ್ಯಾನ್ ಇವ ಹಿ, |
ರಥ್ಯೋದಕಮ್ ಯಥಾ ಗಂಗಾಪ್ರವಾಹ-
ಪತನಕ್ ಶುಭಮ್ ||
ಈ ಹಸ್ತಪ್ರತಿಯಲ್ಲಿ ಭಜಗೋವಿಂದಂ
ಪದವು ಇರುವುದಿಲ್ಲ ಅಲ್ಲದೇ ವೃದ್ಧನ ವ್ಯಾಕರಣ ಪಠಣದ ಬಗ್ಗೆಯೂ ಯಾವುದೇ ಉಲ್ಲೇಖವಿಲ್ಲ. ಮುಂದುವರೆದು ಮುದ್ರಿತ ಕೃತಿಗಳಲ್ಲಿ ಹನ್ನೆರಡು ಶ್ಲೋಕಗಳ ನಂತರ
ಶಂಕರರನ್ನು ಕುರಿತು ಹದಿಮೂರನೇ ಶ್ಲೋಕವನ್ನು ಸೇರಿಸಲಾಗಿದೆ. ಅದರಂತೆ
ಸ್ತೋತ್ರದ ಕರ್ತೃ ಹಾಗೂ ಸ್ತೋತ್ರ ರಚನೆಯ ಸಂದರ್ಭವನ್ನು ವಿವರಿಸಲಾಗಿದೆ.
ದ್ವಾದಶಮಂಜರಿಕಾಭಿರ್ - ಅಷೇಶ
ಕಥಿತೋ ವ್ಯಾಕರಣಾಸೈಷ,
ಉಪದೇಷೋಭುದ್ ವಿದ್ಯಾನಿಪುಣಃ
ಶ್ರೀಮಶ್ಚಂಕರಭಗವಾಚ್ಚರಣಾತ್
ಹನ್ನೆರಡು ಶ್ಲೋಕಗಳ ಪುಷ್ಪಗುಚ್ಛದ
ಮೂಲಕ ಎಲ್ಲವನ್ನೂ ವ್ಯಾಕರಣಕಾರನಿಗೆ ಶಂಕರ ಭಗವತ್ಪಾದರು ಬೋಧಿಸುತ್ತಾರೆ.
ಈ ಶ್ಲೋಕದ ಬದಲು ಸ್ವಯಂಪ್ರಕಾಶರು
ತಮ್ಮ ಮುದ್ರಿತ ಕೃತಿಯಲ್ಲಿ ಈ ರೀತಿ ವಿಶ್ಲೇಶಿಸಿದ್ದಾರೆ:
ದ್ವಾದಶಮಂಜರಿಕಾಭಿರ್ - ಅಷೇಶ
ಶಿಷ್ಯಾನಾಂ ಕಥಿತೋ ಹ್ಯುಪದೇಶ
ಯೇಶಾನ್ ನೈವ ಕರೋತಿ ವಿವೇಕಂ
ತೇ ಪಶ್ಯಂತೇ ನರಕಂ ಅನೇಕಮ್
ಹನ್ನೆರಡು ಶ್ಲೋಕಗಳ ಪುಷ್ಪಗುಚ್ಛದ
ಮೂಲಕ ಎಲ್ಲವನ್ನೂ ಶಿಷ್ಯರಿಗೆ ಬೋಧಿಸಿದರು. ಈ ಬೋಧನೆಯು ಯಾರಿಗೆ ತಾರತಮ್ಯದ ಬೌದ್ಧಿಕತೆಯು ಉಂಟಾಗುವುದಿಲ್ಲವೋ ಅವರುಗಳು ನರಕದಲ್ಲಿ
ನರಳುತ್ತಾರೆ.
ಸ್ವಯಂಪ್ರಕಾಶರ ಪ್ರಕಾರ ಶಿಷ್ಯರಲ್ಲಿ
ಎರಡು ವಿಧದವರಿರುತ್ತಾರೆ. ವ್ಯಾಕುಲ ಚಿತ್ತರು (ಕಲುಷಿತ ಮನಸ್ಸಿನವರು) ಹಾಗೂ ಅವ್ಯಾಕುಲ ಚಿತ್ತರು
(ಶುದ್ಧ ಮನಸ್ಸುಳ್ಳವರು). ಮೊದಲನೇ ವರ್ಗದ ಶಿಷ್ಯನ ಮನಸ್ಸು
ಕೆಟ್ಟ ಪ್ರವೃತ್ತಿಗಳು, ಮನೋವಿಕಾರ, ವಿಷಯಾಸಕ್ತಿ
ಮುಂತಾದವುಗಳಿಂದ ಕೂಡಿರುತ್ತವೆ. ಎರಡನೇ ವರ್ಗದ ಶಿಷ್ಯನಲ್ಲಿ ಯಾವುದೇ
ಕಲ್ಮಷಗಳಿರುವುದಿಲ್ಲ ಹಾಗೂ ಹುಟ್ಟಿನಿಂದಲೇ ವಿದ್ಯಾವಂತನಾಗಿ, ಸನ್ನಡತೆಯನ್ನು
ರೂಢಿಸಿಕೊಂಡು ನಿಗರ್ವಿಯಾಗಿ ಮತ್ತು ಗಾಳಿಯಲ್ಲಿ ಅರಮನೆಯನ್ನು ಕಟ್ಟದೇ ಇರುವವನು. ಅಂಥಹ ಶಿಷ್ಯನು ಮೊದಲ ಬಾರಿಗೇ ವೇದಾಂತದ ಜ್ಞಾನವನ್ನು ಪಡೆದುಕೊಳ್ಳುತ್ತಾನೆ.
ಮೊದಲನೇ ವರ್ಗದ ಶಿಷ್ಯನು ಮೊದಲಿಗೆ ತನ್ನ ಮನಸ್ಸಿನಲ್ಲಿ ತುಂಬಿಕೊಂಡಿರುವ ವಿಕಾರಗಳನ್ನು
ಯೋಗಾಭ್ಯಾಸದ ಮೂಲಕ ದೂರಮಾಡಿ ನಂತರವೇ ವೇದಾಂತದ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯ.
ಮೋಹ ಮುದ್ಗರದ ಕೆಲವು ಪ್ರತಿಗಳಲ್ಲಿ
ಪದ್ಯಗಳ ಸಂಖ್ಯೆಯು ಕಡಿಮೆ ಇರುವುದು. ಕೆಲವು ಕಡೆ
ಪದ್ಯಗಳ ಅನುಕ್ರಮಣಿಕೆಯಲ್ಲಿ ವ್ಯತ್ಯಾಸವಿರುವುದು. ಮತ್ತೆ ಕೆಲವು ಪುಸ್ತಕಗಳಲ್ಲಿ
ಒಂದು ಪದ್ಯದ ಉತ್ತರಾರ್ಧವು ಮತ್ತೊಂದು ಪದ್ಯದ ಪೂರ್ವಾರ್ಧದೊಂದಿಗೆ ಸೇರಿದೆ ಕೆಲವು ಕಡೆ ಪದಗಳು
ಅದಲುಬದಲಾಗಿದೆ. ಇಷ್ಟಾದರೂ ಯಾವುದರಲ್ಲಿಯೂ ಅಂತರಾರ್ಥದಲ್ಲಿ ಬದಲಾವಣೆ
ಇರುವುದಿಲ್ಲ.
ಸರಳವಾದ ಈ ಪದ್ಯಗಳನ್ನು ಹೇಳಿರುವುದು
ಮೇಧಾವಿಗಳಿಗೆ, ತಾರ್ಕಿಕರುಗಳಿಗಲ್ಲ. ಈ ಪದ್ಯಗಳಲ್ಲಿ ವಿವಾದಕ್ಕೆ ಆಸ್ಪದವನ್ನೀಯುವ ಯಾವ ಯುಕ್ತಿವಾದಗಳೂ ಇರುವುದಿಲ್ಲ.
ಶಂಕರಾಚಾರ್ಯರು ಯಾರಿಗೆ ಈ ಪದ್ಯಗಳನ್ನು ಉಪದೇಶಿಸಿದ್ದರೋ ಅವರೆಲ್ಲಾ ತಮ್ಮದೇ ಆದ
ಜಂಜಾಟ, ಕ್ಲೇಶಗಳ ಒತ್ತಡದಲ್ಲಿ ಸಿಲುಕಿ ದಾರಿಕಾಣದ ಯಾತ್ರಿಕರಂತಿರುವವರಾಗಿರಬೇಕು.
ಈ ಪದ್ಯಗಳು ಜೀವನದ ಜಂಜಾಟದಲ್ಲಿ
ಬಂಧಿತರಾಗಿ, ಕುರುಡರಾಗಿ, ಅಜ್ಞಾನ ಹಾಗೂ ದುಃಖದಲ್ಲಿ ಮುಳುಗಿದವರಿಗೆ ಆಶಾದಾಯಕವಾದ ಮಾರ್ಗವನ್ನು ಸೂಚಿಸುತ್ತದೆ.
ಈ ಸ್ತೋತ್ರದಲ್ಲಿ ಕೇವಲ ನಮ್ಮ ನಿತ್ಯ ಜೀವನದ ಕ್ಷಣಿಕ ಸುಖಗಳ ಬಗೆಗೆ ಹಾಗೂ ಹೇಗೆ
ಅವುಗಳು ನಮ್ಮನ್ನು ಬಂಧಿಸಿ, ಕುರುಡರನ್ನಾಗಿಸಿ ನಮ್ಮನ್ನು ಅಜ್ಞಾನ ಮತ್ತು
ದುಃಖದಲ್ಲಿ ಮುಳುಗಿಸುತ್ತದೆ ಎಂಬುದನ್ನು ಮನದಟ್ಟಾಗುವಂತೆ ವಿವರಿಸುತ್ತಾರೆ. ಅವರು ಪ್ರತಿಯೊಬ್ಬರೂ ಶಾಶ್ವತ ಹಾಗೂ ಕ್ಷಣಿಕಗಳ ನಡುವಿನ, ನೈಜತೆ
ಹಾಗೂ ಅವಾಸ್ತವಿಕತೆಗಳ ನಡುವಿನ, ತಾರತಮ್ಯತೆಗಳನ್ನು ಗ್ರಹಿಸುವ ಕಣ್ಣುಗಳನ್ನು
(ವಿವೇಕ) ಬೆಳೆಸಿಕೊಳ್ಳುವಂತೆ ಆದೇಶಿಸಿ ಹಾಗೇ
ಮುಂದುವರೆದು ಪ್ರಾಪಂಚಿಕ ಆಕರ್ಷಣೆಗಳ ಬಗೆಗೆ ನಿರಾಸಕ್ತಿಯನ್ನು (ವೈರಾಗ್ಯ)
ಅಭ್ಯಸಿಸಿ ಭಗವಂತನೆಡೆಗೆ (ಗೋವಿಂದ)
ಸಂಪೂರ್ಣವಾದ ಭಕ್ತಿಯನ್ನು ಬೆಳೆಸಿಕೊಂಡು ಅದರಿಂದ
ಹುಟ್ಟು ಸಾವುಗಳ (ಸಂಸಾರ) ಚಕ್ರದಿಂದ ಮುಕ್ತಿ
ಪಡೆಯಬೇಕೆಂದು ಇಚ್ಛಿಸುತ್ತಾರೆ.
ಶಿಷ್ಯ ಎಂದರೆ ಗುರುವಿನಿಂದ ಉಪದೇಶವನ್ನು
ಪಡೆದವನು, ಜ್ಞಾನಾರ್ಜನೆ ಮಾಡಿದವನು,
(ಶಿಕ್ಷತೇ ಇತಿ ಶಿಷ್ಯಃ)
ತಾನು ಹಿಂದೆ ಇರಿಸಿಕೊಂಡಿದ್ದ ಬಾಹ್ಯಸಂಬಂಧದಿಂದ
ಬಿಡಿಸಿಕೊಂಡು, ಹೆಚ್ಚು ಅಂತರ್ಮುಖಿ ಯಾದವನು.
(ಶಿಶ್ಯಾತ್ ವಿಶಿಷ್ಯತೇ ಶಾಸ್ತ್ರಾದಿ ಪರಿಜ್ಞಾನೇನ ಬಹಿರ್ಮುಖಃ ಅಪೇಕ್ಷ್ಯ ಇತಿ
ಶಿಷ್ಯಃ)
ಶಾಸ್ತ್ರಾಧ್ಯಯನದ ಫಲವಾಗಿ ತನ್ನ
ಇಂದ್ರಿಯ ಚಾಪಲ್ಯಗಳನ್ನು ಸಂಯಮಗೊಳಿಸಿ ಅವು ನಶಿಸುವಂತೆ ಮಾಡಬಲ್ಲವನು.
( ಇಂದ್ರಿಯಾದಿ ಪ್ರವೃತ್ತಿಂ ಶಿಕ್ಷ್ಯತಿ
ಇತಿ ಶಿಷ್ಯಃ ) ಎಂದರ್ಥ.
ಇಂಥಹ ನಿಜವಾದ ಶಿಷ್ಯರಿಗೆ ಭಜಗೋವಿಂದಂ
ಉಪದೇಶಿಸಲ್ಪಟ್ಟಿರುವುದು.
ಎಲ್ಲ ಪದ್ಯಗಳೂ ಚಟಪಟಗುಟ್ಟುವ ಶೈಲಿಯಲ್ಲಿದ್ದು
ತೀವ್ರ ಪರಿಣಾಮಕಾರಿಯಾಗಿದೆ.
|
ಭಜಗೋವಿಂದಂ ಸ್ತೋತ್ರ - ಶ್ಲೋಕಗಳು - ಸಂಸ್ಕೃತದಲ್ಲಿ, ನಂತರ ಕನ್ನಡದಲ್ಲಿ. ಶ್ಲೋಕದ ಅರ್ಥ ವಿವರಣೆ ಹಾಗೂ ವ್ಯಾಖ್ಯಾನಗಳು.
|
ಶ್ಲೋಕ - 1 - ಸಂಸ್ಕೃತದಲ್ಲಿ
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕೃಂಕರಣೇ ||
|
ಕನ್ನಡದಲ್ಲಿ :
ನೆನೆ ಗೋವಿಂದನ ನೆನೆ ಗೋವಿಂದನ
ಗೋವಿಂದನ ನೆನೆ ಮೂಢಮತಿ
ಮೃತ್ಯುವು ತಾ ಬಂದೆರಗುವ ಸಮಯದಿ
ಡುಕೃಙ್ಕರಣವು ರಕ್ಷಿಸದು
|
ಅರ್ಥ ವಿವರಣೆ:
ಗೋವಿಂದನ ಪೂಜಿಸು, ಗೋವಿಂದನ ಪೂಜಿಸು,
ಗೋವಿಂದನ ಪೂಜಿಸು, ಎಲೋ ಮೂರ್ಖಾ |
ವ್ಯಾಕರಣದ ನಿಯಮಗಳು ನಿನ್ನ ಸಾವಿನ
ಕ್ಷಣದಲ್ಲಿ ನಿನ್ನನ್ನು ಉಳಿಸಲಾರವು.
|
ವ್ಯಾಖ್ಯಾನ:
ಮೊದಲನೇ ಪದ್ಯವನ್ನು ಪಲ್ಲವಿ ಎಂದು
ಪರಿಗಣಿಸಲಾಗಿದೆ. ಸ್ವಯಂಪ್ರಕಾಶರ ಹಸ್ತಪ್ರತಿಯಲ್ಲಿ ಈ ಪದ್ಯವು
ಇಲ್ಲ. ಈ ಪದ್ಯವನ್ನು ಮುಂದಿನ ಪ್ರತಿಯೊಂದು ಪದ್ಯದ ನಂತರವೂ ಹೇಳಿಕೊಳ್ಳುವ
ವಾಡಿಕೆ. ಈ ಪದ್ಯದಲ್ಲಿ ಗುರುವು ಶಿಷ್ಯನಿಗೆ ಹೇಳುವುದೇನೆಂದರೆ ಐಹಿಕ
ಭೋಗಗಳ ಬಗ್ಗೆ ಸದಾ ಚಿಂತಿಸಬೇಡ ಹಾಗೂ ಹಂಬಲಿಸ ಬೇಡ. ಅದರ ಬದಲು ದೈವಚಿಂತನೆಯನ್ನು
ಮನದಲ್ಲಿ ಸದಾ ತುಂಬಿಕೋ ಎಂದು. ಇಲ್ಲಿ ಪ್ರಸ್ತುತ ಪಡಿಸಿರುವ ವ್ಯಾಕರಣ
ನಿಯಮವು ಕೇವಲ ಲೌಕಿಕ ಜ್ಞಾನ ಮತ್ತು ಅವನ್ನು ಪಡೆಯುವ ಬಗೆಗೆ ಮಾತ್ರ ಸೀಮಿತವಾದದ್ದು.
ಈ ಡುಕೃಙ್ಕರಣೆ ವ್ಯಾಕರಣ ಸೂತ್ರವು ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದಲ್ಲಿನ ಧಾತುಪಾಠದಿಂದ
ಆಯ್ದುಕೊಂಡಿದೆ. ನಹಿ ನಹಿ ರಕ್ಷತಿ ಡುಕೃಙ್ಕರಣೆ - ಇದರ ಅರ್ಥವೇನೆಂದರೆ ಮೃತ್ಯುವು ನಿಮ್ಮನ್ನು ಸೆಳೆದುಕೊಂಡು ಹೋಗಲು ಬಂದಾಗ ವ್ಯಾಕರಣವು
ಅಥವಾ ಯಾವುದೇ ವಿಜ್ಞಾನಸಾಧನಗಳು ನಿಮ್ಮನ್ನು ಸಾವಿನ ದವಡೆಯಿಂದ ಪಾರುಮಾಡಲಾರವು ಎಂದು.
ಛಾಂದೋಗ್ಯೋಪನಿಷತ್ತಿನ ಒಂದು ಸಂದರ್ಭದ ಪ್ರಕಾರ ಒಮ್ಮೆ ನಾರದರು ಬ್ರಹ್ಮನ ಮಾನಸ
ಪುತ್ರನಾದ ಸನತ್ಕುಮಾರನ ಬಳಿ ಬಂದು ತನಗೆ ಶ್ರೇಷ್ಟ ಜ್ಞಾನವನ್ನು ಉಪದೇಶಿಸಬೇಕೆಂದು ಪ್ರಾರ್ಥಿಸುತ್ತಾನೆ.
ಆಗ ಸನತ್ಕುಮಾರರು ನಾರದನಿಗೆ ತಿಳಿದಿರುವ ವಿಷಯಗಳನ್ನೆಲ್ಲಾ ಮೊದಲು ವಿವರಿಸಿದಲ್ಲಿ
ನಂತರ ತಾನು ಅವನಿಗೆ ತಿಳಿಯದೇ ಇರುವ ಜ್ಞಾನವನ್ನು ಉಪದೇಶ ಮಾಡುವೆ ಎಂದರು. ಅದಕ್ಕೆ ನಾರದನು ತನಗೆ ತಿಳಿದಿದೆ ಎಂಬ ವಿಷಯಗಳ ಒಂದು ಪಟ್ಟಿಯನ್ನೇ ವಿವರಿಸುತ್ತಾನೆ.
ಆ ಪಟ್ಟಿಯಲ್ಲಿ ಜ್ಯೋತಿಷ್ಯ , ಖಗೋಳಶಾಸ್ತ್ರ
, ಸಂಗೀತ, ಸಾಹಿತ್ಯ ಇತ್ಯಾದಿಗಳು ಇದ್ದವು.
ಅದನ್ನು ಆಲಿಸಿದ ಸನತ್ಕುಮಾರರು ಅವುಗಳೆಲ್ಲವೂ ಕೇವಲ ಹೆಸರುಗಳಷ್ಟೇ. ಇವುಗಳನ್ನೆಲ್ಲಾ ಮೀರಿದ ಅನಂತ ಜ್ಞಾನವೊಂದಿದೆ. ಅದೇ ಅಂತಿಮ
ಜ್ಞಾನ ಎಂದು ವಿವರಿಸುತ್ತಾರೆ. ನಾರದನು ಸಲ್ಲಿಸಿದ ಪಟ್ಟಿಯಲ್ಲಿ ವ್ಯಾಕರಣವೂ
ಇತ್ತು. ಸತ್ಯವನ್ನರಿಯಲು ವ್ಯಾಕರಣವು ಸ್ವಲ್ಪಮಟ್ಟಿಗೆ ಉಪಯೋಗವಾಗಬಹುದು
ಆದರೆ ಅದೇ ಪ್ರಮುಖವಲ್ಲ.
ಸಾವು ಹತ್ತಿರ ಬಂದಾಗ ವ್ಯಾಕರಣ
ಜ್ಞಾನವು ಏನು ಮಾಡುತ್ತದೆ? ವ್ಯಾಕರಣ ಶಾಸ್ತ್ರವಿಶಾರದರೂ ಭಾಷಾತಜ್ಞರೂ
ಸಾವು ಹತ್ತಿರ ಬಂದಾಗ ಯಾವುದೇ ಸಮಾಧಾನವನ್ನು ನೀಡುವ ಸ್ಥಿತಿಯಲ್ಲಿರುವುದಿಲ್ಲ. ಹಾಗಿದ್ದಲ್ಲಿ ಏನನ್ನು ಮಾಡಬೇಕು? ಶಂಕರರ ಉತ್ತರವು,
ಬೇರೆ ಯಾರೇ ಮುನಿಗಳು ನೀಡುವ ಉತ್ತರವೇ, ಭಗವಂತನನ್ನು
ಧ್ಯಾನಿಸು ಹಾಗೂ ಅವನಿಗೆ ಶರಣಾಗು. ಭಗವಾನ್ ರಮಣ ಮಹರ್ಷಿಗಳು ಹೇಳುವಂತೆ
- ಯಾರಿಗೆ ಸಾವಿನ ಬಗ್ಗೆ ಅತೀವ ಭಯವಿರುತ್ತದೋ ಅಂಥವರು ಭಗವಂತನ (ಹುಟ್ಟು ಸಾವುಗಳಿಲ್ಲದವನು) ಚರಣದಲ್ಲಿ ಆಶ್ರಯ ಪಡೆಯುತ್ತಾರೆ.
ಹಾಗೆಯೇ ಭಗವಂತನಲ್ಲಿ ಧ್ಯಾನಮಾಡುವುದನ್ನು
ಸಾವು ಹತ್ತಿರ ಬರುವತನಕ ಮುಂದೂಡುವುದು ಒಂದು ಭ್ರಮೆ. ಸಾವು ನಮ್ಮನ್ನು ಸಮೀಪಿಸಿದಾಗ ನಮ್ಮ ಮನಸ್ಸನ್ನು ಭಗವಂತನೆಡೆಗೆ ತಿರುಗಿಸುವುದು ಅಸಾಧ್ಯ.
ಏಕೆಂದರೆ ಅದು ಬರುವುದಕ್ಕೆ ಬಹಳಷ್ಟು ಮೊದಲಿನಿಂದಲೇ ಭಗವಂತನ ಧ್ಯಾನ ಮನನ ಪೂಜೆ
ಮಾಡುವ ಅಭ್ಯಾಸವಿಲ್ಲದಿದ್ದಲ್ಲಿ ಕೊನೇ ಘಳಿಗೆಯಲ್ಲಿ ಅದು ಅಸಾಧ್ಯ. ಶ್ರೀ
ಕೃಷ್ಣನು ಭಗವದ್ಗೀತೆಯಲ್ಲಿ "ಯಾರು ತನ್ನ ಸಾವಿನ ಕ್ಷಣದಲ್ಲಿ ನನ್ನನ್ನು
ಧ್ಯಾನಿಸುತ್ತಾರೋ ಅವರು ಮಾತ್ರ ತನ್ನ ಶರೀರವನ್ನು ತ್ಯಜಿಸಿ ನನ್ನಲ್ಲಿ ಸೇರುತ್ತಾರೆ."
ಎಂದು ವಿವರಿಸಿದ್ದಾನೆ.
ಭಗವಂತನಲ್ಲಿ ಭಕ್ತಿ ಇರುವ ಅನೇಕರು
ಧಾರ್ಮಿಕ ಜೀವನವನ್ನು ಮೊದಲಿನಿಂದಲೇ ನಡೆಸುವ ಅಗತ್ಯವಿಲ್ಲವೆಂದೂ ಹಾಗೂ ಅದಕ್ಕೆ ಮುದುಕ ರಾಗುವವರೆಗೂ ಇನ್ನೂ ಬಹಳ ಸಮಯವಿದೆ ಎಂದೂ ವೃಥಾ ಕಾಲಹರಣ
ಮಾಡುತ್ತಿರುತ್ತಾರೆ. ಅವರ ಪ್ರಕಾರ ಈ ಮಾರ್ಗವನ್ನು ವೃತ್ತಿ ಜೀವನದಿಂದ
ನಿವೃತ್ತಿಯಾದ ಬಳಿಕ ಅಥವಾ ಬಹಳ ವಯಸ್ಸಾದ ಬಳಿಕ ಅನುಸರಿಸಿದ ರಾಯಿತೆಂಬ ಯೋಚನೆ. ಅಷ್ಟೇ ಏಕೆ ಸಾಯುವ ಕ್ಷಣದವರೆಗೂ ಸಮಯವಿದೆ ಎನ್ನುತ್ತಾರೆ. ಇದು
ಒಳ್ಳೆ ಆಲೋಚನೆಯೇ. ಆದರೆ ಇದು ಅಸಾಧ್ಯ. ಏಕೆಂದರೆ ಸಾವು ನೀವು ಮುದುಕರಾಗುವ ವರೆಗೂ ಕಾಯುತ್ತದೆಂಬ ನಿಯಮವೇನೂ ಇಲ್ಲವಲ್ಲವೇ!
ಅದೂ ಅಲ್ಲದೆ ಮುದುಕರಾದ ಮೇಲೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾವುಗಳು ನಿಃಶಕ್ತರಾಗುತ್ತೇವೆ.
ಆ ಸಂದರ್ಭದಲ್ಲಿ ಧಾರ್ಮಿಕ ಜೀವನವನ್ನು ಅನುಸರಿಸಲು ಇಷ್ಟವಿದ್ದರೂ ಅಸಾಧ್ಯವಾಗಬಹುದು.
ಇಷ್ಟೆಲ್ಲಾ ಇದ್ದರೂ ಈ ರೀತಿ ಯೋಚಿಸುವ ಹಲವರು ಭಗವದ್ಗೀತೆಯಲ್ಲಿ ಉದ್ದರಿಸಿರುವ
ಕೆಳಗೆ ವಿವರಿಸಿರುವ ಶ್ಲೋಕದ ಮೊರೆ ಹೋಗುತ್ತಾರೆ:
ಅಂತ ಕಾಲೇ ಚ ಮಾಮೇವ ಸ್ಮರಣಮುಕ್ತ
ಕಲೇವರಮ್
ಯಃ ಪ್ರಯಾತಿ ಸ ಮದ್ಭಾವಮ್ ಯಾತಿ
ನಾಸ್ತೇ ಅತ್ರ ಸಂಶಯ
……. (ಭಗವದ್ಗೀತ ಶ್ಲೋಕ 5, ಅಧ್ಯಾಯ- 8)
ಸ್ವಾಮಿ ಚಿದ್ಭವಾನಂದರ ವ್ಯಾಖ್ಯಾನದಂತೆ:
"ಮಾನವನ ಜೀವನದುದ್ದಕ್ಕೂ ಉದ್ಭವಿಸುವ
ಎಲ್ಲ ಆಲೋಚನೆಗಳ ಹಾಗೂ ಭಾವನೆಗಳ ಸಮ್ಮಿಳಿತದ ಸಾರವು ಒಟ್ಟುಗೂಡಿ ಅವನು ತನ್ನ ಶರೀರ ತ್ಯಾಗದ ಸಮಯದಲ್ಲಿ ಒಂದೇ ಸ್ಥಿತಿಯಲ್ಲಿರುತ್ತದೆ. ಹಾಗಾಗಿ ಕೊನೆಗಾಲದಲ್ಲಿ ದೇವರನ್ನು ನೆನೆಸಿಕೊಳ್ಳುವ ಸಾಧ್ಯತೆಯು ಅತ್ಯಂತ ವಿರಳವೇ."
ಇಷ್ಟಲ್ಲದೇ ಶಂಕರಾಚಾರ್ಯರ ವ್ಯಾಖ್ಯಾನದಂತೆ
"ಶ್ಲೋಕದಲ್ಲಿ ` ಅಂತ ಕಾಲೇ´ ನಂತರ ಬಂದಿರುವ ` ಚ
´ ಎಂಬ ಅಕ್ಷರವು ಬಹು ಮುಖ್ಯವಾದದ್ದು. ಅದರ ಅರ್ಥ ಭಗವಂತನ
ಬಗೆಗಿನ ಯೋಚನೆ, ಸಾಯುವ ಸಮಯದಲ್ಲೂ, (ಜೀವನ
ಪರ್ಯಂತವೂ ಹಾಗೂ ಸಾವಿನ ಸಮಯದಲ್ಲೂ, "ಪೂರ್ವಾಮಪಿ ಅಂತ ಕಾಲೇ
ಚ") ಎಂದು. ಭಗವದ್ಗೀತೆಯಲ್ಲಿನ ಮುಂದಿನ
ಶ್ಲೋಕವು ಆತ್ಮವು ದೇಹವನ್ನು ತ್ಯಾಗ ಮಾಡುವ ಸಮಯದಲ್ಲಿ ಬೇರೆ ಏನನ್ನಾದರೂ ಚಿಂತಿಸುತ್ತಿರುವ ಪಕ್ಷದಲ್ಲಿ
ದೇಹತ್ಯಾಗದ ನಂತರ ಆತ್ಮಕ್ಕೆ ಏನಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಆದ್ದರಿಂದ ಆದಷ್ಟೂ ಮೊದಲೇ ಭಗವಂತನ ಧ್ಯಾನದಲ್ಲಿ ತೊಡಗುವುದು ಅತೀ ಮುಖ್ಯ.
ಆಧ್ಯಾತ್ಮಿಕ ಜ್ಞಾನದ ಬಗೆಗೆ ಸ್ವಾಮಿ
ವಿವೇಕಾನಂದರ ಹಾಗೂ ಶ್ರೀ ರಾಮಕೃಷ್ಣರ ವಾಣಿಯನ್ನು ಇಲ್ಲಿ ಸ್ಮರಿಸುವುದು ಸೂಕ್ತವೆನಿಸುತ್ತದೆ:
"ನಮ್ಮ ಪ್ರಾಪಂಚಿಕ ದುಃಖಗಳನ್ನು ಶಾಶ್ವತವಾಗಿ
ನಾಶಮಾಡಲು ಆಧ್ಯಾತ್ಮಿಕ ಜ್ಞಾನಕ್ಕೆ ಮಾತ್ರ ಸಾಧ್ಯ; ಬೇರೆ ಯಾವುದೇ ಜ್ಞಾನವು
ನಮ್ಮ ಅಗತ್ಯತೆಗಳನ್ನು ಒಮ್ಮೆ ಮಾತ್ರ ಪೂರೈಸಲು ಸಾಧ್ಯ. ಆಧ್ಯಾತ್ಮಿಕ
ಜ್ಞಾನವು ನಮ್ಮ ಪ್ರಾಪಂಚಿಕ ಅಗತ್ಯತೆಗಳನ್ನು ಶಾಶ್ವತವಾಗಿ ಹಾಗೂ ಸಂಪೂರ್ಣವಾಗಿ ನಾಶಪಡಿಸುತ್ತದೆ.
(ಕರ್ಮ ಯೋಗ)."
…... ಸ್ವಾಮಿ ವಿವೇಕಾನಂದ
"ಅತಿ ಅಪರೂಪವಾದ ಹಾಗೂ ಅಮೂಲ್ಯವಾದ
ಮಾನವ ಜನ್ಮವನ್ನು ದೈವತ್ವದ ಸಾಧನೆಗೆ ತೊಡಗಿಸಿಕೊಳ್ಳದೇ ಇರುವ ಮಾನವನ ಜೀವನವು ವ್ಯರ್ಥವೇ ಸರಿ."
…... ಶ್ರೀ ರಾಮಕೃಷ್ಣ ಪರಮಹಂಸ
"ಈಶ್ವರನಿಗೆ ಸಂಬಂಧಿಸಿದ ಜ್ಞಾನವೇ
ನಿಜವಾದ ಜ್ಞಾನ. ವಿಜ್ಞಾನ, ಕಲೆ, ತರ್ಕ, ವ್ಯಾಕರಣಗಳನ್ನು ಕಲಿಯುವುದ ರಿಂದ ಅದು ಸಾಮಾನ್ಯವಾಗಿ
ನಮ್ಮ ಸಂಶಯಗಳನ್ನು ದೂರಮಾಡುವುದರ ಬದಲು ನಮ್ಮನ್ನು ಇನ್ನಷ್ಟು ಗೊಂದಲಕ್ಕೀಡುಮಾಡುತ್ತವೆ.
ಪವಿತ್ರ ಗ್ರಂಥಗಳು ಹಲವು ಬಾರಿ ಮುಕ್ತ ಆಲೋಚನೆಗೆ ಅವಕಾಶ ನೀಡದೇ ನಮ್ಮನ್ನು ಸಂಕೋಲೆಯಲ್ಲಿ
ಬಂಧಿಸುತ್ತವೆ." - ಶ್ರೀ ರಾಮಕೃಷ್ಣ
"ವಸ್ತು ವಿಜ್ಞಾನ ಅಥವಾ ಜ್ಞಾನವು
ಶ್ರೇಷ್ಟವಾದದ್ದೇ, ಆದರೆ ಅದು ಅನಂತ ಜ್ಞಾನದಲ್ಲಿ ಕೇವಲ ಒಂದು ಸಣ್ಣ ಅಂಶ
ಮಾತ್ರ. ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ಸಂಪೂರ್ಣ
ಜ್ಞಾನವು ಬೇಕಿರುವಾಗ, ಇದು ಸೀಮಿತ ಜ್ಞಾನವನ್ನು
ನೀಡುವ ಭೌತಿಕ ವಿಜ್ಞಾನಕ್ಕೆ ಸಾಧ್ಯವಿಲ್ಲ."
…….ಸ್ವಾಮಿ ವಿವೇಕಾನಂದ
ಈ ಸ್ತೋತ್ರದಲ್ಲಿ ದೇವರ ಹೆಸರನ್ನು
ಆರಿಸಿರುವುದು - ಗೋವಿಂದ - ಶ್ರೀ ಕೃಷ್ಣನ ಒಂದು ಹೆಸರು. ವಿಷ್ಣುಸಹಸ್ರನಾಮದಲ್ಲಿ ಕೂಡಾ
ಈ ಹೆಸರು ಎರಡು ಬಾರಿ ಬರುತ್ತದೆ (ಶ್ಲೋಕ 33 ಮತ್ತು 71). ಶಂಕರಾಚಾರ್ಯರು ಗೋವಿಂದ ಎಂಬ ಪದಕ್ಕೆ ಈ ಕೆಳಗಿನ
ಅರ್ಥ / ವಿವರಣೆಗಳನ್ನು ನೀಡುತ್ತಾರೆ:
1. ಭೂಮಿಯನ್ನು ಹುಡುಕಿದವನು ಅಥವಾ ಅರಿತವನು.
2. ಗೋವುಗಳ ರಾಜ.
3. ಮಾತನಾಡುವ ಶಕ್ತಿಯನ್ನು ಅನುಗ್ರಹಿಸುವವನು.
4. ವೇದಾಂತದ ಪುಸ್ತಕಗಳ ಮೂಲಕ ತಿಳಿದವನು.
ಭಗವದ್ಗೀತೆಯಲ್ಲಿ ಗೋವಿಂದನ ಬಗೆಗೆ
ವಿವರಿಸಿರುವ ಅರ್ಥದ ಅಧಾರದ ಮೇಲೆ ಸ್ವಾಮಿ ಶಂಕರಾನಂದರು ಈ ರೀತಿ ವಿವರಿಸುತ್ತಾರೆ:
"ಗೋವಿಂದ ಎಂದು ಕರೆಯುವುದು ಆತನು
ವೇದಾಂತದ ಪವಿತ್ರ ಹಸು." (ಗೋಭಿರ್ ವೇದಾಂತವಾಕ್ಯಾರ್ ಏವ ವಿಂದ್ಯತೇ
ಲಭ್ಯತ ಇತಿ ಗೋವಿಂದಃ).
ಈ ವಿವರಣೆಗಳಿಂದ ಗೋವಿಂದನು ಅತ್ಯುನ್ನತ
ಪರಮೋಚ್ಚ ಸತ್ಯ, ಅಸ್ಥಿತ್ವಕ್ಕೆ ಆಧಾರ, ಜೀವನದ ಗುರಿ, ಒಂದೇ ಪದದಲ್ಲಿ ವರ್ಣಿಸುವುದಾದರೆ ಭಗವಂತ.
ಭಜ ಎಂಬ ಪದದ ಅರ್ಥವೆಂದರೆ - ಆರಾಧನೆ, ಸೇವೆ, ಪೂಜಿಸು (ಭಜ ಸೇವಾಯಮ್). ಇದು ಎಲ್ಲ
ನವ ವಿಧದ ಭಕ್ತಿಯನ್ನು ಸೂಚಿಸುತ್ತದೆ. ನವವಿಧದ ಭಕ್ತಿಗಳೆಂದರೆ:
1. ಭಗವಂತನ ಮಹಿಮೆಗಳನ್ನು ಆಲಿಸುವುದು
(ಶ್ರವಣ )
2. ಭಗವಂತನ ಮಹಿಮೆಗಳನ್ನು ಕೀರ್ತನೆಗಳ
ಮೂಲಕ ಹಾಡುವುದು (ಕೀರ್ತನ )
3. ಭಗವಂತನ ಚಿಂತನೆ (ಸ್ಮರಣ)
4. ಭಗವಂತನ ಪಾದಪೂಜೆ ಮಾಡುವುದು (ಪಾದಸೇವನ)
5. ಭಗವಂತನನ್ನು ಪೂಜಿಸುವುದು
( ಅರ್ಚನ)
6. ಭಗವಂತನಿಗೆ ವಂದಿಸುವುದು
(ವಂದನ )
7. ಭಗವಂತನ ಸೇವೆ ಮಾಡುವುದು
( ದಾಸ್ಯ)
8. ಭಗವಂತನೊಡನೆ ಸ್ನೇಹ ಬೆಳೆಸುವುದು
(ಸಖ್ಯ) ಮತ್ತು
9. ಭಗವಂತನಿಗೆ ಆತ್ಮವನ್ನು ನಿವೇದನ ಮಾಡಿಕೊಳ್ಳುವುದು (ಆತ್ಮನಿವೇದನ).
ಭಜ ಗೋವಿಂದಂ ಎಂಬುದನ್ನು ಮೂರುಬಾರಿ
ಹೇಳುವುದು ಆ ಪದಗಳ ಪ್ರಾಮುಖ್ಯತೆಗಾಗಿ.
ಭಜ ಗೋವಿಂದಂ ಎಂಬುದನ್ನು ಮೂರುಬಾರಿ
ಹೇಳುವುದರ ಮತ್ತೊಂದು ವಿಷೇಶತೆಯೆಂದರೆ:
1. ಮೊದಲನೇ ಬಾರಿ ಭಜಗೋವಿಂದಂ ಎಂದು ಹೇಳುವುದರ
ಅರ್ಥ - ಗೋವಿಂದನನ್ನು ಅರಸು. ಗೋವಿಂದನು ಗುರುವನ್ನು
ಪ್ರತಿನಿಧಿಸುತ್ತಾನೆ. ಅಂದರೆ ಸಮರ್ಥ ಗುರುವನ್ನು ಅರಸು ಎಂದು.
ಇಲ್ಲಿ ಗೋವಿಂದ ಎಂಬ ಪದವು ಆದಿಶಂಕರಾಚಾರ್ಯರ ಗುರುಗಳಾದ ಗೋವಿಂದ ಭಗವತ್ಪಾದರನ್ನೂ
ಸೂಚಿಸುತ್ತದೆ.
2. ಎರಡನೇ ಬಾರಿ ಭಜಗೋವಿಂದಂ ಎಂದು ಹೇಳುವುದರ
ಅರ್ಥ ಸ್ವಯಂ ಸಾಕ್ಷಾತ್ಕಾರಕ್ಕೆ ಸಹಕರಿಸುವ ಜ್ಞಾನವನ್ನು ಅರಸು ಎಂದು.
3. ಗೋವಿಂದಂಭಜ.... ಆ ಜ್ಞಾನದಿಂದ ಗೊವಿಂದನನ್ನು ಅರಸಲು ಧ್ಯಾನ ಮತ್ತು ಮನನಮಾಡು ಎಂದು.
ಮೊದಲನೇ ಶ್ಲೋಕದ ಮೂಲಕ ಶಂಕರಾಚಾರ್ಯರು
ಜೀವನದ ಪರಮೋದ್ದೇಶವಾದ ಗೋವಿಂದನನ್ನು ಅರಸುವುದರ ಬಗೆಗೆ ಮತ್ತೊಮ್ಮೆ ನೆನಪಿಸುತ್ತಿದ್ದಾರೆ.
|
ಶ್ಲೋಕ - 2 - ಸಂಸ್ಕೃತದಲ್ಲಿ:
ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ ||
|
ಕನ್ನಡದಲ್ಲಿ :
ತೊರೆಯಲೆ ಮೂಢನೆ ಧನದಾಹವನು
ಸುಬುದ್ಧಿಯಿಂ ಪಡೆ ತೃಪ್ತಿಯ ಮನದಲಿ
ನೀ ದುಡಿದುದರಿಂದೇಂ ಪಡೆಯುವೆಯೋ
ಅದರಲೆ ನಿನ್ನಯ ಮನವನು ತಣಿಸು
|
ಅರ್ಥ ವಿವರಣೆ:
ಎಲೋ ಮೂರ್ಖನೆ! ಸಂಪತ್ತನ್ನು ಒಟ್ಟುಗೂಡಿಸುವ ನಿನ್ನ ದಾಹವನ್ನು ಬಿಡು, ನಿನ್ನ ಮನಸ್ಸನ್ನು ಅನಂತ ಶಾಂತಿಯೆಡೆಗೆ / ಪರಿಪೂರ್ಣತೆಯೆಡೆಗೆ
ಮೀಸಲಿಡು. ಈ ಹಿಂದೆ ಈಗಾಗಲೇ ನಿನ್ನ ಕಾರ್ಯಗಳಿಂದ ಏನು ಫಲಗಳು ಸಿಗುತ್ತವೆಯೋ
ಅವುಗಳಿಂದ ತೃಪ್ತನಾಗು.
|
ವ್ಯಾಖ್ಯಾನ :
ಸಂಪತ್ತನ್ನು ಗಳಿಸುವ ಆಸೆಯು ಮನುಷ್ಯನನ್ನು
ಖಿನ್ನನನ್ನಾಗಿ ಮಾಡಿ ನೈತಿಕವಾಗಿ ಕುಸಿಯುವಂತೆ ಮಾಡುತ್ತದೆ. ಆಸ್ತಿಗಳ ಬಗ್ಗೆ ಅತಿಯಾದ ಮೋಹವು ನಿರಂತರ ಚಿಂತೆಗೆ ಮೂಲ. ಸಂಪತ್ತನ್ನು ಗಳಿಸುವ ಹಾದಿಯಲ್ಲಿ ಕ್ಲೇಶವುಂಟಾಗುತ್ತದೆ, ಅದನ್ನು
ಕಾಪಾಡುವ ಪ್ರಯತ್ನದಲ್ಲಿ ಅತಿಯಾದ ಒತ್ತಡಗಳನ್ನು ಅನುಭವಿಸ ಬೇಕಾಗುತ್ತದೆ, ಅದು ನಮ್ಮನ್ನು ತೊರೆದಾಗ ಅತೀವ ನೋವನ್ನು ಅನುಭವಿಸಬೇಕಾಗುತ್ತದೆ. ಸಂಪತ್ತು ನಮಗೆ ಸಂತೋಷವನ್ನು ತಂದುಕೊಡುತ್ತದೆ ಎಂದು ಭಾವಿಸುವುದು ಮೂರ್ಖತನ.
ಮನುಷ್ಯನಿಗೆ ಎಷ್ಟು ಸಂಪತ್ತು ಇದ್ದರೂ ಅವನಿಗೆ ತೃಪ್ತಿ ಇರುವುದಿಲ್ಲ.
"ನ ವಿತ್ತೇನ ತರ್ಪಮ್ಯೋ ಮನುಷ್ಯಃ"
(ಕಠೋಪನಿಷತ್ 1, 27). ಪ್ರಪಂಚದಲ್ಲಿ ಯಾರಿಗಾದರೂ ಸಂಪತ್ತು
ತೃಪ್ತಿಯನ್ನು ತಂದುಕೊಟ್ಟಿದೆ ಎಂಬ ಸಂಗತಿಯನ್ನು ಎಲ್ಲಿಯೂ ಕಂಡುಬಂದಿಲ್ಲ. ಪ್ರಪಂಚವನ್ನೇ ಗೆದ್ದು ಅಪಾರ ಸಂಪತ್ತನ್ನು ಗಳಿಸುತ್ತೇನೆ ಎಂದು ಭಾವಿಸಿದ
ಅಲೆಗ್ಸಾಂಡರನಿಗೂ ತೃಪ್ತಿ ಸಿಗದೇ
ಅಸುನೀಗಿದ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ
ಮೈತ್ರೇಯಿಯು ತನ್ನ ಪತಿ ಯಾಜ್ಞವಲ್ಕ್ಯನಿಗೆ "ಸ್ವಾಮಿ , ಪ್ರಪಂಚದಲ್ಲಿನ ಎಲ್ಲ ಸಂಪತ್ತೂ ನನ್ನದಾದರೆ,
ಅದರಿಂದ ನನಗೆ ಅಮರತ್ವವು ದೊರಕುವುದೇ? " ಎಂದು
ಪ್ರಶ್ನಿಸಿದಾಗ ಯಾಜ್ಞ್ವಲ್ಕ್ಯರು, "ಇಲ್ಲ" ಎಂದುತ್ತರಿಸಿ, ಮುಂದುವರೆದು "ನಿನ್ನ ಜೀವನವು ಸಂಪತ್ತುಳ್ಳವರ ಜೀವನದಂತೆ ಅಷ್ಟೆ, ಆದರೆ ಸಂಪತ್ತಿನ
ಮೂಲಕ ಅಮರತ್ವವು ಲಭಿಸುತ್ತದೆ ಎಂಬುದರ ಬಗೆಗೆ ಯಾವ ಭರವಸೆಯೂ ಇಲ್ಲ." (ಅಮೃತತ್ವಸ್ಯ ತು ನಾಶಾಸ್ತಿ ವಿತ್ತೇನ -II, iv 2 ).
ಶಂಕರರ ಪ್ರಕಾರ ಕಲ್ಪನೆಯಲ್ಲಿ ಕೂಡಾ
ಸಂಪತ್ತನ್ನು ಗಳಿಸುವ ಕೆಲಸವು ಅಮರತ್ವವನ್ನು ದೊರಕಿಸಿಕೊಡುವುದೆಂಬ ಭರವಸೆ ಇಲ್ಲ.
ಶ್ರೀ ಸುರೇಶ್ವರಾಚಾರ್ಯರು ತಮ್ಮ
ವಾರ್ತಿಕದಲ್ಲಿ ಪ್ರಸ್ತುತ ಶ್ಲೋಕಕ್ಕೆ ಸಂಬಂಧಿಸಿದಂತೆ ವ್ಯಾಖ್ಯಾನಿಸುತ್ತಾ - ಮೈತ್ರೇಯಿಯು ಯಾಜ್ಞವಲ್ಕ್ಯರನ್ನು " ಸಂಪತ್ತು ಅಮರತ್ವವನ್ನು ಪಡೆಯಲು ಸಹಾಯ ಮಾಡುತ್ತದೆಂದಾದರೆ ಅದನ್ನು ಏತಕ್ಕೆ ಬಿಡಬೇಕು?".
ಸಂಪತ್ತನ್ನು ಅವಲಂಬಿಸಿದ ಕೆಲಸವು ಬಿಡುಗಡೆಗ ಅನುಕೂಲವಾಗದಿದ್ದರೆ, ಸುಡುವುದಕ್ಕೆ ಪರಿಹಾರ ಬೆಂಕಿಯೇ (ನ ಕರ್ಮ ಕಾರಣಮ್ ಮುಕ್ತೇರ್
ನಾಗ್ನಿಸ್ತಪಸ್ಯ ಭೇಷಜಮ್). ಮುಂದುವರೆದು ಮೈತ್ರೇಯಿಯ ತನ್ನ ಪತಿಯಲ್ಲಿನ
ಬೇಡಿಕೆ - "ನನಗೆ ನಶಿಸುವ ಸಂಪತ್ತನ್ನ ಕರುಣಿಸಬೇಡಿ. ನನಗೆ ಯಾವ ಸಂಪತ್ತು ಆರಂಭ, ಮಧ್ಯ ಹಾಗೂ ಅಂತ್ಯವಿಲ್ಲವೋ,
ಯಾವ ಸಂಪತ್ತನ್ನು ಅನುಭವಿಸುವುದರಿಂದ ಅದು ನಶಿಸುವುದಿಲ್ಲವೋ ಅಂಥಹ ಸಂಪತ್ತನ್ನು
ಮಾತ್ರ ಕರುಣಿಸಿ".
ನಾದಿರ್ ನಾಂತೋ ನ ಮಧ್ಯಮ ವಾ ಯಸ್ಯ
ವಿತಸ್ಯ ವಿದ್ಯತೇ,|
ಭೋಗೇ ನ ಚ ಕ್ಷಯಮ್ ಯಾತಿ ತದೇವ
ವಸುದೀಯತಮ್||
ಭಜಗೋವಿಂದಂನ ಪ್ರಸ್ತುತ ಶ್ಲೋಕದಲ್ಲಿ
ಶಂಕರಾಚಾರ್ಯರು ಪ್ರಾಪಂಚಿಕ ಸಂಪತ್ತನ್ನು ಸಂಗ್ರಹಿಸುವುದರ ನಿಷ್ಫಲತೆಯ ಬಗೆಗೆ ನೆನಪಿಸುತ್ತಾರೆ. ಪ್ರಾಪಂಚಿಕ ಸಂಪತ್ತುಗಳ ಬಗೆಗೆ ಭಾವೋದ್ರಿಕ್ತ ಆಸಕ್ತಿಗಳು ಮನಸ್ಸನ್ನು
ಕಲುಷಿತಗೊಳಿಸಿ ಸತ್ಯದ ಬೆಳಕನ್ನು ಸ್ವೀಕರಿಸದೇ ಇರುವ ಹಾಗೆ ಮಾಡುತ್ತದೆ. ಹಾಗಾಗಿ ಮನಸ್ಸಿನಿಂದ ಭಾವೋದ್ರೇಕತೆಯನ್ನು ತೊಡೆದುಹಾಕಬೇಕು. ದಾಹರಹಿತ (ವಿತೃಷ್ಣ) ಸ್ಥಿತಿಯು ದಾಹ
(ತೃಷ್ಣ)ಸ್ಥಿತಿಯನ್ನು ಬದಲಿಸಬೇಕು.
ಮನಸ್ಸು ಎಲ್ಲ ವಿಧದ ಉದ್ರೇಕ ಹಾಗೂ ಮೋಹದಿಂದ ಹೊರಬಂದ ನಂತರ ಆ ಖಾಲಿ ಜಾಗವನ್ನು
ಯಾವುದು ತುಂಬ ಬೇಕು? ಇದಕ್ಕೆ ಉತ್ತರವು ನೈಜ ಸತ್ಯದ ಬಗೆಗೆ ಧ್ಯಾನ ಹಾಗೂ
ಅದರ ಬಗೆಗಿನ ಚಿಂತನೆ. ಕಾಲದಿಂದಾಗಿ ಬದಲಾಗದ, ಪರಿಶುದ್ಧ, ಸರ್ವಾಂತರ್ಯಾಮಿಯೇ ನಿತ್ಯ ಸತ್ಯ.
ಸಂಪತ್ತನ್ನು ಸಂಪಾದಿಸುವುದನ್ನು
ಬಿಡಬೇಕೆಂದರೆ ಜೀವನ ಮಾಡುವುದು ಹೇಗೆ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಇದಕ್ಕೆ ಹಿಂದಿನ ಕರ್ಮದ ಫಲದಿಂದ ಏನು ಬರುತ್ತದೋ ಅದನ್ನು ಉಪಯೋಗಿಸಿಕೊಂಡು
ಜೀವಿಸು ಎಂಬ ಉತ್ತರ. ಈಗಿನ ಕರ್ಮದ ಫಲವನ್ನು ಭಗವಂತನಿಗೆ ಅರ್ಪಿಸಲಿ ಅದರಿಂದ
ಮನಸ್ಸು ಪರಿಶುದ್ಧವಾಗುತ್ತದೆ.
ತೃಷ್ಣ, ಹಣಸಂಪಾದನೆಯ ಅವ್ಯಾಹತ ದಾಹವು ವಿಷ. ತನ್ನ
ಧರ್ಮದ ಅನುಮತಿಯ ಮೇರೆಗೆ ಪ್ರಾಮಾಣಿಕವಾಗಿ ದುಡಿದ ಫಲವಾಗಿ ಬರುವ ಸಂಪತ್ತು ಹಾನಿಕರವಲ್ಲ.
ಆದರೆ ಅತಿಯಾದ ಆಸೆ ಇರಬಾರದು. ಈ ತತ್ವವು ಸಾಧಕನಿಗೂ
ಹಾಗೂ ಸಂಸಾರಿಗೂ ಅನ್ವಯಿಸುತ್ತದೆ.
ಪ್ರತಿನಿತ್ಯದ ವ್ಯವಹಾರದಲ್ಲಿ ಹಣಕ್ಕಾಗಿ
ಕೊಲೆ ಸುಲಿಗೆ ದರೋಡೆ ಕಳ್ಳತನ ಲಂಚಗುಳಿತನ ಇತ್ಯಾದಿ ಮಾರ್ಗಗಳನ್ನು ಅನುಸರಿಸುವವರನ್ನು ನೋಡುತ್ತಿರು
ತ್ತೇವೆ. ಇದಕ್ಕೆ ಕಾರಣ ಹಣಕ್ಕಾಗಿ ತಣಿಸಲಾಗದ ದಾಹ.
ಮನುಷ್ಯನು ಹಣವಿಲ್ಲದೇ ಸಾಮಾನ್ಯವಾಗಿ ಜೀವನವನ್ನು ನಡೆಸಲಾಗುವುದಿಲ್ಲ ಎಂದು ಯೋಚಿಸುತ್ತಾನೆ.
ಇದು ನಿಜ ಕೂಡ. ಆದರೆ ಯಾವಾಗ ಅವನ ಹಣಗಳಿಸುವ ಮಾರ್ಗಗಳು
ಸೀಮಿತವಾಗಿರುತ್ತದೆಯೋ ಆಗ ಅವನು ಬೇರೊಬ್ಬರ ಸಂಪತ್ತನ್ನು ಬಾಚಿಕೊಳ್ಳಲು ಪ್ರಯತ್ನಿಸುತ್ತಾನೆ;
ಇದು ಸಾಧ್ಯವಾಗದಿದ್ದರೆ ಹಿಂಸಾ ಮಾರ್ಗವನ್ನೂ ಅನುಸರಿಸಲು ಹೇಸುವುದಿಲ್ಲ.
ಅದರಿಂದಾಗಿ ಕೆಲವು ಸಮಯದಲ್ಲಿ ತೊಂದರೆಗೂ ಸಿಕ್ಕಿಹಾಕಿಕೊಳ್ಳುತ್ತಾನೆ.
ಮನುಷ್ಯನ ಮನಸ್ಸು ಸಂಪತ್ತನ್ನು ಗಳಿಸುವುದಕ್ಕೆ ಕಡಿವಾಣ ಹಾಕಿಕೊಳ್ಳಲು ಒಪ್ಪುವುದಿಲ್ಲ.
ಆಘಾತಕಾರೀ ವಿಷಯವೆಂದರೆ ಸಂಪತ್ತು ಗಳಿಸುವ ಮಾರ್ಗದಲ್ಲಿ ಅಪರಾಧಗಳನ್ನು
ಮಾಡುವವರು ಬಡವರಲ್ಲ, ಬದಲಿಗೆ ಸಾಕಷ್ಟು ಸಂಪತ್ತುಳ್ಳವರು ತಮ್ಮಲ್ಲಿದ್ದ
ಸಂಪತ್ತಿನ ಬಗ್ಗೆ ಸಾಲದೆಂಬ ಅತೃಪ್ತಿ ಯುಳ್ಳವರೇ.
ಐಶ್ವರ್ಯದ ದಾಹ ಮನುಷ್ಯನನ್ನು ಕೆಳಮಟ್ಟಕ್ಕಿಳಿಸುತ್ತದೆ. ವ್ಯಾಮೋಹ ಕೊನೆಯಿಲ್ಲದ ಚಿಂತೆಗೀಡುಮಾಡುತ್ತದೆ. ಐಶ್ವರ್ಯವನ್ನು ಸಂಪಾದಿಸಲು ಶ್ರಮಪಡಬೇಕು. ಸಂಪಾದಿಸಿದುದನ್ನು
ಕಾಪಾಡಿಕೊಳ್ಳಲು ತುಂಬ ವಿವೇಕದಿಂದಿರಬೇಕು. ಕಷ್ಟಪಟ್ಟು ಸಂಪಾದಿಸಿದುದನ್ನು
ಕಳೆದುಕೊಂಡಾಗ ವ್ಯಥೆಯಾಗುತ್ತದೆ. ಸಂಪಾದಿಸಿ ದುದನ್ನು ಕಾಪಾಡಿಕೊಳ್ಳಲು
ಆಸಕ್ತಿ ಹೆಚ್ಚುತ್ತದೆ. ಇದೊಂದು ಬಿಡುವಿಲ್ಲದೇ ನಡೆಯುವ ನಿರಂತರ ಚಿಂತೆಯ
ಪಂದ್ಯ.
ಕಠೋಪನಿಷತ್ತಿನಲ್ಲಿ ನಚಿಕೇತನು ಯಮಧರ್ಮನಿಗೆ ಕೊಟ್ಟ ಉತ್ತರವೂ
ಇದೇ. "ಮನುಷ್ಯನಿಗೆ ಐಶ್ವರ್ಯವಷ್ಟರಿಂದಲೇ
ತೃಪ್ತಿ ದೊರೆಯಲಾರದು."
"ನ ವಿತ್ತೇನೆ ತರ್ಪಣೀಯೋ ಮನುಷ್ಯಃ"
(ಕಠೋಪನಿಷತ್ 1-27).
ಇದೇ ರೀತಿಯಲ್ಲಿ ಶಂಕರಾಚಾರ್ಯರು ತಮ್ಮ ವಿವೇಕಚೂಡಾಮಣಿಯಲ್ಲಿ
ಬೃಹದಾರಣ್ಯಕ ಉಪನಿಷತ್ತನ ಪ್ರಸಿದ್ದ ವಾಕ್ಯವನ್ನು ಉದಾಹರಿಸುತ್ತಾರೆ - "ಅಮರವಾದದ್ದನ್ನೂ ಅವಿನಾಶಿಯಾದದ್ದನ್ನೂ ಐಶ್ವರ್ಯದಿಂದ ಗಳಿಸಲು
ಅಸಾಧ್ಯ" (ಅಮೃತತ್ವಸ್ಯ ನಾಶಾಸ್ತಿ ವಿತ್ತೇನೇತ್ಯೇವ ಹಿಶ್ರುತಿಃ
).
ಜೀವನದಲ್ಲಿ ನಾವು ತ್ಯಜಿಸಬೇಕಾಗಿರುವುದು ದುರಾಸೆಯನ್ನು. ಅದನ್ನು ತ್ಯಜಿಸಿದಾಗಲೇ ನಾವು ಪ್ರಪಂಚದಲ್ಲಿ ಸುಖಿಗಳಾಗಿರಲು ಸಾಧ್ಯ.
ಈಶಾವಾಸ್ಯೋಪನಿಷತ್ತು ಕೂಡಾ "ಆಸೆಯನ್ನು ತ್ಯಜಿಸು,
ಸುಖಿಯಾಗು, ಇತರರ ಸಿರಿಗೆ ಆಸೆಪಡದಿರು"
ಎಂದು ಘಂಟಾಘೋಷವಾಗಿ ಹೇಳುತ್ತದೆ. ("ತೇನತ್ಯಕ್ತೇನ
ಭುಂಜೀಥಾ ಮಾಗೃಧಃ ಕಸ್ಯಸ್ವಿದ್ಧನಮ್").
ಸಂಪತ್ತು ಎಂದರೆ ಬರೇ ಹಣವೊಂದೇ ಅಲ್ಲ. ಇದರಲ್ಲಿ ಸಂತೋಷಪಡಲು ಎಲ್ಲ ಮಾರ್ಗಗಳೂ ಹಾಗೂ ಸಂಪತ್ತನ್ನು ಕೂಡಿಡುವ
ಮಾರ್ಗಗಳೂ ಸೇರಿವೆ. ಬಹು ಮುಖ್ಯ ವಿಷಯವೆಂದರೆ ನಮ್ಮ ಮನಸ್ಸನ್ನು ಪ್ರಾಪಂಚಿಕ
ವಸ್ತುಗಳಿಂದ ಪ್ರತ್ಯೇಕಿಸುವುದು. ಪ್ರಾಪಂಚಿಕ ಸಂತೋಷಗಳು ಒಳ್ಳೆಯದೂ ಅಲ್ಲ,
ಕೆಟ್ಟದ್ದೂ ಅಲ್ಲ. ಆದರೆ ನಾವು ಅದರ ಬಗೆಗೆ ಅತಿಯಾದ
ವ್ಯಾಮೋಹ ವನ್ನು ಹೊಂದಬಾರದು. ಶಂಕರಾಚಾರ್ಯರು ಇಲ್ಲಿ ಹಣ ಅಥವಾ ಸಂಪತ್ತನ್ನು
ಖಂಡಿಸುವುದಿಲ್ಲ. ನ್ಯಾಯ ಮಾರ್ಗದಲ್ಲಿ ಸಂಪಾದಿಸುವುದನ್ನೂ ಅವರು
ತಪ್ಪೆನ್ನುವುದಿಲ್ಲ. ಅವರ ಆಕ್ಷೇಪಣೆಯೆಂದರೆ ದುರಾಸೆ ಮಾತ್ರ.
ನಾವು ಅದಕ್ಕೆ ಶರಣಾದರೆ ದುರಾಸೆಗೆ ಮಿತಿ ಇಲ್ಲ. ತಮಗೆ
ನ್ಯಾಯವಾಗಿ ಬರುವ ಸಂಪತ್ತಿನ ಬಗ್ಗೆ ತೃಪ್ತಿಯುಳ್ಳವರು ಅತಿ ವಿರಳ. ಆದ್ದರಿಂದ
ಸಮಚಿತ್ತ ಹಾಗೂ ಶಾಂತಜೀವನ ನಡೆಸಲು ಸಂಪತ್ತನ್ನು ಗಳಿಸುವುದಕ್ಕೆ ಒಂದು ಮಿತಿ ಇರಬೇಕು.
ಶಂಕರರು ಅದನ್ನು ಈ ರೀತಿ ವಿವರಿಸಿದ್ದಾರೆ - "ನಿಮ್ಮ ಗಳಿಕೆಯನ್ನು ನ್ಯಾಯ ಮಾರ್ಗದಲ್ಲಿ ಗಳಿಸಿ; ಆದರೆ ದುರಾಸೆಗೆ
ತುತ್ತಾಗಬೇಡಿ. ನೀವು ಏನನ್ನು ಹಾಗೂ ಎಷ್ಟನ್ನು ನ್ಯಾಯಮಾರ್ಗದಿಂದ ಗಳಿಸುತ್ತಿರೋ
ಅದರಲ್ಲೇ ಸಂತೋಷವನ್ನು ಅನುಭವಿಸಿ."
ದುರಾಸೆಯಿಂದ ದೂರಾದ ಮನಸ್ಸನ್ನು ಒಳ್ಳೆಯ ಯೋಚನೆಗಳ ಅಂದರೆ
ಭಗವಂತನೆಡೆಗೆ ಹರಿಸಿ. ನ್ಯಾಯವಾಗಿ ಸಂಪಾದಿಸಿದ ಸಂಪತ್ತು ಸಮಾಜದಲ್ಲಿ
ಅಗತ್ಯವಿರುವವರಿಗೆ ವಿತರಿಸುವುದು ಒಳ್ಳೆಯ ಕಾರ್ಯ.
"ಅಗತ್ಯವಿರುವವರಿಗೆ ಸಂಪತ್ತನ್ನು
ವಿತರಿಸುವುದಕ್ಕೆ ನ್ಯಾಯಯುತವಾಗಿ ಸಂಪಾದಿಸುವುದು ಕೆಟ್ಟದ್ದೇನಲ್ಲ. ಸಾಂಸಾರಿಕ
ವ್ಯಕ್ತಿಯು ಜೀವನದ ಹಾಗೂ ಸಮಾಜದ ಕೇಂದ್ರ ವ್ಯಕ್ತಿ. ಈತನು ಸಂಪತ್ತನ್ನು
ನ್ಯಾಯಯುತವಾಗಿ ಸಂಪಾದಿಸಿ ಅದನ್ನು ಮರಳಿ ಸಮಾಜಕ್ಕೆ ನೀಡುವುದು ಆತನಿಗೆ ಒಂದು ರೀತಿಯ ಪೂಜೆಯೇ.
ಸಾಂಸಾರಿಕ ವ್ಯಕ್ತಿಯು ನ್ಯಾಯ ಮಾರ್ಗದಿಂದ ಸದುದ್ದೇಶಕ್ಕಾಗಿ ಸಂಪಾದಿಸಿ ಶ್ರೀಮಂತನಾಗುವುದು
ವಿರಕ್ತನು ಮುಕ್ತಿಯನ್ನು ಹೊಂದಲು ತನ್ನ ಗುಡಿಸಲಿನಲ್ಲಿ ಪ್ರಾರ್ಥಿಸುವುದಕ್ಕೆ ಸಮನಾದುದು."
......ಸ್ವಾಮಿ ವಿವೇಕಾನಂದ ( ಕರ್ಮಯೋಗ )
|
ಶ್ಲೋಕ - 3 - ಸಂಸ್ಕೃತದಲ್ಲಿ :
ನಾರೀಸ್ತನಭರನಾಭೀದೇಶಂ
ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||
|
ಕನ್ನಡದಲ್ಲಿ :
ನಾರಿಯ ಸ್ತನಗಳ ನಾಭಿಯ ಕಂಡು
ಮೋಹಾವೇಶವ ತಳೆಯದಿರು
ಮಾಂಸ ಮೇದಸ್ಸಿನ ವಿಕಾರವವೆಂಬುದ
ಮನದಲಿ ಚಿಂತಿಸು ಮರಮರಳಿ
|
ಅರ್ಥ ವಿವರಣೆ:
ಹೆಣ್ಣಿನ ಸ್ತನಗಳು ಹಾಗೂ ನಾಭಿಯನ್ನು ನೋಡಿ ಆಸೆಯಿಂದ ಆವೇಶಗೊಳ್ಳಬೇಡ. ಪದೇ ಪದೇ ಅವುಗಳನ್ನು ಕೇವಲ ಮಾಂಸ, ಕೊಬ್ಬು
ಎಂಬುದಾಗಿ ಮಾತ್ರ ಯೋಚಿಸು.
|
ವ್ಯಾಖ್ಯಾನ :
ಸಂಪತ್ತನ್ನು ಸಂಗ್ರಹಿಸುವದಕ್ಕಾಗಿನ ಇಂಗದ ಆಸೆಯನ್ನು ಹತೋಟಿಯಲ್ಲಿಡುವುದರ
ಬಗೆಗೆ ಎಚ್ಚರಿಕೆಯನ್ನು ನೀಡಿದ ನಂತರ ಶಂಕರಾಚಾರ್ಯರು ತಮ್ಮ ಗಮನವನ್ನು ಲೈಂಗಿಕತೆಯೆಡೆಗೆ ಹರಿಸುತ್ತಾ
ಅವುಗಳ ಬಗ್ಗೆ ಎಚ್ಚರಿಕೆಯ ನುಡಿಗಳನ್ನು ಈ ಶ್ಲೋಕದಲ್ಲಿ ಹೇಳುತ್ತಾರೆ. ಸುಂದರವಾದ ಹೆಣ್ಣಿನ ಸ್ತನಗಳು ಹಾಗೂ ನಡುವನ್ನು ಕಂಡು ಮರುಳಾಗ ದಿರು.
ಅವುಗಳನ್ನು ಚರ್ಮದಿಂದ ಸುತ್ತುವರೆದ ಕೇವಲ ರಕ್ತ, ಮಾಂಸ,
ಕೊಬ್ಬುಗಳೆಂದು ಅರಿತುಕೊ. ಇದು ಸಂಸಾರಸ್ಥರಿಗೆ ಸ್ವಲ್ಪ
ಕಠಿಣವಾದ ಉಪದೇಶವೇ. ಆದರೆ ಈ ಉಪದೇಶವು ಸಾಧಕರಿಗೆ ಇರಬಹುದೆಂದು ಹಲವರ
ಅನಿಸಿಕೆ. ಈ ರೀತಿಯ ಚಿಂತನೆಯಿಂದ ಸಾಧಕನ ಮನಸ್ಸಿನಲ್ಲಿ ವೈರಾಗ್ಯ ಉಂಟಾಗುತ್ತದೆ.
ಜೀವನದಲ್ಲಿನ ಆಕರ್ಷಕ ವಸ್ತುಗಳ ಹಿಂದೆ ನೈಜತೆಯು ಭಯಾನಕ ವಾಗಿರುತ್ತದೆ.
ಈ ರೀತಿಯ ಭಯಾನಕತೆಯ ಅರಿವು ಸಾಧಕನಲ್ಲಿ ವೈರಾಗ್ಯವನ್ನುಂಟುಮಾಡಿ ಮಾಯೆಯೆಂಬ ನದಿಯನ್ನು
ದಾಟಲು ಸಹಕಾರಿಯಾಗುತ್ತದೆ. ಆದರೆ ಇದು ಅಷ್ಟು ಸುಲಭದ್ದಲ್ಲ.
ನಮ್ಮ ಪಶುಬುದ್ಧಿಯಿಂದಾಗಿ ಇಂದ್ರಿಯ ತೃಷ್ಣೆಯನ್ನು ಬಿಟ್ಟುಕೊಡುವುದು ಅಷ್ಟು ಸುಲಭದ್ದಲ್ಲ.
ಆದ್ದರಿಂದ ಸಾಧಕನು ಈ ವೈರಾಗ್ಯದ ಸಲಹೆಯನ್ನು ಪದೇ ಪದೇ ನೆನಪಿಸಿಕೊಳ್ಳುತ್ತಲೇ
ಇರಬೇಕು (ವಾರಮ್ ವಾರಮ್).
ಶ್ರೀ ಶಂಕರರನ್ನು ಈ ಶ್ಲೋಕವನ್ನು ರಚಿಸಿದ್ದಕ್ಕೆ ಹಲವಾರು
ತಜ್ಞರು ಟೀಕಿಸಿದ್ದಾರೆ; ಅವರ ಆರೋಪವೆಂದರೆ ಸನ್ಯಾಸಿಯೊಬ್ಬನು ವಿಷಯಾಸಕ್ತಿಯ
ವಿಷಯಗಳ ಬಗೆಗೆ ಇಷ್ಟು ತೀವ್ರ ಹಾಗೂ ಆಳವಾಗಿ ಚರ್ಚಿಸುವುದು ಎಷ್ಟರಮಟ್ಟಿಗೆ ಉಚಿತ ಎಂಬುದು.
ಆದರೆ ವಿಷಯಾಸಕ್ತಿಯು ಜೀವನದ ಅವಿಭಾಜ್ಯ ಅಂಗ. ಮಾನವನು
ಮೂಲಭೂತವಾಗಿ ಪಶುವಿನ ಕೆಲವು ಅಂಶಗಳನ್ನು ಹೊಂದಿರುವುದರಿಂದ ಇದು ಒಂದು ಅವನ ಸಹಜ ಪ್ರವೃತ್ತಿ.
ಈ ಪ್ರವೃತ್ತಿಯಿಂದ ತಪ್ಪಿಸಿಕೊಳ್ಳುವ ಮಾರ್ಗವಿಲ್ಲ. ಹಾಗೆಂದು ಕಣ್ಣುಮುಚ್ಚಿ ಕುಳಿತು ಕೊಳ್ಳುವುದರಿಂದ ಯಾವ ಲಾಭವೂ ಇರುವುದಿಲ್ಲ.
ಲೈಂಗಿಕ ಪ್ರಚೋದನೆಯು ಸಾಮಾನ್ಯವಾದದ್ದು ಹಾಗಾಗಿ ಅದನ್ನು ನಿಯಂತ್ರಿಸುವುದು ಕಠಿಣ.
ಸಾಧಕನಿಗೆ ಈ ಸಮಸ್ಯೆಯನ್ನು ಎದುರಿಸಲು ಸೂಕ್ತ ಸಲಹೆ ಬೇಕೇ ಬೇಕು.
ಹೀಗಾಗಿ ಶಂಕರರು ಈ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ ಅದಕ್ಕೆ ಸೂಕ್ತ ಸಲಹೆಯನ್ನೂ
ಸೂಚಿಸಿದ್ದಾರೆ.
ಇಲ್ಲಿ ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು - ಆಚಾರ್ಯರು ಸಂಪತ್ತು ಸಂಗ್ರಹವನ್ನಾಗಲೀ ಅಥವಾ ವಿಷಯಾಸಕ್ತಿಯನ್ನಾಗಲೀ
ಖಂಡಿಸಿಲ್ಲ. ವಸ್ತುಗಳು ಕೆಟ್ಟದ್ದೂ ಅಲ್ಲ ಅಥವಾ ಸುಂದರವೂ ಅಲ್ಲ;
ಆದರೆ ಮನಸ್ಸು ಅದಕ್ಕೆ ಬಣ್ಣ ಹಚ್ಚುತ್ತದೆ; ಅಲ್ಲಿಂದಲೇ
ತೊಂದರೆಗಳು ಉದ್ಭವಿಸುತ್ತವೆ. ಸಾಧಕನ ಮನಸ್ಸು ಇಂಥಹ ಆಸಕ್ತಿಗಳಿಂದ ಹೊರತಾಗಿರಬೇಕು.
ಅವನು ಅಥವಾ ಅವಳು ಇವುಗಳ ಹಿಂದಿರುವ ಸತ್ಯವನ್ನರಿತು ತಮ್ಮ ಮನಸ್ಸನ್ನು ಸತ್ಯದ
ಹಾದಿಯಲ್ಲಿ ಕೊಂಡೊಯ್ಯ ಬೇಕು.
ಸಾಧಕನ ಜೀವನವು ಅಷ್ಟೇನೂ ಸುಲಭದ್ದಲ್ಲ. ಅವನು ಅನಿಯಮಿತ ಸಂಪತ್ತುಗಳಿಸುವ ದಾಹದಿಂದ ಮತ್ತು ವಿರುದ್ಧ ಲೈಂಗಿಕದ
ಬಗ್ಗೆ ತಣಿಸಲಾಗದ ಪ್ರಚೋದನೆ ಯನ್ನು ಜಯಿಸಬೇಕು. ಇದು ಅತ್ಯಂತ ಕಠಿಣವಾದದ್ದು
ನಿಜ; ಆದರೆ ಇವುಗಳಿಗಿಂತ ಅತ್ಯುನ್ನತವಾದ ಸತ್ಯವನ್ನು ಅರಿಯಲು ಹಾಗೂ ಸತ್ಯವನ್ನರಸುವ
ಮಾರ್ಗದಲ್ಲಿ ಸಿಗುವ ಅನಂತ ಸಂತೋಷಗಳನ್ನು ತಲುಪುವ ಗುರಿಯುಳ್ಳ ಸಾಧಕನಿಗೆ ಇವುಗಳನ್ನು ತ್ಯಾಗಮಾಡುವುದು
ಅಗತ್ಯ. ಶಂಕರರು ಈ ಸಂದರ್ಭದಲ್ಲಿ ಸಾಧಕನಿಗೆ ಕಾರ್ಯರೂಪದ ಸಲಹೆಗಳನ್ನು
ನೀಡಲು ಪ್ರಯತ್ನಿಸಿರುವರು ಅಷ್ಟೇ.
ಆಚಾರ್ಯರು ಇಲ್ಲಿ ಪುರುಷರನ್ನು ಕುರಿತು ಸಲಹೆಗಳನ್ನು ನೀಡಿದ್ದರೂ
ಈ ಸಲಹೆಗಳು ಪುರುಷರಿಂದ ಆಕರ್ಷಿಸಲ್ಪಡುವ ಸ್ತ್ರೀಯರಿಗೂ ಅನ್ವಯಿಸುತ್ತದೆ. ಆಚಾರ್ಯರು ಸ್ತ್ರೀಯರಿಗೆ ವಿರುದ್ಧವಾಗಿ ಎಲ್ಲೂ ಯಾವಾಗಲೂ ಸಲಹೆಗಳನ್ನು
ನೀಡಿಲ್ಲ.
ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಭಕ್ತರಿಗೆ "ಕಾಮಿನಿ ಕಾಂಚಾಣ " ಗಳಿಂದ
ನಿಧಾನವಾಗಿ ಬಿಡುಗಡೆಗೊಳ್ಳುವಂತೆ ಪದೇ ಪದೇ ಉಪದೇಶಿಸುತ್ತಿದ್ದರು. ಇದರ
ಹಿಂದಿರುವ ಉದ್ದೇಶವೂ ಒಂದೇ ಆಗಿದೆ. ಸಾಧಕನಿಗೆ ಆಧ್ಯಾತ್ಮದ ಹಾದಿಯಲ್ಲಿ
ಕ್ರಮಿಸಲು ಇವೆರಡೂ ತೃಷ್ಣೆಗಳು ದೊಡ್ಡ ಅಡಚಣೆಯನ್ನು ಒಡ್ಡುತ್ತವೆ. ಹೀಗಾಗಿ
ಎಲ್ಲ ಸಾಧು ಸಂತರೂ ಇದರ ಬಗೆಗೆ ಎಚ್ಚರಿಸಿದ್ದಾರೆ.
ಶಂಕರಾಚಾರ್ಯರೂ ಈ ಎರಡು ಶ್ಲೋಕಗಳ ಮೂಲಕ ಹಿಂದಿನ ಸಂತರುಗಳು
ಹೇಳಿರುವುದನ್ನೇ ಪುನರುಚ್ಚರಿಸಿ ದ್ದಾರೆ.
|
ಶ್ಲೋಕ - 4 - ಸಂಸ್ಕೃತದಲ್ಲಿ:
ನಲಿನೀದಲಗತಜಲಮತಿತರಲಂ
ತದ್ವಜ್ಜೀವಿತಮತಿಶಯಚಪಲಮ್ |
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||
|
ಕನ್ನಡದಲ್ಲಿ :
ಕಮಲದ ಎಲೆಗಳ ಜಲಮಣಿಯಸ್ಥಿರ
ಅಂತೆಯ ಜೀವನವದು ಅತಿನಶ್ವರ
ತಿಳಿ ನೀ ವ್ಯಾಧಿ ಅಹಮ್ಮಿನ ಹಿಡಿತದಿ
ಲೋಕ ಸಮಸ್ತವು ಮುಳುಗಿದೆ ದುಃಖದಿ
|
ಅರ್ಥ ವಿವರಣೆ:
ಕಮಲದ ಎಲೆಯ ಮೇಲೆ ಬಿದ್ದಿರುವ ಜಲ ಬಿಂದುವು ಹೇಗೆ ನಡುಗುತ್ತಿರುತ್ತದೋ
ಹಾಗೆಯೇ ಮನುಷ್ಯನ ಜೀವನವು ನಶ್ವರ. ಪ್ರಪಂಚದಲ್ಲಿನ
ಎಲ್ಲ ಜೀವಿಗಳೂ ರೋಗ ರುಜಿನ ಅಹಂ ಮತ್ತು ದುಃಖಕ್ಕೆ ಒಳಗಾಗದೇ ಇರುವುದಿಲ್ಲ.
|
ವ್ಯಾಖ್ಯಾನ :
ಮೊದಲಿನ ಮೂರು ಶ್ಲೋಕಗಳಲ್ಲಿ ಧರ್ಮ ಅರ್ಥ ಮಾತು ಕಾಮಗಳ ಬಗೆಗೆ
ಕೇಂದ್ರೀಕರಿಸಿದ ನಂತರ ನಾಲ್ಕನೇ ಶ್ಲೋಕದಲ್ಲಿ ಶಂಕರರು ಮನುಷ್ಯನ ಜೀವನವು ಹೇಗೆ ನಶ್ವರ ಎಂದು ಉದಾಹರಣೆ
ಸಹಿತ ವಿವರಿಸಿದ್ದಾರೆ.
ಈ ಶ್ಲೋಕದಲ್ಲಿ ಸಾಮಾನ್ಯವಾಗಿ ಜೀವನ ಮತ್ತು ಪ್ರಪಂಚದ ಬಗೆಗೆ
ಪ್ರತಿಪಕ್ಷ ಭಾವನೆ (ವಿರುದ್ಧದ ಬಗೆಗೆ ಚಿಂತನೆ) ಗಳನ್ನು ಕಾಣಬಹುದು. ಮೊದಲನೆಯ ಚಿಂತನೆಯು ಜೀವನವು ಕ್ಷಣಿಕ.
ಜಲ ಬಿಂದುಗಳು ಹೇಗೆ ಕಮಲದೆಲೆಯ ಮೇಲೆ ಅಸ್ಥಿರವೋ ಹಾಗೇ ಜೀವನವೂ ಅಸ್ಥಿರ.
ಅದು ಮೋಡಗಳಂತೆ ಅಥವಾ ಸೋರುವ ಮಡಕೆಯಲ್ಲಿಟ್ಟಿರುವ ನೀರಿನಂತೆ (ಜಲಧಾರಾಪತಲ ಭಿನ್ನಕುಂಭೋದಕಾವತ್ ಪ್ರತಿಕ್ಷಣಂ ವಿನಾಸಿ).
ಜೀವನವು ನಶ್ವರವಾದದ್ದರಿಂದ ಸ್ವಯಂಪ್ರಕಾಶರು ಹೇಳುವಂತೆ ಆತ್ಮಜ್ಞಾನದ
ಬಗ್ಗೆ ಅರಿಯುವ ಪ್ರಯತ್ನವನ್ನು ಮುಂದೂಡುವುದು ವ್ಯರ್ಥ. ಹೇಗೆ ಬೆಕ್ಕು ಅಳುತ್ತಿರುವ ಇಲಿಯನ್ನು ಬಿಡುವುದಿಲ್ಲವೋ ಅದೇ ರೀತಿ ಕಾಲನ ಕರೆಘಂಟೆ ಬಾರಿಸಿದಾಗ
ನಿಮ್ಮ ಮೇಲೆ ಕನಿಕರಗೊಂಡು ನಿಮ್ಮನ್ನು ಬಿಡುವುದಿಲ್ಲ. ಆದ್ದರಿಂದ ಆತ್ಮಜ್ಞಾನದ
ಹಾದಿಯಲ್ಲಿ ಕ್ರಮಿಸಲು ಪ್ರಾರಂಭಿಸಬೇಕು.
ಮನುಷ್ಯನ ಜೀವದಂತೆ ಪ್ರಪಂಚವೂ ಕೂಡಾ ದುಃಖದಿಂದ ಕೂಡಿದ್ದು ನಶ್ವರವೇ. ದೈಹಿಕ
ಖಾಯಿಲೆಗಳು ಹಾಗೂ ಪ್ರಕೃತಿ ವಿಕೋಪಗಳು ಪ್ರಪಂಚವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತವೆ.
ಭಗವಾನ್ ಬುದ್ಧನು ಹೇಳಿರುವಂತೆ "ಎಲ್ಲವೂ
ದುಃಖ ದುಃಖ, ಎಲ್ಲವೂ ಕ್ಷಣಿಕ ಕ್ಷಣಿಕ" (ಸರ್ವಂ ದುಃಖಂ ದುಃಖಂ, ಸರ್ವಂ ಕ್ಷಣಿಕಂ ಕ್ಷಣಿಕಂ).
ಬ್ರಹ್ಮನ್ ಬಿಟ್ಟು ಬೇರೆಲ್ಲವೂ ದೋಷಗಳಿಂದ ಬಾಧಿತ. ಸ್ವರ್ಗ
ಸುಖವೂ ಕ್ಷಣಿಕ. ಆದ್ದರಿಂದ ಸೀಮಿತ ಮತ್ತು ಕ್ಷೀಣಿಸುವುದರ ಮೇಲೆ ನಂಬಿಕೆ
ಇಡಬಾರದು ಬದಲಿಗೆ ಮನಸ್ಸನ್ನು ಪರಬ್ರಹ್ಮನೆಡೆಗೆ ಕೇಂದ್ರೀಕರಿಸಬೇಕು.
ಶಂಕರರು ಕಮಲದ ಸಾದೃಶ್ಯದ ಮೂಲಕ ಗಹನವಾದ ವೇದಾಂತದ ಅರ್ಥವನ್ನು
ವಿವರಿಸಿದ್ದಾರೆ. ಅದೇನೆಂದರೆ:
ಕೊಳದಲ್ಲಿರುವ ನೀರು ಎಲ್ಲೆಡೆ ವ್ಯಾಪಿಸಿರುವ ಅಸ್ಪಷ್ಟವಾದ
ಬ್ರಹ್ಮನ್ ನ್ನು ಹೋಲುತ್ತದೆ. ಕಮಲದ ಎಲೆಯ ಮೇಲಿರುವ ಜಲ ಬಿಂದುಗಳೇ ಜೀವ.
ಕಮಲದೆಲೆಯು ಪ್ರಪಂಚವನ್ನು ಹೋಲುತ್ತದೆ. ಎಲೆಯು ಹುಟ್ಟುವುದು
ನೀರಿನ ಮೂಲಕ. ನೀರಿನ ಹನಿಗಳು ಕಮಲದೆಲೆಯನ್ನು ಪ್ರಪಂಚಕ್ಕೆ ಕೊಂಡೊಯ್ದು
ನಂತರ ಅದೇ ಎಲೆಗಳ ಮೇಲೆ ಅಂಟಿಕೊಳ್ಳುತ್ತದೆ. ಕಟ್ಟ ಕಡೆಯಲ್ಲಿ ಜೀವ ಹಾಗೂ
ಸ್ಪಷ್ಟವಾದ ಪ್ರಪಂಚವು ಸ್ಪಷ್ಟವಾಗದ ಬ್ರಹ್ಮನ್ ನಲ್ಲಿ ಲೀನವಾಗುತ್ತವೆ.
ಜಲ ಬಿಂದು ಹಾಗೂ ಜೀವವು ಕೊಳದೊಳಗಿನ ನೀರಿಗಿಂತ ಬೇರೆಯಲ್ಲ. ಅಸ್ಪಷ್ಟವಾದ ಹಾಗೂ ಸರ್ವವ್ಯಾಪಿಯಾದ ಬ್ರಹ್ಮನ್ ನ್ನು ವೇದಾಂತದ ಮಹಾವಾಕ್ಯ
- "ತತ್ ತ್ವಮ್ ಅಸಿ" ಮೂಲಕ ವ್ಯಕ್ತಪಡಿಸಲಾಗಿದೆ.
ಇನ್ನೂ ಕೆಲವು ಮಹಾವಾಕ್ಯಗಳು:
ಪ್ರಜ್ಞಾನಮ್ ಬ್ರಹ್ಮ - ಪ್ರಜ್ಞೆಯೇ ಬ್ರಹ್ಮ
(ಋಗ್ವೇದದ ಐತರೇಯ ಉಪನಿಷತ್ -
3.3)
ಅಯಂ ಆತ್ಮಾ ಬ್ರಹ್ಮ - ಸ್ವಯಂ ಆತ್ಮನೇ ಬ್ರಹ್ಮ
(ಅಥರ್ವ ವೇದದಲ್ಲಿನ ಮಾಂಡೂಕ್ಯ ಉಪನಿಷತ್
1.2)
ಅಹಂ ಬ್ರಹ್ಮಾಸ್ಮಿ - ನಾನೇ ಬ್ರಹ್ಮ
(ಯಜುರ್ವೇದದಲ್ಲಿನ ಬೃಹದಾರಣ್ಯಕ ಉಪನಿಷತ್
1.4.10).
|
ಶ್ಲೋಕ - 5 - ಸಂಸ್ಕೃತದಲ್ಲಿ
ಯಾವದ್ವಿತ್ತೋಪಾರ್ಜನಸಕ್ತ-
ಸ್ತಾವನ್ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||
|
ಕನ್ನಡದಲ್ಲಿ :
ಧನಗಳಿಕೆಯ ನೀ ಮಾಡುವ ತನಕ
ನಿನ್ನ ಕುಟುಂಬದ ಪ್ರೀತಿಯ ಹರಿವು
ಆಮೇಲಪ್ಪುದು ಮುಪ್ಪದು ಬೇಗ
ಯಾರೂ ಕೇಳರು ನಿನ್ನನ್ನಾಗ
|
ಅರ್ಥ ವಿವರಣೆ :
ಎಲ್ಲಿಯವರೆಗೆ ಸಂಸಾರದ ಮುಖ್ಯಸ್ಥನು ಆರೋಗ್ಯ ವಾಗಿದ್ದು, ಶಕ್ತಿಯುತನಾಗಿದ್ದು, ಸಂಸಾರವನ್ನು ಯಾವುದೇ
ತೊಡಕಿಲ್ಲದೆ ನಡೆಸಿಕೊಂಡು ಹೋಗುತ್ತಿರುತ್ತಾನೋ, ಅಲ್ಲಿಯವರೆಗೆ ಅವನ ಸುತ್ತ
ಇರುವವರು ಪ್ರೀತಿ ವಿಶ್ವಾಸವನ್ನು ತೋರುವರು. ಯಾವಾಗ ಅವನಿಗೆ ವೃದ್ಧಾಪ್ಯವು
ಬಂದು, ಶಕ್ತಿಯನ್ನು ಕಳೆದುಕೊಂಡು, ಸಂಪಾದನೆಯು
ಕಡಿಮೆ ಅಥವಾ ಇಲ್ಲವಾಗುತ್ತದೋ ಅಲ್ಲಿಂದ ಯಾರೂ ಮಾತೂ ಆಡಿಸುವುದಿಲ್ಲ, ಹಾಗೂ ಅವನ ಬಗ್ಗೆ ಕಾಳಜಿ ಕೂಡಾ ವಹಿಸುವುದಿಲ್ಲ.
|
ವ್ಯಾಖ್ಯಾನ :
ಶಂಕರರು ಈ ಶ್ಲೋಕದಲ್ಲಿ ಸಂಪತ್ತು, ಹೆಸರು, ಗೌರವ ಗಳು ಮನುಷ್ಯನ ಬಾಳಿನಲ್ಲಿ
ಎಷ್ಟು ನಶ್ವರ ಎಂಬುದರ ಬಗೆಗೆ ಎಚ್ಚರಿಕೆಯ ಮಾತುಗಳನ್ನಾಡುತ್ತಾರೆ. ನಾವು ನಮ್ಮ ಸುತ್ತ ಮುತ್ತ ಇರುವವ ರಿಂದ (ಸಂಬಂಧಿಗಳು,
ಸಹೋದ್ಯೋಗಿಗಳು, ಸ್ನೇಹಿತರು, ಸಮಾಜದ ಇತರ ವ್ಯಕ್ತಿಗಳು ) ಗೌರವವನ್ನು, ನಾವು ಅವರಿಗೆ ಎಲ್ಲಿಯ ವರೆಗೂ ಉಪಯೋಗವಾಗುತ್ತೇವೋ ಅಲ್ಲಿಯವರೆಗೆ ಮಾತ್ರ ಪಡೆಯುತ್ತೇವೆ.
ಯಾವಾಗ ನಮ್ಮ ಉಪಯುಕ್ತತೆಯು ನಶಿಸತೊಡಗುತ್ತದೋ ಅದರೊಡನೆಯೇ ನಾವು ಪಡೆಯುತ್ತಿದ್ದ
ಗೌರವವೂ ನಶಿಸತೊಡಗುತ್ತದೆ.
ನಮ್ಮಲ್ಲಿ ಹಲವರು ಅಪಾರ ಸಂಪತ್ತು, ಹೆಸರು,ಖ್ಯಾತಿ ಯನ್ನು ಗಳಿಸಿರುತ್ತಾರೆ.
ಕೆಲವರು ತಮ್ಮ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ, ಇನ್ನು
ಕೆಲವರು ಸುಪ್ರಸಿದ್ದ ಆಟಗಾರರಾಗುತ್ತಾರೆ, ಮತ್ತೂ ಕೆಲವರು ಪ್ರಖ್ಯಾತ
ಸಂಗೀತಗಾರರು ಅಥವಾ ಪ್ರಭಾವೀ ರಾಜಕಾರಣಿಗಳು, ಸುಪ್ರಸಿದ್ದ ವೈದ್ಯರು,
ವಕೀಲರು, ಮತ್ತೂ ಕೆಲವರು ಪ್ರಭಾವೀ ವ್ಯಕ್ತಿಗಳ ಪರಿಚಯವನ್ನು
ಹೊಂದಿರುತ್ತಾರೆ.
ಆದರೆ ಯಾವಾಗ ನಮ್ಮ ಪದವಿಯು ಹೋಗುತ್ತದೋ ಅಥವಾ ಕಾಲಾನಂತರ
ನಮ್ಮ ಸಾಮರ್ಥ್ಯವು ಕ್ಷೀಣಿಸುತ್ತೋ ಆಗ ಕೆಲವೇ ಕೆಲವು ಜನಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ. ಇದು ಶತ ಪ್ರತಿಶತ ಸತ್ಯ. ಇದೇ ಪ್ರಪಂಚದ ಸ್ವಭಾವ.
ಜಗತ್ಪ್ರಸಿದ್ದ ನಾಯಕರುಗಳು ರಾಜಕಾರಣಿಗಳು ಪ್ರಭಾವೀ ವ್ಯಕ್ತಿಗಳ ಹೆಸರನ್ನೂ ಎಷ್ಟೋ
ಜನಗಳು ನೆನಪಿನಲ್ಲಿ ಕೂಡಾ ಇಟ್ಟುಕೊಂಡಿ ರುವುದಿಲ್ಲ. ಅದೇ ವ್ಯಕ್ತಿಗಳು
ಕಾಲಕ್ರಮದಲ್ಲಿ ಜನರ ದೃಷ್ಟಿಯಲ್ಲಿ ಖಳನಾಯಕರಾಗಿ ಪರಿವರ್ತಿತರಾಗಿ ಬಿಡುತ್ತಾರೆ.
ಅದಕ್ಕೇ ಶಂಕರರು ನಮ್ಮ ಜೀವನದಲ್ಲಿನ ಅಲಂಕಾರವಿಲ್ಲದ ಈ ವಿಷಯಗಳಿಗೆ
ಮಹತ್ವವನ್ನು ನೀಡದೇ ಇರುವಂತೆ ತಿಳಿಸುತ್ತಾರೆ. ಸಂಪತ್ತು ಹಾಗೂ ಖ್ಯಾತಿಯನ್ನು ಸಂಪೂರ್ಣವಾಗಿ ತೊರೆಯಬೇಕೆಂದಲ್ಲ. ಹಾಗೆ ನೋಡಿದರೆ ಅವುಗಳು ನಮ್ಮೊಡನೆ ಇರುವಾಗ ನಾವು ಅವುಗಳನ್ನು ಅನುಭವಿಸಬೇಕು.
ಆದರೆ ನಾವು ಮೌಲ್ಯಗಳ ಅರ್ಥವನ್ನು ಮತ್ತು ಘನತೆಯನ್ನು ಆಳವಾದ ಹಾಗೂ ಶಾಶ್ವತವಾದ
ಮೂಲಗಳಿಂದ ಪಡೆಯಬೇಕು. ನಮ್ಮ ನಿಜವಾದ ಅರ್ಹತೆಯನ್ನು ಜೀವನದ ಮುಖ್ಯ ಗುರಿಯಾದ
ಆತ್ಮ ವಿಕಾಸ ಮತ್ತು ಆತ್ಮ ಶುದ್ಧೀಕರಣದ ಹಾದಿಯಲ್ಲಿ ನಡೆಯುವ ಮೂಲಕ ಕಂಡುಕೊಳ್ಳಬೇಕು. ಏಕೆಂದರೆ ಕಡೆತನಕ ನಮ್ಮೊಂದಿಗಿರುವುದು ನಾವು ಆತ್ಮಾವಲೋಕನದ ಮೂಲಕ ಹಾಗೂ ಜೀವನದ ಉನ್ನತ
ಮೌಲ್ಯಗಳ ಬಗ್ಗೆ ಚಿಂತನೆಗಳ ಮೂಲಕ ಗಳಿಸಿರುವ ಆಧ್ಯಾತ್ಮಿಕ ಸಂಪತ್ತು ಮಾತ್ರ.
ಒಟ್ಟಿನಲ್ಲಿ ಹೇಳುವುದಾದರೆ ಸಂಪತ್ತು ಹಾಗೂ ಖ್ಯಾತಿಗಳು ಕೇವಲ
ಕ್ಷಣಿಕ ಸಂತೋಷಪಡಲು ಬೇಕಾದ ಆಟದ ಸಾಮಾನುಗಳು ಮಾತ್ರ. ಆದರೆ ನಮ್ಮ ದೃಷ್ಟಿಯು ಇವೆಲ್ಲವುಗಳಿಂದ ಭಿನ್ನವಾದ ಶಾಶ್ವತವಾದ ನಮ್ಮನ್ನು ತೊರೆದು ಹೋಗದೇ
ಇರುವಂಥ ಆಧ್ಯಾತ್ಮಿಕ ಸಂಪತ್ತಿನೆಡೆಗೆ ಕೇಂದ್ರೀಕೃತವಾಗಿರಬೇಕು. ಅದೇ
ಆತ್ಮನ್ ಅಥವಾ ನಮ್ಮೊಳಗಿನ ದೈವತ್ವ.
|
ಶ್ಲೋಕ - 6 - ಸಂಸ್ಕೃತದಲ್ಲಿ :
ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ |
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ ||
|
ಕನ್ನಡದಲ್ಲಿ :
ಪ್ರಾಣವು ದೇಹದಿ ತಾನುಳ್ಳನಕ
ಕೇಳ್ವರು ಕುಶಲವ ಜನರಾತನಕ
ಪವನವು ಕಾಯವ ಬಿಟ್ಟು ಹೊರಡಲು
ನೋಡಲು ನಿನ್ನಯ ಸತಿಗೂ ದಿಗಿಲು
|
ಅರ್ಥ ವಿವರಣೆ:
ಮನೆಯಲ್ಲಿನ ಯಜಮಾನನು ಬುದುಕಿದ್ದಾಗ ಅವನ ಪತ್ನೀ ಪುತ್ರರು
ಬಂಧು ಬಾಂಧವರು ಅವನ ಯೋಗಕ್ಷೇಮವನ್ನು ಪ್ರೀತಿಯಿಂದ ವಿಚಾರಿಸುವರು. ಅವನು ತೀರಿಕೊಂಡ ಕೂಡಲೇ ಅವನ ಪತ್ನಿಯೂ ಸೇರಿ ಎಲ್ಲರೂ ಅವನ ಮೃತ ಶರೀರವನ್ನು
ಕಂಡು ಭಯ ಭೀತರಾಗುತ್ತಾರೆ.
|
ವ್ಯಾಖ್ಯಾನ :
ಈ ಶ್ಲೋಕವನ್ನು ಮತ್ತೆ ಓದುಗರ ಮನದಲ್ಲಿ ವೈರಾಗ್ಯವನ್ನು ಉಂಟುಮಾಡುವಂತೆ
ರಚಿಸಲಾಗಿದೆ. ಆಶ್ಚರ್ಯಕರವಾದ ವಿಷಯವೆಂದರೆ ಪ್ರಪಂಚದಲ್ಲಿ
ಮನುಷ್ಯನ ದೇಹದ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಾರೆ ಎಂಬುದು. ಶರೀರವನ್ನು ವೈಭವೀಕರಣಗೊಳಿಸಲು ಅಪಾರ ಹಣ ಸಮಯ ಹಾಗೂ ಶಕ್ತಿಗಳನ್ನು ವ್ಯಯಮಾಡುತ್ತಾರೆಂದರೆ
ಆಶ್ಚರ್ಯವಾಗುವುದು. ಇದು ಒಂದು ರೀತಿಯ ರಾಕ್ಷಸೀಯ ಸಂಸ್ಕೃತಿ.
ತನ್ನ ಪತಿಯ ದೇಹದೊಡನೆ ಅವನು ಬದುಕಿರುವಾಗ ಸುಖ ದುಃಖಗಳನ್ನು
ಅನುಭವಿಸಿದಾಕೆ ಅದೇ ಪತಿಯ ಮೃತದೇಹವನ್ನು ಕಂಡು ಹೆದರುವಳು. ಇದು ಪತ್ನಿ ಸತ್ತಮೇಲೆ ಪತಿಯೂ ಅವಳ ಮೃತದೇಹವನ್ನು ಕಾಣುವ ರೀತಿಯೇ. ಜೀವವಿರುವವರೆಗೂ ಎಲ್ಲರೂ ಬಂದು ಸುತ್ತುವರೆದು ಸಂತೋಷ ಪಡುತ್ತಾರೆ. ಪ್ರಾಣ ಹೋದ ಕೂಡಲೇ ಅಲ್ಲಿನ ಚಿತ್ರಣವೇ ಬದಲಾಗುತ್ತದೆ. ಅದೇ
ಬಂಧು ಬಾಂಧವರು ಆದಷ್ಟೂ ಬೇಗ ಮೃತಶರೀರವನ್ನು ಹೊರಗೆ ಸಾಗಿಸುವುದಕ್ಕೆ ಕಾತುರರಾಗಿರುತ್ತಾರೆ.
ಇದರಿಂದ ನಾವು ಅರಿಯಬೇಕಾದದ್ದೇನೆಂದರೆ ಶರೀರವು ಉಪಯೋಗಕ್ಕೆ ಬರುವುದು ಇಲ್ಲಿಯವರೆಗೆ
ಮಾತ್ರ ಎಂದು. ಆದರೆ ನಾವು ಈ ಶರೀರವು ಸದಾಕಾಲ ಇದ್ದೇ ಇರುತ್ತದೆಂದು ಅದಕ್ಕೆ
ಅತಿಯಾದ ಗಮನವನ್ನು ನೀಡುವುದು ವ್ಯರ್ಥವೇ ಸರಿ.
ಒಂದನ್ನು ನಾವು ಅರ್ಥಮಾಡಿಕೊಳ್ಳಬೇಕಾದದ್ದೇನೆಂದರೆ ಶರೀರವು
ಸದಾ ಬದಲಾವಣೆಯ ಸ್ಥಿತಿಯಲ್ಲಿರುತ್ತದೆ ಎಂಬುದು. ಹುಟ್ಟಿದ ಮಗು ಬೆಳೆದು ಸುಂದರ ಯುವಕ/ ಯುವತಿ ಆಗುತ್ತದೆ.
ನಂತರ ವೃಧಾಪ್ಯದ ಸ್ಥಿತಿಗೆ ಬದಲಾಯಿಸುತ್ತದೆ, ಅದರ ಜೊತೆಗೇ
ನಿಃಶಕ್ತಿ ಹಾಗೂ ರೋಗ ರುಜಿನಗಳು ಬರುತ್ತವೆ. ಕೊನೆಗೆ ಅನಿವಾರ್ಯ ವಾದ
ಕೊನೆಯೂ ಬರುತ್ತದೆ. ಶರೀರಕ್ಕೆ ಅದರ ಮಾಲಿಕನಾದ ಆತ್ಮ,ಜೀವವಿಲ್ಲದೇ ಇದ್ದಾಗ ಅದಕ್ಕೆ ಏನೂ ಬೆಲೆ ಇರುವುದಿಲ್ಲ. ಜೀವವಿಲ್ಲದ
ಶರೀರವು ಕೇವಲ ಕಳೇಬರ ಹಾಗೂ ಅದು ಏಲ್ಲರನ್ನೂ ವಿಮುಖರನ್ನಾಗಿಸುತ್ತದೆ. ಶಂಕರಾಚಾರ್ಯರು ಈ ಕಠಿಣವಾದ ನೈಜತೆಗಳನ್ನು ನಮಗೆ ಪದೇ ಪದೇ ನೆನಪಿಸುತ್ತಾ ಈ ವಿಧವಾದ ಪ್ರಾಪಂಚಿಕ
ವಿಷಯಗಳಿಗೆ ಅತಿಯಾದ ಮಹತ್ವವನ್ನು ನೀಡದಿರುವಂತೆ ಎಚ್ಚರಿಸುತ್ತಾರೆ. ದೇಹದ
ನಿಯಮಿತ ಉಪಯುಕ್ತತೆಯ ಬಗ್ಗೆ ತಿಳಿದು ಅದರ ಬಗ್ಗೆ ಅತೀ ಆಸಕ್ತಿಯನ್ನು ತೊರೆದು ನಮ್ಮ ಮನಸ್ಸನ್ನು
ಶಾಶ್ವತ ತತ್ತ್ವಗಳೆಡೆಗೆ ಕೇಂದ್ರೀಕರಿಸುವುದು ಆರೋಗ್ಯ ಲಕ್ಷಣ.
|
ಶ್ಲೋಕ - 7 - ಸಂಸ್ಕೃತದಲ್ಲಿ :
ಬಾಲಸ್ತಾವತ್ಕ್ರೀಡಾಸಕ್ತಃ
ತರುಣಸ್ತಾವತ್ತರುಣೀಸಕ್ತಃ |
ವೃದ್ದಸ್ತಾವಚ್ಚಿಂತಾಸಕ್ತಃ
ಪರಮೇ ಬ್ರಹ್ಮಣಿ ಕೋsಪಿ ನ ಸಕ್ತಃ ||
|
ಕನ್ನಡದಲ್ಲಿ :
ಬಾಲರಿಗೆಂದಿಗು ಕ್ರೀಡಾಸಕ್ತಿ
ತರುಣಗೆ ಸದಾ ತರುಣಿಯಲಾಸಕ್ತಿ
ವೃದ್ಧರಿಗೆಂದಿಗು ಚಿಂತಾಸಕ್ತಿ
ಪರಬ್ರಹ್ಮನಲಿಲ್ಲ ಯಾರಿಗೂ ಆಸಕ್ತಿ
|
ಅರ್ಥ ವಿವರಣೆ : ಬಾಲ್ಯಾವಸ್ಥೆಯಲ್ಲಿ ಕ್ರೀಡೆಯಲ್ಲಿ ಆಸಕ್ತಿಯಿದ್ದರೆ ಯೌವನದಲ್ಲಿ ವಿಷಯಾಸಕ್ತಿಯೆಡೆಗೆ ಆಕರ್ಷಿತರಾಗುವರು, ವೃದ್ಧಾಪ್ಯದಲ್ಲಿ ಅತೀವ ಚಿಂತೆಯಲ್ಲಿ ಮುಳುಗಿರುವರು ಆದರೆ ಯಾರಿಗೂ ಅನಂತವಾದ ಬ್ರಹ್ಮನ ಬಗೆಗೆ ಚಿಂತಿಸಲು ಸಮಯವಿರುವುದಿಲ್ಲ. |
ವ್ಯಾಖ್ಯಾನ :
ಮನುಷ್ಯನ ಮನಸ್ಸು ಬಹಳ ಚಂಚಲ ತಪ್ಪಿಸಿಕೊಳ್ಳಲು ಯಾವಾಗಲೂ
ಏನಾದರೂ ಸಬೂಬನ್ನು ಹುಡುಕುತ್ತಿರುತ್ತದೆ. ಅದಕ್ಕೆ ಬೇರೆ ಮುಖ್ಯವಾದ ಕೆಲಸಗಳಿವೆ ಎಂಬ ಸಮರ್ಥನೆಯನ್ನು ಹುಡುಕುತ್ತಿರುತ್ತದೆ.
ಆಧ್ಯಾತ್ಮಿಕದೆಡೆಗೆ ಗಮನ ಹರಿಸಲು ಇನ್ನೂ ಸಾಕಷ್ಟು ಸಮಯವಿದೆ
ಎಂಬ ಭ್ರಮೆಯಲ್ಲಿರುತ್ತಾರೆ ಹಾಗೂ ಅದಕ್ಕೆ ವಯಸ್ಸಾದಾಗ ಅಥವಾ ವಿಶ್ರಾಂತಿ ಜೀವನದಲ್ಲಿ ಗಮನಹರಿಸಬಹುದೆಂದು
ಕಾರಣ ನೀಡುತ್ತಿರುತ್ತಾರೆ. ಮೊದಲಿಗೆ ನಮಗೆ ನಾವು ಎಷ್ಟು ದಿನ ಜೀವಿಸಿರುತ್ತೇವೆ
ಎಂಬುದು ಅರಿಯದು ಹಾಗಾಗಿ ಮುಖ್ಯ ಕೆಲಸಗಳನ್ನು ಮುಂದೂಡುವುದು ಮೂರ್ಖತನವೇ. ಎರಡನೆಯದಾಗಿ ನಾವು ಪ್ರಾಪಂಚಿಕ ಸುಖ ಭೋಗಗಳಲ್ಲಿ ಎಷ್ಟರಮಟ್ಟಿಗೆ ಮುಳುಗಿರುತ್ತೇವೆ ಎಂದರೆ
ವೃದ್ಧಾವಸ್ಥೆಯಲ್ಲಿ ಬದಲಾಗುವುದು ಅಸಾಧ್ಯವೇ. ಸುಖೋಪಭೋಗಗಳಲ್ಲಿ ಮುಳುಗಿರುವ
ಮನಸ್ಸಿಗೆ ಬದಲಾವಣೆಯು ಕಷ್ಟ. ಪ್ರಾಪಂಚಿಕ ವಾಸನೆಗಳು ಅತಿಯಾಗಿರುತ್ತವೆ.
ನಾವು ನಮ್ಮ ಜೀವನದಲ್ಲಿನ ಆದ್ಯತೆಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಜೀವನದ ಗುರಿ ಏನು? ನಾವು ಯಾತಕ್ಕಾಗಿ ಹುಟ್ಟಿದ್ದೇವೆ?
ಎಲ್ಲಿಂದ ನಾವು ಬಂದೆವು? ಎಲ್ಲಿಗೆ ಹೋಗುತ್ತಿದ್ದೇವೆ?
ಈ ವಿಧದ ಗಂಭೀರವಾದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೋದಂತೆ ಉತ್ತರಗಳು
ನಮ್ಮನ್ನು ಆತ್ಮ ಜ್ಞಾನದ ಪಥದೆಡೆಗೆ ಕೊಂಡೊಯ್ಯುತ್ತವೆ.
ಒಮ್ಮೆ ನಮಗೆ ಪ್ರಪಂಚದಿಂದ ದೊರಕುವುದೆಲ್ಲಾ ಅಶಾಶ್ವತ ಹಾಗೂ ಭಗವಂತನ ಮಾರ್ಗ ಮಾತ್ರ ಶಾಶ್ವತ ಎಂದು ಮನವರಿಕೆಯಾದಾಗ ನಾವು
ನಿಧಾನವಾಗಿ ನಮ್ಮ ಮನಸ್ಸನ್ನು ಭಗವಂತನೆಡೆಗೆ ಕೇಂದ್ರೀಕರಿಸಬಹುದು.
ನಮ್ಮ ಎಲ್ಲ ಸಮಯವನ್ನೂ ಪ್ರಾಪಂಚಿಕ ಸುಖಗಳೆಡೆಗೆ ಕಳೆಯುವುದರ
ಬದಲು ನಿಧಾನವಾಗಿ ಸ್ವಲ್ಪ ಸ್ವಲ್ಪ ಸಮಯವನ್ನು ಭಗವಂತನ ಚಿಂತನೆಗೆ ಮೀಸಲಿಟ್ಟಲ್ಲಿ ನಮಗೆ ವಯಸ್ಸು
ಆಗುತ್ತಾ ಆಗುತ್ತಾ ಹೆಚ್ಚು ಸಮಯವನ್ನು ಭಗವಂತನ ಚಿಂತನೆಯಲ್ಲಿ ಕಳೆಯ ಬಹುದು.
ಕಟು ಸತ್ಯಗಳಾದ ಹುಟ್ಟು, ವೃದ್ಧಾಪ್ಯ,ರೋಗ ರುಜಿನಗಳ ಹಾಗೂ ಅಂತಿಮವಾಗಿ
ಸಾವಿನ ಬಗೆಗೆ ನಿರಂತರವಾಗಿ ಪ್ರತಿಫಲಿಸುತ್ತಿರಬೇಕು. ಜೀವನ ಪರ್ಯಂತ ನೋವು
ಇದ್ದೇ ಇರುತ್ತದೆ.
ಇಂದ್ರಿಯಗಳ ಬಗೆಗಿನ ಮುಂದಾಲೋಚನೆಗಳಿಂದ ನಾವು ಹೊರಬಂದು ಬದಲಾಯಿಸಲಾಗದ
ಆತ್ಮಜ್ಞಾನದ ಮಾರ್ಗವನ್ನು ಅರಸಿಕೊಳ್ಳಬೇಕು.
"ಮನುಷ್ಯನ ಜೀವನದ ಗುರಿಯು ದೇವರನ್ನು
ನೋಡುವುದು ಎಂಬುದನ್ನು ಕೆಲವೇ ಕೆಲವರಿಗೆ ಅರ್ಥವಾಗುತ್ತದೆ" -
ಶ್ರೀ ರಾಮಕೃಷ್ಣ.
ಸ್ವಯಂಪ್ರಕಾಶರ ಗ್ರಂಥದಲ್ಲಿ 5, 6 ಮತ್ತು 7 ನೇ ಶ್ಲೋಕಗಳು ಇಲ್ಲ.
|
ಶ್ಲೋಕ - 8 - ಸಂಸ್ಕೃತದಲ್ಲಿ :
ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ |
ಕಸ್ಯ ತ್ವಂ ಕಃ ಕುತ ಆಯಾತ -
ಸ್ತತ್ವಂ ಚಿಂತಯ ತದಿಹ ಭ್ರಾತಃ ||
|
ಕನ್ನಡದಲ್ಲಿ :
ಯಾರವನೀ ನೀನೆಲ್ಲಿಂ ಬಂದೆ
ಹೆಂಡತಿಯಾರು ಮಕ್ಕಳದಾರು
ತತ್ವವಿದನು ಚಿಂತಿಸೆಲೋ ಮಿತ್ರ
ಈ ಸಂಸಾರವು ಬಹಳ ವಿಚಿತ್ರ
|
ಅರ್ಥ ವಿವರಣೆ :
ಯಾರು ನಿನ್ನ ಪತ್ನಿ? ಯಾರು ನಿನ್ನ ಸುತ? ಪ್ರಪಂಚದ ದಾರಿಯು ವಿಚಿತ್ರವಾಗಿದೆ;
ಯಾರು ನೀನು? ಎಲ್ಲಿಂದ ಬಂದೆ? ತಮ್ಮ, ಈಗ ಈ ಸತ್ಯಗಳ ಬಗ್ಗೆ ಆಲೋಚಿಸು.
|
ವ್ಯಾಖ್ಯಾನ :
ಈ ಶ್ಲೋಕವು ಬೌದ್ಧಿಕ ಬಂಧನಗಳ ಬಗೆಗೆ ಕೇಂದ್ರೀಕರಿಸುತ್ತಿದೆ. ಯಾರು ನಿನ್ನ ಪತ್ನಿ? ಪತ್ನಿ ಎಂಬ ಪದವನ್ನು
ಈ ಸಂದರ್ಭದಲ್ಲಿ ವಿಶಾಲತೆಯಿಂದ ಬಳಸಲಾಗಿದೆ. ಪತ್ನಿ ಪದದಲ್ಲಿ ಈ ಸಂದರ್ಭದಲ್ಲಿ
ಎಲ್ಲ ಪಾಲುದಾರರು ಎಂದರ್ಥ, ವ್ಯಾಪಾರದಲ್ಲಿ, ಕ್ರೀಡಾತಂಡದಲ್ಲಿ,
ಸಂಗೀತಗೋಷ್ಟಿಯಲ್ಲಿ ಇತ್ಯಾದಿ. ಒಂದು ರೀತಿಯಲ್ಲಿ ಈ
ಪದವು ನಾವು ಯಾರನ್ನಾದರೂ ಸಾಂತ್ವನಕ್ಕಾಗಿ ಕಾಣುವವರು. ಮಗ ಅಥವಾ
ಮಕ್ಕಳು ಇಲ್ಲಿ ಯಾರನ್ನಾದರೂ ನಮ್ಮ ಬೆಂಬಲಕ್ಕಾಗಿ ನಿಲ್ಲುವವರು ಎಂಬರ್ಥ. ಅಂದರೆ ಈ ಶ್ಲೋಕದಲ್ಲಿ ಸೂಚಿಸಿರುವ ಪತ್ನಿ ಪುತ್ರರು ಎಂಬ ಪದವನ್ನು ವಿಶಾಲ ದೃಷ್ಟಿಯಿಂದ
ಅರ್ಥೈಸಬೇಕು.
ಮುಂದಿನ ಪ್ರಶ್ನೆಗಳಾದ - ಯಾರು ಅವರು? ನಾವು ಯಾರು? ಎಲ್ಲಿಂದ ಬಂದೆವು? ಎಲ್ಲಿಗೆ ಹೋಗುತ್ತಿದ್ದೇವೆ? ಈ ಪ್ರಶ್ನೆಗಳ ಬಗೆಗೆ ನಾವು ಎಂದಾದರೂ ಯೋಚಿಸಿದ್ದೇವೆಯೆ? ಈ
ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ. ಆದರೆ ನಾವು ಯಾವಾಗಲೂ ಅಜ್ಞಾನದಲ್ಲಿ
ಇರುವುದಕ್ಕಾಗುವುದಿಲ್ಲ. ನಮ್ಮ ಬಗ್ಗೆ ಹಾಗೂ ನಮ್ಮ ಹತ್ತಿರದ ಸಂಬಂಧಿಗಳ
ಬಗ್ಗೆ ಏನೂ ತಿಳಿಯದೆ ಇದ್ದಲ್ಲಿ ತಪ್ಪಾಗುತ್ತದೆ. ನಮ್ಮ ಕೆಲವು ಕ್ರಿಯೆಯಿಂದ
ನಮಗೇ ತೊಂದರೆಯಾಗಿ ಅದರಿಂದ ಕಷ್ಟವನ್ನನುಭವಿಸುವಾಗ ನಾವು ಬೇರೆಯವರನ್ನೋ ಅಥವಾ ಪರಿಸ್ಥಿತಿಯನ್ನೋ
ಅಥವಾ ದೇವರನ್ನೋ ದೂಷಿಸುತ್ತೇವೆ.
ನಮ್ಮಲ್ಲಿರುವ ಭೋಗವಸ್ತುಗಳನ್ನು ಉಪಯೋಗಿಸುತ್ತಾ ಅವುಗಳಿಂದ
ಸಂತೋಷವನ್ನು ಅನುಭವಿಸುತ್ತಿರುವಾಗಲೇ ಆವುಗಳ ಬಗೆಗೆ ಆಸಕ್ತಿರಹಿತ ಭಾವನೆಯನ್ನು ಹೊಂದಿರಬೇಕೆಂದು
ಶಂಕರಾಚಾರ್ಯರು ತಿಳಿಸುತ್ತಾರೆ. ಕೆಲವರು ಈ ಶ್ಲೋಕವನ್ನು
ಸರಿಯಾಗಿ ಅರ್ಥಮಾಡಿಕೊಳ್ಳದೇ ತಮ್ಮಲ್ಲಿರುವ ವಸ್ತುಗಳನ್ನು ತ್ಯಾಗಮಾಡುತ್ತಿರುವರು ! ವಸ್ತುಗಳ ಬಗೆಗಿನ ಮೋಹವನ್ನು ಬಿಡಬೇಕೇ ಹೊರತು ವಸ್ತುಗಳನ್ನಲ್ಲ. ಇಲ್ಲಿ ಸಮಸ್ಯೆ ಏನೆಂದರೆ ಅವುಗಳ ಬಗೆಗಿನ ನಮ್ಮ ನಿಲುವು ಮಾತ್ರ, ನಮ್ಮಲ್ಲಿರುವ ವಸ್ತುಗಳಲ್ಲ. ಆದ್ದರಿಂದ ನಮ್ಮ ಸುತ್ತ ಇರುವ
ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಬಿಡುವುದರಿಂದ ನಾವು ಏನನ್ನೂ ಸಾಧಿಸಿವುದಿಲ್ಲ.
ವಸ್ತುಗಳು ಹಾಗೂ ವ್ಯಕ್ತಿಗಳನ್ನು ತೊರೆಯುವುದು ಸುಲಭ. ನಮ್ಮ ಸಂಬಂಧಗಳ ಬಗೆಗೆ ನಿರಾಸಕ್ತಿ ಮನೋಭಾವವನ್ನು ಹೊಂದುವುದು ಕಷ್ಟ.
ನಿರಾಸಕ್ತಿಯೆಂದರೆ ಸ್ವಾರ್ಥತೆಯನ್ನು ಬಿಡುವುದು ಹಾಗೂ ಅದು
ನಿರೀಕ್ಷೆಗಳನ್ನು ಬೇಡುತ್ತದೆ. ನಾನು,
ನನ್ನದು ಎಂಬುದನ್ನು ಬಿಡುವುದು. ಯಾವ ಸಂಗತಿಗಳು
ನಮ್ಮನ್ನು ಆಕರ್ಷಿಸುತ್ತಿವೆ ಎಂಬುದನ್ನು ವಿಷ್ಲೇಸಿಸಬೇಕು. ಮಗ,
ಮಗಳು, ಪತ್ನಿ ಅಥವಾ ಪತಿಯಲ್ಲಿ ಯಾವುದು ನನ್ನದು?
ಅವರುಗಳು ತಮ್ಮದೇ ಆದ ವ್ಯಕ್ತಿತ್ವ, ಜೀವನದ ಗುರಿ ಮತ್ತು
ಆಕಾಂಕ್ಷೆಗಳನ್ನುಳ್ಳವರು. ಹೀಗಿರುವಾಗ ಅವರ ವ್ಯಕ್ತಿತ್ವದಲ್ಲಿ ನಮ್ಮ
ಇಷ್ಟವನ್ನು ಹೇರಲು ನಮಗೆ ಯಾವ ಅಧಿಕಾರವಿದೆ? ಹೀಗಿದ್ದರೂ ಪ್ರತಿಯೊಬ್ಬರೂ
ಇದನ್ನೇ ಮಾಡಿಕೊಂಡು ಬರುತ್ತಿರುತ್ತಾರೆ. ಇದರಿಂದ ಇಬ್ಬರಲ್ಲೂ ಕ್ಷೋಭೆ,
ಮನಸ್ತಾಪ, ಒತ್ತಡ ಹಾಗೂ ಆತಂಕಗಳುಂಟಾಗುತ್ತದೆ.
ನಾವು ಅವರನ್ನು ನಿಃಸ್ವಾರ್ಥತೆಯಿಂದ ಪ್ರೀತಿಸಬೇಕು. ಅವರುಗಳು ಹೇಗಿದ್ದರೆ ಹಾಗೆ ಸ್ವೀಕರಿಸಬೇಕು ಹಾಗೂ ನಮ್ಮ ಆಸೆಗಳನ್ನು ಅವರ ಮೇಲೆ ಹೇರಬಾರದು.
ಹಾಗಿದ್ದಲ್ಲಿ ಸಂಬಂಧಗಳು ಪರಿಶುದ್ಧವಾಗಿರುತ್ತದೆ ಹಾಗೂ ಯಾವುದೇ ವಿಧವಾದ ನಿರಾಸೆ
ಮತ್ತು ಹತಾಶೆಯುಂಟಾಗುವುದಿಲ್ಲ.
ನಮ್ಮಲ್ಲಿರುವ ಇತರ ವಸ್ತುಗಳ ಬಗೆಗೂ ಇದೇ ಧೋರಣೆಯನ್ನು ಬೆಳಸಿಕೊಳ್ಳಬೇಕು. ಅವುಗಳ ಬಗೆಗೆ ಸ್ವಾಮ್ಯತೆಯನ್ನು ಬಿಟ್ಟು ಒಡೆತನವನ್ನು ಇಟ್ಟುಕೊಳ್ಳಬೇಕು.
ಆಗ ಮಾತ್ರ ನಾವು ಅವುಗಳ ಉಪಯೋಗವನ್ನು ಸರಿಯಾಗಿ ಪಡೆಯಬಹುದು.
ಈಗಿನ ಕಾಲದಲ್ಲಿ ನಾವು ಹಲವಾರು ವಸ್ತುಗಳನ್ನು ಹೊಂದಲು ಬಹಳಷ್ಟು
ಪರಿಶ್ರಮ ಪಡುತ್ತೇವೆ. ಅವುಗಳ ಮೇಲೆ ನಮ್ಮ ಸ್ವಾಮ್ಯತೆಯಿಂದ ನಮಗೆ
ಕ್ಷೋಭೆ ಹಾಗೂ ಕೆರಳಿಸುವ ಸಂದರ್ಭಗಳುಂಟಾಗಬಹುದು.
ಶಂಕರಾಚಾರ್ಯರು ಈ ಸತ್ಯವನ್ನು ಎಲ್ಲರು ಅರಿಯಬೇಕೆಂದು ಬೋಧಿಸುತ್ತಾರೆ. ಪ್ರಾಪಂಚಿಕ ಸುಖಗಳಿಗೆ ಮಾತ್ರ ಸಮಯವನ್ನು ವ್ಯರ್ಥಮಾಡದೇ ಇರುವುದು ಸೂಕ್ತ.
"ಪ್ರಾಪಂಚಿಕ ಬಂಧನಗಳು ಕ್ಷಣಿಕವಾದದ್ದು.
ಇಂದು ಅವುಗಳೇ ನಮ್ಮ ಜೀವನದ ಸರ್ವಸ್ವವೆನಿಸಬಹುದು ಆದರೆ ನಾಳೆ ಅವುಗಳು ಕಣ್ಮರೆಯಾಗಬಹುದು.
ನಿಮ್ಮ ನಿಜವಾದ ಸಂಬಂಧವು ಕೇವಲ ಭಗವಂತನೊಡನೆ ಮಾತ್ರ."
- ಶ್ರೀಮಾತೆ ಶಾರದಾದೇವಿ
|
ಶ್ಲೋಕ - 9 - ಸಂಸ್ಕೃತದಲ್ಲಿ:
ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್ |
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||
|
ಕನ್ನಡದಲ್ಲಿ :
ಸತ್ಸಂಗದಲೇ ನಿಸ್ಸಂಗತ್ವ
ನಿಸ್ಸಂಗದಲೇ ನಿರ್ಮೋಹತ್ವ
ನಿರ್ಮೋಹತ್ವದಿ ನಿಶ್ಚಲತತ್ವ
ನಿಶ್ಚಲತತ್ವದಿ ಜೀವನ್ಮುಕ್ತಿ
|
ಅರ್ಥ ವಿವರಣೆ :
ಸಜ್ಜನರ ಸಹವಾಸದಿಂದ ನಿರಾಸಕ್ತಿ ಬೆಳೆಯುತ್ತದೆ. ನಿರಾಸಕ್ತಿಯಿಂದ ಮೋಹದಿಂದ ಬಿಡುಗಡೆಯಾಗುತ್ತದೆ. ಈ ರೀತಿಯ ಮೋಹರಹಿತ ಸ್ಥಿತಿಯಿಂದ ಸ್ಥಿತಪ್ರಜ್ಞತೆ ಉಂಟಾಗುತ್ತದೆ ಹಾಗೂ ಇದರಿಂದ ಮೋಕ್ಷದ
ದಾರಿಯು ಗೋಚರವಾಗುತ್ತದೆ.
|
ವ್ಯಾಖ್ಯಾನ :
ಶಂಕರಾಚಾರ್ಯರು ಈ ಶ್ಲೋಕದಲ್ಲಿ ಮೋಕ್ಷದ ಮಾರ್ಗಕ್ಕೆ ಏರುವ
ಏಣಿಯನ್ನು ತೋರಿಸಿದ್ದಾರೆ. ಮೊದಲನೆಯ ಮೆಟ್ಟಲೇ ಸತ್ಸಂಗ
- ಸಾಧು - ಸಂತರ ಸಹವಾಸ. ಇದು
ಮುಂದಿನ ಎಲ್ಲ ಹಂತಗಳಿಗೂ ತಳಹದಿ. ಕೆಲವೇ ಸಾಧು ಪುರುಷರು ಆತ್ಮ ಸಾಧಿತರು.
ಆಧ್ಯಾತ್ಮ ದಿಗ್ಗಜರಿಗೂ ಕೂಡಾ ಗುರುಗಳಿರುತ್ತಾರೆ. ಶ್ರೀ
ರಾಮಕೃಷ್ಣ ಪರಮಹಂಸರಿಗೂ ಕೂಡಾ ಅನೇಕ ಗುರುಗಳಿದ್ದರು. ಅವರುಗಳು ಪರಮಹಂಸರಿಗೆ
ತಾವು ಅನುಸರಿಸಿದ ಅನೇಕ ಆಧ್ಯಾತ್ಮಿಕ ಮಾರ್ಗಗಳನ್ನು ಬೋಧಿಸಿದ್ದರು. ಅವರುಗಳಲ್ಲಿ
ಮುಖ್ಯ ಗುರುಗಳೆಂದರೆ ಪರಮಹಂಸರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿದ ಶ್ರೀ ತೋತಾಪುರಿ. ಕೇವಲ ಗುರುವಿನಿಂದ ಮಾತ್ರ ಶಿಷ್ಯನಿಗೆ ಜ್ಞಾನವು ಹರಿದುಬರುತ್ತದೆ. ಶತ ಶತಮಾನಗಳಿಂದ ಜ್ಞಾನ ಪ್ರವಾಹವು ಇದೇ ಮಾರ್ಗದಿಂದ ಹರಿದು ಬರುತ್ತಿರುವುದು.
ಸನ್ನಡತೆಯು ಕೇವಲ ಸತ್ಪುರುಷರ ಸಹವಾಸದಿಂದ ಬೆಳೆಯುವುದು ಹಾಗೂ
ದುಷ್ಟರ ಸಹವಾಸದಿಂದ ನಡತೆಗೆಡುವುದು ಎಂಬುದು ಸರ್ವವಿದಿತವಾದದ್ದೇ. ಆದ್ದರಿಂದ ದೈವಸಾಕ್ಷಾತ್ಕಾರದ ಮಾರ್ಗದಲ್ಲಿ ನಡೆಯಲಿಚ್ಚಿಸುವ ಸಾಧಕರು
ಯಾವಾಗಲೂ ಸತ್ಪುರುಷರ, ಸಾಧ್ಯವಾದರೆ ದೈವಸಾಕ್ಷಾತ್ಕಾರ ಮಾಡಿಕೊಂಡಿರುವವರ
ಸನಿಹದಲ್ಲೇ ಇರಬೇಕು. ಸತ್ಸಂಗದಿಂದ ಯಾವುದು ನಿತ್ಯ ಹಾಗೂ ಯಾವುದು ಅನಿತ್ಯ
ಎಂಬುದು ತಿಳಿದುಬರುತ್ತದೆ ಹಾಗೂ ಅದರಿಂದ ಭಗವಂತನನ್ನು ಅರಿಯುವ ಮಾರ್ಗವು ನಿಚ್ಚಳವಾಗುತ್ತದೆ.
ಈ ವಿಧದ ಸತ್ಯದ ಅರಿವಿನಿಂದ ಸಾಧಕನು ಕ್ರಮೇಣ ಪ್ರಾಪಂಚಿಕ ವಿಷಯಗಳಲ್ಲಿ ನಿರಾಸಕ್ತಿಯನ್ನು
ಬೆಳೆಸಿಕೊಳ್ಳುತ್ತಾನೆ. ಭಗವದ್ಗೀತೆಯಲ್ಲಿ ನಿರಾಸಕ್ತಿಯ ಬಗೆಗೆ ಹೆಚ್ಚು
ಒತ್ತನ್ನು ನೀಡಲಾಗಿದೆ. ಇದನ್ನು ಅನಾಸಕ್ತಿ ಯೋಗ ಎನ್ನಲಾಗಿದೆ.
ಪ್ರಾಪಂಚಿಕ ಸುಖಗಳ ಬಗೆಗೆ ನಿರಾಸಕ್ತಿಯು ಮುಂದಿನ ಅಧ್ಯಾತ್ಮಿಕ ಉನ್ನತಿಗೆ ಸಹಕಾರಿಯಾಗುತ್ತದೆ.
ಈ ಹಂತದಲ್ಲಿ ಸಾಧಕನು ಮೋಹದಿಂದ ಬಿಡುಗಡೆ ಹೊಂದುತ್ತಾನೆ. ಪ್ರಾಪಂಚಿಕ ಮೋಹವು ಅವನನ್ನು ಹಾದಿತಪ್ಪಿಸಲು ಅಸಾಧ್ಯ. ಪರಿಶುದ್ಧ
ಮನಸ್ಸಿನಿಂದ ಸಾಧಕನು ಭಗವಂತನನ್ನು ಕುರಿತು ಧ್ಯಾನ ಮಾಡಿದಾಗ ಅವನಿಗೆ ಖಂಡಿತವಾಗಿಯೂ ಶಾಶ್ವತ ಶಾಂತಿಯು
ಲಭಿಸುತ್ತದೆ. ಇದರಿಂದ ಸತ್ಯದ ಅರಿವಾಗುತ್ತದೆ. ಅದರಿಂದ ಸಾಧಕನು ಹುಟ್ಟು-ಸಾವಿನ ಚಕ್ರದಿಂದ, ಅಜ್ಞಾನದಿಂದ, ದುಃಖದಿಂದ, ಕ್ಷಣಿಕ
ಪ್ರಪಂಚದಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾನೆ.
ಇದೇ ಸಾಧಕನ ಗುರಿಯೂ ಸಹ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ತೋರಿದ ಮಾರ್ಗವನ್ನೇ ಶಂಕರಾಚಾರ್ಯರೂ
ಇಲ್ಲಿ ತೋರಿದ್ದಾರೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ತೋರಿದ
ಏಣಿಯು ಕೆಳಗೆ - ನಾಶದೆಡೆಗಿನದ್ದಾಗಿದೆ:
"ಧ್ಯಾಯತೋ ವಿಷಯಾನ್ ಪುಂಸಃ ಸಂಗಾಸ್ತೇಷೂಪಜಾಯತೇ
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ |
ಕ್ರೋಧಾತ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ
ಸ್ಮೃತಿಭ್ರಂಷಾತ್ ಬುದ್ಧಿ ನಾಶೋ ಬುದ್ಧಿನಾಶಾತ್ ಪ್ರಣಷ್ಯತಿ". ||
....(ಭಗವದ್ಗೀತ ಅಧ್ಯಾಯ
2 ಶ್ಲೋಕ 62 ಮತ್ತು 63)
"ಇಂದ್ರಿಯ ಸುಖಗಳ ಬಗೆಗೆ ಚಿಂತಿಸುವುದರಿಂದ
ಮನುಷ್ಯನು ಅವುಗಳ ಬಗ್ಗೆ ಅತಿಯಾದ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ; ಅಸಕ್ತಿಯಿಂದ ಆಸೆಯು ಉತ್ಪತ್ತಿಯಾಗುತ್ತದೆ; ಆಸೆಯಿಂದ ಕೋಪವು
ಮೊಳೆಯುತ್ತದೆ; ಕೋಪದಿಂದ ಭ್ರಮೆಯುಂಟಾಗುತ್ತದೆ; ಭ್ರಮೆಯಿಂದ ಗೊಂದಲದ
ಸ್ಮರಣೆಯುಂಟಾಗುತ್ತದೆ; ಗೊಂದಲಮಯದ ಸ್ಮರಣೆಯು ಕಾರಣದ ನಾಶವುಂಟಾಗುತ್ತದೆ; ಇದರಿಂದಾಗಿ ಅವನು ವಿನಾಶದ ಹಾದಿಯನ್ನು ತುಳಿಯುತ್ತಾನೆ."
"ಯಾರು ಬದುಕಿದ್ದಾಗಲೇ ಆಸೆರಹಿತ ಜೀವಚ್ಛವದಂತಿರುತ್ತಾರೋ
ಅವರು ಬ್ರಹ್ಮ ಜ್ಞಾನವನ್ನು ಹೊಂದಲು ಅರ್ಹರು." ... ಶ್ರೀ ರಾಮಕೃಷ್ಣ ಪರಮಹಂಸ.
|
ಶ್ಲೋಕ - 10 - ಸಂಸ್ಕೃತದಲ್ಲಿ:
ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ |
ಕ್ಷೀಣೇ ವಿತ್ತೇ ಕಃ ಪರಿವಾರಃ
ಜ್ಞಾತೇ ತತ್ತ್ವೇ ಕಃ ಸಂಸಾರಃ ||
|
ಕನ್ನಡದಲ್ಲಿ:
ವಯಸು ಹೋದ ಮೇಲೆಲ್ಲಿಯ ಕಾಮ
ನೀರೊಣಗಿದರಿನ್ನೆಲ್ಲಿ ಸರೋವರ
ಧನಕರಗಿದ ಮೇಲೆಲ್ಲಿಯ ಬಳಗ
ತತ್ತ್ವವನರಿತರಿನ್ನೆಲ್ಲಿ ಸಂಸಾರ
|
ಅರ್ಥ ವಿವರಣೆ:
ಯೌವನ ಕಳೆದು ವೃದ್ಧಾಪ್ಯವು ನಮ್ಮಲ್ಲಿ ನುಸುಳಿದಾಗ ಭೋಗಾಪೇಕ್ಷೆಯು
ಎಷ್ಟು ಉಪಯೋಗ? ಒಣಗಿದ ಸರೋವರದಿಂದ ಏನು ಉಪಯೋಗ?
ಸಂಪತ್ತು ಕಾಣೆಯಾದಾಗ ಎಲ್ಲಿಯ ಸಂಬಂಧಿಕರು? ಆತ್ಮಜ್ಞಾನವು
ಅರಿತಾಗ ಎಲ್ಲಿಯ ಸಂಸಾರ, ಸಂಸಾರಿಕ ಜೀವನ?
|
ವ್ಯಾಖ್ಯಾನ :
ಕಾರಣವಿಲ್ಲದೇ ಪರಿಣಾಮಕ್ಕೆ ಅಸ್ತಿತ್ವವಿಲ್ಲ. ಶಂಕರಾಚಾರ್ಯರು ಈ ತತ್ತ್ವವನ್ನು ನಾಲ್ಕು ಉದಾಹರಣೆಯ ಮೂಲಕ ಈ ಶ್ಲೋಕದಲ್ಲಿ
ಪ್ರಸ್ತುತ ಪಡಿಸಿದ್ದಾರೆ. ನಮಗೆ ವೃದ್ಧಾಪ್ಯವು ಸಮೀಪಿಸುತ್ತಿದ್ದಂತೆ
ಭೋಗಾಪೇಕ್ಷೆಗೆ ಸ್ಥಾನವಿರುವುದಿಲ್ಲ; ಸರೋವರದಲ್ಲಿನ ನೀರು ಇಂಗಿದ ಮೇಲೆ
ಸರೋವರಕ್ಕೆ ಅರ್ಥವಿರುವುದಿಲ್ಲ; ನಮ್ಮಲ್ಲಿರುವ ಸಂಪತ್ತೆಲ್ಲಾ ಕರಗಿದಾಗ
ಸಂಬಂಧಿಕರಿರುವುದಿಲ್ಲ. ಅದೇ ರೀತಿ ಶಾಶ್ವತ ತತ್ತ್ವವನ್ನು ಅರಿತವನಿಗೆ
ಪ್ರಾಪಂಚಿಕ ಜೀವನವಿರುವುದಿಲ್ಲ.
ಲೈಂಗಿಕ ಭಾವನೆಗೆ ಯೌವನವೇ ಕಾರಣ. ಆರೋಗ್ಯ ಹಾಗೂ ಚೇತನಾ ಶಕ್ತಿಯು ನಮಗೆ ವಯಸ್ಸಾಗುತ್ತಿದ್ದಂತೆ ಕುಗ್ಗುತ್ತದೆ.
ದೇಹದಲ್ಲಿ ಚೈತನ್ಯವು ಕಾಣೆಯಾಗುತ್ತದೆ. ಈ ರೀತಿಯ ಬದಲಾವಣೆಯಿಂದ
ಯಾರಿಗೂ ತಪ್ಪಿಸಿ ಕೊಳ್ಳಲು ಆಗುವುದಿಲ್ಲ. ಸರೋವರವು ಒಮ್ಮೆ ಬತ್ತಿದಾಗ
ಅದು ಸರೋವರವೆನಿಸಿಕೊಳ್ಳುವುದಿಲ್ಲ. ಸಂಬಂಧಿಕರು ಸಂಸಾರದ ಸದಸ್ಯರು ಎಲ್ಲರೂ
ಮನೆಯ ಯಜಮಾನನನ್ನು ಅವನಲ್ಲಿ ಹಣವಿರುವವರೆಗೂ ಸುತ್ತುವರೆದಿರುತ್ತಾರೆ. ಯಾವಾಗ ಹಣವು ಖಾಲಿಯಾಯಿತೋ ಅಲ್ಲಿಂದ ಅವರು ಅವನನ್ನು ತ್ಯಜಿಸುತ್ತಾರೆ ಅಥವಾ ಅವನಿಗೆ ತೊಂದರೆ
ಕೊಡಲೂ ಹಿಂಜರಿಯುವುದಿಲ್ಲ. ಜನಗಳು ಅವನನ್ನು ಓಲೈಸುವುದು ಅವನಲ್ಲಿರುವ
ಹಣ ಹಾಗೂ ಅವನ ನಂತರ ಅದರಲ್ಲಿ ಭಾಗವನ್ನು ಪಡೆಯುವ ಆಸೆಯಿಂದ. ಯಾವಾಗ ಅವನಿಂದ
ಯಾವ ಉಪಯೋಗವೂ ಇಲ್ಲವೆಂದು ತಿಳಿಯುವುದೋ ಆಗ ಅವನನ್ನು ತೊರೆದು ಬೇರೊಬ್ಬನನ್ನು ಓಲೈಸಲು ಪ್ರಾರಂಭಿಸುತ್ತಾರೆ.
ಒಮ್ಮೆ ನಮ್ಮ ಅಸ್ತಿತ್ತ್ವದ ಕಾರಣವು ಅರಿಯುವುದೋ ಅಲ್ಲಿಂದ
ಪ್ರಾಪಂಚಿಕ ಭೋಗಗಳ ಮೋಹವು ಹೋಗುತ್ತದೆ. ಆಧ್ಯಾತ್ಮಿಕ ತತ್ತ್ವವನ್ನು ಅನುಭವಿಸಿದ ಸಾಧಕನಿಗೆ ಪ್ರಪಂಚದ ಬಗ್ಗೆ ಯಾವ ಆಕರ್ಷಣೆಯೂ
ಇರುವುದಿಲ್ಲ. ಭಗವಂತನೊಬ್ಬನೇ ಸತ್ಯ ಮತ್ತು ಪ್ರಪಂಚವು ಮಿಥ್ಯ.
ಜೀವನದ ಹಿಂದಿರುವ ಶಕ್ತಿಯೇ ಪ್ರಾಪಂಚಿಕ ಬಯಕೆಗಳು. ಯಾವಾಗ ಸಾಧಕನು ಈ ವಿಧದ ಬಯಕೆಗಳನ್ನು ಮೊಟಕುಗೊಳಿಸಿಕೊಳ್ಳುತ್ತಾನೋ,
ಯಾವಾಗ ಅವನಿಗೆ ಬಯಕೆಗಳ ಸರೋವರವನ್ನು ಬತ್ತಿಸಲು ಸಾಧ್ಯವಾಗುತ್ತದೋ, ಆಗ ಅವನಿಗೆ ಎಲ್ಲಿಯ ಸಂಸಾರ? ಸಾಧಕನನ್ನು ಪ್ರಾಪಂಚಿಕ ಭೋಗಗಳು
ಹಾಗೂ ಅದರ ಆಕರ್ಷಣೆಗಳು ಸೆಳೆಯುವುದಿಲ್ಲ ಏಕೆಂದರೆ ಅವನು ಅದಕ್ಕಿಂತ ಹೆಚ್ಚು ಬಾಳಿಕೆಯುಳ್ಳದ್ದನ್ನು
ಕಂಡುಕೊಂಡಿರುವನು. ಆತ್ಮಜ್ಞಾನದಿಂದ ಅಜ್ಞಾನದ ಕತ್ತಲೆಯು ದೂರಾದಾಗ ಪ್ರಾಪಂಚಿಕ ವಿಷಯಗಳು ಅವನಿಗೆ ಆಸಕ್ತಿಯನ್ನುಂಟುಮಾಡುವುದಿಲ್ಲ.
"ಯಾರ ಮನಸ್ಸಿನಿಂದ ಆಸೆ ಹಾಗೂ ವಿಷಯಾಸಕ್ತಿಯು
ಸಂಪೂರ್ಣವಾಗಿ ನಾಶವಾಗಿರುತ್ತದೆಯೋ ಅವನಲ್ಲಿ ಬ್ರಹ್ಮ ಜ್ಞಾನವು ಬೆಳಗುತ್ತಿರುತ್ತದೆ."
........
ಶ್ರೀ ರಾಮಕೃಷ್ಣ
ಪರಮಹಂಸ
|
ಶ್ಲೋಕ - 11 - ಸಂಸ್ಕೃತದಲ್ಲಿ:
ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್ |
ಮಾಯಾಮಯಮಿದಮಖಿಲಂ ಹಿತ್ವಾ (ಬುದ್ಧ್ವಾ)
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ ||
|
ಕನ್ನಡದಲ್ಲಿ:
ಬೇಡವೊ ಧನ ಜನ ಯೌವನ ಗರ್ವ
ಕಾಲವು ನಿಮಿಷದಿ ಹರಿಯುವುದೆಲ್ಲ
ಮಾಯಾಮಯವಿದನೆಲ್ಲವನರಿತು
ಬ್ರಹ್ಮಪದವ ಹೊಗು ನೀ ತಿಳಿದು
|
ಅರ್ಥವಿವರಣೆ :
ಸಂಪತ್ತು, ಸ್ನೇಹಿತರು ಮತ್ತು ಯೌವನವಿದೆಯೆಂದು ಅಹಂಕಾರಪಡದಿರು. ಒಂದೇ
ಕ್ಷಣದಲ್ಲಿ ಕಾಲವು ಇವೆಲ್ಲವುಗಳನ್ನು ಕೊಂಡೊಯ್ಯುವುದು; ಇವೆಲ್ಲವುಗಳೂ
ಮಾಯೆಯ ಪ್ರಭಾವವೆಂದು ಅರಿತು ತ್ಯಜಿಸು ಮತ್ತು ದೈವಸಾಕ್ಷಾತ್ಕಾರದ ಹಂತವನ್ನು ಪ್ರವೇಶಿಸಿ ಬ್ರಹ್ಮನಲ್ಲಿ
ಲೀನವಾಗು.
|
ವ್ಯಾಖ್ಯಾನ :
ಯೌವನ, ಸಂಪತ್ತು, ಬಂಧುಬಾಂಧವರು, ಸ್ನೇಹಿತರು
ಮತ್ತು ಪ್ರಾಪಂಚಿಕ ವಸ್ತುಗಳು ಜೀವನದಲ್ಲಿ ಸದಾ ಭದ್ರತೆಯನ್ನು ಒದಗಿಸುತ್ತದೆಂಬ ಭ್ರಮೆಯು ಮನುಷ್ಯನನ್ನು
ಗರ್ವಿಷ್ಟ ಹಾಗೂ ಅಹಂಕಾರಿಯನ್ನಾಗಿ ಮಾಡುತ್ತದೆ. ಅಂಥಹ ವ್ಯಕ್ತಿಗಳು ತಮ್ಮಲ್ಲಿರುವ
ಸಂಪತ್ತು, ಸಮಾಜದಲ್ಲಿ ಗಳಿಸಿರುವ ಪ್ರಭಾವದಿಂದ ಅಹಂಕಾರಿಗಳಾಗಿ ತಮ್ಮ
ಸ್ಥಾನ ಮಾನಗಳು ಯಾವಾಗಲೂ ಬದಲಾಗುವುದೇ ಇಲ್ಲವೆಂದು ಭ್ರಮಿಸಿ ಬೇರೆಯವರನ್ನು ಅವಮಾನಿಸಿ ಹಾಗೂ ಮುಗ್ಧ
ಜನಗಳನ್ನು ತೊಂದರೆಗೀಡು ಮಾಡುವುದಕ್ಕೂ ಹೇಸುವುದಿಲ್ಲ. ಹಣ ಬಲದಿಂದ ತಮ್ಮ
ಸುತ್ತಾ ಭದ್ರ ಕೋಟೆಯನ್ನೇ ನಿರ್ಮಿಸಿಕೊಳ್ಳುತ್ತಾರೆ. ದುರದೃಷ್ಟದ ಸಂಗತಿಯೆಂದರೆ
ಶಕ್ತಿಯುತವಾದ ಸೈನ್ಯವೊಂದು ಈ ಭದ್ರಕೋಟೆಯನ್ನು ಕ್ಷಣಾರ್ಧದಲ್ಲಿ ಒಡೆಯಬಲ್ಲುದು. ಅದೇ ಎಲ್ಲವನ್ನೂ ನಾಶಮಾಡುವ ಕಾಲ. ಅದು ಸುಳಿವು ಕೂಡಾ ನೀಡದೇ
ಒಂದು ಕ್ಷಣದಲ್ಲೇ ಎಲ್ಲವನ್ನೂ ಕಸಿದು ಕೊಳ್ಳುತ್ತದೆ.
ಮನುಷ್ಯನ ಈ ವಿಧದ ಧೋರಣೆಯನ್ನು ಶ್ರೀ ಶಂಕರರು, ಅದು ಮುಂದೆ ತಪ್ಪಿಸಿಕೊಳ್ಳಬಹುದಾದ ದುಃಖ, ಅವನಿಗೆ ಹಾಗೂ ಅವನನ್ನು ನಂಬಿರುವವರಿಗೆ ಬರುವುದರ ವಿರುದ್ದ ಎಚ್ಚರಿಸುತ್ತಾರೆ.
ಮುಂದುವರೆದು ಶಂಕರರು ವಿನಾಶಕಾರಿ ಕಾಲವು ರಾತ್ರೋ ರಾತ್ರಿ ಅವನ ಸ್ಥಿತಿಯನ್ನು
ಬದಲಾಯಿಸುತ್ತದೆ ಎಂದು ಎಚ್ಚರಿಸುತ್ತಾರೆ. ಯೌವನ, ಸಂಪತ್ತು, ಶಾಶ್ವತವಲ್ಲ. ಬಡವನೊಬ್ಬ
ಶ್ರೀಮಂತನಾಗಲು, ಶ್ರೀಮಂತನು ಬಡವನಾಗಲು ಹೆಚ್ಚು ಸಮಯ ಬೇಕಿಲ್ಲ.
ಸಂಪತ್ತು ಯಾರೊಂದಿಗೂ ಶಾಶ್ವತವಾಗಿ ಇರುವುದಿಲ್ಲ. ಸಂಪತ್ತು ಅನೇಕ ರೀತಿಯಲ್ಲಿ ನಾಶವಾಗಬಹುದು - ದುರದೃಷ್ಟ
, ದರೋಡೆ, ಕಳ್ಳತನ, ಮೋಸ,
ಕಲಹ, ಅನಾರೋಗ್ಯ, ಇತರೆ ಕಾರಣಗಳು.
ಸಂಪತ್ತು ಕೈಬಿಟ್ಟ ನಂತರ ಬಂಧುಗಳು ಮತ್ತು ಸ್ನೇಹಿತರೆಲ್ಲರೂ ಅವನನ್ನು ತೊರೆಯುತ್ತಾರೆ.
ಅದೃಷ್ಟ ಮತ್ತು ದುರಾದೃಷ್ಟಗಳು ಬರುತ್ತದೆ, ಹೋಗುತ್ತದೆ.
ನಾವು ಅನುಭವಿಸುವುದೆಲ್ಲಾ ಶಾಶ್ವತವಲ್ಲ.
ಪ್ರಪಂಚದಲ್ಲಿನ ಅನಿತ್ಯವಾದ ಸಂತೋಷಗಳು ನಿದ್ರೆಯ ಮಂಪರಿನಲ್ಲಿರುವ
ನಮ್ಮನ್ನು ಎಚ್ಚರಿಸಬೇಕು. ನಮ್ಮ ಬುದ್ಧಿಯನ್ನು ಉಪಯೋಗಿಸಿ ತಿಳಿದುಕೊಳ್ಳಬೇಕಾದ
ದ್ದೆಂದರೆ ಇವೆಲ್ಲವುಗಳೂ ಕೇವಲ ಮಾಯೆಯ ಪ್ರಭಾವ ವೆಂದು.
"ಮಾಯೆ ಎಂದರೇನು? ಸಾಧಕನೊಬ್ಬನ ಆಧ್ಯಾತ್ಮಿಕ ಬೆಳವಣಿಗೆಯನ್ನು ಬೆಳೆಸಿಕೊಳ್ಳಬೇಕೆಂಬ ಆಸೆಯನ್ನು ತಡೆಯುವುದೇ
ಮಾಯೆ." .....ಶ್ರೀ ರಾಮಕೃಷ್ಣ.
ಪರಬ್ರಹ್ಮತತ್ತ್ವವನ್ನರಿಯುವುದು ಮತ್ತು ನಮ್ಮ ಅಂತರಾತ್ಮವನ್ನು
ಅದರೊಂದಿಗೆ ವಿಲೀನಗೊಳಿಸುವುದೇ ನಮ್ಮ ಗುರಿ. ನಮ್ಮೊಳಗಿರುವ ಆತ್ಮವು ಮಾತ್ರ ಸತ್ಯ ಹಾಗೂ ಶಾಶ್ವತ ತತ್ತ್ವ.
|
ಶ್ಲೋಕ - 12 - ಸಂಸ್ಕೃತದಲ್ಲಿ:
ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ |
ಕಾಲಃ ಕ್ರೀಡತಿ ಗಚ್ಛತ್ಯಾಯು -
ಸ್ತದಪಿ ನ ಮುಂಚತ್ಯಾಶಾವಾಯುಃ ||
|
ಕನ್ನಡದಲ್ಲಿ :
ದಿನರಾತ್ರಿಗಳು ಬೆಳಗು ಸಂಜೆಗಳು
ಶಿಶಿರ ವಸಂತವು ಬರುವುವು ಮರಳಿ
ಕಾಲವಾಡುವುದು ಹೋಗುವುದಾಯು
ಆದರು ಕುಂದದು ಆಶೆಯ ವಾಯು
|
ಅರ್ಥ ವಿವರಣೆ :
ಹಗಲು,ರಾತ್ರೆ, ಉದಯ, ಅಸ್ತಮಾನಗಳು,
ಬೇಸಗೆ, ಛಳಿಗಾಲಗಳು ಬರುತ್ತವೆ, ಹೋಗುತ್ತವೆ. ಕಾಲವು ಹೀಗೆ ಉರುಳುತ್ತದೆ ಮತ್ತು ಆಟವಾಡುತ್ತದೆ
ಹಾಗೂ ನಮ್ಮ ಜೀವನದಲ್ಲೂ ಇದೇ ವಿಧದ ಏರಿಳಿತಗಳು ಉಂಟಾಗುತ್ತವೆ. ಆದರೂ
ಮನುಷ್ಯನು ಗಾಳಿಯಲ್ಲಿ ಹೊಯ್ದಾಡುವ ಆಸೆಗಳನ್ನು ತ್ಯಜಿಸುವುದಿಲ್ಲ.
|
ವ್ಯಾಖ್ಯಾನ :
ಒಂದರ ನಂತರ ಮತ್ತೊಂದರಂತೆ ಹಗಲು, ರಾತ್ರೆಗಳು, ಮುಂಜಾನೆ, ಸಂಜೆಗಳು, ಋತುಗಳು, ಸಂವತ್ಸರಗಳು,
ಉರುಳುತ್ತಲೇ ಇರುತ್ತವೆ. ಕಾಲಚಕ್ರದಲ್ಲಿ ಇವುಗಳೆಲ್ಲಾ
ಕೇವಲ ಕಂಬಿಗಳು, ಸತತವಾಗಿ ಹಾಗೂ ನಿಷ್ಟುರವಾಗಿ ಸುತ್ತುತ್ತಲೇ ಇರುತ್ತವೆ.
ಪ್ರತಿಯೊಂದು ಸುತ್ತು ಮುಗಿದಾಗಲೂ ಜೀವನವು ಕ್ಷೀಣಿಸತೊಡಗುತ್ತದೆ ಮತ್ತು ದೀರ್ಘವಾದ
ಜೀವನವೂ ಕಡಿಮೆಯಾಗತೊಡಗುತ್ತದೆ. ಕಾಲವು ಜೀವನದೊಂದಿಗೆ ಆಟವಾಡುತ್ತದೆ
ಹಾಗೂ ಜೀವನವು ಕಾಲನ ಕೃಪೆಯಲ್ಲಿರುತ್ತದೆ. ಆದರೆ ಮನುಷ್ಯನಿಗೆ ಇದು ಅರಿವೇ
ಆಗುವುದಿಲ್ಲ ಮತ್ತು ಭವಿಷ್ಯಕ್ಕೆ ಬೇಕಾಗುವುದೆಂದು ಸಂಪತ್ತನ್ನು ಕೂಡಿಡತೊಡಗುತ್ತಾನೆ.
ಜೀವನವು ಕ್ಷಣಿಕವೆಂಬುದನ್ನು ಅರಿಯದೇ ಮನುಷ್ಯನು ತನ್ನ ಆಸೆಗಳನ್ನು ದ್ವಿಗುಣಗೊಳಿಸಿಕೊಳ್ಳುತ್ತಾ
ಅವುಗಳನ್ನು ತೀರಿಸಿಕೊಳ್ಳುತ್ತೇನೆಂದು ಮಾಯಾ ಮೃಗದ ಹಿಂದೆ ಓಡುತ್ತಿರುತ್ತಾನೆ. ಇಂದ್ರಿಯ ಸುಖೋಪಭೋಗಗಳನ್ನು ಅವುಗಳು ನಶ್ವರವೆಂದು ತಿಳಿದೂ ಅನುಭವಿಸಿಯೇ ತೀರುತ್ತೇನೆಂದು
ಅವುಗಳನ್ನು ಪಡೆಯಲು ಶ್ರಮಿಸುತ್ತಾನೆ. ಅತ್ಯುತ್ತಮವಾದ ವಸ್ತುಗಳು ಅವನ
ಬಾಯಿಯಲ್ಲೇ ಬೂದಿಯಾಗುತ್ತವೆ. ಹೇಗೆಂದರೆ ಮಾರೀಚನು ಸೀತೆಯನ್ನು ಮಾಯಾಜಾಲದಲ್ಲಿ
ಸಿಲುಕಿಸಲು ಬಂಗಾರದ ಜಿಂಕೆಯ ರೂಪವನ್ನು ತಾಳಿದಂತೆ. ಇದೇ ರೀತಿ ಹಲವಾರು
ವಸ್ತುಗಳು ಎಚ್ಚರ ತಪ್ಪಿದ ಮನುಷ್ಯನನ್ನು ಪಾತಾಳಕ್ಕೆ ತಳ್ಳುವಂತೆ ಸುಂದರವಾಗಿ ಹಾಗೂ ಬಂಗಾರದಂತೆ
ಹೊಳೆಯುತ್ತಿರುತ್ತವೆ. ಆದ್ದರಿಂದ ನಾವು ಇಂದ್ರಿಯೋಪಭೋಗಗಳ ವಸ್ತುಗಳನ್ನು
ಪಡೆಯುವ ಆಸೆಯನ್ನು ವಿರೋಧಿಸೋಣ.
ಕಾಲವು ಅತಿ ವೇಗದಲ್ಲಿ ಓಡುತ್ತಿದ್ದರೂ ಮನುಷ್ಯನು ತನ್ನ ಉನ್ನತಿಗಾಗಿ
ಅಂತರಂಗ ಶೋಧನೆಯನ್ನು ಮಾಡದೇ, ತನ್ನ ಜೀವನದಲ್ಲಿನ ಹಿನ್ನಡೆಗೆ ತಾನೇ
ಕಾರಣವೆಂಬುದನ್ನು ಒಪ್ಪದೇ, ವಿಧಿಯನ್ನೋ, ತನ್ನ
ಪೂರ್ವ ಜನ್ಮದ ಕರ್ಮವೆಂದೋ, ಭಗವಂತನ ಇಚ್ಚೆಯೆಂದೋ, ಕಾರಣವನ್ನು ಕೊಡುತ್ತಾ ಹೋಗುತ್ತಾನೆ. ನಿಜ ಸಂಗತಿಯೆಂದರೆ ಇದು
ಅವನ ಸ್ವಾರ್ಥ ಮನೋಭಾವ ಹಾಗೂ ಪ್ರಾಪಂಚಿಕ ಸುಖಗಳನ್ನು ಅನುಭವಿಸುವ ಆಸೆಯನ್ನು ತ್ಯಜಿಸಲು ಇಷ್ಟಪಡದೇ
ಇರುವುದು.
|
ಶ್ಲೋಕ - 13- ಸಂಸ್ಕೃತದಲ್ಲಿ:
ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ |
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||
|
ಕನ್ನಡದಲ್ಲಿ:
ಹೆಂಡತಿ ಯಾರು ಹಣದ ಚಿಂತೆಯೇ
ಏನದು ನಿನ್ನ ಮಿತಿಯಿಲ್ಲದ ಚಿಂತೆ
ಸಂಸಾರದ ಸಾಗರವನು ದಾಟಲು
ಸಜ್ಜನಸಂಗವದೊಂದೇ ನೌಕೆ
|
ಅರ್ಥ ವಿವರಣೆ :
ಎಲೋ ಚಂಚಲ ಚಿತ್ತನಾದವನೆ ! ಹಣ ಪತ್ನಿ ಇತರೆ ಪ್ರಾಪಂಚಿಕ ವಸ್ತುಗಳ ಬಗೆಗೆ ಯಾತಕ್ಕೆ ಚಿಂತಿಸುವೆ?
ಬೇರೆ ಯಾರೂ ಇಲ್ಲವೇ ನಿನಗೆ ಮಾರ್ಗದರ್ಶನ ಮಾಡಲು? ಮೂರ್ಲೋಕದಲ್ಲೂ
ನಿನ್ನನ್ನು ಹುಟ್ಟು ಸಾವುಗಳ ಜೀವನ ಚಕ್ರದಿಂದ ದೋಣಿಯ ಮೂಲಕ ಪಾರಾಗಿಸಲು ಹಾಗೂ ಉಳಿಸುವುದು ಸತ್ಪುರುಷರ
ಸಹವಾಸ ಮಾತ್ರ.
|
ವ್ಯಾಖ್ಯಾನ :
"ಬೆಂಕಿ ಹತ್ತಿಕೊಂಡು ಉರಿಯುತ್ತಿರುವ
ಮನೆಯೊಳಗೆ ಗಾಢವಾಗಿ ನಿದ್ರಿಸಿತ್ತಿರುವವನನ್ನು ತಪ್ಪಿಸಿ ಕೊಳ್ಳಲು ಅನುವಾಗುವಂತೆ ಹೊಡೆದು ಎಬ್ಬಿಸುವಂತೆ,
ಗುರುಗಳೂ ಸಹಾ ಅತ್ಯಂತ ಸಹಾನುಭೂತಿಯುಳ್ಳ ವರಾಗಿ , ಮತ್ತೆ
ಶಿಷ್ಯನಿಗೆ ಅರ್ಥವಾಗುವಂತೆ ವಿವರಿಸುತ್ತಾರೆ. (ಪ್ರದೀಪ್ತ ಗ್ರಹಾಂತರ
ಗಾಢ - ಸುಪ್ತಮ್ ಜನಮ್ ತಾಡಯಿತ್ವಾ ಚಲಯಿತ್ವಾ ಪಾದಕರಾದೀನಾ ಪ್ರಬುದ್ಧಮ್
ಬಹಿರ್ - ನಿಸ್ಸಾರಯತಿ ಯಥಾ, ಪರಮಕಾರುಣಿಕತ್ವಾದ
ಆಚಾರ್ಯಾಸ ತಥಾ ಪುನಃ ಬೋಧಯಂತಿ)".
ಜೀವನ ಸಂಪತ್ತುಗಳ ಬಗ್ಗೆ ಆತಂಕ ಕಾತುರ ಯಾವ ಲಾಭಕ್ಕಾಗಿ? ಯಾತಕ್ಕಾಗಿ ನಿನ್ನ ಹೆಂಡತಿಯ ತುಟಿಗಳ ಬಗ್ಗೆ ಆಲೋಚಿಸುವೆ?
ಹೀಗೆ ಇಂದ್ರಿಯ ಸುಖಗಳ ಬಗ್ಗೆ ಧ್ಯಾನಿಸುವುದು ಸಮಯವನ್ನು ಹಾಳುಮಾಡುವ ಕೆಲಸ.
ಆಧ್ಯಾತ್ಮಿಕ ದೃಷ್ಟಿಯಿಂದ ಇದು ಶಿಕ್ಷಾರ್ಹವಾದ ಕಾರ್ಯ. ಗುರುಗಳು ಈ ವಿಧವಾದ ಚಿಂತನೆಯಲ್ಲಿ ತೊಡಗಿರುವ ಶಿಷ್ಯನನ್ನು ಶಿಕ್ಷಿಸಬಹುದು.
ಅವನನ್ನು ವಾತುಲ ಎಂದು ಸಂಬೋಧಿಸಿ ಛೇಡಿಸಬಹುದು ("ವಿಷಯಪರಾಮೂಢ ಶಿರೋಮಣಿ"), ಅನಂತರ ಅವನನ್ನು ಇಂಥಾ ವಿಷಯಗಳಿಂದ
ವಿಮುಖನಾಗುವಂತೆ ಆಜ್ಞಾಪಿಸಬಹುದು.
ಇದಕ್ಕೆ ಪರಿಹಾರೋಪಾಯವೇನು? ಹೇಗೆ ಅಂಥವನು ಸಂಸಾರ ಸಾಗರವನ್ನು ದಾಟಬಹುದು? ಒಂದು ಉತ್ತಮ ಮಾರ್ಗವೆಂದರೆ ಸತ್ಪುರುಷರ ಸಹವಾಸ. ಈ ವಿಧದ ಸಹವಾಸವು
ಸುರಕ್ಷಿತ ಹಾಗೂ ಸಂಸಾರ ಸಾಗರವನ್ನು ದಾಟಲು ಸರಿಯಾದ ದೋಣಿ. ಸತ್ಪುರುಷರು
ಭಕ್ತಿ, ಜ್ಞಾನ, ವೈರಾಗ್ಯ ಇತ್ಯಾದಿಗಳನ್ನು
ಬೆಳೆಸಿಕೊಳ್ಳಲು ಪದೇ ಪದೇ ಬೋಧಿಸುತ್ತಿರುತ್ತಾರೆ. ("ತ್ರಿಜಗತಿ
ಸಜ್ಜನಾನಾಮ್ ಸಂಗತಃ ಭವ ಎವಾರ್ಣವಹ ಭವಾರ್ಣವಹ ಸಮುದ್ರಾಹ ತತ್ತರಣೆ ಏಕಾ ಮುಖ್ಯಾ ನೌಕಾ ಭವತಿ ಭಕ್ತಿ
ಜ್ಞಾನ ವೈರಾಗ್ಯಾದಿ ಪುನಃ ಪುನಃ ಸ್ಮರಯಂತಿ ಬೋಧಯಂತಿ ಚ ಮಹಾಂತಃ"). ನಿಶ್ಚಲತೆ (ಸಮ), ವಿಚಾರಿಸುವುದು
(ವಿಚಾರ ), ನೆಮ್ಮದಿ (ಸಂತೋಷ
) ಮತ್ತು ಸತ್ಪುರುಷರ ಸಹವಾಸ (ಸಾಧು-ಸಮಾಗಮ) ಗಳು ಸಂಸಾರ ಬಂಧನದಿಂದ ಬಿಡುಗಡೆ ಪಡೆಯಲು ಸೂಕ್ತ ಮಾರ್ಗ.
"ಭೋಗಾಪೇಕ್ಷೆ ಮತ್ತು ಅತಿ ಆಸೆಗಳು
ಮನುಷ್ಯನನ್ನು ಪಾಪಕೂಪದಲ್ಲಿ ಮುಳುಗಿಸುತ್ತವೆ. ನೀವು ಸ್ತ್ರೀಯನ್ನು ಮಾತೃ
ರೂಪದಲ್ಲಿ ಕಂಡರೆ, ಆಗ ನೀವು ಭೋಗಾಪೇಕ್ಷೆಯ ಬಲೆಯಿಂದ ಹಾಗೂ ತನ್ಮೂಲಕದ
ದುಃಖದಿಂದ ತಪ್ಪಿಸಿಕೊಳ್ಳಬಹುದು." ..
.. ಶ್ರೀ ರಾಮಕೃಷ್ಣ
ಈ ಹನ್ನೆರಡು ಶ್ಲೋಕಗಳ ( 2 ರಿಂದ 13 ರ ವರೆಗಿನ ಶ್ಲೋಕಗಳು)
ಹೂಗುಚ್ಛವನ್ನು ವ್ಯಾಕರಣಕಾರನಿಗೆ ಸರ್ವಜ್ಞಾನಿಯಾದ ಹಾಗೂ ಭಗವತ್ಪಾದರೆಂದು ಪೂಜಿಸಲ್ಪಡುವ
ಶಂಕರರು ಬೋಧಿಸಿದ್ದು.
|
ಶ್ಲೋಕ - 13 (ಅ) - ಸಂಸ್ಕೃತದಲ್ಲಿ:
"ದ್ವಾದಶಮಂಜರಿಕಾಭಿರಶೇಷಃ
ಕಥಿತೋ ವೈಯಾಕರಣಾಸ್ಯೈಷಃ |
ಉಪದೇಶೋSಭೂದ್ವಿದ್ಯಾನಿಪುಣೈಃ
ಶ್ರೀಮಚ್ಚಂಕರಭಗವಚ್ಛರಣೈಃ ||
|
ಈ ಶ್ಲೋಕದೊಂದಿಗೆ:
ಇತಿ,
"ಶ್ರೀ ಗುರು ಶಂಕರವಿಜಯೇ ಶ್ರೀಮಚ್ಚಂಕರ
ಭಗವತ್ಪಾದ ವೈಯಾಕರಣ ಸಂವಾದೇ ಪರಮಹಂಸ ಪರಿವ್ರಾಜಕಾ ಚಾರ್ಯವರ್ಯ ಶ್ರೀಮಚ್ಚಂಕರಾಚಾರ್ಯೋಪದಿಷ್ಟ ದ್ವಾದಶ
ಮಂಜರಿಕಾ ಸ್ತೋತ್ರಮ್".
ಸಂಪೂರ್ಣಂ
|
ಚತುರ್ದಶಮಂಜರಿಕಾ ಸ್ತೋತ್ರಮ್
ಶ್ಲೋಕ - 14 - ಸಂಸ್ಕೃತದಲ್ಲಿ:
ಜಟಿಲೋ ಮುಂಡೀ ಲುಂಛಿತಕೇಶಃ
ಕಾಷಾಯಾಂಬರಬಹುಕೃತವೇಷಃ |
ಪಶ್ಯನ್ನಪಿ ಚ ನ ಪಶ್ಯತಿ ಮೂಢೋ
ಹ್ಯುದರನಿಮಿತ್ತಂ ಬಹುಕೃತವೇಷಃ ||
|
ಕನ್ನಡದಲ್ಲಿ:
ಜಟೆಯೋ ಬೋಳೋ ಕೆದರಿದ ತಲೆಯೋ
ಕಾವಿಯ ಬಟ್ಟೆಯು ನಾನಾ ವೇಷ
ತಿಳಿದೂ ತಿಳಿಯದಲಿರುವನು ಮೂಢ
ಹೊಟ್ಟೆಯ ಪಾಡಿಗೆ ನಾನಾ ವೇಷ
|
ಅರ್ಥ ವಿವರಣೆ:
ಒಬ್ಬನು ಜಟೆಯ ರೀತಿಯ ಕೂದಲುಳ್ಳವನು; ಮತ್ತೊಬ್ಬನು ತಲೆಯ ಕೂದಲನ್ನು ಸಂಪೂರ್ಣವಾಗಿ ಬೋಳಿಸಿರುವವನು;
ಇನ್ನು ಕೆಲವರ ತಲೆಯ ಕೂದಲನ್ನು ಅಲ್ಲಲ್ಲೇ ಕಿತ್ತಿರುವವರು; ಮತ್ತು ಕಾವಿ ಬಟ್ಟೆಯನ್ನು ಧರಿಸಿರುವವರು; ಮೂಢರು ಈ ರೀತಿಯಾಗಿ
ವೇಷಧರಿಸಿರುವರು "ಕಾಣುತ್ತಾರೆ" ಆದರೆ, ನಿಜವಾಗಿ "ಕಾಣುವುದಿಲ್ಲ";
ಇವೆಲ್ಲವೂ ಕೇವಲ ಹೊಟ್ಟೆಪಾಡಿಗಾಗಿ ಮಾಡುವ ನಟನೆ ಮಾತ್ರ.
|
ವ್ಯಾಖ್ಯಾನ :
ಕೆಲವು ಮುದ್ರಣಗಳ ಪ್ರಕಾರ ಈ ಶ್ಲೋಕವು ಚತುರ್ದಶ ಮಂಜರಿಸ್ತೋತ್ರದ
ಮೊದಲನೆಯದು ಹಾಗೂ ಶಂಕರಾಚಾರ್ಯರ ಹದಿನಾಲ್ಕು ಶಿಷ್ಯರುಗಳು ಸೇರಿ ರಚಿಸಿದ ಕೃತಿಯೆಂದು ಅಭಿಪ್ರಾಯ
ಪಡಲಾಗಿದೆ.
ಹಿಂದಿನ ಶ್ಲೋಕದಲ್ಲಿ ಶ್ರೀ ಶಂಕರಾಚಾರ್ಯರು ಸತ್ಸಂಗವು, ಸತ್ಪುರುಷರ ಸಂಗದಿಂದ ಮಾತ್ರ ಭವ ಬಂಧನಗಳಿಂದ ಮುಕ್ತರಾಗಲು ಸಾಧ್ಯವೆಂದು
ತಿಳಿಸಿದ್ದರು. ಆದರೆ ಎಚ್ಚರ ! ಕೆಲವು
ನಕಲಿ ಸಾಧುಗಳಿರುವರು; ಅವರಿಂದ ಮೋಸ ಹೋಗದಿರಿ. ಕೆಲವು ತೋಳಗಳು ಕುರಿಯ ವೇಷದಲ್ಲಿರುವುದು ! ಹಲವಾರು ಜನಗಳು
ಹೊಟ್ಟೆ ಪಾಡಿಗಾಗಿ ಧಾರ್ಮಿಕ ವಸ್ತ್ರಗಳನ್ನು ಧರಿಸಿರುವರು. ಏಕೆಂದರೆ
ಈ ಮಾರ್ಗವು ಸುಲಭವಾದದ್ದು ಹಾಗೂ ಗೌರವಯುತವಾದದ್ದು. ಕೆಲವರು ಜಟೆಯನ್ನು
ಬಿಟ್ಟಿದ್ದರೆ ಮತ್ತೆ ಕೆಲವರು ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿರುತ್ತಾರೆ.
ಈ ವಿಧದ ವ್ಯಕ್ತಿಗಳು ಸರ್ವ ಸಂಗ ಪರಿತ್ಯಾಗಿಗಳನ್ನು ಪ್ರತಿನಿಧಿಸುವ ಕಾವಿ ಬಟ್ಟೆಯನ್ನು
ತೊಟ್ಟು ನೈಜ ಭಕ್ತರನ್ನು ಮೋಸಪಡಿಸುತ್ತಾರೆ. ಅಮಾಯಕ ಗಂಡಸರು ಹಾಗೂ ಹೆಂಗಸರು
ಇವರುಗಳು ಪ್ರದರ್ಶಿಸುವ ಢಾಂಬಿಕ ಭಕ್ತಿ ಹಾಗೂ ಕೆಲವೊಮ್ಮೆ ಪ್ರದರ್ಶಿಸುವ ಮಾಂತ್ರಿಕತೆಯಿಂದ ಸುಲಭವಾಗಿ
ಮರುಳಾಗುತ್ತಾರೆ. ಈ ವಿಧದ ಮೋಸದ ಕೃತ್ಯದ ಮೂಲಕ ಅಮಾಯಕರನ್ನು ತಮ್ಮ ಕೃತ್ಯಕ್ಕೆ
ಬಳಸುವ ಕೃತ್ಯವನ್ನು ಪುರಾತನ ಕಾಲದಿಂದಲೂ ಬಳಸಿಕೊಳ್ಳಲಾಗಿದೆ. ರಾಮಾಯಣದಲ್ಲಿ
ಸೀತೆಯನ್ನು ರಾವಣನು ಸಂನ್ಯಾಸಿ ವೇಷದಲ್ಲಿ ಬಂದು ಅಪಹರಿಸಿದನು. ಇದೇ ವಿಧದ
ಕೃತ್ಯಗಳು ಶಂಕರರ ಕಾಲದಲ್ಲಿಯೂ ಇತ್ತು. ಅಂಥಹ ಢಾಂಬಿಕರು ಧಾರ್ಮಿಕತೆಯನ್ನು
ಅಣಕಿಸುವುದಲ್ಲದೇ ಅದಕ್ಕೆ ಅಪಾರ ಹಾನಿಯನ್ನುಂಟು ಮಾಡುತ್ತಾರೆ. ಹಾಗಾಗಿ ಆಚಾರ್ಯರು ಇಂಥಹ ವ್ಯಕ್ತಿಗಳನ್ನು ತೀಕ್ಷ್ಣವಾಗಿ ಖಂಡಿಸಿ ಈ ಕೃತ್ಯಗಳು ಕೇವಲ
ತಮ್ಮ ಹಸಿವನ್ನು ನೀಗಿಸಿಕೊಳ್ಳುವ ಕೃತ್ಯವೆಂದಿದ್ದಾರೆ.
ಧರ್ಮ ಒಂದೇ ಮಾರ್ಗವಲ್ಲ ಅಮಾಯಕರನ್ನು ಸತತವಾಗಿ ಮೋಸಪಡಿಸಲು , ಜೀವನದ ಎಲ್ಲ ಹಂತಗಳಲ್ಲೂ ಮೋಸಗಾರರು ಇರುತ್ತಾರೆ. ಆದರೆ ಇಂಥಹ ಢಾಂಬಿಕರ ಕೃತ್ಯವು ಧಾರ್ಮಿಕ ಕ್ಷೇತ್ರದಲ್ಲಿ ನಡೆದಾಗ ಅದು ಅಪಾರ ಹಾನಿಯನ್ನುಂಟುಮಾಡುತ್ತದೆ.
ಅವರು ವ್ಯಕ್ತಿಗತ ಅಪೇಕ್ಷಕರಿಗೆ ತೀವ್ರ ಹಾನಿಯನ್ನುಂಟು ಮಾಡುವುದಲ್ಲದೇ,
ಇಡೀ ಸಮುದಾಯಕ್ಕೆ ಹಾನಿ ಯನ್ನುಂಟು ಮಾಡಿ, ಅದರ ಪ್ರಭಾವವು
ಧಾರ್ಮಿಕ ಅಲೋಚನೆಗಳಿಗೆ ಧಕ್ಕೆಯನ್ನುಂಟು ಮಾಡುವಂತೆ ನಡೆದುಕೊಳ್ಳುತ್ತಾರೆ. ಇಂಥಹ ಸಂದರ್ಭಗಳು ಹೆಚ್ಚಿನ ಗೊಂದಲವನ್ನುಂಟು ಮಾಡುತ್ತದೆ ಏಕೆಂದರೆ ಈ ರೀತಿ ಮೋಸಮಾಡುವವರಿಗೆ
ಸತ್ಯದ ಬಗ್ಗೆ ತಿಳಿದಿರುತ್ತದೆ; ಆದಾಗ್ಯೂ ಅವರು ಇದರ ಬಗ್ಗೆ
ಕುರುಡರಾಗಿರುತ್ತಾರೆ. ಸತ್ಯ ಗೊತ್ತಿದ್ದೂ ಗೊತ್ತಿಲ್ಲದವರಂತೆ
ವರ್ತಿಸಿ ಬೇರೆಯವರನ್ನು ಮೋಸಗೊಳಿಸುವುದಲ್ಲದೇ ತಾವೂ ಮೋಸಹೋಗುತ್ತಾರೆ. ಅವರುಗಳು ಪವಿತ್ರ ಗ್ರಂಥಗಳನ್ನು ಉದ್ದರಿಸಿ ಪ್ರವಚನ ಮಾಡುತ್ತಿರುವಾಗ ಅಮಾಯಕ ಭಕ್ತರು
ಅವರಿಗೆ ನಮಸ್ಕರಿಸುತ್ತಾರೆ. ಅವರುಗಳು ಈ ವಿಧದ ಪ್ರವಚನಗಳನ್ನು ಮಾಡುವಾಗ
ಅವರಿಗೆ ಸತ್ಯದ ಅರಿವಿರಬೇಕು. ಹಾಗೆ ನೋಡಿದರೆ ಅವರಿಗೆ ಅರಿವಿರುತ್ತದೆ
(ಪಶ್ಯಾನ್ನಪಿ): ಆದರೆ ಅವರು ತಾವು ಬೋಧಿಸುವಂತಹ ಜೀವನವನ್ನು
ನಡೆಸುವುದಿಲ್ಲ. ನಿತ್ಯ ಸತ್ಯದೆಡೆಗೆ ಅವರು ಕಣ್ಣು ಮುಚ್ಚಿಕೊಂಡಿರುತ್ತಾರೆ.
ಅವರಿಗೆ ಸುಲಭ ಜೀವನದ ದಾಹ ಮತ್ತು ಆಸಕ್ತಿಗಳು ಆದ್ಯತೆಯಾಗಿರುತ್ತದೆ.
ಅವರಲ್ಲಿ ಕೆಲವರು ಮೊದಲಿಗೆ ಒಳ್ಳೆಯ ಉದ್ದೇಶದಿಂದಲೇ ಕಾರ್ಯವನ್ನು
ಪ್ರಾರಂಭಿಸಿದರೂ ನಂತರ ಕ್ರಮೇಣ ಹಾದಿ ತಪ್ಪುತ್ತಾರೆ. ಕೆಲವರು ಬೇಕೆಂತಲೇ ಧರ್ಮವನ್ನು ಕೀಳಾಗಿ ಕಾಣುವ ಉದ್ದೇಶದಿಂದ ಧಾರ್ಮಿಕ ವಸ್ತ್ರಗಳನ್ನು
ಧರಿಸುತ್ತಾರೆ. ಅಂತರಂಗದಲ್ಲಿ ಅವರಿಗೆ ಅಪರಾಧೀ ಮನೋಭಾವ ವನ್ನನುಭವಿಸುತ್ತಿರುವರಾದರೂ,
ಸುಲಭ ಜೀವನದ ಉದ್ದೇಶ ಹಾಗೂ ಇತರ ಕೆಟ್ಟ ಉದ್ದೇಶಗಳಿಗಾಗಿ ತಮ್ಮ ಕೆಟ್ಟ ಮಾರ್ಗವನ್ನೇ
ಅನುಸರಿಸುತ್ತಿರುತ್ತಾರೆ. ಆಚಾರ್ಯರು ಸಾಧಕರಿಗೆ ಇಂಥಹ ಮೋಸಗಾರರ ಬಗ್ಗೆ
ಎಚ್ಚರವನ್ನೀಯುತ್ತಾರೆ.
ಶಂಕರರ ಜೀವಿತ ಕಾಲದಲ್ಲಿ ಇಂಥಹ ವ್ಯಕ್ತಿಗಳು ಕೇವಲ ಸುಲಭ
ಜೀವನಕ್ಕಾಗಿ ಈ ಮಾರ್ಗವನ್ನನುಸರಿಸುತ್ತಿದ್ದರು. ಆದರೆ ಈಗ ಇಂಥಹ ವ್ಯಕ್ತಿಗಳು ಬಾಹ್ಯದಲ್ಲಿ ಸತ್ಪುರುಷರಂತೆ ನಟಿಸುತ್ತಾ ಒಳಗೊಳಗೇ ಅನಾಚಾರ
ಮಾರ್ಗವನ್ನನುಸರಿಸುವವರು ಗಾಬರಿಯಾಗುವ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ.
|
ಶ್ಲೋಕ - 15 - ಸಂಸ್ಕೃತದಲ್ಲಿ:
ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಮ್ |
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾಪಿಂಡಮ್ ||
|
ಕನ್ನಡದಲ್ಲಿ:
ಅಂಗ ವಿಹೀನನು ಬೆಳ್ಳಗಾದ ತಲೆ
ಹಲ್ಲುಗಳಿಲ್ಲದ ಬೊಚ್ಚುಬಾಯಿ ತಾ
ವೃದ್ಧನು ಸಾಗುವ ಕೋಲನ್ನೂರುತ
ಆದರು ಕರಗದು ಆಶೆಯ ಕಂತೆ
|
ಅರ್ಥ ವಿವರಣೆ :
ಶರೀರವು ಕೃಶವಾಗಿದೆ, ತಲೆಯ ಕೂದಲು ಸಂಪೂರ್ಣವಾಗಿ ಬಿದ್ದುಹೋಗಿದೆ ಅಥವಾ ಬೆಳ್ಳಗಾಗಿದೆ, ಹಲ್ಲುಗಳೆಲ್ಲಾ ಬಿದ್ದು ಬೊಚ್ಚುಬಾಯಿಯಾಗಿದೆ, ಊರುಗೋಲಿನ ಸಹಾಯದಿಂದ
ಪ್ರಯಾಸದಿಂದ ನಡೆಯಬೇಕಿದೆ. ಇಷ್ಟೆಲ್ಲಾ ಆದರೂ ವ್ಯಾಮೋಹವು ಬಿಟ್ಟುಹೋಗಿಲ್ಲ.
ಅದು ಎಷ್ಟು ಬಲವಾಗಿದೆಯೆಂದರೆ ಬೆಟ್ಟದಷ್ಟು ಉಪಯೋಗವಿಲ್ಲದ ಆಸೆಗಳನ್ನು ತೀರಿಸಿಕೊಳ್ಳಲು
ಹವಣಿಸುತ್ತಿರುವನು.
|
ವ್ಯಾಖ್ಯಾನ:
ಇಂದ್ರಿಯ ಸುಖಗಳನ್ನು ಅನುಭವಿಸಲು ಆಸೆಯು ಬೆಟ್ಟದಷ್ಟು ಇದೆ. ಶರೀರವು ಕೃಶವಾಗಿ ದೇಹದಲ್ಲಿನ ಶಕ್ತಿಯೆಲ್ಲಾ ಬತ್ತಿಹೋಗಿದ್ದರೂ ತೀರದ
ಆಸೆಗಳಿಗೆ ಜೋತುಬಿದ್ದಿರುವ ಮನುಷ್ಯನು.
ಚಿಕ್ಕವಯಸ್ಸಿನ ಯುವಕನು ಸುಖವನ್ನು ಅನುಭವಿಸಬಹುದು. ವಯಸ್ಸಾದ ವ್ಯಕ್ತಿಯು ಯುವ ಮನಸ್ಸಿದ್ದರೂ ಆಸೆಗಳನ್ನು ಆಹ್ವಾನಿಸಬಹುದಾದರೂ
ಅವುಗಳನ್ನು ಅನುಭವಿಸುವ ಸಾಮರ್ಥ್ಯವಿರುವುದಿಲ್ಲ.
ಹೀಗಾಗಿ ಕಾಲನ ಪ್ರಭಾವದಿಂದಾಗಿ ವಯಸ್ಸಾದ ವ್ಯಕ್ತಿಯು ನೋವಿನ
ಜೀವನವನ್ನು ನಡೆಸಬೇಕು.
ಈ ಶ್ಲೋಕದ ಸಂದೇಶವೇನೆಂದರೆ -
ವ್ಯಕ್ತಿಯೊಬ್ಬನು ಯೌವನಾವಸ್ತೆಯಲ್ಲೇ ಆಸೆಗಳಿಗೆ ಕಡಿವಾಣಹಾಕುವ
ಕಲೆಯನ್ನು ಕರಗತ ಮಾಡಿ ಕೊಳ್ಳಬೇಕು. ಏಕೆಂದರೆ ಆಸೆಗಳೇ
ಎಲ್ಲ ದುಃಖ ಹಾಗೂ ವ್ಯಸನಗಳಿಗೆ ಮೂಲ. ಹೀಗೆ ಮಾಡುವುದರಿಂದ ವೃದ್ಧಾಪ್ಯದ
ದಿನಗಳಲ್ಲಿ ಸಂದರ್ಭಕ್ಕೆ ಹೊಂದಿಕೊಳ್ಳುವ ಅಭ್ಯಾಸವು ಆಗಿ ನಂತರದ ದಿನಗಳನ್ನು ನೆಮ್ಮದಿಯಿಂದ ಕಳೆದು
ಕಡೆಗೆ ಆಂತರಿಕ ಶಾಂತಿಯನ್ನು ಅನುಭವಿಸುತ್ತಾ
ದೇಹತ್ಯಾಗಮಾಡಬಹುದು.
ನಾವು ಯಾವುದೇ ಕೆಲಸದಲ್ಲಿ ತೊಡಗಿದ್ದರೂ ಅದು ತ್ಯಾಗ ಮನೋಭಾವದಿಂದ
ಕೂಡಿರಬೇಕು. ಬಾಹ್ಯದಲ್ಲಿ ನಾವು ಹೇಗಿದ್ದರೂ ಮನಸ್ಸನ್ನು
ಯಾವಾಗಲೂ ಪರಿಶುದ್ಧವಾಗಿಟ್ಟುಕೊಂಡಿರಬೇಕು. ನಿಜವಾದ ತ್ಯಾಗವೆಂದರೆ ಮನಸ್ಸಿನಲ್ಲಿ
ಉತ್ಪತ್ತಿಯಾಗುವ ಆಸೆಗಳನ್ನು ಬಿಟ್ಟುಕೊಡುವುದು. ಇದನ್ನು ನಮ್ಮ ಹೃದಯ
ಹಾಗೂ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದರ ಮೂಲಕ ಮಾತ್ರ ಸಾಧಿಸಬಹುದು.
ಈ ಶ್ಲೋಕವು ಯೌವನದಲ್ಲೇ ನಿರಾಸಕ್ತಿಯ ಮನೋಭಾವವನ್ನು ಬೆಳೆಸಿಕೊಳ್ಳುವುದರ
ಬಗೆಗೆ ಒತ್ತಿ ಹೇಳುತ್ತದೆ.
"ನದಿಯೊಳಗಿನ ಬಂಡೆಯು ಎಷ್ಟು ವರ್ಷ
ಮುಳುಗಿದ್ದರೂ ಒಂದು ಹನಿ ನೀರನ್ನೂ ತನ್ನೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಅದೇ ರೀತಿ ಪ್ರಾಪಂಚಿಕ ಸುಖಗಳಲ್ಲಿ ಮುಳುಗಿದವನು ಆಧ್ಯಾತ್ಮಿಕ ವಿಷಯಗಳನ್ನು ತನ್ನ ಹೃದಯದೊಳಗೆ
ಪ್ರವೇಶಿಸಲು ಬಿಡುವುದಿಲ್ಲ.
..... ಶ್ರೀ ರಾಮಕೃಷ್ಣ ಪರಮಹಂಸ
|
ಶ್ಲೋಕ - 16 - ಸಂಸ್ಕೃತದಲ್ಲಿ:
ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ |
ಕರತಲಭಿಕ್ಷಸ್ತರುತಲವಾಸ
ಸ್ತದಪಿ ನ ಮುಂಚತ್ಯಾಶಾಪಾಶಃ ||
|
ಕನ್ನಡದಲ್ಲಿ :
ಮುಂಗಡೆ ಅಗ್ನಿಯು ಬೆಂಗಡೆ ಸೂರ್ಯ
ರಾತ್ರಿಗೆ ಮಂಡಿಯನೊರಗುವ ಗಲ್ಲ
ಭಿಕ್ಷಾಪಾತ್ರೆಯು ಮರದಡಿ ವಾಸ
ಆದರು ಬಿಡದೈ ಆಶಾಪಾಶ
|
ಅರ್ಥ ವಿವರಣೆ :
ಅವನ ಮುಂದೆ ಬೆಂಕಿ ಮತ್ತು ಹಿಂದುಗಡೆ ಸೂರ್ಯ; ರಾತ್ರೆಯಾಯಿತೆಂದರೆ ಕಾಲನ್ನು ಮಡಚಿ ಮಂಡಿಗಳ ಮಧ್ಯೆ ಗಲ್ಲವನ್ನಿಟ್ಟುಕೊಂಡು
ಸಮಯ ಕಳೆಯುವ; ಮರದ ಕೆಳಗೆ ವಾಸ; ಭಿಕ್ಷವನ್ನು
ಕೈಗಳಲ್ಲೇ ಸ್ವೀಕರಿಸಬೇಕು. ಇಂಥಹ ಸ್ಥಿತಿಯಲ್ಲೂ ಅವನನ್ನು ಬಂಧಿಸಿದ ಆಶಾಪಾಶದಿಂದ
ಮುಕ್ತನಾಗಲಾರ.
|
ವ್ಯಾಖ್ಯಾನ :
ಹಿಂದಿನ ಶ್ಲೋಕದಲ್ಲಿ ಹಣ್ಣು ಹಣ್ಣು ಮುದುಕನು ಬೆಟ್ಟದಷ್ಟು
ಆಸೆಗಳನ್ನು ಹೊಂದಿರುವುದನ್ನು ನಾವು ಕಂಡೆವು. ಇದು ಸಂಸಾರಸ್ಥರ ಗೋಳಾದರೆ, ಸನ್ಯಾಸಿಗಳ ಪಾಡೇನು? ಈ ಸನ್ಯಾಸಿಯು ಸರ್ವಸಂಗ ಪರಿತ್ಯಾಗಿಯಾಗಿ ಕಠಿಣವಾದ ಜೀವನವನ್ನು ನಡೆಸುತ್ತಿರುವನು.
ಅವನ ಸ್ಥಿತಿಯೋ - ಕೈಯಲ್ಲಿ ಬಿಡಿಗಾಸಿಲ್ಲ,
ಯಾವುದೇ ಪ್ರಾಪಂಚಿಕ ವಸ್ತುಗಳಿಲ್ಲ , ಜೀವನ ನಿರ್ವಣೆಗೆ
ಬೇಕಾಗುವ ಕನಿಷ್ಠ ವಸ್ತುಗಳಿಲ್ಲ. ಛಳಿ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ
ಬಟ್ಟೆ ಕೂಡಾ ಇಲ್ಲ. ಯಾವಾಗ ಬೆಂಕಿಯನ್ನು ಯಾರಾದರೂ ಹಚ್ಚುತ್ತಾರೋ ಆಗ
ಅದರ ಮುಂದೆ ಕುಳಿತಿರುವನು, ಇಲ್ಲದಿದ್ದಲ್ಲಿ ಸೂರ್ಯನ ಶಾಖವೇ ಇವನಿಗೆ
ರಕ್ಷಣೆಯು. ರಾತ್ರೆ ಹೊತ್ತು ಸೂರ್ಯನಾಗಲೀ ಬೆಂಕಿಯಾಗಲೀ ಇರುವುದಿಲ್ಲ.
ಈತನು ನಿಸ್ಸಂದೇಹವಾಗಿ ಸಾಧನೆಯ ಸರಿಯಾದ ಹಾದಿಯಲ್ಲಿರುವನು. ಯಾರೇ ಆದರೂ ಈತನನ್ನು ನೋಡಿದೊಡನೇ ಪೂಜ್ಯಭಾವವುಂಟಾಗಿ ಇವನೇ ನಿಜವಾದ ಸಾಧಕನೆಂದು ನಂಬುವರು.
ಆದರೆ ಅದು ಸತ್ಯವಲ್ಲ. ಅವನೊಂದಿಗೆ ಹತ್ತಿರದಿಂದ ಸಮಯ
ಕಳೆದಾಗ ಗೊತ್ತಾಗುವುದೇ ಬೇರೆ. ಇಷ್ಟೆಲ್ಲಾ ಬಾಹ್ಯ ಸಾಧನೆಯಿದ್ದರೂ ಅವನು
ಒಂದು ಮುಖ್ಯವಾದದ್ದನ್ನು
ತ್ಯಾಗಮಾಡಿಲ್ಲ. ಅದೇನೆಂದರೆ ಆಸೆಗಳು. ಆಸೆಗಳು ಅವನ ಅಂತರಂಗದಲ್ಲಿ ಆಳವಾಗಿ ಬೇರೂರಿದೆ.
ಇದು ಅವನ ಬಾಹ್ಯ ಸಾಧನೆಗಳನ್ನು ಶೂನ್ಯವನ್ನಾಗಿಸಿದೆ. ಇಂಥವರನ್ನು ಹುಸಿ ಸನ್ಯಾಸಿ ಎಂದು ಕರೆಯಬಹುದು. ಈ ಶ್ಲೋಕದಲ್ಲಿ
ಅನುಕರಣೆಯು ಎಷ್ಟೇ ನೈಜವಾಗಿ ಕಂಡರೂ ಅದು ಉಪಯೋಗವಿಲ್ಲ. ಪುರಾಣ ಕಾಲದಲ್ಲಿ
ರಾಕ್ಷಸರು ತೀವ್ರವಾಗಿ ತಪಸ್ಸನ್ನು ಮಾಡುತ್ತಿದ್ದರು. ಆದರೆ ಅವರ ಅಂತರಾಳದಲ್ಲಿ
ಅತಿ ದುಷ್ಟ ಉದ್ದೇಶಗಳಿರುತ್ತಿದ್ದವು. ಕೇವಲ ಬಾಹ್ಯ ಸಂಯಮದಿಂದ
ಫಲ ದೊರಕುವುದಿಲ್ಲ. ಇಂದ್ರಿಯಗಳನ್ನು ಹತೋಟಿಯಲ್ಲಿಡಬಹುದು ಆದರೆ ಮನಸ್ಸಿನ
ತುಂಬ ಆಸೆಗಳೇ ತುಂಬಿದ್ದರೆ ಅದು ಉಪಯೋಗವಾಗುವುದಿಲ್ಲ. ಅಂಥವನನ್ನು ಭಗವದ್ಗೀತೆಯಲ್ಲಿ
ಕಪಟಿ (ಮಿಥ್ಯಾಚಾರ) ಎನ್ನುವರು. ಅಂಥವನು ಕೇವಲ ಬಾಹ್ಯದಲ್ಲಿ ತನ್ನ ಇಂದ್ರಿಯಗಳನ್ನು ಹತೋಟಿ ಯಲ್ಲಿಟ್ಟುಕೊಂಡಿದ್ದು ಅಂತರಂಗದಲ್ಲಿ
ಇಂದ್ರಿಯ ಸುಖಗಳ ಬಗ್ಗೆ ಯಾವಾಗಲೂ ಯೋಚಿಸಿರುತ್ತಾನೆ. ತಪಸ್ಸು ಫಲವನ್ನು
ಕೊಡ ಬಹುದಾದರೂ ಅದನ್ನು ಒಳ್ಳೆಯ ಅಥವಾ ಕೆಟ್ಟ ಉದ್ದೇಶಗಳಿಗೆ ಉಪಯೋಗಿಸಬಹುದು. ಕೆಟ್ಟ ಉದ್ದೇಶಗಳಿಗೆ ತಪಸ್ಸಿನ ಫಲವು ಉಪಯೋಗ ವಾಗುವುದನ್ನು ತಪ್ಪಿಸಲು ಸಾಧಕನು ಆಸೆಗಳಿಂದ
ಮುಕ್ತನಾಗಿರಬೇಕು. ಆಶಾರಹಿತತೆಯಿಂದ ಸತ್ಯದ ಹಾದಿಯು ಗೋಚರವಾಗುತ್ತದೆ
ಹಾಗೂ ಇದು ಆತ್ಮ ಜ್ಞಾನದ ಫಲ.
ತ್ಯಾಗವೆಂದರೆ ಬರೀ ಇಂದ್ರಿಯ ನಿಗ್ರಹ ಮಾತ್ರವಲ್ಲ. ತ್ಯಾಗವೆಂದರೆ ಅವುಗಳ ಬಗೆಗಿನ ಮೋಹ ಅಥವಾ ಮಮತೆಯನ್ನು ವರ್ಜಿಸುವುದು.
ಅದರಿಂದಾಗಿ ನಮ್ಮ ಮನಸ್ಸು ಇಂದ್ರಿಯ ಮೋಹಗಳಿಂದ ವರ್ಜಿತವಾಗುತ್ತದೆ. ಆದ್ದರಿಂದ ಮೊದಲಿಗೆ ಅಂತರಂಗದಲ್ಲಿ ಮೊದಲು ವಿರಕ್ತಿ ಬೆಳೆಸಿಕೊಳ್ಳಬೇಕು ನಂತರ ಬಾಹ್ಯ
ವಿರಕ್ತಿಯು ತಾನಾಗಿಯೇ ಆಗುತ್ತದೆ.
"ಗಡಿಗೆಯೊಂದರ ಬುಡದಲ್ಲಿ ಒಂದು ಸಣ್ಣ
ತೂತಿದ್ದರೂ ಸಾಕು ಅದರಲ್ಲಿರುವ ಎಲ್ಲ ನೀರೂ ಸೋರಿಹೋಗಲು. ಅದೇ ರೀತಿ ಸಾಧಕನ
ಅಂತರಂಗದಲ್ಲಿ ಕೇವಲ ಒಂದು ಸಣ್ಣದಾದ ಪ್ರಾಪಂಚಿಕ ಆಸೆ ಇದ್ದರೂ ಸಾಕು ಅದು ಎಲ್ಲ ಆಧ್ಯಾತ್ಮಿಕ ಸಾಧನೆಗಳನ್ನು
ಶೂನ್ಯವಾಗಿಸುತ್ತದೆ."
......
ಶ್ರೀ ರಾಮಕೃಷ್ಣ
ಪರಮಹಂಸ
|
ಶ್ಲೋಕ - 17 - ಸಂಸ್ಕೃತದಲ್ಲಿ:
ಕುರುತೇ ಗಂಗಾಸಾಗರ ಗಮನಂ
ವ್ರತಪರಿಪಾಲನಮಥವಾ ದಾನಮ್ |
ಜ್ಞಾನವಿಹೀನಃ ಸರ್ವ ಮತೇನ
ಮುಕ್ತಿಂ ನ ಭಜತಿ ಜನ್ಮಶತೇನ || (ಭಜತಿ ನ ಮುಕ್ತಿಂ )
|
ಕನ್ನಡದಲ್ಲಿ :
ಗಂಗಾಸಾಗರ ಯಾತ್ರೆಯ ಮಾಡಲಿ
ವ್ರತ ಪಾಲಿಸಲಿ ದಾನವ ನೀಡಲಿ
ಶತ ಜನ್ಮಗಳಲು ಜ್ಞಾನ ವಿಹೀನನು
ಮುಕುತಿಯ ಕಾಣನು ಸರ್ವಸಿದ್ಧವಿದು
|
ಅರ್ಥ ವಿವರಣೆ :
ನೀವು ಗಂಗಾ ನದಿ ಅಥವಾ ಗಂಗಾ ನದಿಯು ಸಮುದ್ರವನ್ನು ಸೇರುವ ಸ್ಥಳಕ್ಕೆ ತೀರ್ಥಯಾತ್ರೆ ಮಾಡಬಹುದು.
ಉಪವಾಸ, ದಾನ, ಧರ್ಮಗಳನ್ನು
ಮಾಡಬಹುದು. ಆದರೆ ಇದರಿಂದ ಮಾತ್ರ ಮುಕ್ತಿ ದೊರಕದು. ಆತ್ಮ ಜ್ಞಾನವಿಲ್ಲದೇ ನೂರು ಜನ್ಮ ತಾಳಿದರೂ ಮುಕ್ತಿ ದೊರಕದು. ಇದು ಎಲ್ಲ ಸಂತರ ಅಭಿಮತ.
|
ವ್ಯಾಖ್ಯಾನ :
ಈ ಶ್ಲೋಕದಲ್ಲಿ ವ್ಯಕ್ತಪಡಿಸಿರುವುದು ಸಮಂಜಸವಾದ ಅಭಿಪ್ರಾಯ. ಆತ್ಮ ಜ್ಞಾನವು ಮುಕ್ತಿಗೆ ಏಕೈಕ ಮಾರ್ಗ ಎಂಬುದು ಸುರೇಶ್ವರಾಚಾರ್ಯರ
ಸಂಬಂಧ-ವಾರ್ತಿಕದಲ್ಲಿನ 18ನೇ ಶ್ಲೋಕದಲ್ಲೂ
ವಿವರಿಸಲ್ಪಟ್ಟಿದೆ:
ಪ್ರತ್ಯಗ್ ಯಾತತ್ಮ್ಯ ಧೀರ್ ಏವ
ಪ್ರತ್ಯಗ್-ಅಜ್ಞಾನ ಹಾನಿಕೃತ್
ಸಾ ಚಾ ತ್ಮೋತ್ಪಾತಿತೊ ನಾನ್ಯದ್
ಧ್ವಾಂತ-ಧ್ವಸ್ತಾವಪೇಕ್ಷತೇ
"ಅಂತರಾತ್ಮದ ನೈಜ ಅರಿವಿನ ಜ್ಞಾನ
ಮಾತ್ರವೇ ಅಜ್ಞಾನವನ್ನು ನಾಶಮಾಡಲು ಸಾಧ್ಯ. ಮತ್ತು ಇದಕ್ಕೆ ಅಜ್ಞಾನವನ್ನು
ನಾಶಮಾಡಲು ಬೇರೆ ಯಾವ ಅಸ್ತ್ರವೂ ಬೇಕಿಲ್ಲ."
ಪುಣ್ಯ ಕ್ಷ್ತೇತ್ರ - ಕಾಶಿ, ರಾಮೇಶ್ವರದ ಯಾತ್ರೆ, ಧಾರ್ಮಿಕ
ವ್ರತಗಳನ್ನು ಆಚರಿಸುವುದು, ಶಿವರಾತ್ರೆ, ವೈಕುಂಠ
ಏಕಾದಶೀ, ವ್ರತ ದಿನಗಳಲ್ಲಿ ಉಪವಾಸ, ಪೂಜೆ,
ಪುನಸ್ಕಾರಗಳನ್ನು ಮಾಡುವುದು, ಕುಡಿಯುವ ನೀರಿಗಾಗಿ ಭಾವಿಯನ್ನು
ತೆಗೆಸುವುದು, ಕೆರೆಗಳನ್ನು ನಿರ್ಮಿಸುವುದು, ಧರ್ಮ ಛತ್ರಗಳನ್ನು ಕಟ್ಟಿಸುವುದು, ಉಚಿತ ಆಸ್ಪತ್ರೆಗಳನ್ನು
ನಿರ್ಮಿಸುವುದು, ಎಲ್ಲವೂ ಒಳ್ಳೆಯ ಕೆಲಸಗಳೇ. ಇವುಗಳಿಂದ ಮನಸ್ಸು ಶುದ್ಧಿಯಾಗಬಹುದು ಮಾತ್ರ. ಆದರೆ ಅವುಗಳಿಂದಾಗಿ
ಮುಕ್ತಿಯು ದೊರಕಲಾರದು. ಆತ್ಮ ಜ್ಞಾನ ಹಾಗೂ ಬ್ರಹ್ಮ ಜ್ಞಾನವನ್ನು ಅರಿಯದ
ಹೊರತು ನೂರು ಜನ್ಮ ತಾಳಿದರೂ ಮುಕ್ತಿ ದೊರಕುವುದಿಲ್ಲ. ( ಅಹಂ ಬ್ರಹ್ಮಾಸ್ಮಿತಿ
ಜ್ಞಾನವಿಹೀನೇ ವಿಚಾರ- ಜನ್ಯಜ್ಞಾನ-ರಹಿತೇ ಪುರುಷೇ
ಮುಕ್ತಿರ್ನ ಸಂಭವೇತ್ ಜ್ಞಾನಮ್ ವಿನಾ ಅನಂರ-ಜನ್ಮಾಭಿರ್ ವಾ ಮುಕ್ತಿರ್ನ
ಭವತಿ)
ಧರ್ಮ ಕಾರ್ಯಗಳು,ಪೂಜೆ, ಪುನಸ್ಕಾರಗಳು, ಮನಸ್ಸನ್ನು
ಶುದ್ಧಿಗೊಳಿಸಿ, ಏಕಾಗ್ರತೆಯನ್ನು ಮಾತ್ರ ದೊರಕಿಸಿಕೊಡಬಹುದು.
(ಕರ್ಮೋಪಾಸನದೇಹ ಚಿತ್ತಶುದ್ದಿ ತದೇಕಾಗ್ರೈಫಲತ್ವತ್).
ಆಚಾರ್ಯರು ಎಚ್ಚರಿಸುವಂತೆ ಇವೆಲ್ಲವುಗಳನ್ನೂ ಆಧ್ಯಾತ್ಮಿಕದ
ಗುರಿಗಳೆಂದು ಪರಿಗಣಿಸಲಾಗುವುದಿಲ್ಲ. ಇವುಗಳು ನಿತ್ಯಸತ್ಯವನ್ನರಿಯುವುದರ
ಮಾರ್ಗದಲ್ಲಿನ ಮೆಟ್ಟಿಲುಗಳು ಮಾತ್ರ ಹಾಗೂ ಇವೇ ಗುರಿಯಲ್ಲ. ಆತ್ಮ ಜ್ಞಾನದ
ಮೂಲಕ ಮಾತ್ರ ಮುಕ್ತಿಯನ್ನು ತಲುಪಲು ಸಾಧ್ಯ. ನೂರು ಜನ್ಮಗಳಲ್ಲಿ ಈ ವಿಧದ
ಧರ್ಮ ಕಾರ್ಯಗಳನ್ನು ಮಾಡಿದರೂ ಮುಕ್ತಿ ದೊರಕುವುದಿಲ್ಲ. ಶ್ರೀ ಕೃಷ್ಣನು
ಭಗವದ್ಗೀತೆಯಲ್ಲಿ ಬೋಧಿಸಿರುವ ಮಾರ್ಗವನ್ನನುಸರಿಸದೇ, ಶ್ರೀ ಕೃಷ್ಣನ ವಿಗ್ರಹವನ್ನಿಟ್ಟುಕೊಂಡು
ಅದಕ್ಕೆ ಪೂಜೆ ಮಾಡುವುದು ಸುಲಭ. ಅದರಂತೇ ಶ್ರೀರಾಮನ ಗುಣವಾದ ಸಮಭಾವನೆಯನ್ನು
ಅನುಸರಿಸುವುದಕ್ಕಿಂತ ರಾಮಾಯಣವನ್ನು ಪಾರಾಯಣ ಮಾಡುವುದು ಸುಲಭ.
ಉಪನಿಷತ್ ಮತ್ತು ಗೀತೆಯಲ್ಲಿನ ಸಂದೇಶಗಳನ್ನು ಮರೆತು ಕೇವಲ "ಕರ್ಮ ಕಾಂಡ" ವನ್ನು ಮಾತ್ರ ಅನುಸರಿಸುವುದರಿಂದ
ಮುಕ್ತಿ ಮಾರ್ಗವು ಸುಗಮವಾಗಲಾರದು.
|
ಶ್ಲೋಕ - 18 - ಸಂಸ್ಕೃತದಲ್ಲಿ:
ಸುರಮಂದಿರತರುಮೂಲನಿವಾಸಃ
ಶಯ್ಯಾ ಭೂತಲಮಜಿನಂ ವಾಸಃ |
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ |
|
ಕನ್ನಡದಲ್ಲಿ:
ದೇವಮಂದಿರದ ಮರದಡಿ ವಾಸ
ಭೂಮಿಯೆ ಹಾಸುಗೆ ಚರ್ಮವೆ ವಸ್ತ್ರ
ಎಲ್ಲವನುಳಿದು ಭೋಗವನಳಿದು
ಯಾರನು ಸುಖಗೊಳಿಸದು ಪೇಳ್ ವೈರಾಗ್ಯ
|
ಅರ್ಥ ವಿವರಣೆ :
ದೇವಸ್ಥಾನದಲ್ಲಿ ಅಥವಾ ಮರದ ಕೆಳಗೆ ವಾಸಿಸುವುದು, ನೆಲದಮೇಲೆ ಮಲಗುವುದು, ಜಿಂಕೆ ಚರ್ಮವನ್ನು
ಧರಿಸುವುದು, ಎಲ್ಲ ವಸ್ತುಗಳನ್ನೂ ಹಾಗೂ ಅವುಗಳಿಂದ ದೊರಕುತ್ತಿದ್ದ ಸುಖ
ಸಂತೋಷಗಳನ್ನು ತ್ಯಾಗ ಮಾಡುವುದು - ಯಾರಿಗೆ ಈ ರೀತಿಯ ತ್ಯಾಗವು
ಸಂತಸದ ಜೀವನವನ್ನು ತಂದುಕೊಡುತ್ತದೆ?
|
ವ್ಯಾಖ್ಯಾನ :
ಹದಿನಾರನೇ ಶ್ಲೋಕದಲ್ಲಿ ನಾವು ಹುಸಿ ಸನ್ಯಾಸಿಯ ಬಗ್ಗೆ ಅರಿತೆವು. ಯಾವುದು ಮುಖ್ಯವೆಂದರೆ ಬಯಕೆರಹಿತ ಸ್ಥಿತಿ - ಉದ್ವೇಗ ಹಾಗೂ ಮಮತೆಯಿಂದ ಸ್ವಾತಂತ್ರ. ಈ ಶ್ಲೋಕದಲ್ಲಿ ತಿಳಿಸುವುದೇನೆಂದರೆ
ಯಾರು ಆಸೆ ಮತ್ತು ಬಯಕೆಗಳಿಂದ ಬಿಡುಗಡೆ ಹೊಂದುತ್ತಾನೋ ಅವನಿಗೆ ವೈಭವ ಹಾಗೂ ವಿಲಾಸಗಳಿಂದ ತಪ್ಪಿಸಿಕೊಳ್ಳುವುದು ಸುಲಭ. ಅನಂತರ ಜೀವನವು
ಸರಳ ಹಾಗೂ ಆಡಂಬರ-ರಹಿತವಾಗಿರುತ್ತದೆ. ಅವನ
ಸಂತೋಷವು ಬಾಹ್ಯ ವಸ್ತುಗಳ ಮೇಲೆ ಅವಲಂಬಿತ ವಾಗಿರುವುದಿಲ್ಲ. ಅವನು ತನ್ನೊಳಗೇ
ಸಂತೋಷವನ್ನು ಕಂಡುಕೊಂಡಿರುತ್ತಾನೆ. "ಆತ್ಮನ್ನ್ಯೇವಾತ್ಮನಾ ತುಷ್ಟತ್".
ನಿಜವಾದ ತೃಪ್ತಿಯನ್ನು ಅನುಭವಿಸುವವನೆಂದರೆ ಯಾರು ಆಸೆಗಳನ್ನು
ವರ್ಜಿಸಿರುತ್ತಾರೋ ಅವರು. ಸಂತೋಷದ ಸ್ಥಿತಿಯು ಎಲ್ಲವನ್ನೂ ತ್ಯಾಗಮಾಡಿದಾಗಲೇ
ಸಿಗುವುದು. "ತ್ಯಾಗೇ ಸರ್ವೇಷಾಮ್ ಸುಖಂ ಭವೇತ್".
|
ಶ್ಲೋಕ - 19 - ಸಂಸ್ಕೃತದಲ್ಲಿ:
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||
|
ಕನ್ನಡದಲ್ಲಿ:
ಯೋಗದಲಿರಲಿ ಭೋಗದಲಿರಲಿ
ಸಂಗದಲಿರಲೇಕಾಂಗಿಯೆ ಇರಲಿ
ಯಾವನ ಮನ ಬ್ರಹ್ಮದೊಳಾಡುವುದೋ
ಸಂತಸ ಸಂತಸ ಸಂತಸವವಗೆ
|
ಅರ್ಥವಿವರಣೆ :
ಯೋಗ ಅಥವಾ ಭೋಗದಲ್ಲಿ ಸಂತೋಷ ನಲಿವುಗಳನ್ನು ಪಡೆಯಬಹುದು. ಕೆಲವು ಸಮಯ ಬೇರೆಯವರೊಂದಿಗೆ ಮತ್ತು ಕೆಲವು ಸಮಯ ಒಂಟಿಯಾಗಿರಬಹುದು.
ಆದರೆ ಯಾರು ತನ್ನ ಮನಸ್ಸನ್ನು ಬ್ರಹ್ಮಜ್ಞಾನದಲ್ಲಿ ಲೀನವಾಗಿರಿಸಿ ಕೊಳ್ಳುತ್ತಾನೋ
ಅವನಿಗೆ ಮಾತ್ರ ನಿಜವಾದ ಪರಮಾನಂದವು ಲಭಿಸುವುದು.
|
ವ್ಯಾಖ್ಯಾನ :
ಈ ಶ್ಲೋಕದಲ್ಲಿ ಬ್ರಹ್ಮ ಜ್ಞಾನವನ್ನು ಅರಿತವನನ್ನು ಹೊಗಳುವುದು. ಅವನಿಗೆ ಏಕಾಗ್ರತೆಯಾಗಲೀ ಅಥವಾ ಇಂದ್ರಿಯ ಸುಖಗಳಾಗಲೀ ವ್ಯತ್ಯಾಸವಿರುವುದಿಲ್ಲ.
ಸಮಾಜ ಅಥವಾ ಏಕಾಂತವು ಒಂದೇ. ನ್ಯೂಯಾರ್ಕ್ ನಲ್ಲಿನ ಟೈಮ್ಸ್
ಸ್ಕ್ವೇರ್ ನಲ್ಲಿ ನಿಲ್ಲುವುದಾಗಲೀ ಅಥವಾ ಹಿಮಾಲಯದಲ್ಲಿನ ಗುಹೆಯಲ್ಲಿನ ವಾಸವಾಗಲೀ ಅವನಿಗೆ ಯಾವುದೇ
ವ್ಯತ್ಯಾಸ ಕಾಣುವುದಿಲ್ಲ. ಕಾರಣವೆಂದರೆ ಇವಾವುವೂ ಸತ್ಯವಲ್ಲ,
ಕೇವಲ ಬ್ರಹ್ಮ ಜ್ಞಾನ ಮಾತ್ರ ಸತ್ಯ ಅವನಿಗೆ.
ಕೆಲವು ಗ್ರಂಥಗಳಲ್ಲಿ ಜೀವನ್ಮುಕ್ತನು ತನಗಿಷ್ಟ ಬಂದ ರೀತಿಯಲ್ಲಿ
ಜೀವಿಸುವನೆಂದು ವಿವರಿಸಿದೆ. ಆತನು ಒಳ್ಳೆಯದು ಕೆಟ್ಟದ್ದು ಎಂಬ ಭೇದಗಳಿಂದ
ಅತೀತನು. ಆತನ ದೃಷ್ಟಿಯಲ್ಲಿ ಬ್ರಹ್ಮಜ್ಞಾನವನ್ನು ಹೊರತುಪಡಿಸಿ ಬೇರೆಲ್ಲವೂ
ಶಾಶ್ವತವಲ್ಲ. ಆತನು ಬ್ರಹ್ಮಜ್ಞಾನದೊಡನೆ ಸಂಭ್ರಮಿಸುವನು ಅದರೊಡನೆಯೇ
ಜೀವಿಸುವನು ಹಾಗೂ ಆತನೇ ಬ್ರಹ್ಮ ಜ್ಞಾನಿ.
|
ಶ್ಲೋಕ - 20 - ಸಂಸ್ಕೃತದಲ್ಲಿ:
ಭಗವದ್ಗೀತಾ ಕಿಂಚದಧೀತಾ
ಗಂಗಾಜಲಲವಕಣಿಕಾ ಪೀತಾ |
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ ||
|
ಕನ್ನಡದಲ್ಲಿ :
ಭಗವದ್ಗೀತೆಯ ಕೊಂಚವೆ ಓದಿ
ಲವಕಣ ಗಂಗಾಜಲವನು ಸವಿದು
ಮುರಾರಿಯನರ್ಚಿಪ ಆ ಸುಕೃತಂಗೆ
ಯಮನೊಂದಿಗೆ ಮಾತೇಕೆ ಅವಂಗೆ
|
ಅರ್ಥ ವಿವರಣೆ :
ಯಾರು ಸ್ವಲ್ಪಮಟ್ಟಿಗಾದರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿರುತ್ತಾರೋ, ಗಂಗೆಯ ನೀರನ್ನು ಒಂದು ಹನಿಯನ್ನಾದರೂ ಕುಡಿದಿದ್ದಾರೋ ಮತ್ತು ರಾಕ್ಷಸರನ್ನು
ಸಂಹಾರ ಮಾಡಿದ ಮುರಾರಿ (ಶ್ರೀ ಕೃಷ್ಣ ) ಯನ್ನು
ಕಡೇ ಪಕ್ಷ ಒಮ್ಮೆಯಾದರೂ ಪೂಜಿಸಿದ್ದಾರೋ ಅಂಥವರೊಂದಿಗೆ ಯಮನೂ ಜಗಳವಾಡಲಾರ.
|
ವ್ಯಾಖ್ಯಾನ :
ಯಾವ ಭಕ್ತನು ಸ್ವಲ್ಪವಾದರೂ ಭಗವದ್ಗೀತೆಯನ್ನು ಅಧ್ಯಯನಮಾಡಿ, ಆತ್ಮ ಜ್ಞಾನದ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇದ್ದರೆ ಅಥವಾ ಭಗವಂತನನ್ನು
ಹೃತ್ಪೂರ್ವಕವಾಗಿ ಪೂಜಿಸಿದ್ದರೆ ಅಂಥವರಿಗೆ ಶಕ್ತಿಶಾಲಿಯಾದ ಯಮರಾಜನೂ ತೊಂದರೆ ಕೊಡುವುದಿಲ್ಲ.
ಭಗವದ್ಗೀತೆಯು ಭಗವಂತನನ್ನು ಅರಿಯುವ ಹಾದಿಯಾದ ಯೋಗಗಳ ಬಗ್ಗೆ
ಸಂಪೂರ್ಣ ಜ್ಞಾನವನ್ನು ನೀಡುತ್ತದೆ. ಇದು ನಿರಾಸಕ್ತಿ
ಯೋಗವನ್ನು ವಿವರಿಸುತ್ತದೆ. ಗೀತೆಯನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದವನಿಗೆ
ಮೋಹದಿಂದ ಬಿಡುಗಡೆ ಹೊಂದಿ ಸಾಧನೆಯನ್ನು ಪ್ರಾರಂಬಿಸಲು ಪ್ರೇರೇಪಿಸುತ್ತದೆ. ಹೀಗಾಗಿ ಗೀತೆಯ ಬಗ್ಗೆ ಸ್ವಲ್ಪ ಜ್ಞಾನವಿದ್ದರೂ ಸಾಕು ಸತ್ - ಚಿತ್ - ಆನಂದ (ಅಸ್ತಿತ್ವ
- ಜ್ಞಾನ - ಪರಮಾನಂದ - ಸಂಪೂರ್ಣವಾದ)
ವನ್ನು ಅರಿಯಲು ಸಹಕಾರಿಯಾಗಿ ಮತ್ತು ಜನನ ಮರಣದ ಚಕ್ರದಿಂದ ಪಾರಾಗಲು ಸಹಕಾರಿಯಾಗುತ್ತದೆ.
ಗೀತೆಯ ಯಾವ ಸ್ವಲ್ಪ ಭಾಗವು ಯಮನನ್ನು ದೂರವಿಡುತ್ತದೆ? ಇದಕ್ಕೆ ಶ್ರೀ ರಾಮಕೃಷ್ಣ ಪರಮಹಂಸರು ನೇರವಾಗಿ ವಿವರಿಸುತ್ತಾರೆ:
"ಇಡೀ ಭಗವದ್ಗೀತೆಯನ್ನು ಅಧ್ಯಯನ ಮಾಡಿದಾಗ
ಅರಿಯುವ ಸಾರವನ್ನು "ಗೀತಾ", "ಗೀತಾ", ಎಂದು ಹತ್ತು ಬಾರಿ ಹೇಳಿಕೊಂಡಾಗ;
ಅದು "ತಾಗೀ", "ತಾಗೀ" - "ತ್ಯಾಗೀ" ಎಂಬ ಪದದ ಬದಲಾದ ರೀತಿಯಲ್ಲಿ ಕೇಳಿಬರುತ್ತದೆ. ತ್ಯಾಗೀ ಎಂದರೆ
ಪ್ರಾಪಂಚಿಕ ಭೋಗಗಳನ್ನು ಹೊರಗಿನಿಂದ ಹಾಗೂ ಮನಸ್ಸಿನಿಂದ ತ್ಯಾಗಮಾಡಿದವನು ಎಂದು."
ಹಿಂದುಗಳು ಗಂಗಾನದಿಯನ್ನು ಯುಗ ಯುಗಾಂತರ ಗಳಿಂದ ಪವಿತ್ರ
ನದಿಯೆಂದು ಪರಿಗಣಿಸಿ ಪೂಜಿಸುತ್ತಾರೆ. ಗಂಗಾ ನದಿಯ ನೀರನ್ನು ಧಾರ್ಮಿಕ ಶುದ್ಧೀಕರಣಕ್ಕೆ ಬಳಸುತ್ತಾರೆ. ಭಕ್ತರಿಗೆ ಗಂಗೆಯ ನೀರನ್ನು ಕುಡಿಯುವುದು, ಸ್ನಾನ ಮಾಡುವುದು
ಪವಿತ್ರ ಕಾರ್ಯ.
ಸಾಧಕನಿಗೆ ಈ ರೀತಿಯ ಅನಿಸಿಕೆ ಇರುವುದಿಲ್ಲವೇಕೆಂದರೆ ಆತನು
ಜ್ಞಾನದ ಹಾದಿಯಲ್ಲಿ ಬಹಳ ಮುಂದುವರೆದಿರು ವನು. ಹೀಗಾಗಿ ಶಂಕರರು ಇದಕ್ಕಿಂತ ಉನ್ನತವಾದ ವಿವರಣೆಯನ್ನು ನೀಡುತ್ತಾರೆ. ಪುರಾಣದ ಘಟನೆಯಂತೆ ಭಗೀರಥ ಚಕ್ರವರ್ತಿಯು ಅತ್ಯಂತ ಕಠಿಣ ಶ್ರಮದಿಂದ ಆಕಾಶ ಗಂಗೆಯನ್ನು
ಭೂಮಿಗೆ ತಂದನು. ಆಕಾಶ ಗಂಗೆಯ ನೀರು ಪರಿಶುದ್ಧ ಜ್ಞಾನವನ್ನು ಪ್ರತಿನಿಧಿಸುತ್ತದೆ.
ಆದ್ದರಿಂದ ಒಂದು ಹನಿ ನೀರನ್ನು ಕುಡಿದರೂ ದೈವೀ ಜ್ಞಾನದ ನದಿಯಿಂದ ಕುಡಿದಂತೆ ಹಾಗೂ
ಆತ್ಮ ಜ್ಞಾನ ಮತ್ತು ಭಗೀರಥನಿಗೆ ಶಿವನು ಕರುಣೆಯಿಂದ ಕರುಣಿಸಿದ ಜ್ಞಾನವನ್ನು ಸೇವಿಸಿದ ಸೌಭಾಗ್ಯ.
ಅದಷ್ಟೇ ಯಮನನ್ನು ಈ ಭಕ್ತನಿಂದ ದೂರ ಇರುವಂತೆ ಮಾಡುತ್ತದೆ.
ಯಾರು ಮುರಾರಿ (ಶ್ರೀಕೃಷ್ಣ) ಯನ್ನು ಒಮ್ಮೆ ತಮ್ನ ಜೀವನದಲ್ಲಿ ಭಕ್ತಿಯಿಂದ ಪೂಜಿಸುತ್ತಾರೋ
ಅವನ ಹತ್ತಿರವೂ ಯಮನು ಸುಳಿಯುವುದಿಲ್ಲ. ಮುರಾ ಎಂಬ ರಾಕ್ಷಸನನ್ನು ನಾಶಮಾಡಿದ್ದಕ್ಕೆ
ಶ್ರೀಕೃಷ್ಣನಿಗೆ ಮುರಾರಿ ಎಂದು ಹೆಸರು ಬಂದಿತು. ಈ ರಾಕ್ಷಸನು ಅಹಂಕಾರವನ್ನು
ಪ್ರತಿನಿಧಿಸುತ್ತಾನೆ. ಈ ಅಸುರನನ್ನು ಸಂಹಾರ ಮಾಡಿದ ಮುರಾರಿಯನ್ನು ಪೂಜಿಸುವುದರಿಂದ
ನಮ್ಮ ಆಧ್ಯಾತ್ಮಿಕ ಪ್ರಗತಿಯ ಹಾದಿಗೆ ದೊಡ್ಡ ಹಾಗೂ ಕಟ್ಟಕಡೆಯ ಅಡೆತಡೆಯಾದ ನಮ್ಮೊಳಗಿನ ಸ್ವಾಭಿಮಾನ
ಹಾಗೂ ಅಹಂಕಾರಗಳನ್ನು ನಾಶಮಾಡಿದಂತೆ.
ಒಟ್ಟಿನಲ್ಲಿ ಹೇಳುವುದಾದರೆ ಜನನ ಮರಣಗಳ ಚಕ್ರದಿಂದ ಬಿಡುಗಡೆ
ಪಡೆಯಲು ಮೊದಲಿಗೆ ಗೀತೆಯಿಂದ ಆಧ್ಯಾತ್ಮಿಕ ತತ್ತ್ವಗಳನ್ನು ಕಲಿತು, ಭಗವಂತನಿಗೆ ತನ್ನ ಆತ್ಮಸಮರ್ಪಣೆಯನ್ನು ಮಾಡಿಕೊಳ್ಳಬೇಕು.
ಸಾವು ಮನುಷ್ಯನಲ್ಲಿ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ರೂಪಾಂತರವನ್ನುಂಟು ಮಾಡುತ್ತದೆ.
ದೈಹಿಕ ಮಾನಸಿಕ ಹಾಗೂ ಬೌದ್ಧಿಕಗಳಿಂದ ನಿಯಮಾಧೀನವಾದ ಆತ್ಮವು ಸಾವಿನ ಕಾನೂನಿಗೆ
ಒಳಪಟ್ಟಿರುತ್ತದೆ. ಸಾಧಕನಿಗೆ ತನ್ನ ಆಧ್ಯಾತ್ಮಿಕ ಸಾಧನೆಯು ಸಂಸಾರ ಚಕ್ರವನ್ನು
ಭೇದಿಸಲು ಸಹಕಾರಿಯಾಗುತ್ತದೆ. ಇದರಿಂದ ಅವನು ಜನನ ಮರಣಗಳ ಚಕ್ರದಿಂದ ಮುಕ್ತಿ
ಪಡೆಯುತ್ತಾನೆ. ಅಂಥವನಿಗೆ ಸಾವಿನ ಭಯವಿರುವುದಿಲ್ಲ. ಹಾಗಾಗಿ ಯಮನೂ ಸಹ ಈ ವಿಧದ ಸಾಧಕನ ಬಳಿ ಸುಳಿಯುವುದಿಲ್ಲ.
|
ಶ್ಲೋಕ - 21 - ಸಂಸ್ಕೃತದಲ್ಲಿ
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀಜಠರೇ ಶಯನಮ್
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ
|
ಕನ್ನಡದಲ್ಲಿ:
ಮತ್ತೆ ಮತ್ತೆ ಜನನ ಮತ್ತೆ ಮತ್ತೆ ಮರಣ
ಮತ್ತೆ ಮತ್ತೆ ಜನನಿಯ ಜಠರದಿ ಶಯನ
ಈ ಸಂಸಾರವು ಬಲು ಕಷ್ಟ ಹರೀ
ಕೃಪೆಯಿಂ ದಾಟಿಸಿ ಸಲಹೊ ಮುರಾರಿ
|
ಅರ್ಥ ವಿವರಣೆ:
ಪುನಃ ಪುನಃ ಹುಟ್ಟುವುದು ಸಾಯುವುದು ಅಯ್ಯೋ ! ಮತ್ತೆ ಮಾತೆಯ ಗರ್ಭದಲ್ಲಿ ಮಲಗಬೇಕೇ ! ಈ
ಜನನ ಮರಣಗಳ ಪ್ರಾಪಂಚಿಕ ಸಮುದ್ರದಲ್ಲಿ ಹೆಣಗಾಡುತ್ತಿರುವೆ. ಈ
ಸಮುದ್ರವನ್ನು ದಾಟುವುದು ಅಸಾಧ್ಯವಾಗಿದೆ. ಓ ಕೃಷ್ಣನೇ ! ನಿನ್ನ ಅಪಾರವಾದ ಕರುಣೆಯಿಂದ ಈ ಘೋರ ಸಮುದ್ರದ ದಡವನ್ನು ಮುಟ್ಟಿಸು.
|
ವ್ಯಾಖ್ಯಾನ :
ಕಾಲವು ನಿಷ್ಕರುಣೆಯಿಂದ ನಮ್ಮನ್ನು ಜನನ ಮರಣಗಳ ಸಮುದ್ರದ
ಸುಳಿಯಲ್ಲಿ ಸಿಲುಕಿಸುತ್ತದೆ. ಮತ್ತೆ ಮತ್ತೆ ನಾವು ಹುಟ್ಟ ಬೇಕು ಹಾಗೂ
ನಂತರ ಸಾಯಬೇಕು. ಮಾತೃವಿನ ಕಿರಿದಾದ ಅಹಿತಕರವಾದ ಗರ್ಭದಲ್ಲಿ ಪದೇ ಪದೇ
ಇರುವುದು. ಈ ಶ್ಲೋಕದಲ್ಲಿ ಆಚಾರ್ಯರು ಮುರಾರಿಯನ್ನು ನಮ್ಮ ಪರವಾಗಿ ನಮ್ಮನ್ನು
ಈ ಸಮುದ್ರದ ಮತ್ತೊಂದು ದಡಕ್ಕೆ ತಲುಪಿಸಲು ಪ್ರಾರ್ಥಿಸುತ್ತಾರೆ.
"ಜಾತಸ್ಯ ಹಿ ಧೃವೋ ಮೃತ್ಯುಃ
ಧೃವಂ ಜನ್ಮ ಮೃತಸ್ಯ ಚ" - (ಭಗವದ್ಗೀತೆ 2 - 267)
"ಹುಟ್ಟಿದ ಪ್ರಾಣಿಗೆ ಸಾವು ನಿಶ್ಚಯ;
ಸತ್ತ ಪ್ರಾಣಿಗೆ ಮರು ಹುಟ್ಟು ನಿಶ್ಚಯ."
ಯಾವುದೇ ಸಮಯದಲ್ಲೂ ಮನುಷ್ಯನು ಜನನ ಮರಣಗಳ ಸಂಸಾರದಿಂದ ಹೊರಬರಲು
ಯೋಚಿಸುವುದಿಲ್ಲ. ಅವನು ಆಸೆಯೆಂಬ ಸಾಗರದಲ್ಲಿ ತೇಲಾಡುತ್ತಿರುತ್ತಾನೆ.
ಆದರೆ ಸಾವು ಯಾವುದಕ್ಕೂ ಕಾಯುವುದಿಲ್ಲ. ಅವನ ಸಾವು ನಿಶ್ಚಯವಾದ
ಘಳಿಗೆ ಬರುತ್ತಿದ್ದಂತೆ ಯಾವುದೇ ಮುನ್ಸೂಚನೆಯನ್ನು ನೀಡದೆ ಪ್ರಾಣವನ್ನು ಕೊಂಡೊಯ್ಯುತ್ತದೆ.
ಸಾವು ಒಂದು ರೀತಿಯಲ್ಲಿ ಹೊರ ಉಡುಪನ್ನು ಬದಲಾಯಿಸಿದಂತೆ. ಹಳೆ ಬಟ್ಟೆಯು ಹರಿದಾಗ ಹೇಗೆ ನಾವು ಹೊಸ ಬಟ್ಟೆಯನ್ನು ಧರಿಸುತ್ತೇವೋ
ಹಾಗೇ ಯಾವಾಗ ಕೃಶವಾದ ನಮ್ಮ ಶರೀರದಲ್ಲಿ ಆತ್ಮವು ವಾಸಿಸಲು ಯೋಗ್ಯವಾಗಿರುವುದಿಲ್ಲವೋ ಆಗ ಶರೀರವು
ಕುಸಿಯುತ್ತದೆ ಹಾಗೂ ಜೀವವು (ಆತ್ಮವು) ಅದನ್ನು
ತೊರೆದು ಮತ್ತೊಂದು ಹೊಸ ಶರೀರವನ್ನು ಹುಡುಕಿಕೊಳ್ಳುತ್ತದೆ. ಆಸೆಯು ಎಲ್ಲವನ್ನು
ನಿರ್ದರಿಸುವ ಅಂಶ. ಸಾವಿನ ಕ್ಷಣದಲ್ಲಿ ಇದು ನಮ್ಮೊಡನೆಯೇ ಬರುತ್ತದೆ.
ಅದನ್ನು ಅನುಭವಿಸಲು ಮತ್ತೊಮ್ಮೆ ಹುಟ್ಟಬೇಕಾಗುತ್ತದೆ. ಹೀಗಾಗಿ ಆ ಆಸೆಗಳನ್ನು ಅಲ್ಲೆ ತ್ಯಜಿಸುವುದರ ಬದಲಾಗಿ ನಮ್ಮ ಅಜ್ಞಾನ ಹಾಗೂ ದಡ್ಡತನದಿಂದಾಗಿ
ಹೊಸ ಆಸೆಗಳು ಹಾಗೂ ಕರ್ಮಗಳನ್ನು ಹುಟ್ಟುಹಾಕಿಕೊಳ್ಳುತ್ತೇವೆ. ಮಾಯೆಯ
ಶಕ್ತಿಯು ಅಲ್ಲಿ ಏನೂ ಇಲ್ಲದೇ ಇದ್ದರೂ ಸಂಸಾರವನ್ನು ಆಕರ್ಷಕ ಬಣ್ಣಗಳಿಂದ ಕಾಣುವಂತೆ ಮಾಡಿ ನಮ್ಮನ್ನು
ಅದರಲ್ಲೇ ಮುಳುಗಿಸುತ್ತದೆ. ಇದರಿಂದಾಗಿ ಹೊಸ ಜನನ ಮರಣಗಳ ವರ್ತುಲಗಳು
ಸೃಷ್ಟಿಯಾಗುತ್ತದೆ. ಅನಂತರ ಜನನ ಮರಣಗಳ ಚಕ್ರವು ಸುತ್ತತೊಡಗುತ್ತದೆ.
ಕೇವಲ ಮುರಾರಿಯ ಕರುಣೆಯಿಂದ ಮಾತ್ರ ಈ ವಿಷವರ್ತುಲದಿಂದ ಪಾರಾಗಲು
ಸಾಧ್ಯ. ಆದ್ದರಿಂದ ನಾವು ಪ್ರಾಪಂಚಿಕ ಉಪಯೋಗವಿಲ್ಲದ
ಸಂಗತಿಗಳನ್ನು ಬಿಟ್ಟು ನಮ್ಮ ಸಮಯವನ್ನು ಆತ್ಮ ಜ್ಞಾನದೆಡೆಗೆ ಕೇಂದ್ರೀಕರಿಸಬೇಕು.
"ಭಗವಂತನೆಡೆಗೆ ನಾವು ಒಂದು ಹೆಜ್ಜೆಯಿಟ್ಟರೆ
ಅವನು ನಮ್ಮೆಡೆಗೆ ಹತ್ತು ಹೆಜ್ಜೆಯನ್ನಿಡುವನು. "
- ಶ್ರೀ ರಾಮಕೃಷ್ಣ ಪರಮಹಂಸ
|
ಶ್ಲೋಕ - 22 - ಸಂಸ್ಕೃತದಲ್ಲಿ:
ರಥ್ಯಾಚರ್ಪಟವಿರಚಿತಕಂಥಃ
ಪುಣ್ಯಾಪುಣ್ಯವಿವರ್ಜಿತಪಂಥಃ |
ಯೋಗೀ ಯೋಗನಿಯೋಜಿತಚಿತ್ತೋ
ರಮತೇ ಬಾಲೋನ್ಮತ್ತವದೇವ ||
|
ಕನ್ನಡದಲ್ಲಿ :
ಬೀದಿಯ ಚಿಂದಿಯ ಹೊಲಿದಾ ಬಟ್ಟೆ
ಪುಣ್ಯ ಅಪುಣ್ಯವಮೀರಿದ ನಡತೆ
ಯೋಗದಿ ಚಿತ್ತವು ಮುಳುಗಿದ ಯೋಗಿಯು
ಸುಖಿಸುವ ಉನ್ಮತ್ತ ಬಾಲಕನಂತೆ
|
ಅರ್ಥ ವಿವರಣೆ :
ರಸ್ತೆಯಲ್ಲಿ ಹರಿದ ಚಿಂದಿ ಬಟ್ಟೆಗಳಿರುವತನಕ ಸಾಧುವಿಗೆ ಉಡುವ
ಬಟ್ಟೆಗೆ ಕೊರತೆ ಇಲ್ಲ. ಸದ್ಗುಣ ದುರ್ಗುಣಗಳಿಂದ ಮುಕ್ತನಾದ ಅವನು
ಮುನ್ನಡೆಯುತ್ತಿರುತ್ತಾನೆ. ಯಾರು ಭಗವಂತನ ಸಹವಾಸದೊಡನೆ ಇರುತ್ತಾರೋ ಅವರು
ಮಗುವಿನಂತೆ ಮತ್ತು ಉನ್ಮತ್ತನಂತೆ ಶುದ್ದ ಹಾಗೂ ಕಲುಷಿತರಹಿತ ಪರಮಾನಂದವನ್ನು ಅನುಭವಿಸುತ್ತಾರೆ.
|
ವ್ಯಾಖ್ಯಾನ :
ಜೀವನ್ಮುಕ್ತರ ಬಗೆಗೆ ಯೋಚಿಸುವುದಾದರೆ ಅವರು ಕೆಲವು ವೇಳೆ
ಮಕ್ಕಳಂತೆ ಮತ್ತೆ ಕೆಲವು ಸಮಯ ಹುಚ್ಚರಂತೆ ಅಥವಾ ದೆವ್ವಗಳಂತೆ ವರ್ತಿಸುತ್ತಾರೆ (ಬಾಲೋನ್ಮತ್ತಪಿಶಾಚವೈ). ಅವರಿಗೆ ಯಾವ ರೀತಿ
ನೀತಿಗಳೂ ಇರುವುದಿಲ್ಲ. ಅವರು ಯಾವ ನಿರ್ಬಂಧಗಳೊಂದಿಗೂ ಜೀವಿಸುವುದಿಲ್ಲ.
ಅವರನ್ನು ಯಾವುದೇ ಕಾರ್ಯ-ಕಾರಣಗಳ ಸರಣಿಯಲ್ಲೂ ಬಂಧಿತರಾಗಿರುವುದಿಲ್ಲ.
ಅವರು ಯಾವಾಗಲೂ ಬಂಧ ಮುಕ್ತರು. ಅವರ ಬಾಹ್ಯ ಚರ್ಯೆಗಳು
ಹಲವು ವೇಳೆ ಕೆಲವರಿಗೆ ತಪ್ಪು ಕಲ್ಪನೆಯನ್ನುಂಟು ಮಾಡಬಹುದು. ಅವರು ಅಸಹ್ಯವಾಗಿ
ಕೆಲವರಿಗೆ ಕಾಣಬಹುದು. ಆಧುನಿಕ ಸಂಪ್ರದಾಯಗಳಿಗೆ ಅವರು ಹೊರತಾಗಿರ ಬಹುದು.
ಅವರ ವರ್ತನೆಯು ನಿಗೂಢ ಹಾಗೂ ಊಹಿಸಲಾಗದ ರೀತಿಯಲ್ಲಿರಬಹುದು. ಅವರು ಬಹುವಾಗಿ ಯಾವುದೇ ರೀತಿ, ನೀತಿಗಳಿಗೆ ಹೊಂದಲಾರರು.
ಸರಿ, ತಪ್ಪುಗಳು ಅವರಿಗೆ ಅನ್ವಯಿಸಲಾರವು. ಗುಣಾವಗುಣಗಳು ಅವರಿಗೆ ಸೇರಿದ್ದಲ್ಲ. ಅವರು ಪ್ರಕೃತಿಯ ತ್ರಿಗುಣ
( ಸತ್ವ,ರಜೋ, ತಮೋ
) ಗಳಿಂದ ಅತೀತರು ಹಾಗಾಗಿ ಅವರಿಗೆ ನಿಯಮಗಳು, ನಿರ್ಬಂಧಗಳು
ಯಾವ ಪ್ರಸ್ತುತತೆಯೂ ಇರುವುದಿಲ್ಲ (ನಿಸ್ತ್ರೈಗುಣ್ಯೈ ಪತಿ ವಿಚಾರತಾಮ್
ಕೊ ವಿಧಿಃ ಕೋ ನಿಷೇಧಃ). ಅವರು ಪ್ರಪಂಚದ ಪರಿವರ್ತನೆಗಳಿಗೆ ಬಲಿಪಶುವಾಗುವುದಿಲ್ಲ.
ಅವರು ಬ್ರಹ್ಮ ಜ್ಞಾನದ ಬಗ್ಗೆ ಹುಚ್ಚರಾದವರು. ಅವರಿಗೆ
ಶರೀರವಿಲ್ಲ. ಅಜ್ಞಾನಿಗಳು ಅವರಿಗೆ ಶರೀರ ಹಾಗೂ ಚಟುವಟಿಕೆಗಳನ್ನು ಜೋಡಿಸುತ್ತಾರೆ.
"ಎತ್ತರದ ಬೆಟ್ಟದ ಮೇಲಿಂದ ನೋಡುವ
ವ್ಯಕ್ತಿಗೆ ಗಿಡ, ಮರಗಳು, ಹುಲ್ಲುಗಾವಲು,
ಉಬ್ಬು, ತಗ್ಗುಗಳೆಲ್ಲವೂ ಒಂದೇ ರೀತಿಯಲ್ಲಿ ಸಮತಟ್ಟಾಗಿರುವಂತೆ
ಕಾಣುತ್ತದೆ. ಅದೇ ರೀತಿ ಜೀವನ್ಮುಕ್ತರಿಗೆ (ಬ್ರಹ್ಮ ಜ್ಞಾನಿಗೆ) ಸದಾ ಕಾಣುವುದು ದೈವತ್ವ ಮಾತ್ರ.
ಅವನು ಒಳ್ಳೆಯದು, ಕೆಟ್ಟದ್ದು, ಮೇಲು, ಕೀಳುಗಳ ಮಧ್ಯೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ."
-
ಶ್ರೀ ರಾಮಕೃಷ್ಣ
ಪರಮಹಂಸ
|
ಶ್ಲೋಕ - 23 ಸಂಸ್ಕೃತದಲ್ಲಿ :
ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್ ||
|
ಕನ್ನಡದಲ್ಲಿ :
ನೀನಾರು ನಾನಾರೆಲ್ಲಿಂ ಬಂದೆ
ತಾಯಿ ಯಾರು ನಿನ್ನ ತಂದೆ ಯಾರು
ಇದನಾಲೋಚಿಸು ಎಲ್ಲ ಅಸಾರ
ವಿಶ್ವವ ಬಿಡಲಾ ಸ್ವಪ್ನ ವಿಚಾರ
|
ಅರ್ಥ ವಿವರಣೆ :
ನೀನು ಯಾರು? ನಾನು ಯಾರು? ಎಲ್ಲಿಂದ ಬಂದೆ ? ನನ್ನ
ಮಾತಾ ಪಿತೃಗಳಾರು? ಇವುಗಳನ್ನು ಯೋಚಿಸು ಎಲ್ಲವನ್ನೂ ಸತ್ವಹೀನತೆಯಿಂದ
ವೀಕ್ಷಿಸು ಮತ್ತು ಪ್ರಪಂಚವನ್ನು ಒಂದು ಪೊಳ್ಳು ಕನಸೆಂದು ತ್ಯಜಿಸು.
|
ವ್ಯಾಖ್ಯಾನ :
ನೀನು, ನಾನುಗಳ ಭೇದವು ಇರುವುದು ಕೇವಲ ಶರೀರ ವಿರುವವರೆಗೆ ಮಾತ್ರ. ಹುಟ್ಟುವ ಮೊದಲು ತಂದೆ, ತಾಯಿ ಎಂಬ ಸಂಬಂಧವಿರುವುದಿಲ್ಲ ಆದರೆ
ಒಮ್ಮೆ ಶರೀರ ದೊಡನೆ ಭೂಮಿಗೆ ಬಂದೊಡನೆ ಎಲ್ಲ ಸಂಬಂಧಗಳೂ ಹುಟ್ಟಿಕೊಳ್ಳುತ್ತವೆ. ಇದಕ್ಕೆ ಮೊದಲು ನಾನು ಯಾರು? ಯಾರು ನನ್ನ ಸಹೋದರ, ಸಹೋದರಿಯರು, ಸಂಬಂಧಿ ಗಳು? ಇದೆಂಥ
ಭ್ರಮೆಯ ರೂಪಗಳು? ಇದೆಂಥಹ ಮಾಯೆ? ಈ ಕನಸಿನಿಂದ
ಎಚ್ಚೆತ್ತು ಕಣ್ಣುಗಳನ್ನು ತೆರೆದು ನಿಜವನ್ನು ಕಾಣಬೇಕು. ಯಾರು
ಸೃಷ್ಟಿಯ ಹಿಂದಿರುವ ನಿಜಸ್ಥಿತಿಯನ್ನರಿಯುತ್ತಾರೋ ಅವರಿಗೆ ಈ ಮರೀಚಿಕೆಯು ಅದೃಶ್ಯವಾಗಿ
ಮುಕ್ತಿಯ ಮಾರ್ಗವು ಕಂಡುಬರುತ್ತದೆ. ನಮ್ಮ ತಪ್ಪುಗ್ರಹಿಕೆಗಳನ್ನು ಕಿತ್ತೊಗೆದು
ನಿಜಸ್ಥಿತಿಯ ಮೂಲವನ್ನು ತಲುಪಬೇಕು. ಸಧ್ಯದ ಪರಿಸ್ಥಿತಿಯಲ್ಲಿ ಇದು ಅತಿ
ಕಷ್ಟಕರವಾದದ್ದು ಆದರೆ ಸತತ ಸಾಧನೆ ಹಾಗೂ ತಾರ್ಕಿಕ ವಿಧಾನಗಳಿಂದ ಅಂತರಂಗವನ್ನು ಪ್ರವೇಶಿಸಿ ಇದಕ್ಕೆ
ಉತ್ತರಗಳನ್ನು ಕಂಡುಕೊಂಡು ಈ ಬಂಧನಗಳಿಂದ ಬಿಡುಗಡೆ ಹೊಂದಬೇಕು.
ಆಚಾರ್ಯರು ವಿಶ್ವವನ್ನು ತ್ಯಜಿಸಬೇಕೆಂದು ಸಲಹೆ ನೀಡುತ್ತಾರೆ. ಇಲ್ಲಿ ವಿಶ್ವ
ಎಂದರೆ ದೇಹ ಮನಸ್ಸು ಹಾಗೂ ಬುದ್ಧಿಗಳೊಡನೆ ಪ್ರಾಪಂಚಿಕ ಸಂಬಂಧಗಳು.
ಇವೆಲ್ಲವುಗಳೂ ಉಪಯೋಗವಿಲ್ಲದ್ದು ಹಾಗೂ ಮಾಯೆಯೆಂದು ಅರಿತು ಕಿತ್ತು ಬಿಸುಡಬೇಕು.
ಈ ಎಲ್ಲ ಸಂಬಂಧಗಳಿಗೂ ಅಂತ್ಯವಿದ್ದೇ ಇರುತ್ತದೆ. ಆದ್ದರಿಂದ
ಅವುಗಳು ನಿಜವಲ್ಲ ಬದಲಿಗೆ ಕನಸಿನಲ್ಲಿ ಅನುಭವಿಸುವಂತೆ ಕೇವಲ ಭ್ರಾಂತಿ.
ಇಂದ್ರಿಯ ಸುಖಗಳಿಗಾಗಿ ಹಾತೊರೆಯುವುದನ್ನು ಬಿಟ್ಟು ಮನಸ್ಸನ್ನು
ಅಂತರ್ಮುಖಿಯನ್ನಾಗಿಸಿ ನಿಧಾನವಾಗಿ ಬ್ರಹ್ಮ ಜ್ಞಾನದೆಡೆಗೆ ತಿರುಗಿಸಬೇಕು. ಹೀಗೆ ಮಾಡುವುದರಿಂದ ನಮಗೆ ಸಂಬಂಧಗಳ ಸುಂದರ ಪ್ರಪಂಚವು ಮಾಯೆಯೆಂದು
ಅರಿವಾಗಿ ನಿಜಸ್ಥಿತಿಯು ಗೋಚರವಾಗುತ್ತದೆ.
|
ಶ್ಲೋಕ - 24 - ಸಂಸ್ಕೃತದಲ್ಲಿ :
ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣು -
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ |
ಭವ ಸಮಚಿತ್ತಂ ಸರ್ವತ್ರ ತ್ವಂ
ವಾಂಛಸ್ಯಚಿರಾದ್ಯದಿ ವಿಷ್ಣುತ್ವಮ್ ||
|
ಕನ್ನಡದಲ್ಲಿ :
ಎನ್ನಲಿ ನಿನ್ನಲಿ ಎಲ್ಲೆಡೆ ವಿಷ್ಣುವೆ
ಸಹಿಸದೆ ಎನ್ನಲಿ ಕೋಪವ ತೋರುವೆ
ಎಲ್ಲರಲ್ಲಿಯೂ ಆತ್ಮನ ನೋಡು
ಎಲ್ಲೆಡೆ ಭೇದಜ್ಞಾನವ ಬಿಸುಡು
|
ಅರ್ಥ ವಿವರಣೆ :
ನನ್ನೊಳಗೂ, ನಿನ್ನೊಳಗೂ, ಎಲ್ಲೆಲ್ಲೂ ಒಂದೇ ವಿಷ್ಣುವಲ್ಲದೇ ಬೇರೆ ಅಲ್ಲ.
ನಿನ್ನ ಅಸಹನೆ, ಕೋಪಗಳು ಅರ್ಥವಿಲ್ಲದ್ದು. ವಿಷ್ಣುಸ್ಥಿತಿಯನ್ನು ತಲುಪಬೇಕಿದ್ದರೆ ಸಮಭಾವ, ಸಮಚಿತ್ತತೆಗಳನ್ನು
ಯಾವಾಗಲೂ ಹೊಂದಿರು.
|
ವ್ಯಾಖ್ಯಾನ :
ಶಿಷ್ಯನಿಗೆ ಗುರುಗಳಿಂದ ಪದೇ ಪದೇ ಒಂದೇ ಬೋಧನೆಯನ್ನು ಕೇಳಿ
ಕೇಳಿ ಸುಸ್ತಾಗಿ, ಜುಗುಪ್ಸೆಗೊಂಡು ಅಥವಾ ಕೋಪಗೊಂಡಿರಬೇಕು.
ಇದು ಒಂದು ರೀತಿಯಾದ ಸಲಿಗೆಯು ತಿರಸ್ಕಾರವನ್ನು ಹುಟ್ಟು ಹಾಕುವಂತೆ (
ಅತಿಪರಿಚಯಾದ್ ಅವಜ್ಞ ಇತಿ ನ್ಯಾಯಾತ್). ಈ ಶ್ಲೋಕವನ್ನು
ಅಂಥಹ ಜುಗುಪ್ಸೆಗೊಂಡಿ ರುವ ಶಿಷ್ಯನಿಗೆ ಅರುಹಿರುವುದು (ಕುಪಿತಮ್ ಶಿಷ್ಯಮ್
ಪ್ರತಿ ಕೋಪಶಾಂತಿಂ ಉಪದಿಷತಿ).
ಇಲ್ಲಿ ಶಂಕರಾಚಾರ್ಯರು ಉಳಿದ ಗುರುಗಳು ಶತ ಶತಮಾನಗಳಿಂದ ಬೋಧಿಸಿರುವುದನ್ನೇ
ಮತ್ತೆ ವಿವರಿಸಿರುವರು - " ವಿಷ್ಣುವು ನಿನ್ನಲ್ಲಿ,
ನನ್ನಲ್ಲಿ, ಎಲ್ಲರಲ್ಲಿಯೂ ನೆಲೆಸಿರುವನು".
"ವೈವಿಧ್ಯತೆಯನ್ನು ಕಾಣುವುದು ಮಾಯೆಯಿಂದಾಗಿ;
ಐಕ್ಯತೆಯನ್ನು ಕಾಣುವುದು ಆತ್ಮಜ್ಞಾನದಿಂದಾಗಿ".
.....
ಶ್ರೀ ರಾಮಕೃಷ್ಣ
ಇಂಥಹ ಸಂದರ್ಭದಲ್ಲಿ ಗುರುವು ಬೇಸರಗೊಂಡ ಶಿಷ್ಯನಿಗೆ - "ಭೇದಭಾವಕ್ಕೆ ಅವಕಾಶವೆಲ್ಲಿ? ನಿನ್ನಲ್ಲಿ
ನನ್ನಲ್ಲಿ ಹಾಗೂ ಎಲ್ಲರಲ್ಲಿಯೂ ವಿಷ್ಣುವು ನೆಲೆಸಿರುವಾಗ, ಯಾಕೆ ಈ ರೀತಿಯ
ಕೋಪ, ಬೇಸರ? ನಿನಗೆ ವಿಷ್ಣುತ್ವವನ್ನು ತಲುಪಬೇಕೆಂಬ
ಅಪೇಕ್ಷೆಯಿದ್ದಲ್ಲಿ ಸಮಚಿತ್ತತೆಯ ಭಾವವನ್ನು ಬೆಳೆಸಿಕೊ. ಕೋಪ ಹಾಗೂ ಅಸಹನೆಯು
ನಿನ್ನನ್ನು ವಿಷ್ಣುತ್ವದೆಡೆಗೆ ಕೊಂಡೊಯ್ಯುವುದಿಲ್ಲ".
ಗುರುವು ಶಿಷ್ಯನನ್ನು - "ವಿಷ್ಣುತ್ವವು ಪ್ರತಿಯೊಬ್ಬರ ಜನ್ಮ ಸಿದ್ಧ ಹಕ್ಕು,
ಹಾಗಾಗಿ ನೀನು ನಿರಾಶನಾಗದಿರು; ಅದು ನಿನಗೆ ಖಂಡಿತವಾಗಿ
ಲಭಿಸುತ್ತದೆ; ಸಮಾಧಾನದಿಂದ ಸಮಚಿತ್ತಭಾವವನ್ನು ಬೆಳೆಸಿಕೋ"
ಎಂದು ಉತ್ತೇಜಿಸುತ್ತಾರೆ.
|
ಶ್ಲೋಕ - 25 - ಸಂಸ್ಕೃತದಲ್ಲಿ:
ಶತ್ರೌ ಮಿತ್ರೇ ಪುತ್ರೇ ಬಂಧೌ
ಮಾ ಕುರು ಯತ್ನಂ ವಿಗ್ರಹಸಂಧೌ |
ಸರ್ವಸ್ಮಿನ್ನಪಿ ಪಶ್ಯಾತ್ಮಾನಂ
ಸರ್ವತ್ರೋತ್ಸೃಜ ಭೇದಜ್ಞಾನಮ್ ||
|
ಕನ್ನಡದಲ್ಲಿ :
ಶತ್ರು ಮಿತ್ರ ಪುತ್ರರು ಬಾಂಧವರು
ಯುದ್ಧ ಸಂಧಿಗಳಾವುವು ಬೇಡ
ವಿಷ್ಣುತ್ವವ ನೀ ಶೀಘ್ರದಿ ಪಡೆಯಲು
ಎಲ್ಲರಲೆಲ್ಲೆಡೆ ಸಮತೆಯ ತೋರು
|
ಅರ್ಥ ವಿವರಣೆ :
ಪ್ರೀತಿಯನ್ನು ಗೆಲ್ಲುವುದಾಗಲೀ ಅಥವಾ ಸ್ನೇಹಿತರು ಮಕ್ಕಳು
ಸಂಬಂಧಿಕರು ಮತ್ತು ಶತ್ರುಗಳೊಂದಿಗೆ ಹೋರಾಡುವುದರ ಬಗ್ಗೆ ನಿನ್ನ ಪ್ರಯತ್ನಗಳನ್ನು ವ್ಯರ್ಥಮಾಡಬೇಡ. ಎಲ್ಲರಲ್ಲಿಯೂ ನಿನ್ನನ್ನೇ ನೋಡು ಮತ್ತು ಭೇದ ಭಾವವನ್ನು ಸಂಪೂರ್ಣವಾಗಿ
ತೊಡೆದುಹಾಕು.
|
ವ್ಯಾಖ್ಯಾನ :
ತಾಯಿಯು ತನ್ನ ಮಗುವನ್ನು ದ್ವೇಷಿಸುವುದಿಲ್ಲವೇಕೆಂದರೆ ಅವಳು
ಅದನ್ನು ತನ್ನ ದೇಹದ ಭಾಗವೆಂದೂ ಹಾಗೂ ತನ್ನದೇ ಎಂಬ ಭಾವನೆಯಿಂದ ನೋಡುತ್ತಾಳೆ. ವೈದ್ಯರು ನಮ್ಮ ದೇಹದ ಭಾಗವೊಂದನ್ನು ಅದು ಘಾಯ ವಾಗಿಯೋ ಅಥವಾ
ಕೊಳೆತಿದ್ದ ಕಾರಣಕ್ಕಗಿಯೋ ಕತ್ತರಿಸಬೇಕೆಂದು ತಿಳಿಸಿದಾಗ ಅದಕ್ಕೆ ಬಡಪೆಟ್ಟಿಗೂ ಒಪ್ಪುವುದಿಲ್ಲ.
ನನ್ನ ಹಲ್ಲುಗಳು ನಾಲಗೆಯನ್ನು ಅಕಸ್ಮಾತ್ತಾಗಿ ಕಡಿದಾಗಲೂ ಅದನ್ನು ಶಿಕ್ಷಿಸುವುದಿಲ್ಲ.
ಈ ಎರಡೂ ಸಂದರ್ಭಗಳಲ್ಲೂ ಅವುಗಳು ನಮ್ಮ ದೇಹದ ಭಾಗವೇ. ಹಾಗಾಗಿ ಹೇಗೆ ನಾವು ಅವುಗಳನ್ನು ದ್ವೇಷಿಸುವುದಕ್ಕಾಗುತ್ತದೆ ಎಂದು ಯೋಚಿಸುತ್ತೇವೆ.
ಆದರೆ ಬೇರೆಯವರು ನಮಗೆ ಸ್ವಲ್ಪ ಕಸಿವಿಸಿಯನ್ನುಂಟು ಮಾಡಿದರೂ ಅವರಮೇಲೆ ನಮಗೆ ಕೋಪವುಂಟಾಗು
ತ್ತದೆ ಏಕೆಂದರೆ ಅವರು ಬೇರೆಯವರು, ನಾನಲ್ಲ.
ನಾನು ಬೇಕಾದರೆ ನನ್ನನ್ನು ಕ್ಷಮಿಸಬಲ್ಲೆ ಆದರೆ ಬೇರೆಯವರನ್ನು ಕ್ಷಮಿಸಲಾರೆ.
ಶಂಕರಾಚಾರ್ಯರು
"ನಿಮ್ಮ ಸ್ನೇಹಿತರೊಂದಿಗೆ, ಮಕ್ಕಳು,
ಸಂಬಂಧಿಕರು, ಶತ್ರುಗಳೊಂದಿಗೆ, ಯುದ್ಧ ಅಥವಾ ಶಾಂತಿ ಪ್ರಯತ್ನವನ್ನು ಮಾಡದಿರಿ. ಅದು ವ್ಯರ್ಥ
ಪ್ರಯತ್ನ. ಉತ್ತಮವಾದ ಮಾರ್ಗವೆಂದರೆ ನಿಮ್ಮಲ್ಲಿ ಹಾಗೂ ಎಲ್ಲರಲ್ಲಿಯೂ
ಬ್ರಹ್ಮನನ್ನು ಕಾಣಿರಿ ಅದರಿಂದ ನಿಮ್ಮ ದೃಷ್ಟಿಕೋನವೇ ಬದಲಾಗುತ್ತದೆ". ಎಂದು ತಿಳಿಸುತ್ತಾರೆ.
ಇಡೀ ವಿಶ್ವವೆಲ್ಲಾ ಇದೇ ತತ್ತ್ವದಿಂದಾಗಿದೆ - ದೇವರು ಅಥವಾ ಬ್ರಹ್ಮನ್. ಅನೇಕ ದೀಪದ ಕಂಭಗಳಲ್ಲಿ
ಉರಿಯುತ್ತಿರುವುದು ಒಂದೇ ಜ್ಯೋತಿ. ಒಂದೇ ಆತ್ಮವು ಎಲ್ಲರಲ್ಲೂ ಪ್ರಕಾಶಿಸುತ್ತಿರುವುದು.
ಈ ತತ್ತ್ವವನ್ನು ಅರಿತರೆ ಯಾರಲ್ಲೂ ಯಾವುದೇ ಭೇದಭಾವವಿರುವುದಿಲ್ಲ. ನಾವು ಬಾಹ್ಯದಲ್ಲಿ ಹೇಗಿದ್ದರೂ ನಾವೆಲ್ಲರೂ ಭಗವಂತನ ಮಕ್ಕಳೇ. ಹಾಗಿದ್ದಾಗ ಯಾರನ್ನು ಪ್ರೀತಿಸಲಿ? ಯಾರನ್ನು ದ್ವೇಷಿಸಲಿ?
ಯಾರೊಡನೆ ಜಗಳವಾಡಲಿ? ಯಾರೊಂದಿಗೆ ಶಾಂತಿಯನ್ನು ಬಯಸಲಿ?
ಆಚಾರ್ಯರು ಉಪದೇಶಿಸುವುದೇನೆಂದರೆ ಈ ರಹಸ್ಯವನ್ನರಿತು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಿ
ಹಾಗೂ ವಿಶ್ವದ ಶಾಂತಿಯನ್ನು ಕಾಪಾಡಿ ಎಂದು.
|
ಶ್ಲೋಕ - 26 - ಸಂಸ್ಕೃತದಲ್ಲಿ:
ಕಾಮಂ ಕ್ರೋಧಂ ಲೋಭಂ ಮೋಹಂ
ತ್ಯಕ್ತ್ವಾತ್ಮಾನಂ ಭಾವಯ ಸೋsಹಮ್ |
ಆತ್ಮಜ್ಞಾನವಿಹೀನಾ ಮೂಢಾಃ
ತೇ ಪಚ್ಯಂತೇ ನರಕನಿಗೂಢಾಃ ||
|
ಕನ್ನಡದಲ್ಲಿ :
ಕಾಮಕ್ರೋಧವನು ಲೋಭಮೋಹವನು
ಬಿಡು ಧ್ಯಾನಿಸು ಸೋಹಂ ಎಂದು
ಆತ್ಮ ಜ್ಞಾನ ವಿಹೀನರು ಮೂಢರು
ನಿಗೂಢ ನರಕವ ಹೊಂದುವರು
|
ಅರ್ಥ ವಿವರಣೆ :
ಭೋಗಾಪೇಕ್ಷೆ, ಕೋಪ, ಮೋಹಪರವಶತೆ ಮತ್ತು ದುರಾಸೆಗಳನ್ನು ತ್ಯಜಿಸು.
ನಿನ್ನ ನೈಜ ಸ್ವಭಾವವನ್ನು ಪರ್ಯಾಲೋಚಿಸು. ತನ್ನ ಬಗೆಗೆ
ಕುರುಡರಾಗಿರುವವನು ಮೂಢ. ನರಕ ಕೂಪದಲ್ಲಿ ಬಿದ್ದು ಕಡೆತನಕ ಅವನು ಅನುಭವಿಸುತ್ತಾನೆ.
|
ವ್ಯಾಖ್ಯಾನ :
ಆಸೆ, ಕೋಪ ಮತ್ತು ಲೋಭಗಳು ದೇಹದೊಳಗಿರುವ ಚೋರರು, ಯಾವಾಗಲೂ ನಮ್ಮೊಳಗಿರುವ ಜ್ಞಾನವನ್ನು ಕದಿಯಲು ಹವಣಿಸುತ್ತಿರುತ್ತವೆ. ಆದ್ದರಿಂದ ಎಚ್ಚರವಿರಲಿ.
ಕಾಮಃ ಕ್ರೋಧಾ ಚ ಲೋಭಾ ಚ
ದೇಹೇ ತುಷ್ಟಂತಿ ತಸ್ಕರಃ
ಜ್ಞಾನರತ್ನಾಪಹಾರಾಯ
ತಸ್ಮಾಜ್ ಜಾಗ್ರತಜಾಗ್ರತ
ಆಸೆಯು ವಸ್ತುಗಳನ್ನು ಪಡೆಯಲು ಹಾತೊರೆಯುವುದು. ಈ ಉತ್ಕಟವಾದ ಬಯಕೆಗೆ ಕಡಿವಾಣ ಹಾಕಲು ಪ್ರಯತ್ನಿಸಿದಾಗ ಕೋಪವು ಉತ್ಪತ್ತಿಯಾಗುತ್ತದೆ.
ಇವೆರಡನ್ನೂ ಗೆದ್ದವನು ಧ್ಯಾನ ಮಾರ್ಗವನ್ನು ಅನುಸರಿಸಲು ಸಾಧ್ಯವಾಗುತ್ತದೆ.
(ಕಾಮಃ ಇಚ್ಚ ವಿಷಯೇಸು ತಸ್ಯ ಪ್ರತಿಹತೌ ಜತಾ ಚಿತ್ತವೃತ್ತಿಹಿ ಕ್ರೋಧ ಇತಿ ಉಚ್ಯತೇ
ತದುಭಯಪರಿತ್ಯಾಗೆ ಧ್ಯಾನಾಕಾರೀ ಭವೇತ್)
ಲೋಭ ವಸ್ತುಗಳನ್ನು ತ್ಯಜಿಸಲು ಅಸಾಧ್ಯವಾದ ಸ್ಥಿತಿ. ತಪ್ಪು ಕಲ್ಪನೆ / ಜ್ಞಾನವು ಭ್ರಮೆ.
ಇದು ನಿಜವಲ್ಲದ್ದನ್ನು ನಿಜವೆಂದೂ, ನಿಜವನ್ನು
ನಿಜವಲ್ಲದ್ದೆಂದೂ ಭ್ರಮಿಸುವ ಸ್ಥಿತಿ. (ತ್ಯಾಗಾಸಹಿಷ್ಣುತಾ ಲೋಭಃ,
ವಿಪರೀತಬುದ್ಧಿರ್ ಮೋಹಃ, ಅತಸ್ಮಿನ್ ತದ್ಬುದ್ಧಿರ್ ಇತ್ಯೇ
ಅರ್ಥಃ).
ಕೋಪ, ಮೋಹ, ಲೋಭಗಳನ್ನು ತ್ಯಜಿಸಿ ಆತ್ಮಸಾಕ್ಷಾತ್ಕಾರದ ಹಾದಿಯೆಡೆಗೆ
ಪಯಣಿಸಬೇಕು ಹಾಗೂ "ನಾನು ಯಾರು? ಎಂಬ
ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕು.
ಭಗವಾನ್ ರಮಣ ಮಹರ್ಷಿಗಳು - " ನಾಹಂ ದೇಹಂ ಕೋಹಂ ಸೋಹಂ" ಎಂದು ವರ್ಣಿಸಿದ್ದಾರೆ.
" ನಾನು ದೇಹವಲ್ಲ, ನಾನು ಯಾರು? ನಾನೇ ದೇವರು (ಶಿವೋಹಂ
)".
ಜ್ಞಾನವಿಲ್ಲದವನು ಮೂರ್ಖ. ಅಂಥವನು ಸಂಸಾರ ಕೂಪದಲ್ಲಿ ನರಳುವನು. ಆತನು
ತನ್ನನ್ನೇ ಮೋಸಗೊಳಿಸುವವನು (ಆತ್ಮವಂಚಕ) ಹಾಗೂ
ಅವನಿಗೆ ತನ್ನ ನಿಜವಾದ ಸ್ಥಿತಿಯು ಅರಿತಿಲ್ಲ. ತನ್ನನ್ನು ಅರಿಯಲು ಕಡಿಮೆ
ಶ್ರಮವಹಿಸಿದರೂ ಫಲವು ದೊರಕುತ್ತದೆ. ಆದರೂ ಮನುಷ್ಯನು ಅದ್ವೈತದೆಡೆಗೆ
ಚಿಂತಿಸಲು ಅಸಮರ್ಥ.
ಆಯಾಸಸ್ತಾವದ-ಅತ್ಯಲ್ಪಃ
ಫಲಂ ಮುಕ್ತಿರ್ತೈವ ತು,
ತಥಾಪಿ ಪರಮಾರ್ವೈತಂ
ನೈವ ವಾಂಚಂತಿ ಮಾನವಃ
|
ಶ್ಲೋಕ - 27 - ಸಂಸ್ಕೃತದಲ್ಲಿ
ಗೇಯಂ ಗೀತಾನಾಮಸಹಸ್ರಂ
ಧ್ಯೇಯಂ ಶ್ರೀಪತಿರೂಪಮಜಸ್ರಮ್ |
ನೇಯಂ ಸಜ್ಜನಸಂಗೇ ಚಿತ್ತ
ದೇಯಂ ದೀನಜನಾಯ ಚ ವಿತ್ತಮ್ ||
|
ಕನ್ನಡದಲ್ಲಿ :
ಶ್ರೀಪತಿರೂಪವ ಧ್ಯಾನಿಸು ಸತತ
ಗೀತೆಯ ಸಾಸಿರ ನಾಮವ ಪಾಡು
ಸಜ್ಜನ ಸಂಗದಿ ಚಿತ್ತವನಿಟ್ಟು
ದೀನದಲಿತರಿಗೆ ದಾನವ ಮಾಡು
|
ಅರ್ಥ ವಿವರಣೆ :
ಚತುರ್ಗುಣಗಳ ಶಿಸ್ತನ್ನು ಪಾಲಿಸಲು ಆಚಾರ್ಯರು ವಿವರಿಸುತ್ತಾರೆ:
1. ಪ್ರತಿನಿತ್ಯ ಭ್ಗವದ್ಗೀತೆಯಲ್ಲಿರುವ
ಭಗವಂತನ ನಾಮಸ್ಮರಣೆಯನ್ನು ಮಾಡುವುದು ಹಾಗೂ ವಿಷ್ಣುಸಹಸ್ರನಾಮವನ್ನು ಸ್ತುತಿಸುವುದು.
2. ಭಗವಂತನ ಪವಿತ್ರ ಮೂರ್ತಿಯನ್ನು ಕುರಿತು
ಧ್ಯಾನಿಸುವುದು.
3. ಸತ್ಪುರುಷರ ಸಹವಾಸ ಮಾಡುವುದು
4. ನಮ್ಮಲ್ಲಿರುವುದನ್ನು ಇತರರಿಗೆ
/ ಸತ್ಪಾತ್ರರಿಗೆ ದಾನ ಮಾಡುವುದು.
|
ವ್ಯಾಖ್ಯಾನ:
ಉಪನಿಷತ್ ಹಸುವಾದರೆ ಭಗವದ್ಗೀತೆಯು ಅದರಿಂದ ಉತ್ಪನ್ನವಾಗುವ
ಹಾಲು ಹಾಗೂ ಇದನ್ನು ದೈವೀಕ ಗೋಪಾಲಕನಾದ ಶ್ರೀ ಕೃಷ್ಣನು ಪ್ರಪಂಚಕ್ಕೆ ಹಂಚಿರುವನು. ಇದರಲ್ಲಿ ಭಕ್ತಿ, ಜ್ಞಾನ, ಕರ್ಮ ಹಾಗೂ ರಾಜ ಯೋಗಗಳ ಜ್ಞಾನಸಾರವನ್ನೇ ವಿವರಿಸಲಾಗಿದೆ. ಆದ್ದರಿಂದ
ಯಾವುದೇ ಸಾಧಕನಿಗೂ ಆಧ್ಯಾತ್ಮದ ಹಾದಿಯಲ್ಲಿ ಮುಂದುವರೆಯಲು ಗೀತೆಯ ಅದ್ಯಯನ ಅತೀ ಮುಖ್ಯ.
ಜ್ಞಾನವೊಂದಿದ್ದರೆ ಸಾಲದು, ಶುದ್ಧ ಮನಸ್ಸಿನಿಂದ ವಿಷ್ಣುವನ್ನು ಕುರಿತು ಧ್ಯಾನ ಮಾಡುವುದು ಮುಕ್ತಿ
ಮಾರ್ಗಕ್ಕೆ ಸುಲಭ ದಾರಿ.
ಯಾವಾಗಲೂ ಧ್ಯಾನ ಮಾಡುವುದಕ್ಕೆ ಸಾಧ್ಯವಾಗದೇ ಇರಬಹುದು. ಆಗ ಸತ್ಪುರುಷರ ಸಹವಾಸವು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದಕ್ಕೆ
ಬಹಳ ಸಹಕಾರಿ.
"ಗೃಹಸ್ಥನು ಭಾವಿಯನ್ನು ತೋಡಿಸುವುದಾಗಲೀ,
ರಸ್ತೆಬದಿಯಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವುದಾಗಲೀ, ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಧರ್ಮಛತ್ರವನ್ನು ಕಟ್ಟಿಸುವುದಾಗಲೀ, ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸುವುದಾಗಲೀ ಮಾಡು ವುದರಿಂದ, ಯೋಗಿಯೊಬ್ಬನು ಯಾವ ಗುರಿಯನ್ನಿಟ್ಟು ಕೊಂಡು ಸಾಧನೆಯನ್ನು ಮಾಡುತ್ತಾನೋ ಅದೇ ಗುರಿಯನ್ನು
ಗೃಹಸ್ಥನು ತಲುಪಬಹುದು".
..... ಸ್ವಾಮಿ ವಿವೇಕಾನಂದ
ದಾನ ಕಾರ್ಯವನ್ನು ಮಾಡುವಾಗ ನಮ್ಮ ಮನೋಭಾವವು ಹೇಗಿರಬೇಕೆಂಬುದನ್ನು
ಸ್ವಾಮಿ ವಿವೇಕಾನಂದರು ಈ ರೀತಿ ವಿವರಿಸುತ್ತಾರೆ -
" ಪ್ರಪಂಚಕ್ಕೆ ಯಾಕೆ ನಾವು ಒಳ್ಳೆಯದನ್ನು
ಮಾಡಬೇಕು? ಸಾಮಾನ್ಯವಾಗಿ ಪ್ರಪಂಚಕ್ಕೆ ಸಹಾಯ ಮಾಡಲು ... ಯಾವಾಗಲೂ ಇತರರಿಗೆ ಸಹಾಯ ಮಾಡುವುದು ನಮ್ಮ ಹಕ್ಕೆಂದು ತಿಳಿದರೆ, ಒಳ್ಳೆಯದನ್ನು ಮಾಡುವ ಆಸೆಯು ನಮ್ಮಲ್ಲಿರುವ ಉತ್ತಮ ಪ್ರೇರಣಾ ಶಕ್ತಿ. ಎತ್ತರದ ಜಾಗದಲ್ಲಿ ನಿಂತು ಕೈಯಲ್ಲಿ ಕೆಲವು ನಾಣ್ಯಗಳನ್ನು ಹಿಡಿದು ಬಡವನಿಗೆ ತೆಗೆದುಕೋ
ಎನ್ನಬೇಡಿ. ಬದಲಾಗಿ ದಾನವನ್ನು ಸ್ವೀಕರಿಸಲು ವ್ಯಕ್ತಿಯೊಬ್ಬನಿರುವುದಕ್ಕೆ
ಕೃತಜ್ಞರಾಗಿರಿ. ಹಾಗೆ ಒಬ್ಬನಿಗೆ ದಾನಮಾಡುವುದರಿಂದ ನಿಮಗೇ ನೀವೇ ಸಹಾಯ
ಮಾಡಿದಂತೆ. ದಾನ ಪಡೆಯುವವನು ಧನ್ಯನಲ್ಲ ಬದಲಾಗಿ ದಾನ ನೀಡುವವನು ಧನ್ಯ.
ನಿಮಗೆ ಪ್ರಪಂಚದಲ್ಲಿ ನಿಮ್ಮ ದಾನ ಬುದ್ಧಿಯನ್ನು ಉಪಯೋಗಿಸಲು ಒಂದು ಅವಕಾಶ ಒದಗಿ
ಅದರಿಂದ ನೀವು ಪವಿತ್ರ ಹಾಗೂ ಪರಿಪೂರ್ಣರಾಗಲು ಸಹಾಯವಾಗುವುದಲ್ಲ ಎಂಬುದಾಗಿ ಭಗವಂತನಿಗೆ ಕೃತಜ್ಞರಾಗಿರಿ."
ಇದು ಚತುರ್ದಶ ಮಂಜರಿಯ ಕೊನೇ ಶ್ಲೋಕ. ಈ ಕೆಳಗಿನ ಶ್ಲೋಕವನ್ನು ಇಲ್ಲಿ ಸೇರಿಸಿ ಈ ಮಂಜರಿಯ ರಚನಾಕಾರರ
ಹಾಗೂ ಸಂದರ್ಭವನ್ನು ಸ್ಮರಿಸಲಾಗಿದೆ:
ಮೂಢಃ ಕಶ್ಚನ ವಯ್ಯಾಕರಣೋ
ಡುಕೃಙ್ಕರಣಧ್ಯಾಯನ ಧುರಿಣಃ
ಶ್ರೀಮಶ್ಚಂಕರಭವಚ್ಚಿಶ್ಯರ
ಬೋಧಿತ ಅಸಿಚ್ಚೋಡಿತಕರ್ಣಃ
ಇದರ ನಂತರ :
ಇತಿ, ಶ್ರೀ ಗುರು-ಶಂಕರವಿಜಯೇ ಶ್ರೀಮಚ್ಚಂಕರ-ಭಗವತ್ಪಾದ-ವೈಯಾಕರಣ ಸಂವಾದೇ ಪರಮಹಂಸ-ಪರಿವ್ರಾಜಕಾಚಾರ್ಯವರ್ಯ ಶ್ರೀಮಚ್ಚಂಕರಾಚಾರ್ಯಾಜ್ಞಪ್ತ-ಶಿಷ್ಯೋಪನ್ಯಸ್ತ-ಚತುರ್ದಶಮಂಜರಿಕಾ-ಸ್ತೋತ್ರಂ
|
ಶ್ಲೋಕ - 28 - ಸಂಸ್ಕೃತದಲ್ಲಿ:
ಸುಖತಃ ಕ್ರಿಯತೇ ರಾಮಾಭೋಗಃ
ಪಶ್ಚಾದ್ಧಂತ ಶರೀರೇ ರೋಗಃ |
ಯದ್ಯಪಿ ಲೋಕೇ ಮರಣಂ ಶರಣಂ
ತದಪಿ ನ ಮುಂಚತಿ ಪಾಪಾಚರಣಮ್ ||
|
ಕನ್ನಡದಲ್ಲಿ :
ರಮಣಿಯ ಜತೆಯಲಿ ಸುಖಸಂಭೋಗ
ಅಯ್ಯೋ ನಂತರ ದೇಹಕೆ ರೋಗ
ಮೃತ್ಯುವೆ ಲೋಕದಿ ಪರಮಗತಿ
ಆದರು ತ್ಯಜಿಸರು ಪಾಪರತಿ
|
ಅರ್ಥವಿವರಣೆ :
ಯಾರು ವಿಷಯಾಸಕ್ತಿಯ ತೃಪ್ತಿಗೆ ಬಲಿಯಾಗುತ್ತಾರೋ ಅವರ ಶರೀರವು
ಸುಲಭವಾಗಿ ರೋಗಗಳಿಗೆ ತುತ್ತಾಗುತ್ತದೆ. ಪ್ರತಿಯೊಂದು ಜೀವಿಗೂ ಕಡೆಗೆ ಸಾವು ಬಂದೇ ಬರುವುದಾದರೂ ಮನುಷ್ಯನು ತನ್ನ ಪಾಪ ಕಾರ್ಯಗಳನ್ನು
ಬಿಡುವುದಿಲ್ಲ.
|
ವ್ಯಾಖ್ಯಾನ :
ಭಗವದ್ಗೀತೆಯ ಪ್ರಕಾರ ಕೀಳುವಿಧದ ಸಂತೋಷಗಳು ತಾಮಸಸುಖ ಯಾವುದೆಂದರೆ
ಯಾವುದರಿಂದ ಮೊದಲಿಗೆ ದೈಹಿಕ ಸಂತೋಷವೊದಗಿ ನಂತರ ಕಡೆಗೆ ನೋವನ್ನುಂಟು ಮಾಡುವುದು. ವಿಷಯಾಸಕ್ತಿಯಿಂದ ದೇಹ ಹಾಗೂ ಮನಸ್ಸಿಗೆ ಅಹಿತಕರ ಪರಿಣಾಮ ಉಂಟಾಗುವುದು
ಶತಸ್ಸಿದ್ದ.
ಇದು ಗೊತ್ತಿದ್ದೂ ಅದನ್ನು ತಪ್ಪಿಸಿಕೊಳ್ಳಲಾರ ಮನುಷ್ಯ. ಸಾವು ನಿಶ್ಚಿತವೆಂದು ಗೊತ್ತಿದ್ದೂ ಮನುಷ್ಯನು ತಪ್ಪುಕಾರ್ಯಗಳಿಂದ ವಿಮುಖನಾಗುವುದಿಲ್ಲ.
ಇದು ಮಾಯೆಯ ಪ್ರಭಾವವೇ.
"ಇಂದ್ರಿಯ ಸುಖಗಳು ಒಂದು ರೀತಿಯ ಚರ್ಮ
ತುರಿಕೆಯ ಥರಹ. ಚೆನ್ನಾಗಿ ಕೆರೆದುಕೊಂಡಾಗ ಒಂದು ರೀತಿಯ ತೃಪ್ತಿ ದೊರಕುತ್ತದೆ.
ಆದರೆ ಇದರಿಂದ ರೋಗವು ಉಲ್ಬಣಿಸುತ್ತದೆ. ಇಂದ್ರಿಯ ಸುಖಗಳಿಗೆ
ದಾಸನಾದಾಗ ಮನಸ್ಸು ಅದರಲ್ಲಿ ಸಿಕ್ಕಿಕೊಳ್ಳುತ್ತದೆ."
"ಭೂಮಿಯಲ್ಲಿರುವ ಯಾರೂ ಜೀವನದಲ್ಲಿ
ನೋವು ನಿರಾಶೆ ಸೋಲು ಮತ್ತು ದುರಾದೃಷ್ಟಗಳಿಂದ ನರಳುತ್ತಿದ್ದರೂ ಯಾವುದೇ ಪಾಠವನ್ನು ಕಲಿಯುವುದಿಲ್ಲ.
ಅವರು ಒಂದು ರೀತಿಯಲ್ಲಿ ಬಾಯಿಯಿಂದ ರಕ್ತಸುರಿಯುತ್ತಿದ್ದರೂ ಲೆಕ್ಕಿಸದೇ ಮರುಭೂಮಿಯಲ್ಲಿ
ನೀರಿಗಾಗಿ ಮುಳ್ಳಿನಿಂದ ಕೂಡಿದ ಕುರುಚಲು ಗಿಡಗಳನ್ನು ತಿನ್ನತೊಡಗುವ ಒಂಟೆಯಂತೆ."
"ಪದೇ ಪದೇ ಮನುಷ್ಯನು ವಿಷಯಾಸಕ್ತಿ
ಹಾಗೂ ದುರಾಸೆಗಳಿಗೆ ಬಲಿಪಶುವಾಗಿ ಅವಮಾನಿತನಾಗುತ್ತಾನೆ. ಆದರೂ ಅವುಗಳಿಂದ
ಹೊರಬಂದು ಭಗವಂತನ ಚಿಂತನೆಯನ್ನು ಮಾಡಲಾರ."
......... ಶ್ರೀ ರಾಮಕೃಷ್ಣ.
|
ಶ್ಲೋಕ - 29 - ಸಂಸ್ಕೃತದಲ್ಲಿ:
ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿತತಃ ಸುಖಲೇಶಃ ಸತ್ಯಮ್ |
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||
|
ಕನ್ನಡದಲ್ಲಿ :
ಧನವೆ ಅನರ್ಥ ವಿಚಾರಿಸು ನಿತ್ಯ
ಸುಖಲವಲೇಶವು ಇಲ್ಲವು ಸತ್ಯ
ಮಕ್ಕಳಿಂದಲೂ ಧನಿಕಗೆ ಭೀತಿ
ಎಲ್ಲೆಡೆ ಹೀಗೇ ಇರುವುದೆ ರೀತಿ
|
ಅರ್ಥ ವಿವರಣೆ :
ಸಂಪತ್ತು ಕ್ಷೇಮವಲ್ಲ, ನಿಜವಾಗಲೂ ಅದರಿಂದ ಯಾವ ಸಂತೋಷವೂ ದೊರಕುವುದಿಲ್ಲ. ಇದರ ಬಗೆಗೆ ಸದಾಕಾಲವೂ ವಿಚಾರಮಾಡು. ಇದರಿಂದಾಗಿ ಧನಿಕನೂ ಸಹ
ತನ್ನ ಮಕ್ಕಳಿಗೂ ಹೆದರುತ್ತಾನೆ. ಸಂಪತ್ತಿನ ಮಹತ್ತು ಇದೇ ಎಲ್ಲೆಡೆ.
|
ವ್ಯಾಖ್ಯಾನ :
ಮನುಷ್ಯನಿಗೆ ಹಣವು ಎಷ್ಟು ಅಗತ್ಯವೋ ಅಷ್ಟೇ ಅದು ಕಳೆದುಹೋಗುವುದೆಂಬುದರ
ಬಗೆಗೆ ಕಳವಳವೂ ಇರುತ್ತದೆ. ಇದರಿಂದಾಗಿ ಹಣಕ್ಕಾಗಿ ಅವನಲ್ಲಿ ದುರಾಸೆಯೂ
ಹುಟ್ಟುತ್ತದೆ ಹಾಗೂ ಭಯ, ಅನುಮಾನ, ಅಸೂಯೆಗಳುಂಟಾಗುತ್ತದೆ.
ಹಣದಿಂದುಂಟಾಗುವ ಸಂತೋಷವು ಕ್ಷಣಿಕ ಹಾಗೂ ಅತ್ಯಂತ ಹಾನಿಕಾರಕ. ನೀವು ಸುಖದ ಸುಪ್ಪತ್ತಿಗೆಯನ್ನೇ ಹಣದಿಂದ ತರಬಹುದು, ಆದರೆ ಹಣವು ನಿಮಗೆ ನಿದ್ರೆಯನ್ನು ತರಬಲ್ಲದೇ? ಆದ್ದರಿಂದ ಯೌವನಾವಸ್ತೆ
ಯಲ್ಲೇ ಸುಖವನ್ನು ಅನುಭವಿಸುತ್ತಿದ್ದರೂ ಅವುಗಳು ಶಾಶ್ವತವಲ್ಲವೆಂಬುದನ್ನು ಅರಿತು ಅವುಗಳ ಬಗ್ಗೆ
ನಿರಾಸಕ್ತಿಯನ್ನು ಬೆಳೆಸಿಕೊಳ್ಳ ಬೇಕು.
|
ಶ್ಲೋಕ - 30 - ಸಂಸ್ಕೃತದಲ್ಲಿ :
ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯ ವಿವೇಕವಿಚಾರಮ್ |
ಜಾಪ್ಯಸಮೇತಸಮಾಧಿವಿಧಾನಂ
ಕುರ್ವವಧಾನಂ ಮಹದವಧಾನಮ್ ||
|
ಅರ್ಥ ವಿವರಣೆ:
ಉಸಿರಾಟವನ್ನು ಪ್ರಾಣಾಯಾಮದ ಮೂಲಕ ನಿಯಂತ್ರಿಸಿಕೊಳ್ಳಿ, ಇಂದ್ರಿಯಗಳ ಮೇಲೆ
ಹತೋಟಿ ಇರಲಿ. ವಾಸ್ತವ ಹಾಗೂ ಕ್ಷಣಿಕಗಳ ನಡುವೆ ವ್ಯತ್ಯಾಸವನ್ನು ಗಮನಿಸಿ.
ಭಗವಂತನ ನಾಮಸ್ಮರಣೆಯಿಂದ ಅಲ್ಲೋಲ ಕಲ್ಲೋಲವಾಗಿರುವ ಮನಸ್ಸನ್ನು ಸುಸ್ಥಿತಿಗೆ ತನ್ನಿ.
ಇವುಗಳನ್ನು ಅತ್ಯಂತ ಜಾಗರೂಕತೆಯಿಂದ ಮಾಡಿ.
|
ವ್ಯಾಖ್ಯಾನ :
ಸೂಚಿಸಲಾದ ಅಂತರಂಗದ ಸಾಧನಗಳೆಂದರೆ
1. ಪ್ರಾಣಾಯಾಮ - ದೇಹದೊಳಗಿನ ಮುಖ್ಯ ಪ್ರಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.
2. ಪ್ರತ್ಯಾಹಾರ - ಇಂದ್ರಿಯ ವಸ್ತುಗಳಿಂದ ಮನಸ್ಸನ್ನು ಹಿಂಪಡೆಯುವುದು.
3. ವಾಸ್ತವ ಮತ್ತು ಕ್ಷಣಿಕಗಳ ನಡುವೆ ಭೇದವನ್ನು
ಮಾಡುವುದು.
4. ಭಗವಂತನ ನಾಮಸ್ಮರಣೆಯನ್ನು ಮಾಡುವುದು.
5. ಧ್ಯಾನ ಹಾಗೂ ಸಮಾಧಿ ಸ್ಥಿತಿಯನ್ನು
ತಲುಪುವುದು.
ಪ್ರಾಣಾಯಾಮವು ಒಂದು ರೀತಿಯ ಆಧ್ಯಾತ್ಮಿಕ ಅಭ್ಯಾಸ ಹಾಗೂ ಇದು
ರಾಜಯೋಗದ ಒಂದು ಭಾಗ. ಸ್ವಾಮಿ ವಿವೇಕಾನಂದರು ತಿಳಿಸಿರುವಂತೆ
:
"ಎಲ್ಲರೂ ಭಾವಿಸುವ ಹಾಗೆ ಪ್ರಾಣಾಯಾಮವು
ಉಸಿರಿಗೆ ಸಂಬಂಧಿಸಿದ್ದು ಎಂದು. ಆದರೆ ಅದಲ್ಲ. ಪ್ರಾಣಾಯಾಮ ಕ್ರಿಯೆಯಲ್ಲಿ ಉಸಿರಿನ ಹತೋಟಿಯು ಅತಿ ಕಡಿಮೆ ಪಾತ್ರವನ್ನು ವಹಿಸುತ್ತದೆ.
ನೈಜ ಪ್ರಾಣಾಯಾಮದಲ್ಲಿ ಉಸಿರಾಟವು ಅನೇಕ ವ್ಯಾಯಾಮಗಳಲ್ಲಿ ಒಂದು ಮಾತ್ರ.
ಪ್ರಾಣಾಯಾಮ ಎಂದರೆ ಪ್ರಾಣವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.
ವಿಶ್ವದಲ್ಲಿನ ದೈಹಿಕ ಅಥವಾ ಮಾನಸಿಕ ಎಲ್ಲ ಶಕ್ತಿಗಳ ಸಮಾಗಮವೇ
ಪ್ರಾಣ. ವಿಶ್ವದಲ್ಲಿನ ಎಲ್ಲ ಪ್ರಾಣಗಳಲ್ಲಿ ನಮ್ಮ
ಶರೀರ ಹಾಗೂ ಮನಸ್ಸಿನಲ್ಲಿ ಕೆಲಸಮಾಡುತ್ತಿರುವ ಪ್ರಾಣವೇ ನಮಗೆ ಹತ್ತಿರವಾದ ಪ್ರಾಣ. ಈ ಸೂಕ್ಷ್ಮವಾದ ಅಲೆಯನ್ನು ನಾವು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾದರೆ ಆಗ ಮಾತ್ರ ನಾವು
ಇಡೀ ಪ್ರಾಣವನ್ನು ನಿಯಂತ್ರಿಸಬಹುದೆಂದು ನಂಬಬಹುದು. ಯಾವ ಯೋಗಿಯು ಇದನ್ನು
ಸಾಧಿಸುತ್ತಾನೋ ಅವನೇ ಪರಿಪೂರ್ಣತೆಯ ಹಂತವನ್ನು ತಲುಪಿರುವನೆಂದು ಅರಿಯಬಹುದು."
"ಯಾರು ತನ್ನ ಮನಸ್ಸನ್ನು ಕೇಂದ್ರ
ಬಿಂದುವಿನೆಡೆಗೆ ಮತ್ತು ಕೇಂದ್ರ ಬಿಂದುವಿನಿಂದ ಕ್ರಮವಾಗಿ ಬಂಧಿಸುತ್ತಾರೋ ಮತ್ತು ಬೇರ್ಪಡಿಸುತ್ತಾರೋ
ಅವರು ಪ್ರತ್ಯಾಹಾರವನ್ನು ಸಾಧಿಸಿದ್ದಾರೆ ಎನ್ನಬಹುದು. ಮನಸ್ಸು ಸ್ವಾಭಾವಿಕವಾಗಿ
ಇಂದ್ರಿಯಗಳೆಡೆಗೆ ಹೊರಮುಖವಾಗಿರುತ್ತದೆ. ಸತತ ಅಭ್ಯಾಸದಿಂದ ಇದನ್ನು ಹತೋಟಿಯಲ್ಲಿಟ್ಟುಕೊಂಡು
ಅದನ್ನು ಇಂದ್ರಿಯಗಳಿಂದ ತನ್ನ ಇಚ್ಚೆಯಂತೆ ವಿಮುಖವನ್ನಾಗಿ ಮಾಡುವುದು."
"ಮನಸ್ಸನ್ನು ಪ್ರಾಣಾಯಾಮ ಪ್ರತ್ಯಾಹಾರಗಳಿಂದ
ಪರಿಶುದ್ಧವಾದ ನಂತರ ಧ್ಯಾನಕ್ಕೆ ತೊಡಗಿಸಬಹುದು. ಸಾಧಕನು ಧ್ಯಾನ ಹಾಗೂ
ಜಪಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಅವನು ಸಮ್ಮಧಿ ಸ್ಥಿತಿಯನ್ನು
ತಲುಪಬಹುದು."
|
ಶ್ಲೋಕ - 31 - ಸಂಸ್ಕೃತದಲ್ಲಿ:
ಗುರುಚರಣಾಂಬುಜನಿರ್ಭರಭಕ್ತಃ
ಸಂಸಾರಾದಚಿರಾದ್ಭವ ಮುಕ್ತಃ |
ಸೇಂದ್ರಿಯಮಾನಸನಿಯಮಾದೇವಂ
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್ ||
|
ಕನ್ನಡದಲ್ಲಿ :
ಗುರುಪಾದಗಳಲಿ ತುಂಬಿದ ಭಕ್ತಿ
ನಶ್ವರ ಸಂಸಾರದಿಂದ ವಿಮುಕ್ತಿ
ಇಂದ್ರಿಯ ಮನಗಳ ನಿಯಮಿಪೆಯಾದರೆ
ಕಾಣುವೆ ನಿನ್ನೆದೆಯಲ್ಲಿಹ ದೇವರ
|
ಅರ್ಥ ವಿವರಣೆ :
ಗುರುವಿನ ಪಾದ ಪದ್ಮಗಳಲ್ಲಿ ಸಂಪೂರ್ಣ ಮೀಸಲಾಗಿ ಸಂಸಾರದ ಬಂಧನದಿಂದ
ಬಿಡುಗಡೆ ಪಡೆ. ಹೀಗಾಗಿ ಇಂದ್ರಿಯ ನಿಗ್ರಹ ಹಾಗೂ ಮನಸ್ಸನ್ನು
ಹತೋಟಿಯಲ್ಲಿಟ್ಟುಕೊಳ್ಳುವುದರ ಮೂಲಕ ನಿನ್ನೊಳಗೆ ನೆಲೆಸಿರುವ ನಿನ್ನ ಆರಾಧ್ಯ ದೈವವನ್ನು ವೀಕ್ಷಿಸು.
|
ವ್ಯಾಖ್ಯಾನ :
ಇದು ಭಜಗೋವಿಂದಂ ಸ್ತೋತ್ರದ ಕೊನೆಯ ಶ್ಲೋಕ. ಈ ಶ್ಲೋಕದ ಮೂಲಕ ಶಂಕರ ಭಗವತ್ಪಾದರು ಗುರುವಿನ ಮಹತ್ವ ಹಾಗೂ ಅವರ ಬಗ್ಗೆ
ಭಕ್ತಿಯನ್ನು ಒತ್ತಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಂಕರಾಚಾರ್ಯರ ಗುರುಗಳಾದ
ಗೋವಿಂದ ಭಗವತ್ಪಾದರನ್ನು ನೆನೆಸಿಕೊಳ್ಳುವುದು ಸೂಕ್ತವೆನಿಸುತ್ತದೆ.
ಲೌಕಿಕ ಜ್ಞಾನವನ್ನು ಪಡೆದುಕೊಳ್ಳುವುದಕ್ಕೂ ಗುರುವಿನ ಅಗತ್ಯತೆಯು
ಬೇಕೇ ಬೇಕು. ಹಾಗಿದ್ದಾಗ ಆಧ್ಯಾತ್ಮಿಕ ಪವಿತ್ರ ಜ್ಞಾನವನ್ನು
ಅರಿಯುವುದಕ್ಕೆ ಗುರುವಿನ ಮಾರ್ಗದರ್ಶನ ಬೇಡದೇ ಉಂಟೇ? ಛಾಂದೋಗ್ಯೋಪನಿಷತ್ತಿನಲ್ಲಿ
ಹೇಳಿರುವಂತೆ ಮಾರ್ಗದರ್ಶಕ ಗುರುವಿಗೆ ಆತ್ಮಜ್ಞಾನದ ಅರಿವಿರುತ್ತದೆ (ಆಚಾರ್ಯವಾನ್
ಪುರುಷೋ ವೇದ - vi, xiv, 2 ), ಹಾಗೂ ಇದಕ್ಕೆ ಒಂದು ಸಾದೃಶ್ಯವನ್ನು
ನೀಡಲಾಗಿದೆ :
" ಗಾಂಧಾರದೇಶದ ಒಬ್ಬ ಪ್ರಜೆಯನ್ನು
ಅವನ ಕಣ್ಣಿಗೆ ಬಟ್ಟೆಯನ್ನು ಬಿಗಿದು ಅವನನ್ನು ದೇಶದಿಂದ ಹೊರಗೆ ದೂರದ ಒಂದು ಅಪರಿಚಿತ ಪ್ರದೇಶದಲ್ಲಿ
ಬಿಟ್ಟಾಗ ಆತನು ದಾರಿಹೋಕನೊಬ್ಬನಿಂದ ಗಾಂಧಾರದೇಶದ ದಿಕ್ಕನ್ನು ವಿಚಾರಿಸಿ ಅವನ ಸಹಾಯದಿಂದ ಕಣ್ಣಿಗೆ
ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿಕೊಂಡು ಗಾಂಧಾರ ದೇಶದ ಕಡೆಗೆ ಹಳ್ಳಿಯಿಂದ
ಹಳ್ಳಿಗೆ ಮಾರ್ಗವನ್ನು ವಿಚಾರಿಸಿಕೊಂಡು ಕೊನೆಗೆ ತನ್ನ ದೇಶವನ್ನು ಸೇರಿಕೊಂಡನು."
ಹೀಗೆ ಉಪನಿಷತ್ತು ಯಾವ ಜ್ಞಾನವು ಮಾರ್ಗದರ್ಶಕರಿಂದ ( ಗುರುವಿನಿಂದ ) ಕಲಿಯುವೆವೋ ಅದೇ ಉತ್ತಮ ಮಾರ್ಗವೆಂದು ಒತ್ತಿ
ಒತ್ತಿ ಹೇಳುತ್ತದೆ ( ಆಚಾರದ್ದೈವ ವಿದ್ಯಾ ವಿದಿತಾ ಸಾಧಿಷ್ಟಮ್ ಪ್ರಪತಿ,
iv, ix, 3). ಮುಂಡಕ ಉಪನಿಷತ್ ಬೋಧಿಸುವುದೇನೆಂದರೆ - "ಅತ್ಯುನ್ನತ ಜ್ಞಾನಾರ್ಜನೆಗೆ ವಿದ್ಯಾರ್ಥಿಯು ಅದಕ್ಕೆ ಬೇಕಾಗುವ ಇಂಧನವನ್ನು ಕೈಯಲ್ಲಿ
ಹಿಡಿದು ವೇದ ವೇದಾಂತಗಳನ್ನರಿತ ಹಾಗೂ ಬ್ರಹ್ಮಜ್ಞಾನಿಯಾದ ಗುರುಗಳ ಬಳಿಗೆ ಹೋಗಬೇಕು."
ಈ ವಿಷಯದ ಬಗೆಗೆ ವ್ಯಾಖ್ಯಾನಿಸುತ್ತಾ ಶಂಕರರು ಹೇಳುವುದೇನೆಂದರೆ : " ಎಲ್ಲ ಗ್ರಂಥಗಳನ್ನು ಅಭ್ಯಸಿಸಿದ ಮನುಷ್ಯನೂ ಕೂಡಾ ಬ್ರಹ್ಮ
ಜ್ಞಾನವನ್ನು ಸ್ವತಂತ್ರವಾಗಿ ಅಧ್ಯಯನ ಮಾಡಲು ಆಗದು." ( ಶಾಸ್ತ್ರಗ್ನೋಪಿ
ಸ್ವಾತಂತ್ರೇಣ ಬ್ರಹ್ಮಜ್ಞಾನಾನ್ವೇಷಣಮ್ ನ ಕುರ್ಯಾತ್). ಹಾಗೆ ನೋಡಿದರೆ
ಶಾಸ್ತ್ರಗಳ ಪ್ರಕಾರ ಭಗವಂತನಿಗೂ ಹಾಗೂ ಗುರುವಿಗೂ ಯಾವುದೇ ವ್ಯತ್ಯಾಸವನ್ನು ಮಾಡಬಾರದು.
ಶ್ವೇತಾಶ್ವತರ ಉಪನಿಷತ್ತಿನ ಕೊನೆಯಲ್ಲಿ ಈ ರೀತಿಯಾಗಿ ತಿಳಿಸಲ್ಪಟ್ಟಿದೆ
- ಯಾರಿಗೆ ಭಗವಂತನಲ್ಲಿ ಅತ್ಯುತ್ತಮ ಭಕ್ತಿಯುಂಟೋ ಅವನಿಗೆ ದೈವ ಸಮಾನ ನಾದ ಗುರುವಿನ
ಬಗ್ಗೆ ಸ್ಪಷ್ಟ ಪಡಿಸಲಾಗಿದೆ. ಮತ್ತೊಂದು ವಿವರಣೆಯ ಪ್ರಕಾರ
- " ಉಪನಿಷತ್ತಿನಲ್ಲಿ ಉದ್ಧರಿಸಿಲ್ಲದ ವಿಷಯಗಳೂ ಮಾರ್ಗದರ್ಶಕನಿಗೆ
( ಗುರು) ವ್ಯಕ್ತವಾಗುತ್ತದೆ."
ಹೀಗಾಗಿ ಭಜಗೋವಿಂದಂ ಸ್ತೋತ್ರದ ಕೊನೆಯ ಶ್ಲೋಕದಲ್ಲಿ ಗುರುವಿನೆಡಗಿನ
ಭಕ್ತಿಯ ಬಗೆಗೆ ಒತ್ತನ್ನು ನೀಡಲಾಗಿದೆ. ಯಾರಿಗೆ ಈ ವಿಧದ ಭಕ್ತಿಯುಂಟೋ ಆತನು ನೇರವಾಗಿ ಮುಕ್ತಿಮಾರ್ಗವನ್ನು ತಲುಪುತ್ತಾನೆ.
ಇಲ್ಲಿ ಗುರುವು ಏನನ್ನು ಉಪದೇಶಿಸುತ್ತಾನೆ? ಆತನು ಶಿಷ್ಯನಿಗೆ
ಉಪದೇಶಿಸುವ ಸಾರವೇನೆಂದರೆ - " ನಿನ್ನ ಇಂದ್ರಿಯಗಳ ಹಾಗೂ ಮನಸ್ಸಿನ
ಮೇಲೆ ಹತೋಟಿಯನ್ನಿಟ್ಟುಕೋ ಮತ್ತು ಅವುಗಳ ಬಗ್ಗೆ ವಿವೇಚನೆಯನ್ನು ಮಾಡು ಮತ್ತು ನಿನ್ನ ಹೃದಯದಲ್ಲಿರುವ
ಅತ್ಯುನ್ನತ ಸತ್ಯತೆಯನ್ನು ಅವಲೋಕಿಸು."
|
ಸಮಾರೋಪ :
ಶಂಕರ ಭಗವತ್ಪಾದರು ನಮಗೆ ನೀಡಿರುವ ಈ ಅದ್ಭುತ ಸ್ತೋತ್ರದಲ್ಲಿ
ಜೀವನದ ಎಲ್ಲ ಅಂಶಗಳೂ ಅಡಗಿವೆ. ಸಂಗೀತವನ್ನು
ಪ್ರೀತಿಸುವವರಿಗೆ ಇದು ದೈವಿಕ ಸಂಗೀತವನ್ನು ನೀಡುತ್ತದೆ ಹಾಗೂ ಮಕ್ಕಳೂ ಸಹ ಈ ಸಂಗೀತ ಮಾಧುರ್ಯಕ್ಕೆ
ಆಕರ್ಷಿತರಾಗುತ್ತಾರೆ. ಪದ್ಯಗಳನ್ನು ಪ್ರೀತಿಸುವವರಿಗೆ ಇದು ಸೌಂದರ್ಯ
ಹಾಗೂ ತಾಳವನ್ನು ಒದಗಿಸುತ್ತದೆ. ಜ್ಞಾನಾರ್ಜನೆಯನ್ನು ಬಯಸುವವರಿಗೆ ಇದು
ಸೂಕ್ತ ಮಾರ್ಗವನ್ನು ತೋರಿಸುತ್ತದೆ. ಗೃಹಸ್ಥರಿಗೆ ಹಾಗೂ ಸಂನ್ಯಾಸಿಗಳಿಗೆ
ಮತ್ತು ಪ್ರಪಂಚವನ್ನು ಅತಿಯಾಗಿ ಪ್ರೀತಿಸುವವರಿಗೂ ಇದು ವ್ಯಾವಹಾರಿಕ ಮಾರ್ಗದರ್ಶಿ. ಈ ಸ್ತೋತ್ರದ ಸಹಾಯದಿಂದ ಓದುಗರೆಲ್ಲರೂ " ಸೋಹಮ್
" ಸ್ಥಿತಿಯನ್ನು ತಲುಪಲಿ ಎಂದು ಹಾರೈಸೋಣ.
|
ಈ ಕೆಳಗೆ ವಿವರಿಸಿರುವ ಎರಡು ಶ್ಲೋಕಗಳು ಸ್ವೀಕರಿಸಿದ ಸ್ತೋತ್ರದಲ್ಲಿರುವುದಿಲ್ಲ:
|
ಶ್ಲೋಕ - 32
ಮೂಢಃ ಕಶ್ಚನ ವೈಯಾಕರಣೋ
ಡುಃಕೃಂಕರಣಾಧ್ಯಯನಧುರೀಣಃ |
ಶ್ರೀಮಶ್ಚಂಕರಭಗವಚ್ಛಿಷ್ಯೈ -
ರ್ಬೋಧಿತ ಆಸೀಚ್ಛೋಧಿತಕರಣಃ ||
|
ಅರ್ಥವಿವರಣೆ:
ಹೀಗೆ ತಿಳಿವಿಲ್ಲದ ನಿಯಮಗಳಲ್ಲೇ ಮುಳುಗಿದ್ದ ವ್ಯಾಕರಣಕಾರನಿಗೆ
ತನ್ನ ಸಂಕುಚಿತ ದೃಷ್ಟಿಯಿಂದ ಹೊರಬಂದು ಶಂಕರರ ಪ್ರವಚನದ ಬೆಳಕನ್ನು ತೋರಲಾಯಿತು
|
ಶ್ಲೋಕ – 33
ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ |
ನಾಮಸ್ಮರಣಾದನ್ಯಮುಪಾಯಂ
ನಹಿ ಪಶ್ಯಾಮೋ ಭವಾಬ್ಧಿತರಣೇ ||
|
ಅರ್ಥವಿವರಣೆ:
ಗೋವಿಂದನ ಭಜಿಸು, ಗೋವಿಂದನ ಭಜಿಸು, ಗೋವಿಂದನ ಭಜಿಸು, ಎಲೋ ಮೂಢಾ ! ಭಗವಂತನ ನಾಮಸ್ಮರಣೆಯ ವಿನಾ ಸಂಸಾರ ಸಾಗರವನ್ನು
ದಾಟಲು ಬೇರೆ ಮಾರ್ಗವಿಲ್ಲ.
|
ಲೇಖನದ ಮೂಲ:
(ಕ್ರಮ ಸಂಖ್ಯೆ 1 ರಿಂದ 5 ವರೆಗಿನ ಪುಸ್ತಕ / ಲೇಖನಗಳಿಂದ ಆಯ್ದ ಆಂಗ್ಲ ಪುಟಗಳಿಂದ ಕನ್ನಡಕ್ಕೆ ಭಾಷಾಂತರಿಸಿದವರು - ಗುರುಪ್ರಸಾದ್ ಹಾಲ್ಕುರಿಕೆ) 1. sanskritdocuments.org 2. Bhajagovindam, Mohamudgara by Sri.Aadi Sankaracharya - Major Manohar 3. BG-ASG Notes_2014-15[BhajaGovindam].pdf 4. Shankara´s BHAJA GOVINDAM By T.M.P.MAHADEVAN, M.A., Phd. Prof. of Philosophy, University of Madras 5. Bhajagovindam or Mohamudgara of Adi Shankaracharya - A Layman´s Commentary 6. ಸವಿಗನ್ನಡ ಸ್ತೋತ್ರಚಂದ್ರಿಕ - ಶ್ರೀ.ಬಿ.ಎಸ್.ಚಂದ್ರಶೇಖರ್, ಪ್ರಕಟಣೆ ಕನ್ನಡ ಸ್ತೋತ್ರಚಂದ್ರ ಬಳಗ, ಬೆಂಗಳೂರು. ವಿ.ಸೂ. |
ಧನ್ಯವಾದಗಳು.
ReplyDelete