Saturday, June 2, 2018

ಸುಬ್ರಹ್ಮಣ್ಯ ಸ್ತೋತ್ರ



ಸುಬ್ರಹ್ಮಣ್ಯ ಸ್ತೋತ್ರ


ಪ್ರಸ್ತಾವನೆ :

ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರವು ತಿರುಚೆಂದೂರಿನ ಆರಾಧ್ಯ ದೈವವಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಕುರಿತಾಗಿ ಶಂಕರ ಭಗವತ್ಪಾದರು ರಚಿಸಿದ ಅತ್ಯಂತ ಸುಂದರ ಸ್ತೋತ್ರ. 33 ಶ್ಲೋಕಗಳಿಂದ ಕೂಡಿದ ಈ ಸ್ತೋತ್ರವು ಭುಜಂಗ ಛಂದಸ್ಸಿನ ಶೈಲಿಯಲ್ಲಿ ರಚಿತವಾಗಿದ್ದು ಸರ್ಪದ ತಿರುವುಮುರುವುಗಳ ಚಲನೆಯ ರೀತಿಯಲ್ಲಿದೆ. ಸ್ತೋತ್ರದ ತುಂಬಾ ದೈವಭಕ್ತಿ, ಉನ್ನತ ಆಧ್ಯಾತ್ಮಿಕ ಮತ್ತು ಭಾವೋತ್ಕರ್ಷತೆಯಿಂದ ಕೂಡಿದೆ.

ಈ ಸ್ತೋತ್ರವು ಹೊಗಳಿಕೆ ಪ್ರಾರ್ಥನೆ ಮತ್ತು ಧ್ಯಾನಗಳ ಫಲಪ್ರದತೆಗಳನ್ನು ಪ್ರಕಟಿಸುತ್ತದೆ. ಈ ಸ್ತೋತ್ರವನ್ನು ಅಸಾಧಾರಣ ಅರ್ಹತೆ ಹಾಗೂ ಪ್ರಶಂಸೆಯುಳ್ಳದ್ದೆಂದು ಪರಿಗಣಿಸಲಾಗಿದೆ.

ಶಂಕರಾಚಾರ್ಯರು ಎಲ್ಲ ವಿಶ್ವ ಶಕ್ತಿಗಳನ್ನೂ ಸಂಪೂರ್ಣವಾಗಿ ಆಳುವ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ ದೊರಕುವ ಅದ್ಭುತ ಅನುಭವ ಹಾಗೂ ಅಪರಿಮಿತ ಆನಂದವನ್ನು ಹಂಚಿಕೊಳ್ಳಲು ಎಲ್ಲ ಭಕ್ತರಿಗೂ ಕರೆನೀಡುತ್ತಾರೆ. ದೇವಗಣಗಳಿಗೆ ಸುಬ್ರಹ್ಮಣ್ಯ ಸ್ವಾಮಿಯು ನಿರಂಕುಶ ನಾಯಕ.

ಈ ಸ್ತೋತ್ರವನ್ನು ನಿತ್ಯವೂ ಭಕ್ತಿಯಿಂದ ಭಜಿಸಿದವರಿಗೆ ಸುಬ್ರಹ್ಮಣ್ಯನ ಸಂಪೂರ್ಣ ದೈವಾನುಗ್ರಹವು ಲಭಿಸುವುದಲ್ಲದೆ ಸಂಪೂರ್ಣ ಸಮೃದ್ಧಿ ಮತ್ತು ಪರಮಾನಂದವು ಲಭಿಸುವುದು. ಈ ಸ್ತೋತ್ರದಲ್ಲಿನ ಶಂಕರಾಚಾರ್ಯರ ಉದ್ದೇಶವೆಂದರೆ ಪ್ರತಿಯೊಬ್ಬರನ್ನೂ ಮನುಷ್ಯನ ಕಟ್ಟಕಡೆಯ ಆಶಯವಾದ ಭಗವತ್ ಸಾಕ್ಷಾತ್ಕಾರದೆಡೆಗೆ ಕರೆದೊಯ್ಯುವುದು.

ಈ ಸ್ತೋತ್ರದಲ್ಲಿ ಶಂಕರ ಭಗವತ್ಪಾದರು ಸುಬ್ರಹ್ಮಣ್ಯ ಸ್ವಾಮಿಯ ಅಮೋಘ ವೈಭವ ಮಹಿಮೆ ಮತ್ತು ಅನಂತತ್ವಗಳನ್ನು ಎರಡು ಹಂತಗಳಲ್ಲಿ ಪ್ರಕಟಿಸುತ್ತಾರೆ. ಮೊದಲನೆಯದು ಬಾಹ್ಯ  ಶಕ್ತಿ ಹಾಗೂ ಎರಡನೆಯದು ಅಂತರಂಗದ ಶಕ್ತಿಯ ಹಂತ. ಸುಗಂಧ ಪರ್ವತದಲ್ಲಿ ನೆಲಸಿದ್ದು ಸಮುದ್ರದ ಭಾರೀ ಅಲೆಗಳು ದಂಡೆಗಪ್ಪಳಿಸುತ್ತಿರುವ ಎದುರಿಗೆ ವೀಕ್ಷಿಸುತ್ತಿರುವ ಸ್ವಾಮಿಯ ಪವಿತ್ರ ದೇವಾಲಯವು ಬಾಹ್ಯ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಮತ್ತೆ ಪ್ರತಿಯೊಬ್ಬರ ಅಂತರಂಗದಲ್ಲೂ ವಾಸಿಸುವ ಸಕಲವನ್ನೂ ನಿಯಂತ್ರಿಸುವ ಪ್ರತಿಯೊಂದನ್ನೂ ಅನುಮತಿಸುವ ಭಗವಂತ ಸಂಭ್ರಮಿಸುವ ಹಾಗೂ ಪ್ರತಿಯೊಬ್ಬರ ಮನಸ್ಸನ್ನೂ ಆಳುವವ - ಅಂತರಂಗದ ನಿವಾಸಿ ಗುಹನೇ ಅಂತರಂಗದ ಶಕ್ತಿ ಹಾಗೂ ಇವನು ಎಲ್ಲರ ಬಳಿಯೂ ಹತ್ತಿರದಲ್ಲೆ ಇದ್ದು ಮಾನವನ ಆತ್ಮೀಯ ಸ್ನೇಹಿತ.

ಶ್ಲೋಕ - 1 - ಸಂಸ್ಕೃತದಲ್ಲಿ :

ಸದಾ ಬಾಲರೂಪಾಪಿ ವಿಘ್ನಾದ್ರಿಹಂತ್ರೀ
ಮಹಾದಂತಿ ವಕ್ತ್ರಾಪಿ ಪಂಚಾಸ್ಯಮಾನ್ಯಾ
ವಿಧೀಂದ್ರಾದಿಮೃಗ್ಯಾ ಗಣೇಶಾಭಿಧಾ ಮೇ
ವಿಧತ್ತಾಂ ಶ್ರಿಯಂ ಕಾಪಿ ಕಲ್ಯಾಣಮೂರ್ತಿಃ          
ಕನ್ನಡದಲ್ಲಿ :

ಬಾಲರೂಪಿದ್ದರೂ ವಿಘ್ನಗಿರಿ ಪುಡಿಗೈವೆ
ಆನೆಮೊಗ ಹೊತ್ತರೂ ಐಮೊಗನಿಗೆ ಪ್ರಿಯನೆ
ಬ್ರಹ್ಮೇಂದ್ರರರಸುವರು ಗಣೇಶ ಹೆಸರು
ಸಿರಿಸಂಪದ ಕರುಣಿಸೋ ಕಲ್ಯಾಣಮೂರ್ತಿ


ವಿವರಣೆ :

ಸಣ್ಣ ಮಗುವಾದರೂ, ಅವನು ಬೆಟ್ಟದಷ್ಟಿರುವ ಅಡೆತಡೆಗಳನ್ನು ನಾಶಮಾಡುವನು. ಆನೆಯ ಮುಖವುಳ್ಳವನಾದರೂ ಅವನು ಶಿವನಿಗೆ  ( ಪಂಚಸ್ಯ - ಸಿಂಹ ) ಅತ್ಯಂತ ಪ್ರೀತಿಪಾತ್ರನು. ಬ್ರಹ್ಮೇಂದ್ರರೂ ಅವನನ್ನೇ ಸದಾ ಕಾಣಲು ಕಾತುರರಾಗಿರುತ್ತಾರೆ. ಆ ದಯಾಳು ದೇವ ದೇವ, ವಿಘ್ನನಾಶಕ, ಏಕದಂತ, ಲಂಬೋದರ, ಗಣಪತಿಯು, ನನಗೆ ಸಂಪತ್ತಿನ ಸಹಿತ ಆಶೀರ್ವದಿಸಲಿ.


ಶ್ಲೋಕ - 2 -  ಸಂಸ್ಕೃತದಲ್ಲಿ :

ನ ಜಾನಾಮಿ ಶಬ್ದಂ ನ ಜಾನಾಮಿಚಾರ್ಥಂ
ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಮ್
ಚಿದೇಕಾ ಷಡಾಸ್ಯಾ ಹೃದಿ ದ್ಯೋತತೇ ಮೇ
ಮುಖಾನ್ನಿಃ ಸರಂತೇ ಗಿರಶ್ಚಾಪಿ ಚಿತ್ರಮ್           
ಕನ್ನಡದಲ್ಲಿ :

ಶಬ್ದಗಳನರಿಯೆ ಅವುಗಳರ್ಥಗಳನರಿಯೆ
ಪದ್ಯವನು ನಾನರಿಯೆ ಗದ್ಯವನು ಅರಿಯೆ
ಎನ್ನಾಳಮನದಲ್ಲಿ ನಿನ್ನಾರು ಮುಖ ಹೊಳೆದು
ನುಡಿಗಳಿವು ಹೊಮ್ಮುತಿಹುವೆನ್ನ ಬಾಯಿಂದ


ವಿವರಣೆ :

ನನಗೆ ಶಬ್ದಗಳ ಬಗೆಯಾಗಲಿ ಅಥವಾ ಅರ್ಥಗಳ ಬಗೆಯಾಗಲೀ ಅರಿವಿಲ್ಲ. ಗದ್ಯವಾಗಲೀ ಪದ್ಯಗಳ ಬಗೆಗಾಗಲೀ ತಿಳಿದಿಲ್ಲ. ಆದರೂ ನನ್ನ ಹೃದಯದಲ್ಲಿ ಆರು ಮುಖದ ದೈವದ ಪ್ರಜ್ಞೆಯು ಪ್ರಜ್ವಲಿಸಿ ಪ್ರಕಾಶಿಸಿದಾಗ ನನ್ನ ಬಾಯಿಂದ ಅನಾಯಾಸವಾಗಿ  ಆರುಮುಖದವನ ಬಗ್ಗೆ  ಪದಗಳು ಜಲಪಾತದಂತೆ ಹೊರಹೊಮ್ಮುವುದು.

ಶ್ಲೋಕ - 3 - ಸಂಸ್ಕೃತದಲ್ಲಿ :

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಮ್
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೇ ಲೋಕಪಾಲಮ್    
ಕನ್ನಡದಲ್ಲಿ :

ಮಯೂರವನ್ನೇರಿದವ ಮಹಾವಾಕ್ಯವರಿತವ
ಮನೋಹರ ದೇಹದವ ಮಹಾಮನದಿ ವಾಸಿಸುವ
ಮಹಿಯ ದೇವರ ದೇವ ಮಹಾವೇದ ಸಾರ
ಮಹಾದೇವನ ಸುತನೆ ನಮೋ ಲೋಕಪಾಲ


ವಿವರಣೆ :

ನವಿಲಿನ ಮೇಲೇರಿರುವ ದೇವನು ಅತೀಂದ್ರಿಯ ಸೂತ್ರಗಳನ್ನೊಳಗೊಂಡು ರಹಸ್ಯದಿಂದಾವೃತನಾಗಿದ್ದಾನೆ. ಅವನ ಸುಂದರ ಶರೀರವು ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ. ಅವನು ಉನ್ನತ ಚೇತನದ ಭಕ್ತರಲ್ಲಿ ಸದಾ ನೆಲೆಸಿರುವನು. ಪ್ರಪಂಚವನ್ನು ರಕ್ಷಿಸುವವ ಬ್ರಹ್ಮನ ದೈವ, ವೇದಗಳ ಗುರಿಯಾದ ಹಾಗೂ ಮಹಾದೇವ ಶಂಕರನ ಪ್ರೀತಿಪಾತ್ರ ಸುತನಿಗೆ ನನ್ನ ಭಕ್ತಿಪೂರ್ವಕ ಸೇವೆಗಳನ್ನು ಅರ್ಪಿಸುವೆ.


ಶ್ಲೋಕ - 4 -  ಸಂಸ್ಕೃತದಲ್ಲಿ :

ಯದಾ ಸನ್ನಿಧಾನಂ ಗತಾ ಮಾನವಾ ಮೇ
ಭವಾಂಭೋಧಿಪಾರಂ ಗತಾಸ್ತೇ ತದೈವ
ಇತಿ ವ್ಯಂಜಯನ್ ಸಿಂಧುತೀರೇ ಯ ಆಸ್ತೇ
ತಮೀಡೇ ಪವಿತ್ರಂ ಪರಾಶಕ್ತಿಪುತ್ರಮ್              
ಕನ್ನಡದಲ್ಲಿ :

ಮಾನವರು ನಿನ್ನ ಬಳಿ ಬರುತಲಿದ್ದಂತೆ
ಸಂಸಾರ ಸಾಗರವ ದಾಟಿ ಹೋದಂತೆ
ಎಂದುಲಿವ ತೆರದಲ್ಲಿ ಕಡಲ ತೀರದಲಿರುವೆ
ಭಜಿಪೆ ನಿನ್ನನು ಪವಿತ್ರ ಪರಾಶಕ್ತಿ ಪುತ್ರ


ವಿವರಣೆ :

"ಸಮುದ್ರ ತೀರದಲ್ಲಿನ ನನ್ನ ವಾಸಸ್ಥಳವನ್ನು ಭಕ್ತರು ತಲುಪಿದ ಕೂಡಲೇ ಅವರು ಸಂಸಾರ ಸಾಗರದಲ್ಲಿನ ಹೋರಾಟವನ್ನು ದಾಟಿದ್ದಾಗಿದೆ" ಎಂದು ಸುಬ್ರಹ್ಮಣ್ಯ ಸ್ವಾಮಿಯು ತನ್ನ ಸಮುದ್ರತೀರದಲ್ಲಿನ ದೇಗುಲದಿಂದ ಘೋಷಿಸುತ್ತಿರುವಂತಿದೆ. ದೈವಿಕ ಮಾತೆಯಾದ ಪಾರ್ವತಿಯ ಪವಿತ್ರ ಪುತ್ರನನ್ನು ಭಕ್ತಿಯಿಂದ ಭಜಿಸುವೆ.


ಶ್ಲೋಕ  - 5 - ಸಂಸ್ಕೃತದಲ್ಲಿ :

ಯಥಾಬ್ಧೇಸ್ತರಂಗಾ ಲಯಂ ಯಾಂತಿ ತುಂಗಾಃ
ತಥೈವಾಪದಃ ಸಂನಿಧೌ ಸೇವತಾಂ ಮೇ
ಇತೀವೋರ್ಮಿಪಂಕ್ತೀರ್ನೃಣಾಂ ದರ್ಶಯಂತಂ
ಸದಾ ಭಾವಯೇ ಹೃತ್ಸರೋಜೇ ಗುಹಂ ತಮ್   
ಕನ್ನಡದಲ್ಲಿ :

ಕಡಲಲೆದ್ದ ತರಂಗಗಳಲ್ಲೆ ಲಯವಪ್ಪಂತೆ
ಎನ್ನ ಸನ್ನಿಧಿಗೆ ಬರುವರಾಪದಗಳು
ಎಂದು ನರರಿಗೆ ಕಡಲ ತೆರೆಸಾಲು ತೋರಿಸುವೆ
ಹೃದಯ ಕಮಲದಿ ಗುಹನೆ ನಿನ್ನ ಧ್ಯಾನಿಸುವೆ


ವಿವರಣೆ :

" ಸಾಗರದಲ್ಲಿ ಅಲೆಗಳು ಹುಟ್ಟುತ್ತವೆ ನಂತರ ಅವುಗಳು ತೀರಕ್ಕೆ ಜಾರಿ ನಂತರ ನೊರೆಯಾಗಿ ನೀರಿನಲ್ಲೇ ಸೇರಿಹೋಗುತ್ತವೆ". ಭಗವಂತನು ಈ ರೀತಿಯಾಗಿ ಹೇಳುವಂತಿದೆ. ನನ್ನ ಹೃದಯಾಂತರಾಳದಲ್ಲಿ ಭಗವಂತನನ್ನು ಸದಾ ಧ್ಯಾನಿಸುವಂತಾಗಲಿ.


ಶ್ಲೋಕ - 6 -  ಸಂಸ್ಕೃತದಲ್ಲಿ :

ಗಿರೌ ಮನ್ನಿವಾಸೇ ನರಾ ಯೇsಧಿರೂಢಾಃ
ತದಾ ಪರ್ವತೇ ರಾಜತೇ ತೇsಧಿರೂಢಾಃ
ಇತೀವ ಬ್ರುವನ್ ಗಂಧಶೈಲಾಧಿರೂಢಃ
ಸ ದೇವೋ ಮುದೇ ಮೇ ಸದಾ ಷಣ್ಮುಖೋsಸ್ತು    
ಕನ್ನಡದಲ್ಲಿ :

ಎನ್ನ ನೆಲೆಯಿರುವ ಗಿರಿಯನೇರುವ ಜನರು
ರಜತಗಿರಿ ಕೈಲಾಸವೇರಿದಂತವರು
ಗಂಧಶೈಲವನೇರಿ ಇಂತು ಪೇಳುವ ದೇವ
ಷಣ್ಮುಖನೆ ನಿನ್ನ ಧ್ಯಾನದಲಿ ಸದಾ ರಮಿಸಲೆನ್ನಮನ


ವಿವರಣೆ :

ಆರುಮುಖದ ದೇವನು ಸದಾ ನನಗೆ ಆನಂದವನ್ನು ತರಲಿ. ಗಂಧಮಾದನ ಪರ್ವತದಲ್ಲಿ ಆಸೀನನಾಗಿರುವ ಷಣ್ಮುಖನು, ಯಾರು ತನ್ನ ಮಂದಿರಕ್ಕೆ ಬೆಟ್ಟವನ್ನು ಹತ್ತಿ ಬರುತ್ತಾರೋ ಅವರು ಕೈಲಾಸದಲ್ಲಿನ ಬೆಳ್ಳಿ ಬೆಟ್ಟವನ್ನೂ ಸಹ ಹತ್ತಿದಂತೆ ಎಂಬುದಾಗಿ ಘೋಷಿಸುತ್ತಾನೆ.

ಶ್ಲೋಕ - 7 -   ಸಂಸ್ಕೃತದಲ್ಲಿ :

ಮಹಾಂಭೋಧಿತೀರೇ ಮಹಾಪಾಪಚೋರೇ
ಮುನೀಂದ್ರಾನುಕೂಲೇ ಸುಗಂಧಾಖ್ಯಶೈಲೇ
ಗುಹಾಯಾಂ ವಸಂತಂ ಸ್ವಭಾಸಾ ಲಸಂತಂ
ಜನಾರ್ತಿಂ ಹರಂತಂ ಶ್ರಯಾಮೋ ಗುಹಂ ತಮ್    
ಕನ್ನಡದಲ್ಲಿ :

ಮಹಾಪಾಪ ಹರಿಸುತ್ತ ಮಹಾಂಬುಧಿಯ ತೀರದಲಿ
ಮುನೀಂದ್ರರಿಗನುವಪ್ಪ ಸುಗಂಧ ನಾಮ ಗಿರಿಯ
ಗಹ್ವರದಿ ವಾಸಿಪನೆ ಕಾಂತಿಯಿಂ ಪೊಳೆವವನೆ
ಜನದುಃಖ ಹರಿಸುವನೆ ಗುಹ ನಿನಗೆ ಶರಣು


ವಿವರಣೆ :

ಮಹಾ ಸಮುದ್ರತೀರದಲ್ಲಿ ಆವರಿಸಿರುವ ಸುಗಂಧ ಪರ್ವತದಲ್ಲಿ ಸ್ಥಿರವಾಗಿ ಅಂತಸ್ಥನಾಗಿರುವ, ಎಲ್ಲ ಋಷಿ ಮುನಿಗಳ ಅತ್ಯಂತ ಪ್ರೀತಿಪಾತ್ರನಾದ, ರೋಗ ರುಜಿನಗಳಿಂದ ಮುಕ್ತಿಗೊಳಿಸುವ, ಅಪ್ರತಿಮ ಕಾಂತಿಯಿಂದ ಪ್ರಜ್ವಲಿಸುವ, ಗುಹನನ್ನು ನಾನು ಅನ್ವೇಷಿಸುತ್ತೇನೆ.


ಶ್ಲೋಕ - 8 -  ಸಂಸ್ಕೃತದಲ್ಲಿ :

ಲಸತ್ಸ್ವರ್ಣಗೇಹೇ ನೃಣಾಂ ಕಾಮದೋಹೇ
ಸುಮಸ್ತೋಮಸಂಛನ್ನಮಾಣಿಕ್ಯಮಂಚೇ
ಸಮುದ್ಯತ್ಸಹಸ್ರಾರ್ಕತುಲ್ಯಪ್ರಕಾಶಂ
ಸದಾ ಭಾವಯೇ ಕಾರ್ತಿಕೇಯಂ ಸುರೇಶಮ್    
ಕನ್ನಡದಲ್ಲಿ :

ಹೊಳೆವ ಸ್ವರ್ಣಗೃಹದಿ ಭಕ್ತರಪೇಕ್ಷಿತವನಿತ್ತು
ಹೂ ರಾಶಿಯಿಂ ಶೋಭಿಸುವ ಮಾಣಿಕ್ಯ ಪೀಠದಲಿ
ಸಾಸಿರಾರ್ಕ ಸಮಾನ ಕಾಂತಿಯಿಂ ಬೆಳಗುವ
ಸುರೇಶನಂ ನಿರುತ ನೆನೆವನು ಕಾರ್ತಿಕೇಯನನು


ವಿವರಣೆ :

ತನ್ನ ಬಂಗಾರದ ನಿವಾಸದಲ್ಲಿ , ಪಚ್ಚೆ ಹರಳುಗಳಿಂದಾವೃತ ವಾದ ಪೀಠದಲ್ಲಿ ಆಸೀನನಾಗಿ, ಸುಗಂಧ ಪುಷ್ಪಗಳಿಂದ ಸಿಂಪಡಿಸಲ್ಪಟ್ಟ, ಸಾವಿರ ಸೂರ್ಯರ ಉಜ್ವಲತೆಯನ್ನೂ ಮೀರಿದ ಪ್ರಕಾಶವುಳ್ಳ ಕಾರ್ತಿಕೇಯನು ಬೇಡಿಕೊಳ್ಳುವ ಮರ್ತ್ಯರ ಎಲ್ಲ ಕೋರಿಕೆಗಳನ್ನೂ ಈಡೇರಿಸುತ್ತಾನೆ. ದೇವಲೋಕದ ದೊರೆಯಾದ ಕಾರ್ತಿಕೇಯನನ್ನು ನಾನು ಸದಾ ಧ್ಯಾನಿಸುತ್ತೇನೆ.

ಶ್ಲೋಕ - 9 -  ಸಂಸ್ಕೃತದಲ್ಲಿ :

ರಣದ್ಧಂಸಕೇ ಮಂಜುಲೇsತ್ಯಂತಶೋಣೇ
ಮನೋಹಾರಿಲಾವಣ್ಯಪೀಯೂಷಪೂರ್ಣೇ
ಮನಃಷಟ್ಪದೋ ಮೇ ಭವಕ್ಲೇಶತಪ್ತಃ
ಸದಾ  ಮೋದತಾಂ ಸ್ಕಂದ ತೇ ಪಾದಪದ್ಮೇ       
ಕನ್ನಡದಲ್ಲಿ :

ಕಿಂಕಿಣಿಪ ಗೆಜ್ಜೆಯ ರಮ್ಯ ರಕ್ತವರ್ಣದ
ಪ್ರಿಯ ಮನೋಹರವಪ್ಪ ಅಮೃತ ರಸವುಳ್ಳ
ತವಪಾದ ಪದ್ಮದಲಿ ಸುಖಿಸುತಿರಲಿ
ಭವಕ್ಲೇಷದಿಂ ಬೆಂದೆನ್ನ ಮನ ಭೃಂಗ


ವಿವರಣೆ :

ಅಲೆದೂ ಅಲೆದೂ ಸುಸ್ತಾದ ದುಂಬಿಯಂತಿರುವ ನನ್ನ ಮನವು ಸಂಭ್ರಮಿಸುವ ಗುಲಾಬಿ ಬಣ್ಣದಿಂದ ಶೋಭಿಸುವ, ಮೃದುವಾದ, ಮನಸ್ಸನ್ನು ಸೂರೆಗೊಳ್ಳುವ ಮತ್ತು ಅಮೃತದಲ್ಲಿ ಅದ್ದಿರುವ ನಿನ್ನ ಪಾದ ಪದ್ಮಗಳಲ್ಲಿ ನೆಲೆಗೊಳ್ಳಲಿ.


ಶ್ಲೋಕ - 10 -  ಸಂಸ್ಕೃತದಲ್ಲಿ :

ಸುವರ್ಣಾಭದಿವ್ಯಾಂಬರೈರ್ಭಾಸಮಾನಾಂ
ಕ್ವಣತ್ಕಿಂಕಿಣೀಮೇಖಲಾಶೋಭ ಮಾನಾಮ್
ಲಸದ್ಧೇಮಪಟ್ಟೇನ ವಿದ್ಯೋತಮಾನಾಂ
ಕಟಿಂ ಭಾವಯೇ ಸ್ಕಂದ ತೇ ದೀಪ್ಯಮಾನಾಮ್    
ಕನ್ನಡದಲ್ಲಿ :

ಸ್ವರ್ಣಮಯ ದಿವ್ಯಾಂಬರಗಳಿಂ ಪೊಳೆವ
ನಿನದಿಸುವ ಕಿರುಗೆಜ್ಜೆ ಡಾಬಿನಿಂ ಶೋಭಿಸುವ
ರೇಶ್ಮೆ ಪತ್ತಲದ ಪ್ರಭೆಯಿಂದ ಮಿಂಚುವ
ನಿನ್ನ ನಡುವನು ನೆನೆವೆ ದೇವ ಷಣ್ಮುಖನೇ


ವಿವರಣೆ :

ನಿನ್ನ ನಡುವನ್ನು ಸುತ್ತಿರುವ ಬಂಗಾರದ ವಸ್ತ್ರ ಹಾಗೂ ಮಧುರ ನಾದವನ್ನು ಹೊರಸೂಸುವ ಘಂಟೆಗಳಿಂದ ಕೂಡಿದ ಬಂಗಾರದ ನಡುಕಟ್ಟನ್ನು ಗುರಿಯಾಗಿಟ್ಟು ಕೊಂಡು ನಾನು ಧ್ಯಾನಿಸುತ್ತೇನೆ.

ಶ್ಲೋಕ  - 11 -  ಸಂಸ್ಕೃತದಲ್ಲಿ :

ಪುಲಿಂದೇಶಕನ್ಯಾಘನಾಭೋಗತುಂಗ-
ಸ್ತನಾಲಿಂಗನಾಸಕ್ತಕಾಶ್ಮೀರರಾಗಮ್
ನಮಸ್ಯಾಮ್ಯಹಂ ತಾರಕಾರೇ ತವೋರಃ
ಸ್ವಭಕ್ತಾವನೇ ಸರ್ವದಾ ಸಾನುರಾಗಮ್         
ಕನ್ನಡದಲ್ಲಿ :

ಪುಳಿಂದ ಕನ್ಯೆ ವಳ್ಳಿಯನು ಪ್ರೇಮದಿಂದಪ್ಪಿರಲು
ತಳೆದೆ ನೀ ವಕ್ಷದಲಿ ಕೇಸರಿಯ ವರ್ಣವನು
ನಮಿಪೆ ತಾರಕಾರಿಯೆ ಮಹಾಶಕ್ತನೆ ನಿನಗೆ
ಅಂತಹುದೆ ಪ್ರೇಮವನು ನೀಡು ಭಕ್ತರಿಗೆ


ವಿವರಣೆ :

ಪುಳಿಂದ ಕನ್ಯೆಯು ನಿನ್ನನ್ನಪ್ಪಿರಲಾಗಿ ನಿನ್ನ ವಕ್ಷಸ್ಥಳವು ಬಂಗಾರದ ಬಣ್ಣದಿಂದ ಶೋಭಿಸುತ್ತಿದೆ, ನೀನು ಸದಾ ನಿನ್ನ ಭಕ್ತರ ಅಭ್ಯುದಯವನ್ನೇ ಚಿಂತಿಸುತ್ತಿರುವೆ. ಹೇ ತಾರಕಾರಿಯೇ ! ನಿನಗ ನನ್ನ ನಮನಗಳು ಹಾಗೂ ನಿನ್ನ ಭಕ್ತರಿಗೆ ಸದಾ ನಿನ್ನ ಪ್ರೇಮವನ್ನು ದಯಪಾಲಿಸು.


ಶ್ಲೋಕ - 12 - ಸಂಸ್ಕೃತದಲ್ಲಿ :

ವಿಧೌ ಕ್ಲೃಪ್ತದಂಡಾನ್ ಸ್ವಲೀಲಾಧೃತಾಂಡಾನ್
ನಿರಸ್ತೇಭಶುಂಡಾನ್ ದ್ವಿಷತ್ಕಾಲದಂಡಾನ್
ಹತೇಂದ್ರಾರಿಷಂಡಾನ್ ಜಗತ್ತ್ರಾಣಶೌಂಡಾನ್
ಸದಾ ತೇ ಪ್ರಚಂಡಾನ್ ಶ್ರಯೇ ಬಾಹುದಂಡಾನ್    
ಕನ್ನಡದಲ್ಲಿ :

ಬ್ರಹ್ಮನನು ದಂಡಿಸಿದೆ ಜಗವ ಲೀಲೆಯಿಂ ಧರಿಸಿದೆ
ಕಾಲದಂಡದೊಲಿದ್ದ ಗಜದ ಕೋರೆಯ ತರಿದೆ
ಇಂದ್ರಾದಿಗಳ ಕೊಂದ ವಿಶ್ವಾಧಾರವಹ ನಿನ್ನ
ಪ್ರಚಂಡ ಬಾಹುದಂಡಕೆ ನಿರುತ ಶರಣೆಂಬೆ


ವಿವರಣೆ :

ಆನೆಯ ಸೊಂಡಿನಂತೆ ಶಕ್ತಿಯುತವಾದ ನಿನ್ನ ಬಾಹುಗಳಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಅವುಗಳು ಶತ್ರುವನ್ನು ಸದ್ದಿಲ್ಲದಂತೆ ಮಾಡಿ ವಿಶ್ವವನ್ನು ಸಂರಕ್ಷಿಸುತ್ತದೆ ಹಾಗೂ ಬ್ರಹ್ಮನ ಗರ್ವವನ್ನು ದಂಡಿಸುವುದು.


ಶ್ಲೋಕ - 13 - ಸಂಸ್ಕೃತದಲ್ಲಿ :

ಸದಾ ಶಾರದಾಃ ಷಣ್ಮೃಗಾಂಕಾ ಯದಿ ಸ್ಯುಃ
ಸಮದ್ಯಂತ ಏವ ಸ್ಥಿತಾಶ್ಚೇತ್ಸಮಂತಾತ್
ಸದಾ ಪೂರ್ಣಬಿಂಬಾಃ ಕಲಂಕೈಶ್ಚ ಹೀನಾಃ
ತದಾ ತ್ವನ್ಮುಖಾನಾಂ ಬ್ರುವೇ ಸ್ಕಂದ ಸಾಮ್ಯಮ್    
ಕನ್ನಡದಲ್ಲಿ :
ಕಲೆಗಳೊಂದೂ ಇರದ ಪೂರ್ಣಬಿಂಬವ ಮೆರೆವ
ಆರು ಶರಶ್ಚಂದ್ರರು ತಾವೇಕಕಾಲದಲುದಿಸಿ
ಜತೆಗೂಡಿರ್ದು ಸತತ ಬೆಳಗಿದರೂ ಸ್ಕಂದ
ನಿನ್ನ ಮುಖಗಳನವು ಬರಿ ಪೋಲ್ವುವೆನ್ನುವರು


ವಿವರಣೆ :

ಛಳಿಗಾಲದ ಚಂದ್ರನು ವೃದ್ಧಿಸುವುದು ಕ್ಷೀಣಿಸದೇ ಸದಾ ಪೂರ್ಣ ಚಂದಿರನಾಗಿದ್ದರೆ ಮತ್ತು ಯಾವಾಗಲೂ ಅಸ್ತಂಗತನಾಗದೇ ಮತ್ತು ಸೌಂದರ್ಯವನ್ನು ಹಾಳುಗೆಡುವ ಕಪ್ಪುಕಲೆ ಇಲ್ಲದೇ ಇದ್ದರೆ ಆಗ ಮಾತ್ರ ಆ ಚಂದ್ರನನ್ನು ನಿನ್ನ ಸುಂದರವಾದ ಆರು ಮುಖಗಳಿಗೆ ಹೋಲಿಸಬಹುದು.


ಶ್ಲೋಕ - 14 -  ಸಂಸ್ಕೃತದಲ್ಲಿ :

ಸ್ಫುರನ್ಮಂದಹಾಸೈಃ ಸಹಂಸಾನಿ ಚಂಚ-
ತ್ಕಟಾಕ್ಷಾವಲೀಭೃಂಗಸಂಘೋಜ್ಜ್ವಲಾನಿ
ಸುಧಾಸ್ಯಂದಿಬಿಂಬಾಧರಾಣೀಶಸೂನೋ
ತವಾಲೋಕಯೇ ಷಣ್ಮುಖಾಂಭೋರುಹಾಣಿ         
ಕನ್ನಡದಲ್ಲಿ :

ಚಲಿಪ ಹಂಸಗಳಂದದ ಮಂದಹಾಸಗಳಿಂದ
ಮಿರುಗುವ ದುಂಬಿಗಳ ಗುಂಪಿನಂತಿಹ ಕಟಾಕ್ಷಗಳಿಂದ
ಅಮೃತ ಸೂಸುವ ಬಿಂಬಾಧರಗಳಿಂದೀಶಪುತ್ರನೆ
ನಿನ್ನಾರು ಮುಖಗಳನು ಕಮಲಗಳೆಂದೇ ಕಾಂಬೆ


ವಿವರಣೆ :

ಚಲಿಸುವ ಹಂಸದಂಥ ಮುಗುಳು ನಗೆಯೊಂದಿಗೆ ದುಂಬಿಗಳ ಮಾಲೆಗಳಂತಿರುವ ನೋಟ ಹಾಗೂ  ಮಿರುಗೆಂಪಿನ ಅಮೃತದಿಂದ ತುಂಬಿದ ತುಟಿಗಳಿಂದೊಡಗೂಡಿ, ಕಪ್ಪಾದ ನೋಟವನ್ನು ಚೆಲ್ಲುತ್ತಿರುವ ಷಣ್ಮುಖನೇ , ನಿನ್ನ ಆರು ಮುಖಗಳನ್ನು ಕಮಲಗಳಂತೆ ಕಂಡು ನಿನಗೆ ಶಿರಬಾಗಿ ನಮಿಸುತ್ತೇನೆ.

ಶ್ಲೋಕ - 15 - ಸಂಸ್ಕೃತದಲ್ಲಿ :

ವಿಶಾಲೇಷು ಕರ್ಣಾಂತದೀರ್ಘೇಷ್ವಜಸ್ರಂ
ದಯಾಸ್ಯಂದಿಷು ದ್ವಾದಶಸ್ವೀಕ್ಷಣೇಷು
ಮಯೀಷತ್ಕಟಾಕ್ಷಃ ಸಕೃತ್ ಪಾತಿತಶ್ಚೇತ್
ಭವೇತ್ತೇ ದಯಾಶೀಲ ಕಾ ನಾಮ ಹಾನಿಃ           
ಕನ್ನಡದಲ್ಲಿ :

ಕಿವಿವರೆಗು ದೀರ್ಘವಹ ಸುವಿಶಾಲವಪ್ಪ
ದಯೆಯ ಸೂಸುವ ದ್ವಾದಶಾಕ್ಷಿಗಳು ನಿನಗಿರಲು
ಒಮ್ಮೆ ಅವು ಎನ್ನತ್ತ ನೋಟ ಬೀರಿದೊಡೆ
ದಯಾಶೀಲ ದೇವ ನಿನಗಾವ ಹಾನಿ?


ವಿವರಣೆ :

ನಿನ್ನ ವಿಸ್ತಾರವಾದ ದ್ವಾದಶ ನೇತ್ರಗಳು ಉದ್ದವಾದ ರೆಪ್ಪೆಯಿಂದ ದಯಾಪರ ನೋಟವನ್ನು ಹರಿಸುತ್ತಿರುವುದು. ಅದರಲ್ಲಿ ಕೇವಲ ಒಂದು ಅಂಶ ನೋಟವು ನನ್ನೆಡೆಗೆ ಬೀರಿದರೆ ನಾನು ಕೃತಾರ್ಥನಾಗುತ್ತೇನೆ. ಹಾಗೆ ಮಾಡುವುದರಿಂದ ಹೇ ದಯಾಮಯ ಕಾರ್ತಿಕೇಯನೇ ನಿನಗೆ ಯಾವ ನಷ್ಟ ?


ಶ್ಲೋಕ - 16 -  ಸಂಸ್ಕೃತದಲ್ಲಿ :

ಸುತಾಂಗೋದ್ಭವೋ ಮೇsಸಿ ಜೀವೇತಿ ಷಡ್ ಧಾ
ಜಪನ್ ಮಂತ್ರಮೀಶೋ ಮುದಾ ಜಿಘ್ರತೇ ಯಾನ್
ಜಗದ್ಭಾರಭೃದ್ಭ್ಯೋ ಜಗನ್ನಾಥ ತೇಭ್ಯಃ
ಕಿರೀಟೋಜ್ಜ್ವ ಲೇಭ್ಯೋ ನಮೋ ಮಸ್ತಕೇಭ್ಯಃ       
ಕನ್ನಡದಲ್ಲಿ :

ಸುತನೆ ನೀನೆನ್ನ ದೇಹದಿಂ ಪುಟ್ಟಿದೆ,
ಬಾಳೆಂದು ಮುದದಿಂದ ಮಂತ್ರಿಸಿ ಹರಸಿದ
ಉಜ್ವಲ ಮುಕುಟಗಳಿಂದ ಸೊಗಯಿಸುವ
ಜಗದ ಭಾರವ ಹೊರುವ ನಿನ್ನ ಶಿರಗಳಿಗೆ ನಮನ


ವಿವರಣೆ :

" ನನ್ನ ಮಗುವೇ ! ನೀನು ನನ್ನಿಂದ ಜನ್ಮತಾಳಿದೆ, ದೀರ್ಘಾಯುಷ್ಮಂತನಾಗು " ಹೀಗೆ ಅರುಹಿ ನಿನ್ನ ಪಿತನು ಮಂತ್ರವನ್ನು ಆರುಬಾರಿ ನಿನ್ನ ಕಿವಿಯಲ್ಲುಸಿರಿ ನಿನ್ನ ಶಿರವನ್ನು ಪ್ರೀತಿಯಿಂದ ಮುದ್ದಿಸಿದನು. ಓ ವಿಶ್ವಾತ್ಮನೆ ! ನಿನ್ನ ಮುಕುಟದೊಳಗಿರುವ ಶಿರಗಳು ವಿಶ್ಚದ ಸಮಸ್ತ ಭಾರವನ್ನೂ ಧರಿಸಿರುವುದು. ನಿನಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ  - 17 -ಸಂಸ್ಕೃತದಲ್ಲಿ :

ಸ್ಫುರದ್ರತ್ನಕೇಯೂರಹಾರಾಭಿರಾಮಃ
ಚಲತ್ಕುಂಡಲಶ್ರೀಲಸದ್ ಗಂಡಭಾಗಃ
ಕಟೌ ಪೀತವಾಸಾಃ ಕರೇ ಚಾರುಶಕ್ತಿಃ
ಪುರಸ್ತಾಮಮಾಸ್ತಾಂ ಪುರಾರೇಸ್ತನೂಜಃ            
ಕನ್ನಡದಲ್ಲಿ :

ಹೊಳೆವ ರತ್ನ ಕೇಯೂರ ಹಾರದಿಂ ಶೋಭಿಸುತ
ಕದಪುಗಳಲೋಲಾಡುವ ಕರ್ಣಕುಂಡಲಗಳೊಡನೆ
ಕಟಿಯ ಪೀತವಸ್ತ್ರ ಕರದ ವೇಲಾಯುಧ ಸಹಿತ
ತ್ರಿಪುರಾರಿ ಸುತನೆ ಎನ್ನೆದುರು ನಿನ್ನ ದಿವ್ಯವಪು ತೋರೋ


ವಿವರಣೆ :

ಪಚ್ಚೆ ರತ್ನಗಳಿಂದ ಕೂಡಿದ ಬಂಗಾರದ ಕಂಠಹಾರವನ್ನು ಧರಿಸಿ ಕೆನ್ನೆಗಳು ಝಗ ಝಗಿಸುವ ಕಿವಿಯೋಲೆಗಳಿಂದ ಹೊಳೆಯುತ್ತಿದ್ದು ಹಾಗೂ ಹಳದಿ ವಸ್ತ್ರವನ್ನು ಧರಿಸಿ ಕೈಯಲ್ಲಿ ಪ್ರಕಾಶಮಾನವಾದ ವೇಲಾಯುಧವನ್ನು ಹಿಡಿದು ನಿಂತಿರುವ ತ್ರಿಪುರಾರಿಯ ಸುತನೆ ನಿನ್ನ ದಿವ್ಯರೂಪವನ್ನು ನನ್ನೆದುರು ತೋರು ಹೇ ಷಣ್ಮುಖನೆ !


ಶ್ಲೋಕ - 18 -  ಸಂಸ್ಕೃತದಲ್ಲಿ :

ಇಹಾಯಾಪಿ ವತ್ಸೇತಿ ಹಸ್ತಾನ್ ಪ್ರಸಾರ್ಯಾ-
ಹ್ವಯತ್ಯಾದರಾಚ್ಛಂಕರೇ ಮಾತುರಂಕಾತ್
ಸಮುತ್ಪತ್ಯ ತಾತಂ ಶ್ರಯಂತಂ ಕುಮಾರಂ
ಹರಾಶ್ಲಿಷ್ಟಗಾತ್ರಂ ಭಜೇ ಬಾಲಮೂರ್ತಿಮ್         
ಕನ್ನಡದಲ್ಲಿ :

ಇಲ್ಲಿ ಬಾ ಮಗನೆ ಎನುತ ಹಸ್ತಗಳ ಚಾಚಿ
ಕರೆಯೆ ಶಂಕರನು ಒಡನೆ ತಾಯ ತೊಡೆಯಿಂದ
ಪುಟಿದು ತಂದೆಯ ಬಳಿಯೋಡಿ ಬಂದ ಕುಮಾರನನು
ಭಜಿಪೆ ಹರನು ತಬ್ಬಿದ ಬಾಲಮೂರ್ತಿಯನು


ವಿವರಣೆ :

ಶಿವನು " ಇಲ್ಲಿ ಬಾ ಮಗು " ಎಂದು ಪ್ರೀತಿಯಿಂದ ಕರೆದಾಗ ಕೂಡಲೇ ಝಗ್ಗೆಂದು ಅಮ್ಮನ ತೊಡೆಯಿಂದ ಹಾರಿ ಕ್ಷಣಮಾತ್ರದಲ್ಲಿ ತಂದೆಯ ಬಳಿಸಾರಿದ ಮಗುವನ್ನು ಬಿಗಿದಪ್ಪುವನು. ಇಂಥಹ ಪ್ರೀತಿಯ ಮಗುವಿಗೆ ನನ್ನ ವಂದನೆಗಳು.

ಶ್ಲೋಕ  - 19 - ಸಂಸ್ಕೃತದಲ್ಲಿ :

ಕುಮಾರೇಶಸೂನೋ ಗುಹ ಸ್ಕಂದ ಸೇನಾ-
ಪತೇ ಶಕ್ತಿಪಾಣೇ ಮಯೂರಾಧಿರೂಢ
ಪುಲಿಂದಾತ್ಮಜಾಕಾಂತ ಭಕ್ತಾರ್ತಿಹಾರಿನ್
ಪ್ರಭೋ ತಾರಕಾರೇ ಸದಾ ರಕ್ಷ ಮಾಂ ತ್ವಮ್   
ಕನ್ನಡದಲ್ಲಿ :

ಶಿವಸುತನೆ ಕುಮಾರ ಗುಹನೆ ಸ್ಕಂದನೆ
ದೇವಸೇನಾಪತಿ ಶಕ್ತಿ ಹಸ್ತ ಮಯೂರವಾಹನನೆ
ವ್ಯಾಧಪುತ್ರಿಯ ಕಾಂತ ಭಕ್ತರಳಲ ಪರಿಹರಿಸುವನೆ
ತಾರಕಾರಿಯೆ ಪ್ರಭುವೆ ಸದಾ ರಕ್ಷಿಸೆನ್ನ


ವಿವರಣೆ :

ಓ ಕುಮಾರ ಶಿವಪುತ್ರನೆ ! ದೇವತೆಗಳ ಸೇನಾಧಿಪತಿಯೆ ! ಹೇ ಮಯೂರವಾಹನನೆಹಸ್ತದಲ್ಲಿ ಶಕ್ತ್ಯಾಯುಧವನ್ನು ಧರಿಸಿರುವವನೆ ! ಬೇಟೆಗಾರನ ಪುತ್ರಿಯ ಪ್ರೇಮಿಯೆ  ಮತ್ತು ಭಕ್ತರ ಅಳಲನ್ನು ದೂರಮಾಡುವವನೆ ! ದೈತ್ಯ ತಾರಕನ ಶತ್ರುವೇ ! ನನ್ನನ್ನು ಸದಾ ಕಾಪಾಡು.


ಶ್ಲೋಕ  - 20 - ಸಂಸ್ಕೃತದಲ್ಲಿ :

ಪ್ರಶಾಂತೇಂದ್ರಿಯೇ ನಷ್ಟಸಂಜ್ಞೇ ವಿಚೇಷ್ಟೇ
ಕಫೋದ್ಗಾರಿವಕ್ತ್ರೇ ಭಯೋತ್ಕಂಪಿಗಾತ್ರೇ
ಪ್ರಯಾಣೋನ್ಮುಖೇ ಮಯ್ಯನಾಥೇ ತದಾನೀಂ
ದೃತಂ ಮೇ ದಯಾಲೋ ಭವಾಗ್ರೇ ಗುಹ ತ್ವಮ್   
ಕನ್ನಡದಲ್ಲಿ :

ಇಂದ್ರಿಯಗಳಡಗಿ ಅರಿವಳಿದು ಕ್ರಿಯೆ ನಿಂತು
ಕಫವಸುರಿಸುವ ಬಾಯಿ ಭಯದಿ ನಡುಗುವ ಮೈ
ಮರಣಶಯ್ಯೆಯೊಳಿರಲು ಅನಾಥ ನಾನಾಗ
ದಯಾಳು ನೀ ಗುಹನೆ ಎನ್ನೆದುರು ಮೈದೋರು


ವಿವರಣೆ :

ನನ್ನ ಸಮಸ್ತ ಇಂದ್ರಿಯಗಳೂ ಸ್ತಬ್ದವಾದಾಗ, ಚಲಿಸಲಸಾಧ್ಯವಾದಾಗ, ಮತ್ತು ನನ್ನ ಅರಿವಿನ ಶಕ್ತಿಯನ್ನು ಕಳೆದುಕೊಂಡಾಗ, ಕಫದಿಂದ ನನ್ನ ಸ್ವರವು ಸಂಪೂರ್ಣವಾಗಿ ಹೂತುಹೋದಾಗ, ಭಯವು ನನ್ನನ್ನು ಆವರಿಸಿದಾಗ, ನಾನು ನನ್ನ ಅಂತಿಮ ಯಾತ್ರೆಗೆ ಸಿದ್ಧನಾದಾಗ, ನನ್ನ ಕೈಬಿಡಬೇಡ, ಹೇ ಷಣ್ಮುಖನೇ ! ನನ್ನೊಡನೇ ಇರು.

ಶ್ಲೋಕ  - 21 - ಸಂಸ್ಕೃತದಲ್ಲಿ :

ಕೃತಾಂತಸ್ಯ ದೂತೇಷು ಚಂಡೇಷು ಕೋಪಾತ್
ದಹ ಚ್ಛಿಂಧಿ ಭಿಂಧೀತಿ ಮಾಂ ತರ್ಜಯತ್ಸು
ಮಯೂರಂ ಸಮಾರುಹ್ಯ ಮಾ ಭೈರಿತಿ ತ್ವಂ
ಪುರಃ ಶಕ್ತಿಪಾಣಿರ್ಮಮಾಯಾಹಿ ಶೀಘ್ರಮ್          
ಕನ್ನಡದಲ್ಲಿ :

ಯಮನದೂತರತ್ಯುಗ್ರ ಕೋಪದಿಂದ
ಸುಡು ಇವನ ಕಡಿ ಸೀಳಿವನನೆಂದು ಹೆದರಿಸಲು
ನವಿಲುವಾಹನವೇರಿ ಭಯಪಡದಿರೆಂದು
ವೇಲಾಯುಧನೆ ಸಲಹು ಬೇಗೆನ್ನ ಬಳಿ ಬಂದು


ವಿವರಣೆ :

ಉಗ್ರರಾದ ಯಮನ ಸೇವಕರು ನನ್ನನ್ನುದ್ದೇಶಿಸಿ  "ಅವನನ್ನು ಬಡಿಯಿರಿ, ಅವನ ಕಾಲನ್ನು ಮುರಿಯಿರಿ, ಅವನನ್ನು ಸುಡಿ " ಎಂದು ಬೆದರಿಸಿದಾಗ ದಯಮಾಡಿ ಕೂಡಲೇ ನೀನು ನಿನ್ನ ಮಯೂರವಾಹನವನ್ನೇರಿ ಧಾವಿಸಿ ನನ್ನೆಡೆಗೆ ಬಂದು " ಭಕ್ತಾ ಹೆದರದಿರು ", ಎಂಬುದಾಗಿ ನನ್ನನ್ನು ಸಂತೈಸು.


ಶ್ಲೋಕ - 22 -  ಸಂಸ್ಕೃತದಲ್ಲಿ :

ಪ್ರಣಮ್ಯಾಸಕೃತ್ಪಾದಯೋಸ್ತೇ ಪತಿತ್ವಾ
ಪ್ರಸಾದ್ಯ ಪ್ರಭೋ ಪ್ರಾರ್ಥಯೇsನೇಕವಾರಮ್
ನ ವಕ್ತುಂ ಕ್ಷಮೋಹಂ ತದಾನೀಂ ಕೃಪಾಬ್ಧೇ
ನ ಕಾರ್ಯಾಂತಕಾಲೇ ಮನಾಗಪ್ಯುಪೇಕ್ಷಾ          
ಕನ್ನಡದಲ್ಲಿ :

ಪುಣ್ಯಮಯಿ ನಮಿಪೆ ನಿನ್ನ ಪಾದಕೆ ಬಿದ್ದು
ಅನುಗ್ರಹಿಸು ಪ್ರಭುವೆ ಮರಮರಳಿ ಪ್ರಾರ್ಥಿಸುವೆ
ಆ ಗಳಿಗೆಯಲಿ ನಾ ನುಡಿಯಲಸಮರ್ಥ ಕೃಪಾಳು
ಅಂತ್ಯ ಕಾಲದೆಲೆನ್ನ ಕಡೆಗಣಿಸಬೇಡ


ವಿವರಣೆ :

ನಾನು ನಿನ್ನ ಪಾದಗಳಿಗೆ ಸದಾ ಎರಗಿ ಶರಣು ಬರುವೆನುಏಕೆಂದರೆ ನನ್ನ ಅಂತ್ಯ ಸಮಯದಲ್ಲಿ ನಾನು ನಿನ್ನನ್ನು ನೆನೆಯಲು ಅಸಮರ್ಥನಾಗಬಹುದು. ನನ್ನನ್ನು ದಯಮಾಡಿ ರಕ್ಷಿಸು, ಒಂದು ಕ್ಷಣ ಕೂಡಾ ನನ್ನನ್ನು ಕಡೆಗಣಿಸಬೇಡ, ಓ ಕಾರ್ತೀಕನೇ !

ಶ್ಲೋಕ - 23 -  ಸಂಸ್ಕೃತದಲ್ಲಿ :

ಸಹಸ್ರಾಂಡಭೋಕ್ತಾ ತ್ವಯಾ ಶೂರನಾಮಾ
ಹತಸ್ತಾರಕಃ ಸಿಂಹವಕ್ತ್ರಶ್ಚ ದೈತ್ಯಃ
ಮಮಾಂತರ್ಹೃದಿಸ್ಥಂ ಮನಃಕ್ಲೇಶಮೇಕಂ
ನ ಹಂಸಿ ಪ್ರಭೋ ಕಿಂ ಕರೋಮಿ ಕ್ವ ಯಾಮಿ      
ಕನ್ನಡದಲ್ಲಿ :

ಸಹಸ್ರ ಲೋಕಗಳಾಳ್ದ ಶೂರ ಪದ್ಮಾಸುರನ
ತಾರಕ ಸಿಂಹವಕ್ತ್ರರೆನುವ ರಕ್ಕಸರ ಕೊಂದೆ
ನನ್ನ ಹೃದಯದೊಳಿದ್ದು ಮನದಳಲನೊಂದನು
ನೀಗದಿದ್ದರೆ ಪ್ರಭುವೆ ನಾನೆಲ್ಲಿ ಹೋಗಲಿ ಮಾಡಲೇನು ?


ವಿವರಣೆ :

ಸಾವಿರ ಲೋಕಗಳನ್ನು ಆಳಿದ ದುಷ್ಟ ಸುರಪದ್ಮನನ್ನು ನೀನು ಸಂಹರಿಸಿದೆ. ನೀನು ತಾರಕ ಹಾಗೂ ಸಿಂಹವಕ್ತ್ರರನ್ನು ನಾಶಮಾಡಿದೆ. ನನ್ನ ಒಂದೇ ಒಂದು ದುಃಖವನ್ನು ದೂರಮಾಡಲಾರೆಯಾ ? ನಾನೇನು ಮಾಡಲಿ ಎಲ್ಲಿಗೆ ಹೋಗಲಿ ? ಹೇ ದೇವನೆ !


ಶ್ಲೋಕ - 24 -  ಸಂಸ್ಕೃತದಲ್ಲಿ :

ಅಹಂ ಸರ್ವದಾ ದುಃಖಭಾರಾವಸನ್ನೋ
ಭವಾನ್ ದೀನಬಂಧುಸ್ತ್ವದನ್ಯಂ ನ ಯಾಚೇ
ಭವದ್ಭಕ್ತಿರೋಧಂ ಸದಾ ಕ್ಲೃಪ್ತಬಾಧಂ
ಮಮಾಧಿಂ ದ್ರುತಂ ನಾಶಯೋsಮಾಸುತ ತ್ವಮ್    
ಕನ್ನಡದಲ್ಲಿ :

ಸದಾ ದುಃಖ ಭಾರದಲಿ ಕುಸಿದಿಹೆನು ನಾನು
ದೀನ ಬಂಧುವೆ ನಿನ್ನ ಕೇಳೆನಿನ್ನೇನು
ನಿನ್ನ ಭಕ್ತಿಗೆ ಸದಾ ತಡೆಗಳೊಡ್ಡುವುದೆ ಎನ್ನ ದುಃಖ
ಬೇಗ ನಾಶವ ಮಾಡೋ ಉಮಾಪುತ್ರ ನೀನು


ವಿವರಣೆ :

ನಾನು ಸದಾ ದುಃಖದಿಂದ ಕುಸಿದುಹೋಗಿರುವೆ. ನೀನು ದುಃಖದಿಂದ ಪೀಡಿತರಾಗಿರುವವರನ್ನು ರಕ್ಷಿಸುವೆ. ನಾನು ಬೇರಾರನ್ನೂ ಬೇಡುವುದಿಲ್ಲ. ನನ್ನ ಅನನ್ಯ ಭಕ್ತಿಗೆ ನಾನು ಅನುಭವಿಸುತ್ತಿರುವ ದುಃಖವು ಅಡ್ಡಬಂದಿದೆ. ಹೇ ಉಮಾಸುತನೆದೀನಬಂಧುವೇ ! ನನ್ನ ಹೃದಯವನ್ನಾವರಿಸಿರುವ ಕತ್ತಲನ್ನು ದೂರಮಾಡು.

ಶ್ಲೋಕ  - 25 - ಸಂಸ್ಕೃತದಲ್ಲಿ :

ಅಪಸ್ಮಾರಕುಷ್ಠಕ್ಷಯಾರ್ಶಃಪ್ರಮೇಹ-
ಜ್ವರೋನ್ಮಾದಗುಲ್ಮಾದಿರೋಗಾ ಮಹಾಂತಃ
ಪಿಶಾಚಾಶ್ಚ ಸರ್ವೇ ಭವತ್ಪತ್ರಭೂತಿಂ
ವಿಲೋಕ್ಯ ಕ್ಷಣಾತ್ ತಾರಕಾರೇ ದ್ರವಂತೇ 
ಕನ್ನಡದಲ್ಲಿ :

ಅಪಸ್ಮಾರ ಕುಷ್ಠ ಕ್ಷಯ ಜ್ವರಗಳುನ್ಮಾದ
ಅರ್ಶ ಮಧುಮೇಹ ಗುಲ್ಮಾದಿ ಹಿರಿರೋಗ
ಪ್ರೇತಪಿಶಾಚಗಣವೆಲ್ಲ ನಿನ್ನ ವಿಭೂತಿಸುತ್ತಿದೆಲೆ
ಕಂಡ ಕ್ಷಣದಲೆ ಓಡಿಪೋಪವು ತಾರಕಾರಿ


ವಿವರಣೆ :

ಕ್ಷಯ ರೋಗ ಮೂರ್ಛೆರೋಗ ಮಧುಮೇಹ ಮೂಲವ್ಯಾಧಿ ಜ್ವರ ಮನಸಿಕ ರೋಗ ಉದರ ಶೂಲೆಯಂಥ ಎಲ್ಲ ರೋಗಗಳೂ ನಿನ್ನ ಪವಿತ್ರ  ಭಸ್ಮವನ್ನು ಕಂಡಾಕ್ಷಣವೇ ಕಾಲ್ಕೀಳುತ್ತವೆ.


ಶ್ಲೋಕ - 26 - ಸಂಸ್ಕೃತದಲ್ಲಿ :

ದೃಶಿ ಸ್ಕಂದಮೂರ್ತಿಃ ಶ್ರುತೌ ಸ್ಕಂದಕೀರ್ತಿಃ
ಮುಖೇ ಮೇ ಪವಿತ್ರಂ ಸದಾ ತಚ್ಚರಿತ್ರಮ್
ಕರೇ ತಸ್ಯ ಕೃತ್ಯಂ ವಪುಸ್ತಸ್ಯ ಭೃತ್ಯಂ
ಗುಹೇ ಸಂತು ಲೀನಾ ಮಮಾಶೇಷಭಾವಾಃ        
ಕನ್ನಡದಲ್ಲಿ :

ನೋಟದೊಳು ಸ್ಕಂದಮೂರ್ತಿ ಕಿವಿಯಲಿ ಸ್ಕಂದ ಕೀರ್ತಿ
ಎನ್ನ ಬಾಯಲಿ ಸದಾ ನಿನ್ನ ಮಂಗಳ ಚರಿತೆ
ಕೈಗಳಿಗೆ ನಿನ್ನ ಕಾರ್ಯ ಕಾಯಕೆ ನಿನ್ನ ದಾಸ್ಯ
ಎನ್ನೆಲ್ಲ ಭಾವಗಳು ಲೀನಗೊಳಲಿ ಗುಹನಲ್ಲಿ


ವಿವರಣೆ :

ನಿನ್ನ ಸುಂದರ ರೂಪವನ್ನೆ ಸದಾ ನನ್ನ ಕಣ್ಣುಗಳು ನೋಡಲಿ. ನನ್ನ ಕಿವಿಗಳು ಸದಾ ನಿನ್ನ ಪುರಾಣಪ್ರಸಿದ್ದ ಪ್ರಖ್ಯಾತಿಯನ್ನು ಆಲಿಸಲಿ. ನನ್ನ ನಾಲಿಗೆಯು ಸದಾ ನಿನ್ನ ಪವಿತ್ರ ನಾಮಗಳನ್ನೇ ಉಚ್ಚರಿಸಲಿ. ನನ್ನ ಕರಗಳು ಸದಾ ನಿನ್ನ ಕೈಂಕರ್ಯವನ್ನೇ ಮಾಡಲಿ. ನನ್ನ ಶರೀರವು ಸದಾ ನಿನ್ನ ಸೇವೆಯಲ್ಲೇ ನಿರತವಾಗಿರಲಿ. ಹೀಗೆ ನಿನಗರ್ಪಿತವಾದ ಎಲ್ಲವೂ ಹಾಗೂ ಮನಸ್ಸೂ ನಿನ್ನಲ್ಲೇ ಲೀನವಾಗಲಿ, ಓ ಗುಹನೇ !

ಶ್ಲೋಕ - 27 -  ಸಂಸ್ಕೃತದಲ್ಲಿ :

ಮುನೀನಾಮುತಾಹೋ ನೃಣಾಂ ಭಕ್ತಿಭಾಜಾಮ್
ಅಭೀಷ್ಟಪ್ರದಾಃ ಸಂತಿ ಸರ್ವತ್ರ ದೇವಾಃ
ನೃಣಾಮಂತ್ಯಜಾನಾಮಪಿ ಸ್ವಾರ್ಥದಾನೇ
ಗುಹಾದ್ದೇವಮನ್ಯಂ ನ ಜಾನೇ ನ ಜಾನೇ          
ಕನ್ನಡದಲ್ಲಿ :

ಮುನಿಗಳಿಗೆ ತಾಪಸರಿಗೆ ಭಕ್ತ ಜನಕೆ
ಅಭೀಷ್ಟಪ್ರದರಾಗಿಹರು ದೇವರುಗಳೆಲ್ಲೆಡೆಯು
ನಿಸ್ವಾರ್ಥ ಭಾವದಂತ್ಯಜರನು ಕೂಡ
ಅನುಗ್ರಹಿಸುವಿತರ ದೇವನನು ಕಾಣೆ ನಾ ಕಾಣೆ


ವಿವರಣೆ :

ಎಲ್ಲೆಲ್ಲೂ ಸದಾ ದೇವತೆಗಳು ಋಷಿ ಮುನಿಗಳಿಗೆ ಭಕ್ತರಿಗೆ ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ. ಆದರೆ ನನಗೆ ನಿನ್ನನ್ನು ಹೊರತುಪಡಿಸಿ ದೀನ ದಲಿತರನ್ನೂ ಹಾಗೂ ಅಂತ್ಯಜರನ್ನೂ ಸಲಹುವ ಬೇರಾವ ದೈವವೂ ತಿಳಿಯದು.


ಶ್ಲೋಕ - 28 -  ಸಂಸ್ಕೃತದಲ್ಲಿ :

ಕಲತ್ರಂ ಸುತಾ ಬಂಧುವರ್ಗಃ ಪಶುರ್ವಾ
ನರೋ ವಾಥ ನಾರೀ ಗೃಹೇ ಯೇ ಮದೀಯಾಃ
ಯಜಂತೋ ನಮಂತಃ ಸ್ತುವಂತೋ ಭವಂತಂ
ಸ್ಮರಂತಶ್ಚ ತೇ ಸಂತು ಸರ್ವೇ ಕುಮಾರ           
ಕನ್ನಡದಲ್ಲಿ :

ಮಡದಿ ಮಕ್ಕಳು ಬಂಧು ಬಳಗ ಪಶು
ಗಂಡಿರಲಿ ಹೆಣ್ಣಿರಲೆನ್ನ ಮನೆಯೊಳಾರಾದರಿರಲಿ
ನಮಿಸುವರು ಸ್ತುತಿಸುವರು ಹೋಮಿಸುವರು
ಸ್ಮರಿಸುವರು ಅವರೆಲ್ಲ ನಿನ್ನನೇ ಕುಮಾರನೆ


ವಿವರಣೆ :

ಓ ದೇವನೇ ! ನನ್ನ ಪತ್ನಿ ಪುತ್ರರು ಸಂಬಂಧಿಕರು ಚರ ಸ್ವತ್ತು ಸೇವಕರು ಮನೆಮಂದಿಯು ನನ್ನದೆಂದು ಯಾವುದಿದ್ದರೂ ಅವುಗಳೆಲ್ಲವೂ ನಿನಗೆ ಪ್ರೀತಿಯಾಗಲಿ. ಅವುಗಳೆಲ್ಲವೂ ನಿನ್ನನ್ನು ಸದಾ ತಮ್ಮ ಸ್ಮೃತಿಯಲ್ಲಿರಿಸಿಕೊಳ್ಳಲಿ.


ಶ್ಲೋಕ - 29 - ಸಂಸ್ಕೃತದಲ್ಲಿ :

ಮೃಗಾಃ ಪಕ್ಷಿಣೋ ದಂಶಕಾ ಯೇ ಚ ದುಷ್ಟಾಃ
ತಥಾ ವ್ಯಾಧಯೋ ಬಾಧಕಾ ಯೇ ಮದಂಗೇ
ಭವಚ್ಛಕ್ತಿತೀಕ್ಷ್ಣಾಗ್ರಭಿನ್ನಾಃ ಸುದೂರೇ
ವಿನಶ್ಯಂತು ತೇ ಚೂರ್ಣಿತಕ್ರೌಂಚಶೈಲ            
ಕನ್ನಡದಲ್ಲಿ :

ದುಷ್ಟವಹ ಮೃಗಪಕ್ಷಿ ಕಡಿವ ಕೀಟಗಳ
ಎನ್ನಂಗಗಳ ಬಾಧಿಸುವ ವಿವಿಧ ರೋಗಗಳ
ತೀಕ್ಷ್ಣವಹ ನಿನ್ನ ವೇಲಾಯುಧದಿಂದ ಛೇದಿಸಿ
ಕಿತ್ತು ಬಿಸುಡೆಲೆ ಕ್ರೌಂಚಗಿರಿ ಹುಡಿಮಾಡಿದವನೆ


ವಿವರಣೆ :

ಓ ದೇವನೆ ! ಕ್ರೌಂಚ ಪರ್ವತವನ್ನು ಪುಡಿ ಪುಡಿ ಮಾಡಿದವನೆ, ನನ್ನನ್ನು ಬಾಧಿಸುತ್ತಿರುವ ಪ್ರಾಣಿ ಪಕ್ಷಿಗಳು ಕ್ರೂರ ಜಂತುಗಳು ಹಾಗೂ ನನ್ನ ಅಂಗಾಂಗಗಳನ್ನು ಬಾಧಿಸುತ್ತಿರುವ ನೋವುಗಳನ್ನು ನಿನ್ನ ಮೊನಚಾದ ಈಟಿಯಿಂದ ನಾಶಮಾಡುವೆಯಾ ?


ಶ್ಲೋಕ - 30 - ಸಂಸ್ಕೃತದಲ್ಲಿ :

ಜನಿತ್ರೀ ಪಿತಾ ಚ ಸ್ವಪುತ್ರಾಪರಾಧಂ
ಸಹೇತೇ ನ ಕಿಂ ದೇವಸೇನಾಧಿನಾಥ
ಅಹಂ ಚಾತಿಬಾಲೋ ಭವಾನ್ ಲೋಕತಾತಃ
ಕ್ಷಮಸ್ವಾಪರಾಧಂ ಸಮಸ್ತಂ ಮಹೇಶ     
ಕನ್ನಡದಲ್ಲಿ :

ಜನನಿ ಜನಕರು ತಮ್ಮ ಪುತ್ರರಪರಾಧವನು
ಸಹಿಸಿ ಕ್ಷಮಿಸರೆ ಹೇಳು ಸೇನಾಧಿನಾಥ ?
ನಾ ಪುಟ್ಟ ಬಾಲಕನು ಲೋಕಪಿತ ನೀನೀ
ಅಪರಾಧವೆಲ್ಲವನು ಕ್ಷಮಿಸು ಮಹೇಶ ನೀನು


ವಿವರಣೆ :

ಹೇ ದೇವಸೇನಾಧಿಪತಿಯೆ ! ಮಾತಾ ಪಿತರು ತಮ್ಮ ತಪ್ಪುಮಾಡುವ ಮಕ್ಕಳನ್ನು ಕ್ಷಮಿಸುವುದಿಲ್ಲವೇ ? ನೀನು ಇಡೀ ವಿಶ್ವವನ್ನು ಪರಿಪಾಲನೆ ಮಾಡುವ ಪ್ರಜಾಪತಿ, ನಾನು ಸಣ್ಣ ಬಾಲಕನು. ನನ್ನೆಲ್ಲ ತಪ್ಪುಗಳನ್ನೂ ಕ್ಷಮಿಸು ಹೇ ದೇವಾ !

ಶ್ಲೋಕ - 31 - ಸಂಸ್ಕೃತದಲ್ಲಿ :

ನಮಃ ಕೇಕಿನೇ ಶಕ್ತಯೇ ಚಾಪಿ ತುಭ್ಯಂ
ನಮಶ್ಛಾಗ ತುಭ್ಯಂ ನಮಃ ಕುಕ್ಕುಟಾಯ
ನಮಃ ಸಿಂಧವೇ ಸಿಂಧುದೇಶಾಯ ತುಭ್ಯಂ
ಪುನಃ ಸ್ಕಂದಮೂರ್ತೇ ನಮಸ್ತೇ ನಮೋsಸ್ತು    
ಕನ್ನಡದಲ್ಲಿ :

ನಮಿಪೆ ನಿನ್ನ ನವಿಲಿಗೆ ನಿನ್ನ ಶಕ್ತ್ಯಾಯುಧಕೆ
ನಮಿಪೆ ಛಾಗಕೆ ಕುಕ್ಕುಟಕೆ ನಮಿಪೆ
ಸಿಂಧುವೆ ಸಿಂಧುಕ್ಷೇತ್ರದವನೆ ನಮಿಪೆ
ಸ್ಕಂದ ಮೂರ್ತಿಯೆ ನಿನಗೆ ಮತ್ತೆ ನಮಿಪೆ


ವಿವರಣೆ :

ಓ ಸ್ಕಂದನೇ ! ನಿನ್ನ ವಾಹನ ಮಯೂರಿಗೆ ನಮನಗಳು, ಟಗರಿಗೆ, ನಿನ್ನ ಶಕ್ತ್ಯಾಯುಧಕ್ಕೆ ಕುಕ್ಕುಟವನ್ನೊಳಗೊಂಡ ನಿನ್ನ ಧ್ವಜಕ್ಕೆ ನಿನ್ನ ಎದುರಿಗಿರುವ ಸಮುದ್ರಕ್ಕೆ ಮತ್ತು ಸಮುದ್ರ ತೀರಕ್ಕೆ ನನ್ನ ನಮಸ್ಕಾರಗಳು. ಹೇ ದೇವನೆ ನಿನಗೆ ಪದೇ ಪದೇ ಆರಾಧನಾಪೂರ್ವಕ ನಮನಗಳು.


ಶ್ಲೋಕ  - 32 -  ಸಂಸ್ಕೃತದಲ್ಲಿ :

ಜಯಾನಂದಭೂಮನ್ ಜಯಾಪಾರಧಾಮನ್
ಜಯಾಮೋಘಕೀರ್ತೇ ಜಯಾನಂದಮೂರ್ತೇ
ಜಯಾನಂದಾಸಿಂಧೋ ಜಯಾಶೇಷಬಂಧೋ
ಜಯ ತ್ವಂ ಸದಾ ಮುಕ್ತಿದಾನೇಶಸೂನೋ          
ಕನ್ನಡದಲ್ಲಿ :

ಆನಂದ ಭೂಮನೆ ಗೆಲ್ಲು ಪಾರರಹಿತನೆ ಗೆಲ್ಲು
ಅಮೋಘಕೀರುತಿ ಗೆಲ್ಲು ಆನಂದ ಮೂರ್ತಿ ಗೆಲ್ಲು
ಆನಂದಸಾಗರನೆ ಗೆಲ್ಲು ಅಮಿತಬಂಧುವೆ ಗೆಲ್ಲು
ಗೆಲುವಿರಲಿ ನಿನಗೆಂದೆಂದು ಮುಕುತಿದಾನೇಶ ಪುತ್ರ


ವಿವರಣೆ :

ಪರಿಪೂರ್ಣ ಪರಮಾನಂದನಿಗೆ ಜಯವಾಗಲಿ. ತೀರವಿಲ್ಲದ ಅನಂತನಿಗೆ ವಂದನೆ, ಅಪಾರ ಕೀರ್ತಿವಂತನೇ ! ಪರಮಾನಂದವನ್ನುಂಟುಮಾಡುವ ನಿನ್ನ ಆಕಾರಕ್ಕೆ ವಂದನೆಗಳು, ನಿನಗೆ ಜಯವಾಗಲಿ ಓ ಆನಂದಸಾಗರನೇ ! ಹೇ ಸಮಸ್ತರ ಬಂಧುವೇ ! ನಿನಗೆ ಸದಾ ಜಯವಾಗಲಿ, ಓ ಸರ್ವ ರಕ್ಷಕನೇ ಶಿವಪುತ್ರನೆ !

ಶ್ಲೋಕ  - 33 - ಸಂಸ್ಕೃತದಲ್ಲಿ :

ಭುಜಂಗಾಖ್ಯವೃತ್ತೇನ ಕ್ಲೃಪ್ತಂ ಸ್ತವಂ ಯಃ
ಪಠೇದ್ಭಕ್ತಿಯುಕ್ತೋ ಗುಹಂ ಸಂಪ್ರಣಮ್ಯ
ಸ ಪುತ್ರಾನ್ ಕಲತ್ರಂ ಧನಂ ದೀರ್ಘಮಾಯುಃ
ಲಭೇತ್ಸ್ಕಂದಸಾಯುಜ್ಯಮಂತೇ ನರಃ ಸಹಃ        
ಕನ್ನಡದಲ್ಲಿ :

ಭುಜಂಗ ಗೀತ ರೂಪಿನೀ ಸ್ತೋತ್ರವನು
ಶಿರಬಾಗಿ ಗುಹಗೆ ನಮಿಸಿ ಭಕುತಿಯಿಂದೋದುವಗೆ
ಸಂಗಾತಿ ಪುತ್ರರು ದೀರ್ಘಾಯು ಸಂಪದವು
ಅಂತ್ಯದಲಿ ಸ್ಕಂದಸಾಯುಜ್ಯವಹುದು


ವಿವರಣೆ :

ಯಾರು ಈ ಭುಜಂಗ ತಾಳದಲ್ಲಿ ರಚಿತವಾದ ಸ್ತೋತ್ರವನ್ನು ಗುಹನಿಗೆ ಸಾಷ್ಟ್ರಾಂಗ ನಮಿಸುತ್ತಾ ಭಕ್ತಿಯಿಂದ ಪಠಿಸುತ್ತಾರೋ, ಅವರಿಗೆ ಒಳ್ಳೆಯ ಸಂಗಾತಿ ವಂಶಾಭಿವೃದ್ಧಿ ದೀರ್ಘಾಯು ಮತ್ತು ಸಂಪತ್ತು ಪ್ರಾಪ್ತವಾಗುವುದು. ಅಂತ್ಯದಲ್ಲಿ ಅವನು ಸ್ಕಂದ ಸಾಯುಜ್ಯವನ್ನು ಹೊಂದುವನು.

ಮೂಲಗಳು: ಸಂಸ್ಕೃತ ಶ್ಲೋಕಗಳು :
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
ವಿವರಣೆ : sringeri.net/2009/11/stotra/subramanya/subramanya-bhujangam.htm – ಆಂಗ್ಲ ಭಾಷೆಯಲ್ಲಿನ ವಿವರಣೆಗಳ ಭಾವಾರ್ಥಗಳನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು : ಗುರುಪ್ರಸಾದ್ ಹಾಲ್ಕುರಿಕೆ,









No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...