ಅನ್ನಪೂರ್ಣಾ ಸ್ತೋತ್ರ
|
ಪ್ರಸ್ತಾವನೆ :
ಶ್ರೀ ಅನ್ನಪೂರ್ಣಾ ಅಷ್ಟಕಮ್ ಅಥವಾ
ಅನ್ನಪೂರ್ಣಾ ಸ್ತೋತ್ರವನ್ನು ಶಂಕರ ಭಗವತ್ಪಾದರು ಮಾತೆ ಮಹಾದೇವಿ ಅನ್ನಪೂರ್ಣೇಶ್ವರಿಯನ್ನು ಕೊಂಡಾಡಿ
ಮತ್ತು ಆಕೆಯ ಕರುಣೆಯನ್ನು ಬೇಡುವ ಉದ್ದೇಶದಿಂದ ರಚಿಸಿದ್ದಾರೆ. ಅನ್ನಪೂರ್ಣೆಯು ಹೆಸರೇ ಸೂಚಿಸುವಂತೆ ಆಹಾರ ಹಾಗೂ ಪಾಕಗಳನ್ನು ಪ್ರತಿನಿಧಿಸುವ
ದೇವಿ. ಇಲ್ಲಿ ಆಹಾರವೆಂದರೆ ಬರೀ ಊಟವನ್ನು ಪ್ರತಿನಿಧಿಸುವುದಲ್ಲದೇ ಜ್ಞಾನವೂ
ಒಳಗೊಂಡಿದೆ. ದೇವಿಯ ಒಂದು ಹಸ್ತದಲ್ಲಿ ಆಹಾರವನ್ನೊಳಗೊಂಡ ಬಂಗಾರದ ಪಾತ್ರೆ
ಹಾಗೂ ಮತ್ತೊಂದು ಹಸ್ತದಲ್ಲಿ ಬಂಗಾರದ ಚಮಚ / ಸೌಟನ್ನು ತನ್ನ ಭಕ್ತರಿಗೆ
ಉಣಬಡಿಸಲು ಹಿಡಿದಿರುವಳು. ಆಕೆಗೆ ಅಪರಿಮಿತ ಭಕ್ತರಿಗೆ ಉಣಬಡಿಸಲು ಶಕ್ತಿಯಿದೆ.
ಅನ್ನಪೂರ್ಣಾಷ್ಟಕವನ್ನು ತ್ಯಾಗ, ಪೋಷಣೆ, ಜ್ಞಾನಗಳನ್ನು ಪಡೆಯುವ ಉದ್ದೇಶದಿಂದ ಪಠಿಸಲಾಗುತ್ತದೆ.
ಮಾತೆ ಅನ್ನಪೂರ್ಣೇಶ್ವರಿಯು ಪಾರ್ವತಿಯ
ಅವತಾರ. ಕೆಲವು ಚಿತ್ರಗಳಲ್ಲಿ ಭಗವಾನ್ ಶಂಕರನು
ಭಿಕ್ಷಾ ಪಾತ್ರೆಯೊಂದಿಗೆ ಅನ್ನಪೂರ್ಣೇಶ್ವರಿಯ ಬಲಭಾಗದಲ್ಲಿ ನಿಂತಿರುವುದನ್ನು ನಾವು ನೋಡಬಹುದು.
ಇದರ ಅರ್ಥ ಶಿವನು ಅನ್ನಪೂರ್ಣೆಯನ್ನು ಭಿಕ್ಷೆ ನೀಡುವಂತೆ ಪ್ರಾರ್ಥಿಸುತ್ತಿರುವುದು
ಹಾಗೂ ಎಲ್ಲರಿಗೂ ಅನಿಯಮಿತ ಆಹಾರವನ್ನು ನೀಡಲೆಂದೂ ಪ್ರಾರ್ಥಿಸುತ್ತಿರುವುದು ಹಾಗೂ ಅದರಿಂದ ಆಹಾರವನ್ನು
ಪಡೆದ ಭಕ್ತನು ಜ್ಞಾನ ಸಂಪಾದನೆ ಹಾಗೂ ಜ್ಞಾನೋದಯಕ್ಕೆ ಬೇಕಾಗುವ ಶಕ್ತಿಯನ್ನು ಪಡೆಯಬಹುದು ಎಂಬ ಉದ್ದೇಶ
ಶಿವನ ಭಂಗಿಯಲ್ಲಿ ವ್ಯಕ್ತವಾಗುತ್ತದೆ. ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ
ಸಾಮೂಹಿಕ ಭೋಜನದ ವ್ಯವಸ್ಥೆಯು ಇರುತ್ತದೋ ಅಲ್ಲಿ ಸಾಮಾನ್ಯವಾಗಿ ಅನ್ನಪೂರ್ಣೇಶ್ವರಿಯ ಭಾವಚಿತ್ರವಿದ್ದೇ
ಇರುತ್ತದೆ.
ಆಹಾರವು ಜೀವನದ ಮೂಲಭೂತ ಅವಶ್ಯಕತೆಗಳಲ್ಲೊಂದು
ಹಾಗೂ ಇದನ್ನು 'ಅನ್ನಮ್ ಬ್ರಹ್ಮ' ಎಂದು ಭಗವಂತನಿಗೆ ಹೋಲಿಸುತ್ತಾರೆ ಹಾಗೂ ಶರೀರವನ್ನು 'ಅನ್ನಮಯ-ಕೋಶ' ವೆನ್ನುತ್ತಾರೆ. ಸಾಮಾನ್ಯವಾಗಿ
ಹಿಂದೂಗಳು ಭೋಜನಕ್ಕೆ ಮುಂಚೆ ಈ ಕೆಳಗಿನ ಶ್ಲೋಕಗಳನ್ನು ಸ್ತುತಿಸುವುದು ವಾಡಿಕೆ :
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೇ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂದೇಹಿ
ಚ ಪಾರ್ವತಿ |
ಮಾತಾ ಮೇ ಪಾರ್ವತೀ ದೀವಿ ಪಿತಾ ದೇವೋ ಮಹೇಶ್ವರಃ
ಬಾಂಧವಾಃ
ಶಿವಭಕ್ತಾಶ್ಚ ಸ್ವದೇಷೋ ಭುವನತ್ರಯಮ್ ।।
ಬ್ರಹ್ಮಾರ್ಪಣಂ ಬ್ರಹ್ಮ ಹವಿ ಬ್ರಹ್ಮಾಜ್ಞೋ ಬ್ರಹ್ಮಣಾಹುತಂ|
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ
ಸಮಾಧಿನಾಮ್||
ಕಾಶೀ ನಗರದ ಒಡತಿ ಅನ್ನಪೂರ್ಣಾದೇವಿಯ
ಮುಖ್ಯ ಮಂದಿರವು ವಾರಣಾಸಿಯಲ್ಲಿನ ಕಾಶಿ ವಿಶ್ವನಾಥ ಮಂದಿರದ ಬಳಿ ಇದೆ. ಈ ಮಂದಿರವನ್ನು ಮರಾಠಾ ಮುಖ್ಯಸ್ಥ ಪೇಶ್ವ ಬಾಜೀರಾಯನು ಕ್ರಿ.ಶ.1729 ರಲ್ಲಿ ನಿರ್ಮಿಸಿದನು. ಮಂದಿರದೊಳಗಿನ
ಅನ್ನಪೂರ್ಣಾದೇವಿಯ ವಿಗ್ರಹವು ಬಂಗಾರದಿಂದ ತಯಾರಿಸಿದ್ದು ಅದರ ಒಂದು ಹಸ್ತದಲ್ಲಿ ಬಂಗಾರದ ಪಾತ್ರೆ
ಹಾಗೂ ಮತ್ತೊಂದು ಹಸ್ತದಲ್ಲಿ ಬಂಗಾರದ ಸೌಟು ಇರುವುದು. ನವರಾತ್ರೆಯಲ್ಲಿ
ಇಲ್ಲಿ ಅನ್ನಸಂತರ್ಪಣೆಯು ವಿಜೃಂಭಣೆಯಿಂದ ನಡೆಯುತ್ತದೆ.
ಅನ್ನಪೂರ್ಣೆಯ ಇತರ ನಾಮಗಳು:
ವಿಶಾಲಾಕ್ಷಿ - ವಿಶಾಲವಾದ ನೇತ್ರವುಳ್ಳವಳು
ವಿಶ್ವಶಕ್ತಿ
ವಿಶ್ವಮಾತಾ
ಸೃಷ್ಟಿಹೇತುಕಾವರದಾನಿ
ಭುವನೇಶ್ವರಿ
ರೇಣು
ಅನ್ನದಾ
ಹಿಮಾಲಯ ಪರ್ವತಶ್ರೇಣಿಯಲ್ಲಿನ 26545 ಅಡಿ ಎತ್ತರದ ಪ್ರಪಂಚದಲ್ಲೇ ಹತ್ತನೇ ಅತಿ ಎತ್ತರದ ಶಿಖರಕ್ಕೆ
ಅನ್ನಪೂರ್ಣಾ - 1 ಹಾಗೂ ಮತ್ತೊಂದು 26040 ಅಡಿ ಎತ್ತರದ ಶಿಖರಕ್ಕೆ ಅನ್ನಪೂರ್ಣಾ - 2 ಎಂದು ಮಾತಾ ಅನ್ನಪೂರ್ಣೆಯ
ಹೆಸರನ್ನು ಇಡಲಾಗಿದೆ.
ಪೌರಾಣಿಕ ಹಿನ್ನೆಲೆಯ ಪ್ರಕಾರ ಶಿವನು
ಒಮ್ಮೆ ಪಾರ್ವತಿಗೆ ಪ್ರಪಂಚವೆಲ್ಲಾ ಮಾಯೆ ಹಾಗೂ ಪಾರ್ವತಿಯು ನೀಡುವ ಆಹಾರವೂ ಪ್ರಪಂಚದ ಒಂದು ಭಾಗವಾಗಿ
ಅದೂ ಮಾಯೆಯೆಂದು ವಾದಿಸಿದನು. ಈ ವಾದದಿಂದ ಮನನೊಂದ ಪಾರ್ವತಿಯು ಹಾಗೂ
ಪ್ರಪಂಚಕ್ಕೆ ಪ್ರತಿಯೊಂದು ವಸ್ತುಗಳ ಪ್ರಾಮುಖ್ಯತೆಯನ್ನು ಮನಗಾಣಿಸಲು ಪ್ರಪಂಚದಿಂದ ಅದೃಶ್ಯಳಾದಳು.
ಮಾತೆಯ ಅನುಪಸ್ಥಿತಿಯಲ್ಲಿ ಕಾಲವು ಸ್ಥಗಿತವಾಯಿತು ಭೂಮಿಯು ಬಂಜರಾಗಿ ಕ್ಷಾಮವುಂಟಾಯಿತು.
ಎಲ್ಲಿ ನೋಡಿದರೂ ಆಹಾರವು ಕಾಣದಾಯಿತು. ಜಗತ್ತಿನ ಜೀವಿಗಳೆಲ್ಲವೂ
ಆಹಾರವಿಲ್ಲದೇ ಹಾಹಾಕಾರದ ಪರಿಸ್ಥಿತಿ ಉಂಟಾಯಿತು. ಇದನ್ನರಿತ ಮಾತೆ ಪಾರ್ವತಿಯು
ಕನಿಕರದಿಂದ ಕಾಶೀ ನಗರದಲ್ಲಿ ಪ್ರತ್ಯಕ್ಷಳಾಗಿ ಅಲ್ಲಿ ಒಂದು ಅಡುಗೆ ಮನೆಯನ್ನು ಸ್ಥಾಪಿಸಿದಳು.
ಇದನ್ನರಿತ ಭೋಲೇನಾಥ ಶಂಕರನು ಕೂಡಲೇ ಅಲ್ಲಿಗೆ ಧಾವಿಸಿ ಬಂದು ಅವಳೆದುರಿಗೆ ಭಿಕ್ಷಾಪಾತ್ರೆಯನ್ನು
ಹಿಡಿದು "ಈಗ ನನಗೆ ಪ್ರಪಂಚದಲ್ಲಿನ ಅತಿಮುಖ್ಯವಾದ ಚೇತನವಾದ ಆಹಾರವನ್ನು
ಮಾಯೆಯೆಂದು ಭಾವಿಸಲಾಗುವುದಿಲ್ಲ" ಎಂದು ನುಡಿದು ಭಿಕ್ಷೆ ನೀಡೆಂದು
ಪಾರ್ವತಿಯಲ್ಲಿ ಪ್ರಾರ್ಥಿಸುತ್ತಾನೆ. ಪಾರ್ವತಿ ಮುಗುಳು ನಗೆಯಿಂದ ಶಂಕರನಿಗೆ
ತನ್ನ ಸ್ವಹಸ್ತದಿಂದ ಆಹಾರವನ್ನು ನೀಡುತ್ತಾಳೆ. ಅಂದಿನಿಂದ ಪಾರ್ವತಿಯನ್ನು
ಅನ್ನಪೂರ್ಣೇಶ್ವರಿ ಎಂದು ಪೂಜಿಸಲಾಗುತ್ತದೆ.
ಆಗಮ (ಧಾರ್ಮಿಕ ಗ್ರಂಥ) ದಲ್ಲಿ ಅನ್ನಪೂರ್ಣೆಯನ್ನು
ಯೌವನದ ರಕ್ತವರ್ಣದ ಸೊಬಗುಳ್ಳ ದೇವತೆಯೆಂದೂ ಹಾಗೂ ಆಕೆಯ ಮುಖವು ಪೂರ್ಣ ಚಂದ್ರನಂತೆ ದುಂಡಾಗಿಯೂ
ಮೂರು ನೇತ್ರಗಳುಳ್ಳವಳೂ ನಾಲಕ್ಕು ಹಸ್ತವುಳ್ಳವಳೆಂದು ವರ್ಣಿಸಲಾಗಿದೆ. ಕೆಳಗಿನ ಎಡ ಹಸ್ತದಲ್ಲಿ ರುಚಿ ರುಚಿಯಾದ ಪಾಯಸವುಳ್ಳ ಪಾತ್ರೆಯನ್ನು ಹಿಡಿದಿರುವಳು ಮತ್ತು
ಬಲ ಹಸ್ತದಲ್ಲಿ ಬಂಗಾರದ ಸೌಟನ್ನು ಹಿಡಿದು ಅನೇಕ ವಜ್ರ ವೈಢೂರ್ಯಗಳಿಂದ ಕೂಡಿದ ಆಭರಣಗಳನ್ನು ಧರಿಸಿರುವಳು
ಹಾಗೂ ಉಳಿದ ಎರಡು ಹಸ್ತಗಳು ಅಭಯ ಹಾಗೂ ಯೋಗಮುದ್ರೆಯಲ್ಲಿ ಕಂಗೊಳಿಸುವುದೆಂದು ಬಣ್ಣಿಸಲಾಗಿದೆ.
ಮುಂದುವರೆದು ದೇವಿಯು ಬಂಗಾರದ ಸಿಂಹಾಸನದಲ್ಲಿ ಆಸೀನಳಾಗಿ ಆಕೆಯ ತಲೆಯ ಮೇಲೆ ಚಂದ್ರನು
ಸ್ಥಾಪಿತನಾಗಿರುವನು ಹಾಗೂ ಕೆಲವು ವರ್ಣನೆಯಲ್ಲಿ ಶಿವನು ಅವಳೆದುರಿಗೆ ಭಿಕ್ಷಾಪಾತ್ರೆಯನ್ನು ಹಿಡಿದು
ನಿಂತಿರುವ ಭಂಗಿಯನ್ನು ವರ್ಣಿಸಲಾಗಿದೆ.
ಆದಿ ಶಂಕರಾಚಾರ್ಯರು ತಮ್ಮ ಅನ್ನಪೂರ್ಣಾ
ಸ್ತೋತ್ರದಲ್ಲಿ ಮಾತೆ ಅನ್ನಪೂರ್ಣೆಯು ಸದಾ ಹಸ್ತದಲ್ಲಿ ಜ್ಞಾನವನ್ನು ಪ್ರತಿನಿಧಿಸುವ ಪುಸ್ತಕ ಹಾಗೂ
ಅಕ್ಷಮಾಲೆಯನ್ನು ಹಿಡಿದಿರುವಂತೆ ಮತ್ತು ಮೋಕ್ಷದ್ವಾರದ ಬಾಗಿಲನ್ನು ತೆರೆಯುವಂತೆ ಹಾಗೂ ಅದರ ಮೂಲಕ
ತಮ್ಮ ಪ್ರಾರ್ಥನೆಯು ಆಹಾರದ ಬಗ್ಗೆ ಒತ್ತು ನೀಡದೇ ಆಧ್ಯಾತ್ಮಿಕದೆಡೆಗೆ ಒಲವು ತೋರಿದ್ದಾರೆ.
ಅನ್ನಪೂರ್ಣಾದೇವಿಯನ್ನು ಅನೇಕ ಧಾರ್ಮಿಕ
ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ
- ರುದ್ರಯಮಳ, ಶಿವರಹಸ್ಯ, ಅನ್ನಪೂರ್ಣಾಮಂತ್ರತ್ಸವ, ಮಹಾ ತ್ರಿಪುರಸಿದ್ಧಾಂತ, ಅನ್ನಪೂರ್ಣಾಕವಚ, ಅನ್ನಪೂರ್ಣಾಹವಂತಿ, ಅನ್ನಪೂರ್ಣಾಮಾಲಿನಿನಕ್ಷತ್ರಮಾಲಿಕಾ ಮತ್ತು
ಭೈರ್ವಹ್ಯಾಂತಂತ್ರ ಕೃತಿಗಳು ಮುಖ್ಯವಾದವು.
ಕ್ರಿ.ಶ. 3 ಮತ್ತು 4 ನೇ ಶತಮಾನದಲ್ಲಿ ರಚಿತವಾದ ದೇವೀ ಭಾಗವತದಲ್ಲಿ ಅನ್ನಪೂರ್ಣಾ ದೇವಿಯನ್ನು ಕಾಂಚೀಪುರದ ಅಧಿದೇವತೆಯನ್ನಾಗಿ
ಹಾಗೂ ವಿಶಾಲಾಕ್ಷಿಯನ್ನು ವಾರಣಾಸಿಯ ಅಧಿದೇವತೆಯನ್ನಾಗಿ ವರ್ಣಿಸಲಾಗಿದೆ. ಕ್ರಿ.ಶ. 7 ನೇ ಶತಮಾನದ ಸ್ಕಂದ ಪುರಾಣದ
ಪ್ರಕಾರ ಶಾಪಗ್ರಸ್ತನಾದ ವ್ಯಾಸಮುನಿಯು ವಾರಣಾಸಿಗೆ ಬಂದಾಗ ಸಾಕ್ಷಾತ್ ಅನ್ನಪೂರ್ಣಾದೇವಿಯೇ ಗೃಹಿಣಿಯ
ರೂಪದಲ್ಲಿ ಬಂದು ಅವರಿಗೆ ಆಹಾರವನ್ನು ನೀಡಿದಳೆಂದು ವಿವರಿಸಲಾಗಿದೆ.
ಈ ಕೆಳಗೆ ಅನ್ನಪೂರ್ಣಾ ಸ್ತೋತ್ರವನ್ನು
ಸಂಸ್ಕೃತ ಹಾಗೂ ಕನ್ನಡದಲ್ಲಿ ಪ್ರಸ್ತುತ ಪಡಿಸಿ ಆ ಶ್ಲೋಕಗಳ ಅರ್ಥವನ್ನು ಕನ್ನಡದಲ್ಲಿ ವಿವರಿಸುವ
ಪ್ರಯತ್ನವನ್ನು ಮಾಡಿರುವೆ. ಬಹುತೇಕ ಪುಸ್ತಕಗಳಲ್ಲಿ ಅನ್ನಪೂರ್ಣಾಷ್ಟಕವೆಂದಿದ್ದರೂ
ಹತ್ತು ಶ್ಲೋಕಗಳಿರುವುದು. ಇದಲ್ಲದೇ ಮತ್ತೂ ಮೂರು ಅಪರೂಪದ ಶ್ಲೋಕಗಳನ್ನೂ
ಅದರ ಮೂಲವನ್ನು ಸ್ಮರಿಸಿ ಕೊಡಲಾಗಿದೆ.
|
ಶ್ಲೋಕ - 1- ಸಂಸ್ಕೃತದಲ್ಲಿ :
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ನಿತ್ಯಾನಂದ ಅಭಯವೀಯುವಳೆ ಸೌಂದರ್ಯದಾಸಾಗರೀ
ಸರ್ವಪಾಪ ತೊಳೆಯುವೆ ತಾಯಿ ಸಾಕ್ಷಾತ್
ಮಹೇಶ್ವರೀ
ಹೇಮಾಚಲ ವಂಶಪಾವನಿ ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಯಾರು ತನ್ನ ಭಕ್ತರಿಗೆ ಸದಾ ಆನಂದವನ್ನು
ಕರುಣಿಸುವಳೋ ಹಾಗೂ ಅದರೊಂದಿಗೆ ತನ್ನ ಮಾತೃವಿನ ಆರೈಕೆಯೊಂದಿಗೆ ನಿರ್ಭೀತಿ ಭರವಸೆಯೊಂದಿಗೆ ಅನುಗ್ರಹಗಳನ್ನು
ದಯಪಾಲಿಸುವವಳು ಸೌಂದರ್ಯದ ಖನಿ ಮತ್ತು ತನ್ನ ಸೌಂದರ್ಯದಿಂದ ಭಕ್ತರ ಮನಸ್ಸನ್ನು ಮುದಗೊಳಿಸುವ ಮಾತೆ
ಅನ್ನಪೂರ್ಣೆಗೆ ನಮಸ್ಕಾರಗಳು. ಯಾರು ತನ್ನ ದಯೆಯಿಂದ ಮತ್ತು ಆನಂದದಿಂದೊಡಗೂಡಿ
ಭಕ್ತರ ಮನಸ್ಸಿನಲ್ಲಿರುವ ನಂಜನ್ನು ಹಾಗೂ ಕಷ್ಟಗಳನ್ನು ದೂರಮಾಡಿ ಹಾಗೂ ಯಾರು ಕಾಶೀ ಪಟ್ಟಣದಲ್ಲಿ
ವ್ಯಕ್ತವಾಗುವಳೋ ಆ ಅನ್ನಪೂರ್ಣೆಗೆ ನಮನಗಳು. ಹಿಮವತ್ಪ್ರದೇಶದ ರಾಜನ ಮಗಳಾಗಿ
ಜನ್ಮತಾಳಿ ಆ ವಂಶವನ್ನು ಪವಿತ್ರಗೈದವಳು ಮತ್ತೆ ಕಾಶೀನಗರದ ಅಧಿದೇವತೆಯೇ ಓ ಅನ್ನಪೂರ್ಣೇಶ್ವರಿಯೇ
ದಯಮಾಡಿ ಭಿಕ್ಷೆಯನ್ನು ನೀಡಿ ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ಧರಿಸು.
|
ಶ್ಲೋಕ - 2 - ಸಂಸ್ಕೃತದಲ್ಲಿ :
ನಾನಾರತ್ನವಿಚಿತ್ರಭೂಷಣಕರೀ ಹೆಮಾಂಬರಾಡಂಬರೀ
ಮುಕ್ತಾಹಾರವಿಡಂಬಮಾನವಿಲಸದ್ವಕ್ಷೋಜಕುಂಭಾಂತರೀ
ಕಾಶ್ಮೀರಾಗರುವಾಸಿತಾ ರುಚಿಕರೀ
ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ:
ಥಳಥಳಿಪ ರತ್ನಭೂಷ ಧಾರಿಣಿಯೆ ಹೊನ್ನುಡೆಯ
ಮೆರೆಸುವವಳೇ
ಹೊಳೆವ ಮುಕ್ತಾಹಾರ ಪದಕ ರಾಜಿಸುವ
ವಕ್ಷಕಲಶದವಳೇ
ಕಾಶ್ಮೀರಪುರದೊಡತಿ ಮುಕ್ಕಣ್ಣನವಳೆ
ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಓ ಮಾತೆ ಅನ್ನಪೂರ್ಣೇಶ್ವರಿ ನಿನಗೆ
ವಂದನೆಗಳು. ಅನೇಕ ಬಣ್ಣಗಳ ವಜ್ರ ವೈಢೂರ್ಯಗಳಿಂದ ಮತ್ತು
ಬಂಗಾರದ ಪ್ರಕಾಶವನ್ನೊಳಗೊಂಡ ಕಣ್ಣು ಕುಕ್ಕುವ ವಸ್ತ್ರವನ್ನು ಧರಿಸಿ ಶೋಭಾಯಮಾನಳಾಗಿರುವ ಮಾತೆ.
ಮುತ್ತು ರತ್ನಗಳಿಂದೊಡಗೂಡಿದ ಹಾರವು ಥಳ ಥಳಿಸುತ್ತಾ ನಿನ್ನ ಎದೆಯ ಮಧ್ಯದಲ್ಲಿ
ಕಂಗೊಳಿಸುತ್ತಿದೆ. ಕೇಸರಿ ಹಾಗೂ ಚಂದನಗಳ ಪರಿಮಳದಿಂದ ಆವೃತವಾದ ಸುಂದರ
ಶರೀರವುಳ್ಳವಳೇ ಕಾಶೀಪುರದ ಒಡತಿಯೇ ಓ ಮಾತೆ ಅನ್ನಪೂರ್ಣೇಶ್ವರಿಯೇ ದಯಮಾಡಿ ಭಿಕ್ಷೆಯನ್ನು ನೀಡಿ
ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ದರಿಸು.
|
ಶ್ಲೋಕ - 3 - ಸಂಸ್ಕೃತದಲ್ಲಿ :
ಯೋಗಾನಂದಕರೀ ರಿಪುಕ್ಷಯಕರೀ ಧರ್ಮಾರ್ಥನಿಷ್ಠಾ
ಕರೀ
ಚಂದ್ರಾರ್ಕಾನಲಭಾಸಮಾನಲಹರೀ ತ್ರೈಲೋಕ್ಯರಕ್ಷಾಕರೀ |
ಸರ್ವೈಶ್ವರ್ಯಸಮಸ್ತವಾಂಛಿತಕರೀ
ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಯೋಗಾನಂದವನೀವೆ ವೈರಿಯ ಕೊಲ್ವೆ
ದರ್ಮಾರ್ಥನಿಷ್ಟೆ ತರುವೆ
ಚಂದ್ರಸೂರ್ಯಾಗ್ನಿಗಳಂತೆ ಹೊಳೆಯುವೆ
ಮೂಲೋಕಗಳ ರಕ್ಷಿಪೆ
ಎಲ್ಲಸಿರಿ ಬಯಸಿದುದೆಲ್ಲ ನೀಡುವೆ ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಯಾರು ಯೋಗಾನುಸಂಧಾನದ ಮೂಲಕ ಭಗವಂತನ
ಸನ್ನಿಧಿಯ ಪರಮಾನಂದವನ್ನು ಕರುಣಿಸುತ್ತಾಳೋ ಮತ್ತು ಯಾರು ಯೋಗಾನುಸಂಧಾನದ ಶತ್ರುವಾದ ಇಂದ್ರಿಯಗಳ
ಮೋಹವನ್ನು ನಾಶಪಡಿಸುತ್ತಾಳೋ ಯಾರು ನಮ್ಮನ್ನು ಧರ್ಮದೆಡೆಗೆ ಕೊಂಡೊಯ್ಯುತ್ತಾಳೋ ಹಾಗೂ ನಮ್ಮನ್ನು
ಭಗವಂತನ ಪೂಜೆಯಂತೆ ಸನ್ಮಾರ್ಗದಲ್ಲಿ ಸಂಪತ್ತನ್ನು ಸಂಪಾದಿಸಲು ಪ್ರೇರೇಪಿಸುತ್ತಾಳೋ ಆ ಮಾತೆ ಅನ್ನಪೂರ್ಣೆಯೇ ನಿನಗೆ ವಂದನೆಗಳು. ಮೂರ್ಲೋಕಗಳನ್ನೂ
(ಸ್ವರ್ಗ ಮರ್ತ್ಯ ಪಾತಾಳ) ರಕ್ಷಿಸುವ ಸೂರ್ಯ ಚಂದ್ರ
ಮತ್ತು ಅಗ್ನಿಗಳ ದೈವಿಕ ಶಕ್ತಿಯ ಅಲೆಗಳಿಂತಿರುವ ಮಾತೆ. ಭಕ್ತರಿಗೆ ಎಲ್ಲ
ಕೋರಿಕೆಗಳನ್ನೂ ಹಾಗೂ ಅಭ್ಯುದಯವನ್ನು ದಯಪಾಲಿಸುವ ಕಾಶೀನಗರದೊಡತಿಯೇ ದಯಮಾಡಿ ನಿನ್ನ ಕೃಪಾಕಟಾಕ್ಷದ
ಭಿಕ್ಷೆಯನ್ನು ಕರುಣಿಸಿ ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ಧರಿಸು ಮಾತೆ.
|
ಶ್ಲೋಕ - 4 - ಸಂಸ್ಕೃತದಲ್ಲಿ :
ಕೈಲಾಸಾಚಲಕಂದರಾಲಯಕರೀ ಗೌರೀ ಉಮಾ
ಶಂಕರೀ
ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರಬೀಜಾಕ್ಷರೀ |
ಮೋಕ್ಷದ್ವಾರಕಪಾಟಪಾಟನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಕೈಲಾಸಗಿರಿ ಗುಹಾನಿಲಯೆ ಗೌರೀ ಉಮಾಶಂಕರೀ
ಕೌಮಾರಿಯೆ ವೇದಾರ್ಥ ತೋರುವಳೆ ಓಂಕಾರ
ಬೀಜಾಕ್ಷರೀ
ಮೋಕ್ಷದ್ವಾರ ಕವಾಟವನೊಡೆವೆ ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಯಾರು ಕೈಲಾಸಪರ್ವತದ ಕಣಿವೆಗಳನ್ನೇ
ತನ್ನ ವಾಸಸ್ಥಳವನ್ನಾಗಿಸಿಕೊಂಡಿರುವಳೋ ಹಾಗೂ ಗೌರಿ ಉಮಾ ಶಂಕರಿ ಮತ್ತು ಕೌಮಾರಿ ಎಂಬ ಹೆಸರುಗಳಿಂದ
ಕರೆಯಲ್ಪಡುವಳೋ ಆ ಮಾತೆ ಶ್ರೀ ಅನ್ನಪೂರ್ಣೆಗೆ ನನ್ನ ಭಕ್ತಿಪೂರ್ವಕ ನಮನಗಳು. ಯಾರು ವೇದ ಅಥವಾ ಪವಿತ್ರವಾದ ಗ್ರಂಥಗಳ ಆಳವಾದ ಅರ್ಥವನ್ನು ತನ್ನ ಓಂಕಾರನಾದದ
ಕಂಪನಗಳ ಮೂಲಕ ದಿವ್ಯ ರೂಪದಲ್ಲಿ ವೇದ್ಯಗೊಳಿಸುತ್ತಾಳೋ ಮತ್ತು ಯಾರು ತನ್ನ ಅನುಗ್ರಹದಿಂದ ನಮ್ಮ
ಆಧ್ಯಾತ್ಮಿಕ ಹೃದಯದೊಳಗಿನ ಮೋಕ್ಷದ ದ್ವಾರದ ಬಾಗಿಲನ್ನು ಒಡೆಯುತ್ತಾಳೋ ಹಾಗೂ ಕಾಶೀಪಟ್ಟಣದೊಡತಿಯೇ
ಹೇ ಮಾತೇ ಅನ್ನಪೂರ್ಣೇಶ್ವರಿಯೇ ದಯಮಾಡಿ ನಿನ್ನ ಕೃಪಾಕಟಾಕ್ಷದ ಭಿಕ್ಷೆಯನ್ನು ಕರುಣಿಸಿ ನಿನ್ನ ಕರುಣೆಯಿಂದ
ವಿಶ್ವದ ಸಮಸ್ತರನ್ನೂ ಉದ್ಧರಿಸು ಮಾತೆ.
|
ಶ್ಲೋಕ - 5 - ಸಂಸ್ಕೃತದಲ್ಲಿ :
ದೃಶ್ಯಾದೃಶ್ಯಪ್ರಭೂತವಾಹನಕರೀ ಬ್ರಹ್ಮಾಂಡಭಾಂಡೋದರೀ
ಲೀಲಾನಾಟಕಸೂತ್ರಭೇದನಕರೀ ವಿಜ್ಞಾನದೀಪಾಂಕುರೀ |
ಶ್ರೀವಿಶ್ವೇಶಮನಃಪ್ರಸಾದನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಸೃಷ್ಟಿಯುಗಮ ಸ್ಥಿತಿಗತಿ ನಿಯಂತೃ
ಬ್ರಹ್ಮಾಂಡ ನಿನ್ನೊಡಲಲಿ
ಲೀಲಾನಾಟಕ ಸೂತ್ರ ಛೇದಿಸಿ ವಿಜ್ಞಾನ
ದೀಪ ಬೆಳಗುವೆನೀ
ಶ್ರೀವಿಶ್ವೇಶ್ವರಂಗೆ ಮನೋಲ್ಲಾಸವ
ಗೈವೆ ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಯಾರು ತನ್ನ ಪ್ರತ್ಯಕ್ಷ ಹಾಗೂ ಪರೋಕ್ಷ ದೈವೀ ಲಕ್ಷಣಗಳನ್ನು
ಹೊಂದಿರುತ್ತಾಳೋ ಮತ್ತು ತನ್ನೊಳಗೆ ಇಡೀ ವಿಶ್ವವನ್ನೇ ಅಡಗಿಸಿಕೊಂಡಿರುತ್ತಾಳೋ ಆ ದೇವೀ ಮಾತೆ ಅನ್ನಪೂರ್ಣೇಶ್ವರಿಗೆ
ಅನಂತ ನಮಸ್ಕಾರಗಳು. ಯಾರು ತನ್ನ ವಿಶೇಷ ಅನುಗ್ರಹದಿಂದ ದೈವೀ
ಕ್ರೀಡೆಯಾದ ಸೃಷ್ಟಿ ಹಾಗೂ ಆ ಮೂಲಕ ದೈವೀಕ ಜ್ಞಾನದ ದೀಪವನ್ನು ಬೆಳಗಿ ತನ್ನ ನಿಜರೂಪವನ್ನು ತೋರ್ಪಡಿಸುತ್ತಾಳೋ
ಹಾಗೂ ಶ್ರೀ ವಿಶ್ವೇಶ್ವರನ ಧ್ಯಾನದಲ್ಲಿ ಲೀನವಾಗಿರುವಳೋ ಅಂದರೆ ವಿಶ್ವಕ್ಕೆ ಅವನ ಅನುಗ್ರಹವನ್ನು
ಕರುಣಿಸುವಂತೆ ಮಾಡುವ ಕಾಶೀಪುರದೊಡತಿ ಓ ಅನ್ನಪೂರ್ಣೇಶ್ವರಿಯೇ ದಯಮಾಡಿ ನಿನ್ನ ಕೃಪಾಕಟಾಕ್ಷದ ಭಿಕ್ಷೆಯನ್ನು
ಕರುಣಿಸಿ ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ಧರಿಸು ಮಾತೆ.
|
ಶ್ಲೋಕ - 6 - ಸಂಸ್ಕೃತದಲ್ಲಿ :
ಆದಿಕ್ಷಾಂತಸಮಸ್ತವರ್ಣನಕರೀ ಶಂಭೋಸ್ತ್ರಿಭಾವಾಕಾರೀ
ಕಾಶ್ಮೀರತ್ರಿಪುರೇಶ್ವರೀ ತ್ರಿನಯನೀ
ವಿಶ್ವೇಶ್ವರೀ ಶರ್ವರೀ |
(ಕಾಶ್ಮೀರಾತ್ರಿಜಲೇಶ್ವರೀ ತ್ರಿಲಹರೀ ನಿತ್ಯಾಂಕುರಾ
ಶರ್ವರಿ)
ಸ್ವರ್ಗದ್ವಾರಕವಾಟಪಾಟನಕರೀ ಕಾಶೀಪುರಾಧೀಶ್ವರೀ
(ಕಾಮಾಕಾಂಕ್ಷಕರೀ ಜನೋದಯಕರೀ ಕಾಶೀಪುರಾಧೀಶ್ವರೀ)
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಅ ಮೊದಲು ಕ್ಷಾಂತ ವರ್ಣಗಣಕರ್ತೃ
ಶಂಭುಪ್ರಿಯೇ ಶಂಕರೀ
ಕಾಶ್ಮೀರ ತ್ರಿಪುರ ರಾಣಿ ಮುಕ್ಕಣ್ಣನವಳೆ
ವಿಶ್ವೇಶ್ವರೀ ಶರ್ವರೀ
ಸ್ವರ್ಗದ್ವಾರದ ಚಿಲಕವನೊಡೆಯುವಳೆ
ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
(ವಿ.ಸೂ. ಎರಡನೇ ಹಾಗೂ ಮೂರನೇ ಸಾಲಿನಲ್ಲಿ ಕಂಸದೊಳಗೆ ಕೊಟ್ಟಿರುವ ಸಾಲುಗಳು
ಮತ್ತೊಂದು ಸ್ತೋತ್ರದಲ್ಲಿ ಸೂಚಿಸಲಾಗಿದೆ. ಇವುಗಳ ಅರ್ಥವು
ಸುಂದರವಾಗಿ ಕಂಡುಬಂದಿದ್ದರಿಂದ ಅವುಗಳ ವಿವರಣೆಯನ್ನೂ ಶ್ಲೋಕದ
ವಿವರಣೆಯಲ್ಲಿ ಕಂಸದೊಳಗೆ ಕೊಡಲಾಗಿದೆ).
|
ವಿವರಣೆ:
ಯಾರು ತನ್ನೊಳಗಿಂದ ಸಮಸ್ತ ಅಕ್ಷರಗಳನ್ನು
ಅ ಇಂದ ಕ್ಷ ದ ವರೆಗೂ ಪ್ರಕಟಪಡಿಸುತ್ತಾಳೋ ಮತ್ತು ಶಂಭುವಿನ ಮೂರು ಭಾವಗಳಾದ ಸತ್ವ ರಜಸ್ಸು ತಮಸ್ಸು
ಕ್ರಮವಾಗಿ ವಿಶ್ವದ ಸೃಷ್ಟಿ ಸ್ಥಿತಿ ಲಯಗಳ ಭಂಡಾರವೋ ಆ ಮಾತೆ ಅನ್ನಪೂರ್ಣೇಶ್ವರಿಗೆ ನಮನಗಳು. ಯಾರು ಶಕ್ತಿಯನ್ನು ಹೋಲುವ ರಕ್ತವರ್ಣವುಳ್ಳವಳೋ ಹಾಗೂ ತ್ರಿಪುರಗಳ ಒಡತಿಯೋ
ಮತ್ತು ಮೂರು ಕಣ್ಣುಳ್ಳವಳೋ ಸಮಸ್ತ ಸ್ತ್ರೀಶಕ್ತಿಯನ್ನು ಪ್ರಕಟಿಸುವ ವಿಶ್ವೇಶ್ವರಿಯೋ
(ಯಾರು ಶಕ್ತಿಯನ್ನು ಪ್ರತಿನಿಧಿಸುವ ರಕ್ತವರ್ಣದವಳೋ
ಮತ್ತು ಮೂರೂ ಶಕ್ತಿಗಳನ್ನು ಪ್ರತಿನಿಧಿಸುವ ಮೂರು ಜಲಗಳೋ ಹಾಗೂ ಈ ಜಲಗಳು ಭೋರ್ಗರೆದು ಇಚ್ಚಾ ಜ್ಞಾನ
ಕ್ರಿಯಾ ಶಕ್ತಿಗಳ ಪ್ರತೀಕದಂತೆ ಮೂರು ಅಲೆಗಳಂತೆ ಹರಿಯುವವೋ)
ಸ್ವರ್ಗದ್ವಾರದ ಚಿಲಕವನ್ನು ಒಡೆಯುವವಳೋ
ಕಾಶೀ ನಗರದೊಡತಿ
( ಭಕ್ತರ ವಿವಿಧ ಬಯಕೆಗಳನ್ನು ಪೂರೈಸುವವಳು
ಮತ್ತು ಆಹಾರ ಹಾಗೂ ಪ್ರಾಪಂಚಿಕ ಅವಶ್ಯಕತೆಗಳನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಉತ್ತಮವಾಗಿಸುವವಳು
ಮತ್ತು ಕಾಶೀ ನಗರದ ಒಡತಿ)
ಓ ಅನ್ನಪೂರ್ಣೇಶ್ವರಿಯೇ ದಯಮಾಡಿ
ನಿನ್ನ ಕೃಪಾಕಟಾಕ್ಷದ ಭಿಕ್ಷೆಯನ್ನು ಕರುಣಿಸಿ ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ಧರಿಸು
ಮಾತೆ.
|
ಶ್ಲೋಕ - 7 - ಸಂಸ್ಕೃತದಲ್ಲಿ :
ಉರ್ವೀಸರ್ವಜನೇಶ್ವರೀ ಜಯಕರೀ ಮಾತಾ
ಕೃಪಾಸಾಗರೀ
ವೇಣೀನೀಲಸಮಾನ ಕುಂತಲಧರೀ ನಿತ್ಯಾನ್ನದಾನೇಶ್ವರೀ
ಸಾಕ್ಷಾನ್ಮೋಕ್ಷಕರೀ ಸದಾ ಶುಭಕರೀ
ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಜಗದ ಜನರೆಲ್ಲರೊಡತಿ ಜಯದಾತೆ ತಾಯೀ
ದಯಾಸಾಗರೀ
ಸುಂದರಿಯೇ ನೀಲವೇಣಿಯೆ ನಿತ್ಯಾನ್ನದಾನದೊಡತಿ
ಸಾಕ್ಷಾತ್ ಮೋಕ್ಷವನೀವಳೆ ನಿತ್ಯಮಂಗಳೆ
ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಯಾರು ಸ್ವತಃ ಭೂತಾಯಿಯೋ ಮತ್ತು
ತಾನೇ ಪ್ರತಿಯೊಂದರ ಒಡತಿಯೋ, ಯಾರನ್ನು ಭಕ್ತರು ಭಗವತೀ ಎಂದು ಕರೆಯುತ್ತಾರೋ,
ಆ ಮಾತೆ ಅನ್ನಪೂರ್ಣೇಶ್ವರಿಗೆ ಸಾಷ್ಟ್ರಾಂಗ ನಮಸ್ಕಾರಗಳು. ಯಾರ ಕಪ್ಪು ಬಣ್ಣದ ಕೇಶರಾಶಿಯು ಮನಮೋಹಕವಾಗಿ ತೂಗಾಡುತ್ತಿರುವುದೋ,
ಸ್ವತಃ ಭೂಮಿ ತಾಯಿಯಾದ ದೇವಿಯು ಸದಾ ತನ್ನ ಮಕ್ಕಳಿಗೆ ಆಹಾರವನ್ನು ದಯಪಾಲಿಸುವವಳು.
ಯಾರು ತನ್ನ ಭಕ್ತರಿಗೆ ಆನಂದವನ್ನು ನೀಡುವಳೋ ಮತ್ತು ತನ್ನ ಸದಾ ಇರುವಿಕೆಯಿಂದ
ಭಕ್ತರಿಗೆ ಒಳ್ಳೆಯ ಅದೃಷ್ಟಗಳನ್ನು ಕರುಣಿಸುವಳೋ , ಕಾಶೀ ಪಟ್ಟಣವನ್ನಾಳುವ
ಮಾತೆ ಹೇ ಅನ್ನಪೂರ್ಣೇಶ್ವರಿಯೇ ದಯಮಾಡಿ ನಿನ್ನ ಕೃಪಾಕಟಾಕ್ಷದ
ಭಿಕ್ಷೆಯನ್ನು ಕರುಣಿಸಿ ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ಧರಿಸು ಮಾತೆ.
|
ಶ್ಲೋಕ - 8 - ಸಂಸ್ಕೃತದಲ್ಲಿ :
ದೇವೀ ಸರ್ವವಿಚಿತ್ರ ರತ್ನರುಚಿರಾ
ದಾಕ್ಷಾಯಣೀ ಸುಂದರೀ
ವಾಮಾ ಸ್ವಾದುಪಯೋಧರಾ ಪ್ರಿಯಕರೀ
ಸೌಭಾಗ್ಯಮಾಹೇಶ್ವರೀ |
ಭಕ್ತಾಭೀಷ್ಟಕರೀ ಸದಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಸರ್ವರತ್ನಶೋಭಿತೆ ದೇವಿ ದಕ್ಷಸುತೆ
ಸುಂದರೀ
ಶರ್ವಸತಿ ಪಯೋಧರೆ ಪ್ರಿಯಕರಿ ಸೌಭಾಗ್ಯದೊಡತೀ
ಭಕ್ತಜನ ಕೇಳಿದನೀವ ಸರ್ವ ಶುಭಕರಿ
ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಗಳು :
ಯಾರು ಎಲ್ಲ ಬಣ್ಣಗಳ ಹರಳುಗಳಿಂದ
ನಿಬಿಡವಾಗಿ ತುಂಬಿದ ಸರಗಳಿಂದ ಶೋಭಿತಳೋ ಮತ್ತು ದಕ್ಷ ರಾಜನ ಅಪ್ರತಿಮ ಸೌಂದರ್ಯವತಿಯಾದ ಪುತ್ರಿಯೋ
ಆ ಮಾತೆ ಅನ್ನಪೂರ್ಣೇಶ್ವರಿಗೆ ನಮಸ್ಕಾರಗಳು. ಯಾರು ತನ್ನ ಎಡ ಹಸ್ತದಲ್ಲಿ ಅಮೃತವನ್ನು ತುಂಬಿದ ಕೊಡವನ್ನು ಹಿಡಿದಿರುವವಳೋ ಹಾಗೂ ಅದನ್ನು
ಪ್ರೀತಿಯಿಂದ ತನ್ನ ಕಂದಮ್ಮಗಳಿಗೆ ಹಂಚುವಳೋ ತನ್ನ ಭಕ್ತರಿಗೆ ಒಳ್ಳೆಯ ಅದೃಷ್ಟಗಳನ್ನು ತಂದುಕೊಡುವ
ಮಹಾನ್ ದೇವಿಯೋ ಯಾರು ತನ್ನ ಭಕ್ತರ ಆಸೆಗಳನ್ನು ಪೂರೈಸುವ ದೇವಿಯೋ ಮತ್ತು ಅವರಿಗೆ ಶುಭ ಹಾರೈಕೆಗಳನ್ನು
ಸದಾ ತಂದುಕೊಡುವಳೋ ಕಾಶೀನಗರವನ್ನು ಆಳುವ ಒಡತಿಯೋ ಹೇ ಅನ್ನಪೂರ್ಣೇಶ್ವರಿಯೇ ದಯಮಾಡಿ ನಿನ್ನ ಕೃಪಾಕಟಾಕ್ಷದ
ಭಿಕ್ಷೆಯನ್ನು ಕರುಣಿಸಿ ನಿನ್ನ ಕರುಣೆಯಿಂದ ವಿಶ್ವದ ಸಮಸ್ತರನ್ನೂ ಉದ್ಧರಿಸು ಮಾತೆ.
|
ಶ್ಲೋಕ -9 - ಸಂಸ್ಕೃತದಲ್ಲಿ :
ಚಂದ್ರಾರ್ಕಾನಲಕೋಟಿಕೋಟಿಸದೃಶೀ
ಚಂದ್ರಾಂಶುಬಿಂಬಾಧರೀ
ಚಂದ್ರಾರ್ಕಾಗ್ನಿ ಸಮಾನಕುಂಡಲಧರೀ
ಚಂದ್ರಾರ್ಕವರ್ಣೇಶ್ವರೀ |
ಮಾಲಾಪುಸ್ತಕಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾನ್ನಪೂರ್ಣೇಶ್ವರೀ ||
|
ಕನ್ನಡದಲ್ಲಿ :
ಚಂದ್ರರವಿಯನಲ ಕೋಟಿ ಪ್ರಭೆಯವಳೆ
ಚಂದ್ರಾಂಶದೊಲು ನಿನ್ನ ತುಟಿ
ಚಂದ್ರರವಿಯಗ್ನಿಕಾಂತಿಯ ಕಿವಿಯೋಲೆ
ಧರಿಸಿದವಳೆ ಚಂದ್ರರವಿಕಾಂತಿಯವಳೆ
ಅಕ್ಷಮಾಲೆ ಪುಸ್ತಕ ಪಾಶಾಂಕುಶಧಾರಿಣಿ
ಕಾಶೀಪುರಾಧೀಶ್ವರೀ
ಭಿಕ್ಷೆ ನೀಡು ಕೃಪೆದೋರು ತಾಯೆ
ಅನ್ನಪೂರ್ಣೇಶ್ವರೀ
|
ವಿವರಣೆ :
ಯಾರ ದಿವ್ಯ ತೇಜಸ್ಸು ಕೋಟಿ ಕೋಟಿ
ಚಂದ್ರ ಸೂರ್ಯ ಮತ್ತು ಅಗ್ನಿಗಳ ಪ್ರಭೆಯನ್ನು ಹೋಲುವುದೋ, ಯಾರ ವದನವು ಚಂದ್ರನಂತೆ ಪ್ರಕಾಶವುಳ್ಳದ್ದೋ, ಹಾಗೂ ಕರುಣೆಯಿಂದ
ಕೂಡಿದ ತಂಪಾದ ಕಿರಣಗಳನ್ನು ಪ್ರಸರಿಸುತ್ತದೋ, ಹಾಗೂ ಈ ಕಿರಣಗಳು ಅವಳ
ಕೆಂಪಾದ ತುಟಿಗಳಲ್ಲಿ ಬಿಂಬ ಹಣ್ಣನ್ನು ಹೋಲುವುದೋ ಹಾಗೆಯೇ ಯಾರ ಕೇಶವು ಸೂರ್ಯ ಚಂದ್ರ ಅಗ್ನಿಯ ಪ್ರಭೆಯಿಂದ
ಕಣ್ಣನ್ನು ಕೋರೈಸುವ ಕಾಂತಿಯಿಂದ ಕಂಗೊಳಿಸುವ ಮಹಾ ಮಾತೆಯೋ, ಹಾಗೂ
ಸೂರ್ಯ ಚಂದ್ರರ ಪ್ರಭೆಯನ್ನು ಹೊರಸೂಸುತ್ತಿರುವುದೋ, ಯಾರು ಒಂದು ಹಸ್ತದಲ್ಲಿ
ಭಗವಂತನ ನಾಮವನ್ನು ಪುನರುಚ್ಚರಿಸುವ ರೀತಿಯಲ್ಲಿ ಗುಲಾಬಿ ಪುಷ್ಪವನ್ನು ಹಿಡಿದಿರುವಳೋ,
ಮತ್ತೊಂದು ಹಸ್ತದಲ್ಲಿ ಜ್ಞಾನವನ್ನು ಪ್ರತಿನಿಧಿಸುವ ಪುಸ್ತಕವನ್ನು ಹಿಡಿದು ದೈವೀ
ಆಕರ್ಷಣೆಯನ್ನು ಪ್ರತಿನಿಧಿಸುವ ನಾಸಿಕ ಮತ್ತು ಕೊಂಡಿ ತನ್ನ ನಾಲ್ಕು ಕೈಗಳಲ್ಲಿ , ಕಾಶೀ ಪಟ್ಟಣವನ್ನಾಳುವ ಹೇ ಮಾತೆ, ಅನ್ನಪೂರ್ಣೇಶ್ವರಿಯೇ,
ದಯಮಾಡಿ ನಿನ್ನ ಕೃಪಾಕಟಾಕ್ಷದ ಭಿಕ್ಷೆಯನ್ನು ಕರುಣಿಸಿ ನಿನ್ನ ಕರುಣೆಯಿಂದ ವಿಶ್ವದ
ಸಮಸ್ತರನ್ನೂ ಉದ್ಧರಿಸು ಮಾತೆ.
|
ಶ್ಲೋಕ - 10 - ಸಂಸ್ಕೃತದಲ್ಲಿ :
ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ
ಜ್ಞಾನವೈರಾಗ್ಯಸಿಧ್ಯರ್ಥಂ ಭಿಕ್ಷಾಂ
ದೇಹಿ ಚ ಪಾರ್ವತಿ
ಮಾತಾ ಚ ಪಾರ್ವತೀದೇವೀ ಪಿತಾ ದೇವೋ
ಮಹೇಶ್ವರಃ
ಬಾಂಧವಾಃ ಶಿವಭಕ್ತಾಶ್ಚ ಸ್ವದೇಶೋ
ಭುವನತ್ರಯಮ್ ||
|
ಕನ್ನಡದಲ್ಲಿ :
ಅನ್ನಪೂರ್ಣೆಯೆ ಸದಾಪೂರ್ಣೇ ಶಂಕರನ
ಪ್ರಾಣಪ್ರಿಯೇ
ಜ್ಞಾನ ವೈರಾಗ್ಯ ಸಿದ್ಧಿಯಹ ಭಿಕ್ಷೆ
ನೀಡಮ್ಮ ಪಾರ್ವತಿ
ತಾಯೆನಗೆ ಪಾರ್ವತೀದೇವಿ ತಂದೆ ದೇವ
ಮಹೇಶ್ವರನು
ಶಿವಭಕ್ತರೆ ಬಂಧುಜನ ಸ್ವದೇಶವೇ
ಮೂರ್ಲೋಕವು
|
ವಿವರಣೆ :
ಆಹಾರ ಮತ್ತು ಆಶೀರ್ವಾದಗಳ ಉಡುಗೊರೆಯಿಂದ
ಸದಾ ತುಂಬಿರುವ ಶಂಕರನ ಪ್ರಾಣಪ್ರಿಯೆ ಓ ಮಾತೆ ಅನ್ನಪೂರ್ಣೇಶ್ವರಿಯೇ ನಿನಗೆ ಸಷ್ಟ್ರಾಂಗ ಪ್ರಣಾಮಗಳು. ಹೇ ಮಾತೆ ಪಾರ್ವತಿ ದಯಮಾಡಿ ನಿನ್ನ ಕರುಣಾಪೂರಿತ ದೃಷ್ಟಿಯಿಂದ ಬಿಕ್ಷೆ
ನೀಡು. ನನ್ನಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಜಾಗೃತಗೊಳಿಸು ಹಾಗೂ ಪ್ರಾಪಂಚಿಕ
ಆಸೆಗಳಿಂದ ಬಿಡುಗಡೆಯನ್ನು ದಯಪಾಲಿಸು.
ನನ್ನ ತಾಯಿ ದೇವಿ ಪಾರ್ವತಿಯೇ ಮತ್ತು
ನನ್ನ ತಂದೆ ದೇವ ದೇವ ಮಹಾದೇವ ಮಹೇಶ್ವರ ನಿಮಗೆ ಅನಂತಾನಂತ ಪ್ರಣಾಮಗಳು. ನನ್ನ ಸ್ನೇಹಿತರೇ ಶಿವ ಭಕ್ತರು ಮತ್ತುವ್ನನ್ನ ದೇಶವೇ ಶಿವ ಪಾರ್ವತಿಯರು
ವಾಸಿಸುವ ತ್ರಿಲೋಕಗಳು.
|
ಶ್ಲೋಕ ಹತ್ತರ ನಂತರ ಕೆಲವು ಕೃತಿಗಳಲ್ಲಿ ಈ ಕೆಳಗೆ ಪ್ರಸ್ತುತ ಪಡಿಸಿರುವ ಮೂರು ಶ್ಲೋಕಗಳನ್ನು ಸೇರಿಸಲಾಗಿದೆ. ಇವುಗಳನ್ನು 'ಆನಂದ ಕಲ್ಪತಂತ್ರ ಶೋಡಷ ಪತಲಮ್
' ನಿಂದ ಆರಿಸಲಾಗಿದೆ.
ಶ್ಲೋಕ - 12 - ಸಂಸ್ಕೃತದಲ್ಲಿ :
ಭಗವತಿ ಭವರೋಗಾತ್ಪೀಡಿತಂ ದುಷ್ಕೃತೋತ್ವಾತ್
ಸುತದುಹಿತೃಕಲತ್ರೋಪದ್ರವೇಣಾನುಯಾತಮ್ |
ವಿಲಸದಮೃತದೃಷ್ಟ್ಯಾ ವೀಕ್ಷ್ಯ ವಿಭ್ರಾಂತಚಿತ್ತಂ
ಸಕಲಭುವನಮಾತಸ್ತ್ರಾಹಿ ಮಾಮೋ ನಮಸ್ತೇ ||
ಶ್ಲೋಕ - 13 - ಸಂಸ್ಕೃತದಲ್ಲಿ:
ಮಾಹೇಶ್ವರೀಮಾಶ್ರಿತಕಲ್ಪವಲ್ಲೀ
ಮಹಂಭವೋಚ್ಛೇದಕರೀ ಭವಾನೀಮ್ |
ಕ್ಷುಧಾರ್ತಜಾಯಾತನಯಾದ್ಯುಪೇತಸ್ರ್ವಾಂ
ಅನ್ನಪೂರ್ಣೇ ಶರಣಂ ಪ್ರಪದ್ಯೇ ||
ಶ್ಲೋಕ - 14 - ಸಂಸ್ಕೃತದಲ್ಲಿ:
ದಾರಿದ್ರ್ಯದಾವಾನಲದಹ್ಯಮಾನಂ
ಪಾಹ್ಯನ್ನಪೂರ್ಣೇ ಗಿರಿರಾಜಕನ್ಯೇ |
ಕೃಪಾಂಬುಧೌ ಮಜ್ಜಯ ಮಾಂ ತ್ವದೀಯೇ
ತ್ವತ್ಪಾದಪದ್ಮಾರ್ಪಿತಚಿತ್ತವೃತ್ತಿಮ್ ||
|
ಲೀಖನದ ಮೂಲಗಳು:
1.
ಸಂಸ್ಕೃತ ಶ್ಲೋಕಗಳು : sanskritdocuments.org
2.
ಕನ್ನಡದ ಶ್ಲೋಕಗಳು: ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ
3.
ಶ್ಲೋಕದ ವಿವರಣೆಗಳು : ಅಂಗ್ಲ ಮೂಲ – devshoppe.com ಮತ್ತು greenmesg.org –
ಕನ್ನಡಕ್ಕೆ ಭಾಷಾಂತರಿಸಿದವರು – ಗುರುಪ್ರಸಾದ್ ಹಾಲ್ಕುರಿಕೆ
ವೀಡಿಯೋ ವಿಕ್ಷನೆಗಾಗಿ ಇಲ್ಲಿ ಕ್ಲಿಕ್ ಮಾಡಿ ⇒⇒ https://youtu.be/8eEbRiWNa4o
|
ಜ್ಞಾನ ವೈರಾಗ್ಯ ದ ಬದಲು ಜ್ಞಾನ ಸೌಭಾಗ್ಯ ಅಂತ ಇದ್ದಿದ್ದರೆ ಒಳ್ಳೆಯದಿತ್ತು.🙂
ReplyDeleteಮೂಲ ಶ್ಲೋಕದಲ್ಲೇ 'ವೈರಾಗ್ಯ' ಅಂತ ಇರೋದಲ್ವಾ?!