Saturday, June 2, 2018

ಅಚ್ಯುತಾಷ್ಟಕ ಸ್ತೋತ್ರಮ್





ಅಚ್ಯುತಾಷ್ಟಕ ಸ್ತೋತ್ರಮ್


ಶ್ಲೋಕ - 1 - ಸಂಸ್ಕೃತದಲ್ಲಿ:

ಅಚ್ಯುತಂ ಕೇಶವಂ ರಾಮನಾರಾಯಣಂ
ಕೃಷ್ಣದಾಮೋದರಂ ವಾಸುದೇವಂ ಹರಿಮ್
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕೀನಾಯಕಂ ರಾಮಚಂದ್ರಂ ಭಜೇ    
ಕನ್ನಡದಲ್ಲಿ :

ಅಚ್ಯುತನ ಕೇಶವನ ರಾಮನಾರಾಯಣನ
ಕೃಷ್ಣದಾಮೋದರನ ವಾಸುದೇವನ ಹರಿಯ
ಶ್ರೀಧರನ ಮಾಧವನ ಗೋಪಿಕಾವಲ್ಲಭನ
ಜಾನಕೀ ನಾಯಕನ ರಾಮಚಂದ್ರನ ಭಜಿಪೆ

ವಿವರಣೆ :

ದೋಷಾತೀತನಾದ ( ಅಚ್ಯುತ ), ಪ್ರತಿಯೊಬ್ಬರನ್ನೂ ನೇಮಿಸುವವನು ಹಾಗೂ ನಿಯಂತ್ರಿಸುವವನು, ಸುಂದರವಾದ ಕೇಶವನ್ನುಳ್ಳವನು ಮತ್ತು ಅಸುರ ಕೇಶಿಯನ್ನು ಸಂಹಾರ ಮಾಡಿದವನು ( ಕೇಶವ ), ಕಳಂಕರಹಿತನಾದ ವಿಷ್ಣುವಿನ ಅವತಾರ - ರಾಮನಿಗೆ ನನ್ನ ಪ್ರಣಾಮಗಳುತನ್ನ ದೈವೀಕ ಗುಣಗಳಿಂದ ಮತ್ತು ಅನುಪಮ ಸೌಂದರ್ಯದಿಂದ ಸಕಲರನ್ನೂ ಆಕರ್ಷಿಸುವ ಶ್ರೀ ಕೃಷ್ಣನಿಗೆ ಹಾಗೂ ಮಾತೆ ಯಶೋದೆಯಿಂದ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಸಿಕೊಂಡದಾಮೋದರ ನೆಂದೂ ಕರೆಯಲ್ಪಡುವ  ವಸುದೇವನ ಮಗನಾದ  ವಾಸುದೇವನಿಗೆ, ಎಲ್ಲರ ಪಾಪಗಳನ್ನೂ ಪರಿಹಾರಮಾಡುವ ಹಾಗೂ ಯಜ್ಞಗಳ ಹವಿಸ್ಸನ್ನು ಸ್ವೀಕರಿಸುವವನಿಗೆ, ನನ್ನ ಸಹಸ್ರ ಪ್ರಣಾಮಗಳು.
ತನ್ನ ಹೃದಯದಲ್ಲೇ ಲಕ್ಷ್ಮಿಯನ್ನು ಧರಿಸಿರುವ ಶ್ರೀಧರನಿಗೆ, ಮಹಾಲಕ್ಷ್ಮಿಯ ಬಾಳ ಸಂಗಾತಿಯಾದ ಮಾಧವನಿಗೆ, ವೃಂದಾವನದ ಗೋಪಿಕಾ ಸ್ತ್ರೀಯರಿಗೆ ಅತ್ಯಂತ ಪ್ರೀತಿಪಾತ್ರನಾದ ಶ್ರೀ ಕೃಷ್ಣ ಪರಮಾತ್ಮನಿಗೆ, ನನ್ನ ಹೃದಯಾಂತರಾಳದ ನಮನಗಳು ಮತ್ತು ಜಾನಕಿ ರಮಣನಾದ ಶ್ರೀ ರಾಮಚಂದ್ರನಿಗೆ ನನ್ನ ನಮಸ್ಕಾರಗಳು.

ಶ್ಲೋಕ - 2 - ಸಂಸ್ಕೃತದಲ್ಲಿ:

ಅಚ್ಯುತಂ ಕೇಶವಂ ಸತ್ಯಭಾಮಾಧವಂ
ಮಾಧವಂ ಶ್ರೀಧರಂ ರಾಧಿಕಾರಾಧಿತಮ್  
ಇಂದಿರಾಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದಜಂ ಸಂದಧೇ    
ಕನ್ನಡದಲ್ಲಿ :

ಅಚ್ಯುತನ ಕೇಶವನ ಸತ್ಯಭಾಮೆಯ ಪ್ರಿಯನ
ಮಾಧವ ಶ್ರೀಧರನ ರಾಧಿಕಾ ಪೂಜಿತನ
ಇಂದಿರಾಮಂದಿರನ ಸುಂದರ ಸುಮನದವನ
ದೇವಕೀನಂದನನ ನಂದಸುತನ ವಂದಿಪೆ

ವಿವರಣೆ :

ದೋಷಾತೀತನಾದ ( ಅಚ್ಯುತ ), ಪ್ರತಿಯೊಬ್ಬರನ್ನೂ ನೇಮಿಸುವವನು ಹಾಗೂ ನಿಯಂತ್ರಿಸುವವನು, ಸುಂದರವಾದ ಕೇಶವನ್ನುಳ್ಳವನು ಮತ್ತು ಅಸುರ ಕೇಶಿಯನ್ನು ಸಂಹಾರ ಮಾಡಿದ ಕೇಶವನಿಗೆ ನನ್ನ ಪ್ರಣಾಮಗಳುಸತ್ಯಭಾಮೆಯ ರಮಣನಾದ ಶ್ರೀ ಕೃಷ್ಣನಿಗೆ ವಂದನೆಗಳು. ಸಾಗರ ಕುವರಿ, ಲಕ್ಷ್ಮಿಯ ರಮಣ, ಮಾಧವ, ತನ್ನ ಹೃದಯದಲ್ಲೇ ಲಕ್ಷ್ಮಿಯನ್ನು ಧರಿಸಿರುವ ಶ್ರೀಧರನಿಗೆ, ರಾಧಿಕೆಯಿಂದ ಪೂಜಿಸಲ್ಪಟ್ಟವನಿಗೆ, ನನ್ನ ಸಹಸ್ರ ಪ್ರಣಾಮಗಳು. ದೇವಿ ಮಹಾಲಕ್ಷ್ಮಿಯ ಪರಮ ಪವಿತ್ರ ವಾಸಸ್ಥಾನವಾದ ಶ್ರೀಹರಿಯ ಹೃದಯ - ಇಂದಿರೆಗೆ ನನ್ನ ನಮನಗಳು. ಸುಂದರ ಹಾಗೂ ಉಜ್ವಲ ಪ್ರಕಾಶಿತನಾದವನಿಗೆ ನನ್ನ ವಂದನೆಗಳು. ದೇವಕಿಯ ಎಂಟನೇ ಮಗನಾದ ಹಾಗೂ ಅವನನ್ನು ನಂತರ ನಂದರಾಜನಿಗೆ ಕೊಡಲ್ಪಟ್ಟಿದ್ದರಿಂದಾಗಿ ನಂದನ ಮಗನಾದ ನಂದಕುಮಾರನಿಗೆ ನನ್ನ ಅನಂತ ಪ್ರಣಾಮಗಳು.

ಶ್ಲೋಕ - 3 - ಸಂಸ್ಕೃತದಲ್ಲಿ:

ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ
ರುಕ್ಮಿಣೀರಾಗಜಾನಕೀಜಾನಯೇ
ವಲ್ಲಭೀವಲ್ಲಭಾಯಾರ್ಚಿತಾಯಾತ್ಮನೇ
ಕಂಸವಿಧ್ವಂಸಿನೇ ವಂಶಿನೇ ತೇ ನಮಃ    
ಕನ್ನಡದಲ್ಲಿ :

ವಿಷ್ಣುವೆ ಜಯಶಾಲಿಯೆ ಶಂಕಚಕ್ರಧಾರಿಯೆ
ರುಕ್ಮಿಣೀಪ್ರೀತನೇ ಜಾನಕೀನಾಥನೇ
ಗೋಪಿಕಾನಾಥನೇ ಗೋಪಬಾಲಮಿತ್ರನೇ
ಕಂಸವಿಧ್ವಂಸಕ ವೇಣುಲೋಲ ವಂದಿಪೆ

ವಿವರಣೆ :

ಸರ್ವಾಂತರ್ಯಾಮಿಯಾದ ವಿಷ್ಣುವಿಗೆ ನನ್ನ ನಮನಗಳುಸದಾ ಜಯಶಾಲಿಯಾದ ಜಿಷ್ಣುವಿಗೆ ನನ್ನ ವಂದನೆಗಳು, ಶಂಖವನ್ನು ಧರಿಸಿರುವ ಹಾಗೂ ಸುದರ್ಶನ ಚಕ್ರವನ್ನು ಹಿಡಿದಿರುವವನಿಗೆ ನನ್ನ ನಮನಗಳು. ರುಕ್ಮಿಣಿಗೆ ಅತ್ಯಂತ ಪ್ರೀತಿಪಾತ್ರನಾದ ಕೃಷ್ಣನಿಗೆ ನನ್ನ ನಮಸ್ಕಾರಗಳು. ಜಾನಕಿಯನ್ನು ಪತ್ನಿಯನ್ನಾಗಿ ಪಡೆದವನಿಗೆ ನನ್ನ ಅನೇಕ ವಂದನೆಗಳು. ಗೋಪಾಲಕ ಹೆಣ್ಣುಗಳ ಹೃದಯದಲ್ಲಿ ನೆಲಸಿರುವ ಹಾಗೂ ಪ್ರೀತಿಪೂರ್ವಕವಾಗಿ ಅವರಿಂದ ಪೂಜಿಸಲ್ಪಡುವ ಬಾಲ ಗೋಪಾಲನಿಗೆ ನನ್ನ ಅನೇಕ ನಮನಗಳು. ಕಂಸನನ್ನು ಸಂಹಾರಮಾಡಿದ ಹಾಗೂ ಕೊಳಲನೂದುವ ಕೃಷ್ಣನಿಗೆ ನನ್ನ ಹೃದಯಾಂತರಾಳದಿಂದ ಸಹಸ್ರಾರು ನಮಸ್ಕಾರಗಳು

ಶ್ಲೋಕ - 4 - ಸಂಸ್ಕೃತದಲ್ಲಿ:

ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾಜಿತ ಶ್ರೀನಿಧೇ
ಅಚ್ಯುತಾನಂತ ಹೇ ಮಾಧವಾಧೋಕ್ಷಜ
ದ್ವಾರಕಾನಾಯಕ ದ್ರೌಪದೀರಕ್ಷಕ         
ಕನ್ನಡದಲ್ಲಿ :

ಕೃಷ್ಣ ಗೋವಿಂದನೇ ರಾಮನಾರಾಯಣ
ಶ್ರೀಪತೀ ವಾಸುದೇವ ಶ್ರೀಹರೀ ಶ್ರೀನಿಧಿ
ಅಚ್ಯುತಾನಂತ ಹೇ ಮಾಧವಾ ಅಧೋಕ್ಷಜ
ದ್ವಾರಕಾನಾಯಕ ದ್ರೌಪದೀ ರಕ್ಷಕ

ವಿವರಣೆ :

ಯಾರನ್ನು ಕೇವಲ ವೇದಗಳ ಮೂಲಕ ಮಾತ್ರ ಅರಿಯಬಹುದೋ ಆ ಗೋವಿಂದನ ಅವತಾರವಾದ ಶ್ರೀ ಕೃಷ್ಣನಿಗೆ ನನ್ನ ನಮನಗಳು. ಕಳಂಕರಹಿತನಾದ ಹಾಗೂ ನಾರಾಯಣನ ಅವತಾರವಾದ ಶ್ರೀ ರಾಮಚಂದ್ರನಿಗೆ ನಾನು ನಮಸ್ಕರಿಸುವೆ. ಮಹಾಲಕ್ಷ್ಮಿಯ ಸಂಗಾತಿಯಾದ ಶ್ರೀಪತಿಗೆ ಹಾಗೂ ಅಜೇಯನಾದ ವಾಸುದೇವನ ಪುತ್ರನಾದ ವಾಸುದೇವನಿಗೆ ನನ್ನ ಅನೇಕ ನಮಸ್ಕಾರ ಗಳು. ಮಹಾಲಕ್ಷ್ಮಿಯು ವಾಸಿಸುವ ಶ್ರೀನಿಧಿಗೆ ನನ್ನ ವಂದನೆಗಳು. ದೋಷಾತೀತನಾದ ಹಾಗೂ ಅಂತ್ಯವಿಲ್ಲದವನಾದ ಅಚ್ಯುತನಿಗೆ ಮತ್ತು ಮಹಾಲಕ್ಷ್ಮಿಯ ರಮಣನಾದ ಮಾಧವನಿಗೆ ಹಾಗೂ ಕೇವಲ ಆಗಮಗಳಿಂದ ಮಾತ್ರ ಅರಿಯಲ್ಪಡುವ ಅವತಾರವಾದ ಅಧೋಕ್ಷಜನಿಗೆ ನನ್ನ ಸಹಸ್ರ ನಮಸ್ಕಾರಗಳು. ದ್ವಾರಕಾಧೀಶ ಹಾಗೂ ದ್ರೌಪದಿಯ ರಕ್ಷಕನಾದ ಶ್ರೀ ಕೃಷ್ಣನಿಗೆ ನಾನು ನಮಸ್ಕರಿಸುವೆ.

ಶ್ಲೋಕ - 5 - ಸಂಸ್ಕೃತದಲ್ಲಿ:

ರಾಕ್ಷಸಕ್ಷೋಭಿತಃ ಸೀತಯಾ ಶೋಭಿತೋ
ದಂಡಾಕಾರಣ್ಯಭೂಪುಣ್ಯತಾಕಾರಣಃ
ಲಕ್ಷ್ಮಣೇನಾನ್ವಿತೋ ವಾನರೈಃ ಸೇವಿತೋs-
ಗಸ್ತ್ಯಸಂಪೂಜಿತೋ ರಾಘವಃ ಪಾತು ಮಾಮ್    
ಕನ್ನಡದಲ್ಲಿ :

ರಕ್ಕಸರಿಗೆ ಸಂಕಟ ಸೀತೆಸಹಿತ ಶೋಭಿತ
ದಂಡಕಾರಣ್ಯಭೂಮಿ ಧನ್ಯಗೈದ ಪುಣ್ಯಚರಿತ
ಲಕ್ಷ್ಮಣನೊಡಗೂಡಿದ ಕಪಿಸೇನಾ ಸೇವಿತ
ಮುನಿ ಅಗಸ್ತ್ಯಪೂಜಿತ ಪೊರೆಯಲೆನ್ನ ರಘುಸುತ.

ವಿವರಣೆ :

ಯಾರು ರಾಕ್ಷಸರನ್ನು ಶ್ರೀರಾಮನಂತೆ ಕ್ಷೋಭೆಗೊಳಗಾಗಿ ಸುತ್ತಾರೋಯಾರ ಪಕ್ಕದಲ್ಲಿ ಮಾತೆ ಸೀತೆಯು ಅಲಂಕರಿಸಿರುತ್ತಾರೋ, ಯಾರು ದಂಡಕಾರಣ್ಯದ ಭೂಭಾಗವನ್ನು ಶುದ್ಧೀಕರಿಸಲು ಕಾರಣರೋ, ಯಾರನ್ನು ಲಕ್ಷ್ಮಣನು ಸದಾ ಸೇವಿಸುತ್ತಾನೋ, ಯಾರನ್ನು ವಾನರರು ಭಕ್ತಿಯಿಂದ ಸೇವಿಸುವರೋ, ಯಾರನ್ನು ಅಗಸ್ತ್ಯ ಮುನಿಗಳು ಪೂಜಿಸುತ್ತಾರೋ, ಆ ರಾಘವನನ್ನು ನಾನು ಭಕ್ತಿಪೂರ್ವಕವಾಗಿ ನಮಿಸುತ್ತೇನೆ ಹಾಗೂ ನನ್ನನ್ನು ರಕ್ಷಿಸೆಂದು ಪ್ರಾರ್ಥಿಸುತ್ತೇನೆ.

ಶ್ಲೋಕ - 6 - ಸಂಸ್ಕೃತದಲ್ಲಿ

ಧೇನುಕಾರಿಷ್ಟಹಾನಿಷ್ಟ ಕೃದ್ದ್ವೇಷಿಣಾo
ಕೇಶಿಹಾ ಕಂಸಹೃಧ್ವಂಶಿಕಾವಾದಕಃ
ಪೂತನಾಕೋಪಕಃ ಸುರಾಜಾಖೇಲನೋ
ಬಾಲಗೋಪಾಲಕಃ ಪಾತು ಮಾಂ ಸರ್ವದಾ       
ಕನ್ನಡದಲ್ಲಿ :

ಧೇನುಕಾರಿಷ್ಟವೈರಿ ದುಷ್ಟ ಸಂಹಾರಕ
ಕೇಶಿಹರನು ಕಂಸಧ್ವಂಸಿ ಮಧುರ ವೇಣುವಾದಕ
ಪೂತನಿಯಸು ಹೀರಿದ ಘಾತಕರನು ಸೀಳಿದ
ಬಾಲಗೋಪಾಲಕೃಷ್ಣ ಪೊರೆಯಲೆನ್ನ ಸರ್ವದಾ

ವಿವರಣೆ :

ಕೊಳಲನೂದುವ ಹಾಗೂ ಕಂಸನಿಂದ ಕಳುಹಿಸಲ್ಪಟ್ಟ ಧೇನುಕ,ಅರಿಷ್ಟಕ, ಕೇಶಿಯರ ಆಕ್ರಮಣ ಹಾಗೂ ದ್ವೇಷವನ್ನುಂಟುಮಾಡುವ ಪ್ರಯತ್ನಕ್ಕೆ ತಡೆಯುಂಟು ಮಾಡಿದನೋ ಅವನಿಗೆ ನಾನು ಅನೇಕ ಪ್ರಣಾಮಗಳನ್ನು ಸಲ್ಲಿಸುವೆಮಧುರವಾದ ಗಾನಗಳನ್ನು ತನ್ನ ಕೊಳಲಿನಿಂದ ನುಡಿಸಿದವನಿಗೆ ಮತ್ತು ಪೂತನಿಯು ಸುಂದರ ದೇವಿ ಆಕಾರದಿಂದ ಬಾಲಗೋಪಾಲನನ್ನು  ಕೋಪದಿಂದ ಸಂಹರಿಸಬೇಕೆಂದು ಯತ್ನಿಸುವಾಗ ಅದನ್ನು ತಡೆದು ಅವಳ ಸಂಹಾರಕ್ಕೆ ಕಾರಣನೋ ಆ ನಂದಕುಮಾರನಿಗೆ ನಾನು ನಮಸ್ಕರಿಸುವೆ ಹಾಗೂ ಹೇಗೆ ನೀನು ರಾಕ್ಷಸರ ಪ್ರಯತ್ನವನ್ನು ವಿಫಲಗೊಳಿಸಿದೆಯೋ ಹಾಗೇ ನನಗೆ ಎದುರಾಗಬಹುದಾದ ಅಪಾಯಗಳನ್ನು ತಡೆದು ನನ್ನನ್ನು ರಕ್ಷಿಸು 
ಓ ಬಾಲಗೋಪಾಲನೇ !

ಶ್ಲೋಕ - 7 - ಸಂಸ್ಕೃತದಲ್ಲಿ:

ವಿದ್ಯುದುದ್ಯೋತವತ್ಪ್ರಸ್ಫುರದ್ವಾಸಸಂ
ಪ್ರಾವೃಡಂಭೋಧವತ್ಪ್ರೋಲ್ಲಸದ್ವಿಗ್ರಹಮ್
ವನ್ಯಯಾ ಮಾಲಯಾ ಶೋಭಿತೋರಃಸ್ಥಲಂ
ಲೋಹಿತಾoಘ್ರಿದ್ವಯಂ ವಾರಿಜಾಕ್ಷo  ಭಜೇ         
ಕನ್ನಡದಲ್ಲಿ :

ಮಿಂಚಿನಂತೆ ಹೊಳೆಹೊಳೆಯುವ ಶುಭ್ರ ಪೀತವಸ್ತ್ರ
ಆವರಿಸಿದ ಮೋಡದಂತೆ ಮೆರೆವ ಲಲಿತ ಗಾತ್ರ
ಕಾಡ ಹೂವ ಹಾರದಿಂದ ಶೋಭಿಸುವೆದೆಯಂಗಳ
ಪಾದವೆರಡು ನಸುವೆ ಕೆಂಪು ವಾರಿಜಾಕ್ಷ ವಂದಿಪೆ

ವಿವರಣೆ :

ಯಾರ ಮೈಮೇಲಿನ ವಸ್ತ್ರವು ಆಕಾಶದಲ್ಲಿ ಕಂಡುಬರುವ ಕೋರೈಸುವ ಮಿಂಚಿನಂತೆ ಹೊಳೆಯುವುದೋ, ಯಾರ ಮನ ಮೋಹಕ ರೂಪವು ಮಳೆಗಾಲದ ಮೋಡಗಳಂತೆ ಚಲಿಸುವುದೋ, ಯಾರ ವಕ್ಷಸ್ಥಳದಲ್ಲಿ ಹೂವಿನ ಹಾರವಾದ ವನಮಾಲೆಯು ಅಲಂಕರಿಸಿರುವುದೋ, ಮತ್ತು ಯಾರ ಪಾದ ಪದ್ಮಗಳು ಕೆಂಪು ಬಣ್ಣದಿಂದ ಕೂಡಿ ಸುಂದರವಾಗಿರುವುದೋ, ಹಾಗೂ ಯಾರ ನೇತ್ರಗಳು ಕಮಲ ಪುಷ್ಪದಂತೆ ಕಂಗೊಳಿಸುವುದೋ, ಆ ದೇವ ದೇವ ನಂದ ಕಿಶೋರನಿಗೆ ನಾನು ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇನೆ.

ಶ್ಲೋಕ - 8 - ಸಂಸ್ಕೃತದಲ್ಲಿ:

ಕುಂಚಿತೈಃ ಕುಂತಲೈಭ್ರಾಜಮಾನಾನನಂ
ರತ್ನಮೌಲಿಂ ಲಸತ್ಕುಂಡಲಂ ಗಂಡಯೋಃ
ಹಾರಕೇಯೂರಕo ಕಂಕಣ ಪ್ರೋಜ್ವಲಂ
ಕಿಂಕಿಣೀಮಂಜುಲo ಶ್ಯಾಮಲಂ ತಂ ಭಜೇ      
ಕನ್ನಡದಲ್ಲಿ :

ಗುಂಗುರು ಕರಿ ಮುಂಗುರುಳುಗಳಾಡುವಂಥ ಗೆಲುಮೊಗ
ರನ್ನ ಮುಕುಟ ಹೊನ್ನ ಕಡಕು ಹೊಳೆವುದು ಕಿವಿಗಳಲಿ
ಕೊರಳ ಹಾರ ಕಾಲ ಕಡಗ ಕರದಿ ಶೋಭೆ ಕಂಕಣ
ಮಂಜುಳರವ ಕಿಂಕಿಣಿಧರ ಶ್ಯಾಮ ನಿನಗೆ ವಂದನೆ

ವಿವರಣೆ :

ಯಾರ ಹೊಳೆಯುವ ಮುಖವನ್ನು ಗುಂಗುರು ಗುಂಗುರು ಕೂದಲುಗಳು ಸುರುಳಿಯಾಕಾರದಲ್ಲಿ ಸುಂದರವಾಗಿ ಅಲಂಕರಿಸಿರುವುದೋ, ಯಾರ ಹಣೆಯನ್ನು ವಜ್ರವು ಹಾಗೂ ಕಿವಿಗಳಲ್ಲಿ ಹೊಳೆಯುವ ಕಿವಿಯೋಲೆಗಳು ಸಿಂಗರಿಸಿರುವುದೋ, ಯಾರ ತೋಳುಗಳು ಹಾಗೂ ಸೊಂಟವು ಹೊಳೆಯುವ ಆಭರಣಗಳಿಂದ ಕಂಗೊಳಿಸುತ್ತಿರುವುದೋ, ಯಾರು ತನ್ನ ಶ್ಯಾಮಲ ವರ್ಣದ ಶರೀರದ ಮೇಲೆ ಹಿತವಾದ ಶಬ್ದವನ್ನುಂಟು ಮಾಡುವ ಚಿಕ್ಕ ಚಿಕ್ಕ ಗಂಟೆಗಳನ್ನು ಧರಿಸಿರುವನೋ, ಆ ದೇವನಿಗೆ ನಾನು ಭಕ್ತಿಯಿಂದ ನಮಸ್ಕರಿಸುತ್ತೇನೆ.

ಶ್ಲೋಕ - 9 -  ಸಂಸ್ಕೃತದಲ್ಲಿ:

ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಮ್
ವೃತ್ತತಃ ಸುಂದರಂ ವೇದ್ಯವಿಶ್ವoಭರಂ
ತಸ್ಯ ವಶ್ಯೋ ಹರಿರ್ಜಾಯತೇ ಸತ್ವರಮ್                   
ಕನ್ನಡದಲ್ಲಿ :

ಇಚ್ಛಿಸಿದ್ದನೀಯುವಂಥ ಅಚ್ಯುತನೀ ಅಷ್ಟಕ
ವೃತ್ತಗಳಲಿ ಸುಂದರ ಮೂಲ ವಿಶ್ವಂಭರ
ನಿಷ್ಠೆಯಿಂ ನಿತ್ಯವಿದನು ಪಾಡುವಂಥ ಸುಕೃತಗೆ
ಹರಿಯ ಕೃಪೆಯು ಲಭಿಪುದು ತಾನನತಿ ಕಾಲದಲ್ಲಿ

ವಿವರಣೆ :

ಯಾರು ಅಚ್ಯುತಾಷ್ಟಕವನ್ನು ಭಕ್ತಿಯಿಂದ ಇಷ್ಟ ದೈವನಿಗೆ ಪಠಿಸುವ ಮೂಲಕ ಕಾಣಿಕೆಯನ್ನು ಸಲ್ಲಿಸುತ್ತಾರೋ ಹಾಗೂ ಈ ಸ್ತೋತ್ರವನ್ನು ಭಕ್ತಿಯಿಂದ ಪ್ರತಿನಿತ್ಯವೂ ಸಾವಿರ ತಲೆ ಸಾವಿರ ಚಕ್ಷುಗಳನ್ನು ಉಳ್ಳ ಪುರುಷನಿಗೆ ಅರ್ಪಿಸುತ್ತಾರೋ ಹಾಗೂ ಎಲ್ಲರಿಗೂ ಆಧಾರವಾಗಿರುವಂತೆ ಅಚ್ಯುತಾಷ್ಟಕವು ಸುಂದರವಾಗಿ ಆವರಿಸಿರುತ್ತದೆ. ಹಾಗೆ ಮಾಡಿದ ಭಕ್ತರು ವೇಗದಲ್ಲಿ ಹರಿಯ ವಾಸಸ್ಥಳವಾದ ವೈಕುಂಠವನ್ನು ವಿಷ್ಣುವಿನ ಇಚ್ಚೆಯಂತೆ ತಲುಪುವರು.


ಸಂಸ್ಕೃತ ಮೂಲ : Sanskritdocuments.org;  ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
ಕನ್ನಡದಲ್ಲಿ ವಿವರಣೆಗಳು ಪ್ರಸ್ತುತ ಪಡಿಸಿದವರು : ಗುರುಪ್ರಸಾದ್ ಹಾಲ್ಕುರಿಕೆ.
You Tube ನಲ್ಲಿ ವೀಡಿಯೋ ವೀಕ್ಷಿಸಲು ⇒ https://youtu.be/yHoXtv7Y0ew































No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...