ಶಿವಾಪರಾಧ ಕ್ಷಮಾಪಣ ಸ್ತೋತ್ರ
ಪ್ರಸ್ತಾವನೆ :
ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಶಿವ ಭಕ್ತನೊಬ್ಬನ ಶಿವಾರಾಧನೆಯಲ್ಲಿ ತಿಳಿದೋ ತಿಳಿಯದೆಯೋ ಕಣ್ತಪ್ಪಿ ಆಗಿರಬಹುದಾದ ತಪ್ಪು ಒಪ್ಪುಗಳ ಬಗೆಗೆ ಪಶ್ಚಾತ್ತಾಪ ಪಟ್ಟು ಕ್ಷಮಾಪಣೆಯನ್ನು ಕೋರುತ್ತಾನೆ. ಸಾಮಾನ್ಯವಾಗಿ ಶಿವನ ಕುರಿತು ಮಾಡುವ ಎಲ್ಲ ಪೂಜೆಗಳಲ್ಲೂ ಈ ಸ್ತೋತ್ರವು ಒಂದು ಅವಿಭಾಜ್ಯ ಅಂಗ ಹಾಗೂ ಇದನ್ನು ಋಗ್ವೇದ ಕಾಲದಿಂದಲೂ ಅನೂಚಾನವಾಗಿ ಅನುಸರಿಸಿಕೊಂಡು ಬರಲಾಗಿದೆ.
ಶ್ಲೋಕ - 1 - ಸಂಸ್ಕೃತದಲ್ಲಿ :
ಆದೌ ಕರ್ಮ ಪ್ರಸಂಗಾತ್ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ
ವಿಣ್ಮೂತ್ರಾಮೇಧ್ಯಮಧ್ಯೇ ಕ್ವಥಯತಿ ನಿತರಾಂ ಜಾಠರೋ ಜಾತವೇದಾಃ
ಯದ್ಯದ್ವೈ ತತ್ರ ದುಃಖಂ ವ್ಯಥಯತಿ ನಿತರಾಂ ಶಕ್ಯತೇ ಕೇನ ವಕ್ತುಂ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಹುಟ್ಟುವ ಮೊದಲಿನೆನ್ನ ಪಾಪ ಕರುಮದ ಫಲದಿಂದ ಜನನಿ -
ಗರ್ಭದಲಿದ್ದೆ ಮಲಮೂತ್ರಗಳ ನಡುವೆ ನರಳಿ ನೊಂದೆ
ಬಣ್ಣಿಸಬಲ್ಲವರಾರು ತಾಯ ಜಠರದ ಶಿಶುವಿನಳಲು
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಹೊರ ಪ್ರಪಂಚದ ಬೆಳಕನ್ನು ಕಾಣುವ ಮೊದಲೇ ನನ್ನ ಹಿಂದಿನ ಜನ್ಮದಲ್ಲಿನ ಪಾಪಗಳಿಂದಾಗಿ, ನನ್ನ ಕರ್ಮದ ಫಲವನ್ನು ಅನುಭವಿಸುವ ಆಸೆಯಿಂದ ಮತ್ತೆ ತಾಯಿಯ ಗರ್ಭವನ್ನು ಪ್ರವೇಶಿಸುವ ಶಿಕ್ಷೆಯನ್ನನುಭವಿಸಬೇಕಾ ಯಿತು. ಗರ್ಭದಲ್ಲಿ ನಾನು ಅಶುದ್ಧ ವಾತಾವರಣದಲ್ಲಿ ಬೆಂದೆ. ಜನಿಸುವ ಮೊದಲಿನ ಶಿಶುವಿನ ತನ್ನ ಮಾತೆಯ ಗರ್ಭದೊಳಗಿನ ಯಾತನೆಗಳನ್ನು ಯಾರು ಬಣ್ಣಿಸ ಬಲ್ಲರು? ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 2 - ಸಂಸ್ಕೃತದಲ್ಲಿ :
ಬಾಲ್ಯೇ ದುಃಖಾತಿರೇಕಾನ್ಮಲಲುಲತವಪುಃ ಸ್ತನ್ಯಪಾನೇ ಪಿಪಾಸುಃ
ನೋ ಶಕ್ತಶ್ಚೇಂದ್ರಿಯೇಭ್ಯೋ ಭವಮಲಜನಿತಾ ಜಂತವೋ ಮಾಂ ತುದಂತಿ
ನನಾರೋಗಾತಿದುಃಖಾದ್ರುದಿತ ಪರವಶಃ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಶೈಶವದ ದುಃಖಾತಿರೇಕ ಮಲಮೆತ್ತಿದ ದೇಹ ಮೊಲೆಯುಣುವ ದಾಹ
ಕೈಕಾಲನಲುಗಿಸಲಾರೆ ಕಡಿಯುವುವು ಕೀಟಗಳು
ನಾನಾ ಬಾಧೆಗಳ ತಾಳದಳುತಲಿದ್ದೆನೊ ಶಂಕರ ನಿನ್ನ ನೆನೆಯದೆ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಬಾಲ್ಯದಲ್ಲೂ ನನ್ನ ಬಳಲಿಕೆಗಳಿಗೆ ಕೊನೆಯೇ ಇರಲಿಲ್ಲ; ನನ್ನ ಶರೀರವೆಲ್ಲ ಹೊಲಸಿನಿಂದಾವೃತವಾಗಿ ಮತ್ತು ನಾನು ನನ್ನ ಜನನಿಯ ಎದೆ ಹಾಲಿಗಾಗಿ ಹಾತೊರೆಯುತ್ತಿದ್ದೆ. ನನ್ನ ಶರೀರ ಹಾಗೂ ಅಂಗಾಂಗದ ಮೇಲೆ ನನಗೆ ಯಾವುದೇ ಹತೋಟಿ ಇರಲಿಲ್ಲ. ನನ್ನನ್ನು ತ್ರಾಸದಾಯಕ ಕ್ರಿಮಿಗಳು ಹಾಗೂ ಸೊಳ್ಳೆಗಳು ಸತತವಾಗಿ ಮುತ್ತಿ ತೊಂದರೆಯನ್ನು ಕೊಡುತ್ತಿದ್ದವು. ಓ ಶಂಕರಾ ! ನಿನ್ನನ್ನು ಮರೆತು ಹಗಲೂ ರಾತ್ರೆಯೂ ಅನೇಕ ವಿಧವಾದ ಬೇನೆಗಳಿಂದಾದ ನೋವಿನಿಂದ ರೋಧಿಸುತ್ತಿದ್ದೆ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 3 - ಸಂಸ್ಕೃತದಲ್ಲಿ :
ಪ್ರೌಢೋsಹಂ ಯೌವನಸ್ಥೋ ವಿಷಯವಿಷಧರೈಃ ಪಂಚಭಿರ್ಮರ್ಮಸಂಧೌ
ದಷ್ಟೋನಷ್ಟೋ ವಿವೇಕಃ ಸುತಧನ ಯುವತಿಸ್ವಾದುಸೌಖ್ಯೇ ನಿಷಣ್ಣಃ
ಶೈವೀ ಚಿಂತಾವಿಹೀನಂ ಮಮ ಹೃದಯಮಹೋ ಮಾನಗರ್ವಾಧಿರೂಢಂ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಬೆಳೆದ ಯೌವನದಲ್ಲಿ ವಿಷಯವೆಂಬೈದು ಸರ್ಪಗಳು
ಒಳಗೆ ಕಡಿದೆನ್ನ ವಿವೇಕವಣಗಿ ಮೆರೆದೆ ಸತಿಸುತರ ಸಖ್ಯದಲಿ
ಹಮ್ಮು ಬಿಮ್ಮು ತಳೆದಿತ್ತೆನ್ನ ಮನ ಹಾ! ಶಿವನ ಚಿಂತಿಸದೆ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಯೌವನ ಕಾಲದಲ್ಲಿ ಆಕರ್ಷಣೀಯ ಶಬ್ದ ಮತ್ತು ನೋಟಗಳು, ರುಚಿ ರುಚಿಯಾದ ಭಕ್ಷ್ಯ ಭೋಜ್ಯಗಳು, ಸುಖ ಸ್ಪರ್ಶಗಳಂಥ ವಿಷಪೂರಿತ ಸರ್ಪಗಳು ನನ್ನ ಪ್ರಮುಖ ಅಂಗಗಳನ್ನು ಸುತ್ತಿಕೊಂಡು ನನ್ನ ವಿವೇಚನೆಯನ್ನು ಸಂಪೂರ್ಣವಾಗಿ ನಾಶಮಾಡಿತು. ನನ್ನ ಸಂಪತ್ತಿನಲ್ಲಿನ ಸುಖವು ನನ್ನನ್ನು ಸಂಪೂರ್ಣವಾಗಿ ಮುಳುಗಿಸಿ ಹಾಗೂ ಅದರೊಂದಿಗೆ ಸೌಂದರ್ಯ ಹಾಗೂ ಯೌವನದಿಂದ ಕೂಡಿದ ಪತ್ನಿ ಜೊತೆಗೆ ಮಕ್ಕಳು ನನ್ನನ್ನು ಸಂಸಾರ ಪಾಶದಲ್ಲಿ ಬಂಧಿಸಿದ್ದವು. ಅಯ್ಯೋ ನನ್ನ ಮನದ ತುಂಬಾ ದುರಹಂಕಾರ ಹಾಗೂ ಮದವು ತುಂಬಿಕೊಂಡು ಕಿಂಚಿತ್ತಾದರೂ ಶಿವನ ಬಗ್ಗೆ ಯೋಚಿಸಲು ಅವಕಾಶವೇ ಇರಲಿಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 4 - ಸಂಸ್ಕೃತದಲ್ಲಿ :
ವಾರ್ಧಕ್ಯೇ ಚೇಂದ್ರಿಯಾಣಾಂ ವಿಕಲಗತಿಮತಿಶ್ಚಾಧಿ ದೈವಾದಿತಾಪೈಃ
ಪ್ರಾಪ್ತೈರೋಗೈರ್ವಿಯೋಗೈರ್ವ್ಯಸನಕೃಶತನೋರ್ಜ್ಞಪ್ತಿಹೀನಂ ಚ ದೀನಮ್ |
ಮಿಥ್ಯಾ ಮೋಹಾಭಿಲಾಷ್ಯೇಭ್ರರ್ಮತಿ ಮಮಮನೋ ಧೂರ್ಜಟೇರ್ಧ್ಯಾನ ಶೂನ್ಯಂ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಮುಪ್ಪಿನಲಿ ಇಂದ್ರಿಯಗಳ ಬಲವುಡುಗಿ ಮತಿಗಳೆದು
ಪಾಪ ರೋಗಗಳ, ವಿಯೋಗಗಳ ಕಾರಣ ದೀನನಾದರು
ಕುರುಡು ಮೋಹದಭಿಲಾಷೆಯಿಂದೆನ್ನ ಮನ ಶಿವನ ಧ್ಯಾನಿಸದು
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಈಗ ವೃದ್ಧಾಪ್ಯದಲ್ಲಿ ನನ್ನ ಇಂದ್ರಿಯಗಳು ಅನೇಕ ಸಂದರ್ಭಗಳನ್ನು ಸರಿಯಾಗಿ ಅರಿತು ಮತ್ತು ಅದಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳುವ ವಿವೇಚನೆ ಹಾಗೂ ಶಕ್ತಿಯನ್ನು ಕಳೆದುಕೊಂಡಿವೆ. ನನ್ನ ಶರೀರವು ವಿಯೋಗವನ್ನು ಹೊಂದಿಲ್ಲವಾದರೂ ಶಕ್ತಿಹೀನ ಮತ್ತು ವೃದ್ಧಾಪ್ಯದ ಅನೇಕ ತೊಂದರೆಗಳಿಂದ, ಪಾಪಕೃತ್ಯಗಳಿಂದ, ರೋಗ, ರುಜಿನಗಳಿಂದ ಮತ್ತು ಹತ್ತಿರದ ಸಂಬಂಧಿಗಳ ವಿಯೋಗದಿಂದ ಜರ್ಝರಿತವಾಗಿದೆ. ಹಾಗಿದ್ದರೂ ಈಗಲಾದರೂ ನಿನ್ನನ್ನು ಧ್ಯಾನಿಸುವುದನ್ನು ಬಿಟ್ಟು ವ್ಯರ್ಥ ಆಸೆಗಳಿಗೆ ಹಾಗೂ ಟೊಳ್ಳು ಮಾಯೆಗಳ ಹಿಂದೆ ಓಡುತ್ತಿರುವೆ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 5 - ಸಂಸ್ಕೃತದಲ್ಲಿ :
ನೋ ಶಕ್ಯಂ ಸ್ಮಾರ್ತಕರ್ಮ ಪ್ರತಿಪದಗಹನೇ ಪ್ರತ್ಯವಾಯಾಕುಲಾಢ್ಯೇ
ಶ್ರೌತೇ ವಾರ್ತಾ ಕಥಂ ಮೇ ದ್ವಿಜಕುಲವಿಹಿತೇ ಬ್ರಹ್ಮ ಮಾರ್ಗಾನುಸಾರೇ
ತತ್ತ್ವೇsಜ್ಞಾತೇ ವಿಚಾರೈಃ ಶ್ರವಣಮನನಯೋಃ ಕಿಂ ನಿದಿಧ್ಯಾಸಿತವ್ಯಂ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಸ್ಮಾರ್ತಕರ್ಮ ವಿಧಿಗಳನನುಸರಿಸಲಾರೆ ಬಲುಗಹನ
ಬ್ರಹ್ಮಮಾರ್ಗದಿ ನಡೆಯ ದ್ವಿಜವಿಹಿತ ಶ್ರುತಿಯ ಮಾತೆನಗೆಲ್ಲಿ?
ತತ್ತ್ವವನರಿವೊಡೆ ಶ್ರವಣ ಮನನ ನಿಧಿಧ್ಯಾಸನವೆಲ್ಲಿ?
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಸ್ಮೃತಿಗಳಲ್ಲಿ ವಿಧಿಸಿರುವ ಕರ್ತವ್ಯಗಳು ಈ ವಯಸ್ಸಿನಲ್ಲಿ ಅಪಾಯಕಾರಿಯಾಗಿದ್ದು ಅವುಗಳನ್ನು ಅನುಸರಿಸು ವುದು ನನ್ನ ಶಕ್ತಿಗೆ ಮೀರಿದ್ದು. ಹಾಗಿದ್ದಾಗ ಬ್ರಾಹ್ಮಣರಿಗೆ ಬ್ರಹ್ಮತ್ವವನ್ನು ತಲುಪಲು ವಿಧಿಸಿರುವ ವೇದಗಳ ಕಟ್ಟುಪಾಡುಗಳನ್ನು ಹೇಗೆ ಪಾಲಿಸಲಿ? ಗುರುವಿನಿಂದ ವೇದ ಗ್ರಂಥಗಳ ಒಳಾರ್ಥಗಳನ್ನು ಕೇಳುವುದಾಗಲೀ ಮತ್ತು ಅವರ ಬೋಧನೆಯ ಹಿಂದಿರುವ ತರ್ಕಗಳನ್ನು ಯಾವ ಸಂದರ್ಭದಲ್ಲೂ ಸರಿಯಾಗಿ ಗ್ರಹಿಸಲೇ ಇಲ್ಲ. ಹಾಗಿರುವಾಗ ಸತ್ಯಮಾರ್ಗದ ಬಗ್ಗೆ ಅಡೆತಡೆಯಿಲ್ಲದೇ ಹೇಗೆ ನಾನು ಮಾತನಾಡಲಿ? ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 6 - ಸಂಸ್ಕೃತದಲ್ಲಿ :
ಸ್ನಾತ್ವಾ ಪ್ರತ್ಯೂಷಕಾಲೇ ಸ್ನಪನವಿಧಿವಿಧೌ ನಾಹೃತಂ ಗಾಂಗತೋಯಂ
ಪೂಜಾರ್ಥಂ ವಾ ಕದಾಚಿದ್ಬಹುತರಗಹನೇsಖಂಡಬಿಲ್ವೀ ದಲಂ ವಾ
ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧಪುಷ್ಪೈಸ್ತ್ವದರ್ಥಂ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಉದಯಕೆ ಮುನ್ನ ಸ್ನಾನವಗೈದಭಿಷೇಕಕೆ ಗಂಗೆ ತರಲಿಲ್ಲ
ಪೂಜಿಸಲು ಪವಿತ್ರವಹ ಅಖಂಡ ಬಿಲ್ವದಳವಿಡಲಿಲ್ಲ
ಕೊಳದೊಳರಳಿದ ಸುಗಂಧ ಪದ್ಮಮಾಲೆಯ ಹೆಣೆಯಲಿಲ್ಲ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಒಮ್ಮೆಯಾದರೂ ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನಾದಿಗಳನ್ನು ಮಾಡಿಲ್ಲ ಹಾಗೂ ಮನೆಯಲ್ಲಿನ ದೇವರ ವಿಗ್ರಹಕ್ಕೆ ಅಭಿಷೇಕ ಮಾಡಲು ಒಮ್ಮೆಯಾದರೂ ಗಂಗಾ ಜಲವನ್ನು ತಂದಿಲ್ಲ. ನಿನ್ನ ಪೂಜೆಗೆ ಒಮ್ಮೆಯಾದರೂ ದಟ್ಟವಾದ ಕಾಡಿನೊಳಗೆ ಹೋಗಿ ಪವಿತ್ರವಾದ ಬಿಲ್ವ ಪತ್ರೆಯನ್ನು ತರಲಿಲ್ಲ ಹಾಗೂ ಸರೋವರದಿಂದ ಸಂಪೂರ್ಣವಾಗಿ ಅರಳಿದ ಕಮಲ ಪುಷ್ಪವನ್ನು ತರಲಿಲ್ಲ. ನಿನ್ನನ್ನು ಒಮ್ಮೆಯಾದರೂ ಸುಗಂಧ ದ್ರವ್ಯಗಳಿಂದ ಹಾಗೂ ಧೂಪ ದೀಪ ನೇವೇದ್ಯಗಳಿಂದ ಪೂಜಿಸಲಿಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 7 - ಸಂಸ್ಕೃತದಲ್ಲಿ :
ದುಗ್ಧೈರ್ಮಧ್ವಾಜ್ಯಯುಕ್ತೈರ್ದಧಿಗುಡಸಹಿತೈಃ ಸ್ನಾಪಿತಂ ನೈವ ಲಿಂಗಂ
ನೋ ಲಿಪ್ತಂ ಚಂದನಾದ್ಯೈಃ ಕನಕವಿರಚಿತೈಃ ಪೂಜಿತಂ ನ ಪ್ರಸುನೈಃ
ಧೂಪೈಃ ಕರ್ಪೂರದೀಪೈರ್ವಿವಿಧರಸಯುತೈರ್ನೈವ ಭಕ್ಷ್ಯೋಪಹಾರೈಃ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಹಾಲ್ಜೇನು ತುಪ್ಪ ಮೊಸರು ಬೆಲ್ಲವನೆರೆಯಲಿಲ್ಲ ಲಿಂಗಕೆ
ಚಂದನಾದಿಗಳ ಬಳಿಯಲಿಲ್ಲ ಹೊನ್ನ ಹೂವಿಂದ ಪೂಜಿಸಲಿಲ್ಲ
ಮುಂದೆ ಧೂಪ ಕರ್ಪೂರ ಬೆಳಗಿ ವಿವಿಧ ಭಕ್ಷ್ಯನಿವೇದಿಸಲಿಲ್ಲ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ನಿನ್ನ ವಿಗ್ರಹಕ್ಕೆ ಒಮ್ಮೆಯಾದರೂ ಹಾಲು,ಜೇನುತುಪ್ಪ ಹಾಗೂ ಉಳಿದ ಪಂಚಾಮೃತಗಳಿಂದ ಅಭಿಷೇಕ ಮಾಡಲಿಲ್ಲ. ಅದಕ್ಕೆ ಸುಗಂಧ ಪರಿಮಳಯುಕ್ತ ಗಂಧದಿಂದ ಅಲಂಕರಿಸಲಿಲ್ಲ. ನಾನು ನಿನ್ನನ್ನು ಬಂಗಾರದ ಪುಷ್ಪ, ಅಗರುಬತ್ತಿ , ಕರ್ಪೂರದಾರತಿ ಹಾಗೂ ಸಿಹಿ ಖಾದ್ಯಗಳ ನೇವೇದ್ಯವನ್ನು ಅರ್ಪಿಸಲಿಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 8 - ಸಂಸ್ಕೃತದಲ್ಲಿ :
ಧ್ಯಾತ್ವಾ ಚಿತ್ತೇ ಶಿವಾಖ್ಯಂ ಪ್ರಚುರತರಧನಂ ನೈವ ದತ್ತಂ ದ್ವಿಜೇಭ್ಯೋ
ಹವ್ಯಂ ತೇ ಲಕ್ಷಸಂಖ್ಯೈರ್ಹುತವಹವದನೇ ನಾರ್ಪಿತಂ ಬೀಜಮಂತ್ರೈಃ
ನೋ ತಪ್ತಂ ಗಾಂಗತೀರೇ ವ್ರತಜಪನಿಯಮೈ ರುದ್ರಜಾಪ್ಯಂ ನ ಜಪ್ತಂ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಚಿತ್ತದಿ ಶಿವಮಹಿಮೆಯ ನೆನೆದು ದ್ವಿಜರಿಗೆ ಬಲುಧನವನಿತ್ತಿಲ್ಲ
ಬೀಜಮಂತ್ರಸಹಿತ ಲಕ್ಷ ಸಂಖ್ಯೆಯಲಿ ನಿನಗೆ ಹವಿಯರ್ಪಿಸಿಲ್ಲ
ಗಂಗೆತಟದಲಿ ತಪಿಸಲಿಲ್ಲ ನೇಮದಿ ಶಿವಜಪಗೈಯಲಿಲ್ಲ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಹೇ ಮಹಾದೇವಾ ! ನನ್ನ ಹೃದಯದ ಕರೆಗೆ ಓಗೊಟ್ಟು ಬ್ರಾಹ್ಮಣ ಋತ್ವಿಕ್ಕುಗಳಿಗೆ ದಾನ ಧರ್ಮಗಳನ್ನು ಮಾಡಲಿಲ್ಲ. ನಾನು ಯಜ್ಞ ಕುಂಡದಲ್ಲಿನ ಪವಿತ್ರಾಗ್ನಿಗೆ ಸಹಸ್ರಾರು ಬಾರಿ ತುಪ್ಪವನ್ನು ನನ್ನ ಗುರುಗಳು ಉಪದೇಶಿಸಿದ ಪವಿತ್ರ ಮಂತ್ರಗಳನ್ನು ಉಚ್ಚರಿಸುತ್ತಾ ನೀಡಲಿಲ್ಲ. ಗಂಗಾ ತಟದಲ್ಲಿ ಜಪ ತಪಗಳನ್ನಾಗಲೀ ಮತ್ತು ವೇದಾಧ್ಯಯನವನ್ನು ಮಾಡಲೇ ಇಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 9 - ಸಂಸ್ಕೃತದಲ್ಲಿ :
ನಗ್ನೋ ನಿಃಸಂಗಶುದ್ಧಸ್ತ್ರಿಗುಣವಿರಹಿತೋ ಧ್ವಸ್ತಮೋಹಾಂಧಕಾರೋ
ನಾಸಾಗ್ರನ್ಯಸ್ತದೃಷ್ಟಿರ್ವಿದಿತಭವಗುಣೋ ನೈವ ದೃಷ್ಟಃ ಕದಾಚಿತ್
ಉನ್ಮನ್ಯಾsವಸ್ಥಯಾ ತ್ವಾಂ ವಿಗತಕಲಿಮಲಃ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ನಗ್ನ ನಿಸ್ಸಂಗ ವಿಮಲ ತ್ರಿಗುಣಮೀರಿದ, ಮೋಹ ತಮರಹಿತ
ನಾಸಾಗ್ರ ಕೇಂದ್ರಿತ ದೃಷ್ಟಿಗೆ ಲಭಿಸುವಭವನನೆಂದೂ ಕಾಣಲಿಲ್ಲ
ಪಾಪನಾಶಗೈವ ನಿನ್ನ ಶಿವರೂಪವನು ಭಕ್ತಿಭಾವದಲಿ ನೆನೆಯಲಿಲ್ಲ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಹೇ ಶಂಭೋ ಶಂಕರನೇ, ಶುದ್ಧ ಸ್ಫಟಿಕದಂತಿರುವ ನಿರಾಸಕ್ತನಾದ, ದಿಗಂಬರನಾದ ನಿನ್ನನ್ನು ನಾನು ಯಾವುದೇ ಸಮಯಯದಲ್ಲೂ ವೀಕ್ಷಿಸಲಿಲ್ಲ. ತ್ರಿಗುಣಾತೀತ, ಅಂಧಕಾರ ಮತ್ತು ಮಾಯಾ ಬಂಧಮುಕ್ತ, ಸದಾ ಧ್ಯಾನಮಗ್ನ ಮತ್ತು ಜಗತ್ತಿನ ನೈಜಸ್ವರೂಪವನ್ನು ಸದಾ ಅರಿತಿರುವ ನಿನ್ನನ್ನು ನೆನೆಯಲಿಲ್ಲ. ಅಲ್ಲದೇ ಉತ್ಕಟವಾದ ಹೃದಯಪೂರಿತ ಹಂಬಲದಿಂದ ಎಂದೂ ನಿನ್ನ ಪವಿತ್ರ ಮತ್ತು ಪಾಪ ನಾಶಕ ರೂಪವನ್ನು ಧ್ಯಾನಿಸಲೇ ಇಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 10 - ಸಂಸ್ಕೃತದಲ್ಲಿ :
ಸ್ಥಿತ್ವಾ ಸ್ಥಾನೇ ಸರೋಜೇ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮಮಾರ್ಗೇ
ಶಾಂತೇ ಸ್ವಾಂತೇ ಪ್ರಲೀನೇ ಪ್ರಕಟಿತವಿಭವೇ ದಿವ್ಯರೂಪೇ ಶಿವಾಖ್ಯೇ
ಲಿಂಗಾಗ್ರೇ ಬ್ರಹ್ಮವಾಕ್ಯೇ ಸಕಲತನುಗತಂ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಪದ್ಮಾಸನದಿ ಕುಳಿತು ಓಂಕಾರ ಕುಂಭಕದ ಸೂಕ್ಷ್ಮಮಾರ್ಗದಲಿ
ಶಾಂತ ಸ್ವಾಂತದಲಿ ಕರಗಿ ಪರಶಿವನ ದಿವ್ಯರೂಪ ವೈಭವವ
ಲಿಂಗದಲಿ ಬ್ರಹ್ಮವಾಕ್ಯದಿ ತನು ಲಯಗೊಳ್ವಂತೆ ನಿನ್ನ ನೆನೆಯಲಿಲ್ಲ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಎಂದೂ ನಾನು ಪದ್ಮಾಸನದಲ್ಲಿ ಕುಳಿತು ಓಂಕಾರವನ್ನು ಸತತವಾಗಿ ಜಪಿಸುತ್ತಾ ಸುಷುಮ್ನಾ ನಾಡಿಯೊಂದಿಗೆ ಪ್ರಾಣವನ್ನು ಹಿಡಿತಲ್ಲಿಟ್ಟುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ನನ್ನ ಮನದಲ್ಲಿ ಸದಾ ಹೊಯ್ದಾಡುತ್ತಿರುವ ಪ್ರಕ್ಷುಬ್ದ ಅಲೆಗಳನ್ನು ಹತೋಟಿಯಲ್ಲಿಡುವುದಾಗಲೀ, ಸ್ವಯಂ ಪ್ರಜ್ವಲಿಸುವ ಓಂ ಕಾರದೊಂದಿಗೆ ಲೀನಗೊಳಿಸಲು ಯಾವುದೇ ಪ್ರಯತ್ನವನ್ನಾಗಲೀ, ಅತ್ಯುನ್ನತ ಬ್ರಹ್ಮನ ಸ್ವಭಾವವಾದ ಹಾಗೂ ಸದಾ ಪ್ರಜ್ವಲಿಸುವ ಸಾಕ್ಷೀಭೂತ ಜಾಗೃತಿಯಲ್ಲಾಗಲೀ, ಲೀನಗೊಳಿಸಲು ಪ್ರಯತ್ನಿಸಲೇ ಇಲ್ಲ. ಅಲ್ಲದೇ ಶಂಕರನ ಎಲ್ಲ ರೂಪಗಳನ್ನೂ ನನ್ನ ಅಂತರಂಗದಲ್ಲಿ ಚಿತ್ತೈಸಿಕೊಂಡು ಸಮಾಧಿ ಸ್ಥಿತಿಯಲ್ಲಿ ಧ್ಯಾನಿಸಲೇ ಇಲ್ಲ.
ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಶ್ಲೋಕ - 11 - ಸಂಸ್ಕೃತದಲ್ಲಿ :
ಹೃದ್ಯಂ ವೇದಾಂತವೇದ್ಯಂ ಹೃದಯಸರಸಿಜೇ ದೀಪ್ತಮುದ್ಯತ್ಪ್ರಕಾಶಂ
ಸತ್ಯಂ ಶಾಂತಸ್ವರೂಪಂ ಸಕಲಮುನಿಮನಃಪದ್ಮಷಂಡೈಕವೇದ್ಯಮ್
ಜಾಗ್ರತ್ಸ್ವಪ್ನೇ ಸುಷುಪ್ತೌ ತ್ರಿಗುಣವಿರಹಿತಂ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ
ಕನ್ನಡದಲ್ಲಿ :
ಹೃದ್ಯನ ವೇದಾಂತವೇದ್ಯನ ಹೃದಯಕಮಲದಲಿ ಬೆಳಗುವನ
ಸತ್ಯ ಶಾಂತ ರೂಪನ ಮುನಿಮನಪದ್ಮರೂಪಕೆ ಗೋಚರನ
ಎಚ್ಚರ ಕನಸು ನಿದ್ದೆಗಳಲಿ ತ್ರಿಗುಣರಹಿತನೆ ನಿನ್ನ ನೆನೆಯಲಿಲ್ಲ
ಮನ್ನಿಸು ಎನ್ನಪರಾಧ ಶಿವ ಶಿವ ಹೇ ಮಹಾದೇವ ಶಂಭು
ವಿವರಣೆ :
ಮನಮೋಹಕನೂ, ವೇದಾಂತಗಳಿಂದ ತಿಳಿಯಲ್ಪಡುವವನೂ, ಹೃತ್ಕಮಲದಲ್ಲಿ ಬೆಳಗುತ್ತಿರುವವನೂ, ಪ್ರಕಾಶಮಯನೂ, ಸತ್ಯನೂ ಶಾಂತಸ್ವರೂಪನೂ, ಮುನಿಗಳ ಹೃತ್ಕಮಲಕ್ಕೆ ಮಾತ್ರ ತಿಳಿಯಲ್ಪಡುವವನೂ, ಜಾಗ್ರತ್-ಸ್ವಪ್ನ-ಸುಷುಪ್ತಿಗಳೆನ್ನುವ ಮೂರು ಅವಸ್ತಾತ್ರಯಗಳಲ್ಲಿಯೂ ತ್ರಿಗುಣರಹಿತನಾಗಿರುವವನೂ ಆಗಿರುವ ಮಂಗಲಮಯ ಸ್ವರೂಪನಾಗಿರುವ ಶಂಕರನೇ ನಿನ್ನನ್ನು ನಾನೆಂದೂ ಸ್ಮರಿಸಲಿಲ್ಲ. ಆದ ಕಾರಣ ಹೇ ! ಶಂಕರನೇ ! ಹೇ ! ಮಹಾದೇವನೇ ! ಹೇ ! ಶಿವನೇ ! ಹೇ ! ಸ್ವಾಮೀ ! ಹೇ ! ಶಂಭುವೇ; ನನ್ನ ಸರ್ವಾಪರಾಧಗಳನ್ನೂ ಕ್ಷಮಿಸು.
ಶ್ಲೋಕ - 12 - ಸಂಸ್ಕೃತದಲ್ಲಿ :
ಚಂದ್ರೋಧ್ಬಾಸಿತಶೇಖರೇ ಸ್ಮರಹರೇ ಗಂಗಾಧರೇ ಶಂಕರೇ
ಸರ್ಪೈಭೂಷಿತಕಂಠಕರ್ಣವಿವರೇ ನೇತ್ರೋತ್ಥವೈಶ್ವಾನರೇ
ದಂತಿತ್ವಕ್ಕೃತ ಸುಂದರಾಂಬರಧರೇ ತ್ರೈಲೋಕ್ಯಸಾರೇ ಹರೇ
ಮೋಕ್ಷಾರ್ಥಂ ಕುರು ಚಿತ್ತ ವೃತ್ತಿಮಮಲಾಮನ್ಯೈಸ್ತು ಕಿಂ ಕರ್ಮಭಿಃ
ಕನ್ನಡದಲ್ಲಿ :
ಚಂದಿರ ಹೊಳೆವ ಶಿಖೆಯವನಲಿ ಗಂಗಾಧರ ಶಂಕರನಲಿ
ಉರಗಭೂಷಿತ ಕೊರಳು ಕರ್ಣದವನಲಿ ವೈಶ್ವಾನರ ನೇತ್ರನಲಿ
ಗಜಚರ್ಮದ ಚಾರುವಸ್ತ್ರಧರ ಮೂಲೋಕಸಾರ ಹರನಲಿ
ನಿರ್ಮಲ ಮನವನಿಡು ಮೋಕ್ಷಕೆ ಬೇರೆ ಕರ್ಮಗಳಿಂದೇನು?
ವಿವರಣೆ :
ಎಲೆ ಮನವೇ ಮುಕ್ತಿಯನ್ನು ಪಡೆಯಲು ಭಗವಾನ್ ಶಂಕರನಲ್ಲಿ ಸಂಪೂರ್ಣವಾಗಿ ಕೇಂದ್ರೀಕರಿಸು. ಆತನೇ ಪ್ರಪಂಚದ ಎಕೈಕ ನಿರ್ಗುಣನು, ಸರ್ವರಿಗೂ ಶುಭವನ್ನುಂಟು ಮಾಡುವವನು; ಅವನ ಶಿರದಲ್ಲಿ ಅರ್ಧಚಂದ್ರನು ಹೊಳೆಯುತ್ತಿರುವನು ಮತ್ತು ಅವನ ಜಟೆಯಲ್ಲಿ ಗಂಗೆಯು ಅಡಗಿರುವಳು. ಕಾಮದೇವನನ್ನು ದಗ್ಧಗೊಳಿಸಿದ ಬೆಂಕಿಯು ಅವನ ನೇತ್ರದಿಂದ ಚಿಮ್ಮುತ್ತಿರುವುದು; ಅವನ ಕಂಠ ಹಾಗೂ ಕಿವಿಗಳನ್ನು ಸರ್ಪವು ಅಲಂಕರಿಸಿವೆ. ಅವನ ಮೇಲ್ವಸ್ತ್ರವು ಗಜಚರ್ಮವಾಗಿರುವುದು. ಹೀಗೆ ಮನಸ್ಸನ್ನು ಶಂಕರನಲ್ಲಿ ಕೇಂದ್ರೀಕರಿಸಿದಮೇಲೆ ಸಾಮಾನ್ಯ ಆಚರಣೆಗಳ ಉಪಯೋಗವೇನು ?
ಶ್ಲೋಕ - 13 - ಸಂಸ್ಕೃತದಲ್ಲಿ :
ಕಿಂ ಯಾನೇನ ಧನೇನ ವಾಜಿಕರಿಭಿಃ ಪ್ರಾಪ್ತೇನ ರಾಜ್ಯೇನ ಕಿಂ
ಕಿಂ ವಾ ಪುತ್ರಕಲತ್ರಮಿತ್ರಪಶುಭಿರ್ದೇಹೇನ ಗೇಹೇನ ಕಿಮ್
ಜ್ಞಾತ್ವೈತತ್ಕ್ಷಣ ಭಂಗುರಂ ಸಪದಿ ರೇ ತ್ಯಾಜ್ಯಂ ಮನೋ ದೂರತಃ
ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀಪಾರ್ವತೀ ವಲ್ಲಭಮ್
ಕನ್ನಡದಲ್ಲಿ :
ಮೇನೆ ಧನ ಆನೆ ಕುದುರೆಗಳಿಂದೇನು ದೊರೆತ ರಾಜ್ಯದಿಂದೇನು?
ಮಗ ಮಡದಿ ಗೆಳೆಯ ಪಶು ದೇಹ ಮನೆಯಿಂದಲೇನು?
ಕ್ಷಣಭಂಗುರತೆಯರಿತು ಬೇಗನೆ ಮನದಿಂದ ತೊಲಗಿಸಿವನು
ನಿನ್ನಾತ್ಮಕ್ಕಾಗಿ ಗುರುಮಂತ್ರದಿಂ ಭಜಿಸು ಭಜಿಸು ಪಾರ್ವತೀಪತಿಯ
ವಿವರಣೆ :
ಎಲೆ ಮನವೇ, ಸಂಪತ್ತು ಅಥವಾ ಆನೆ, ಕುದುರೆ ಅಥವಾ ರಾಜ್ಯಗಳ ಪ್ರಯೋಜನವೇನು ? ಪತ್ನಿ, ಪುತ್ರ, ಬಂಧು ಬಾಂಧವರು, ಪಶು ಸಂಪತ್ತು, ನಿನ್ನ ಈ ಶರೀರ ಮತ್ತು ಮನೆಯ, ಪ್ರಯೋಜನವೇನು? ಇವೆಲ್ಲವೂ ನಶ್ವರವೆಂಬುದನ್ನು ಅರಿತುಕೊ ಮತ್ತು ಶೀಘ್ರವಾಗಿ ಅವೆಲ್ಲವುಗಳನ್ನೂ ತ್ಯಜಿಸು. ನಿನ್ನ ಗುರುಗಳ ನಿರ್ದೇಶನದಂತೆ ಆತ್ಮ ಜ್ಞಾನವನ್ನು ಹೊಂದಲು ಕೇವಲ ಶಿವನನ್ನು ಮಾತ್ರ ಪೂಜಿಸು.
ಶ್ಲೋಕ - 14 - ಸಂಸ್ಕೃತದಲ್ಲಿ :
ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಂ ಯೌವನಂ
ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ
ಲಕ್ಷ್ಮೀಸ್ತೋಯತರಂಗಭಂಗಚಪಲಾ ವಿದ್ಯುಚ್ಚಲಂ ಜೀವಿತಂ
ತಸ್ಮಾನ್ಮಾಂ ಶರಣಾಗತಂ ಕರುಣಯಾ ತ್ವಂ ರಕ್ಷ ರಕ್ಷಾಧುನಾ
ಕನ್ನಡದಲ್ಲಿ :
ಆಯು ನಶಿಪುದು ನೋಡನೋಡುತಲಿ ಕುಗ್ಗುವುದು ಯೌವನ
ಕಳೆದ ದಿನಗಳು ಮತ್ತೆ ಬಾರವು ಕಾಲವುಣುವುದು ಜಗವನು
ಸಿರಿಯು ನೀರಿನಲೆಗಳೊಲು ಚಂಚಲ ಮಿಂಚಿನಂತೆ ಬದುಕು
ಶರಣಾಗತರಾದ ನಮ್ಮನು ಕರುಣೆಯಿಂ ನೀ ರಕ್ಷಿಸು ರಕ್ಷಿಸೀಗ
ವಿವರಣೆ :
ದಿನದಿಂದ ದಿನಕ್ಕೆ ಮನುಷ್ಯನು ಸಾವಿಗೆ ಹತ್ತಿರವಾಗು ವನು. ಅವನ ಯೌವನವು ನಶಿಸುತ್ತದೆ; ಕಳೆದು ಹೋದ ದಿನವು ಎಂದೆಂದಿಗೂ ಮರಳಿ ಬರುವುದಿಲ್ಲ ; ಸರ್ವಶಕ್ತಿಶಾಲಿಯಾದ ಕಾಲವು ಎಲ್ಲವನ್ನೂ ನುಂಗಿ ಹಾಕುತ್ತದೆ. ಭಾಗ್ಯ ದೇವತೆಯು ಹರಿಯುವ ನೀರಿನ ಮೇಲಿನ ತರಂಗಗಳಂತೆ ನಶ್ವರವು ; ಜೀವನವೇ ಮಿಂಚಿನಂತೆ ಚಂಚಲ. ಓ ಶಂಕರನೇ ಮಹಾದೇವನೇ ನಿನ್ನಲ್ಲಿ ಶರಣಾದವರಿಗೆ ಆಶ್ರಯವನ್ನು ನೀಡುವವನೇ ನಿನ್ನ ಪಾದದಲ್ಲಿ ಶರಣಾದ ನನ್ನನ್ನು ರಕ್ಷಿಸು.
ಶ್ಲೋಕ - 15 - ಸಂಸ್ಕೃತದಲ್ಲಿ :
ವಂದೇ ಶಂಭುಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂಪತಿಮ್
ವಂದೇ ಸೂರ್ಯಶಶಾ ಕವಹ್ನಿ ನಯನಂ ವಂದೇ ಮುಕುಂದಪ್ರಿಯಂ
ವಂದೇ ಭಕ್ತ ಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್
ಕನ್ನಡದಲ್ಲಿ :
ವಂದನೆ ದೇವ ಉಮಾಪತಿ ಸುರಗುರು ವಂದನೆ ಜಗಕಾರಣನೆ
ವಂದನೆ ಪನ್ನಗಭೂಷಣ ಮೃಗಧರ ವಂದನೆ ಪಶುಪತಿಗೆ
ವಂದನೆ ಅಗ್ನಿ ರವಿ ಚಂದ್ರನಯನಂಗೆ ವಂದನೆ ಮುಕುಂದಪ್ರಿಯಗೆ
ವಂದನೆ ಭಕ್ತ ಜನಾಶ್ರಯ ವರದಗೆ ವಂದನೆ ಶಿವಶಂಕರಗೆ
ವಿವರಣೆ :
ಸ್ವಯಂಪ್ರಕಾಶ ದೇವಗುರು, ಉಮಾದೇವಿಯ ರಮಣನಿಗೆ ನನ್ನ ವಂದನೆಗಳು. ವಿಶ್ವಕಾರಣನಿಗೆ, ಸಮಸ್ತ ಪಶುಗಳ ಪತಿಗೆ , ಸರ್ಪಭೂಷಣನಿಗೆ , ನನ್ನ ವಂದನೆಗಳು. ಮೂರು ಕಣ್ಣುಗಳು ಸೂರ್ಯ, ಚಂದ್ರಾಗ್ನಿಗಳಂತೆ ಶೋಭಿಸುವ ಶಿವನಿಗೆ ನನ್ನ ವಂದನೆಗಳು. ಶ್ರೀಕೃಷ್ಣನ ಪ್ರೀತಿಪಾತ್ರನಾದ ಶಂಕರನಿಗೆ ನನ್ನ ವಂದನೆಗಳು. ತನ್ನ ಭಕ್ತರ ಕೋರಿಕೆಗಳನ್ನು ಈಡೇರಿಸಿ ಅವರಿಗೆ ಆಶ್ರಯವನ್ನು ನೀಡುವ ಶಂಕರನಿಗೆ ನನ್ನ ವಂದನೆಗಳು. ಪರಮ ಪವಿತ್ರ ಶಂಕರ ಮಹಾದೇವನಿಗೆ ಅನಂತಾನಂತ ವಂದನೆಗಳು.
ಶ್ಲೋಕ - 16 - ಸಂಸ್ಕೃತದಲ್ಲಿ :
ಗಾತ್ರಂ ಭಸ್ಮಸಿತಂ ಸಿತಂ ಚ ಹಸಿತಂ ಹಸ್ತೇ ಕಪಾಲೇ ಸಿತಂ
ಖಟ್ವಾಂಗೇ ಚ ಸಿತಂ ಸಿತಶ್ಚ ವೃಷಭಃ ಕರ್ಣೇ ಸಿತೇ ಕುಂಡಲೇ
ಗಂಗಾ ಫೇನ ಸಿತಾ ಜಟಾ ಪಶುಪತೇಶ್ಚಂದ್ರಃ ಸಿತೋ ಮೂರ್ಧನಿ
ಸೋsಯಂ ಸರ್ವಸಿತೋ ದದಾತು ವಿಭವಂ ಪಾಪಕ್ಷಯಂ ಸರ್ವದಾ
ಕನ್ನಡದಲ್ಲಿ :
ತನುವು ಬಿಳಿ ನಗೆಯು ಬಿಳಿ ಕರದಲಿ ಬಿಳಿಯ ಕಪಾಲ
ಗದೆ ಬಿಳಿಯು ನಂದಿ ಬಿಳಿ ಬಿಳುಪು ಕರ್ಣಕುಂಡಲ
ಗಂಗೆಯನೊರೆ ತಳೆದ ಜಟೆ ಬಿಳಿ ಪಶುಪತಿಶಿರದ ಚಂದ್ರ ಬಿಳಿ
ಎಲ್ಲ ಶುದ್ಧ ಬಿಳುಪಾದವನೆಮ್ಮ ಪಾಪಕ್ಷಯ ಗೈಯಲಿ
ವಿವರಣೆ :
ಓ ಶಿವನೇ ! ನಿನ್ನ ಶರೀರವು ಪವಿತ್ರ ಭಸ್ಮದಿಂದ ಮುಚ್ಚಲ್ಪಟ್ಟು ಶ್ವೇತವರ್ಣದ್ದಾಗಿದೆ. ನೀನು ಮಂದಸ್ಮಿತನಾದಾಗ ನಿನ್ನ ದಂತ ಪಂಕ್ತಿಗಳು ಶ್ವೇತವರ್ಣದಿಂದ ಮಿನುಗುತ್ತಿರುವುದು. ನಿನ್ನ ಹಸ್ತದಲ್ಲಿರುವ ಕಪಾಲವೂ ಶ್ವೇತವರ್ಣದ್ದಾಗಿರುವುದು. ನಿನ್ನ ಮತ್ತೊಂದು ಹಸ್ತದಲ್ಲಿರುವ ದುಷ್ಟರನ್ನು ಭೀತಿಗೊಳಿಸುವ ತ್ರಿಶೂಲವೂ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದೆ. ನಿನ್ನ ಕರ್ಣಕುಂಡಲಗಳೂ ಬಿಳಿ ಬಣ್ಣದಿಂದ ಮಿರುಗುತ್ತಿದೆ. ನೀನು ಸವಾರಿ ಮಾಡುವ ನಂದಿಯೂ ಕೂಡ ಶುಭ್ರ ಶ್ವೇತವರ್ಣದ್ದಾಗಿದೆ. ನಿನ್ನ ಜಟೆಯು ಗಂಗೆಯ ನೊರೆಯಿಂದ ಬಿಳಿಯಾಗಿ ಕಾಣುತ್ತಿದೆ. ನಿನ್ನ ಶಿರದಲ್ಲಿರುವ ಚಂದ್ರನೂ ಸಹ ಬಿಳಿ ಬಣ್ಣದಿಂದ ಮಿನುಗುತ್ತಿರುವನು. ಸರ್ವಸ್ವವೂ ಶ್ವೇತವರ್ಣದಿಂದಾವೃತವಾದ, ಪರಿಶುದ್ಧನಾದ ಶಂಕರ ಭಗವಾನನು ನನ್ನ ಅತಿಕ್ರಮಣಕ್ಕಾಗಿ ನನ್ನ ಮೇಲೆ ಕ್ಷಮೆಯ ಮಳೆಯನ್ನು ಸುರಿಸಲಿ.
ಶ್ಲೋಕ - 17 - ಸಂಸ್ಕೃತದಲ್ಲಿ :
ಕರಚರಣಕೃತಂ ವಾಕ್ ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ
ವಿಹಿತಂಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ
ಕನ್ನಡದಲ್ಲಿ :
ಕರಚರಣ ನುಡಿ ಕಾಯದಲೋ ಕಾರ್ಯದಲ್ಲೋ
ಕಿವಿಕಣ್ಣು ಮನದೊಳೋ ಗೈದ ಅಪರಾಧಗಳ
ವಿಹತವೋ ಅವಿಹತವೋ ಎಲ್ಲವನು ಕ್ಷಮಿಸೋ
ಜಯ ಜಯ ದಯಾಸಿಂಧು ಸಿರಿ ಮಹಾದೇವ ಶಂಭು
ವಿವರಣೆ :
ಹೇ ಶಂಭೋ ಶಂಕರನೇ ! ನನ್ನ ಹಸ್ತದಿಂದಾಗಲೀ, ಪಾದಗಳಿಂದಾಗಲೀ , ಕಿವಿ, ಕಣ್ಣುಗಳಿಂದಾಗಲೀ, ಕಾಯಾ, ವಾಚಾ , ಮನಸಾ, ಹಾಗೂ ಹೃದಯಗಳಿಂದಾಗಲೀ, ಘಟಿಸಿದ ಪಾಪಗಳನ್ನು ಕ್ಷಮಿಸು. ನನ್ನ ಹಿಂದಿನ ಹಾಗೂ ಮುಂದಾಗುವ ಪಾಪಗಳಿಂದ ನನ್ನನ್ನು ಕ್ಷಮಿಸು ಹಾಗೂ ರಕ್ಷಿಸು. ದೈವಕೃಪೆಯ ತಾಣ, ದೇವ ದೇವ ಮಹಾದೇವ , ದಯಾಕರುಣಾಸಿಂಧು, ಶಂಕರ ಭಗವಾನನಿಗೆ ಜಯವಾಗಲಿ.
ಲೇಖನದ ಮೂಲಗಳು :
ಸಂಸ್ಕೃತ ಶ್ಲೋಕಗಳು : vignanam.org/veda/shiva-aparadha-kshmapana-stotram
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರ ಚಂದ್ರಿಕೆ”
ವಿವರಣೆಗಳು: arunachala-ramana.org/forum – ಆಂಗ್ಲ ಭಾಷೆಯಲ್ಲಿನ ವಿವರಣೆಗಳ ಭಾವಾರ್ಥವನ್ನು ಪ್ರಸ್ತ್ರುತಿ ಪಡಿಸಿದವರು : ಗುರುಪ್ರಸಾದ್ ಹಾಲ್ಕುರಿಕೆ.