Saturday, June 2, 2018

ದೇವೀ ಅಪರಾಧ ಕ್ಷಮಾಪಣಾ ಸ್ತೋತ್ರ



ದೇವೀ ಅಪರಾಧ ಕ್ಷಮಾಪಣಾ ಸ್ತೋತ್ರ


ಪ್ರಸ್ತಾವನೆ:
ಆದಿ ಶಂಕರಾಚಾರ್ಯರು ರಚಿಸಿರುವ ಈ ಸ್ತೋತ್ರವನ್ನು ಸಾಮಾನ್ಯವಾಗಿ ದೇವಿ ಪೂಜೆಯ ನಂತರ ಅಥವಾ ಚಂಡಿ ಪಥದ ವಾಚನದ ನಂತರ ಪಠಿಸಲಾಗುವುದು. ಈ ಸ್ತೋತ್ರವನ್ನು ಪಠಿಸುವಾಗ ಹಾಗೂ ದೇವಿಯ ಪೂಜೆಯ ವೇಳೆಯಲ್ಲಿ ಘಟಿಸುವ ಯಾವುದೇ ಅಪರಾಧಗಳಬಗ್ಗೆ ಕ್ಷಮಾಪಣೆಯನ್ನು ದೇವಿಯಲ್ಲಿ ಕೇಳಿಕೊಳ್ಳುವುದು. ಈ ಸ್ತೋತ್ರದ ಸಾರವೆಂದರೆ ದೇವಿಯಲ್ಲಿ ಸಂಪೂರ್ಣ ಶರಣಾಗತಿಯನ್ನು ಬೇಡುವುದು ಹಾಗೂ ಕ್ಷಮಾಪಣೆಯನ್ನು ಸಲ್ಲಿಸುವುದು. ಹೀಗೆ ತಾಯಿಯು ಮಗನನ್ನು (ಅವನು ಯಾವುದೇ ತಪ್ಪುಗಳನ್ನು ಮಾಡಿದ್ದರೂ ಸಹ) ಯಾವುದೇ ಸಂದರ್ಭದಲ್ಲೂ ತೊರೆಯುವುದಿಲ್ಲವೋ ಹಾಗೆ ಈ ಸ್ತೋತ್ರದಲ್ಲಿ ದೇವಿಯು ಭಕ್ತನನ್ನು ತನ್ನ ಮಗನಂತೆ  ಕಾಪಾಡಿ ಹಾಗೂ ಕ್ಷಮಿಸುವಂತೆ ಪ್ರಾರ್ಥಿಸುವುದು.    


ಶ್ಲೋಕ - 1 - ಸಂಸ್ಕೃತದಲ್ಲಿ :

ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್
ಕನ್ನಡದಲ್ಲಿ :

ಅರಿಯೆ ಮಂತ್ರವ ಯಂತ್ರವರಿಯೆ ಅರಿಯೆ ನಾನಾವಾಹನೆಯ
ಪರಿಪರಿಯ ಧ್ಯಾನವರಿಯೆ ಸ್ತೋತ್ರ ಕಥೆ ಪೂಜೆಯರಿಯೆ
ಅರಿಯೆ ನಿನ್ನಯ ಮುದ್ರೆ ನಿನ್ನ ನೆನೆಯುತ ಪರಿತಪಿಸಲರಿಯೆ
ಅರಿತಿಹೆನು ನಾನಿದನು ತಾಯೆ : ನಿನ್ನನುಸರಣ ತಾಪಹರ

ವಿವರಣೆ :

ನನಗೆ ಮಂತ್ರವನ್ನು ಉಚ್ಚರಿಸುವುದಾಗಲೀ ಅಥವಾ ಕ್ರಮವಾಗಲೀ ಇಲ್ಲವೇ ಹೇಗೆ ಪ್ರಾರ್ಥನೆ ಮಾಡಬೇಕೆನ್ನುವುದು ಅರಿಯದು. ನಿಮ್ನನ್ನು ಹೇಗೆ ಆವಾಹಿಸುವುದು ಎಂಬುದನ್ನರಿಯೆ. ನಿನ್ನನ್ನು ಕುರಿತು ಧ್ಯಾನಿಸುವುದನ್ನರಿಯೆ. ಯಾವುದೇ ರೀತಿಯ ಸ್ತೋತ್ರಗಳ ಬಗ್ಗೆ ಅರಿಯೆ. ಸಂಕೇತದ ಮೂಲಕ ನಿನ್ನನ್ನು ಪ್ರಾರ್ಥಿಸುವುದಾಗಲೀ ಮತ್ತು ಹೃದಯಾಂತರಾಳದಿಂದ ನಿನ್ನನ್ನು ಬೇಡಿಕೊಳ್ಳುವುದನ್ನರಿಯೆ. ಆದರೆ ನನಗೆ ಗೊತ್ತಿರುವುದು ಒಂದೇ ಮಾರ್ಗ. ಅದೆಂದರೆ ನಿನ್ನ ಪ್ರೀತಿಯ ಪರಿಧಿಯೊಳಗಿದ್ದು ನಿನ್ನನ್ನು ಅನುಸರಿಸುವುದು ಮಾತ್ರ. ಹೀಗೆ ಮಾಡಿದಲ್ಲಿ ನನಗೆ ಗೊತ್ತಿರುವುದೇನೆಂದರೆ ನನ್ನ ಎಲ್ಲ ಕಷ್ಟಗಳೂ ದೂರಾಗುವುವು ಎಂಬುದು.

ಶ್ಲೋಕ - 2 - ಸಂಸ್ಕೃತದಲ್ಲಿ :

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ         
ಕನ್ನಡದಲ್ಲಿ :

ಕ್ರಮವನರಿಯದೆ ಧನವಿರದೆ ಆಲಸ್ಯದಿಂದ
ಭ್ರಮೆಯಲವಿನಯದಿ ದೂರಾಯ್ತು ನಿನ್ನ ಪಾದ
ನಮಿಪೆ ಶಿವೆ ತಾಯೆ ಮಂಗಳೆ ಮನ್ನಿಸೆಲ್ಲವನು
ಕುವರ ಜನಿಸುವುದುಂಟು ಕೆಟ್ಟವ ಕುಮಾತೆಯಿರಳೆಂದೂ


ವಿವರಣೆ :

ಓ ಕರುಣಾಮಯಿಯೆ (ಯಾವುದೇ ಭೇದವಿಲ್ಲದೆ ಎಲ್ಲ ಭಕ್ತರಿಗೂ ಮುಕ್ತಿ ಮಾರ್ಗವನ್ನು ತೋರುವವಳೆ) ನಿನ್ನ ಪೂಜಿಸುವ ಮಾರ್ಗವನ್ನರಿಯೆ ಮತ್ತು ಸ್ವಾಭಾವಿಕವಾಗಿ ನಾನು ಮಂದಮತಿ. ಸರಿಯಾದ ಕ್ರಮದಲ್ಲಿ ನಿನ್ನನ್ನು ಪೂಜಿಸಲು ನಾನು ಅಶಕ್ಯನು. ಇವೆಲ್ಲ ನ್ಯೂನತೆಗಳಿಂದ ನನ್ನಿಂದ ಏನಾದರೂ ತಪ್ಪುಗಳಾಗಿದ್ದಲ್ಲಿ ದಯಮಾಡಿ ಅವುಗಳನ್ನು ಕಡೆಗಣಿಸು. ಏಕೆಂದರೆ ಕೆಟ್ಟ ಮಗನಿರಬಹುದು ಆದರೆ ಮಾತೆಯ ಸ್ವಭಾವವು ಎಂದಿಗೂ ಕೆಟ್ಟದ್ದಾಗಿರುವುದಿಲ್ಲ.

ಶ್ಲೋಕ - 3 -  ಸಂಸ್ಕೃತದಲ್ಲಿ :

ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸಂತಿ ಕೃತಿನಃ
ಪರಂ ತೇಷಾಂ ಮಧ್ಯೇ ವಿರಲತರಲೋsಹಂ ತವಸುತಃ |
ಮದೀಯೋsಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ
ಕನ್ನಡದಲ್ಲಿ :

ಬುವಿಯಲನೇಕ ಪುತ್ರರು ನಿನಗೆ ಪುಣ್ಯವಂತರು
ಅವರೊಳಗತ್ಯಲ್ಪನು ನಾನಮ್ಮ ನಿನ್ನ ಮಗನು
ಶಿವೆಯೆ ಎನ್ನ ಕೈಯ ಬಿಡುವುದುಚಿತವೆ ನಿನಗೆ
ಕುವರ ಜನಿಸುವುದುಂಟು ಕೆಟ್ಟವ ಕುಮಾತೆಯಿರಳೆಂದೂ


ವಿವರಣೆ :

ಹೇ ಮಾತೆ ! ಭೂಮಿಯಲ್ಲಿ ನಿನಗೆ ಒಳ್ಳೆಯ ಗಂಡುಮಕ್ಕಳು ಹಾಗೂ ಹೆಣ್ಣುಮಕ್ಕಳು ಅನೇಕರಿರಬಹುದು, ಆದರೆ ಅವರುಗಳ ಪೈಕಿ ನಾನು ಅತಿ ಕೆಟ್ಟ ಮಗು. ಹೇ ದೇವಿಯೆ ! ನಾನು ನಿನ್ನಬಳಿಯಲ್ಲೇ ಕೇಂದ್ರೀಕೃತನಾಗಿಲ್ಲದಿದ್ದರಿಂದಾಗಿ ನೀನು ನನ್ನನ್ನು ತೊರೆದಿರಬಹುದು, ಆದರೆ ಇದು ಉಚಿತವದದ್ದಲ್ಲ , ಏಕೆಂದರೆ ಮಗನು ಕೆಟ್ಟವನಾಗಿರಬಹುದಾದರೂ ಮಾತೆಯೆಂದಿಗೂ ಕೆಟ್ಟವಳಾಗುವುದಿಲ್ಲ.

ಶ್ಲೋಕ - 4 - ಸಂಸ್ಕೃತದಲ್ಲಿ :

ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ  
ಕನ್ನಡದಲ್ಲಿ :

ಜಗದಂಬೆ ನಿನ್ನ ಪದಸೇವೆ ಗೈಯಲಿಲ್ಲ
ಮಿಗು ಧನವ ನಿನಗೆ ದೇವಿಯೆ ನಾ ನೀಡಲಿಲ್ಲ
ಹಗಲಿರುಳು ಸ್ನೇಹಸುಧೆಯನೆರೆಯುತಿಹೆಯಲ್ಲ
ಕುವರ ಜನಿಸುವುದುಂಟು ಕೆಟ್ಟವ ಕುಮಾತೆಯಿರಳೆಂದೂ


ವಿವರಣೆ :

ಹೇ ವಿಶ್ವಮಾತೆ ! ನಾನು ನಿನ್ನ ಪಾದ ಸೇವೆಯನ್ನು ಮಾಡಲೇ ಇಲ್ಲ. ನಾನು ನಿನಗೆ ನನ್ನದಾದ ಸಂಪತ್ತನ್ನು ಅರ್ಪಿಸಲಿಲ್ಲ. ಆದರೆ ಆಶ್ಚರ್ಯಕರವಾದದ್ದೆಂದರೆ ನೀನು ನಿನ್ನ ಕರುಣಾಪೂರಿತ ಅನುಗ್ರಹವನ್ನು ಅನರ್ಹನಾದ ನನ್ನ ಮೇಲೆ ದಯಪಾಲಿಸುತ್ತಿದ್ದೀಯೆ ಏಕೆಂದರೆ ಕೆಟ್ಟ ಮಗನಿರಬಹುದಾದರೂ ಮಾತೆಯೆಂದಿಗೂ ಕೆಟ್ಟವಳಾಗುವುದು ಸಾಧ್ಯವೇ ಇಲ್ಲ.


ಶ್ಲೋಕ - 5 - ಸಂಸ್ಕೃತದಲ್ಲಿ :

ಪರಿತ್ಯಕ್ತ್ವಾ  ದೇವಾನ್ ವಿವಿಧವಿಧಿಸೇವಾಕುಲತಯಾ
ಮಯಾ ಪಂಚಾಶೀತೇರಧಿಕಮುಪನೀತೇ ತು ವಯಸಿ |
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್
ಕನ್ನಡದಲ್ಲಿ :

ವಿವಿಧ ವಿಧಿ ತೊಡಕಿನಲಿ ದೇವರುಗಳರ್ಚನೆಯ ತೊರೆದೆ
ಬುವಿಯಲೆಪ್ಪತ್ತೈದು ವರುಷ ಕಳೆದುವಾಗಲೆ ಎನಗೆ
ತವಕೃಪೆಯೂ ಇಲ್ಲದೊಡೆ ತಾಯೆ ಗಣೇಶ ಜನನಿ
ಶಿವೆಯೆ ಅನಾಥನು ನಾನಾರ ಶರಣು ಹೊಗಲಿ ?


ವಿವರಣೆ :

ಹೇ ಪಾರ್ವತಿ ಮಾತೆ ! ಗಣೇಶನಿಗೆ ಜನ್ಮನೀಡಇದವಳೆ, ನಾನು ಬೇರೆ ದೇವರುಗಳನ್ನು ಪ್ರಾರ್ಥಿಸುತ್ತಿರುವಾಗ, ನಾನು ಬೇರೆ ಬೇರೆ ಕಾರ್ಯಗಳಲ್ಲಿ ಮಗ್ನನಾಗಿರುವಾಗ, ಎಲ್ಲ ದೇವರುಗಳೂ ನನಗೆ ಎಪ್ಪತ್ತೈದು ವರ್ಷಗಳಾಗಿದೆಯೆಂದು ಮತ್ತು ನಾನು ಅವರುಗಳನ್ನು ಕುರಿತು ಪ್ರಾರ್ಥಿಸಲು ಆಗುವುದಿಲ್ಲವೆಂದು, ನನ್ನನ್ನು ತೊರೆದರು. ನಾನು ಹತಾಶನಾಗಿದ್ದೇನೆ ಏಕೆಂದರೆ ಉಳಿದ ದೇವರುಗಳಿಂದ ಯಾವುದೇ ಸಹಾಯವನ್ನೂ ನಿರೀಕ್ಷಿಸಲಾರೆ. ಹೇ ಮಾತೆ ನೀನೂ ಸಹ ಈ ಸಂದರ್ಭದಲ್ಲಿ ನನ್ನನ್ನು ತೊರೆದರೆ ನಿನ್ನನ್ನು ಹೊರತುಪಡಿಸಿ ಸಹಾಯಕ್ಕಾಗಿ ನಾನು ಬೇರೆಲ್ಲಿಗೆ ಹೋಗಲಿ ?

ಶ್ಲೋಕ - 6 - ಸಂಸ್ಕೃತದಲ್ಲಿ :

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ
ಕನ್ನಡದಲ್ಲಿ :

ಎರೆಯೆ ನಿನ್ನಯ ಮಂತ್ರ ಚಂಡಾಲನೊರೆವನು ಜೇನ್ನುಡಿಯ
ತಿರಿದುಂಬ ಬಡವ ಮೆರೆವನು ವಿಭವದಿ ಕುಬೇರನಂತೆ
ಸುರೆಯೊಲಿಹ ನಿನ್ನ ಮಂತ್ರಾಕ್ಷರವ ಕಿವಿಯೊಳಿರಿಸಲೀ -
ಪರಿ ಜನನಿ ನಿನ್ನ ಜಪನಿರತಗೇನು ಫಲ ಬಲ್ಲವರಾರೋ !

ವಿವರಣೆ :

ಹೇ ಮಾತೆ ! ಯಾರೇ ಆದರೂ ನಿನ್ನ ಗುಣಗಾನಗಳ ಒಂದು ಪದವನ್ನು ಕೇಳಿದರೆ ಸಾಕು ಅದರ ಫಲವು , ನೀಚ ವ್ಯಕ್ತಿಯೂ ಸಹ ಮಧುರವಾಗಿ ನಿನ್ನ ಗಾನವನ್ನು ಜೇನಿನಂತೆ ಮಾಡಿ, ನಿಪುಣ ಮಾತುಗಾರನಾಗುತ್ತಾನೆ, ಕಡುಬಡವನಿಗೂ ಸಹ ನೀನು, ಅವನಿಗೆ ತಕ್ಕ ಕೆಲಸವನ್ನು ನೀಡುತ್ತೀಯ. ಕೇವಲ ನಿನ್ನ ಗಾಯನದಲ್ಲಿನ ಒಂದು ಪದಕ್ಕೇ ಇಷ್ಟೊಂದು ಶಕ್ತಿ ಯಿದ್ದಲ್ಲಿನಿನ್ನ ಗಾಯನವನ್ನು ಸತತವಾಗಿ ಹಾಗೂ ಕ್ರಮಬದ್ಧವಾಗಿ ಮಾಡುವವರಿಗೆ ಯಾವ ಫಲವು ದೊರಕುತ್ತದೆಂಬುದನ್ನು ನಾವು ಊಹೆಮಾಡಲೂ ಅಸಾಧ್ಯ ಮತ್ತು ಯಾರಾತ ಮಹಾಮಹಿಮ ಇದನ್ನು ಊಹಿಸುವವ ?

ಶ್ಲೋಕ -7 - ಸಂಸ್ಕೃತದಲ್ಲಿ :

ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್-ಪಾಣಿಗ್ರಹಣ-ಪರಿಪಾಟೀ-ಫಲಮಿದಮ್  
ಕನ್ನಡದಲ್ಲಿ :

ಚಿತೆಯ ಬೂದಿಯ ಬಳಿದು ವಿಷವುಂಡ ಬತ್ತಲಿಗ
ಜಟೆ ಭುಜಗಹಾರಧರ ಭೂತಗಳೊಡೆಯ ಪಶು -
ಪತಿಯು ಕರದಿ ಬುರುಡೆ ಪಿಡಿದಾತ ವಿಶ್ವಕಧಿ -
ಪತಿಯಹ ಭವಾನಿ ನಿನ್ನ ಕೈವಿಡಿದ ಫಲದಿಂದ


ವಿವರಣೆ :

ಯಾರ ಶರೀರವನ್ನು ಪವಿತ್ರ ಚಿತಾಭಸ್ಮವನ್ನು ಲೇಪಿಸುವಳೋ, ಯಾರು ವಿಷವನ್ನು ಸೇವಿಸಿರುವನೋ, ಮತ್ತು ಶರೀರವು ನಗ್ನವಾಗಿಹುದೋ, ಹಾಗೂ ಯಾರ ಕೂದಲು ಜಟೆಯಾಕಾರದಲ್ಲಿರುವುದೋ, ಸರ್ಪವನ್ನೇ ಕಂಠಾಹಾರವನ್ನಾಗಿ ಧರಿಸಿರುವನೋ, ತನ್ನ ಹಸ್ತದಲ್ಲಿ ಕಪಾಲವನ್ನು ಭಿಕ್ಷಾಪಾತ್ರೆಯನ್ನಾಗಿ ನೇತುಹಾಕಿಕೊಂಡಿರುವನೋ, ಜಗದೀಶನೆಂಬ ನಾಮವನ್ನು ಪಡೆದಿರುವನೋಓ ದೇವಿಯೇ ! ಭವಾನೀ ಆದಿ ದೇವತೆಯೆ ಅವನಿಗೆ ಹೇಗೆ ಈ ರೀತಿಯ ವಿಶ್ವವ್ಯಾಪಿ ಸ್ಥಾನವು ಲಭಿಸಿತು ?

ಶ್ಲೋಕ -8 - ಸಂಸ್ಕೃತದಲ್ಲಿ :

ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವವಾಂಛಾsಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾsಪಿ ನ ಪುನಃ |
ಆತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವೇ ಶಿವೆ  ಭವಾನೀತಿ ಜಪತಃ
ಕನ್ನಡದಲ್ಲಿ :

ಮುಕುತಿಯಾಕಾಂಕ್ಷೆಯೆನಗಿಲ್ಲ ವೈಭವವ ನಾನೊಲ್ಲೆ
ಸುಖದಾಸೆಯಿಲ್ಲ ಶಶಿಮುಖಿಯೆ ಒಲ್ಲೆ ಜ್ಞಾನವನೂ
ಭಕುತಿಯಲಿ ಬೇಡುವೆ ಮಾತೆ ಮೃಡಾನಿ ರುದ್ರಾಣಿ
ಶಿವೆ ಶಿವೆ ಭವಾನಿಯೆನ್ನುತ ಕಳೆಯಲೆನ್ನ ಭವ


ವಿವರಣೆ :

ಹೇ ಮಾತೆ ನಿನ್ನ ಮುಖಭಾವವು ಚಂದ್ರನಂತಿದೆ ! ನನಗೆ ಮೋಕ್ಷವನ್ನು ಪಡೆಯುವ ಯಾವ ಆಸೆಯೂ ಇಲ್ಲ, ನನಗೆ ಪ್ರಾಪಂಚಿಕ ಸಂಪತ್ತಿನ ಬಗೆಗೂ ಯಾವ ಆಸೆಯೂ ಇಲ್ಲ. ಜ್ಞಾನ ಸಂಪಾದನೆಯ ವಿಷಯದಲ್ಲೂ ಯಾವುದೇ ದಾಹವಿಲ್ಲ. ಹಾಗೂ ನನಗೆ ಸಂತೋಷ ನೆಮ್ಮದಿಗಳನ್ನೂ ಬಯಸುವ ಆಸಕ್ತಿ ಇಲ್ಲ. ಹಾಗಾಗಿ ನನ್ನ ಪ್ರಾರ್ಥನೆಯೆಂದರೆ ನನ್ನ ಉಳಿದ ಆಯುಷ್ಯವನ್ನೆಲ್ಲಾ ನಿನ್ನ ( ದೇವಿಯ) ಅನೇಕ ನಾಮಗಳನ್ನು ಸ್ತುತಿಸುವುದರಲ್ಲೇ ಕಳೆಯಲಿ ಎಂದು.

ಶ್ಲೋಕ - 9 - ಸಂಸ್ಕೃತದಲ್ಲಿ :

ನಾರಾಧಿತಾsಸಿ ವಿಧಿನಾ ವಿವಿಧೋಪಚಾರೈಃ
ಕಿಂ ರುಕ್ಷಚಿಂತನಪರೈರ್ನ ಕೃತಂ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ            
ಕನ್ನಡದಲ್ಲಿ :

ಅನುನಯದೊಳಾರಾಧಿಸಿ ನಾನಿನ್ನನುಪಚರಿಸಲಿಲ್ಲ
ಒಣಚಿಂತನೆಗಳಲಿ ತೊಡಗಿದೆನು ನಿನ್ನ ಸ್ತುತಿಸಲಿಲ್ಲ
ಇನಿತಾದರೂ ಕೃಪೆ ತೋರಿಹೆ ನೀ ಶ್ಯಾಮಲೆಯೆ ಅನಾಥ -
ನೆನಿಸಿದೆನ್ನೊಳು ಉಚಿತವಿದು ನೀನೆನ್ನ ಪೊರೆವ ತಾಯಲ್ತೆ?

ವಿವರಣೆ :

ಹೇ ಮಾತೆ ! (ಶ್ಯಾಮಲ ವರ್ಣದ ಶರೀರವುಳ್ಳವಳೇ), ನಾನು ನಿನ್ನ ಪೂಜೆಯನ್ನು ಅಥವಾ ಪ್ರಾರ್ಥನೆಯನ್ನು ಅನೇಕ ಧಾರ್ಮಿಕ ಪದಾರ್ಥಗಳೊಂದಿಗೆ ಕ್ರಮವಾಗಿ ಮಾಡಲಾಗಲಿಲ್ಲ ( ದೇವಿಯ ಮುಂದೆ ತನ್ನನ್ನೇ ತುಚ್ಚನನ್ನಾಗಿ ಕಾಣುವುದು). ಯಾವಗಲೂ ನನ್ನ ಧ್ಯಾನವು ಸದಾ ಅಡಚಣೆಯಿಂದ ಕೂಡಿದ್ದು ಅದು ಶುದ್ಧ ಸ್ಫಟಿಕದಂತಿರುವುದಿಲ್ಲ. ಈ ಎಲ್ಲ ನ್ಯೂನತೆಗಳಿಗೆ ನಾನು ಏನು ನ್ಯೂನತೆಗಳಿರುವುದು ? ನೀನು ಕರುಣಿಸಬಹುದಾದ ಅತ್ಯುನ್ನತ ಅನುಗ್ರಹವನ್ನು ನನಗೆ ಕರುಣಿಸು. ಆ ಕರುಣಾಮಯಿ ತಾಯಿಯು ಅನರ್ಹ ಮಗನಿಗೂ ಆಶ್ರಯವನ್ನು ನೀಡುವಳು.

ಶ್ಲೋಕ  - 10 - ಸಂಸ್ಕೃತದಲ್ಲಿ :

ಆಪತ್ಸು ಮಗ್ನಃ ಸ್ಮರಣಂ ತ್ವದೀಯಂ ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛಠತ್ವಂ ಮಮ ಭಾವಯೇಥಾಃಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ                                
ಕನ್ನಡದಲ್ಲಿ :

ಕಷ್ಟದಲಷ್ಟೆ ನೆನೆಯುತಿಹೆ ನಿನ್ನ ದುರ್ಗೆ ಕರುಣಾಸಿಂಧು ಹೇಮಾತೆ
ದುಷ್ಟತನವೆನ್ನದಿರಿದನು ಹಸಿವುತೃಷೆಯಲೆ ತಾಯ ನೆನೆವುದಲ್ತೆ


ವಿವರಣೆ :

ಹೇ ಮಾತೆ ! ದುರ್ಗೆದಯಾ ಕರುಣಾ ಸಿಂಧು ! ನನ್ನನ್ನು ಕಷ್ಟ ಕಾರ್ಪಣ್ಯಗಳು ಸುತ್ತುವರಿದು ನನ್ನ ನೆಮ್ಮದಿಯನ್ನು ಹಾಳುಮಾಡುತ್ತಲಿರುವುದರಿಂದ ನಿನ್ನನ್ನು ನೆನೆಯುತ್ತಲಿರುವೆ. ಇದಕ್ಕೆ ಮೊದಲು ನಾನು ನಿನ್ನನ್ನು ಕುರಿತು ಪ್ರಾರ್ಥಿಸಲೇ ಇಲ್ಲ. ದಯಮಾಡಿ ನನ್ನ ಈ ಪ್ರಾರ್ಥನೆಯನ್ನು ದುಷ್ಟತನದಿಂದ ಕೂಡಿದ್ದೆಂದು ಭಾವಿಸದಿರು, ಏಕೆಂದರೆ ಹಸಿವು ಬಾಯಾರಿಕೆಗಳಿಂದ ತಪಿಸುತ್ತಿರುವ ಮಗುವು ಮಾತ್ರವೇ ತಾಯಿಯನ್ನು ನೆನೆಯುವುದಲ್ಲವೇ ?


ಶ್ಲೋಕ - 11 - ಸಂಸ್ಕೃತದಲ್ಲಿ :

ಜಗದಂಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾsಸ್ತಿ ಚೇನ್ಮಯಿ |
ಅಪರಾಧಪರಂಪರಾವೃತಂ ನ ಹಿಮಾತಾ ಸಮುಪೇಕ್ಷತೇ ಸುತಮ್  
ಕನ್ನಡದಲ್ಲಿ :

ಜಗದಂಬೆ ನಿನ್ನ ಕೃಪೆಯೆನ್ನ ಮೇಲಿಹುದು ಸೋಜಿಗವೆ ಹೇಳು
ಬಗೆಬಗೆಯ ಕುಕೃತ್ಯವೆಸಗಿದ ಸುತನ ತಾಯುಪೇಕ್ಷಿಸಳು

ವಿವರಣೆ :

ಹೇ ವಿಶ್ವ ಮಾತೆ, ನಿನ್ನ ಅನುಗ್ರಹದಿಂದ ನಾನು ಆಶ್ಚರ್ಯಚಕಿತನಾಗಿಲ್ಲ. ಮಗನು ತಪ್ಪಿನ ಮೇಲೆ ತಪ್ಪನ್ನು ಮಾಡುತ್ತಲೇ ಇರಬಹುದು ಆದರೆ ಮಾತೆಯು ಎಂದಿಗೂ ಮಗನನ್ನು ಕಡೆಗಾಣಿಸುವುದಿಲ್ಲ.

ಶ್ಲೋಕ - 12 - ಸಂಸ್ಕೃತದಲ್ಲಿ :

ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ  ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ ಯಥಾ ಯೋಗ್ಯಂ ತಥಾ ಕುರು
ಕನ್ನಡದಲ್ಲಿ :

ನನ್ನೊಲು ಪಾಪಿ ನಿನ್ನವೊಲು ಪಾಪನಾಶಕರಿಲ್ಲ
ಇನ್ನೇನು ? ಬಲ್ಲಿದಳು ನೀನೆ ಗೈವುದುಚಿತವನು


ವಿವರಣೆ :

, ಮಹಾದೇವಿಯೇ , ಭಕ್ತ ಪರಾಧೀನೆ ! ಭೂಮಿಯಲ್ಲಿ ನನ್ನಷ್ಟು ಪಾಪಾತ್ಮರು ಬೇರೊಬ್ಬರಿಲ್ಲ ಮತ್ತು ಈ ವಿಧದ ಪಾಪಗಳನ್ನು ಕ್ಷಮಿಸಲು ನಿನ್ನನ್ನು ಬಿಟ್ಟರೆ ಬೇರೊಬ್ಬರಿಲ್ಲ. ಇದೆಲ್ಲವನ್ನೂ ಅರಿತ ನೀನು ಏನನ್ನು ಮಾಡಬೇಕೋ ಅದನ್ನೇ ಮಾಡು.


ಲೀಖನದ ಮೂಲಗಳು:
1.     ಸಂಸ್ಕೃತ ಶ್ಲೋಕಗಳು : stutimandal.com
2.     ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್. ಚಂದ್ರಶೇಖರ್ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
3.     ವಿವರಣೆಗಳು: stutimandal.com  - ಅಂಗ್ಲ ಭಾಷೆಯಲ್ಲಿನ ವಿವರಣೆಯ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ – ಗುರುಪ್ರಸಾದ್ ಹಾಲ್ಕುರಿಕೆ,


5 comments:

  1. ನಮಸ್ಕಾರಗಳು.ಇದನ್ನು ನಾನು ತುಂಬಾ ಸಮಯದಿಂದ ಹುಡುಕುತ್ತಿದ್ದೆ. ಈ ಸುದಿನ ಜಗನ್ಮಾತೆ ನಿಮ್ಮ ಮೂಲಕ ನನ್ನ ಪ್ರಾರ್ಥನೆಗೆ ಸ್ಪಂದಿಸಿ ವರವಿತ್ತಿದ್ದಾಳೆ. ತುಂಬಾ ಆನಂದವಾಗಿದೆ. ನಿಮಗೆ ಶ್ರೀ ಮಾತೆಯ ಪೂರ್ಣ ಆಶೀರ್ವಾದಗಳಿರಲಿ.🙏🙏🙏

    ReplyDelete
    Replies
    1. ನಿಮಗೆ ಶ್ರೀ ಮಾತೆಯ ಪೂರ್ಣ ಆಶೀರ್ವಾದಗಳಿರಲಿ.🙏🙏🙏

      Delete
  2. ನಿಮಗೆ ಶ್ರೀ ಮಾತೆಯ ಪೂರ್ಣ ಆಶೀರ್ವಾದಗಳಿರಲಿ.🙏🙏🙏

    ReplyDelete
  3. Translation is a bit wrong , he did not live for more than 85 years. The sloka means - He worshipped more than 85 gods except you. But all in vain. So now worshipping you Devi.

    ReplyDelete
  4. ಈ ಅರ್ಥ ಸರಿ ಹೊಂದಬಹುದು - ನನ್ನ ವಯಸ್ಸಿನಲ್ಲಿ ನಾನು 85 ಕ್ಕೂ ಹೆಚ್ಚು ಇತರ ದೇವರುಗಳನ್ನು ವಿವಿಧ ರೀತಿಗಳಲ್ಲಿ ಪೂಜಿಸಿ , ಫಲಕಾಣದೇ , ಪರಿತ್ಯಜಿಸಿದೆ. ಆದರೆ ಈಗ , ಓ ಲಂಬೋದರ ಜನನೀ , ನಿನ್ನ ಕೃಪೆಯೂ ಸಿಗದಿದ್ದರೆ ನಾನು ಯಾರನ್ನು ಆಶ್ರಯಿಸಲಿ ?

    ReplyDelete

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...