Saturday, June 2, 2018

ಅರ್ಧನಾರೀಶ್ವರ ಸ್ತೋತ್ರ



ಅರ್ಧನಾರೀಶ್ವರ ಸ್ತೋತ್ರ


ಸ್ತೋತ್ರ ಪರಿಚಯ:

ಅರ್ಧನಾರೀಶ್ವರ ಸ್ತೋತ್ರವನ್ನು ಶ್ರೀ ಶಂಕರಭಗವತ್ಪಾದರು ರಚಿಸಿದ್ದಾರೆ. ಸೃಷ್ಟಿಕರ್ತ ಹಾಗೂ ಸೃಷ್ಟಿ ಎರಡೂ ಒಂದೇ - ಅರ್ಧನಾರೀಶ್ವರ, ಶಿವ ಮತ್ತು ಶಕ್ತಿ ಒಂದೇ ಶರೀರದಲ್ಲಿ ಒಂದಾಗಿರುವ ಸುಂದರ ಸಮಾಗಮ. ಈ ರೂಪವು ನಮಗೆ ತಿಳಿಯಪಡಿಸುವುದೇನೆಂದರೆ ಶಿವನು ಲಿಂಗಾತೀತನು, ಆದರೂ ಅವನು ಎರಡೂ ಲಿಂಗಗಳ ಸಮನ್ವಯ. ಶಿವೆಯು "ವ್ಯಕ್ತವಾದರೆ" ಶಿವನು "ಅವ್ಯಕ್ತ"; ಶಿವನು "ನಿರಾಕಾರನಾದರೆ" ಶಿವೆಯು "ಸಾಕಾರ". ಶಿವನು ಜ್ಞಾನವನ್ನು ಪ್ರತಿನಿಧಿಸಿದರೆ ಶಿವೆಯು ಚೈತನ್ಯ ಅಥವಾ ಶಕ್ತಿಯನ್ನು ಪ್ರತಿನಿಧಿಸುವಳು, ಬರೇ ವಿಶ್ವದಲ್ಲಿ ಮಾತ್ರವಲ್ಲದೇ ಪ್ರತಿಯೊಬ್ಬ ಜೀವಿಯಲ್ಲೂ ಚೈತನ್ಯದ ಮೂಲಕ ವ್ಯಕ್ತವಾಗುವಳು. ಅರ್ಧನಾರೀಶ್ವರ ರೂಪವು ಹೇಗೆ ಭಗವಂತನಲ್ಲಿನ ಸ್ತ್ರೀ ತತ್ವವಾದ ಶಕ್ತಿಯು ಪುರುಷ ತತ್ವದ ಭಗವಾನ್ ಶಂಕರನಿಂದ ಬೇರ್ಪಡಿಸಲಾಗದು ಎಂಬುದನ್ನು ವಿವರಿಸುತ್ತದೆ. ಅರ್ಧನಾರೀಶ್ವರ ಪ್ರತಿಮಾ ರೂಪದಲ್ಲಿ ಅರ್ಧಭಾಗ ಗಂಡು ಹಾಗೂ ಉಳಿದರ್ಧ ಭಾಗ ಹೆಣ್ಣಾಗಿ, ದೇಹದ ಮಧ್ಯದಲ್ಲಿ ಬೇರ್ಪಟ್ಟಂತೆ ಚಿತ್ರಿಸಲಾಗಿದೆ. ಅರ್ಧನಾರೀಶ್ವರವು "ಅರ್ಧ", "ನಾರಿ", ಹಾಗೂ "ಈಶ್ವರ" - ಮೂರು ಪದಗಳನ್ನೊಳಗೊಂಡಿವೆ. ಅಂದರೆ ಭಗವಾನ್ ಶಂಕರನು ಅರ್ಧ ಸ್ತ್ರೀ. ಅರ್ಧನಾರೀಶ್ವರವು ರಚನಾತ್ಮಕ ಉತ್ಪಾದಕ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ಭಗವಂತನು ಲಿಂಗಾತೀತನು. ಅವನು ಪುರುಷ, ಸ್ತ್ರೀ, ಅಥವಾ ಎರಡೂ ಆಗಿರಬಹುದು. ಹಾಗಾಗಿ ಭಗವಂತನು ಈ ವಿಧಫ ಸ್ವಭಾವಜನ್ಯ ಸ್ಥಿತಿಯಲ್ಲಿರುವುದನ್ನು ಅರ್ಧನಾರೀಶ್ವರ ಎನ್ನಲಾಗಿದೆ. ಶಿವ ಮತ್ತು ಶಕ್ತಿ ಗಳು ಒಂದೇ ಅತ್ಯುನ್ನತ ಶಕ್ತಿ. ಪ್ರತಿಯೊಬ್ಬ ಭಕ್ತನೂ ಅರ್ಧನಾರೀಶ್ವರ ಸ್ತೋತ್ರವನ್ನು ಸಂಸಾರದಲ್ಲಿನ ಸುಖ ಶಾಂತಿಗಾಗಿ ಪಠಿಸಬೇಕು.
ಅರ್ಧನಾರೀಶ್ವರ ಸ್ತೋತ್ರದ ಪ್ರತಿ ಸಾಲಲ್ಲಿ ಹನ್ನೊಂದು ಅಕ್ಷರವಿದ್ದು ಪ್ರತಿ ಪದ್ಯದ ಮೊದಲ ಸಾಲಲ್ಲಿ ಪಾರ್ವತಿಯ ಬಗ್ಗೆ ವರ್ಣನೆ ಇದ್ದು ಎರಡನೇ ಸಾಲಿನಲ್ಲಿ ಶಿವನ ಬಗ್ಗೆ ವರ್ಣಿಸಲಾಗಿದೆ ಹಾಗೂ ಮೂರನೇ ಸಾಲಿನ ಮೊದಲರ್ಧವು ಶಿವೆಯನ್ನು ಕುರಿತಾಗಿದ್ದು ಕಡೇ ಅರ್ಧ ಭಾಗವು ಶಿವನನ್ನು ಕುರಿತು ವರ್ಣಿಸಲಾಗಿದೆ. ಪ್ರತಿ ಪದ್ಯದ ಕೊನೇ ಸಾಲು ಒಂದೇ ಆಗಿದ್ದು ಅಲ್ಲಿ ಪಾರ್ವತಿ ಶಿವರಿಗೆ ವಂದನೆಯಿದೆ.

ಶ್ಲೋಕ -  1 - ಸಂಸ್ಕೃತದಲ್ಲಿ :

ಚಾಂಪೇಯ ಗೌರಾರ್ಧಶರೀರಕಾಯೈ
ಕರ್ಪೂರಗೌರಾರ್ಧಶರೀರಕಾಯ |
ಧಮ್ಮಿಲ್ಲಕಾಯೈ ಚ ಜಟಾಧರಾಯ
ನಮಃ ಶಿವಾಯೈ ಚ ನಮಃ ಶಿವಾಯ 
ಕನ್ನಡದಲ್ಲಿ :

ಸಂಪಗೆ ಹೂಬಣ್ಣದರೆದೇಹದವಳ
ಕರ್ಪೂರದೊಲು ಬಿಳಿಯರ್ಧಮೈಯುಳ್ಳವನ
ತುರುಬು ಹೊತ್ತವಳ ಬಿಗಿದಜಟೆಯವನ
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ಯಾರ ಅರ್ಧ ಶರೀರವು ಕರಗಿದ ಬಂಗಾರದಂತೆ ಸಂಪಿಗೆ ಹೂಬಣ್ಣದಿಂದ ಹೊಳೆಯುತ್ತಿದೆಯೋ, ಯಾರ ಉಳಿದರ್ಧ ಶರೀರವು ಉರಿವ ಕರ್ಪೂರದಂತೆ ಕಾಂತಿಯುತವಾಗಿದೆಯೋ ಯಾರ ಅರ್ಧ ಶರೀರದ ತಲೆಗೂದಲನ್ನು ಸುಂದರವಾಗಿ ಅಲಂಕರಿಸಲ್ಪಟ್ಟಿದೆಯೋ ಹಾಗೂ ಉಳಿದರ್ಧಭಾಗದ ಕೂದಲು ಜಟೆಯಂತೆ ಇಳಿಬಿಟ್ಟಿದೆಯೋ ಆ ಅರ್ಧನಾರೀಶ್ವರ ಶಿವೆ - ಶಿವನಿಗೆ ನನ್ನ ನಮಸ್ಕಾರಗಳು.

ಶ್ಲೋಕ -  2 - ಸಂಸ್ಕೃತದಲ್ಲಿ :

ಕಸ್ತೂರಿಕಾಕುಂಕುಮಚರ್ಚಿತಾಯೈ
ಚಿತಾರಜಃಪುಂಜವಿಚರ್ಚಿತಾಯ |
ಕೃತಸ್ಮರಾಯೈ ವಿಕೃತಸ್ಮರಾಯ
ನಮಃ ಶಿವಾಯೈ ಚ ನಮಃ ಶಿವಾಯ     
ಕನ್ನಡದಲ್ಲಿ :

ಕಸ್ತೂರಿ ಕುಂಕುಮಗಂಧ ಲೇಪತಳೆದವಳ
ಚಿತೆಯ ಬೂದಿಯ ಬಳಿದು ಶೋಭಿಸುತಲಿಹನ
ಕಾಮನಿಂದುಪಕೃತಳ ಕಾಮಾರಿಯನ್ನು
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:
ಯಾರ ಎಡಭಾಗದ ಶರೀರದಲ್ಲಿ ಶಿವೆಯು ಇರುವಳೋ ಆ ಭಾಗವು  ಕಸ್ತೂರಿ ಹಾಗೂ ಕೇಸರಿ ಚಂದನಾಗರುಗಳಿಂದ ಲೇಪಿತವಾಗಿದೆ ಉಳಿದರ್ಧ ಶರೀರದಲ್ಲಿ ಶಿವನು ಇರುವನೋ ಆ ಭಾಗವು ಚಿತಾ ಭಸ್ಮದಿಂದ ಬಳಿಯಲ್ಪಟ್ಟಿದೆ. ಶಿವೆಯ ಭಾಗವು ಹೊಳೆಯಲ್ಪಟ್ಟು ಅಂದವಾಗಿ ಕಾಣಿಸುತ್ತಿದೆ, ಮಹಾದೇವನಕಡೆಯ ಭಾಗವು ಗಜಚರ್ಮ ಸರ್ಪ ಹಾಗೂ ಚಿತಾಭಸ್ಮದಿಂದ ಕೂಡಿದ್ದು ಘೋರವಾಗಿರುವುದು. ಶಿವೆ - ಶಿವನ ಈ ಬಗೆಯ ಅಧ್ಬುತ ಮೂರ್ತಿಗೆ ನನ್ನ ನಮನಗಳು.

ಶ್ಲೋಕ -  3 - ಸಂಸ್ಕೃತದಲ್ಲಿ :

ಝಣತ್ ಕ್ವಣತ್ ಕಂಕಣನೂಪುರಾಯೈ  
ಪಾದಾಬ್ಜರಾಜತ್ಫಣಿನೂಪುರಾಯ |
ಹೇಮಾಂಗದಾಯೈ ಭುಜಗಾಂಗದಾಯ
ನಮಃ ಶಿವಾಯೈ ಚ ನಮಃ ಶಿವಾಯ     
ಕನ್ನಡದಲ್ಲಿ :

ಝಣಝಣಿಪ ಕಂಕಣ ನೂಪುರ ಧಾರಿಣಿಯ
ಪಾದಪದ್ಮದೊಳು ನಾಗ ಶೋಭಿಸುವ ದೇವನ
ಸ್ವರ್ಣಭೂಷಿತೆಯ ಭುಜಗಭೂಷಣನ
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ಮಹಾದೇವನ ಎಡ ಶರೀರದ ಭಾಗದಲ್ಲಿರುವ ಜಗದಂಬೆಯು ಅತಿ ಸುಂದರವಾದ ಕಂಕಣವನ್ನು ಧರಿಸಿರುವಳು ಹಾಗೂ ಪಾದದಲ್ಲಿ ಝಣ ಝಣಿಸುವ ನೂಪುರವು ಕಂಗೊಳಿಸುತ್ತಿರುವುದು. ಈ ಆಭರಣಗಳು ಶರೀರವು ನಾಟ್ಯದ ಸಮಯದಲ್ಲಿ ತೂಗಾಡಿದಾಗ ಇಂಪಾದ ನಾದವನ್ನು ಹೊರಸೂಸುತ್ತಿವೆ. ಮಹಾದೇವನ ಬಲಭಾಗದ ಪದ್ಮಪಾದವನ್ನು ಸರ್ಪವು ನೂಪುರದಂತೆ ಸುತ್ತಿಕೊಂಡಿರುವುದು. ಮೊಣಕೈಯಿನ ಕೆಳಭಾಗವನ್ನು ಅಂಗದ ಆಭರಣವು ಅಲಂಕರಿಸಿದೆ. ಎಡ ಕೈಯಿಯಲ್ಲಿನ ಆಭರಣವು ಬಂಗಾರದಿಂದ ಕಂಗೊಳಿಸುತ್ತಿದ್ದರೆ ಬಲಭಾಗದ ಕೈಯು ಸರ್ಪದಿಂದ ಅಲಂಕರಿಸಿದೆ. ಹೀಗಿದೆ ಮಹಾದೇವನ ಅದ್ಭುತ ರೂಪವು. ಈ ರೂಪದಲ್ಲಿನ ಶಿವೆ ಹಾಗೂ ಶಿವನಿಗೆ ನನ್ನ ನಮನಗಳು. ಇಲ್ಲಿ ಸರ್ಪವು ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆ. ಅವುಗಳು ಭಯಾನಕವಾಗಿದ್ದು ಅವುಗಳಿಗೆ ಮೋಹಿತರಾದವರನ್ನು ಜನನ ಮರಣಗಳ ಜೀವನ ಚಕ್ರದಲ್ಲಿ ಸಿಲುಕಿಸುತ್ತವೆ. ಈ ವಿಧದ ಸರ್ಪಗಳನ್ನು ಧರಿಸುವುದರ ಮೂಲಕ ಯೋಗೀಶ್ವರನು ಅವುಗಳ ಮೇಲಿನ ತನ್ನ ಪ್ರಭುತ್ವವನ್ನು ತೋರ್ಪಡಿಸುತ್ತಿರುವನು.

ಶ್ಲೋಕ - 4 -  ಸಂಸ್ಕೃತದಲ್ಲಿ :

ವಿಶಾಲನೀಲೋತ್ಪಲಲೋಚನಾಯೈ
ವಿಕಾಸಿಪಂಕೇರುಹಲೋಚನಾಯ |
ಸಮೇಕ್ಷಣಾಯೈ ವಿಷಮೇಕ್ಷಣಾಯ
ನಮಃ ಶಿವಾಯೈ ಚ ನಮಃ ಶಿವಾಯ     
ಕನ್ನಡದಲ್ಲಿ :

ಹಿರಿಯ ಕನ್ನೈದಿಲೆಯ ನೇತ್ರವುಳ್ಳವಳಿಗೆ
ಬಿರಿದ ಕಮಲದೊಲೆಸೆವ ಕಂಗಳವಗೆ
ಸುಂದರ ಸುಲೋಚನೆಗೆ ಮುಕ್ಕಣ್ಣಗೆ
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ಶಿವೆಯ ನೇತ್ರವು ಅಗಲವಾಗಿದ್ದು ಅದು ಕಿವಿಯವರೆಗೂ ವಿಸ್ತರಿಸಿರುವಂತೆ ಕೆಲವು ಬಾರಿ ವಿವರಿಸಲಾಗಿದೆ. ಇದನ್ನು ವಿಶಾಲ ಎಂಬ ಪದದ ಮೂಲಕ ಸೂಚಿಸಲಾಗಿದೆ. ಅವಳ ಎಡಗಣ್ಣು ಅಗಲವಾಗಿದ್ದು ಸುಂದರವಾಗಿ ನೀಲೋತ್ಪಲ ಪುಷ್ಪದಂತೆ ಕಂಡುಬರುವುದು. ಶಂಕರ ಭಗವಾನನ ಬಲ ಭಾಗದ ಶರೀರದಲ್ಲಿನ ನೇತ್ರವು ಕಮಲ ಪುಷ್ಪದಂತೆ ಕಂಗೊಳಿಸುತ್ತಿರುವುದು. "ಇಕ್ಷಣ" ಎಂದರೆ ನೋಟ ಅಥವಾ ಕಣ್ಣುಗಳು ಎಂದಾಗಬಹುದು. "ವಿಷಮೇಕ್ಷಣ" ಎಂದರೆ ವಿಭಿನ್ನವಾದದ್ದು ಅಥವಾ ವಿಭಿನ್ನವಾಗಿ ಕಾಣುವ ಅಥವಾ ತ್ರಿನೇತ್ರನು (ಮೂರು ಕಣ್ಣುಳ್ಳವನು) ಎಂದು ವಿಶ್ಲೇಶಿಸಬಹುದು. ಸಮೇಕ್ಷಣ ಎಂದರೆ ಅದು ನೋಡಲು ಆಹ್ಲಾದಕರವಾಗಿರುವುದು ಎಂದು ಅರ್ಥೈಸಬಹುದು.
""  "ಎಂದರೆ ಲಕ್ಷ್ಮಿಯೊಡನೆ ಮತ್ತು ಅವಳ ನೇತ್ರಗಳು ಮಂಗಳಕರವಾದದ್ದು  ಹಾಗೂ ಅವುಗಳು ಭಕ್ತರಿಗೆ ಉತ್ಕರ್ಷವನ್ನು ಅನುಗ್ರಹಿಸುತ್ತದೆ. ಅರ್ಧನಾರೀಶ್ವರ ರೂಪವು ಶಿವ - ಪಾರ್ವತಿಯರ ಸುಂದರ ಸಮಾಗಮ. ನಾನು ಶಿವ - ಪಾರ್ವತಿಯರಿಗೆ ಶಿರಸಾ ನಮಸ್ಕರಿಸುತ್ತೇನೆ.

ವ್ಯಾಖ್ಯಾನ :
1. ಸೌಂದರ್ಯಲಹರಿಯಲ್ಲಿ ಶಿವ - ಶಕ್ತಿ ಸ್ವರೂಪದಲ್ಲಿನ ತ್ರಿನೇತ್ರದ ಬಗೆಗೆ ಸುಂದರವಾಗಿ ವರ್ಣಿಸಲಾಗಿದೆ. ಒಂದು ಶ್ಲೋಕದಲ್ಲಿ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಿದರೆ ಎಡಗಣ್ಣನ್ನು ಚಂದ್ರನಿಗೆ ಹೋಲಿಸಲಾಗಿದೆ ಹಾಗೂ ಮಧ್ಯದಲ್ಲಿನ ನೇತ್ರವನ್ನು ಅಗ್ನಿಗೆ ಹೋಲಿಸಲಾಗಿದೆ. ಈ ವಿಧದ ನೇತ್ರಗಳು ಕ್ರಮವಾಗಿ ಹಗಲು, ರಾತ್ರೆ ಹಾಗೂ ಸಂಧ್ಯಾಕಾಲವನ್ನು ಉಂಟುಮಾಡುತ್ತವೆ.

2. ‎ಒಮ್ಮೆ ಮಹಾಕವಿ ಕಾಳಿದಾಸನಿಗೆ ಒಂದು ಸಮಸ್ಯೆಯನ್ನು ಬಗೆಹರಿಸಲು ಆಹ್ವಾನಿಸಲಾಯಿತು. ಅದೇನೆಂದರೆ "ಯಾರಾದರೂ ಹೂವಿನೊಳಗೊಂದು ಹೂವನ್ನು ಕಂಡಿದ್ದಾರಾ?" ಎಂದು ಕೇಳಲಾಯಿತು. ಅದಕ್ಕೆ ಕಾಳಿದಾಸನು ಸ್ತ್ರೀಯ ವದನವು ಕಮಲದ ಹೂವಿನಂತೆಯೂ ಹಾಗೂ ಅವಳ ಎರಡು ನೇತ್ರಗಳು ನೀಲೋತ್ಪಲ ಪುಷ್ಪದಂತೆಯೂ ಪುಷ್ಪದೊಳಗೆ ಪುಷ್ಪವಿರುವುದನ್ನು ವಿವರಿಸಿದನು. ಸಾಮಾನ್ಯವಾಗಿ ಹೆಣ್ಣಿನ ಕಣ್ಣುಗಳನ್ನು ನೀಲೋತ್ಪಲ ಪುಷ್ಪಕ್ಕೆ ಹೋಲಿಸುವುದು ವಾಡಿಕೆ.


3. ‎ಇಕ್ಷಣ = ನೋಟ ಅಥವಾ ಹಾಯಿಸುವುದು (ಕಣ್ಣಿಂದ ನೋಟವನ್ನು ಬೀರುವುದು).
ಸಮ = ಸಮನಾದ / ನಯವಾದ / ಶಾಂತವಾದ (ನೋಟ ಅಥವಾ ದೃಷ್ಟಿ, ಕಣ್ಣುಗಳಿಂದ ಹೊರಬಿದ್ದ)
ವಿಷಮ = ಬೆಸ (ಸಂಖ್ಯೆಯ ಲೆಕ್ಕದಲ್ಲಿ), ಒರಟಾದ / ಭಯಾನಕ (ನೋಟ ಅಥವಾ ದೃಷ್ಟಿ, ಕಣ್ಣುಗಳಿಂದ ಹೊರಬಿದ್ದ)
ಶಿವಾ = ಸಮ ಸಂಖ್ಯೆಯ ನೇತ್ರಗಳುಳ್ಳವ (2 ಕಣ್ಣುಗಳು);  ಶಾಂತವಾದ ನೋಟವನ್ನು ಬೀರುವವನು.
ಶಿವ = ಬೆಸ ಸಂಖ್ಯೆಯ ಕಣ್ಣುಳ್ಳವನು (3 ಕಣ್ಣುಗಳು) (ಒರಟಾದ / ಭಯವನ್ನು ಹುಟ್ಟಿಸುವ ನೋಟವನ್ನು ಬೀರುವವನು).


ಶ್ಲೋಕ -  5 - ಸಂಸ್ಕೃತದಲ್ಲಿ :

ಮಂದಾರಮಾಲಾಕಲಿತಾಲಕಾಯೈ
ಕಪಾಲಮಾಲಾಂಕಿತಕಂಧರಾಯ |
ದಿವ್ಯಾಂಬರಾಯೈ ಚ ದಿಗಂಬರಾಯ
ನಮಃ ಶಿವಾಯೈ ಚ ನಮಃ ಶಿವಾಯ    
ಕನ್ನಡದಲ್ಲಿ :

ಮಂದಾರ ಮಾಲೆಯ ಮುಡಿದು ಶೋಭಿಸುವಳ
ಬುರುಡೆಹಾರವನುರದಿ ಪೊತ್ತು ಮೆರೆವವನ
ದಿವ್ಯ ವಸ್ತ್ರಾನ್ವಿತೆಯ ದಿಕ್ಕ ಹೊದ್ದವನ
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ಶಿವೆಯು ಮಂದಾರ (ದಾಸವಾಳ) ಪುಷ್ಪದ ಹಾರವನ್ನು ಧರಿಸಿರುವಳು ಮತ್ತು ಶಿವನಾದರೋ ಕಪಾಲದಿಂದೊಡಗೊಂಡ ಹಾರವನ್ನು ಧರಿಸಿರುವನು.
ಪಾರ್ವತಿಯು ರಾಜಯೋಗ್ಯ ಹಾಗೂ ದೈವಿಕ ವಸ್ತ್ರಗಳನ್ನು ಧರಿಸಿದ್ದರೆ ಶಿವನಿಗೆ ದಿಕ್ಕುಗಳೇ ವಸ್ತ್ರಗಳು. ಈ ವಿಧದ ಶಿವ - ಪಾರ್ವತಿಯರಿಗೆ ನಾನು ನಮಸ್ಕರಿಸುವೆನು. ದಿಕ್ಕುಗಳೇ ವಸ್ತ್ರಗಳೆಂದರೆ ದಿಗಂಬರ ಎಂದು ಅಂದರೆ ಶಿವನು ವಸ್ತ್ರಗಳನ್ನು ಧರಿಸುವುದಿಲ್ಲ ಹಾಗೂ ಇದು ಎಲ್ಲವನ್ನೂ ತ್ಯಜಿಸಿರುವ ಸಂಕೇತ. ಭಕ್ತರಿಗೆ ಕಪಾಲವು ಶರೀರದಲ್ಲಿರುವ ಜೀವವು ನಶ್ವರ ಹಾಗೂ ಅಸ್ಥಿರ ಎಂಬುದನ್ನು ಸೂಚಿಸುತ್ತದೆ,

ತಾತ್ಪರ್ಯ – ಮುಂದುವರೆದ ಭಾಗ :-
ಅಂದರೆ ಎಂದಾದರೊಂದು ದಿನ ಶರೀರದಿಂದ ಜೀವವು ಬಿಡುಗಡೆ ಹೊಂದಿಯೇ ತೀರುತ್ತದೆ ಎಂದು. ಆದ್ದರಿಂದ ಪ್ರಾಪಂಚಿಕ ವಸ್ತುಗಳೊಂದಿಗೆ ಮೋಹಗೊಳ್ಳಬೇಡಿ. ದಿಗಂಬರ ಎಂದರೆ ಬ್ರಹ್ಮನೆಂದೂ ತಿಳಿಯಬಹುದು. ಅತಿ ದೊಡ್ಡದಾದ ಹಾಗೂ ಮಹತ್ತರವಾದ ವಸ್ತುವಿಗೆ ಹೇಗೆ ವಸ್ತ್ರವನ್ನುಡಿಸಲು ಸಾಧ್ಯ? ಹಾಗಾದಲ್ಲಿ ವಿಶ್ವವ್ಯಾಪಿ ಶಿವನನ್ನು ಬಟ್ಟೆಯೊಳಗೆ ಸೇರಿಸಬಹುದೆಂದು ಮತ್ತು ಅದರ ಹೊರಗೆ ಇಲ್ಲವೆಂದು ಭಾವಿಸಬಹುದು. ಇದು ಸಾಧ್ಯವೇ? ಇದೇ ವಿಧದ ಭಾವನೆಗಳನ್ನು ಬೈಬಲ್ ನಲ್ಲಿ ಕೂಡ  ಜೀಸಸ್ ಕ್ರೈಸ್ತನು ತನಗೆ ಯಾವುದೇ ವಿಶ್ರಾಂತಿಯ ಸ್ಥಳವಿಲ್ಲವೆಂಬುದಾಗಿ ಹೇಳಿರುವನು. ವಿಶ್ವವ್ಯಾಪಿ ತತ್ವದಲ್ಲಿ


ಶ್ಲೋಕ -  6 -  ಸಂಸ್ಕೃತದಲ್ಲಿ :

ಅಂಬೋಧರಶ್ಯಾಮಲ ಕುಂತಲಾಯೈ
ತಟಿತ್ ಪ್ರಭಾತಾಮ್ರಜಟಾಧರಾಯ |
ನಿರೀಶ್ವರಾಯೈ ನಿಖಿಲೇಶ್ವರಾಯ
ನಮಃ ಶಿವಾಯೈ ಚ ನಮಃ ಶಿವಾಯ     
ಕನ್ನಡದಲ್ಲಿ :

ಮೇಘದೊಲು ಕಪ್ಪಾದ ಕುರುಳೊಡತಿಯನ್ನು
ಮಿಂಚಿನೊಲು ತಾಮ್ರಕಾಂತಿಯ ಜಟೆಯವನ್ನ
ಗಿರಿಗಳೊಡತಿಯ ಸಕಲಕಧಿಪತಿಯ
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ಶಿವೆಯ ತಲೆಗೂದಲು ನೀರಿನಿಂದ ಕೂಡಿದ ಕಪ್ಪಾದ ಬಣ್ಣದ ಮೋಡದಿಂದ ಕೂಡಿದೆ. ಶಿವನ ಕೂದಲು ತಾಮ್ರಕಾಂತಿಯಿಂದ ಕೂಡಿದ್ದು ಮಿಂಚಿನಂತೆ ಹೊಳೆಯುತ್ತಿದೆ. ಪಾರ್ವತಿಗೆ ಅವಳಿಗಿಂತ ಶ್ರೇಷ್ಟರು ಬೇರೆ ಯಾರೂ ಇಲ್ಲ ಮತ್ತು ಶಿವನು ಜಗತ್ತಿಗೇ ದೊರೆ. ಹೀಗೆ ಅರ್ಧನಾರೀಶ್ವರದ ಅಮೋಘ ರೂಪ. ಈ ರೀತಿಯ ಶಿವ ಪಾರ್ವತಿಯರಿಗೆ ನಾನು ಶಿರಬಾಗಿ ನಮಸ್ಕರಿಸುವೆನು.

ಶ್ಲೋಕ -  7 - ಸಂಸ್ಕೃತದಲ್ಲಿ :

ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ |
ಜಗಜ್ಜನನ್ಯೈ ಜಗದೇಕ ಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ    
ಕನ್ನಡದಲ್ಲಿ :

ಜಗವ ಸೃಜಿಸುವ ನೃತ್ಯದಿ ತೊಡಗಿದವಳ
ಸಕಲವನು ಸಂಹರಿಪ ತಾಂಡವ ದೇವನ
ವಿಶ್ವ ಜನನಿಯ ಜಗದೊಬ್ಬನೆ ತಂದೆಯನು
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ತಮ್ಮಿಂದಲೇ ಸೃಷ್ಟಿಯಾದ ವಿಶ್ವದ ಮುಂದೆ ಪಾರ್ವತಿಯು ತನ್ನ ಸುಂದರ ಹಾಗೂ ಅತ್ಯಾಕರ್ಷಕ ರೂಪದಿಂದ ಆನಂದದಿಂದ ನಾಟ್ಯವಾಡುತ್ತಾಳೆ. ಶಿವನ ನಾಟ್ಯವಾದರೋ ವಿನಾಶಕಾರಿ ಹಾಗೂ ಆವೇಶದಿಂದ ಕೂಡಿದ್ದು ಅದರಲ್ಲಿ ಇಡೀ ಬ್ರಹ್ಮಾಂಡವೇ ಮರಳಿ ಶಮನ ಹೊಂದುತ್ತದೆ. ಪಾರ್ವತಿಯು ಜಗಜ್ಜನನಿ ಹಾಗೂ ಶಿವನು ಜಗತ್ತಿಗೆ ತಂದೆ. ಹೀಗಿರುವುದು ಅರ್ಧನಾರೀಶ್ವರ ಅದ್ಭುತ ರೂಪ. ಈ ರೀತಿಯ ಶಿವ ಪಾರ್ವತಿಯರಿಗೆ ನನ್ನ ನಮಸ್ಕಾರಗಳು.

ಶ್ಲೋಕ - 8 -  ಸಂಸ್ಕೃತದಲ್ಲಿ :

ಪ್ರದೀಪ್ತ ರತ್ನೋಜ್ಜ್ವಲಕುಂಡಲಾಯೈ
ಸ್ಫುರನ್ ಮಹಾಪನ್ನಗಭೂಷಣಾಯ |
ಶಿವಾನ್ವಿತಾಯೈ ಚ ಶಿವಾನ್ವಿತಾಯ
ನಮಃ ಶಿವಾಯೈ ಚ ನಮಃ ಶಿವಾಯ    
ಕನ್ನಡದಲ್ಲಿ :

ಥಳಥಳಿಸುವ ರತುನದೋಲೆಯನಿಟ್ಟವಳ
ಹೊಳೆವ ಹಿರಿಹಾವ ಧರಿಸಿ ಮೆರೆವವನ
ಶಿವನೊಡನಾಡಿ ಶಿವೆಸಹಿತವಿರುವಾತ
ನಮಿಸುವೆನು ಶಿವೆಯ ನಾ ನಮಿಸುವೆ ಶಿವನ


ತಾತ್ಪರ್ಯ:

ಅರ್ಧನಾರೀಶ್ವರದ ಎಡಭಾಗ - ಶಿವೆಯ ಕಿವಿಯಲ್ಲಿನ ಥಳ ಥಳಿಸುವ ಕರ್ಣಾಭರಣವು ಹೊಳೆಯುತ್ತಿರುವ ಅತ್ಯಮೂಲ್ಯವಾದ ಹರಳುಗಳಿಂದ ಕೂಡಿವೆ. ಅದೇ ಬಲಭಾಗದ - ಶಿವನ ಕಿವಿಯು ಭಯವನ್ನು ಹುಟ್ಟಿಸುವ ಸರ್ಪವು ಕರ್ಣಾಭರಣದಂತೆ ಕಂಗೊಳಿಸುತ್ತಿದೆ. ಶಿವ ಪಾರ್ವತಿಯರ ಮೂಲ ತತ್ವವೇ ಪರಮ ಮಂಗಳಕರವಾದ ಬ್ರಹ್ಮನ್. ಅಷ್ಟು ಬೆರಗು ಗೊಳಿಸುವುದು ಅರ್ಧನಾರೀಶ್ವರ ರೂಪವು. ಶಿವ ಪಾರ್ವತಿಯರಿಗೆ ನನ್ನ ಭಕ್ತಿ ಪೂರ್ವಕ ನಮನಗಳು.

ಶ್ಲೋಕ - 9 -  ಸಂಸ್ಕೃತದಲ್ಲಿ :

ಏತತ್ ಪಠೇದಷ್ಟಕಮಿಷ್ಟದಂ ಯೋ
ಭಕ್ತ್ಯಾ ಸ ಮಾನ್ಯೋ ಭುವಿ ದೀರ್ಘಜೀವೀ |
ಪ್ರಾಪ್ನೋತಿ ಸೌಭಾಗ್ಯಮನಂತಕಾಲಂ
ಭೂಯಾತ್ ಸದಾ ತಸ್ಯ ಸಮಸ್ತಸಿದ್ಧಿಃ    
ಕನ್ನಡದಲ್ಲಿ :

ಶುಭಕರವಹಷ್ಟಕವಿದನು ಭಕುತಿಯಿಂ
ಪಠಿಸುವ ಸುಕೃತಿ ಮಾನ್ಯ ದೀರ್ಘಾಯುವಹನು
ಬಹುಕಾಲ ಸೌಭಾಗ್ಯಶಾಲಿಯವನಹನು
ಸಕಲ ಕಾರ್ಯಗಳವಗಾವಗಂ ಸಿದ್ಧಿಪುವು


ತಾತ್ಪರ್ಯ:

ಈ ಕಡೇ ಶ್ಲೋಕವು ಅರ್ಧನಾರೀಶ್ವರ ಸ್ತೋತ್ರದ ಫಲಶ್ರುತಿ. ಯಾರು ಎಂಟು ಶ್ಲೋಕಗಳ ಈ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಪಠಿಸುತ್ತಾರೋ ಅವರ ಎಲ್ಲಾ ಆಕಾಂಕ್ಷೆಗಳೂ ಸಂಪೂರ್ಣವಾಗಿ ಪೂರೈಸುವುದು. ಈ ಸ್ತೋತ್ರವನ್ನು ಪದೇ ಪದೇ ಪಠಿಸುವವರಿಗೆ ಅಖಂಡತೆ ಹಾಗೂ ಪರಿಪೂರ್ಣ ಶಕ್ತಿಯು ಲಭಿಸುವುದು.

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿಂದಭಗವತ್ಪೂಜ್ಯಪಾದಶಿಷ್ಯಸ್ಯ ಶ್ರೀಮಚ್ಚಂಕರಭಗವತಃ ಕೃತೌ ಅರ್ಧನಾರೀಶ್ವರಸ್ತೋತ್ರಮ್ ಸಂಪೂ ರ್ಣಂ




ಮೂಲಗಳು: ಕನ್ನಡ ರೂಪದ ಪದ್ಯವನ್ನು ಶ್ರೀ.ಬಿ.ಎಸ್.ಚಂದ್ರಶೇಖರ ಅವರ "ಸವಿಗನ್ನಡ ಸ್ತೋತ್ರಚಂದ್ರಿಕೆ". ತಾತ್ಪರ್ಯಗಳನ್ನು ಆಂಗ್ಲ ಮೂಲದ "sanskrit.org" ದಿಂದ ಆಯ್ದು ಕನ್ನಡದಲ್ಲಿ ರಚಿಸಿದವರು –ಗುರುಪ್ರಸಾದ್ ಹಾಲ್ಕುರಿಕೆ.
ಈ ಸ್ತೋತ್ರದ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ  ಅರ್ಧನಾರಿಶ್ವರ ಸ್ತೋತ್ರ



No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...