Saturday, June 2, 2018

ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಮ್





ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಮ್
ಪ್ರಸ್ತಾವನೆ:

ಶಂಕರ ಭಾಗವತ್ಪಾದರು ರಚಿಸಿರುವ ಸ್ತೋತ್ರಗಳ ಪೈಕಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರವು ಅವರದ್ದೇ ಎಂದು ಸಂಶಯಾತೀತವಾಗಿ ಹೇಳಬಹುದುಅವರ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರು ಈ ಸ್ತೋತ್ರಕ್ಕೆ "ಮಾನಸೊಲ್ಲಾಸಎಂಬ ಹೆಸರಿನಿಂದ ವಾರ್ತಿಕವನ್ನು ಬರೆದಿರುವುದೇ ಈ ಅಭಿಪ್ರಾಯಕ್ಕೆ ಮುಖ್ಯ ಕಾರಣದಕ್ಷಿಣಾಮೂರ್ತಿ ಸ್ತೋತ್ರವು ದಕ್ಷಿಣಾಮೂರ್ತ್ಯಷ್ಟಕವೆಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆಇದನ್ನು ಶಾರ್ದೂಲ ವಿಕ್ರೀಡಿತ ಶೈಲಿಯಲ್ಲಿ ರಚಿಸಲಾಗಿದೆಇದು ವರ್ಣನಾತ್ಮಕ ಸ್ತೋತ್ರವಲ್ಲವೇದಾಂತೋಪದೇಶವೇ ಇದರ ಮುಖ್ಯ ಸಂದೇಶಬ್ರಹ್ಮದ ಸತ್ಯತ್ವಇತರ ವಸ್ತುಗಳ ಅನಿತ್ಯತ್ವಪುರುಷಾರ್ಥಜ್ಞಾನಪ್ರಾಪ್ತಿಗೆ ಬೇಕಾದ ಸಾಧನೆ - ಇವೇ ಮೂಲತತ್ವಗಳನ್ನು ಇದರಲ್ಲಿ ಪ್ರತಿಪಾದಿಸಿರುತ್ತಾರೆಈ ಸ್ತೋತ್ರವನ್ನು ಪಠನ ಮಾಡುತ್ತಿರುವಾಗ ಶ್ರೀ ಗುರುಸ್ವರೂಪನಾದ ದಕ್ಷಿಣಾಮೂರ್ತಿಯಲ್ಲಿ ಭಕ್ತಿ ಉದಯವಾಗುವುದರ ಜೊತೆಗೆ ಜ್ಞಾನೋತ್ಪತ್ತಿಯೂ ಉಂಟಾಗುತ್ತದೆ.

ಶ್ರೀ ದಕ್ಷಿಣಾಮೂರ್ತಿಯ ವೈಶಿಷ್ಟ್ಯತೆಯ ವರ್ಣನೆ ಪೌರಾಣಿಕ ಕಥೆಯ ಪ್ರಕಾರ:

ಬ್ರಹ್ಮನ ಮಾನಸ ಪುತ್ರರಾದ ಸನಕ,ಸನಂದನಸನಾತನ ಹಾಗೂ ಸನತ್ಸುಜಾತರು ಜ್ಞಾನಾರ್ಜನೆಯ ಗುರಿಯನ್ನು ಅರಸಿ ತಮ್ಮ ಚಿಕ್ಕ ವಯಸ್ಸಿನಲ್ಲೇ ಗುರುವನ್ನು ಹುಡುಕಿಕೊಂಡು ಹೊರಟರುಈ ಹುಡುಕಾಟವು ಅನೇಕ ಕಾಲ ಮುಂದುವರೆದರೂ ಅವರಿಗೆ ಸೂಕ್ತ ಗುರು ದೊರಕಲಿಲ್ಲಅವರು ಗುರುವನ್ನು ಹುಡುಕುವ ಹೊತ್ತಿಗೆ ಅವರೆಲ್ಲರೂ ಮುದುಕರಾಗಿದ್ದರುಕಟ್ಟಕಡೆಗೆ ಅವರುಗಳು ಕೈಲಾಸ ಪರ್ವತವನ್ನು ತಲುಪಿ ಶಿವನನ್ನು ಸಂಧಿಸಿದರುಶಿವನಾದರೋ ತರುಣನಂತೆ ಅವರಿಗೆ ಕಂಡನುಶಿವನು ಆಲದ ಮರದ ಬುಡದಲ್ಲಿ ಕುಳಿತು ವಯಸ್ಸಾದ ಶಿಷ್ಯರನ್ನು ತನ್ನ ಮುಂದೆ ಕೂರಿಸಿಕೊಂಡು ಮೌನದ ಮೂಲಕ ಅವರುಗಳಿಗೆ ಜ್ಞಾನವನ್ನು ಬೋಧಿಸಿದನುಇದು ಕೇವಲ ಸಾಂಕೇತಿಕಈ ನಾಲ್ಕು ವಿದ್ಯಾರ್ಥಿಗಳು ಬೇರೆ ಯಾರೂ ಅಲ್ಲಅವರುಗಳು ನಾಲ್ಕು ವೇದಗಳುಹಾಗಾಗಿ ವೇದಗಳು ಅಪೌರುಷೇಯಅವುಗಳನ್ನು ಸೃಷ್ಟಿಸಿದವನೇ ಭಗವಂತ.

ಈಗ ಶ್ರೀ ದಕ್ಷಿಣಾಮೂರ್ತಿಯ ಬಗ್ಗೆ ಕೆಲವು ಅಮೂಲ್ಯವಾದ ವಿಷಯಗಳನ್ನು ಅರಿಯೋಣ:

ಮಂದಿರದೊಳಗಿನ ದಕ್ಷಿಣಾಮೂರ್ತಿಯ ಮೂಲ ವಿಗ್ರಹವು ವೇದಾಂತದ ಅದ್ಭುತ ಜ್ಞಾನವನ್ನು ಹೊರಹೊಮ್ಮುತ್ತಿರುತ್ತದೆಈ ಜ್ಞಾನವು ನಮ್ಮ ದರ್ಶನವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುತ್ತದೆಮೂರ್ತಿ ಪೂಜೆಯ ಬಗೆಗೆ ಸಾಮಾನ್ಯರಲ್ಲಿ ಮನೆಮಾಡಿಕೊಂಡಿರುವ ಅಜ್ಞಾನವನ್ನು ನಿವಾರಿಸಲು ಇದು ಬಹಳಷ್ಟು ಸಹಕಾರಿಯಾಗುತ್ತದೆದಕ್ಷಿಣಾಮೂರ್ತಿ ಕುರಿತು ಈ ಕೆಳಗೆ ವಿವರಿಸಿರುವ ವಿಷಯಗಳು ಹೊಸ ಅರ್ಥವನ್ನು ನೀಡುತ್ತದೆ.

ಮೂಲ ವಿಗ್ರಹವು ಈಶ್ವರನ ಅಷ್ಟ ಮೂರ್ತಿಗಳನ್ನು ಒಳಗೊಂಡಿದೆಅವುಗಳಲ್ಲಿ ಪಂಚ ಮಹಾಭೂತಗಳು ಹಾಗೂ ಸೂರ್ಯ ಚಂದ್ರ ಮತ್ತು ಆತ್ಮ ಗಳನ್ನೊಳಗೊಂಡಿವೆ.

1. ಪೃಥ್ವಿ  - ದೇವರ ಇಡೀ ಮೂರ್ತಿಯನ್ನೊಳಗೊಂಡಿದೆ.
2. ನೀರು  - ಅಂಭಾಸಿ - ಆಪ್  - ಗಂಗೆಯನ್ನು ಪ್ರನಿಧಿಸುತ್ತದೆ.
3. ಅಗ್ನಿ   - ಅನಲತೇಜ - ದಕ್ಷಿಣಾಮೂರ್ತಿಯ ಮೆಲಿನ ಎಡ ಹಸ್ತದಲ್ಲಿರುವ ಬೆಂಕಿಯನ್ನು ಪ್ರತಿನಿಧಿಸುತ್ತದೆ.
4. ಗಾಳಿ -  ವಾಯುಅನಿಲ - ಮೂರ್ತಿಯ ಶಿರದಲ್ಲಿ ಹಾರಾಡುತ್ತಿರುವ ಜಟೆಯಲ್ಲಿನ  ಕೂದಲುಗಳನ್ನು ಪ್ರತಿನಿಧಿಸುತ್ತದೆ.
5. ಆಕಾಶ - ಅಂಬರ - ಮೂರ್ತಿಯ ಹಸ್ತದಲ್ಲಿರುವ ಡಮರುವನ್ನು ಪ್ರತಿನಿಧಿಸುತ್ತದೆಡಮರುವಿನ ಒಳಗೆ ಆಕಾಶವಿದೆ.  ಅಲ್ಲದೇ ಪುರಾತನಕಾಲದಲ್ಲಿ ಶಬ್ದವು ಆಕಾಶದ ಮೂಲಕ ಸಾಗುತ್ತದೆ ಎಂಬುದನ್ನು ವಿವರಿಸಲಾಗುತ್ತಿತ್ತುಡಮರುವು ಶಬ್ದವನ್ನು ಸೃಷ್ಟಿಸುವುದರಿಂದ ಇದು ಸಾಂಕೇತಿಕವಾಗಿ ಆಕಾಶವನ್ನು ಪ್ರತಿನಿಧಿಸುತ್ತದೆ.
6. ಸೂರ್ಯ -  ದಿವಾಕರ -  ಶಿರದಲ್ಲಿ ಧರಿಸಿರುವ ಕಿರೀಟವನ್ನು ಪ್ರತಿನಿಧಿಸುತ್ತದೆ.
7. ಚಂದ್ರ - ಹಿಮಾಂಶು - ಶಿರದಮೇಲೆ ಧರಿಸಿರುವ ಕಿರೀಟವನ್ನು ಪ್ರತಿನಿಧಿಸುತ್ತದೆ.
8. ಆತ್ಮ - ಪುಮಾನ್ - ಎಲ್ಲ ವಿಧದ ಮೌನ ಹಾಗೂ ಅದರಾಚೆಗಿನದ್ದನ್ನು ಪ್ರತಿನಿಧಿಸುತ್ತದೆ.

1.  ಸೂರ್ಯ ಮತ್ತು ಚಂದ್ರ - ದಕ್ಷಿಣಾಮೂರ್ತಿ ವಿಗ್ರಹದ  ಶಿರದಲ್ಲಿ ಸೂರ್ಯ ಚಂದ್ರರನ್ನು ಸ್ಪಷ್ಟವಾಗಿ ಕೆತ್ತಲಾಗಿದೆಬಹುಪಾಲು ದಕ್ಷಿಣಾಮೂರ್ತಿ ವಿಗ್ರಹಗಳಲ್ಲಿ ಚಂದ್ರನನ್ನು ಮಾತ್ರ ಕಾಣಬಹುದಾದರೂ ಸೂರ್ಯನೂ ಅಲ್ಲೇ ಇರುವನೆಂಬ ವಿಷಯವನ್ನು ಅಷ್ಟಮೂರ್ತಿ ಭೃತಿ ಸ್ತೋತ್ರದಲ್ಲಿನ ಉಲ್ಲೇಖವು ಸ್ಪಷ್ಟಪಡಿಸುತ್ತದೆ.
2.  ಗಂಗಾ ದಕ್ಷಿಣಾಮೂರ್ತಿಯ ಶಿರದ ಮೇಲೆ ಇರುವ ಸಣ್ಣ ವಿಗ್ರಹವು ಗಂಗೆಯನ್ನು ಪ್ರತಿನಿಧಿಸುತ್ತದೆಪೌರಾಣಿಕ ಕಥೆಯ ಪ್ರಕಾರ ಆಕಾಶದಿಂದ ಗಂಗೆಯು ಧುಮ್ಮಿಕ್ಕಿ ಬರುತ್ತಿರುವ ರಭಸಕ್ಕೆ ಭೂಮಿಯು ನಾಶವಾಗುತ್ತಿತ್ತುಅದನ್ನು ತಡೆಯಲು ಶಿವನು ಗಂಗೆಯನ್ನು ತನ್ನ ಜಟೆಯಲ್ಲೇ ಹಿಡಿದುಕೊಂಡು ನಂತರ ಅದರ ರಭಸವು ಕಡಿಮೆಯಾದ ಮೇಲೆ ಭೂಮಿಗೆ ಬಿಟ್ಟನು.
3.  ಅರ್ಧನಾರೀಶ್ವರ - ದಕ್ಷಿಣಾಮೂರ್ತಿ ವಿಗ್ರಹದಲ್ಲಿ ಗುರುತಿಸಲು ಸ್ವಲ್ಪ ಕಷ್ಟವಾದದ್ದು ಕಿವಿಯೋಲೆಗಳುಬಲಕಿವಿಯಲ್ಲಿರುವ ಕಿವಿಯೋಲೆಯು ಸಾಮಾನ್ಯವಾದ ದುಂಡುಕಟ್ಟುಎಡಕಿವಿಯಲ್ಲಿರುವ ಕಿವಿಯೋಲೆ ನೇತಾಡುವ ರೀತಿಯದ್ದುಇವೆರಡು ಕಿವಿಯೋಲೆಗಳ ಮೂಲಕ ಸೂಕ್ಷ್ಮವಾಗಿ ಅರ್ಧನಾರೀಶ್ವರದ ಚಿನ್ಹೆಯನ್ನು ವೀಕ್ಷಿಸಬಹುದು.  ದುಂಡುಕಟ್ಟಿನ ಕಿವಿಯೋಲೆಯು ಪುರುಷನನ್ನು ಹಾಗೂ ನೇತಾಡುವ ಕಿವಿಯೋಲೆಯು ಸ್ತ್ರೀ  ರೂಪವನ್ನು ಪ್ರದರ್ಶಿಸುತ್ತದೆಹಾಗಾಗಿ ಬಲಭಾಗದ ವಿಗ್ರಹವು ಪುರುಷ ಅಂದರೆ ಶಿವ ಹಾಗೂ ಎಡಭಾಗದ ವಿಗ್ರಹವು ಸ್ತ್ರೀ ಅಂದರೆ ಪಾರ್ವತಿಯನ್ನು ಪ್ರತಿನಿಧಿಸುತ್ತದೆ.
ಶಕ್ತಿ ಇಲ್ಲದ ಶಿವನು ಕೇವಲ ಶವಅಂದರೆ ಶಿವನ ಶಕ್ತಿಯ ಮೂಲ ಪಾರ್ವತಿಹಾಗಾಗಿ ಯಾವಾಗಲೂ ಪಾರ್ವತಿಯು ಶಿವನೊಂದಿಗೇ ಇರುವುದು.

4.  ಸೃಷ್ಟಿಯ ಸಂಕೇತ:
ದಕ್ಷಿಣಾಮೂರ್ತಿಯ ಹಿಂಭಾಗದ ಬಲಹಸ್ತದಲ್ಲಿ ಡಮರು ಇರುವುದುಡಮರುವು ಶಬ್ದ ತರಂಗಗಳನ್ನು ಉತ್ಪತ್ತಿ ಮಾಡುತ್ತದೆಆದ್ದರಿಂದ ಶಬ್ದಗಳ ಮೂಲವನ್ನು ಶಿವನ ಹಸ್ತದಲ್ಲಿರುವ ಡಮರು ಪ್ರತಿನಿಧಿಸುತ್ತದೆಪೌರಾಣಿಕವಾಗಿ ಹೇಳುವುದಾದರೆ ಡಮರುವಿನ ಮೂಲಕ ಉತ್ಪತ್ತಿಯಾಗುವ ಪ್ರತಿ ಬಡಿತವೂ ಸೃಷ್ಟಿಯ ಒಂದು ಆವೃತ್ತಿಯನ್ನು ಅಂದರೆ ಕಲ್ಪವನ್ನು ಪ್ರತಿನಿಧಿಸುತ್ತದೆಹೇಗೆ ಶಬ್ದವು ಉತ್ಪತ್ತಿಯಾಗಿ ನಂತರ ಕ್ರಮೇಣ ಕ್ಷೀಣಿಸುವುದೋ ಹಾಗೇ ವಿಶ್ವವು ಸೃಷ್ಟಿಯಾಗುತ್ತದೆ ನಂತರ ಲಯವಾಗುತ್ತದೆಡಮರುವು ಶಬ್ದವನ್ನು ಸೃಷ್ಟಿಸುವುದರಿಂದ ಅದು ಸೃಷ್ಟಿಯ ಸಂಕೇತ.
ಮತ್ತೊಂದು ವಿಷೇಶವೆಂದರೆ ಡಮರುವು ವೇಗದಿಂದ ಬಡಿಯುತ್ತದೆಹಾಗಾಗಿ ಈಶ್ವರನ ದೃಷ್ಟಿಯಲ್ಲಿ ಡಮರುವಿನ ಬಡಿತದ ವೇಗದಲ್ಲೇ ವಿಶ್ವವು ಸೃಷ್ಟಿಯಾಗುತ್ತದೆ.
5.  ವಿನಾಶದ ಚಿನ್ಹೆ:
ಅಗ್ನಿ (ಬೆಂಕಿ ) ಯು ದಕ್ಷಿಣಾಮೂರ್ತಿಯ ಹಿಂಭಾಗದ ಎಡ ಹಸ್ತದಲ್ಲಿರುವುದುಅಗ್ನಿಯು ವಿನಾಶ ಅಥವಾ ಬದಲಾವಣೆಯ ಪ್ರತಿನಿಧಿ.
6.  ಪೋಷಣೆಯ ಚಿನ್ಹೆ:
ಡಮರು ಸೃಷ್ಟಿ ಮತ್ತು ಲಯ ವಿನಾಶಗಳ ನಡುವೆ ನಡೆಯುವ ವ್ಯವಹಾರಗಳೆಲ್ಲವೂ ಪೋಷಣೆಯನ್ನು ಪ್ರತಿನಿಧಿಸುತ್ತವೆ.
7.  ಒಂದೇ ದೈವ ಹಲವಾರು ಅಂಶಗಳು:
ಈ ಸಂಕೇತವು ಶಿವನು ( ಭಗವಂತ)ಸೃಷ್ಟಿಸ್ಥಿತಿ ಹಾಗೂ ಲಯಗಳ ಮೂಲ ಎಂಬುದನ್ನು ವಿವರಿಸುತ್ತದೆ.
ಸಾಮಾನ್ಯವಾಗಿ ಹಿಂದೂಗಳ ತಪ್ಪು ಕಲ್ಪನೆಯೆಂದರೆ - ವಿಶ್ವವನ್ನು ಸೃಷ್ಟಿಸುವವನು ಬ್ರಹ್ಮಪೋಷಿಸುವವನು ವಿಷ್ಣು ಮತ್ತು ಲಯ ಕರ್ತನು ಶಿವ ಎಂದು.
ವಾಸ್ತವವಾಗಿ ಇವರು ಮೂವರು ದೇವರುಗಳು ಅಲ್ಲವೇ ಅಲ್ಲಇವುಗಳು ಈಶ್ವರನ ವಿವಿಧ ಅಂಶಗಳು ಮಾತ್ರಈ ಸತ್ಯವನ್ನು ಶ್ರೀ ದಕ್ಷಿಣಾಮೂರ್ತಿಯ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ
ಈ ಸತ್ಯವನ್ನು ವೇದಗಳ ಹಲವಾರು ಗ್ರಂಥಗಳಲ್ಲಿ ವಿವರಿಸಲಾಗಿದೆ.
ಶ್ರೀಮದ್ ಭಗವದ್ಗೀತೆಯಲ್ಲಿ:
ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್
ಭೂತಭತೃ ಚ ತಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ
ಕ್ಷೇತ್ರ ಕ್ಷೇತ್ರದ್ನ್ಯ ಗಿಭಾಗ ಯೋಗ Ch13 - v16

ಅಥರ್ವ ವೇದದಲ್ಲಿ:
ತ್ವಂ ಬ್ರಹ್ಮ ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಂಮಿಂದ್ರಸ್ತ್ವಂಮಗ್ನಿಸ್ತ್ವಂ
ವಾಯುಸ್ತ್ವಂ ಸೂರ್ಯಸ್ತ್ವಂ
ಚಂದ್ರಮಾಸ್ತ್ವಂ ಬ್ರಹ್ಮ ಭೂರ್ಭುವಃ ಸ್ವರೋಂ
ನೀನೆ (ಬ್ರಹ್ಮಾ ). ನೀನೇ ವಿಷ್ಣುನೀನೇ ರುದ್ರ / ಶಿವನೀನೇ ಇಂದ್ರನೀನೇ ಅಗ್ನಿನೀನೇ ವಾಯುನೀನೇ ಸೂರ್ಯನೀನೇ ಚಂದ್ರಮಾನೀನೇ ಬ್ರಹ್ಮ - ವೇದಗಳುನೀನೇ ಭೂರ್ಭುವಸ್ಸುವಃ - ತ್ರಿಲೋಕನೀನೇ ಓಂ.

ಋಗ್ವೇದವು  ರೀತಿಯಾಗಿ ಘೋಷಿಸುತ್ತದೆ:
ಏಕಂ ಸತ್ ವಿಪ್ರಾ ಬಹುಧಾ ವದಂತಿ.
8.  ಶಕ್ತಿ:
ಸರ್ಪವು ಡಮರುವನ್ನು ದಕ್ಷಿಣಾಮೂರ್ತಿಯ ಹಿಂಭಾಗದ ಬಲ ಹಸ್ತದಲ್ಲಿ ಹಿಡಿದಿದೆಸರ್ಪವು ಶಕ್ತಿಯ ಸಂಕೇತ.
ಸ್ವಾಮಿ ದಯಾನಂದರು ಹೇಗೆ ಸರ್ಪವು ಶಕ್ತಿಯ ಸಂಕೇತ ಎಂಬುದನ್ನು ಹಾಸ್ಯಮಿಶ್ರಿತ ರೀತಿಯಲ್ಲಿ ಹೀಗೆ ವಿವರಿಸುತ್ತಾರೆ - ನಿಮಗೆ ಕೈ ಕಾಲುಗಳು ಇಲ್ಲದಿದ್ದ ಪಕ್ಷದಲ್ಲಿ ನೀವು ಎಷ್ಟು ವೇಗವಾಗಿ ಚಲಿಸಬಲ್ಲಿರಿಸರ್ಪಕ್ಕೆ ಇವು ಯಾವುದೂ ಇಲ್ಲದಿದ್ದರೂ ವೇಗವಾಗಿ ಚಲಿಸಬಲ್ಲದು.

9. ಜ್ಞಾನದ ಮೂಲ :
ದಕ್ಷಿಣಾಮೂರ್ತಿಯ ಮುಂಭಾಗದ ಎಡಹಸ್ತದಲ್ಲಿ.  ತಾಳೆಗರಿಯ ಪುಸ್ತಕವಿರುವುದನ್ನು ಗಮನಿಸಬಹುದುಇದು ವೇದಗಳನ್ನು ಪ್ರತಿನಿಧಿಸುತ್ತದೆಇದು ಶ್ರೀ ದಕ್ಷಿಣಾಮೂರ್ತಿಯು ಗುರುವೆಂದೂ ಸೂಚಿಸುತ್ತದೆಪೂರ್ವ ಕಾಲದಲ್ಲಿ ಹಸ್ತದಲ್ಲಿ ತಾಳೆಗರಿಯ ಪುಸ್ತಕವಿರಲಿಲ್ಲಇದು ಕೇವಲ ಒಂದು ಸಾಂಕೇತಿಕ ಪ್ರತಿನಿಧಿ ಹಾಗು ಇದು ಈಶ್ವರನು ಜ್ಞಾನದ ಮೂಲ ಮತ್ತು ವೇದಗಳ ಸೃಷ್ಟಿಕರ್ತನೆಂದು ಸೂಚಿಸುತ್ತದೆ.
10. ವೇದಾಂತದ ಬೋಧನೆಗಳು:
ದಕ್ಷಿಣಾಮೂರ್ತಿಯ ಮುಂಭಾಗದ ಬಲಹಸ್ತವು ಚಿನ್ಮುದ್ರೆಯ ಸನ್ನೆಗಳನ್ನು ತೋರಿಸುತ್ತಿದೆಚಿನ್ಮುದ್ರೆಯಲ್ಲಿ ಹಸ್ತದ ಹೆಬ್ಬೆರಳು ಹಾಗೂ ತೋರುಬೆರಳುಗಳ ಸಮಾಗಮತೋರುಬೆರಳು ನಮ ಆತ್ಮ ಮತ್ತು ದೇಹ ಮನಸ್ಸು ಮತ್ತು ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆಹೆಬ್ಬೆರಳು ಬ್ರಹ್ಮನ್ ನ್ನು ಪ್ರತಿನಿಧಿಸುತ್ತೆವೇದಾಂತದ ಬೋಧನೆಗಳನ್ನು ಚಿನ್ಮುದ್ರೆಯ ಮೂಲಕ ಆತ್ಮವು ಶರೀರ ಮನಸ್ಸು ಹಾಗೂ ಇಂದ್ರಿಯಗಳನ್ನು ಹೊರತುಪಡಿಸಿ ಬೇರೆಯೇ ಎಂಬುದಾಗಿ ಸಂಕ್ಷೆಪಿಸಬಹುದುಆತ್ಮವು ಈಶ್ವರನ (ಬ್ರಹ್ಮನ್ಅವಿಭಾಜ್ಯ ಅಂಗ.

11. ಬಲ ಅಥವಾ ಸಾಮರ್ಥ್ಯ:
ದಕ್ಷಿಣಾಮೂರ್ತಿಯು ತನ್ನ ಎಡಗಾಲನ್ನು ಮಡಚಿಕೊಂಡು ಮೇಲ್ಗಡೆ ಹಾಗೂ ಬಲಗಾಲನ್ನು ಕೆಳಕ್ಕೆ ಬಿಟ್ಟುಕೊಂಡು ಆಸೀನನಾಗಿರುವನುಇದು ವೀರಾಸನಈ ವಿಧದ ಭಂಗಿಯು ಶಕ್ತಿ ಬಲ ಮತ್ತು ಪ್ರಬಲತೆ ಭವ್ಯತೆಯ ಸಂಕೇತ.  ಈ ವಿಧದ ಭಂಗಿಯು ದಕ್ಷಿಣಾಮೂರ್ತಿಯು ಎರಡು ಕಾಲ್ಗಳನ್ನು ಮಡಚಿಕೊಂಡು ಧ್ಯಾನಮೂರ್ತಿ ಭಂಗಿಯಲ್ಲಿರುವುದಕ್ಕಿಂತ ಭಿನ್ನವಾದದ್ದು.

12. ಶಾಶ್ವತತೆ :
ದಕ್ಷಿಣಾಮೂರ್ತಿಯ ಮುಖವನ್ನು ವೀಕ್ಷಿಸಿದಾಗ ಅದು ಯುವಕನಂತೆ ಕಂಡುಬರುತ್ತದೆಮುಖದಲ್ಲಿ ಗಡ್ಡ ಮೀಸೆಗಳಿರುವುದಿಲ್ಲಇದು ಈಶ್ವರನ ಶಾಶ್ವತತೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ  ಅಲ್ಲದೆ ಅವನ ಮುಖದಲ್ಲಿ ಮಂದಹಾಸವನ್ನು ಗಮನಿಸಬಹುದುಅಂದರೆ ದಕ್ಷಿಣಾಮೂರ್ತಿಯನ್ನು ಯಾವುದೇ ಅವಘಡಗಳು ಬಾಧಿಸುವುದಿಲ್ಲ ಹಾಗೂ ಅವನು ಎಲ್ಲ ಒತ್ತಡಗಳಿಂದ ಮುಕ್ತ.

13. ಅಜ್ಞಾನವನ್ನು ದೂರಮಾಡುವವನು :
ದಕ್ಷಿಣಾಮೂರ್ತಿಯ ಪಾದಗಳಡಿಯಲ್ಲಿ ಅಪಸ್ಮಾರನೆಂಬ ರಾಕ್ಷಸನಿರುವುದನ್ನು ಗಮನಿಸಬಹುದುಅಪಸ್ಮಾರ ಎಂದರೆ ಮರೆವು ಎಂದರ್ಥಆದರೆ ಈ ಸಂದರ್ಭದಲ್ಲಿ ಅಪಸ್ಮಾರವನ್ನು ಅಜ್ಞಾನಕ್ಕೆ ಹೋಲಿಸಬಹುದುನಟರಾಜ ( ಶಿವ ) ಪಾದದಡಿಯಲ್ಲಿ ಕೂಡಾ ಅಪಸ್ಮಾರ ರಾಕ್ಷಸನಿರುವುದನ್ನು ಗಮನಿಸಬಹುದುಅಜ್ಞಾನವು ಭಗವಂತನ ಪಾದದಡಿಯಲ್ಲಿರುವುದು ಎಷ್ಟು ಸಮಂಜಸವಾಗಿದೆ ಅಲ್ಲವೇ?
ಅಜ್ಞಾನವನ್ನು ಅಷ್ಟು ಹಗುರವಾಗಿ ಪರಿಗಣಿಸಲಾಗುವುದಿಲ್ಲಅಪಸ್ಮಾರ ದೈತ್ಯನ ಹಸ್ತದಲ್ಲಿ ಒಂದು ಕತ್ತಿಯು ಇರುವುದುಇದು ಅಜ್ಞಾನವು ಅತಿ ಹೆಚ್ಚಿನ ಶಕ್ತಿಯುಳ್ಳದ್ದೆಂದು ತೋರುತ್ತದೆಅಜ್ಞಾನಕ್ಕೆ ನಮ್ಮನ್ನು ನಿರಂತರವಾಗಿ ಬಳಲುವಂತೆ ಮಾಡುವ ಶಕ್ತಿಯಿದೆಅಜ್ಞಾನವು ಸಾಮಾನ್ಯವಾದ ಶತ್ರುವಲ್ಲಅದು ಸಶಸ್ತ್ರವಾದ ಶತ್ರುಹಾಗಾಗಿ ಅಪಸ್ಮಾರ ದೈತ್ಯನ ಹಸ್ತದಲ್ಲಿರುವ ದೊಡ್ಡ ಕತ್ತಿಯು ಅಜ್ಞಾನದ ಅಪಾಯಕಾರಿ ಪ್ರಕೃತಿಯನ್ನು ತೋರ್ಪಡಿಸುತ್ತದೆ

14.   ಗುರುವಿನ ಶ್ರೀ ದಕ್ಷಿಣಾಮೂರ್ತಿ :
ದಕ್ಷಿಣಾಮೂರ್ತಿ ವಿಗ್ರಹದ ಬುಡದಲ್ಲಿ ನಾಲ್ಕು ಹಿರಿಯ ಋಷಿಗಳ - ಸನಕ ಸನಂದನ ಸನಾತನ ಮತ್ತು ಸನತ್ಸುಜಾತ ರ ವಿಗ್ರಹವನ್ನು ಕೆತ್ತಲಾಗಿದೆಕೆಲವು ಕಡೆ ಈ ನಾಲ್ಕು ವಿಗ್ರಹಗಳನ್ನು ಶಿವನ ಮುಂಭಾಗದಲ್ಲಿ ಇರುವುದನ್ನೂ ಗಮನಿಸಬಹುದುಈ ನಾಲ್ಕು ಋಷಿಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತಾರೆಅಲ್ಲದೆ ಇವುಗಳು ವೇದಗಳು ಅಪೌರುಷೇಯ ಎಂಬುದನ್ನು ತೋರುತ್ತವೆ ಹಾಗೂ ಇವುಗಳನ್ನು ಮಾನವನು ಸೃಷ್ಟಿಸಿದ್ದಲ್ಲವೆಂದೂ ತಿಳಿಸುತ್ತದೆಜ್ಞಾನದ ಮೂಲವೇ ಭಗವಂತ ಹಾಗೂ ಅದೇ ವೇದಗಳುಹಾಗಾಗಿ ಶ್ರೀ ದಕ್ಷಿಣಾಮೂರ್ತಿಯು ತನ್ನ ಭಕ್ತರಿಗೆ ವೇದಗಳ ಜ್ಞಾನವನ್ನು ನೀಡುವ ಮಹಾನ್ ಗುರು.

15. ಜ್ಞಾನದ ಕಣ್ಣು :
ದಕ್ಷಿಣಾಮೂರ್ತಿಯ ಹಣೆಯ ಮೇಲಿರುವ ತಿಲಕವು ಮೂರನೇ ಕಣ್ಣನ್ನು ಪ್ರತಿನಿಧಿಸುತ್ತದೆಶಿವನು ಮೂರನೇ ಕಣ್ಣುಳ್ಳವನು ಹಾಗೂ ಅಲ್ಲಿಂದ ಯಾವುದನ್ನು ಬೇಕಾದರೂ ಸುಡುವ ಶಕ್ತಿಯುಳ್ಳ ಬೆಂಕಿಯು ಹೊರಬರಬಹುದುಈ ಬೆಂಕಿಯು ಜ್ಞಾನವನ್ನು ಪ್ರತಿನಿಧಿಸುತ್ತದೆಜ್ಞಾನವು ಅಜ್ಞಾನವನ್ನು ಹೋಗಲಾಡಿಸುತ್ತದೆಹಾಗಾಗಿ ಶಂಕರನು ತನ್ನ ಮೂರನೇ ಕಣ್ಣಿನ್ನು ತೆರೆದರೆ ಅದರಿಂದ ಹೊರಬರುವ ಜ್ಞಾನರೂಪದ ಜ್ವಾಲೆಯು ಅಜ್ಞಾನವನ್ನು ಸುಡುತ್ತದೆ.

16.  ನಂದಿ :
ಶಿವನ ವಾಹನ ನಂದಿಶಿವನು ನಂದಿಯ ಮೇಲೆ ಕುಳಿತಿರುವ ಭಂಗಿಯನ್ನು ಗಮನಿಸಬಹುದುನಂದಿಯು ಶಕ್ತಿಯನ್ನು ಪ್ರತಿನಿಧಿಸುತ್ತದೆ.

17.  ಮಾಲೆ :
ಶ್ರೀ ದಕ್ಷಿಣಾಮೂರ್ತಿಯು ಮಾಲೆಯನ್ನು ಧರಿಸಿರುವುದನ್ನು ಗಮನಿಸಬಹುದುಮಾಲೆಯು ಆಧ್ಯಾತ್ಮಿಕ ಸಾಧನೆಯ ಸಂಕೇತವೇದಪದ್ಧತಿಯಲ್ಲಿ ಪ್ರಾರ್ಥನೆ ಹಾಗೂ ಧ್ಯಾನವು ಅತಿ ಮುಖ್ಯವಾದದ್ದುಆಧ್ಯಾತ್ಮಿಕ ಜ್ಞಾನವನ್ನು ಪ್ರತಿನಿಧಿಸುವ ಚಿನ್ಮುದ್ರವು ಶ್ರೀ ದಕ್ಷಿಣಾಮೂರ್ತಿಯು ಧರಿಸಿರುವ ಮಾಲೆಯ ಮೂಲಕ ಪ್ರತಿನಿಧಿಸುತ್ತದೆ.

18. ರುದ್ರಾಕ್ಷ :
ರುದ್ರಾಕ್ಷವು ಶಿವನ ಅತಿ ಮುಖ್ಯವಾದ ಆಭರಣರುದ್ರ ಅಕ್ಷ ಅಂದರೆ ಶಿವನ ಕಣ್ಣು.  ಆದರೆ ಇದು ಶಿವನ ಕಣ್ಣಿರನ್ನು ಪ್ರತಿನಿಧಿಸುತ್ತದೆಇದು ಶಿವ ಭಕ್ತರಅತ್ಯಂತ ಪವಿತ್ರವಾದದ್ದು.

19. ಇತರ ಪ್ರತಿನಿಧಿತ್ವಗಳು :
ಶ್ರೀ ದಕ್ಷಿಣಾಮೂರ್ತಿಯ ವಿವಿಧ ರೀತಿಯ ವಿಗ್ರಹಗಳುಂಟುಸರಸ್ವತಿಯು ತನ್ನ ಕೈಯಲ್ಲಿ ಹಿಡಿದಿರುವ ವೀಣೆಯಂತೆದಕ್ಷಿಣಾಮೂರ್ತಿಯೂ  ವೀಣೆಯನ್ನು ಹಿಡಿದಿರುವ ವಿಗ್ರಹವನ್ನು ವೀಣಾ ದಕ್ಷಿಣಾಮೂರ್ತಿ ಎಂದು ಪೂಜಿಸಲ್ಪಡುತ್ತದೆ.
ಮೇಧಾ ದಕ್ಷಿಣಾಮೂರ್ತಿಯು ಚಿನ್ಮುದ್ರವನ್ನು ಹೊಂದಿರುವ ವಿಗ್ರಹವನ್ನು ಕೆಲವು ಮಂದಿರಗಳಲ್ಲಿ ನೋಡಬಹುದು.
ಕೆಲವೆಡೆ ದಕ್ಷಿಣಾಮೂರ್ತಿಯ ಶಿರದ ಮೇಲೆ ಆಲದ ಮರವಿರುವುದನ್ನೂ ಗಮನಿಸಬಹುದು.

ದಕ್ಷಿಣಾಮೂರ್ತಿ ಸ್ತೋತ್ರದ ಬಗೆಗೆ :
ಮೊದಲಿಗೆ ಐದು ಧ್ಯಾನ ಶ್ಲೋಕಗಳು - ಇವುಗಳು ದಕ್ಷಿಣಾಮೂರ್ತಿ ಸ್ತೋತ್ರದ ಭಾಗಗಳಲ್ಲ.  ಆದರೂ ಇದನ್ನು ಸಾಮಾನ್ಯವಾಗಿ ಆಸ್ತಿಕ ಮಹಾಶಯರು ಪಠಿಸುತ್ತಾರೆ.

ಶ್ಲೋಕ - 1 - ಮೌನವ್ಯಾಖ್ಯಾಪ್ರಕಟಿತ
ಶ್ಲೋಕ - 2 - ವಟವಿಟಪಿ ಸಮೀಪೇ - ಇಡೀ ಪ್ರಪಂಚಕ್ಕೇ ದಕ್ಷಿಣಾಮೂರ್ತಿ ಗುರುಗಳು
ಶ್ಲೋಕ - 3 - ಚಿತ್ರಂವಟತರೋರ್ಮೂಲೇ - ಮೌನದಿಂದಲೇ ಬೋಧನೆಮಾಡಿದರೂ ಸಂದೇಹಗಳನ್ನು ನಿವಾರಿಸುವವನು
ಶ್ಲೋಕ - 4 - ನಿಧಯೇ ಸರ್ವವಿದ್ಯಾನಾಮ್ -  ಪ್ರಾಪಂಚಿಕ ರೋಗಗಳಿಗೆ ಔಷಧ
ಶ್ಲೋಕ - 5 -  ಓಂ ನಮಃ ಪ್ರಣವಾರ್ಥಾಯ - ದಕ್ಷಿಣಾಮೂರ್ತಿಯು ಪ್ರತಿಯೊಬ್ಬರ ಅರಿವು.
                   
>  ದಕ್ಷಿಣಾಮೂರ್ತಿ ಸ್ತೋತ್ರವು ಹತ್ತು  ಶ್ಲೋಕಗಳನ್ನೊಳಗೊಂಡಿದೆ.
>   ಶ್ಲೋಕಗಳು ದೀರ್ಘವಾದ ಕಾವ್ಯಾತ್ಮಕ ಶೈಲಿ  ( ಶಾರ್ದೂಲ ವಿಕ್ರೀಡಿತಯಲ್ಲಿ ರಚಿಸಲಾಗಿದೆ.
>   ಪ್ರತಿಯೊಂದು ವಾಕ್ಯವೂ 19 ಉಚ್ಛಾರಾಂಶಗಳನ್ನೊಳಗೊಂಡಿದೆ.
>   ಪ್ರತಿಯೊಂದು ವಾಕ್ಯವನ್ನೂ 12 ಮತ್ತು ಉಚ್ಛಾರಾಂಶಗಳಾಗಿ ಪಠಿಸಬೇಕು.
>    ಸ್ತೋತ್ರದಲ್ಲಿ ಪ್ರತಿಯೊಂದು ಪದ್ಯಗಳಿಗೂ ಕನಿಷ್ಠ ಎರಡು ಅರ್ಥಗಳುಂಟು.
>    ಸ್ತೋತ್ರದಲ್ಲಿ ಮಾಯ ಎಂಬ ಪದಕ್ಕೆ ಅನೇಕ ಅರ್ಥಗಳನ್ನು ವಿವರಿಸಲಾಗಿದೆ - ಮೊದಲನೇ ಹಾಗೂ ಐದನೇ ಶ್ಲೋಕಗಳಲ್ಲಿ ಅಜ್ಞಾನವೆಂಬುದಾಗಿಯೂಎರಡನೇ ಶ್ಲೋಕ ಆದಿ ಭಾಗದಲ್ಲಿ ಸೃಷ್ಟಿಯ ಶಕ್ತಿಯಾಗಿ ಹಾಗೂಎರಡನೇ ಭಾಗದಲ್ಲಿ ಜಾದೂ ಎಂದೂ ವರ್ಣಿಸಲಾಗಿದೆ.
>    ಜ್ಞಾನಮ್ ಪದದ ಅರ್ಥವು ಜ್ಞಾನವೆಂದು.  ಇದೇ ಪದವನ್ನು ಅರಿವು ಎಂಬುದಾಗಿಯೂ ವಿವರಿಸಲಾಗಿದೆ.
>     ಸ್ತೋತ್ರದ ಅತಿ ಮುಖ್ಯ ಸೌಂದರ್ಯವೆಂದರ ಗಹನವಾದ ವೇದಾಂತದ ಸಾರವನ್ನು ಸುಂದರವಾದ ಕಾವ್ಯಾತ್ಮಕ ಶೈಲಿಯಲ್ಲಿ ವರ್ಣಿಸಲಾಗಿದೆ.

ಸ್ತೋತ್ರ ಪರಿಚಯ:
~  ಶ್ರಿ ದಕ್ಷಿಣಾಮೂರ್ತಿ ಸ್ತೋತ್ರವು ಶ್ರವಣಮನನನಿದಿಧ್ಯಾಸನಗಳಿಗೆ ಮೂಲ ತಳಹದಿ.
~   ಈ ಸ್ತೋತ್ರವು ಈಶ್ವರನ್ನು ಗುರುವಾಗಿ ಪ್ರಾರ್ಥಿಸುವುದು.
~   ಈ ಸ್ತೋತ್ರವು ಶ್ರೀ ದಕ್ಷಿಣಾಮೂರ್ತಿಯನ್ನು ಗುರುವಾಗಿ ಹಾಗೂ ಉಳಿದ ಯಾವುದೇ ಗುರುಗಳನ್ನು ಕುರಿತು
     ಪ್ರಾರ್ಥನೆ ಮಾಡುವುದು.
~   ಈ ಸ್ತೋತ್ರವು ಶ್ರೀ ದಕ್ಷಿಣಾಮೂರ್ತಿಯನ್ನು ಕುರಿತು ಪ್ರಾರ್ಥಿಸುವುದಲ್ಲದೇ ಅದ್ವೈತ ವೇದಾಂತಸಾರವನ್ನು 
      ಪ್ರಸ್ತುತಪಡಿಸುವುದೂ ಆಗಿದೆ.

ಶ್ಲೋಕ - 1 - ವಿಶ್ವಂ ದರ್ಪಣದೃಶ್ಯಮಾನನಗರೀ - ಪ್ರಾಪಂಚಿಕ ಅರಿವನ್ನು ಅನುಭವಿಸುವುದು
ಶ್ಲೋಕ - 2 - ಬೀಜಸ್ಯಾಂತರಿವಾಂಕುರೋ – ಸೃಷ್ಟಿ ಹಾಗೂ ಸೃಷ್ಟಿಕರ್ತ ಈಶ್ವರನೇ
ಶ್ಲೋಕ - 3 -  ಯಸ್ಯೈವ ಸ್ಫುರಣಂ - ನೀನು ಭಗವಂತನಿಂದ ಅವಿಭಾಜ್ಯನು.
ಶ್ಲೋಕ - 4 -  ನಾನಾಛಿದ್ರಘಟೋದರಸ್ಥಿತಮಹಾ ದೀಪಪ್ರಭಾಭಾಸ್ವರಂ - ಜಾಗೃತಿಯೊಂದೇ ಪ್ರಕಾಶಿಸುವುದು.
ಶ್ಲೋಕ - 5 - ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಂ -  ಅಜ್ಞಾನವನ್ನು ಹೋಗಲಾಡಿಸುವವನು.
ಶ್ಲೋಕ -  6  - ರಾಹುಗ್ರಸ್ತದಿವಾಕರೇಂದುಸದೃಶೋ - ದೀರ್ಘ ನಿದ್ರೆಯಲ್ಲಿಯೂ ಪ್ರಜ್ಞೆಯು ಪ್ರಸ್ತುತಿಯಲ್ಲಿರುವುದು.
ಶ್ಲೋಕ - 7 - ಬಾಲ್ಯಾದಿಶ್ವಪಿಜಾಗ್ರದಾದಿಷು -  ಸಚ್ಚಿದಾನಂದ ಆತ್ಮ
ಶ್ಲೋಕ - 8- ವಿಶ್ವಂ ಪಶ್ಯತಿ ಕಾರ್ಯಕಾರತಯ -  ಬ್ರಹ್ಮಜ್ಞಾನಿಯ ದರ್ಶನ
ಶ್ಲೋಕ - 9 - ಭೂರಂಭಾಂಸ್ಯನಲೋsನಿಲೋsಂಬರ  ಮಹರ್ - ಸರ್ವಂ ಖಲ್ವಿದಂ ಬ್ರಹ್ಮ -  ಒಬ್ಬನೇ ಬ್ರಹ್ಮ.
ಶ್ಲೋಕ - 10 - ಸರ್ವಾತ್ಮತ್ತ್ವಮಿತಿ ಸ್ಫುಟೀಕೃತಮಿದಂ - ಫಲಶ್ರುತಿ - ಸ್ತೋತ್ರ ಪಠಣದ ಫಲ.
ಓಂ ಪೂರ್ಣಮದಃ – ಅಖಂಡ
ಧ್ಯಾನ ಶ್ಲೋಕಗಳು
ಶ್ಲೋಕ - 1 - ಸಂಸ್ಕೃತದಲ್ಲಿ :
ಮೌನವಾಕ್ಯಾಪ್ರಕಟಿತಪರಬ್ರಹ್ಮತತ್ವಂ ಯುವಾನಂ
ವರ್ಷಿಷ್ಠಾಂತೇವಸದೃಷಿಗಣೈರಾವೃತಂ ಬ್ರಹ್ಮನಿಷ್ಟೈಃ
ಆಚಾರ್ಯೇಂದ್ರಂ ಕರಕಲಿತಚಿನ್ಮುದ್ರಮಾನಂದರೂಪಂ
ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ     

ಕನ್ನಡದಲ್ಲಿ :
ಮೌನದಲೆ ಬ್ರಹ್ಮನನು ಬೋಧಿಸುವ ಯುವಕನನು
ಬ್ರಹ್ಮನಿಷ್ಠರಹ ವೃದ್ಧಶಿಷ್ಯರ ಪರಮಗುರು
ಕರದ ಚಿನ್ಮುದ್ರೆಯಾನಂದ ರೂಪಿಯಾತ್ಮಾರಾಮ
ನಗೆಮೊಗ ದಕ್ಷಿಣಾಮೂರ್ತಿಯ ಪಾಡುವೆ
ಅರ್ಥ ವಿವರಣೆ:

ನಾನು ದಕ್ಷಿಣಾಮೂರ್ತಿಯನ್ನು ಪೂಜಿಸುತ್ತೇನೆದಕ್ಷಿಣಾಮೂರ್ತಿ ಯಾರುಅವನು ನಾಲ್ಕು ಋಷಿಗಳ ಮಧ್ಯೆ ಇರುವವನುಯಾರು ಈ ಋಷಿಗಳುಅವರು ದಕ್ಷಿಣಾಮೂರ್ತಿಯ ವಿದ್ಯಾರ್ಥಿಗಳೇ ? ಪುರಾತನಕಾಲದಲ್ಲಿ ವಿದ್ಯಾರ್ಥಿಗಳು ಗುರುಗಳೊಂದಿಗೆ ಆಶ್ರಮದಲ್ಲೇ ವಾಸಿಸುತ್ತಿದ್ದರುಈ ಋಷಿಗಳು ಹಿರಿಯರುದಕ್ಷಿಣಾಮೂರ್ತಿಯು ಅವರಿಗೆ ಬೋಧಿಸುತ್ತಿರುವುದರಿಂದ ಅವರುಗಳು ಬ್ರಹ್ಮನಿಷ್ಠರುದಕ್ಷಿಣಾಮೂರ್ತಿಯು ಸ್ವತಃ ಯುವಕ.
ಈ ನಾಲ್ಕು ಋಷಿಗಳಿಗೆ ದಕ್ಷಿಣಾಮೂರ್ತಿಯು ಯಾವ ರೀತಿ ಬೋಧಿಸುತ್ತಿದ್ದಾರೆಈ ಋಷಿಗಳು ಹೇಗೆ ಬ್ರಹ್ಮನಿಷ್ಠರಾದರುಹೇಗೆ ಇವರುಗಳು ಜ್ಞಾನಿಗಳಾದರು?
ಅಂತಿಮ ಸತ್ಯವನ್ನು ಮೌನವಾಖ್ಯದ ಮೂಲಕ ಬಹಿರಂಗ ಪಡಿಸಲ್ಪಡುವುದುಇದು ಕೇವಲ ಸಾಂಕೇತಿಕ ರೀತಿಮೌನವಾಖ್ಯ ಎಂದರೇನು?
ಬ್ರಹ್ಮನ ಸತ್ಯತೆಯನ್ನು ಒಂದೆರಡು ವಾಕ್ಯಗಳಲ್ಲಿ ವಿವರಿಸಲಾಗುತ್ತದೆಯೇಬ್ರಹ್ಮನ ಸತ್ಯತೆಯನ್ನು ಒಂದೆರಡು ಗ್ರಂಥಗಳಲ್ಲಿ ವಿವರಿಸಲಾಗುವುದೇ?
ಪರಬ್ರಹ್ಮನ ಬಗೆಗೆ ಎಷ್ಟು ವಿವರಿಸಲು ಪ್ರಯತ್ನಿಸಿದರೂ ಸಾಲದುಸತ್ಯ - ಈಶ್ವರನ ಸತ್ಯತೆಯನ್ನು ಪದಗಳ ಮೂಲಕ ವರ್ಣಿಸಲಾಗುವುದಿಲ್ಲಯಾವುದೇ ಶ್ರೇಷ್ಟವಾದ ಪದಗಳನ್ನು ಉಪಯೋಗಿಸಿದರೂ ಬ್ರಹ್ಮನು (ದೇವರುಅದಕ್ಕಿಂತ ಹೆಚ್ಚಿನವನುಸತ್ಯ ಅಂದರೆ ಪರಬ್ರಹ್ಮನನ್ನು ಯಾವುದೇ ಅಥವಾ ಎಷ್ಟೇ ಪದಗಳಿಂದಲೂ ವರ್ಣಿಸಲಾಗುವುದಿಲ್ಲ ಹಾಗೂ ಅವನು/ಅದು ಇವೆಲ್ಲವನ್ನೂ ಮೀರಿದ್ದು ಎಂಬುದನ್ನು ನಾವು ಒಪ್ಪಲೇಬೇಕು.
ತೈತ್ತಿರೀಯ ಉಪನಿಷತ್ತಿನಲ್ಲಿ ವಿವರಿಸಿರುವ ಪ್ರಸಿದ್ದ ಸಾಲಿನಂತೆ " ಯತೋ ವಾಚೋ ನಿವರ್ತಂತೇ ! ಅಪ್ರಾಪ್ಯ ಮನಸಾ ಸಹ ! "
ಹಾಗೆಂದಮಾತ್ರಕ್ಕೆ ಪದಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲವೇಅದು ಹಾಗಲ್ಲಪದಗಳ ಉಪಯೋಗವು ತಪ್ಪುಗ್ರಹಿಕೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ.  ವೇದಾಂತದ ಪದಗಳು ಬ್ರಹ್ಮನ ನೈಜತೆಯನ್ನು ಹೊರಗೆಡಲಾರವುಕಡೆಯಲ್ಲಿ ಅವುಗಳು ಬ್ರಹ್ಮನ ನೈಜತೆಯನ್ನು ಹೊರಗೆಡವಬೇಕಿಲ್ಲಇಷ್ಟೆಲ್ಲದರ ಮಧ್ಯೆಯೂ ಪದಗಳು ಅಜ್ಞಾನವನ್ನು ದೂರಮಾಡಲು ಉಪಯೋಗವಾಗುತ್ತವೆ.
ಹೀಗಾಗಿ ದಕ್ಷಿಣಾಮೂರ್ತಿಯು ಯಾವುದೇ ಪದಗಳನ್ನು ಉಪಯೋಗಿಸಿದರೂ ಅವುಗಳು ಕಡಿಮೆ ಹಾಗೂ ಸಾಲದು ಮತ್ತು ತಪ್ಪೇಹೀಗಾಗಿ ಇದಕ್ಕೆ ಏನು ಪರಿಹಾರನೀವು ಏನನ್ನು ಹೇಗೆ ಎಷ್ಟೇ ರೀತಿಯಲಿ ವಿವರಿಸಿದರೂ ಅದು ತಪ್ಪಾಗುತ್ತದೆ ಎಂದಾದಲ್ಲಿ ಏನನ್ನು ಹೇಳದೇ ಇರುವುದೇ ಒಳ್ಳೆಯದು.
ಮೌನವ್ಯಾಖ್ಯ - ಮೌನದ ನಿರೂಪಣೆಯು ಸತ್ಯವು ಪದಗಳಿಗೆ ಮೀರಿದ್ದು ಹಾಗೂ ಭಾಷೆಗೆ ನಿಲುಕದ್ದು ಎಂದು ಕಾವ್ಯಾತ್ಮಕವಾಗಿ ಹೇಳುವ ರೀತಿ.
ಮೌನಮಾತ್ರ ಇದ್ದಲ್ಲಿ ವೇದಾಂತ ಬೋಧನೆಯು ಮೌನದ ಮೂಲಕ ಹೇಗೆ ಸಾಧ್ಯಬೋಧಿಸಲು ಯಾವುದಾದರೂ ವಿಧಾನ (ಪ್ರಕ್ರಿಯೆ ) ಇರಲೇ ಬೇಕಲ್ಲವೇ?
ದಕ್ಷಿಣಾಮೂರ್ತಿಯು ಅನುಸರಿಸಿದ ಪ್ರಕ್ರಿಯೆಯು (ವಿದಾನ ) ಚಿನ್ಮುದ್ರೆ ( ಜ್ಞಾನಮುದ್ರೆ ಎಂದೂ ಕರೆಯಲಾಗುವ ) ವಿಧಾನತನ್ನ ಹಸ್ತದಲ್ಲಿ ಕಾಣುವಂತೆ ಚಿನ್ಮುದ್ರೆಯನ್ನು ಪ್ರದರ್ಶಿಸುತ್ತಿರುವವನೆಂದೂ ದಕ್ಷಿಣಾಮೂರ್ತಿಯನ್ನು ಬಣ್ಣಿಸಲಾಗುವುದುಇದು ದಕ್ಷಿಣಾಮೂರ್ತಿಯು ಹೇಗೆ ಮೌನವನ್ನನುಸರಿಸಿ ತನ್ನ ಶಿಷ್ಯರಿಗೆ ಬೋಧಿಸಿದನೆಂಬುದನ್ನು ವಿವರಿಸುತ್ತದೆ.
ಚಿನ್ಮುದ್ರ :

ಸಾಮಾನ್ಯವಾಗಿ ಈ ಮುದ್ರೆಯು ಬೋಧನೆಯನ್ನು ಸೂಚಿಸುತ್ತದೆ.  ಅಲ್ಲದೇ ಇದು ಆಳವಾದ ವೇದಾಂತದ ಬೋಧನೆಯನ್ನೂ ಸೂಚಿಸುತ್ತದೆಈ ಮುದ್ರೆಯ ಮೂಲಕ ಅನೇಕ ಸಂಕೇತಗಳನ್ನೂ ಅರಿಯಬಹುದು.
ಹಸ್ತದಲ್ಲಿನ ಕಿರು ಬೆರಳುಉಂಗುರ ಬೆರಳು ಹಾಗೂ ಮಧ್ಯದ ಬೆರಳುಗಳು ದೇಹ , ಮನಸ್ಸು ಹಾಗೂ ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆಅವುಗಳು ಜಾಗ್ರತ್ಸ್ವಪ್ನ ಹಾಗೂ ಸುಷುಪ್ತಿ ಅವಸ್ಥೆಗಳನ್ನೂ ಸೂಚಿಸುತ್ತವೆಅಲ್ಲದೇ ಈ ಮೂರು ಬೆರಳುಗಳು ಸ್ಥೂಲಸೂಕ್ಷ್ಮ ಹಾಗೂ ಕರಣ ಶರೀರಗಳನ್ನೂ ಸೂಚಿಸುತ್ತವೆಇವುಗಳು ಇನ್ನೂ ಅನೇಕ ಸೂಚನೆಗಳನ್ನೂ ನೀಡುತ್ತವೆಸಾಮಾನ್ಯವಾಗಿ ಇವುಗಳು "ಕ್ಷರ" ( ಕಾಲಕ್ರಮದಲ್ಲಿ ಕೊಳೆಯುವ ) ನಿಮ್ಮಲ್ಲಿನ ನೀವು ಅನುಭವಿಸುವ ಒಂದು ಭಾಗಇದಲ್ಲದೇ ಮತ್ತೊಂದು ಅಂಶವೂ ಇರುವುದುಅದೇ "ನೀವು " -ಜಾಗೃತ ವೀಕ್ಷಕ - ಜಾಗೃತ ಸಾಕ್ಷಿ - ಸತ್ ಚಿತ್ ಆನಂದ ಆತ್ಮಇದು ನಿಮ್ಮಲ್ಲಿನ ಮತ್ತೊಂದು ಭಾಗ ಹಾಗೂ ಇದೇ "ಅಕ್ಷರ " ( ಎಂದೆಂದಿಗೂ ಕೊಳೆಯದೇ ಇರುವ ). ನೀವು ಕೇವಲ ಶರೀರಮನಸ್ಸು ಹಾಗೂ ಇಂದ್ರಿಯಗಳ ಸಂಕೀರ್ಣವಲ್ಲನೀವು ಜಾಗೃತ ಅಸ್ಥಿತ್ವ.
ತೋರುಬೆರಳು ನೈಜವಾದ ನೀವು - ಆತ್ಮವನ್ನು ಪ್ರತಿನಿಧಿಸುತ್ತದೆನೀವು ಯಾರು?  ನೀವು ಈ ಎಲ್ಲ ನಾಲ್ಕು ಅಂಶಗಳ ಜೋಡಣೆನೀವು ಶರೀರಮನಸ್ಸು ಮತ್ತು ಇಂದ್ರಿಯಗಳೊಂದಿಗಿನ  ಸತ್ ಚಿತ್ ಆನಂದ ಆತ್ಮ . ಇವುಗಳೇ ನಿಮ್ಮನ್ನು ಪ್ರತ್ಯೇಕ ವ್ಯಕ್ತಿ - ಜೀವವನ್ನಾಗಿಸುತ್ತವೆ.
ಹಸ್ತಗಳ ಕಾರ್ಯವು ಹೆಬ್ಬೆಟ್ಟನ್ನು ಅವಲಂಬಿಸಿರುತ್ತದೆಹೆಬ್ಬೆಟ್ಟನ್ನೇ ಬೇರೆಲ್ಲವೂ ಅವಲಂಬಿಸಿರುತ್ತದೆಹಾಗಾಗಿ ಹೆಬ್ಬೆಟ್ಟು ಬ್ರಹ್ಮನ್ - ಸ್ಥಿರವಾದದ್ದು - ಇದರಿಂದ ಬೇರೆಲ್ಲಾ ಅಸ್ಥಿತ್ವದಲ್ಲಿರುವುದು.
ಆದ್ದರಿಂದ ನಾಲ್ಕು ಬೆರಳುಗಳು ಜೀವ ವನ್ನು ಪ್ರತಿನಿಧಿಸುತ್ತವೆ.  ಯಾರ ಮೇಲೆ ಎಲ್ಲವೂ ತನ್ನ ಅಸ್ತಿತ್ವಕ್ಕಾಗಿ ಅವಲಂಬಿಸಿರುತ್ತದೋ ಅದೇ ಬ್ರಹ್ಮನ್ ಹಾಗೂ ಅದು ಹೆಬ್ಬೆಟ್ಟನ್ನು ಪ್ರತಿನಿಧಿಸುತ್ತದೆಎಲ್ಲಿಂದ ಜ್ಞಾನಬೋಧನೆಯು ಬರುತ್ತದೆದಕ್ಷಿಣಾಮೂರ್ತಿ ಶಿವನು ಚಿನ್ಮುದ್ರೆಯಲ್ಲಿ ಆಸೀನನಾಗಿರುತ್ತಾನೆ.  ಯಾವಾಗ ಅವನು ಚಿನ್ಮುದ್ರೆಯನ್ನು ತೋರುತ್ತಿರುತ್ತಾನೋ ಆಗ ವೇದಗಳ ಬೋಧನೆಯನ್ನು ಪ್ರದರ್ಶಿಸುತ್ತಾನೆಚಿನ್ಮುದ್ರೆಯಲ್ಲಿ ಎರಡು ವಿಧಗಳು ಉಂಟಾಗುತ್ತದೆ.
ಮೊದಲನೆಯದು - ತೋರು ಬೆರಳು ಉಳಿದ ಮೂರು ಬೆರಳುಗಳಿಂದ ಬೇರ್ಪಡಬೇಕುಇದು ವೇದಾಂತದ ಬೋಧನೆ - ಆತ್ಮ ಅನಾತ್ಮ ವಿವೇಕನೀವು ಜಾಗೃತ ವ್ಯಕ್ತಿಯೆಂಬುದು ನಿಮ್ಮ ಎಚ್ಚೆತ್ತಕನಸಿನ ಮತ್ತು ಆಳವಾದ ನಿದ್ರಾ ಸ್ಥಿತಿಗಳಿಂದ ಸ್ವತಂತ್ರವಾದದ್ದುಹಾಗೆಯೇ ಇದು ಸ್ಥೂಲ ಶರೀರ ಸೂಕ್ಷ್ಮ ಶರೀರ ಹಾಗೂ ಕರನ ಶರೀರಗಳಿಂದ ಭಿನ್ನವಾದದ್ದುಅದೇ ನೀವುಸ್ವಯಂ ಪ್ರಜ್ಞಾಸತ್ ಚಿತ್ ಆನಂದ ಆತ್ಮ ಬೇರೆ ಮೂರು ಅವಸ್ಥೆಗಳಿಂದ ಭಿನ್ನವಾದದ್ದು.
ಎರಡನೆಯದಾಗಿ - ಚಿನ್ಮುದ್ರೆಯಲ್ಲಿ ತೋರು ಬೆರಳು ಹಾಗೂ ಹೆಬ್ಬೆರಳುಗಳನ್ನು ಒಟ್ಟಾಗಿ ಹಿಡಿದಿರಬೇಕುತೋರು ಬೆರಳು ಸತ್,ಚಿತ್,ಆನಂದ -ಆತ್ಮನ್ ಗಳನ್ನು ಪ್ರತಿನಿಧಿಸುತ್ತದೆಹೆಬ್ಬೆರಳು ಸತ್ಯಮ್ಜ್ಞಾನಮ್ಅನಂತಮ್ - ಬ್ರಹ್ಮನ್ ( ತೈತ್ತಿರೀಯ ಉಪನಿಷತ್ತಿನಲ್ಲಿ). ಎರಡೂ ಬೆರಳುಗಳನ್ನು ಒಟ್ಟಿಗೆ ಚಿನ್ಮುದ್ರೆಯ ರೀತಿಯಲ್ಲಿ ತಂದಾಗ ಆದಿ ಮತ್ತು ಅಂತ್ಯಗಳು ಎಲ್ಲಿಈ ಮುದ್ರೆಯು ವೃತ್ತಾಕಾರದ್ದುವೃತ್ತದಲ್ಲಿ ಪ್ರಾರಂಭ ಹಾಗೂ ಕೊನೆ ಇಲ್ಲವೇ ಇಲ್ಲವೃತ್ತದ ಒಂದು ಭಾಗವನ್ನು ಮತ್ತೊಂದು ಭಾಗದಿಂದ ಪ್ರತ್ಯೇಕಿಸಲಾಗುವುದಿಲ್ಲತೋರು ಬೆರಳು ಮತ್ತು ಹೆಬ್ಬೆರಳುಗಳಿಂದ ಉಂಟಾದ ವೃತ್ತವು ಆತ್ರ್ಮ ಹಾಗೂ ಬ್ರಹ್ಮನ್ ಇವೆರಡರ ಪ್ರತ್ಯೇಕತೆ ಇಲ್ಲದ ಸ್ಥಿತಿಯನ್ನು ಪ್ರತಿನಿಧಿಸುತ್ತದೆಇದೇ ವೇದಾಂತದ ಸಂಪೂರ್ಣ ಸಾರ. " ತತ್ ತ್ವಮ್ ಅಸಿ ".
ಇದನ್ನೇ ಸಾಂಕೇತಿಕವಾಗಿ ಚಿನ್ಮುದ್ರೆಯ ಮೂಲಕ ವ್ಯಕ್ತಪಡಿಸಲಾಗಿದೆಚಿನ್ ಅಂದರೆ ಅರಿವುಸಂಸ್ಕೃತ ವ್ಯಾಕರಣದ ನಿಯಮದ ಪ್ರಕಾರ ಚಿತ್ ಹಾಗೂ ಮುದ್ರಾ ಎರಡೂ ಸೇರಿದಾಗ ಅದು ಚಿನ್ಮುದ್ರಾ ಆಗುತ್ತದೆಮುದ್ರಾ ಅಂದರೆ ಅರಿವುಇದನ್ನು ಜ್ಞಾನಮುದ್ರಾ ಎಂದೂ ಅರಿಯಬಹುದುಜ್ಞಾನದ ಮುದ್ರಾ.
ಈ ರೀತಿಯಾಗಿ ಶ್ರೀ ದಕ್ಷಿಣಾಮೂರ್ತಿಯು ಮುದ್ರಾ ಮೂಲಕ ಋಷಿಗಳಿಗೆ ಮೌನವಾಗಿ ಬೋಧಿಸಿದರು.
ಸಾಂಕೇತಿಕವಾಗಿ ಮುದ್ರಾ ವೇದಾಂತದ ಅತ್ಯುನ್ನತ ಬೋಧನೆಯನ್ನು ಪ್ರತಿನಿಧಿಸುತ್ತದೆಪದಗಳ ಮೂಲಕ ವ್ಯಕ್ತಪಡಿಸಲಾಗದ ವೇದಾಂತ ಸಾರವನ್ನು ಅತಿ ಸುಂದರವಾದ ಚಿನ್ಮುದ್ರೆಯ ಚಿನ್ಹೆಯ ಮೂಲಕ ವಿವರಿಸಲಾಯಿತು.

ಆಚಾರ್ಯೇಂದ್ರ :
ಯಾರು ಬೋಧಿಸುತ್ತಿರುವವರು ? - ಗುರುಗಳಿಗೆಲ್ಲಾ ಇಂದ್ರನಾದವನುವೇದಾಂತದ ಬೋಧನೆಯನ್ನು ಮೊದಲಿಗೆ ಮಾಡಿದವರೇ ಶ್ರೀ ದಕ್ಷಿಣಾಮೂರ್ತಿನಾಲ್ಕು ಋಷಿಗಳಿಗೆ ಮೊತ್ತ ಮೊದಲಿಗೆ ವೇದಗಳನ್ನು ಬೋಧಿಸಿದವರೇ ಶ್ರೀ ದಕ್ಷಿಣಾಮೂರ್ತಿ ಶಿವಇದು ಕೇವಲ ಸಾಂಕೇತಿಕಏಕೆಂದರೆ ಶ್ರೀ ದಕ್ಷಿಣಾಮೂರ್ತಿಯು ಯಾವುದೇ ಚಾರಿತ್ರಿಕ ಅಥವಾ ಶ್ರೀ ರಾಮ ಅಥವಾ ಶ್ರೀ ಕೃಷ್ಣರಂತೆ ಅವತಾರ ಪುರುಷನಲ್ಲಶ್ರೀ ದಕ್ಷಿಣಾಮೂರ್ತಿಯು ಕೇವಲ ಸಾಂಕೇತಿಕ ಗುರು.
ಶ್ರೀ ದಕ್ಷಿಣಾಮೂರ್ತಿಯು ಆನಂದಸ್ವರೂಪನೂ ಹೌದುಇದು "ಮುದಿತವದನಪದಕ್ಕೆ ಜೋಡಿಸಬಹುದುಶ್ರೀ ದಕ್ಷಿಣಾಮೂರ್ತಿಯ ವದನವು ಹಸನ್ಮುಖಿಯಾದದ್ದು.
ಹಸನ್ಮುಖದ ವದನ - ಯಾಕೆ?
ಯಾತಕ್ಕೆ ಭಗವಂತ ವದನದಲ್ಲಿ ಕಿರುನಗೆಯ ಸೂಚನೆ ಇದೆಅವನು ಸಂತೋಷ ತೃಪ್ತಿಗಳ ಆಗರಅವನು ಪ್ರಾಪಂಚಿಕ ದುಃಖಗಳಿಂದ ಅತೀತಇದರ ಜೊತೆಗೇ ಅವರು ನಮ್ಮೆಡೆಗೆ ನಗುತ್ತಿಲ್ಲಭಗವದ್ಗೀತೆಯಲ್ಲೂ ಶ್ರೀ ಕೃಷ್ಣನು ಹಸನ್ಮುಖದಿಂದಲೇ ಅರ್ಜುನನ ಸಂದೇಹಗಳನ್ನು ನಿವಾರಿಸತೊಡಗುತ್ತಾನೆಅದೇ ರೀತಿಯಲ್ಲಿ ಶ್ರೀ ದಕ್ಷಿಣಾಮೂರ್ತಿಯು ಹಸನ್ಮುಖಿಯಾಗಿ ಜ್ಞಾನ ಬೋಧನೆಯನ್ನು ಮಾಡುತ್ತಿದ್ದಾರೆ.
ಸ್ವಾತ್ಮಾರಾಮಂ:
ದಕ್ಷಿಣಾಮೂರ್ತಿಯು ಸ್ವಾತ್ಮಾರಾಮಮ್ - ತನ್ನನ್ನು ತಾನೆ ವ್ಯಕ್ತಪಡಿಸುವವನು.
ಸಾಮಾನ್ಯವಾಗಿ ನಾವುಗಳು ಶಾಂತಿ ನೆಮ್ಮದಿ ಸುಖ ಮೊದಲಾದವುಗಳ ಮೂಲವನ್ನು ಬಹಿರಂಗದಲ್ಲಿ ಅರಸುತ್ತೇವೆ.  ಇವುಗಳ ನಿಜವಾದ ಮೂಲವು ಅಂತರಂಗದಕ್ಷಿಣಾಮೂರ್ತಿಗೆ ಇದು ಮೊದಲೇ ತಿಳಿದಿತ್ತುಆದ್ದರಿಂದ ಅವರು ಸ್ವಾತ್ಮಾರಾಮಮ್.
ಓಂ ಶ್ರೀ ದಕ್ಷಿಣಾಮೂರ್ತಯೇ ನಮಃ |
ಶ್ಲೋಕ - 2 - ಸಂಸ್ಕೃತದಲ್ಲಿ

ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ
ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್
ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ  
ಜನನಮರಣದುಃಖಚ್ಛೇದದಕ್ಷಂ ನಮಾಮಿ              
ಕನ್ನಡದಲ್ಲಿ :
ಆಲವೃಕ್ಷದ ಬಳಿ ಕುಳಿತು ಸಕಲಮುನಿಜನಕೆ
ಸುಜ್ಞಾನದಾನವನೀವ ಲೋಕಗುರು
ಈಶ್ವರನೆ ಹುಟ್ಟು ಸಾವಿನ ದುಃಖ
ಕಳೆವ ದಕ್ಷನೆ ದಕ್ಷಿಣಾಮೂರ್ತಿಯೆ ವಂದಿಪೆ
ಅರ್ಥ ವಿವರಣೆ:
ಶ್ರೀ ದಕ್ಷಿಣಾಮೂರ್ತಿಯು ಆಲದಮರದ ಬಳಿ ನೆಲದಮೇಲೆ ಆಸೀನನಾಗಿರುವನುಅವನು ಸಿಂಹಾಸನದ ಮೇಲೆ ಕುಳಿತಿಲ್ಲಭಾರತದಲ್ಲಿ ಪುರಾತನಕಾಲದಿಂದಲೂ ವಿದ್ಯೆಯನ್ನು ಕಲಿಸುವ ಗುರುವು ಯಾವಾಗಲೂ ನೆಲದಮೇಲೆ ಕುಳಿತೇ ಪಾಠಮಾಡುವುದು ಸಂಪ್ರದಾಯಈಗಿನ ಕಾಲದಲ್ಲೂ ರವೀಂದ್ರನಾಥ ಟಾಗೋರ್ ಅವರು ನಿರ್ಮಿಸಿದ "ಶಾಂತಿನಿಕೇತನ " ದಲ್ಲಿ ಕೂಡಾ ಇದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ದಕ್ಷಿಣಾಮೂರ್ತಿಯು ಎಲ್ಲ ಋಷಿಗಳ ಮುಂದೆ ಕುಳಿತು ಜ್ಞಾನವನ್ನು ಬೋಧಿಸುವನು.
ಎಲ್ಲ ವಿಧದ ಆಧ್ಯಾತ್ಮಿಕ ಜ್ಞಾನಗಳಿಗೆ ಮೂಲವೇ ದಕ್ಷಿಣಾಮೂರ್ತಿಮೂರು ಲೋಕಗಳಿಗೂ ಜ್ಞಾನವನ್ನು ನೀಡುವ ಗುರು ಶ್ರೀ ದಕ್ಷಿಣಾಮೂರ್ತಿಮೂರು ಲೋಕಗಳು ಎಂದರೆ ಭೂಮಿಸ್ವರ್ಗಅಂತರಿಕ್ಷಗಳನ್ನು ಕೂಡಿದ ವಿಶ್ವ.
ಶ್ರೀ ದಕ್ಷಿಣಾಮೂರ್ತಿಯನ್ನು ದಕ್ಷನೆಂದೂ ವರ್ಣಿಸಲಾಗಿದೆಅವನು ಹುಟ್ಟು ಸಾವುಗಳಿಂದ ಉಂಟಾಗುವ ದುಃಖಯಾತನೆಗಳನ್ನು ನಿವಾರಿಸುವ ಅಥವಾ ನಾಶಮಾಡುವ ಶಕ್ತಿಯುಳ್ಳವನುಅಂಥಹ ಶ್ರೀ ದಕ್ಷಿಣಾಮೂರ್ತಿಯನ್ನು ಪೂಜಿಸುತ್ತೇನೆ.
ಶ್ಲೋಕ - 3 - ಸಂಸ್ಕೃತದಲ್ಲಿ :

ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾ ಗುರುರ್ಯವಾ
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನಸಂಶಯಾ   

ಕನ್ನಡದಲ್ಲಿ :
ಆಲದಾ ಮರದಡಿ ಮುದಿ ಶಿಷ್ಯರು ಯುವಗುರು
ಗುರುಮೌನ ಶಿಷ್ಯ ಸಂಶಯ ದೂರವಿದು ವಿಚಿತ್ರ

ಅರ್ಥ ವಿವರಣೆ :
ಆಶ್ಚರ್ಯವೆಂದರೆ ಆಲದ ಮರದ ಬುಡದಲ್ಲಿ ಶಿಷ್ಯರುಗಳು ವೃದ್ಧರು ಮತ್ತು ಗುರುವು ಯುವಕನು.  ಸಾಮಾನ್ಯವಾಗಿ ಗುರುವು ವೃದ್ಧನುಇದು ಸಾಂಪ್ರದಾಯಿಕ ರೀತಿ ಈಗಿನ ಆಧುನಿಕ ಕಾಲದಲ್ಲಿ ಹಾಗೂ ಪುರಾತನಕಾಲದಲ್ಲಿಯೂ ಸಹಇದು ಸಾಮಾನ್ಯವಾಗಿ ತರ್ಕಬದ್ಧವಾದದ್ದೂ ಸಹನಾವುಗಳು ವಯಸ್ಸಾದಂತೆ ಜ್ಞಾನವನ್ನು ಪಡೆದುಕೊಳ್ಳುತ್ತೇವೆ.  ಹಾಗಾಗಿ ವಯಸ್ಸಾದವರನ್ನು ಜ್ಞಾನಿಗಳೆಂದು ಪರಿಗಣಿಸುತ್ತೇವೆಸಾಮಾನ್ಯವಾಗಿ ನಾವುಗಳು ಕಾಣುವುದೇನೆಂದರೆ ಜ್ಞಾನಿಗಳಿಗೆ ಬಿಳಿ ಗಡ್ಡವಿರುವುದು.
ಆದರೆ ಈ ಶ್ಲೋಕದಲ್ಲಿ ಈ ರೀತಿಯಾಗಿ ವರ್ಣಿಸಿಲ್ಲ . ಇಲ್ಲಿ ಗುರುವು ಯುವಕ ಹಾಗೂ ಶಿಷ್ಯಂದಿರುಗಳು ವೃದ್ಧರುಇದೊಂದೇ ಆಶ್ಚರ್ಯಕರವಾದದ್ದಲ್ಲಮತ್ತೊಂದು ಆಶ್ಚರ್ಯಕರವಾದ ಸಂಗತಿಯೆಂದರೆ  ಈ ಶ್ಲೋಕದಲ್ಲಿ ವರ್ಣಿಸಿರುವಂತೆ ಗುರುವು ತನ್ನ ಶಿಷ್ಯರಿಗೆ ಮೌನದ ಮೂಲಕ ಜ್ಞಾನವನ್ನು ಬೋಧಿಸುತ್ತಿರುವುದು.
ಸಾಮಾನ್ಯವಾಗಿ ಯಾರಾದರೂ ಒಂದೆಡೆ ಕುಳಿತು ಮೌನದಿಂದ ಬೋಧನೆ ಮಾಡಿದರೆ ಅದರ ಫಲಿತಾಂಶ ಏನಾಗಿರಬಹುದುಫಲಿತಾಂಶವು ಕೇವಲ ಸೊನ್ನೆ ಮಾತ್ರಆದರೆ ಶ್ರೀ ದಕ್ಷಿಣಾಮೂರ್ತಿಯು ಮೌನದಿಂದ ಬೋಧಿಸಿದರೆ ಶಿಷ್ಯರ ಎಲ್ಲ ಸಂದೇಹಗಳೂ ನಾಶವಾಗುತ್ತವೆಆದ್ದರಿಂದ ಇದು ಆಶ್ಚರ್ಯಕರವಾದದ್ದು ಹಾಗೂ ಅದ್ಭುತ ಮತ್ತು ಬೆರಗುಗೊಳಿಸುವಂಥಾದ್ದು.
ಈ ಶ್ಲೋಕವನ್ನು ಪಠಿಸುತ್ತಿರುವಾಗ ನಮ್ಮ ಮನಸ್ಸಿನಲ್ಲಿ ಒಂದು ಕಲಾತ್ಮಕವಾದ ಕಲ್ಪನೆಯುಂಟಾಗುತ್ತದೆಆದರೆ ನೈಜವಾಗಿ ಶ್ರೀ ದಕ್ಷಿಣಾಮೂರ್ತಿಯು ಬೋಧಿಸಿದ ಜ್ಞಾನವು ಪದಗಳ ಮೂಲಕ ವರ್ಣಿಸಲಾಗದ್ದುಭಾಷೆಯನ್ನು ಮೀರಿದ್ದುಪರಿಕಲ್ಪನೆಯನ್ನು ಮೀರಿದ್ದು ಹಾಗೂ ಆಲೋಚನೆಗೆ ನಿಲುಕದ್ದು.
ಈ ಸತ್ಯವನ್ನು ಕಾವ್ಯಾತ್ಮಕವಾಗಿ ಅಥವಾ ಸಾಂಕೇತಿಕವಾಗಿ ಹೇಳಬೇಕೆಂದರೆ ಅದು ಕೇವಲ ಮೌನದ ಮೂಲಕ ಮಾತ್ರಗುರುವು ಮೌನವಾಗಿ ಬೋಧಿಸುತ್ತಾರೆಬೋಧನೆಯು ಮುಂದುವರೆಯುತ್ತಲೇ ಇರುತ್ತದೆವೇದಾಂತದ ಬೋಧನೆಯು ಚಿನ್ಮುದ್ರೆಯಲ್ಲೇ ಅಡಕವಾಗಿದೆಇದನ್ನು ಜ್ಞಾನಮುದ್ರೆ ಎಂದೂ ವರ್ಣಿಸಲಾಗಿದೆಶ್ರೀ ದಕ್ಷಿಣಾಮೂರ್ತಿಯು ತನ್ನ ಹಸ್ತದ ಮೂಲಕ ಇದೇ ಚಿನ್ಹೆಯನ್ನೇ ಪ್ರದರ್ಶಿಸುತ್ತಿರುವುದು.
ಮೊದಲನೇ ಮೂರು ಮಂತ್ರಗಳ ಮೂಲಕ ಇದನ್ನು ಸಾಂಕೇತಿಕವಾಗಿ ವರ್ಣಿಸಲಾಗಿದೆ.  ಮುಂದಿನ ಎರಡು ಧ್ಯಾನ ಮಂತ್ರಗಳಲ್ಲಿ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಲಾಗಿದೆ / ಪೂಜಿಸಲಾಗಿದೆ.
ಶ್ಲೋಕ - 4 - ಸಂಸ್ಕೃತದಲ್ಲಿ :

ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ      
ಕನ್ನಡದಲ್ಲಿ :

ಸರ್ವವಿದ್ಯೆಯ ನಿಧಿಗೆ ಭವರೋಗ ವೈದ್ಯನಿಗೆ
ಸರ್ವಲೋಕದ ಗುರುಗೆ ನಮೋ ದಕ್ಷಿಣಾಮೂರ್ತಿಗೆ

ಅರ್ಥ ವಿವರಣೆ:
ನಿಧಯೇ ಸರ್ವ ವಿದ್ಯಾನಾಂ = ಪ್ರಾಪಂಚಿಕ ಜೀವನದಲ್ಲಿನ ಎಲ್ಲ ರೋಗಗಳಿಗೆ ಔಷಧ.
ಅನಂತ ಜ್ಞಾನಗಳ ನಿಧಿಯಾದವನಿಗೆ ಪ್ರಣಾಮಗಳುಇಲ್ಲಿ ನಿಧಿಯೆಂದರೆ ಬರೇ ಪ್ರಾಪಂಚಿಕವಾದ ನಿಧಿಗಳಲ್ಲಬದಲಾಗಿ ಇದು ಸಂಪೂರ್ಣ ಜ್ಞಾನಕ್ಕೆ ಸಂಬಂಧಿಸಿದ್ದು.
ಮನೆ ತುಂಬಾ ಬಂಗಾರವೈಢೂರ್ಯಗಳನ್ನು ತುಂಬಿಕೊಂಡಿದ್ದರೂ ಸಹ ನೀವು ಜೀವನದಲ್ಲಿ ಶೋಚನೀಯ ಸ್ಥಿತಿಯಲ್ಲಿರಲು ಸಾಧ್ಯವೇ ? ಅನೇಕರಿಗೆ ಇದು ಸಾಧ್ಯಪ್ರಾಪಂಚಿಕ ಸಂಪತ್ತನ್ನು ಹೊಂದಿದ ಮಾತ್ರಕ್ಕೆ ನಿಮ್ಮ ಜೀವನವು ಸಂತೋಷವಾಗಿದೆಯೆಂದು ಭಾವಿಸಲು ಸಾಧ್ಯವಿಲ್ಲ.  ಹಲವು ವೇಳೆ ಅತಿಯಾದ ಸಂಪತ್ತು ನಮ್ಮ ಜೀವನವನ್ನು ಶೋಚನೀಯಸ್ಥಿತಿಗೆ ದೂಡುತ್ತದೆ.
ಪ್ರಾಪಂಚಿಕ ಸಂಪತ್ತು ನಿಮಗೆ ತೃಪ್ತಿಶಾಂತಿನೆಮ್ಮದಿಗಳನ್ನು ದೊರಕಿಸಿಕೊಡುವ ಯಾವ ಭರವಸೆಗಳನ್ನೂ ನೀಡುವುದಿಲ್ಲವಾದ್ದರಿಂದ ಕೇವಲ ಆಧ್ಯಾತ್ಮಿಕ ಜ್ಞಾನ ಮಾತ್ರ ಶಾಂತಿ ನೆಮ್ಮದಿಗಳನ್ನು ದೊರಕಿಸಿಕೊಡುವ ಭರವಸೆಯನ್ನು ನೀಡುತ್ತದೆಆದ್ದರಿಂದ ಶ್ರೀ ದಕ್ಷಿಣಾಮೂರ್ತಿಯನ್ನು ನಿಧಯೇ ಸರ್ವವಿದ್ಯಾನಾಂ - ಸರ್ವ ವಿದ್ಯೆಗಳ ಅಮೂಲ್ಯವಾದ ನಿಧಿಯೆಂದು ಪೂಜಿಸಲಾಗುತ್ತದೆಶ್ರೀ ದಕ್ಷಿಣಾಮೂರ್ತಿಯನ್ನು ಪ್ರಾಪಂಚಿಕ ರೋಗಗಳಿಗೆ ಸಿದ್ಧೌಷಧವೆಂದೂ ಪೂಜಿಸಲಾಗುತ್ತದೆ.
ಭವರೋಗ - ಪ್ರಾಪಂಚಿಕ ಅನಾರೋಗ್ಯಗಳು:
ರೋಗ ಎಂದರೆ ಅನಾರೋಗ್ಯ ಅಥವಾ ರೋಗಗಳುಭವರೋಗ ಎಂದರೆ - ಪ್ರಾಪಂಚಿಕ ಸುಖಸಂಪತ್ತು ಎಂಬ ಮರೀಚಿಕೆಗಳ  ಹಿಂದೆ ಹೋಗಿ ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಂಡು ಶಾಂತಿ ಹಾಗೂ ನೆಮ್ಮದಿಗಳನ್ನು ಕಳೆದುಕೊಳ್ಳುವುದು.  ನಿಜವಾದ ಸಂತೋಷದ ಮೂಲವು ನಮ್ಮ ಅಂತರಂಗದಲ್ಲೇ ಇರುವುದುಇದನ್ನು ಅರಿತುಕೊಳ್ಳುವುದಕ್ಕೆ ಕೇವಲ ಶ್ರೀ ದಕ್ಷಿಣಾಮೂರ್ತಿ ಮಾತ್ರ ಸಹಕರಿಸುತ್ತಾನೆ.
ಹಾಗಾಗಿ ಶ್ರೀ ದಕ್ಷಿಣಾಮೂರ್ತಿಯನ್ನು ಭವರೋಗವೈದ್ಯನೆಂದೂ ಪೂಜಿಸಲ್ಪಡುತ್ತಾರೆ.  ನಮ್ಮಲ್ಲಿನ ಅಜ್ಞಾನವೆಂಬ ರೋಗವನ್ನು ಹೋಗಲಾಡಿಸಿ ಜ್ಞಾನವನ್ನು ಕರುಣಿಸುವವನೇ ಶ್ರೀ ದಕ್ಷಿಣಾಮೂರ್ತಿ.
ಶ್ಲೋಕ -  5  -  ಸಂಸ್ಕೃತದಲ್ಲಿ:

ಓಂ ನಮಃ ಪ್ರಣವಾರ್ಥಾಯ ಶುದ್ಧ ಜ್ಞಾನೈಕಮೂರ್ತಯೇ
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ      
ಕನ್ನಡದಲ್ಲಿ :
ಓಂಕಾರಸಾರನಿಗೆ ಕೇವಲಜ್ಞಾನ ಮೂರುತಿಗೆ
ನಿರ್ಮಲಂಗೆ ಪ್ರಶಾಂತನಿಗೆ ನಮೋ ದಕ್ಷಿಣಾಮೂರ್ತಿಗೆ

ಅರ್ಥ ವಿವರಣೆ :
ಓಂಕಾರದ ತಾತ್ಪರ್ಯವಾದ ಶ್ರೀ ದಕ್ಷಿಣಾಮೂರ್ತಿಗೆ ಅನಂತಾನಂತ ಪ್ರಣಾಮಗಳುಓಂಕಾರಸ್ವರೂಪನಾದ ಏಕಮೇವಶುದ್ಧ ಜ್ಞಾನಸ್ವರೂಪಿಗೆ ವಂದನೆಗಳುಮತ್ತೊಂದು ರೀತಿಯಲ್ಲಿ ಜ್ಞಾನದ ಸಾಕಾರಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ಅನೇಕ ಪ್ರಣಾಮಗಳು.
ದಕ್ಷಿಣಾಮೂರ್ತಿಯನ್ನು ಕಳಂಕರಹಿತಬಂಧಮುಕ್ತ ಮತ್ತು ಬಾಧೆಗಳಿಂದ ಮುಕ್ತನಾದವನೆಂದು ವರ್ಣಿಸಲಾಗಿದೆ.
ಆತ್ಮಸಾಕ್ಷಿ :
ಈ ಶ್ಲೋಕಗಳ ಪಠಣದಿಂದ ನೀವು ದುಃಖಕೋಪಖಿನ್ನಮನಸ್ಕರಾಗಿದ್ದಾಗ ಅಥವಾ ಹತಾಶರಾಗಿದ್ದಾಗಲೂ ನಿಮ್ಮಲ್ಲಿನ ಆತ್ಮಸಾಕ್ಷಿಯು ಸಹಜಸ್ಥಿಯಲ್ಲೇ ಇರುತ್ತದೆ.
ಶ್ರೀ ದಕ್ಷಿಣಾಮೂರ್ತಿಯು ಪ್ರತಿಯೊಬ್ಬನ ಸ್ವಯಂಆತ್ಮಸಾಕ್ಷಿ.
ಶ್ರೀ ದಕ್ಷಿಣಾಮೂರ್ತಿಯನ್ನು ಸಂಪೂರ್ಣ ಪ್ರಶಾಂತ ಮೂರ್ತಿಯೆಂದೂ ವರ್ಣಿಸಲಾಗಿದೆಇಂಥಹ ಶ್ರೀ ದಕ್ಷಿಣಾಮೂರ್ತಿಗೆ ಅನಂತ ಪ್ರಣಾಮಗಳು.

ಈ ಧ್ಯಾನ ಶ್ಲೋಕಗಳು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರದ ಭಾಗವಲ್ಲಆದರೆ ಇವುಗಳನ್ನು ಸಾಂಪ್ರದಾಯಿಕವಾಗಿ ಸ್ತೋತ್ರ ಪಠಣದ ಮೊದಲು ಹೇಳಿಕೊಳ್ಳುವುದು ರೂಢಿ.  ಈ ಮೂಲಕ ಸ್ತೋತ್ರ ಪಠಣಕ್ಕೆ ಮೊದಲೇ ಪಠಿಸುವವರ ಮನದಲ್ಲಿ ಧ್ಯಾನ ಮತ್ತು ಪ್ರಾರ್ಥನೆಯ ಸಲುವಾಗಿ ದಕ್ಷಿಣಾಮೂರ್ತಿಯ ಸುಂದರ ವಿಗ್ರಹವು ಸ್ಥಾಪಿಸಲ್ಪಡುತ್ತದೆ.

ಶ್ರೀ ದಕ್ಷಿಣಾಮೂರ್ತಿಸ್ತೋತ್ರ

ಶ್ಲೋಕ - 1 ಸಂಸ್ಕೃತದಲ್ಲಿ

ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾಂತರ್ಗತಂ
ಪಶ್ಯನ್ನಾತ್ಮಾನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ|
ಯಃ ಸಾಕ್ಷಾತ್ಕುರುತೇ ಪ್ರಬೋಧಸಮಯೇಸ್ವಾತ್ಮಾನಮೇವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ   
ಕನ್ನಡದಲ್ಲಿ

ಕನಸಿನೊಳು ಕಾಣುವೊಲು ಮಾಯೆಯಿಂದೆಲ್ಲ ಹೊರಗೆನಿಸಿದರು
ತನ್ನೊಳಗಿರುವ ವಿಶ್ವವನು ಕನ್ನಡಿಯ ನಗರದೊಲು ಕಾಂಬ
ಅರಿವೆಚ್ಚರಿಯಲಾತ್ಮದದ್ವಯದ ಪರಿಯರಿವರಾರೊ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ವಿವರಣೆ

ಯಾರು ಕನ್ನಡಿಯಲ್ಲಿ ಕಾಣುವ ಶರೀರಕ್ಕೆ ಹೋಲಿಸಬಹುದಾದ ತನ್ನೊಳಗಿರುವ ಪ್ರಪಂಚವನ್ನು ಕನಸಿನಲ್ಲಿ ಕಾಣುವ (ವಿಷಯಗಳಹಾಗೆಮಾಯೆಯಿಂದ ಹೊರಗೆ ಉಂಟಾಗಿರುವಂತೆ ಕಂಡು ಜ್ಞಾನೋದಯವಾದಾಗ ದ್ವೈತರಹಿತವಾದ ಆತ್ಮತತ್ವವನ್ನು ತನ್ನಲ್ಲಿಯೇ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೆಯೋ ಅಂಥ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರ.
ವ್ಯಾಖ್ಯಾನ:

ಕನ್ನಡಿಯಲ್ಲಿ ಶರೀರದ ಪ್ರತಿಬಿಂಬ ಶರೀರದಂತೆಯೇ ಕಾಣುತ್ತದೆಆದರೆ ಶರೀರವು ಕನ್ನಡಿಯಲ್ಲಿ ಇಲ್ಲಅದು ಇರುವುದು ಕನ್ನಡಿಯಿಂದ ಹೊರಗೆತನ್ನಲ್ಲಿಯೇತಾನಾಗಿಯೇ ಆದರೆ ಕಾಣುವುದು ತನಗಿಂತ ಬೇರೆಯಾಗಿತನ್ನ ದೃಷ್ಟಿಗೆ ವಿಷಯವಾಗಿಈ ಪ್ರತಿಬಿಂಬ ಕೇವಲ ಬರಿಯ ತೋರಿಕೆಯೇ ಹೊರತು ನಿಜವಲ್ಲಕನ್ನಡಿಯ ಒಳಗೆ ಕಾಣುತ್ತಿರುವುದೂ ನಿಜವಾಗಿ ಅಲ್ಲಿ ಇಲ್ಲವೇ ಇಲ್ಲಇದು ಹೇಗೆಂದರೆ ಎಲ್ಲರಿಗೂ ಅನುಭವವಾಗಿರುವ ಕನಸಿನಂತೆ.
ಕನಸಿನಲ್ಲಿ ಕಂಡ ಯಾವ ಪದಾರ್ಥವೂ ನಿಜವಾಗಿ ಸ್ಥೂಲ ಪದಾರ್ಥಗಳಾಗಿ ಇಲ್ಲಸ್ಥೂಲ ಪದಾರ್ಥಗಳಲ್ಲದ ಮನಸ್ಸಿನ ಸಂಸ್ಕಾರಗಳೇ ಸ್ಥೂಲ ಪದಾರ್ಥಗಳಾಗಿ ಕಾಣುತ್ತವೆಪ್ರತಿಬಿಂಬವೂ ಇಂಥದ್ದೇ.
ಈ ತೋರಿಕೆಗೆ ಕಾರಣವೇನು ಎಂದರೆಗೊತ್ತಿಲ್ಲ;  ಹೇಳುವುದಕ್ಕಾಗುವುದಿಲ್ಲಇದನ್ನೇ ಮಾಯೆ ಎನ್ನುವುದು.
ಹೀಗೆಯೇ ಜಗತ್ತೂ ಕೂಡ ಹೇಗೆ ನಮಗೆ ಕಾಣುತ್ತಿದೆಯೋ ಹಾಗಿಲ್ಲಎಲ್ಲಿ ಕಾಣುತ್ತಿದೆಯೋ ಅಲ್ಲಿಲ್ಲಒಂದೇ ಆಗಿರುವುದು ನಾನಾ ತತ್ವದಿಂದ ಕೂಡಿದ್ದಾಗಿ ಕಾಣುತ್ತಿದೆನೋಡುವವನ ಒಳಗೆಯೇ ಅವನೇ ಆಗಿರುವುದು ಅವನ ಹೊರಗೆ ಅವನಿಗಿಂತ ಬೇರೆಯಾಗಿ ಕಾಣುತ್ತಿದೆಆದ್ದರಿಂದ ಈ ತೋರಿಕೆಯೂ ಸುಳ್ಳೇಅದಕ್ಕೆ ಕಾರಣವನ್ನೂ ಹೇಳುವುದಕ್ಕೆ ಸಾಧ್ಯವಿಲ್ಲಅದೂ ಮಾಯೆಯೇಇದು ಪೂರ್ಣವಾಗಿ ತಿಳುವಳಿಕೆ ಇಲ್ಲದಿರುವ ಸ್ಥಿತಿಪೂರ್ಣವಾದ ತಿಳುವಳಿಕೆಯುಂಟಾದಾಗ ಈ ತೋರಿಕೆ ಕಾಣುವುದಿಲ್ಲಎಚ್ಚರವಾದಾಗ ಕನಸಿನಲ್ಲಿ ಕಂಡ ಪದಾರ್ಥಗಳು ಕಾಣದಿರುವ ಹಾಗೆ.
ಕನಸಿನಲ್ಲಿ ಜಗತ್ತನ್ನು ತನಗಿಂತ ಬೇರೆಯಾಗಿ ಕಂಡುಎಚ್ಚರವಾದಾಗ ಹಾಗೆ ಬೇರೆಯಾದ ಜಗತ್ತು ಇಲ್ಲವೇ ಇಲ್ಲಬರಿಯ ತೋರಿಕೆ ಅಷ್ಟೇನಿಜವಾಗಿಯೂ ಇರುವುದು ತಾನೊಂದೇ ಎಂಬುದನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದು ಪರ ತತ್ವವೇಪರಮ ಗುರು ದಕ್ಷಿಣಾಮೂರ್ತಿ.
ಇದೆಹೊಳೆಯುತ್ತಿದೆ (ಎಂದರೆ ಗೋಚರವಾಗಿದೆಎಂಬ ವ್ಯವಹಾರವು ಎಲ್ಲ ಪದಾರ್ಥಗಳ ವಿಷಯದಲ್ಲಿಯೂ ನಡೆಯುತ್ತಲೇ ಇರುತ್ತದೆಆ ಇರುವುದೂ ಹೊಳೆಯುವುದೂ ಯಾವ ಪದಾರ್ಥದಲ್ಲಿ ಆಶ್ರಯವನ್ನು ಪಡೆದಿವೆ?
ಈ ಲೋಕಗಳೂ ಈ ಎಲ್ಲ ಪ್ರಪಂಚವೂ ಇದರ (ಆತ್ಮನಲ್ಲಿಯೇ ಇವೆಕನ್ನಡಿಯಲ್ಲಿ ಕಂಡ ತನ್ನ ಶರೀರದಂತೆ ಮಾಯೆಯ ದೆಸೆಯಿಂದ ಹೊರಗಿರುವ ಹಾಗೆ (ಬೇರೆಯಾಗಿರುವಂತೆತೋರುತ್ತದೆ.
ಕನಸಿನಲ್ಲಿ ಹೇಗೆ ತನ್ನಲ್ಲಿಯೇ ಇರುವ ಜಗತ್ತು ಬೇರೆಯಾಗಿರುವಂತೆ ಕಾಣುತ್ತದೆಯೋ ಎಚ್ಚರವಾಗಿರುವ ಕಾಲದಲ್ಲಿಯೂ ಕೂಡ ಈ ಪ್ರಪಂಚವು ಹಾಗೆಯೇ (ಆತ್ಮನಲ್ಲಿಯೇ ಇರುವುದಾದರೂ ಬೇರೆ ಇರುವಂತೆ ಕಾಣುವುದು).
ಹೇಗೆ ಎಚ್ಚೆತ್ತಿರುವವನಿಗೆ ಕನಸಿನಲ್ಲಿ ಕಂಡ ವಿಷಯಗಳು (ಎಚ್ಚರವಾಗಿರುವಾಗಕಾಣುವುದಿಲ್ಲವೋ ಹಾಗೆಯೇ ಸರಿಯಾದ ಅರಿವು ಉಂಟಾದ ಮೇಲೆ ಜಗತ್ತು ಕೂಡಾ ಕಾಣುವುದಿಲ್ಲ.
ಯಾವಾಗ ಅನಾದಿಯಾದ ಮಾಯೆಯ ವಶದಿಂದ ನಿದ್ದೆಯಲ್ಲಿರುವ ಜೀವನು ಎಚ್ಚರಗೊಳ್ಳುತ್ತಾನೋ ಆಗ ಜನ್ಮನಿದ್ದೆಕನಸುಗಳಿಲ್ಲದ ಅದ್ವಿತೀಯವಾದ ಆತ್ಮ ತತ್ವದ ಅರಿವುಂಟಾಗುತ್ತದೆ.
ವೇದವಾಕ್ಯದಿಂದಲೋಗುರುವಿನ ದಯೆಯಿಂದಲೋಯೋಗಾಭ್ಯಾಸದ ಬಲದಿಂದಲೋ ಅಥವಾ ಈಶ್ವರಾನುಗ್ರಹದಿಂದಲೋ ಯಾವಾಗ ಆತ್ಮ ಜ್ಞಾನವುಂಟಾಗುತ್ತದೆಯೋ ಆಗ ಊಟ ಮಾಡಿ ಹೊಟ್ಟೆಯಲ್ಲಿರುವ ಆಹಾರವನ್ನು ತನ್ನ ದೇಹವೆಂದೇ ಹೇಗೆ (ಸಾಮಾನ್ಯ ಮನುಷ್ಯನುತಿಳಿಯುತ್ತಾನೋ ಹಾಗೆಯೇ ಯೋಗೀಶ್ವರನು ತುಂಬಿದ ನಾನೆಂಬ ಭಾವನೆಯಿಂದ ನುಂಗಲ್ಪಟ್ಟ ಜಗತ್ತನ್ನು ತಾನೆಂದೇ (ಎಂದರೆ ತನ್ನ ಆತ್ಮನಿಂದ ಬೇರೆಯಲ್ಲವೆಂದೇತಿಳಿಯುತ್ತಾನೆ.
ಕನಸಿನಲ್ಲಿ ಹೇಗೆ ಒಂದು ಮುಹೂರ್ತ ಮಾತ್ರದಲ್ಲಿ ರಾಜನಾಗಿ ಯಥೇಚ್ಛ ಸುಖ ಭೋಗಗಳನ್ನನುಭವಿಸಿ ಸಜ್ಜಿತವಾದ ಸೈನ್ಯದಿಂದ ಕೂಡಿ ಯುದ್ಧ ಭೂಮಿಯಲ್ಲಿ ಶತ್ರುವನ್ನು ಗೆದ್ದು / ಸೋತು ಕಾಡಿಗೆ ಹೋಗಿ ತಪಸ್ಸು ಮಾಡಿ ತನ್ನನ್ನು ಬಹುಕಾಲ ಬದುಕಿದವನೆಂದು ತಿಳಿಯುತ್ತಾನೋ ಹಾಗೆಯೇ ಈ ಜೀವನು ಎಚ್ಚರವಾಗಿರುವಾಗಲೂ ಮನೋರಾಜ್ಯವನ್ನೇ ಸೃಷ್ಟಿಸಿಕೊಳ್ಳುತ್ತಾನೆಆದರೆ ಕಾಲನದಿಯ ಸೆಳೆತಕ್ಕೆ ಸಿಕ್ಕಿ ಸವೆಯುತ್ತಿರುವ ಆಯುಸ್ಸನ್ನು ತಿಳಿಯುವುದಿಲ್ಲ.
ಸೂರ್ಯನಿಗೆ ಮೋಡ ಮುಚ್ಚಿದಾಗ ಸೂರ್ಯನ ಬೆಳಕಿನಲ್ಲಿ ಹೆಚ್ಚು ಕಡಿಮೆಗಳು ಕಾಣುವುದು ಮೋಡದ ಈಚೆ ಇರುವ ನಮ್ಮ ದೃಷ್ಟಿಯಲ್ಲಿ ಮಾತ್ರವಾಸ್ತವವಾಗಿ ಸೂರ್ಯನ ಬೆಳಕಿನಲ್ಲಿ ಯಾವ ಹೆಚ್ಚೂ ಇಲ್ಲ , ಕಡಿಮೆಯೂ ಇಲ್ಲ ಒಂದೇ ರೀತಿಯಾಗಿರುತ್ತದೆಹಾಗೆಯೇ ಬ್ರಹ್ಮನಲ್ಲಿ ಈಶ್ವರ ಜೀವ ಜಗತ್ತು ಎಂಬ ಭೇದಗಳೂ ಅವುಗಳಲ್ಲಿ ಚೈತನ್ಯದ ತಾರತಮ್ಯಗಳೂ ತೋರುವುದು ಮಾಯೆಯೊಳಗಿರುವ ಜೀವದ ದೃಷ್ಟಿಯಲ್ಲಿಅದನ್ನು ಮೀರಿರುವ ಬ್ರಹ್ಮನ ದೃಷ್ಟಿಯಲ್ಲಿ ಇವು ಯಾವುವೂ ಇಲ್ಲ.
ಶ್ಲೋಕ - 2 - ಸಂಸ್ಕೃತದಲ್ಲಿ

ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಮ್ |
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ    
ಕನ್ನಡದಲ್ಲಿ
ಬೀಜದೊಳು ಮೊಳಕೆಯಂದದಿ ಮೊದಲು ತೋರದೆ ಬಳಿಕ ತಾ
ದೇಶಕಾಲವನೊಂದಿ ಚಿತ್ರ ವೈಚಿತ್ರ್ಯಂಗಳಿಂದೆಸೆಯು-
ವೀಜಗವ ಮಾಯಾವಿಯೊಲು ಮಹಾಯೋಗಿಯೊಲು ತೋರುವ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ.

ವಿವರಣೆ :
ಬೀಜದೊಳಗಿನ ಮೊಳಕೆಯಂತೆ (ಸೃಷ್ಟಿಗೆಮೊದಲು ನಿರ್ವಿಕಲ್ಪವಾಗಿ ಭೇದರಹಿತವಾಗಿ ಇದ್ದುನಂತರ ಮಾಯೆಯಿಂದುಂಟಾದ ದೇಶ ಕಾಲಗಳ ಸಂಯೋಗದಿಂದ ನಾನಾವಿಧವಾಗಿ ಕಾಣುವ ಈ ಜಗತ್ತನ್ನು ಯಾರು ಮಾಯಾವಿಯಂತೆಯೋ ಅಥವಾ ಯೋಗೀಶ್ವರನಂತೆಯೋ ತನ್ನ ಇಚ್ಛಾಮಾತ್ರದಿಂದ ವಿಕಾಸಗೊಳಿಸುತ್ತಾನೋ ಆ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.
ವ್ಯಾಖ್ಯಾನ :
ಈ ಶ್ಲೋಕದಲ್ಲಿ ಸೃಷ್ಟಿಯ ವಿಚಾರ ನಡೆದಿದೆ.
ಮೊಳಕೆಯು ಕಾಣಿಸುವುದಕ್ಕೆ ಮೊದಲು ಅದು ಬೀಜದಲ್ಲಿಯೇಬೀಜವಾಗಿಯೇ ಇತ್ತುಬೀಜಕ್ಕಿಂತ ಬೇರೆಯಾಗಿ ಅಲ್ಲಆಮೇಲೆ ಮೊಳಕೆಯಾಗಿ ಕಾಣಿಸಿಕೊಂಡು ಕ್ರಮವಾಗಿ ಬೇರುಕಾಂಡಕೊಂಬೆಎಲೆಹೂವುಕಾಯಿ ಮುಂತಾದ ವೈವಿಧ್ಯದಿಂದ ಕೂಡಿದ ಮರವಾಯ್ತುಪ್ರಪಂಚ ಅಥವಾ ಜಗತ್ತೂ ಹೀಗೆಯೇಸೃಷ್ಟಿಗೆ ಮೊದಲು ಬ್ರಹ್ಮದಲ್ಲಿ ಬ್ರಹ್ಮವಾಗಿಯೇಏಕ ರೂಪವಾಗಿ ಇದ್ದು ನಂತರ ವಿಚಿತ್ರವಾದ ವೈವಿಧ್ಯದಿಂದ ಸಾಮ ಕೂಡಿರುವಂತೆ ಕಾಣುತ್ತಿದೆಇದು ಹೇಗಾಯಿತುಏಕಾಯಿತು ಎಂದು ನಿಷ್ಕರ್ಷೆಯಾಗಿ ಹೇಳುವುದು ಸಾಧ್ಯವಿಲ್ಲಅಂಥ ಸ್ಥಿತಿಯನ್ನೇ ಮಾಯೆಯಿಂದ ಆಗಿದೆ ಎಂದು ಹೇಳುವುದು.
ಇದಕ್ಕೆ ದೃಷ್ಟಾಂತ ಸಾಮಾನ್ಯವಾಗಿ ಎಲ್ಲರೂ ಕಂಡಿರುವ ಮಾಯಾವಿ ಅಥವಾ ಯಕ್ಷಿಣಿಕಾರನು ಮಾಡಿ ತೋರಿಸುವ ಸೃಷ್ಟಿಅಲ್ಲಿ ಉಂಟಾದಂತೆ ಕಾಣುವ ಯಾವ ಪದಾರ್ಥವೂ ವ್ಯಾವಹಾರಿಕ ಪ್ರಪಂಚದಲ್ಲಿ ನಿಜವಾಗಿಯೂ ಇಲ್ಲಆದರೂ ಉಂಟಾದಂತೆ ಕಂಡು ಕೆಲವು ಕಾಲ ಇದ್ದು ಆಮೇಲೆ ಇಲ್ಲವಾಗುತ್ತದೆನಿಜವಾಗಿ ಇರುವುದು ಆ ಮಾಯಾವಿ ಒಬ್ಬನೇಇನ್ನೊಂದು ದೃಷ್ಟಾಂತ ನಾವು ಪುರಾಣಗಳಲ್ಲಿ ಕೇಳಿರುವುದುವಿಶ್ವಾಮಿತ್ರರು ಬೇರೆ ಒಂದು ಸ್ವರ್ಗವನ್ನೂ ಆ ಸ್ವರ್ಗದ ನಿವಾಸಿಗಳನ್ನೂ ಸೃಷ್ಟಿಸಿದರು ಎಂಬುದು.
ಅಲ್ಲಿಯೂ ನಿಜವಾಗಿರುವುದು ಆ ಯೋಗೀಶ್ವರನೊಬ್ಬನೇಅವನ ಸೃಷ್ಟಿಯೆಲ್ಲವೂ ಅವನಿಂದಲೇ ಉಂಟಾಗಿ ಅವನಲ್ಲಿಯೇಅವನಾಗಿಯೇ ಇದ್ದು ಅಲ್ಲಿಯೇ ಅಡಗುತ್ತದೆ.
ಹೀಗೆ ಹೇಳಲಾಗದ ರೀತಿಯಲ್ಲಿ ಉಂಟಾಗಿ ಬೇರೆಯಾಗಿರುವಂತೆ ಕಾಣುತ್ತಿರುವ ಜಗತ್ತಿನ ತೋರಿಕೆಗೂ ಆಧಾರವಾಗಿರುವುದು ಆ ಪರತತ್ವವೇಅದೇ ಪರಾಶಿವಪರಮ ಗುರು ಶ್ರೀ ದಕ್ಷಿಣಾಮೂರ್ತಿ.
ಜಗತ್ತಿನ ಉಪಾದಾನಕಾರಣವು ಒಟ್ಟುಗೂಡಿದ ಪರಮಾಣುಗಳೇಆದ್ದರಿಂದಲೇ ಮಡಕೆಯು ಮಣ್ಣಿನಿಂದ ಕೂಡಿದ್ದಾಗಿ ಕಾಣುತ್ತದೆಯೇ ವಿನಾ ಈಶ್ವರನಿಂದ ಕೂಡಿದ್ದಾಗಿ ಕಾಣುವುದಿಲ್ಲ.
ರೂಪರಸ ಮುಂತಾದ ಗುಣಗಳು (ಕಾರಣರೂಪವಾದಪರಮಾಣುಗಳಲ್ಲಿಯೇ ಇದ್ದುಕೊಂಡು ಕಾರ್ಯ (ರೂಪವಾದ ಪ್ರಪಂಚದಲ್ಲಿ ಸಮಾನ ಜಾತೀಯವಾದ ಇತರ ಗುಣಗಳನ್ನು ಆರಂಭ ಮಾಡುತ್ತವೆ.
ಯಾವ ಕಾರಣವು ಕಾರ್ಯದಲ್ಲಿ ಹೊಂದಿಕೊಂಡೇ ಇರುತ್ತದೆಯೋ ಅಂಥಾ ಕಾರಣಕ್ಕೆ "ಸಮವಾಯಿಕಾರಣವೆಂದು ಹೆಸರುಯಾವುದು (ಕಾರ್ಯದಲ್ಲಿ ಹೊಂದಿಕೊಂಡಿರದೆಕಾರ್ಯದ ಉತ್ಪಾದನೆಗೆ (ಘಟಕ ಉತ್ಪಾದನೆಗೆಚಕ್ರಾದಿಗಳಂತೆ ಸಾಧನವಾಗಿರುತ್ತದೋ ಅಂಥಾ ಕಾರಣಕ್ಕೆ "ಅಸಮವಾಯಿಎಂದು ಹೆಸರು.
ಈಶ್ವರನು (ಜಗತ್ತಿನಲ್ಲಿರುವ ಎಲ್ಲವಸ್ತುಗಳಿಗೆ (ಘಟಕ್ಕೆಕುಂಬಾರನಂತೆ ನಿಮಿತ್ತ ಕಾರಣವುಯಾವ ಕಾರಣದಿಂದ ಯಾವ ಕಾರ್ಯವು ಹುಟ್ಟುತ್ತದೆಯೋ ಆ ಕಾರಣದಲ್ಲಿ ಆ ಕಾರ್ಯವು ನೆಲೆಸಿರುತ್ತದೆ.
ಮೊಳಕೆಯಿಂದ (ಪ್ರಾರಂಭವಾಗಿಹಣ್ಣಿನವರೆಗಿನ ಕಾರ್ಯಶ್ರೇಣಿಯಲ್ಲಿ (ಪ್ರತಿಯೊಂದು ಅವಸ್ಥೆಯಲ್ಲಿಯೂಇರುವಿಕೆಯನ್ನು (ಎಲ್ಲರೂಒಪ್ಪಿಕೊಳ್ಳಲೇ ಬೇಕು.(ಪರಮಾಣುಗಳ ಕೂಡುವಿಕೆಯೇ ಜಗತ್ತಿನ ಕಾರಣವಾದರೆಆ ಪರಮಾಣುಗಳು ಹೇಗೆ ಒಂದು ಆಲದ ಬೀಜಗಳಲ್ಲಿ ಸೇರಿಕೊಂಡವು? (ಪರಮಾಣುಗಳ ಒಟ್ಟುಗೂಡುವಿಕೆಗೆ ಕಾರಣವೇನು?).
ಕಾರ್ಯವು ಕಾರಣದೊಂದಿಗೆ ಸೇರಿಕೊಂಡಿರುವುದೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆಆದ್ದರಿಂದಲೇ ಇರುವಿಕೆಯೂ ಪ್ರಕಾಶವೂ ಎಲ್ಲದರಲ್ಲಿಯೂ (ಎಲ್ಲ ವಸ್ತುಗಳಲ್ಲಿಯೂಸೇರಿಕೊಂಡಿವೆ.
ಹೂವು ಹಣ್ಣಾದಾಗ ಮತ್ತು ಹಾಲು ಮೊಸರಾದಾಗ ಅದರಲ್ಲಿ ಕಾಣುವ ರೂಪ ರಸ ಮೊದಲಾದ ಗುಣಗಳು (ಮೊದಲಿನ ಸ್ಥಿತಿಯಲ್ಲಿದ್ದುವುಗಳಿಂದಬೇರೆಯಾಗಿರುವುದು ಕಾಣುತ್ತಿದೆ.
ಕಾರಣ ಕಾರ್ಯಗಳು ಅಂಶ ಆಂಶಿಗಳು ಜಾತಿವ್ಯಕ್ತಿಗಳು ಗುಣಗುಣಿಗಳು ಕ್ರಿಯಾ ಕ್ರಿಯಾವಂತನು ಇವೇ ಮುಂತಾದ ಎಲ್ಲವೂ (ಒಂದೇ ಆದ-ಅದ್ವಿತೀಯವಾದಪ್ರಕಾಶದಲ್ಲಿ (ಮಾಯೆಯಿಂದಾದಕಲ್ಪನೆಗಳು ಮಾತ್ರ.
ಜಗನ್ನಿರ್ಮಾಣ (ಕಾರ್ಯ)ದಲ್ಲಿ ಪರಮಾಣುಗಳಿಗಾಗಲೀ ಪ್ರಕೃತಿಗಾಗಲೀ ಚೈತನ್ಯವನ್ನು ಒಪ್ಪಿಕೊಂಡಿಲ್ಲಜ್ಞಾನಕರ್ಮಗಳೆರಡೂಚೇತನವನ್ನೇ ಆಶ್ರಯಿಸಿರುವುದು ಕಾಣುತ್ತಿದೆ.
ಜ್ಞಾನವು ಎರಡು ಬಗೆಯಾದದ್ದು. (ಇವುಗಳಲ್ಲಿನಿರ್ವಿಶೇಷಜ್ಞಾನವು ವಸ್ತುವನ್ನು ಮಾತ್ರ ಬೆಳಗುವುದುಸವಿಶೇಷಜ್ಞಾನವು  (ನಾಮರೂಪಾದಿಸಂಜ್ಞೆಯೇ ಮುಂತಾದುವು (ವಿಶೇಷಣ)ಗಳನ್ನು ಬೆಳಗುವುದರಿಂದ ಬಹುಬಗೆಯಾದದ್ದು.
ಕಲ್ಪನೆಸಂದೇಹಭ್ರಮೆಜ್ಞಾಪಕಹೋಲಿಕೆ ನಿಶ್ಚಯಊಹೆತಿಳಿಯದೆ ಇರುವುದು ಮತ್ತು ಹಾಗೆಯೇ ಇತರ ಎಲ್ಲಾ ಅನುಭವಾಗಳೂ ಸವಿಕಲ್ಪ ಜ್ಞಾನದ ವೈವಿಧ್ಯಕ್ಕೆ ಉದಾಹರಣೆಗಳು.
ಈಶ್ವರನ ಜಗತ್ಕರ್ತುತ್ವವೂ ಮಾಯೆಯಿಂದಾದದ್ದುಬಂಧಮೋಕ್ಷಉಪದೇಶವೇ ಮೊದಲಾದ ವ್ಯವಹಾರವೆಲ್ಲವೂ ಮಾಯೆಯಿಂದಲೇ.
ಸೃಷ್ಟಿಯೆಲ್ಲವೂ ವ್ಯವಹಾರದಲ್ಲಿ ಮಾತ್ರ ಕಾಣಿಸುವುದುಬಂಧ ಮೋಕ್ಷಾದಿಗಳ ಉಪದೇಶವೂ ಮಾಯೆಯಲ್ಲಿಯೇಮಾಯೆಯಿಂದಲೇಪಾರಮಾರ್ಥಿಕವಾಗಿ ಇರುವುದು ಬ್ರಹ್ಮ ಒಂದೇ ಎಂದು ಮೂಲದ ಅರ್ಥದ ಉಪಸಂಹಾರ.
ಹೀಗೆ ದಕ್ಷಿಣಾಮೂರ್ತಿಸ್ತೋತ್ರದ ಕೃತಿಯಲ್ಲಿ ಸಂಗ್ರಹವಾದ ಎರಡನೇ ಶ್ಲೋಕದ ವ್ಯಾಖ್ಯಾನವು ಸಂಪೂರ್ಣವಾಯಿತು.
ಶ್ಲೋಕ - 3 - ಸಂಸ್ಕೃತದಲ್ಲಿ

ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ |
ಯತ್ಸಾಕ್ಷಾತ್ ಕರುಣಾದ್ಭವೇನ್ನ ಪುನರಾವೃತ್ತಿರ್ಭವಾಂಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ || 

ಕನ್ನಡದಲ್ಲಿ
ಯಾರ ಪ್ರಕಾಶ ಸತ್ಯಗುಣದಿಂ ಮಿಥ್ಯೆಯನು ಬೆಳಗಿಪುದೋ
ತತ್ವಮಸಿವೇದ ವಾಕ್ಯದಿಂದಾಶ್ರಿತರ್ಗಾರರಿವ ನೆರೆವರೋ
ಯಾರ ಸಾಕ್ಷಾತ್ಕಾರ ಭವಸಾಗರವ ದಾಟಿಸುವುದೋ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ
ವಿವರಣೆ :
ಇರುವಿಕೆಯ ರೂಪವಾದ ಯಾರ ಅರಿವೇ ಇರುವಿಕೆಯಿಂದ ರಹಿತವಾದುದೆಂಬಂತಿರುವ ವಿಷಯವನ್ನು (ಪ್ರಪಂಚವನ್ನುಸೇರಿ (ಅದನ್ನುಪ್ರಕಾಶಗೊಳಿಸುತ್ತದೆಯೋಯಾರು ತನ್ನ ಭಕ್ತರಿಗೆ ನಿಜವಾಗಿಯೂ "ನೀನೇ ಅದು ಆಗಿದ್ದೀಯೆಎಂಬ ವೇದವಾಕ್ಯದಿಂದ (ತತ್ವವನ್ನುತಿಳಿಸುತ್ತಾನೋಯಾರ ಪ್ರತ್ಯಕ್ಷವಾದ ಅನುಭವದಿಂದ ಸಂಸಾರ ಸಾಗರದಲ್ಲಿ ತಿರುಗಿ ಬರೋಣವಾಗುವುದಿಲ್ಲವೋಆ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರ.
ವ್ಯಾಖ್ಯಾನ :
ಪರತತ್ವದ ಇರುವಿಕೆಯೂ ಅರಿವೂ (ಜ್ಞಾನವೂಒಂದೇ; "ಸದಾತ್ಮಕಂ ಸ್ಫುರಣಂ", ಇರುವಿಕೆಯ ರೂಪವಾದ ಬೆಳಕುಸತ್ ಚಿತ್ಅದೇ ವಿಷಯ (subject), ವಿಷಯಕ್ಕೆ (object ಗೆಇರುವಿಕೆ ಇದೆ ಎಂದು ಹೇಳಲೂ ಆಗುವುದಿಲ್ಲ.  ಇಲ್ಲವೆಂದು ಹೇಳಲೂ ಆಗುವುದಿಲ್ಲಅದು ಅಸತ್ಕಲ್ಪ (almost non-existant) ಇರುವಿಕೆಯಿಲ್ಲದ್ದು ಎಂಬಂತಿರುವುದುಇದನ್ನೇ ಮಿಥ್ಯಾಸದಸದನಿರ್ವಚನೀಯ ಎನ್ನುವುದುಇಂಥ ವಿಷಯವಾದ ಪ್ರಪಂಚದಲ್ಲಿ ಇರುವಿಕೆ ಅರಿವುಗಳು ಇರುವಂತೆ ತೋರುತ್ತಿರುವುದು ಪರತತ್ವದ ಇರವು ಅರಿವುಗಳ ಸಮಾವೇಶದಿಂದಸಂಪರ್ಕದಿಂದ.
ಇಂಥ ಅದ್ವಿತೀಯವಾದ ಪರತತ್ವದ ಅರಿವನ್ನುಅದನ್ನೇ ನಂಬಿಕೊಂಡಿರುವನಮಗೆ ಯಂತುಮಾಡುವುದೂ ಆ ಪರತತ್ವವೇ; "ತತ್ವಮಸಿಎಂಬ (ಛಾಂದೋಗ್ಯ ಉಪನಿಷತ್ತಿನವಾಕ್ಯದಿಂದ.
ಈ ಅದ್ವಿತೀಯವಾದ ಪರತತ್ವದ ಸಾಕ್ಷಾತ್ಕಾರವಾದ ಮೇಲೆ ಈ ಸಂಸಾರ ಸಾಗರದಲ್ಲಿ ಬಂದು ಹೋಗುವುದು ನಿಂತುಹೋಗುತ್ತದೆ.
ಈ ಪರತತ್ವವೇ ಶ್ರೀ ಗುರುಸ್ವರೂಪನಾದ ದಕ್ಷಿಣಾಮೂರ್ತಿ.
ಇರುವಿಕೆಯಿಂದ ರಹಿತವಾದವುಳಂತಿರುವಅಚೇತನಗಳಾದಅತ್ಯಲ್ಪ ಕಾಲದಲ್ಲಿ ನಾಶವನ್ನು ಹೊಂದುವ ಪದಾರ್ಥಗಳೆಲ್ಲವುಗಳಲ್ಲಿಯೂ (ಕಾಣುವ ) ಇರುವಿಕೆಯೂ ಪ್ರಕಾಶವೂ ನಾಶರಹಿತನಾದ ಈಶ್ವರನಿಂದಲೇ ಬಂದು (ಅವುಗಳಲ್ಲಿ ) ಸೇರಿವೆ.
ಈ ವಸ್ತುಗಳ ಇರುವಿಕೆಯು ಆತ್ಮದ ಇರುವಿಕೆಯೇಅದಕ್ಕಿಂತಲೂ ಬೇರೆಯಾದುದಲ್ಲಹಾಗೆಯೇ ಇವುಗಳ ಪ್ರಕಾಶವೂ ಆತ್ಮ ಪ್ರಕಾಶಕ್ಕಿಂತ ಬೇರೆಯಾದುದಲ್ಲ.
ಅನೇಕ ರೂಪವಾದ ಜ್ಞಾನಗಳೂ ಅವುಗಳ ವಿಷಯಗಳೂ ಕೂಡಾ ದಾರದಲ್ಲಿ ಮಣಿಗಳ ಸಮೂಹಗಳಂತೆ ಅಹಂಕಾರದಲ್ಲಿ ಸೇರಿಕೊಂಡಿವೆಅಹಂಕಾರವನ್ನೇ ಆಶ್ರಯಿಸಿಕೊಂಡಿವೆ.
ಈ ಜಗತ್ತು ಪ್ರಕಾಶದಿಂದ ಬೇರೆಯಲ್ಲದ್ದಾಗಿ ಎಲ್ಲರಿಗೂ ಕಾಣುತ್ತದೆಅಲೆಗಳು ನೊರೆ ಮುಂತಾದುವುಗಳಿಗೆ ನೀರಿನಿಂದ ಬೇರೆಯಾದ ಇರುವಿಕೆಯಿಲ್ಲ.
ವಸ್ತುಗಳನ್ನು ಪ್ರವೇಶಿಸಿದ ಯಾವ ಜ್ಞಾನವು "ತಿಳಿದುಕೊಂಡಿದ್ದೇನೆಎಂಬ ರೂಪದಲ್ಲಿ ಪ್ರವರ್ತಿಸುತ್ತಿದೆಯೋ ಅದೇ ಜ್ಞಾನವು "ನನ್ನಿಂದ ಇದು ತಿಳಿಯಲ್ಪಟ್ಟಿತು " ಎನ್ನುವ ರೂಪದಲ್ಲಿ ಅಂತರಾತ್ಮನಲ್ಲಿಯೇ ಕೊನೆಗಾಣುತ್ತದೆ.
ಕಾರ್ಯರೂಪವಾದ ಮಡಕೆಯೇ ಮುಂತಾದವು ಅವಕ್ಕೆ ಕಾರಣವಾದ ಮಣ್ಣೇ ಮುಂತಾದುವುಗಳಲ್ಲಿ ಹೇಗೆ ಕೊನೆಗಾಣುತ್ತವೆಯೋ ಅದೇ ರೀತಿಯಾಗಿ ಕಾರ್ಯವಾದ ಜಗತ್ತು ಪ್ರಕಾಶದಿಂದ ಬೇರೆಯಲ್ಲವಾದುದರಿಂದ ( ಪ್ರಕಾಶಸ್ವರೂಪನೇ ಆದಪರಮಾತ್ಮನಲ್ಲಿ ಕೊನೆಗಾಣುತ್ತದೆ.
ತನ್ನಲ್ಲಿಯೇ ಇರುವ ಕೊಳೆಯಿಂದ ಕನ್ನಡಿಯು ಮಾಲಿನ್ಯವನ್ನು ಹೊಂದುವಂತೆ ಜ್ಞಾನವು ಅಜ್ಞಾನದಿಂದ ಆವರಿಸಲ್ಪಟ್ಟಿದೆಅದರಿಂದ ಜೀವರು ಮೋಹವನ್ನು ಹೊಂದುತ್ತಾರೆ.
ಘಟಾಕಾಶ - ಮಹಾಕಾಶಗಳ ಭೇದವು ಹೇಗೆ ಘಟವೆಂಬ ಉಪಾಧಿಯಿಂದ ಕಲ್ಪಿತವಾದದ್ದೋ ಹಾಗೆಯೇ ಜೀವಾತ್ಮ - ಪರಮಾತ್ಮರ ಭೇದವು ದೇಹವೆಂಬ ಉಪಾಧಿಯಿಂದ ಕಲ್ಪಿತವಾದದ್ದು (ನಿತ್ಯವಲ್ಲ ).
ಉಪಾಧಿ ಎಂದರೆ ಒಂದು ಪದಾರ್ಥದ ಜೊತೆಯಲ್ಲಿ ಕೆಲವು ಕಾಲ ಮಾತ್ರ ಸೇರಿಕೊಂಡಿದ್ದು ಆ ಪದಾರ್ಥವನ್ನು ಗುರುತಿಸಲು ಉಪಯೋಗುವ ಧರ್ಮಪದಾರ್ಥವಿರುವಷ್ಟು ಕಾಲದಲ್ಲಿಯೂ ಇರುವುದಲ್ಲವಿಷೇಷಣವು ವಿಶೇಷ್ಯವಿರುವವರೆಗೂ ಅದರಲ್ಲಿ ಸೇರಿಕೊಂಡಿರುವ ಧರ್ಮ.
"ನೀನು ಅದೇ ಆಗಿದ್ದಿ " ಮುಂತಾದ ವಾಕ್ಯಗಳಿಂದ ಜೀವಾತ್ಮ ಪರಮಾತ್ಮರ ಅಭೇದವೇ ತೋರಿಸಲ್ಪಟ್ಟಿದೆ. "  ಮನುಷ್ಯನು ಅವನೇಎನ್ನುವ ವಾಕ್ಯದಿಂದ ತಿಳಿಸಲ್ಪಡುವ ಮನುಷ್ಯನೊಬ್ಬನೇ ಅಲ್ಲವೆ?
ಐಕ್ಯವೆಂದರೆ ಎರಡು ಕೂಡಿ ಒಂದಾಗಿರುವ ಸ್ಥಿತಿಯಲ್ಲಎರಡಿಲ್ಲದೆ ಒಂದೇ ಇರುವ ಸ್ಥಿತಿ.
ಜಗತ್ಕಾರಣವಾದ (ಪರಬ್ರಹ್ಮ ) ತತ್ವವು `ಅದು ´ ಎಂಬ ಮಾತಿನಿಂದ ಹೇಳಲ್ಪಟ್ಟಿದೆದೇಹವೇ ಮುಂತಾದ ಉಪಾಧಿಗಳಿಂದ ಕೂಡಿದ ಜೀವನು `ನೀನು ´ ಎನ್ನುವ ಪದದ ಅರ್ಥವಾಗಿದೆ.
ಆ ದೇಶಕಾಲಾವಸ್ಠೆ ಮುಂತಾದುವುಗಳಲ್ಲಿ ಕಂಡ ಮನುಷ್ಯನು "ಅವನು "  ಎನ್ನುವ ಮಾತಿನಿಂದ ಹೇಳಲ್ಪಟ್ಟಿದ್ದಾನೆಈ ದೇಶಕಾಲಾದಿಗಳಲ್ಲಿ ಕಾಣುವ ಅದೇ ಮನುಷ್ಯನೇ  "ಇವನು " ಎನ್ನುವ ಮಾತಿನಿಂದ ಕರೆಯಲ್ಪಟ್ಟಿದ್ದಾನೆ.
ಇವನು ಆ ಮನುಷ್ಯನೇ " ಎನ್ನುವ ವಾಕ್ಯವು ಹೇಗೆ          " ಇದು " " ಅದು " ಎನ್ನುವ ವಿಶೇಷಗಳ ಅರ್ಥವನ್ನು ಬಿಟ್ಟು ಒಬ್ಬನೇ ಆಗಿರುವ ಮನುಷ್ಯನನ್ನು ತಿಳಿಸುತ್ತದೆಯೋ ಹಾಗೆಯೇ  " ನೀನು ಅದೇ ಆಗಿದ್ದೀಎನ್ನುವ ವಾಕ್ಯವು ಕೂಡಾ ಒಳಗಿರುವುದು ಹೊರಗಿರುವುದು ಎನ್ನುವ ವಿಶೇಷಗಳನ್ನು ಬಿಟ್ಟು ಜೀವಾತ್ಮ ಪರಮಾತ್ಮರ ಅಭೇದವನ್ನೇ ತಿಳಿಸುತ್ತದೆ.
"ನೀನು ಅದೇ ಆಗಿದ್ದೀಯೆ " ಎನ್ನುವ ವಾಕ್ಯದಲ್ಲಿ  "ನೀನು"  "ಅದುಎನ್ನುವ ಪದಗಳ ಸಂಬಂಧವು ಸಾಮಾನಾಧಿಕರಣ್ಯವೆಂಬ ಹೆಸರುಳ್ಳದ್ದುಈ ಪದಗಳ ಅರ್ಥಗಳ ಸಂಬಂಧವು ವಿಶೇಷಣ - ವಿಶೇಷ್ಯಭಾವವು.
ಸೌದೆಕಬ್ಬಿಣ ಮುಂತಾದುವುಗಳಲ್ಲಿ ಬೆಂಕಿಯ ಸಂಬಂಧದಿಂದ ಬೆಂಕಿಯೇ ಎಂಬ ಜ್ಞಾನವು ಹೇಗೆ ಉಂಟಾಗುತ್ತದೋ ಹಾಗೆಯೇ ಶರೀರಇಂದ್ರಿಯಮನಸ್ಸು ,  ಪ್ರಾಣ ,  ಅಹಂಕಾರ ಇವುಗಳ ಸಮೂಹದಲ್ಲಿ ಆತ್ಮನ ಸಂಪರ್ಕದಿಂದ ( ಈ ಸಮೂಹವೇ ) ಆತ್ಮನೆಂಬ ಜ್ಞಾನವು ತಿಳುವಳಿಕೆಯಿಲ್ಲದವರಿಗೆ ಆಗುತ್ತದೆ.
ಆತ್ಮನು ಅನ್ನಮಯಕೋಶವಾದ ಶರೀರವನ್ನು ಪ್ರವೇಶಿಸಿ ದಪ್ಪಗಿರುವವನುಹುಡುಗ , ಸಣ್ಣಗಿರುವವನು , ಕಪ್ಪಗಿರುವವನು , ವರ್ಣಾಶ್ರಮವೇ ಮುಂತಾದ ಭೇದಗಳನ್ನುಳ್ಳವನುಎಂದು ( ಇವೇ ಮುಂತಾದ ರೂಪಗಳಿಂದ ) ಕಾಣುತ್ತಾನೆ.
(ಆತ್ಮನು ) ಪ್ರಾಣಮಯ ಕೋಶದಲ್ಲಿ (ಪ್ರವೇಶಿಸಿ ) ನಾನು ಬದುಕಿದ್ದೇನೆಂದೂ ಹಸಿವುಬಾಯಾರಿಕೆಗಳನ್ನುಳ್ಳವನೆಂದೂ ಮನೋಮಯಕೋಶದಲ್ಲಿ ಸಂದೇಹನಿಶ್ಚಯ ಮತ್ತು ಯೋಚನೆ ಈ ಅನುಭವಗಳನ್ನುಳ್ಳವನೆಂದೂ ಕಾಣುತ್ತಾನೆ.
ವಿಜ್ಞಾನಮಯಕೋಶವನ್ನು ಪ್ರವೇಶಿಸಿ ಆತ್ಮನು ನಾನು ತಿಳಿದುಕೊಳ್ಳುತ್ತೇನೆ ಎಂದು ಇರುತ್ತಾನೆಆನಂದಮಯಕೋಶವೆಂಬ ಅಹಂಕಾರದಲ್ಲಿ ಪ್ರವೇಶಿಸಿ ಮೊದಲು ಮಾಡಿದ ಪುಣ್ಯಗಳ ಮತ್ತು ಉಪಾಸನೆಗಳ ದೆಸೆಯಿಂದ ನಾನು ಸುಖವುಳ್ಳವನು ಎಂಬ ಅನುಭವವನ್ನು ಪಡೆಯುತ್ತಾನೆ.
ಸೂರ್ಯನು ಹೇಗೆ ನೀರನ್ನು ಪ್ರವೇಶಿಸಿ ಅನೇಕ ರೂಪವಾಗಿ ಹೊಳೆಯುತ್ತಾನೋ ಹಾಗೆಯೇ ಪರಮಾತ್ಮನು ಶರೀರಗಳನ್ನು ಪ್ರವೇಶಿಸಿ ಅನೇಕ ರೂಪವಾಗಿ ಬೆಳಗುತ್ತಾನೆ.
ಪರಮಾತ್ಮ-ಜೀವಾತ್ಮರಿಗೆ ಕಾರಣವಾಗಿರುವಿಕೆಯೂ ಕಾರ್ಯವಾಗಿರುವಿಕೆಯೂ ಚಂದ್ರನು ಕೊಂಬೆಯ ಮೇಲೆ ಇದ್ದಾನೆ ಎಂದಾಗ (ಕೊಂಬೆಯ ಮೇಲಿರುವುದು ಚಂದ್ರನಿಗೆ ) ಹೇಗೆ ಪ್ರಾಸಂಗಿಕವಾದ ಲಕ್ಷಣವೋ ಹಾಗೆ ತಟಸ್ಥ ಅಥವಾ ಪ್ರಾಸಂಗಿಕವಾದ ಲಕ್ಷಣವಾಗಿದೆಇದನ್ನು ಮುಖ್ಯ ಲಕ್ಷಣವೆಂದು ಗಣಿಸಿಯೇ ಇಲ್ಲ.
ಚಂದ್ರನ ನಿಜವಾದ ಲಕ್ಷಣವು ದೊಡ್ಡ ಪ್ರಕಾಶವು ಜೀವ ಪರಮಾತ್ಮರ ನಿಜವಾದ ಲಕ್ಷಣವು ಇರುವಿಕೆ ಜ್ಞಾನಆನಂದಇವುಗಳಾಗಿರುವುದೇ.
ಒಂದೇ ಲಕ್ಷಣವುಳ್ಳ ಜೀವ ಪರಮಾತ್ಮರ ಅಭೇದವನ್ನೇ ( ತತ್ವಮಸಿ ಎಂಬವಾಕ್ಯವು ಹೇಳುತ್ತದೆಆದ್ದರಿಂದ ಒಂದೇ ಪ್ರಕಾಶವಾಗಿರುವಿಕೆಯೇ ಎಲ್ಲರ ಆತ್ಮನಾಗಿರುವಿಕೆ ಎಂದು ಸಿದ್ಧವಾಯಿತು.
ಜೀವಈಶ್ವರರ ತಟಸ್ಥ ಲಕ್ಷಣಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸ್ವರೂಪ ಲಕ್ಷಣ ಒಂದೇಆದ್ದರಿಂದ ಅವೆರಡೂ ಬೇರೆ ಬೇರೆಯಲ್ಲಒಂದೇ.
ದೇವತೆಗಳು ತಿರ್ಯಗ್ಜಂತುಗಳು ಮನುಷ್ಯರು ಇವರುಗಳ ಇರುವಿಕೆಯು ಪ್ರಕಾಶದಿಂದ ಬೇರೆಯಲ್ಲಜೀವನೂ ಕೂಡ ಪ್ರಕಾಶದಿಂದ ಬೇರೆಯಲ್ಲದವನಾದ್ದರಿಂದ ಸರ್ವಾತ್ಮನೆಂದು ಕರೆಯಲ್ಪಡುತ್ತಾನೆಹೀಗೆ ಆತ್ಮನು ಪ್ರಕಾಶರೂಪನೆಂಬ ತಿಳುವಳಿಕೆಯು ಸ್ಠಿರವಾದಾಗ ಹಿಂತಿರುಗಿ ಬರುವದಿಲ್ಲದ ಕೈವಲ್ಯವೆಂಬ ಸ್ಠಿತಿಯನ್ನು ಪಡೆಯುತ್ತಾನೆ.
ತನ್ನ ಪ್ರಯತ್ನವಿಲ್ಲದೆಯೇ ಯಾವುದೋ ಕಾರಣದಿಂದಲಾದರೂ ತಾನು ಎಲ್ಲರ ಆತ್ಮನು ಎಂಬ ಜ್ಞಾನದಲ್ಲಿ ಒಂದು ಸಲ ಪ್ರಸಕ್ತಿಯನ್ನು ಹೊಂದಿದವನೂ ಕೂಡಾ ಎಲ್ಲ ಪಾಪಗಳಿಂದಲೂ ಬಿಡಲ್ಪಟ್ಟವನಾಗಿ ಶಿವಲೋಕದಲ್ಲಿ ಪೂಜೆಯನ್ನು ಪಡೆಯುತ್ತಾನೆ.
ಯಾವ ಮಹಾತ್ಮನಿಗೆ ತಾನೇ ಎಲ್ಲರ ಆತ್ಮನೆಂಬ ಜ್ಞಾನವು ನಿಶ್ಚಲವಾಗಿದೆಯೋ ಅವನು ಸಂಸಾರವನ್ನು ದಾಟಿಸುವ ಪರಮೇಶ್ವರನೇ ಸರಿ.
ಶ್ಲೋಕ - 4 - ಸಂಸ್ಕೃತದಲ್ಲಿ
ನಾನಾ ಛಿದ್ರಘಟೋದರಸ್ಥಿತಮಹಾದೀಪಪ್ರಭಾಭಾಸ್ವರಂ
ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪಂದತೇ |
ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ

ಕನ್ನಡದಲ್ಲಿ
ಹಲವು ರಂಧ್ರಗಳುಳ್ಳ ಘಟದಲಿರಿಸಿದ ಸುದೀಪದ ತೆರೆದೊ-
ಳಾರರಿವು ನಯನಾದಿ ಇಂದ್ರಿಯಗಳಿಂಸ್ಪಂದಿಸುತಲಿಹುದೊ
ಆರ ಪ್ರಕಾಶದಿಂ ಜಗವೆಲ್ಲ ನಾನರಿವೆನೆಂದೊ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ವಿವರಣೆ:
ಯಾರ ಜ್ಞಾನವು ಅನೇಕ ವಿಧವಾದ ರಂಧ್ರಗಳುಳ್ಳ ಮಡಕೆಯೊಳಗಿರುವ ದೊಡ್ಡ ದೀಪದ ಬೆಳಕಿನಂತೆ ಪ್ರಕಾಶಿಸುತ್ತಾ ಕಣ್ಣು ಮೊದಲಾದ ಇಂದ್ರಿಯಗಳ ಮಾರ್ಗವಾಗಿ ಹೊರಚಿಮ್ಮುತ್ತದೆಯೋ, ಪ್ರಕಾಶಮಾನನಾಗಿರುವ ಅವನನ್ನೇ ಅನುಸರಿಸಿ ಈ ಎಲ್ಲ ಜಗತ್ತೂ "ನಾನು ತಿಳಿದುಕೊಳ್ಳುತ್ತೇನೆ " ಎಂದು ಪ್ರಕಾಶಿಸುತ್ತಿದೆಯೋ, ಅಂಥಾ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.

ವ್ಯಾಖ್ಯಾನ:
ಹಿಂದಿನ ಮೂರನೇ ಶ್ಲೋಕದಲ್ಲಿ ಇರುವಿಕೆಯೂ ಅರಿವೂ ನಿತ್ಯನಾದ ಈಶ್ವರನಿಂದ ಎಲ್ಲ ಪದಾರ್ಥಗಳಲ್ಲಿ ಸೇರಿವೆ ಎಂಬುದರ ಬಗೆಗೆ ಈ ಶ್ಲೋಕದಲ್ಲಿ ವಿವರಿಸಲಾಗಿದೆ.
ಈಶ್ವರ ಜಗತ್ತುಗಳಿಂದ ಅಭಿನ್ನನಾದರೂ ಬೇರೆಯಾಗಿ ತೋರುತ್ತಿರುವ ಜೀವವೇ ಘಟದೊಳಗಿರುವ ದೊಡ್ಡ ದೀಪ. ಇವನನ್ನು ಬೇರ್ಪಡಿಸಿರುವ ಘಟವೇ ಅವಿದ್ಯೆ. ಘಟದ ನಾನಾಕಾರದ ಛಿದ್ರಗಳೇ ಬೇರೆ ಬೇರೆ ವಿಷಯಗಳನ್ನು ಗ್ರಹಿಸುವ ಚಕ್ಷುರಾದಿ ಇಂದ್ರಿಯಗಳು. ಚೈತನ್ಯದ ಬೆಳಕಿನಿಂದ ಕೂಡಿದ ಅಂತಃಕರಣದ ವೃತ್ತಿಯೇ ಈ ಇಂದ್ರಿಯಗಳ ಮೂಲಕ ಹೊರಹೊಮ್ಮಿ ಅಲ್ಲಿರುವ ಚೈತನ್ಯ ಸ್ವರೂಪವೇ ಆದ ವಿಷಯಗಳ ಸಂಪರ್ಕದಿಂದ ಅವುಗಳ ಆಕಾರವನ್ನೇ ಪಡೆದ ಚೈತನ್ಯವನ್ನು ಒಳಗೊಂಡು ಹಿಂತಿರುಗಿದೆ. ಹಿಂತಿರುಗಿದ ಚೈತನ್ಯದ ಸಂಪರ್ಕದಿಂದ ಅಂತಃಕರಣಕ್ಕೂ ಅದೇ ಆಕಾರ ಉಂಟಾಗುತ್ತದೆ. ಇದನ್ನೇ ವಿಷಯದ ಜ್ಞಾನವಾಗುವುದು ಎನ್ನುವುದು. ಈ ಜ್ಞಾನವು "ಇದು ಘಟವು" ಎನ್ನುವಂಥ ರೂಪದ್ದು. ಇದಾದ ಉತ್ತರ ಕ್ಷಣದಲ್ಲೇ " ಈ ಘಟವನ್ನು ನಾನು ಬಲ್ಲೆ" ಎಂಬ ಸಂಬಂಧ ರೂಪದ, ಅಹಂಕಾರದಿಂದ ಕೂಡಿದ ಜ್ಞಾನ ಉಂಟಾಗುತ್ತದೆ. ಅಹಂಕಾರವೂ ಅಂತಃಕರಣದ ವೃತ್ತಿಗಳಲ್ಲಿ ಒಂದು. ಇದನ್ನು ನೋಡುತ್ತಾ, ಹಾಗೆ ನೋಡುವುದರಿಂದ ಯಾವ ಮಾರ್ಪಾಡನ್ನೂ ಪಡೆಯದೇ ಇರುವ ತತ್ವವೇ ಸಾಕ್ಷಿ. ಅದೇ ಪರತತ್ವ, ಪರಮಗುರು, ಶ್ರಿ ದಕ್ಷಿಣಾಮೂರ್ತಿ.
ಮಡಕೆ ಬಟ್ಟೆ ಮುಂತಾದ ವಸ್ತುಗಳು ತಮ್ಮ ಶಕ್ತಿಯಿಂದಲೇ ಇರುವುದಾಗಿ ಕಾಣುವುದೇ ವಿನಹ ಈಶ್ವರನ ಪ್ರವೇಶದಿಂದ (ಇರುವುದಾಗಿ) ಕಾಣುವುದಿಲ್ಲ ಎಂಬ ಆಕ್ಷೇಪಣೆ.
ನಾನು ಎಂಬ ಜ್ಞಾತೃವು ತಿಳಿದುಕೊಳ್ಳುತ್ತೇನೆ ಎಂದು ಪ್ರಕಾಶವಾಗದಿದ್ದರೆ ಯಾರಿಗೆ ಯಾವುದು ಕಂಡೀತು? (ಆಗ) ಪ್ರಪಂಚವು ನಿದ್ರೆಯಲ್ಲಿರುವವನಂತೆ ಆದೀತು.
ಉತ್ಪತ್ತಿಗೆ ಮುಂಚೆಯೂ (ನಾಶವಾದ ) ಆಮೇಲೆಯೂ ಇಲ್ಲದಿರುವ (ವಸ್ತುಗಳ ) ಇರುವಿಕೆಯು (ಅವು ) ಇರುವ ಕಾಲದಲ್ಲಿ ಕೂಡ ತಮ್ಮ ಶಕ್ತಿಯಿಂದಲೇ ಆಗಲಾರದು. ಆದ್ದರಿಂದ ಇರುವಿಕೆಯು ಮುಂಚೆ ಆಮೇಲೆ ಎನ್ನುವುದಿಲ್ಲದ (ಉತ್ಪತ್ತಿನಾಶರಹಿತನಾದ, ನಿತ್ಯನಾದ) ಈಶ್ವರನಲ್ಲಿಯೇ ಎಂಬುದು ಸ್ಥಿರವಾಯಿತು.
ಜಗತ್ತು ಸೃಷ್ಟಿಗೆ ಮುಂಚೆಯೂ ಜಗತ್ತಾಗಿ ಇರಲಿಲ್ಲ; ಲಯವಾದ ಮೇಲೂ ಇರುವುದಿಲ್ಲ. ಆದ್ದರಿಂದ ಇರುವಂತೆ ತೋರುವ ಈಗಲೂ ಜಗತ್ತು ಇಲ್ಲದ್ದೇ. ಈಶ್ವರನು ಜಗತ್ತಿಗೆ ಮುಂಚೆಯೂ ಇದ್ದ; ಈಗಲೂ ಇದ್ದಾನೆ ; ಜಗತ್ತಿನ ಲಯವಾದ ಮೇಲೂ ಇರುತ್ತಾನೆ. ಯಾವಾಗಲೂ ಇರುವವನು; ನಿತ್ಯ. ಅಂಥ ಈಶ್ವರನಲ್ಲಿಯೇ ಇರುವ ಇರುವಿಕೆಯು ಅವನ ಸಂಪರ್ಕದಿಂದ ಜಗತ್ತಿನಲ್ಲಿಯೂ ಇರುವಂತೆ ತೋರುತ್ತಿದೆ.
ಈಶ್ವರನ ಸಂಬಂಧವಿಲ್ಲದೆ ಅಚೇತನವಾದ ವಸ್ತುಗಳು ತಾವಾಗಿಯೇ ಪ್ರಕಾಶಿಸುವ ಶಕ್ತಿಯನ್ನು ಪಡೆದಿದ್ದರೆ ಎಲ್ಲ (ಚೇತನ ) ರಿಗೂ ಎಲ್ಲವೂ ಕಾಣಬೇಕಾಗುವುದು ಅಥವಾ ಯಾವುದೂ ಕಾಣದೆಯೇ ಇರಬೇಕಾಗುವುದು.
ಹಾಗಾದರೆ ಜಗತ್ತೆಲ್ಲವೂ ಒಂದೇ ರೀತಿಯಾಗಿ ಎಲ್ಲವನ್ನೂ ತಿಳಿದದ್ದಾಗಲಿ ಯಾವುದನ್ನೂ ತಿಳಿಯದಿರುವುದಾಗಲೀ ಆಗಬೇಕಾದೀತು.
ತಾನಾಗಿಯೇ ಪ್ರಕಾಶಿಸುವ ಶಕ್ತಿಯು ಜಡಚೇತನ ವಸ್ತುಗಳಿಗೆ ಸಮಾನವಾಗಿದ್ದರೆ ತಿಳುವಳಿಕೆಗೆ ವಿಷಯವಾಗಿರುವಿಕೆಯೂ ( ಜ್ಞೇಯತ್ವ ) ಮತ್ತು ತಿಳುವಳಿಕೆಯನ್ನು ಹೊಂದಿರುವಿಕೆಯೂ (ಜ್ಞಾತೃತ್ವ ) ಪರಸ್ಪರವಾಗಿ ಸಮಾನವಾಗಿರಬೇಕು ( ಎಂದರೆ ಜ್ಞಾತೃಜ್ಞೇಯ ಎಂಬ ಭೇದವಿಲ್ಲದಂತಾದೀತು) ಮತ್ತು ಇಂದ್ರಿಯಗಳ ವ್ಯಾಪಾರದಲ್ಲಿ ನಿಯಮವಿಲ್ಲದಾಗಿ ರುಚಿಯೇ ಮುಂತಾದ ಗುಣಗಳು ಕಣ್ಣಿನಿಂದ ( ಎಂದರೆ ಅದನ್ನು ಗ್ರಹಿಸಲಾರದ ಇಂದ್ರಿಯದಿಂದ ) ತಿಳಿಯಲ್ಪಡತಕ್ಕವುಗಳಾದಾವು.
ಕನ್ನಡಿಯ ಕೊಳೆಯಾದ ಮತ್ತು ಕೊಳೆಯಿಲ್ಲದ ಹಿಂದು ಮುಂದು ಭಾಗಗಳಂತಿರುವ ಅಂತಃಕರಣದ ಭಾಗಗಳಾದ ಕ್ರಿಯಾಶಕ್ತಿ ಜ್ಞಾನ ಶಕ್ತಿಗಳಲ್ಲಿ ಪ್ರತಿಬಿಂಬಿತವಾಗಿ ಪ್ರಕಾಶಿಸುವ ಪರಮಾತ್ಮನನ್ನೇ "ಮಾಡುವವನು " " ತಿಳಿಯುವವನು " ಎಂದು ತಿಳಿಯುತ್ತೇವೆ.
ಸತ್ವಗುಣವು ಹೆಚ್ಚಾಗಿರುವುದರಿಂದ ಬುದ್ದಿಯು ಸ್ವಚ್ಚವಾದ ಕನ್ನಡಿಯಂತಿದ್ದು ಆತ್ಮ ಪ್ರತಿಬಿಂಬದ ಪ್ರಭಾವದಿಂದ ವಿಷಯಗಳ ಪ್ರತಿಬಿಂಬವನ್ನೂ ಹಿಡಿಯುತ್ತದೆ.
ಎಲ್ಲ ಇಂದ್ರಿಯಗಳಿಗೂ ಅಂತಃಕರಣದ ಸಂಬಂಧದಿಂದ ವಿಷಯ ಗ್ರಾಹಕ ಶಕ್ತಿಯು ನಿಯತವಾಗಿ ಉಂಟಾಗಿದೆ. ಇವು ಚಕ್ರದ ಕುಂಭದಿಂದ ಹೊರ ಅಂಚಿಗೆ ಸೇರಿಸಲ್ಪಟ್ಟ ಅರೆಗಳಂತೆ ಇವೆ.
ಬಲೆಯಲ್ಲಿ ದಾರಗಳು ಕೂಡಿರುವಂತೆ ಅಂತಃಕರಣದಲ್ಲಿ ನಾಡಿಗಳು ಸೇರಿಕೊಂಡಿವೆ. ( ಇಂದ್ರಿಯಗಳು ಪ್ರವರ್ತಿಸುವ ) ಅಂಗಗಳಲ್ಲಿ ಕೊನೆಗಾಣುವ ಆ ನಾಡಿಗಳ ಮಾರ್ಗವಾಗಿ ಎಲ್ಲ ಇಂದ್ರಿಯಗಳೂ ತಮ್ಮ ತಮ್ಮ ವಿಷಯಗಳ ಕಡೆಗೆ ಕಿಡಿಗಳಂತೆ ಪ್ರಸರಿಸುತ್ತವೆ.
ಕುಂಡಲಿನೀ ಎಂಬ ಹೆಸರುಳ್ಳ ಪರಾಶಕ್ತಿಯ ಸ್ಥಾನವಾದ (ಆ ಮೂಲಾಧಾರವು ) ಕನ್ಯಕಾಯೋನಿಯಂತೆ ಕೆಳಮುಖವಾದ ಮೊನೆಯುಳ್ಳ ತ್ರಿಕೋಣಾಕಾರವಾಗಿದೆ. ಆ ಕುಂಡಲಿನೀ ಶಕ್ತಿಯೇ ಪ್ರಾಣ, ಅಗ್ನಿ , ಬಿಂದು ನಾದಗಳ ಸೃಷ್ಟಿಕರ್ತ್ರಿಯಾದ ಸರಸ್ವತಿಯು.
ಸುಷುಮ್ನಾ ಎಂಬ ನಾಡಿಯು ಮೂಲಾಧಾರದ ಮೊನೆಯಿಂದ ಬ್ರಹ್ಮರಂಧ್ರಕ್ಕೆ ಹೋಗುತ್ತದೆ. ಅದು ಬುಡದಲ್ಲಿ ಅರ್ಧವಾಗಿ ಸೀಳಿದ ಬಿದಿರಿನಂತೆ ಇದೆ ಮತ್ತು ಆರು ಆಧಾರಗಳೆಂಬ ಪದ್ಮಗಳಿಂದ ಕೂಡಿದೆ.
ಆ ತ್ರಿಕೋಣದ ಮಗ್ಗುಲಿನ ಕೊನೆಗಳಿಂದ ಪ್ರಾರಂಭವಾಗಿ ಇಡಾ ಪಿಂಗಳ ಎಂಬ ಎರಡು ನಾಡಿಗಳಿವೆ. ಈ ಮೂರಕ್ಕೆ ನಾಡೀ ಚಕ್ರವೆಂದು ಹೆಸರು. ಅದರಿಂದ ನಾಡಿಗಳು ಹೊರಟಿವೆ.
ಗಾಂಧಾರಿ, ಹಸ್ತಿಜಿಹ್ವಾ ಎಂಬ ನಾಡಿಗಳು ಕಣ್ಣುಗಳಿಗೂ ನಾಡೀ ಚಕ್ರದಿಂದ ಹೊರಡುವ ಬೇರೆ ಎರಡು ನಾಡಿಗಳು ಮೂಗುಗಳಿಗೂ ಹೋಗುತ್ತವೆ. ನಾಭಿ ಪ್ರದೇಶದಲ್ಲಿರುವ ಕೋಳಿಯ ಮೊಟ್ಟೆಯ ಆಕಾರದ (ನಾಡಿಗಳ ಸಮೂಹಕ್ಕೆ) ನಾಡೀಚಕ್ರವೆಂದು ಹೆಸರು. ಅದರಿಂದ ಎಲ್ಲ ನಾಡಿಗಳೂ ಹೊರಡುತ್ತವೆ. ಪೂಷಾ ಅಲಂಬುಷಾ ಎಂಬ ನಾಡಿಗಳು ಕಿವಿಗಳಿಗೆ ಹೋಗುತ್ತವೆ. ಶುಕ್ಲಾ ಎಂಬ ನಾಡಿಯು ಅಲ್ಲಿಂದ ಹುಬ್ಬುಗಳ ಮಧ್ಯಪ್ರದೇಶಕ್ಕೆ ಹೋಗುತ್ತದೆ. ಸರಸ್ವತೀ ಎಂಬ ನಾಡಿಯು ನಾಲಿಗೆಗೆ ಹೋಗಿ ಮಾತಿನ ಪ್ರಸಾರವನ್ನು ಮಾಡುತ್ತದೆ. ವಿಶ್ವೋದರೀ ಎಂಬ ನಾಡಿಯು ನಾಲ್ಕು ವಿಧವಾದ ಅನ್ನವನ್ನು ತಿನ್ನುತ್ತದೆ. ಕತ್ತಿನಲ್ಲಿಯ ಪಯಸ್ವಿನೀ ಎಂಬ ನಾಡಿಯು ನೀರು ಕುಡಿಯುವುದನ್ನೂ ಸೀನುವುದನ್ನೂ ಮಾಡುತ್ತದೆ. ನಾಡೀ ಚಕ್ರದಿಂದ ಮೂರು ನಾಡಿಗಳು ಕೆಳಕ್ಕೆ ಹೊರಟಿವೆ. ಇವುಗಳಲ್ಲಿ ರಾಕಾ ಎಂಬುದು ರೇತಸ್ಸನ್ನೂ, ಸಿನೀವಾಲೀ ಎಂಬುದು ಮೂತ್ರವನ್ನೂ ಕುಹೂ ಎಂಬುದು ಮಲವನ್ನೂ ದೇಹದಿಂದ ಹೊರಗೆ ಹಾಕುತ್ತವೆ. ಶಂಖಿನೀ ಎಂಬ ನಾಡಿಯು ತಿಂದ ಆಹಾರದ ರಸವನ್ನು ತೆಗೆದುಕೊಂಡು ನೆತ್ತಿಯಲ್ಲಿರುವ ಆಕಾಶಕ್ಕೆ ಹೋಗಿ ಅಲ್ಲಿ ಅಮೃತವನ್ನು ಸೇರಿಸುತ್ತದೆ.
ನಾಡಿಗಳು ನೂರಾ ಒಂದಿವೆ. ಇವುಗಳಲ್ಲಿ ಒಂದು ( ಸುಷುಮ್ನಾ ನಾಡಿಯು) ಬ್ರಹ್ಮ ರಂಧ್ರಕ್ಕೆ ಹೋಗುತ್ತದೆ. ಅದರಿಂದ ಮೇಲಕ್ಕೆ ಹೋದವನು ಮುಕ್ತನಾಗುವನೆಂದು ವೇದಾಂತ ಮತವು.
ಯಾವಾಗ ಬುದ್ಧಿಯಲ್ಲಿ ಸೇರಿಕೊಂಡಿರುವ (ಜನ್ಮಾತರದ ಕರ್ಮರೂಪವಾದ ) ಪುಣ್ಯ ಪಾಪಗಳಿಂದ ಪ್ರೇರಿಸಲ್ಪಟ್ಟ ಇಂದ್ರಿಯಗಳ ದ್ವಾರಾ ಶಬ್ದವೇ ಮುಂತಾದ ( ಬಾಹ್ಯ ) ವಿಷಯಗಳನ್ನನುಭವಿಸುತ್ತಾನೋ ಆಗ ಜಾಗ್ರದವಸ್ಥೆಯಾಗುತ್ತದೆ.
ಈ (ಬಾಹ್ಯ) ಇಂದ್ರಿಯಗಳು ಕೆಲಸ ಮಾಡದಿರುವಾಗ ಜಾಗ್ರದವಸ್ಥೆಯ ಸಂಸ್ಕಾರದಿಂದ ಉಂಟಾದ ಮಾನಸಿಕವಾದ ವಿಷಯಗಳನ್ನು ಜೀವನು ಅನುಭವಿಸುವ ಸ್ಥಿತಿಯು ಸ್ವಪ್ನಾವಸ್ಥೆಯು.
ಮನಸ್ಸು ಕೂಡಾ ಉಪರತವಾಗಿರುವ (ಎಂದರೆ ಕೆಲಸ ಮಾಡದಿರುವ) ಸ್ಥಿತಿಗೆ ಸುಷುಪ್ತಿ ಎಂದು ಹೆಸರು.
ಆ ಸುಷುಪ್ತಾವಸ್ತೆಯಲ್ಲಿ ಮಾಯೆಯಿಂದ ಮುಚ್ಚಲ್ಪಟ್ಟ ಜೀವನು ಇರುವಿಕೆಯೊಂದೇ ಆಗಿ ಕಾಣುತ್ತಾನೆ. ಮಾಯೆಯ ಮರೆಯಿಂದ ಮೋಹಕ್ಕೊಳಗಾದವನು, ಅಚೇತನನು, ತಿಳುವಳಿಕೆಯಿಲ್ಲದವನು ಇವೇ ಮೊದಲಾದ ರೀತಿಯಲ್ಲಿ ಕಾಣುತ್ತಾನೆ. " ಸುಖವಾಗಿ ನಿದ್ದೆಮಾಡಿದನು " ಎನ್ನುವ ತಿಳುವಳಿಕೆಯಿಂದ ಇರುವಿಕೆ, ತಿಳಿವಳಿಕೆ, ಸುಖ ಈ ರೂಪನಾಗಿದ್ದುಕೊಂಡು ಚೆನ್ನಾಗಿಯೇ ( ಸ್ಪಷ್ಟವಾಗಿಯೇ ) ಕಾಣುತ್ತಾನೆ.
ಪರಮಾತ್ಮನು ಜಗತ್ತನ್ನು ಪ್ರವೇಶಿಸಿ ಪ್ರಕಾಶಿಸುತ್ತಿರಲು ಸೂರ್ಯನೇ ಮುಂತಾದ (ಬೆಳಕಿಗೆ ಕಾರಣವೆನಿಸಿಕೊಳ್ಳುವ) ವರು ಕೂಡಾ ಪ್ರಕಾಶಿಸುತ್ತಾರೆ. ಹೀಗಿರುವಾಗ ಮಡಕೆಯೇ ಮುಂತಾದವುಗಳ ವಿಷಯವನ್ನು ಹೇಳತಕ್ಕದ್ದೇನು.
ಆದ್ದರಿಂದ ವಸ್ತುಗಳ ಇರುವಿಕೆಯೂ ಮತ್ತು ಪ್ರಕಾಶವೂ ಈಶ್ವರನನ್ನೇ ಆಶ್ರಯಿಸಿದೆ. ವೇದವಾಕ್ಯವು ಬ್ರಹ್ಮನು ಸತ್ಯವೂ ತಿಳಿವಳಿಕೆಯೂ ಮತ್ತು ಕೊನೆಯಿಲ್ಲದ್ದೂ ಎಂದು ಬೋಧಿಸುತ್ತದೆ.
ಜಾಗ್ರತ್ತು ಮತ್ತು ಸ್ವಪ್ನಾವಸ್ತೆಗಳಲ್ಲಿ ಕಾಣುವ ಜಗತ್ತೆಲ್ಲವೂ ಸುಳ್ಳು ಮತ್ತು ಕುರುಡನಂತೆ ಜ್ಞಾನರಹಿತವಾದದ್ದು. ಈಶ್ವರನು ಎಲ್ಲ ಜಂತುಗಳಲ್ಲಿಯೂ ನಾನು ಎಂಬ ರೂಪದಲ್ಲಿ ಪ್ರಕಾಶಿಸುತ್ತಾನೆ.
ಅಹಂಕಾರವು ಮೂರು ಬಗೆಯಾಗಿದೆ. ನಿರ್ವಿಕಲ್ಪ, ಶುದ್ಧ , ಮಲಿನವೆಂದು. ನಿರ್ವಿಕಲ್ಪವಾದ ಅಹಂಕಾರವು ಧೂಳು, ಕತ್ತಲೆ, ಹೊಗೆ, ಮೋಡ (ಮುಂತಾದ ಸ್ವರೂಪವನ್ನು ಮರೆಮಾಡುವ ಯಾವ ಉಪಾಧಿ) ಗಳಿಲ್ಲದ ಆಕಾಶದಂತೆ ಯಾವ ವಿಧವಾದ ಕಲ್ಪನೆಯೂ (ಭೇದವೂ) ಇಲ್ಲದ ಪರಬ್ರಹ್ಮವೇ ಆಗಿದೆ.
ಶುದ್ಧ ಅಹಂಕಾರವು ನಕ್ಷತ್ರಗಳಿಂದ ಆಕಾಶವು ಹೇಗೆ ಸಂಕುಚಿತವಾಗಿ ಕಾಣುತ್ತದೆಯೋ ಹಾಗೆ ವಿವೇಚನೆ ಮಾಡುವಾಗ ಶರೀರವೇ ಮೊದಲಾದ ಉಪಾಧಿಗಳು ತೊಲಗುವುದರಿಂದ ಸ್ವಲ್ಪಮಟ್ಟಿಗೆ ಕಾಣುತ್ತದೆ.
ಮಲಿನಾಹಂಕಾರವು ಶರೀರೇಂದ್ರಿಯಾದಿ ಉಪಾಧಿಗಳ ಸಂಬಂಧದಿಂದ ಕತ್ತಲೆ ಕವಿದ ಆಕಾಶವು ಅವಕಾಶ-ಸ್ಥಳವಿಲ್ಲದಂತೆ ಹೇಗೆ ಕಾಣುತ್ತದೆಯೋ ಹಾಗೆ ಕೊಳೆಯಿಂದ ಕೂಡಿದ್ದಾಗಿ ಕಾಣುತ್ತದೆ.
ಯಾವಾಗ ಜೀವಿಗೆ ನಾನೇ ಈಶ್ವರನೆಂಬ ಜ್ಞಾನವುಂಟಾಗುತ್ತದೆಯೋ ಆಗ ಜೀವನು ಎಲ್ಲವನ್ನೂ ಬಲ್ಲವನೂ, ಎಲ್ಲವನ್ನೂ ಮಾಡುವವನೂ ಆಗುತ್ತಾನೆ.
ಮಾಯೆಯಿಂದ ಹೆಚ್ಚಾಗಿ ಮೋಹವನ್ನು ಪಡೆದ ಈಶ್ವರನು ವಿದ್ಯೆಯಿಂದ ಪ್ರಕಾಶವನ್ನು ಹೊಂದುತ್ತಾನೆ. ನಿರ್ವಿಕಲ್ಪವಾದ ಅಹಂಕಾರದ ಧ್ಯಾನದಿಂದ ಆತ್ಮ (ತತ್ವ) ವು ಚೆನ್ನಾಗಿ ಪ್ರಕಾಶಿಸುತ್ತದೆ.
ಅವಿದ್ಯೆಯೆಂಬ ತೆರೆಯು ನಾಶವಾದಾಗ ದಕ್ಷಿಣಾಮೂರ್ತಿ ಸ್ವರೂಪನಾದ ಪರಮೇಶ್ವರನು ತಾನೇ ಪ್ರಕಾಶಿಸುತ್ತಾನೆ.

ಶ್ಲೋಕ - 5 -ಸಂಸ್ಕೃತದಲ್ಲಿ
ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀಬಾಲಾಂಧಜಡೋಪಮಾಸ್ತ್ವ ಹಮಿತಿ ಭ್ರಾಂತಾ ಭೃಶಂ ವಾದಿನಃ |
ಮಾಯಾಶಕ್ತಿವಿಲಾಸಕಲ್ಪಿತಮಹಾವ್ಯಾಮೋಹಸಂಹಾರಿಣೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||

ಕನ್ನಡದಲ್ಲಿ
ನಾ ದೇಹ ಪ್ರಾಣಮನ ನಾ ಬುದ್ಧಿ ನಾ ಶೂನ್ಯನೆಂಬುವರು
ಬಾಲರಿಗೆ ಅಂಧರಿಗೆ ಜಡರಿಂಗೆ ಸಮರವರು ಮರುಳರವರು
ಮಾಯೆಬಲದಾಟದಿಂ ಕಲ್ಪಿಸಿದ ವ್ಯಾಮೋಹ ಕಳೆಯುವ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ವಿವರಣೆ
ಹೆಂಗಸರು, ಮಕ್ಕಳು, ಕುರುಡರು, ತಿಳುವಳಿಕೆ ಇಲ್ಲದವರು ಇವರಿಗೆ ಹೋಲಿಸಬಹುದಾದ, ಹೆಚ್ಚಿನ ಅಜ್ಞಾನಕ್ಕೆ ಒಳಗಾಗಿರುವ (ಕೆಲವರು) ವಾದಿಗಳು ಆತ್ಮನು ದೇಹವೆಂದೂ, ಪ್ರಾಣವೆಂದೂ, ಇಂದ್ರಿಯಗಳೆಂದೂ, ಯಾವಾಗಲೂ ಚಲಿಸುತ್ತಿರುವ ಬುದ್ಧಿಯೆಂದೂ, ಶೂನ್ಯವೆಂದೂ ತಿಳಿಯುತ್ತಾರೆ. ಮಾಯಾಶಕ್ತಿಯ ಲೀಲೆಯಿಂದ ಹುಟ್ಟಿರುವ ದೊಡ್ಡ ಭ್ರಾಂತಿಯನ್ನು ನಾಶಮಾಡುವವನಾದ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.

ವ್ಯಾಖ್ಯಾನ:
"ನಾನು ನಿಂತಿದ್ದೇನೆ, ನಾನು ಚಲಿಸುತ್ತಿದ್ದೇನೆ" ಎನ್ನುವ ತಿಳಿವಳಿಕೆಗಳಲ್ಲಿ ನಿಂತಿರುವ ಚಲಿಸುತ್ತಿರುವ ದೇಹವನ್ನೇ ನಾನು ಎಂದುಕೊಂಡಿರುವುದು ಕಾಣುತ್ತಿದೆ. "ನನಗೆ ಹಸಿವಾಗಿದೆ. ನನಗೆ ಬಾಯರಿಕೆಯಾಗಿದೆ"ಎನ್ನುವ ಇಂಥ ಪ್ರತೀತಿಗಳಲ್ಲಿ ಹಸಿವು ಬಾಯಾರಿಕೆಗಳಿಗೆ ಆಶ್ರಯವಾದ ಪ್ರಾಣವನ್ನು "ನಾನು" ಎಂದುಕೊಂಡಿರುವುದೂ, ಹಾಗೆಯೇ "ನಾನು ನೋಡುತ್ತೇನೆ, ಕೇಳುತ್ತೇನೆ" ಎನ್ನುವಂಥ ಜ್ಞಾನಗಳಲ್ಲಿ ಇಂದ್ರಿಯಗಳನ್ನು ನಾನು ಎಂದುಕೊಂಡಿರುವುದೂ ಕಾಣುತ್ತಿದೆ. ಮತ್ತು "ನಾನು ಹೀಗೆ ಯೋಚಿಸುತ್ತೇನೆ; ನನಗೆ ಇಲ್ಲಿ ಸಂಶಯವಿದೆ; ಇದು ನನ್ನ ನಿಶ್ಚಯ" ಎನ್ನುವಂಥ ತಿಳುವಳಿಕೆಗಳಲ್ಲಿ ಈ ವೃತ್ತಿಗಳನ್ನು ಧರ್ಮವಾಗಿ ಉಳ್ಳ ಅಂತಃಕರಣವನ್ನು "ನಾನು" ಎನ್ನುವುದೂ ತಿಳಿದುಬರುತ್ತಿದೆ. ಈ ತಪ್ಪು ತಿಳುವಳಿಕೆಗಳು ವಿಚಾರವಿಲ್ಲದೆ ವ್ಯವಹರಿಸುತ್ತಿರುವ ನಮ್ಮೆಲ್ಲರಿಗೂ ಸಾಮಾನ್ಯವಾಗಿದೆ.
ಆದರೆ ವಿಚಾರಪೂರ್ವಕವಾಗಿ ಈ ಮೂರು ತಿಳುವಳಿಕೆಗಳನ್ನೂ ಸಮರ್ಥಿಸತೊಡಗಿರುವವರು ಚಾರ್ವಾಕರು. ಕ್ಷಣಿಕವಾದ ಬುದ್ಧಿಯೇ ಆತ್ಮವೆಂಬ ಮತವನ್ನು ಸಮರ್ಥಿಸುವವರು ಬೌದ್ಧರಲ್ಲಿ ವಿಜ್ಞಾನಿಗಳು. ಬೌದ್ಧರಲ್ಲೇ ಮಾಧ್ಯಮಿಕರೆಂಬ ಶೂನ್ಯವಾದಿಗಳ ಮತದಲ್ಲಿ ಆತ್ಮವೆಂಬ ಶಾಶ್ವತವಾದ ತತ್ವವೇ ಇಲ್ಲ; ಎಲ್ಲವೂ ಶೂನ್ಯವೇ.
ಈ ಶ್ಲೋಕದಲ್ಲಿ ಈ ಎಲ್ಲ ಮತಗಳನ್ನೂ ಅವುಗಳ ಖಂಡನೆಯನ್ನೂ ವೇದಾಂತದ ಸಿದ್ದಾಂತವನ್ನೂ ಸೂಚಿಸಿದೆ.
ಈ ಶ್ಲೋಕದ ವಾರ್ತಿಕಗಳಲ್ಲಿ, ಚಾರ್ವಾಕರ ಮೂರು ಮತಗಳ ಮತ್ತು ವಿಜ್ಞಾನವಾದದ ಸಮರ್ಥನೆಯನ್ನೂ, ಖಂಡನೆಯನ್ನೂ, ವೇದಾಂತದ ಸಿದ್ಧಾಂತವನ್ನೂ ಸ್ಥೂಲವಾಗಿ ಹೇಳಿದೆ.
ಇಂದ್ರಿಯ ಗೋಚರವಾದುದೊಂದೇ ಪ್ರಮಾಣವು. (ಪ್ರುಥ್ವಿ,ಆಪ್, ತೇಜಸ್ಸು, ವಾಯುಗಳೆಂಬ) ನಾಲ್ಕು ಭೂತಗಳು ಮಾತ್ರ ನಿಜವಾಗಿರುವುವು. ಸಾವಿಗಿಂತಲೂ ಬೇರೆ ಬಿಡುಗಡೆಯಿಲ್ಲ. ಜೀವನದಲ್ಲಿ ಗಳಿಸಬೇಕಾದದ್ದು ಕಾಮಾರ್ಥಗಳೆರಡೇ.
ಎಲ್ಲವನ್ನೂ ಮಾಡುವವನೆಂಬ ಈಶ್ವರನಿಲ್ಲವೇ ಇಲ್ಲ. ಬೇರೆ ಲೋಕದ ಮಾತು ಅರ್ಥವಿಲ್ಲದ್ದು.
ಆತ್ಮವು ದೇಹದಿಂದ ಬೇರೆಯಾಗಿರುವುದಾದರೆ ಮಡಕೆಯಂತೆ ಎದುರಿಗೆ ಕಾಣಲಿ. ಶರೀರವೇ ಕುಳ್ಳ, ಎತ್ತರವಾದವನು, ಯೌವನಸ್ಥನು, ಹುಡುಗನು ಎಂಬ (ರೂಪಾಂತರಗಳಲ್ಲಿ) ಕಾಣುತ್ತದೆ.
ಇರುವುದು, ಹುಟ್ಟುವುದು, ಬೆಳೆಯುವುದು, ಮುಪ್ಪು, ಸವೆದು ಸಣ್ಣಗಾಗುವುದು, ಸಾವು ಎಂಬ ಬಾಳಿನ ಆರು ಸ್ಥಿತ್ಯಂತರಗಳೂ ದೇಹವನ್ನೇ ಆಶ್ರಯಿಸಿವೆ.
ವರ್ಣಾಶ್ರಮದ ವಿಭಾಗವೂ ದೇಹಗಳಲ್ಲಿಯೇ ಸ್ಥಾಪಿತವಾಗಿದೆ. ಜಾತಕರ್ಮಾದಿಸಂಸ್ಕಾರಗಳನ್ನು ವಿಧಿಸಿರುವುದೂ ದೇಹಕ್ಕೇ.
ನೂರು ವರ್ಷ ಬದುಕು ಎಂಬ ಶುಭವಾದ ಹಾರೈಕೆಯನ್ನೂ ದೇಹದ ವಿಷಯದಲ್ಲಿಯೇ ಪ್ರಯೋಗಿಸುತ್ತಾರೆ. ಹೀಗೆಂದು ಸ್ವಲ್ಪ ಜ್ಞಾನವುಳ್ಳ ಚಾರ್ವಾಕನು ಪ್ರಪಂಚವನ್ನು ಮೊಸಗೊಳಿಸುತ್ತಾನೆ. ಇದು ದೇಹಾತ್ಮವಾದದ ಸಮರ್ಥನೆ.
ಕೆಲವರು ನಾನು ಕೇಳುತ್ತೇನೆ, ನೋಡುತ್ತೇನೆ, ವಾಸನೆ ನೋಡುತ್ತೇನೆ, ರುಚಿ ನೋಡುತ್ತೇನೆ ಎಂಬ (ಜ್ಞಾನವನ್ನಾಶ್ರಯಿಸಿ) ಇಂದ್ರಿಯಗಳೇ ಆತ್ಮನೆಂದು (ಪ್ರಾಣಾತ್ಮ ವಾದಿಗಳಿಗಿಂತಲೂ) ಹೆಚ್ಚಾಗಿ ತಿಳಿಯುತ್ತಾರೆ. ಇದು ಇಂದ್ರಿಯಾತ್ಮವಾದದ ಸಮರ್ಥನೆ.
ಬೇರೆ ಕೆಲವರು "ಅರಿಯುತ್ತೇನೆ" ಎಂಬ ಜ್ಞಾನದ ಬಲದಿಂದ ಆತ್ಮವು ಬುದ್ಧಿಯೆಂದು ತಿಳಿಯುತ್ತಾರೆ. ಇದು ಬುದ್ಧ್ಯಾತ್ಮವಾದದ ಸಮರ್ಥನೆ.
ಆತ್ಮನಿಂದ ವ್ಯತಿರಿಕ್ತವಾಗಿರುವ ಕಲ್ಲಿನಂತೆ ಅಚೇತನ ವಸ್ತುಗಳಾದ ದೇಹವೇ ಮುಂತಾದುವಕ್ಕೆ ಈಶ್ವರನ ಸಂಬಂಧವಿಲ್ಲದೆಯೇ "ನಾನು" ಎಂಬ ಜ್ಞಾನವು ಹೇಗೆ ಆದೀತು?
ದೇಹವು ಮಡಕೆಯಂತೆ ಇಂದ್ರಿಯಗೋಚರವಾಗಿರುವುದರಿಂದಲೂ, ಅಚೇತನ ವಸ್ತುಗಳಾಗಿರುವುದರಿಂದಲೂ, ರೂಪವೇ ಮೊದಲಾದ ಗುಣಗಳನ್ನು ಹೊಂದಿರುವುದರಿಂದಲೂ, ಭಾಗಗಳಿಂದ ಕೂಡಿರುವುದರಿಂದಲೂ, ಪಂಚಭೂತಗಳಿಂದ ಆಗಿರುವುದರಿಂದಲೂ ಆತ್ಮವಲ್ಲವು.
ಮೂರ್ಚ್ಛೆ, ನಿದ್ರೆ, (ಸುಷುಪ್ತಿ) ಸಾವುಗಳಲ್ಲಿ ಕೂಡಾ ದೇಹವು ಕಾಣುತ್ತದೆ. ಆ ಅವಸ್ಥೆಗಳಲ್ಲಿ ದೇಹದಿಂದ ಬೇರೆಯಾಗುವುದರಿಂದ ಆತ್ಮನು ಬೆಳಗುವುದಿಲ್ಲ.
ಸೂರ್ಯನು ಹೇಗೆ ಪ್ರಪಂಚದ ಎಲ್ಲ ಕೆಲಸಗಳಿಗೂ ಮೊದಲನೆಯ ಕಾರಣನೋ ಹಾಗೆಯೇ ಶರೀರವೇ ಮುಂತಾದುವುಗಳ ಎಲ್ಲ ಕೆಲಸಗಳಿಗೂ ಆತ್ಮನೇ ಮುಖ್ಯವಾದ ಕಾರಣನು.
ಇದು ನನ್ನ ಶರೀರವೆಂದು ಹೆಂಗಸರು, ಮಕ್ಕಳು, ಕುರುಡರು ಕೂಡಾ ತಿಳಿಯುತ್ತಾರೆ. ನಾನೇ ಈ ದೇಹವೆಂಬ ಜ್ಞಾನವು ಯಾರಿಗೂ ಯಾವಾಗಲೂ ಆಗುವುದಿಲ್ಲ. ಇದು ದೇಹ್ವತ್ಮವಾದದ ಖಂಡನೆ.
ದೀಪದಂತೆ ಜ್ಞಾನ ಸಾಧನವಾಗಿರುವುದರಿಂದ ಇಂದ್ರಿಯಗಳೂ ಕೂಡಾ ಆತ್ಮನಲ್ಲ.
ಕಿವಿಯು ವೀಣೆಯೇ ಮುಂತಾದ ವಾದ್ಯಗಳಂತೆ ಶಬ್ದವನ್ನು ಹಿಡಿಯುವುದಕ್ಕೆ ಸಾಧನವು. ಕಣ್ಣು ಸೂರ್ಯ, ಚಂದ್ರ, ಅಗ್ನಿಗಳೆಂಬ ಮೂರು ಬೆಳಕುಗಳಂತೆ ರೂಪವನ್ನು ಹಿಡಿಯುವುದಕ್ಕೆ ಸಾಧನವು.
ಮೂಗು ಹೂವಿನ ಸಂಪುಟದಂತೆ ವಾಸನೆಯನ್ನು ಹಿಡಿಯುವ ಸಾಧನವು. ನಾಲಗೆಯು ಮೊಸರು, ಜೇನುತುಪ್ಪ, ಮುಂತಾದವುಗಳಂತೆ ರುಚಿಯನ್ನು ಹಿಡಿಯುವ ಸಾಧನವು.
ಇಂದ್ರಿಯಗಳಿಲ್ಲದ ಜನರು "ನನಗೆ ಇಂದ್ರಿಯಗಳಿಲ್ಲ ನಾನು ಮೂಗ ಕುರುಡ (ಅಥವಾ) ಕಿವುಡ " ಎಂದು ಹೇಳುತ್ತಾರೆ. ಅಂಥವರು ಆತ್ಮವಿಲ್ಲದವರೇನು? ಇದು ಇಂದ್ರಿಯಾತ್ಮದ ಖಂಡನೆ.
ನಿದ್ರೆಯಲ್ಲಿ ತಿಳುವಳಿಕೆಯಿಲ್ಲದಿರುವುದರಿಂದ ಪ್ರಾಣವೂ ಕೂಡಾ ಆತ್ಮ (ವೆಂದು ಹೇಳಲು) ಆಗುವುದಿಲ್ಲ. ಎಚ್ಚರ ಮತ್ತು ಕನಸುಗಳಲ್ಲಿನ ಅನುಭವಗಳಿಂದಾದ ಶ್ರಮದಿಂದ ವಿಶ್ರಾಂತಿಯನ್ನು ಹೊಂದುವುದಕ್ಕೋಸ್ಕರ ಮನುಷ್ಯನು ನಿದ್ದೆಯನ್ನು ಹೊಂದಿರಲಾಗಿ ಮಿಕ್ಕಿರುವ ಕರ್ಮದ ಫಲವನ್ನನುಭವಿಸುವುದಕ್ಕಾಗಿ ದೇಹವನ್ನು ಕಾಪಾಡುವುದಕ್ಕೆ ಮಾತ್ರ ಪ್ರಾಣ ಸಂಚರಿಸುತ್ತದೆ.
ಸುಷುಪ್ತಾವಸ್ತೆಯಲ್ಲಿ ತಿಳುವಳಿಕೆಯಿಲ್ಲದಿರುವುದಕ್ಕೆ ಕಾರಣವು ಇಂದ್ರಿಯಗಳ ಕೆಲಸ ನಿಂತಿರುವುದು ಎಂದು ಹೇಳುವುದಾದರೆ, ಪ್ರಾಣವು ಕೆಲಸ ಮಾಡುತ್ತಿರುವಾಗ ಇಂದ್ರಿಯಗಳು ಕೆಲಸವನ್ನು ಹೇಗೆ ನಿಲ್ಲಿಸಬಲ್ಲವು? ರಾಜನು ಯುದ್ಧ ಮಾಡುತ್ತಿರುವಾಗ ಸೈನಿಕರು ಯುದ್ಧವನ್ನು ಬಿಟ್ಟು ನಿಲ್ಲುವುದಿಲ್ಲವಷ್ಟೆ. ಆದ್ದರಿಂದ ಪ್ರಾಣವು ಇಂದ್ರಿಯಗಳ ಒಡೆಯನೆಂದು ತಿಳಿಯಲು ಯೋಗ್ಯವಲ್ಲ.
ಮನಸ್ಸಿನ ಪ್ರೇರಕನಾದ ಆತ್ಮನು ಕೆಲಸವನ್ನು ನಿಲ್ಲಿಸಿದಾಗ ಎಲ್ಲ ಇಂದ್ರಿಯಗಳೂ ತಮ್ಮ ಕೆಲಸವನ್ನು ನಿಲ್ಲಿಸುತ್ತವೆ. ಆದ್ದರಿಂದ ಆತ್ಮನೇ ಇಂದ್ರಿಯಗಳ ಒಡೆಯನು. ಇದು ಪ್ರಾಣಾತ್ಮವಾದದ ಖಂಡನೆ.
ಬುದ್ಧಿಯಾದರೋ ಹೋಗುಬರೋಣಗಳಿಂದ ಕೂಡಿದ್ದೂ ಕ್ಷಣಕಾಲ ಮಾತ್ರ ಇರುವುದು ಎಂದು ತಿಳಿಯತಕ್ಕದ್ದು. ಅದು ಆತ್ಮನ ಪ್ರತಿಫಲನದಿಂದ ಬೆಳಕನ್ನು ಪಡೆದುಕೊಂಡು ಜಗತ್ತನ್ನು ಬೆಳಗುತ್ತದೆ.
ಬುದ್ಧಿಯು ಆತ್ಮನಲ್ಲಿ ಹುಟ್ಟಿ ಆತ್ಮನಲ್ಲಿಯೇ ಲಯ ಹೊಂದುತ್ತದೆ. ಹುಟ್ಟುವುದಕ್ಕೆ ಮುಂಚೆಯೂ ಲಯವಾದ ಅನಂತರವೂ ಇಲ್ಲದ ಬುದ್ಧಿಯು ತಾನಾಗಿಯೇ ಇದೆಯೆಂದು ಸಾಧಿಸಲಾಗುವುದಿಲ್ಲ.
ಮೊದಮೊದಲಿನ ಜ್ಞಾನದಿಂದ ಆಮೇಲಾಮೇಲಿನ ಜ್ಞಾನವು ಪರಂಪರೆಯಾಗಿ ಹುಟ್ಟುವುದಾದರೆ ಪ್ರತಿಕ್ಷಣದಲ್ಲಿಯೂ ಏಕಕಾಲದಲ್ಲಿ ಅನೇಕ ಬುದ್ಧಿಗಳನ್ನು ಪಡೆದಿರುವುದೆಂಬ ಅಸಂಭವವಾದ ಪ್ರಸಂಗ ಉಂಟಾದೀತು.
ಮೊದಲಿನ ಜ್ಞಾನವು ನಾಶವಾದ ನಂತರ ತಾನೇ ಇಲ್ಲದಿರುವುದರಿಂದ ಆಮೇಲಿನ ಬೇರೆಯ ಜ್ಞಾನವನ್ನು ಉಂಟುಮಾಡಲಾರದು. ಇದು ವಿಜ್ಞಾನ ವಾದದ ಖಂಡನೆ.
ದೇಹ ಇಂದ್ರಿಯ ಪ್ರಾಣ ಮನಸ್ಸು ಇವುಗಳ ಸಮೂಹವು ಆತ್ಮವೆಂದು ಹೇಳುವುದಾದರೆ ಇವುಗಳಲ್ಲಿ ಯಾವುದಾದರೂ ಒಂದು ಬೇರೆಯಾದಾಗ ಸಮೂಹವಿಲ್ಲದಿರುವುದರಿಂದ ತಿಳುವಳಿಕೆಯನ್ನು ಹೊಂದಿರೋಣವೂ ಇಲ್ಲದಂತಾಗಬೇಕು.
ಆತ್ಮವು ಅನೇಕ ಚೇತನಗಳಿಂದ ಕೂಡಿದ್ದೆಂದು ಹೇಳುವುದಾದರೆ, ಆ ಬೇರೆ ಬೇರೆ ಚೈತನ್ಯಗಳ ದೃಷ್ಟಿಯೂ ಗಮನವೂ ಬೇರೆ ಬೇರೆ ಕಡೆ ಇರುವುದರಿಂದ ಅಂಥಾ ಆತ್ಮವು ತತ್ ಕ್ಷಣವೇ ಒಡೆದುಹೋಗುವುದು ಅಥವಾ ಯಾವ ಕೆಲಸವೂ ಇಲ್ಲದೇ ಇರುವುದು.
ಆತ್ಮನು ದೇಹದೊಳಗೇ ಇರುವವನಾದರೂ ಸರ್ವವ್ಯಾಪಿಯೆಂದೇ ತಿಳಿಯತಕ್ಕವನು. ಇವನು ಅಣುವಿನ ಅಳತೆಯುಳ್ಳವನಾದರೆ ದೇಹವೆಲ್ಲವನ್ನೂ ವ್ಯಾಪಿಸಿರಲಾರನು. ಇದು ಸಂಘಾತಾತ್ಮವಾದದ ಖಂಡನೆ.
(ಆತ್ಮನು) ದೇಹದ ಅಳತೆಯುಳ್ಳವನೆಂದು ಹೇಳುವುದಾದರೆ ಹುಡುಗನಾಗಿದ್ದವನೇ (ಬೆಳೆದು ದೊಡ್ಡವನಾಗಿ) ಮುದುಕನಾಗುವುದು ಆಗಲಾರದು. ದೇಹದಂತೆ (ಆತ್ಮನಿಗೂ) (ಬೆಳವಣಿಗೆಯೇ ಮುಂತಾದ) ರೂಪಾಂತರಗಳುಂಟಾದರೆ ಅದರಂತೆಯೇ (ಅವನಿಗೂ) ನಾಶವುಂಟಾಗುವುದು.
ಕರ್ಮಗಳ ಪರಿಪಾಕದಿಂದ ಆತ್ಮನು ಹುಳು ಆನೆ ಮುಂತಾದ ದೇಹಗಳಲ್ಲಿ ಮಡಕೆ ಮುಂತಾದುವುಗಳಲ್ಲಿ ಆಕಾಶದಂತೆ, ಸರ್ವವ್ಯಾಪಿಯಾಗಿದ್ದುಕೊಂಡೇ ಪ್ರವೇಶ ಮಾಡುತ್ತಾನೆ.
ಪರಮಾಣುಪ್ರಮಾಣವಾದ ಮನಸ್ಸಿನಲ್ಲಿಯೂ ಆತ್ಮನು ಪ್ರವೇಶಿಸುತ್ತಾನೆ. ಕನಸಿನಲ್ಲಿ ಚರಾಚರ ಪ್ರಪಂಚವೆಲ್ಲವೂ ಆತ್ಮನಲ್ಲಿಯೇ ಇರುತ್ತದೆ. ಇದು ಆತ್ಮದ ಪರಿಮಾಣದ ಖಂಡನೆ ಹಾಗೂ ವ್ಯಾಪಕತ್ವದ ಸಾಧನೆ.
ಶರೀರವೇ ಮುಂತಾದವುಗಳ ವಿಷಯದಲ್ಲಿ "ನಾನು" ಎಂಬ ಜ್ಞಾನವು ಸಂಸಾರಕ್ಕೆ ಕಾರಣವಾಗಿದೆ. ಈಶ್ವರನು ಒಳಗೆ ಪ್ರವೇಶ ಮಾಡಿದ್ದಾನೆಂದು ಮೋಕ್ಷಸಾಧನೆಗಾಗಿ ವೇದವು ಉಪದೇಶ ಮಾಡುತ್ತದೆ.
ಸದಾಶಿವನೆಂಬ ಪರಬ್ರಹ್ಮತತ್ವವನ್ನು ಪ್ರತ್ಯಕ್ಷಮಾಡಿಕೊಂಡಾಗ ಮಾತ್ರ ಆಗಲೇ ಲಯವಾಗುವ ಈ ಮಹಾಮಾಯೆಯು ವಾದಿಸುವವರಿಗೆ ಕೂಡಾ ಭ್ರಾಂತಿಯನ್ನುಂಟುಮಾಡುತ್ತದೆ.
ಶರೀರ ಇಂದ್ರಿಯಪ್ರಾಣಗಳಿಲ್ಲದವನಾದ, ಅಳತೆಗೆ ಸಿಕ್ಕದ ಸ್ವರೂಪವುಳ್ಳ ಜ್ಞಾನಾನಂದ - ಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು ಯಾವುದರಲ್ಲಿ ಮನಸ್ಸು ಲಯವನ್ನು ಹೊಂದುತ್ತದೆಯೋ ಎಲ್ಲಿ ಸಮುದ್ರದಲ್ಲಿ ನದಿಗಳು ಹೇಗೋ ಹಾಗೆ ಎಲ್ಲ ಜಂತುಗಳೂ ಲೋಕಗಳೂ ತತ್ವಗಳೂ ಒಂದಾಗುತ್ತವೆಯೋ ಅಲ್ಲಿ ಒಂದಾಗಿರುವುದನ್ನೇ ಅನುಭವಿಸುತ್ತಿರುವವನಿಗೆ ದುಃಖವಾವುದು? ಭ್ರಾಂತಿಯಾವುದು?
ಶಬ್ದಾರ್ಥಗಳೆಂಬ ರೂಪಗಳನ್ನು ಹೊಂದಿರುವುದರಿಂದ ಭೇದವುಳ್ಳವನಂತೆ ಕಂಡರೂ ಈ ಆತ್ಮನು ದೇಹವೇ ಮುಂತಾದ ಉಪಾಧಿಗಳ ನಿರಾಕರಣದಿಂದ ಭೇದರಹಿತನಾಗಿಯೇ ಆಗುವನು( ಭೇದರಹಿತವಾದ ನಿಜಸ್ಥುತಿಯಲ್ಲಿ ಬೆಳಗುವನು). ಈ ಮೂಲಕ ಬ್ರಹ್ಮಾನುಭವದ ಫಲವನ್ನು ಪ್ರಸ್ತುತಪಡಿಸಲಾಯಿತು.
ಪಂಡಿತನು ಬ್ರಹ್ಮ ವಿಲ್ಲವೆಂದು ತಿಳಿದರೆ ತಾನೂ ಇಲ್ಲದವನೇ ಆಗುತ್ತಾನೆ, ಬ್ರಹ್ಮನಿರುವನೆಂದು ತಿಳಿದುಕೊಂಡರೆ ಆಗ ಇವನನ್ನೂ ಇರುವವನನ್ನಾಗಿ ತಿಳಿಯುತ್ತಾರೆ.

ಶ್ಲೋಕ - 6 – ಸಂಸ್ಕೃತದಲ್ಲಿ
ರಾಹುಗ್ರಸ್ತದಿವಾಕರೇಂದುಸದೃಶೋ ಮಾಯಾಸಮಾಚ್ಛಾದನಾತ್
ಸನ್ಮಾತ್ರಃ ಕರುಣೋಪಸಂಹರಣತೋ ಯೋsಭೂತ್ಸುಷುಪ್ತಃ ಪುಮಾನ್ |
ಪ್ರಾಗಸ್ವಾಪ್ಸಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ

ಕನ್ನಡದಲ್ಲಿ
ರಾಹುಪಿಡಿದಾ ಸೂರ್ಯಚಂದ್ರರೊಲು ಮಾಯೆಹೊದ್ದಿಂದ್ರಿಯಸ
ಮೂಹವನು ಪಶಮ ಗೈದು ಸನ್ಮಾತ್ರದೊಳಾರು ನೆಲೆಸುವನೊ
ನಿದ್ದೆತಿಳಿದಾರು ನಿದ್ರಿಸಿದೆ ನಾನೆಂದು ನೆನೆಯುವನೊ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ವಿವರಣೆ
ಯಾವ ಆತ್ಮನು ಇಂದ್ರಿಯ ಉಪಸಂಹಾರದಿಂದುಂಟಾದ ಸುಷುಪ್ತ್ಯವಸ್ಥೆಯಲ್ಲಿ, ಮಾಯೆಯ ಮುಚ್ಛುವಿಕೆಯಿಂದ ಗ್ರಹಣ ಹಿಡಿದ ಸೂರ್ಯಚಂದ್ರರಂತೆ ಇರುವಿಕೆಯು ಮಾತ್ರವಾಗಿದ್ದು ಎಚ್ಚರವಾಗುವ ಕಾಲದಲ್ಲಿ ನಾನು ಮೊದಲು ನಿದ್ದೆ ಮಾಡಿದೆನು (ಮೊದಲು ನಿದ್ದೆ ಮಾಡಿದವನು ನಾನೇ) ಎಂದು (ತನ್ನನ್ನು ತಾನೇ) ಗುರುತು ಹಿಡಿಯುತ್ತಾನೋ ಆ ಶ್ರೀಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.

ವ್ಯಾಖ್ಯಾನ:
ಈ ಶ್ಲೋಕದಲ್ಲಿ ಮಾಧ್ಯಮಿಕರ ಶೂನ್ಯವಾದದ ಖಂಡನೆಯಿಂದ ಸಾಧಿತವಾಗುವ `ಆತ್ಮವು ಇದೆ ´ ಎಂಬ ವೇದಾಂತದ ಸಿದ್ಧಾಂತದ ಪ್ರತಿಪಾದನೆಯಿದೆ. ವಾರ್ತಿಕದಲ್ಲಿ ಶೂನ್ಯವಾದದ ಸಮರ್ಥನೆಯೂ ಖಂಡನೆಯೂ ಸ್ಥೂಲವಾಗಿ ನಡೆದಿವೆ.
ಸೂರ್ಯ ಚಂದ್ರ ಗ್ರಹಣಕಾಲದಲ್ಲಿ ಸೂರ್ಯಚಂದ್ರರು ಎಂದಿನಂತೆ ಇದ್ದೇ ಇರುತ್ತಾರೆ. ಅವರಿಗೂ ನಮಗೂ ಮಧ್ಯೆ ಬಂದಿರುವ ಚಂದ್ರಮಂಡಲ ಮತ್ತು ಭೂಚ್ಛಾಯೆಯ ಮರೆಯಲ್ಲಿರುವುದರಿಂದ ನಮ್ಮ ಕಣ್ಣಿಗೆ ಕಾಣುತ್ತಿಲ್ಲ, ಅಷ್ಟೇ. ಹಾಗೆಯೇ ಸುಷುಪ್ತಿ (ಗಾಢನಿದ್ರೆ) ಯಲ್ಲಿ ಜೀವನ ಇರುವಿಕೆಯು ಕಾಣದೇ ಹೋದರೂ ಅದು ಇಲ್ಲವಾಗಲಿಲ್ಲ, ಇದ್ದೇ ಇದೆ. ಮಾಯೆಯ ಮರೆಯಲ್ಲಿರುವುದರಿಂದ ಕಾಣಿಸುತ್ತಿಲ್ಲ, ಅಷ್ಟೇ. ಗ್ರಹಣ ಬಿಟ್ಟ ಮೇಲೆ ಎಂದರೆ ಅಡ್ಡಿಯಾಗಿದ್ದ ಚಂದ್ರಮಂಡಲವೋ ಅಥವಾ ಭೂಚ್ಛಾಯೆಯೋ ಸರಿದುಹೋದ ಮೇಲೆ ಸೂರ್ಯಚಂದ್ರ ಮಂಡಲಗಳು ಎಂದಿನಂತೆ ತೇಜಸ್ವಿಯಾಗಿ ಬೆಳಗುತ್ತದೆ. ಹಾಗೆಯೇ ನಿದ್ದೆಯಿಂದ ಎಚ್ಚರವಾದಾಗ ಸುಷುಪ್ತಿಯ ಅಜ್ಞಾನ ಹೋದಮೇಲೆ, "ಸುಖವಾಗಿ ನಿದ್ದೆಮಾಡಿದೆನು. ಏನೂ ತಿಳಿಯಲಿಲ್ಲ" ಎನ್ನುವ ರೂಪದ ಸುಷುಪ್ತ್ಯವಸ್ಥೆಯ ಸ್ಮೃತಿಯ ವಿಮರ್ಶೆಯಿಂದ, ಎಲ್ಲಕ್ಕೂ ವಿಷಯಿಯಾದ ಶುದ್ಧ ಚೈತನ್ಯ ಸ್ವರೂಪನಾದ ಆತ್ಮನು ಆಗಲು ಆನಂದವಾಗಿದ್ದನು , ಮಾಯೆಯ ಆವರಣದಿಂದ ಕಾಣಿಸದಿದ್ದ ಜಗತ್ತಿನ ಅಭಾವವನ್ನೂ, ಅಂತಃಕರಣದ ಸುಷುಪ್ತ್ಯವಸ್ಥೆಯನ್ನೂ ಆಗ ಅನುಭವಿಸಿದ್ದು ಈಗ (ಎಚ್ಚರದಲ್ಲಿ ) ಜ್ಞಾಪಿಸಿಕೊಳ್ಳುತ್ತಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೆ ಎಲ್ಲ ಅವಸ್ಥೆಗಳ ಸಾಕ್ಷಿಯಾಗಿರುವ ಶುದ್ಧ ಚೈತನ್ಯವೇ ಪರತತ್ವ,,ಪರಮ ಶಿವ , ಶ್ರೀ ಗುರುಸ್ವರೂಪನಾದ ದಕ್ಷಿಣಾಮೂರ್ತಿ.
ಕನಸಿನಲ್ಲಿ ಕಂಡ ಜಗತ್ತು ಹೇಗೆ ಆತ್ಮನಲ್ಲಿಯೇ ಇರುವುದೋ ಎಚ್ಚರದಲ್ಲೂ ಹಾಗೆಯೇ ಎಂದು (ಹೇಳುವುದು). ಆದರೆ ನಿದ್ದೆಯಲ್ಲಿ ಯಾರಿಗೆ ಯಾವುದು ಪ್ರಕಾಶಿಸುತ್ತದೆ? ಆ ಅವಸ್ಥೆಯಲ್ಲಿಯೂ ಶಾಶ್ವತನಾಗಿರುವ ಜೀವನು ಯಾರು?
ಎಲ್ಲವೂ ಕ್ಷಣಮಾತ್ರ ಇರುವುದು (ಆ ಕ್ಷಣಕ್ಕೆ ಮುಂಚೆಯೂ, ಅದಾದ ಮೇಲೂ) ಶೂನ್ಯವಾದದ್ದು. ಎಲ್ಲವೂ ತನ್ನಿಂದ ತಾನೇ ತಿಳಿಯಲ್ಪಡತಕ್ಕದ್ದು (ಎಂದರೆ ವಿಷಯ ಬೇರೆ ಅದನ್ನು ತಿಳಿಯುವ ಚೇತನ ಬೇರೆ ಎಂಬುದಿಲ್ಲ ). ಪೃಥಿವ್ಯಾಪಸ್ತೇಜೋ ವಾಯುಗಳೆಂಬ ಭೂತಚತುಷ್ಟಯವು ಪರಮಾಣುಗಳ ಒಟ್ಟುಗೂಡುವಿಕೆಯಿಂದ ಉಂಟಾದದ್ದು.
ಮನುಷ್ಯ ಮುಂತಾದ ಶರೀರಗಳು ಐದು ಸ್ಕಂಧಗಳ ಸಮೂಹವು. ರೂಪಸ್ಕಂಧ, ವಿಜ್ಞಾನಸ್ಕಂಧ,ಸಂಜ್ಞಾಸ್ಕಂಧ, ಸಂಸ್ಕಾರಸ್ಕಂಧ,ವೇದನಾಸ್ಕಂಧ ಎಂಬುವು ಐದು ಸ್ಕಂಧಗಳು.
ಮನಸ್ಸಿಗೆ ಗೋಚರವಾಗುವ ವಿಷಯಗಳ ಮತ್ತು (ಅವುಗಳನ್ನು ಗ್ರಹಿಸುವ) ಇಂದ್ರಿಯಗಳ ಸಮೂಹವು ರೂಪಸ್ಕಂಧವು. ಈ ವಿಷಯಗಳ ಮತ್ತು ಇಂದ್ರಿಯಗಳ ಜ್ಞಾನವು ವಿಜ್ಞಾನಸ್ಕಂಧವು.
ಬೌದ್ಧರ ಮತದಲ್ಲಿ ಸಂಜ್ಞಾಸ್ಕಂಧವು ಹೆಸರು, ಗುಣ, ಜಾತಿ, ಕರ್ಮ, ವಿಶೇಷಣದಿಂದ ಕೂಡಿರುವುದರ ಜ್ಞಾನ ಎಂದು ಐದು ಬಗೆಯಾದದ್ದು. ಎತ್ತುಗಳಿಗೆ "ಎತ್ತು" ಎಂಬುದು ಹೆಸರು. ಎಲ್ಲ ಎತ್ತುಗಳಿಗೂ ಸಾಮಾನ್ಯವಾದ "ಎತ್ತಾಗಿರುವಿಕೆ" ಎಂಬುದು ಜಾತಿ, ಬಿಳಿಯ ಬಣ್ಣ ಮುಂತಾದುವು ಗುಣಗಳು. "ಹೋಗುತ್ತದೆ" ಎಂಬುದೇ ಮುಂತಾದವುಗಳು ಕರ್ಮಗಳು, ಕೊಂಬುಳ್ಳದ್ದು , ನಾಲ್ಕು ಕಾಲುಳ್ಳದ್ದು, ಬಾಲವುಳ್ಳದ್ದು, ಇವೇ ಮುಂತಾದ ವಿಶೇಷಗಳದಿಂದ ಕೂಡಿರುವುದರ ಜ್ಞಾನ. ಹೀಗೆ ಸಂಜ್ಞಾಸ್ಕಂಧವು ಐದುಬಗೆಯಾಗಿದೆಯೆಂದು ಹೇಳುತ್ತಾರೆ.
ರಾಗಾದಿಗಳೂ ಪುಣ್ಯಪಾಅಗಳೂ ಸಂಸ್ಕಾರಸ್ಕಂಧವು. ಸುಖ ದುಃಖ ಮೋಕ್ಷಗಳು ವೇದನಾಸ್ಕಂಧವು.
ಈ ಐದು ಸ್ಕಂಧಗಳಿಗಿಂತಲೂ ಬೇರೆಯಾದ ಆತ್ಮವೆಂಬುದು ಯಾವುದೂ ಇಲ್ಲವೇ ಇಲ್ಲ. ಒಡೆಯನಾದ (ಜಗತ್ಸೃಷ್ಟ್ಯಾದಿಗಳನ್ನು ) ಮಾಡುವವನೂ ಇಲ್ಲ ಜಗತ್ತು ತನ್ನಿಂದ ತಾನೇ ಉಂಟಾದುದು.
ಈ ಜಗತ್ತು ಕ್ಷಣಕಾಲಮಾತ್ರ ಇರುವ ಪಂಚಸ್ಕಂಧಗಳಿಂದಲೂ ಪರಮಾಣುಗಳಿಂದಲೂ ಉಂಟಾಗುತ್ತದೆ. ಮೊದಮೊದಲಿನ ಕ್ಷಣ ( ದಲ್ಲಿ ಕಾಣುವ ಪ್ರಪಂಚ) ದಿಂದಲೇ ಆಮೇಲಿನ ಕ್ಷಣ ( ದಲ್ಲಿ ಕಾಣುವ ಪ್ರಪಂಚವು) ಆಗುತ್ತದೆ. ( ಎಂದರೆ ಪೂರ್ವಕ್ಷಣದಲ್ಲಿದ್ದುನಾಶವಾದ ಪಂಚಸ್ಕಂದ ಭೂತಚತುಷ್ಟಯದ ಪರಮಾಣುಗಳಿಂದ ಆದ ಪ್ರಪಂಚವೇ ಉತ್ತರ ಕ್ಷಣದಲ್ಲಿ ಕಾಣುವ ಪ್ರಪಂಚಕ್ಕೆ ಕಾರಣವು).
ಮೊದಲಿನ ಜ್ಞಾನದಿಂದ ನಂತರದ ಜ್ಞಾನವು ಹುಟ್ಟುತ್ತದೆ. ಇವನು ಅವನೇ ಎಂಬ ಜ್ಞಾನವು ಈ ಜ್ವಾಲೆಯು ಅದೇ ಎನ್ನುವ ಜ್ಞಾನದಂತೆ ಭ್ರಾಂತಿಯು.
ಇದೆ, ಪ್ರಕಾಶಿಸುತ್ತಿದೆ ಎಂಬ ಬುದ್ಧಿಯಿಂದ ಮೋಹವನ್ನು ಹೊಂದಿದವರಿಂದ ಆತ್ಮವಲ್ಲದ ವಸ್ತುಗಳಲ್ಲಿ ಆತ್ನದ ಇರುವಿಕೆಯು ಕಲ್ಪಿತವಾಗಿದೆ. ಬಿಡುವುದು ಸಂಗ್ರಹಿಸುವುದು ಎಂಬ ಯಾವ ಪ್ರಯೋಜನವೂ ಇಲ್ಲದಿರುವುದರಿಂದ ಆಕಾಶವು ಪ್ರಕಾಶಿಸುತ್ತದೆಯೇ? (ಗೊಚರವಾಗುತ್ರದೆಯೇ ?) ಇದು ಮಾಧ್ಯಮಿಕರ ಶೂನ್ಯವಾದದ ಸಮರ್ಥನೆ.
ಜಗತ್ತಿನ ಕಾರಣವು ಶೂನ್ಯವಾದರೆ ಜಗತ್ತೇ ಸಿದ್ಧಿಯಾಗುವುದಿಲ್ಲ (ಜಗತ್ತಿನ ಇರುವಿಕೆಯನ್ನೇ ಸಾಧಿಸಲಾಗುವುದಿಲ್ಲ). ಇದು ಬೌದ್ಧ ಸಿದ್ಧಾಂತದ ನಿರಾಕರಣವು.
ಘಟವು ಶೂನ್ಯವು, ಪಟವು ಶೂನ್ಯವು ಎಂದು ಯಾರು ಹೇಳುತ್ತಾರೆ? ಜಗತ್ತು ಶೂನ್ಯವಾಗಿದ್ದರೆ ಮನುಷ್ಯನ ಕೊಂಬಿನಂತೆ (ಯಾವಾಗಲೂ) ಕಾಣದೆಯೇ ಇರಬೇಕಾಗುವುದು.
ವಸ್ತುವನ್ನು ಬಯಸುವವನು ಏನನ್ನು ಪಡೆದುಕೊಳ್ಳಬೇಕು? ಭಾರದಿಂದ ನೊಂದವನು ಯಾವುದನ್ನು ಬಿಡಬೇಕು? ತನ್ನ ಆತ್ಮವೇ ಇಲ್ಲವೆಂದು ಹೇಳುವಾಗ ವಿಧಿಸುವವರಾಗಲೀ ನಿಷೇಧಿಸುವವರಾಗಲಿ ಯಾರು?
ಆದ್ದರಿಂದ (ಜಗತ್ತು ) ಇರಬೇಕಾದ ಕಾರಣವಿಲ್ಲದ್ದರಿಂದ ಈ ಎಲ್ಲ ಪ್ರಪಂಚವೂ ನಾಶವಾದೀತು.
ಸ್ಕಂಧಗಳನ್ನೂ ಪರಮಾಣುಗಳನ್ನೂ ಒಟ್ಟುಗೂಡಿಸುವವನು ಇಲ್ಲವೆಂದು ಹೇಳುವುದಾದರೆ; ಕಾರಣವಿಲ್ಲದೇ ಒಟ್ಟುಗೂಡುವಿಕೆಯು ಆಗಲಾರದು ಘಟಪಟಾದಿಗಳು ಚೈತನ್ಯವಿಲ್ಲದವುಗಳಷ್ಟೇ
ಆತ್ಮನೇ ಇಲ್ಲವೆಂದು ಹೇಳುವ ಬೌದ್ಧನು ಯಾವ ಪ್ರಯೋಜನಕ್ಕೋಸ್ಕರ ವ್ರತವನ್ನು ಮಾಡುತ್ತಾನೆ?
ಗುರುತು ಹಿಡಿಯೋಣವು ಭ್ರಾಂತಿಯಾದರೆ ಊಟವೇ ಮುಂತಾದ ಕಾರ್ಯಗಳಲ್ಲಿ ಪ್ರವೃತ್ತಿಯುಂಟಾಗುವುದು ಹೇಗೆ?
ಕಳೆದ ದಿನದ ಆಹಾರದಂತೆ ಈ ಆಹಾರವೂ ಕೂಡ (ಹಸಿವನ್ನಡಗಿಸುವುದೆಂಬ ) ಇಷ್ಟವನ್ನು ಸಾಧಿಸತಕ್ಕದ್ದು ಎಂದು ನಿಶ್ಚಯಿಸಿಯೇ ಹುಡುಗನೂ ಕೂಡ ಊಟವೇ ಮುಂತಾದ ಕಾರ್ಯಗಳಲ್ಲಿ ತೊಡಗುತ್ತಾನೆ. (ಆಹಾರದ ಇಷ್ಟಸಾಧಕತ್ವದ ಗುರುತು ಹಿಡಿಯೋಣವು [ಪ್ರತ್ಯಭಿಜ್ಞೆ] ಇರುವುದರಿಂದಲೇ ಭೋಜನಾದಿ ಕಾರ್ಯಗಳಲ್ಲಿ ಪ್ರವೃತ್ತಿಯುಂಟಾಗುವುದು. ಆದ್ದರಿಂದ ಪ್ರತ್ಯಭಿಜ್ಞೆಯು ಭ್ರಾಂತಿಯೆಂದು ಹೇಳಲಾಗುವುದಿಲ್ಲ).
ಅವಕಾಶವನ್ನು ಕೊಡುವುದು ಆಕಾಶಕ್ಕೆ ಹೇಗೆ ಸಾಧಕವಾದ ಕೆಲಸವೋ ಹಾಗೆಯೇ ಮಾಡುವಿಕೆ ತಿಳಿಯುವಿಕೆ ಮುಂತಾದುದು ಆತ್ಮನ ಸಾಧಕವಾದ ಕೆಲಸವು.
ಏತಕ್ಕೆಂದರೆ ಸಚ್ಚಿದಾನಂದಸ್ವರೂಪನಾದ ಆತ್ಮನು ನಿದ್ದೆಯಲ್ಲಿದ್ದವನೂ ಕೂಡಾ ಸುಖವಾಗಿ ನಿದ್ದೆ ಮಾಡಿದೆನು ಎಂಬುವ ರೀತಿಯಾಗಿ ಗುರುತುಹಿಡಿಯಲ್ಪಡುತ್ತಾನೆ. ಇವುಗಳು ಶೂನ್ಯವಾದದ ಖಂಡನೆ.
"ಗುರುತು ಹಿಡಿಯಲ್ಪಡುತ್ತದೆ " ಎಂಬ ಪ್ರಯೋಗವು ಕರ್ತೃಕರ್ಮಕವಾದದ್ದು (ಎಂದರೆ ಗುರುತು ಹಿಡಿಯುವುದೆಂಬ ಕ್ರಿಯೆಗೆ ಕರ್ತೃವೂ ಕರ್ಮವೂ ಒಂದೇ ಆಗಿದೆ) ಸ್ವಯಂಪ್ರಕಾಶವಾಗಿರುವುದರಿಂದ ಆತ್ಮನು ತನ್ನಿಂದಲೇ ತನ್ನನ್ನು ತಿಳಿದುಕೊಳ್ಳುತ್ತಾನೆ.
"ತಾನು ತನ್ನಿಂದ ತನ್ನನ್ನು ತಿಳಿದುಕೊಳ್ಳುತ್ತಾನೆ " ಎಂದರೆ ಒಂದೇ ವಸ್ತುವು ಕರ್ತೃವೂ ಕರಣವೂ , ಕರ್ಮವೂ, ಕ್ರಿಯೆಯೂ ಆಗಿರುತ್ತದೆ ಎಂದು ಅರ್ಥಮಾಡಬಾರದು. ಇರುವ ವಸ್ತು ಒಂದೇ ಆದ್ದರಿಂದ ಕ್ರಿಯೆಯೂ ಸಾಧ್ಯವಿಲ್ಲ ಕರ್ತೃ ಕರ್ಮ ಕ್ರಿಯೆಗಳೆಂಬ ಭೇದವೂ ಇಲ್ಲ ಎಂದು ತಾತ್ಪರ್ಯ.
ನಿದ್ದೆಯಲ್ಲಿ ಮಾಯೆಯಿಂದ ಮೋಹಿತನಾಗಿ ನಿಶ್ಚೇತನನೆಂದೂ ದೃಷ್ಟಿಹೀನನೆಂದೂ ಕಾಣುತ್ತಾನೆ (ಅವ್ಯಕ್ತನಾಗಿರುವಾಗ ) ಪ್ರಕಾಶವಿಲ್ಲದವನಾಗಿಯೂ ವ್ಯತನಾಗಿರುವಾಗ ಸ್ವಯಂಪ್ರಕಾಶನಾಗಿಯೂ ಹೊಳೆಯುತ್ತಾನೆ.
ಜಡರೂಪವಾದ ಶರೀರವೇ ಮುಂತಾದ ಉಪಾಧಿಗಳಲ್ಲಿ ಪ್ರತ್ಯಕ್ಷವಾಗಿ ಒಡೆಯನಾದ ಆತ್ಮನು ಬೇರೆಯಾಗಿ ವಿವೇಕದಿಂದ ತಿಳಿಯಲ್ಪಡುತ್ತಾನೆ. (ಅವಿಚಾರಿತ ಸ್ಥಿತಿಯಲ್ಲಿ ದೇಹಾದಿಗಳೇ ಆತ್ಮವೆಂಬ ಭ್ರಾಂತಿ ಇರುತ್ತದೆ).
ಪರಮೇಶ್ವರನ ಮೋಹವನ್ನುಂಟುಮಾಡುವ ಮಾಯಾಶಕ್ತಿಯು ಇದೇ. (ಸಚ್ಚಿದಾನಂದಸ್ವರೂಪನೂ ನಿರ್ವಿಶೇಷನೂ ಆದ ಪರಮಾತ್ಮನು ಸೋಪಾಧಿಕನೂ ವಿಶಿಷ್ಟನೂ ಆಗಿ ಕಾಣುವುದೇ ಮೋಹವನ್ನುಂಟುಮಾಡುವ ಅವನ ಮಾಯಾಶಕ್ತಿ. ಇದೇ ಬಂಧ).
ಜ್ಞಾತೃಗಳ ಈ ಮೋಹದ ತೊಲಗೋಣವೇ ಮೋಕ್ಷವೆಂದು ಕರೆಯಲ್ಪಡುತ್ತದೆ.
ಅವಸ್ಥಾತ್ರಯರಹಿತನೂ ನಿರ್ದೋಷನೂ, ಇಷೀಕದಂತೆ ಇರುವಿಕೆಯೊಂದೇ ಆಗಿರುವವನೂ, ಆಲದ ಬೀಜಕ್ಕೆ ಹೋಲಿಸಬಹುದಾದವನೂ, ಹೊರ ಹೊರಗಿನ ಪಟ್ಟಿಗಳನ್ನು ತೆಗೆದ ಬಾಳೆಯ ಕಂದಿನಂತೆ ಇರುವವನೂ, ಅಂಶ ಅಥವಾ ಅವಯವವಿಲ್ಲದವನೂ, ರೂಪಾಂತರವಿಲ್ಲದವನೂ, ಅವ್ಯಕ್ತನೂ, ನಿಷ್ಕಳಂಕನೂ, ಪರಿಪೂರ್ಣನೂ ಅದ್ವಿತೀಯನೂ ಆದ ಆತ್ಮನೇ ಪರಮೇಶ್ಚರನೆಂದು ಹೇಳಲ್ಪಡುತ್ತಾನೆ. ಇವುಗಳು ಬ್ರಹ್ಮಸ್ವರೂಪವನ್ನು ನಿರೂಪಿಸುತ್ತದೆ.
ಎಲ್ಲಿಂದ ಮಾತುಗಳು ಹಿಂತಿರುಗುತ್ತವೆಯೋ ಯಾವುದರಲ್ಲಿ ಮನಸ್ಸು ಲಯವನ್ನು ಹೊಂದುತ್ತದೆಯೋ ಎಲ್ಲಿ ಸಮುದ್ರದಲ್ಲಿ ನದಿಗಳು ಹೇಗೋ ಹಾಗೆ ಎಲ್ಲ ಜಂತುಗಳೂ ಲೋಕಗಳೂ ತತ್ವಗಳೂ ಒಂದಾಗುತ್ತವೆಯೋ ಅಲ್ಲಿ ಒಂದಾಗಿರುವುದನ್ನೇ ಅನುಭವಿಸುತ್ತಿರುವವನಿಗೆ ದುಃಖವಾವುದು? ಭ್ರಾಂತಿಯಾವುದು?
ಶಬ್ದಾರ್ಥಗಳೆಂಬ ರೂಪಗಳನ್ನು ಹೊಂದಿರುವುದರಿಂದ ಭೇದವುಳ್ಳವನಂತೆ ಕಂಡರೂ ಈ ಆತ್ಮನು ದೇಹವೇ ಮುಂತಾದ ಉಪಾಧಿಗಳ ನಿರಾಕರಣದಿಂದ ಭೇದರಹಿತನಾಗಿಯೇ ಆಗುವನು( ಭೇದರಹಿತವಾದ ನಿಜಸ್ಥುತಿಯಲ್ಲಿ ಬೆಳಗುವನು). ಈ ಮೂಲಕ ಬ್ರಹ್ಮಾನುಭವದ ಫಲವನ್ನು ಪ್ರಸ್ತುತಪಡಿಸಲಾಯಿತು.
ಪಂಡಿತನು ಬ್ರಹ್ಮ ವಿಲ್ಲವೆಂದು ತಿಳಿದರೆ ತಾನೂ ಇಲ್ಲದವನೇ ಆಗುತ್ತಾನೆ, ಬ್ರಹ್ಮನಿರುವನೆಂದು ತಿಳಿದುಕೊಂಡರೆ ಆಗ ಇವನನ್ನೂ ಇರುವವನನ್ನಾಗಿ ತಿಳಿಯುತ್ತಾರೆ.

ಶ್ಲೋಕ - 7 - ಸಂಸ್ಕೃತದಲ್ಲಿ
ಬಾಲ್ಯಾದಿಶ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾಸ್ವನುವರ್ತಮಾನಮಹಮಿತ್ಯಂತಃಸ್ಫುರಂತಂ ಸದಾ |
ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ

ಕನ್ನಡದಲ್ಲಿ
ಬಾಲ್ಯ ಯೌವನ ಮುಪ್ಪು ಎಚ್ಚರ ಕನಸು ನಿದ್ದೆಗಳ ಮೀರಿ
ನಿತ್ಯವಹ ನಾನು ನಾನೆಂದಾವಗಂ ಬೆಳಗುವಾತ್ಮನನು
ಶುಭಮುದ್ರೆಯನು ಧರಿಸಿ ಶಿಷ್ಯವರ್ಗಕದಾರು ತೋರುವರೋ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ಅರ್ಥ ವಿವರಣೆ
ಹುಡುಗತನ ಮತ್ತು ಎಚ್ಚರ ಮುಂತಾದ ಭೇದವನ್ನು ಹೊಂದುತ್ತಿರುವ ಎಲ್ಲ ಅವಸ್ಥೆಗಳಲ್ಲಿಯೂ `ನಾನು´ ಎಂದು ಒಳಗೇ ಪ್ರಕಾಶಿಸುತ್ತಾ ಯಾವಾಗಲೂ (ನಿರ್ವಿಕಾರನಾಗಿ) ಇದ್ದುಕೊಂಡೇ ಇರುವ ತನ್ನ ಆತ್ಮನನ್ನೇ ಯಾರು ಭಕ್ತರಿಗೆ ಶ್ರೇಯಸ್ಕರವಾದ ಚಿನ್ಮುದ್ರೆಯಿಂದ ಪ್ರಕಟಪಡಿಸುತ್ತಾನೋ, ಆ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.

ವ್ಯಾಖ್ಯಾನ
ಹಿಂದಿನ ಶ್ಲೋಕದಲ್ಲಿ "ಪ್ರಬೋಧ ಸಮಯೇ ಯಃ ಪ್ರತ್ಯಭಿಜ್ಞಾಯತೇ" ಎಂದು ಪ್ರತ್ಯಭಿಜ್ಞೆಯನ್ನು ಜ್ಞಾನಸಾಧನವೆಂದು ವಿವರಿಸಲಾಗಿತ್ತು. ಅದನ್ನು ಈ ಶ್ಲೋಕದಲ್ಲಿ ಮತ್ತಷ್ಟು ವಿವರಿಸಲಾಗಿದೆ.
ಹುಡುಗತನ, ಪ್ರಾಯ, ಮುಪ್ಪುಗಳು ಶರೀರದ ಅವಸ್ಥೆಗಳು. ಪ್ರತಿಯೊಂದು ಅವಸ್ಥೆಗಳಲ್ಲಿಯೂ ಶರೀರವು ಬೇರೆ ಬೇರೆಯೇ. ಹಾಗೆಯೇ ಎಚ್ಚರ, ಕನಸು, ಗಾಢನಿದ್ರೆಗಳು ಅಂತಃಕರಣದ ಅವಸ್ಥೆಗಳು. ಪ್ರತಿಯೊಂದು ಅವಸ್ಥೆಗಳಲ್ಲಿಯೂ ಅಂತಃಕರಣವು ಬೇರೆ ಬೇರೆಯೇ. ಹೀಗೆ ಮಾರ್ಪಾಡು ಹೊಂದುತ್ತಿರುವ ತತ್ವಗಳಲ್ಲಿ ಅವಲ್ಲದ, ಅವುಗಳ ಜೊತೆಗೆ ತಾನೂ ಬದಲಾಗದೆ ಅವುಗಳಲ್ಲಿ ಆಗುತ್ತಿರುವ ಭೇದಗಳನ್ನು ನೋಡುತ್ತಿರುವ ಒಂದು ತತ್ವವು "ಹುಡುಗನಾಗಿದ್ದ ತಾನೇ ಮುದುಕನಾಗಿದ್ದೇನೆ; ಕನಸುಕಂಡ ನಾನೇ ಎಚ್ಚರವಾಗಿದ್ದೇನೆ" ಎಂದು ತನ್ನನ್ನು ತಾನೇ "ನಾನು" ಎಂದು ಅರಿತುಕೊಂಡಿದೆ. ಅದೇ ಪರತತ್ವ, ಶ್ರೀ ಗುರುಸ್ವರೂಪನಾದ ದಕ್ಷಿಣಾಮೂರ್ತಿ.
ಈ ಶ್ಲೋಕದ ವಾರ್ತಿಕದಲ್ಲಿ ಪ್ರತ್ಯಭಿಜ್ಞೆಯ ಸ್ವರೂಪ ಪ್ರಾಮಾಣ್ಯ ಮತ್ತು ಪ್ರಯೋಜನಗಳ ವಿಚಾರವೂ, ವ್ಯಾವೃತ್ತಿ ಅಥವಾ ಭೇದದ ತಿಳುವಳಿಕೆಗೆ ಕಾರಣವಾದ ಅಜ್ಞಾನದ ಮತ್ತು ಅದಕ್ಕೂ ಕಾರಣವೆನ್ನುವ ಮಾಯೆಯ ವಿಚಾರವನ್ನೂ ವಿವರಿಸಲಾಗಿದೆ.
ಪ್ರತ್ಯಭಿಜ್ಞೆಯ ಬಗೆಗೆ ಆಕ್ಷೇಪವನ್ನು ಈ ರೀತಿಯಾಗಿ ವಿವರಿಸಬಹುದು:
ಆತ್ಮನು ನಿತ್ಯನೆಂಬುದನ್ನು "ಗುರುತು ಹಿಡಿಯುವುದು" ಎಂಬುದರ ಬಲದಿಂದಲೇ ನಿಶ್ಚಯಿಸುವುದಾದರೆ ಈ ಗುರುತು ಹಿಡಿಯುವುದು ಎಂದರೇನು? ಹಾಗೂ ಅದರ ಉಪಯೋಗುವಾದರೂ ಏನು? ಎಂಬ ಪ್ರಶ್ನೆ ಏಳುತ್ತದೆ.
ಪ್ರತ್ಯಕ್ಷವೇ ಮೊದಲಾದ ಪ್ರಮಾಣಗಳಲ್ಲಿ ಗುರುತು ಹಿಡಿಯುವುದನ್ನು ಸೇರಿಸಿಲ್ಲ.
ಮುಂದುವರೆದು ಪ್ರತ್ಯಭಿಜ್ಞೆಯ ನಿರೂಪಣೆಯನ್ನು ಗಮನಿಸೋಣ:
ಹಿಂದೆ ಗೋಚರವಾಗಿದ್ದ ಮತ್ತು ಈಗ ಗೋಚರವಾಗಿರುವ ಯಾವುದಾದರೊಂದು ವಿಷಯದಲ್ಲಿ ಅದೇ ಇದು ಎಂಬ ಜ್ಞಾನವು "ಗುರುತು ಹಿಡಿಯುವುದು" ಎನ್ನಬಹುದು.
ಪ್ರಾಸಂಗಿಕವಾದ ಆ ದೇಶ ಕಾಲ ಆಕಾರವೇ ಮೊದಲಾದುವುಗಳನ್ನು ಕಳೆದು ಹಾಕಿ ಅವಿಚ್ಛಿನ್ನವಾದ ಒಂದೇ ಆದ ವಸ್ತುವು ಅದೇ ಇದು ಎಂದು ಹೇಗೆ ಹೇಳಲ್ಪಡುತ್ತದೆಯೋ ಹಾಗೆಯೇ ಮಾಯೆಯ ಸಂಪರ್ಕದಿಂದ ಉಂಟಾದ ಅಲ್ಪಜ್ಞತ್ವ ಇತ್ಯಾದಿಗಳ ನಿರಾಕರಣದಿಂದ ಆತ್ಮನ ಸರ್ವಜ್ಞತ್ವವೇ ಮುಂತಾದುವುಗಳ ತಿಳುವಳಿಕೆಯೇ "ಗುರುತು ಹಿಡಿಯುವುದು".
ಹಿಂದಿನ ಜನ್ಮದಲ್ಲಿ ಅನುಭವಿಸಿದ ವಿಷಯದ ನೆನಪಿನಿಂದ ಮಗುವು ತಾಯಿಯ ಮೊಲೆಯನ್ನು ಕುಡಿಯುವುದಕ್ಕೆ ತಾನಾಗಿಯೇ ಪ್ರಾರಂಭಿಸುತ್ತದೆ.
(ದೇಹಾಂತರದಲ್ಲಿ ಹೊಂದಿದ ಅನುಭವ) ಜ್ಞಾಪಕವಿಲ್ಲದಿದ್ದರೆ (ಆಗಲೇ ಹುಟ್ಟಿದ) ಮಗುವು ಸ್ತನ್ಯಪಾನಮಾಡುವುದು (ಎಂಬುದಕ್ಕೆ ಸರಿಯಾದ ಕಾರಣವನ್ನು ಹೇಳುವುದು) ಆಗುವುದಿಲ್ಲವಾದ್ದರಿಂದ (ಜನ್ಮಾಂತರಗಳಲ್ಲಿ ಲಭಿಸುವ) ಬೇರೆ ಬೇರೆ ದೇಹಗಳಲ್ಲಿ ಕೂಡಾ ಸ್ಥಾಯಿಯಾಗಿರುವುದು (ಜ್ಞಾಪಕಕ್ಕೆ ಆಧಾರವಾದ) ಅಂತಃಕರಣವು ಎಂದು ನಿಶ್ಚಯವಾಗುತ್ತದೆ.
ಅನುಭವ ಕಾಲವೆಂಬ ಮುಂಚಿನ ಸಮಯದಲ್ಲಿಯೂ ಜ್ಞಾಪಕದ ಕಾಲವೆಂಬ ಆಮೇಲಿನ ಸಮಯದಲ್ಲಿಯೂ ಇದ್ದೇ ಇರುವ ಅಂತಃಕರಣವು ಸಂಸ್ಕಾರ ರೂಪದಿಂದ ತನ್ನಲ್ಲಿಯೇ ಇರುವ ವಿಷಯವನ್ನು ಜ್ಞಾಪಕ ಮಾಡಿಕೊಳ್ಳುತ್ತದೆ.
ವಸ್ತುಗಳ ಜ್ಞಾಪಕವೇ ಪ್ರತ್ಯಭಿಜ್ಞೆ ಎಂದು ಹೇಳುವುದಾದರೆ ಅಂತಃಕರಣವು ಸ್ಥಿರವೆಂದು ಸಾಧಿಸುವುದರಲ್ಲಿ ಜ್ಞಾಪಕಕ್ಕೆ ಪ್ರಾಮಾಣ್ಯವು ಹೇಗೆ ಉಂಟಾಗುವುದು
ಪ್ರತ್ಯಭಿಜ್ಞೆಯು ಸ್ಮೃತಿರೂಪವಾದದ್ದು ಎಂಬುದರ ಕುರಿತು ಆಕ್ಷೇಪಣೆ:
ಜ್ಞಾಪಕದಲ್ಲಿ (ವಿಷಯವು ಇಂದ್ರಿಯ ಸನ್ನಿಕೃಷ್ಟ ಆಗಿಲ್ಲದಿರುವುದರಿಂದ) ವಿಷಯದ (ಪ್ರತ್ಯಕ್ಷವಾದ) ಭಾವವೂ ಇಲ್ಲ ; ವಿಷಯೇಂದ್ರಿಯ ಸನ್ನಿಕರ್ಷದಿಂದ ಪೂರ್ವಕಾಲದಲ್ಲಾದ ಅನುಭವವು ತದುತ್ತರ ಕ್ಷಣದಲ್ಲಿಯೇ ನಾಶವಾಗುವುದರಿಂದ, ಸ್ಮೃತಿ ಸಮಕಾಲೀನವಾದ ಅನುಭವದ ಭಾವವೂ ಇಲ್ಲ. ಇವೇ ಕಾರಣಗಳಿಂದಲೇ ಸ್ಮೃತಿ ಅನುಭವ ಇವೆರಡರ ಎರಡು ಬೆಟ್ಟುಗಳಂತೆ ಬೇರೆಯಾದ ಅಥವಾ `ಕೋಲುಳ್ಳವನು´ ಎಂಬ ಪ್ರತೀತಿಯಲ್ಲಿರುವಂತೆ ವಿಶೇಷಣ - ವಿಶೇಷ್ಯಭಾವದಿಂದ ಕೂಡಿದ ಭಾವವೂ ಆಗಲಾರದು. !(ಆದ್ದರಿಂದ ) ಸ್ಮೃತಿಯ ಪ್ರಾಮಾಣ್ಯವನ್ನು ಒಪ್ಪಿಕೊಂಡರೆ ಎಲ್ಲ ಸ್ಮರಣೆಗಳ ವಿಚಾರದಲ್ಲೂ (ನಾಮ ಶ್ರವಣಮಾತ್ರದಿಂದುಂಟಾಗುವ ಸ್ಮರಣೆಗೆ ಕೂಡ ಪ್ರತ್ಯಕ್ಷಜನಿತ ಜ್ಞಾನದಂತೆಯೇ ) ಪ್ರಾಮಾಣ್ಯವನ್ನು ಒಪ್ಪಿಕೊಳ್ಳಬೇಕಾಗುಗುದು ಎಂಬ ಆಕ್ಷೇಪಣೆಗೆ ಉತ್ತರ.
ಸ್ಮೃತಿರೂಪತ್ವದ ವಿಶದೀಕರಣ ಹಾಗೂ ಪ್ರತ್ಯಭಿಜ್ಞೆಯ ಸಮರ್ಥನೆ :
ಮೊದಲನೆಯ ಅನುಭವವು ನಾಶವಾಗಲಾಗಿ ಅದರ ಆಧಾರದಿಂದಲೇ ಹುಟ್ಟಿದ ಸಂಸ್ಕಾರವೆಂಬ ಹೆಸರಿನ ಅಂತಃಕರಣ ನಿಷ್ಠವಾದ ಶಕ್ತಿವಿಶೇಷದಿಂದ ಜ್ಞಾಪಕವು ಹುಟ್ಟಿಕೊಳ್ಳುತ್ತದೆ.
ಜ್ಞಾಪಕವು ಪ್ರತ್ಯಕ್ಷಾದಿಜನ್ಯ - ಜ್ಞಾನಕಾಲಿಕವಾದ ಅನುಭವವು ನಾಶವಾದರೂ ಆ ಅನುಭವವನ್ನು ಪಡೆದ ಅಂತಃಕರಣವು ನಾಶವಿಲ್ಲದ್ದೆಂದು ಬೋಧಿಸುತ್ತದೆ.
ವಿಷಯವು ಅಗೋಚರವಾದಾಗ ಮತ್ತು (ಅದರ) ಅನುಭವವೂ ನಾಶವಾದಾಗ ಯಾವಾಗಲೂ ಕಾಣುತ್ತಿರುವ ಅಂತಃಕರಣವು (ಸಂಸ್ಕಾರ ರೂಪವಾಗಿ) ತನ್ನಲ್ಲಿಯೇ ಅಡಗಿರುವ ವಿಷಯವನ್ನು ಸ್ಮರಿಸುತ್ತದೆ.
ಅಜ್ಞಾನಕ್ಕೆ ಕಾರಣವಾದ ಮಾಯೆಯ ನಿರೂಪಣೆ:
ಜಿಜ್ಞಾಸುಗಳ ಅಜ್ಞಾನವು ಮಾಯೆಯೆಂಬ ಕತ್ತಲೆಯಿಂದ ಆದದ್ದು. ಮಾಯೆಯೂ ವಿದ್ಯೆಯೂ ಸೂರ್ಯನ ನೆರಳು ಬೆಳಕುಗಳಂತೆ ಈಶ್ವರನ ಎರಡು ಶಕ್ತಿಗಳು.
ಮಾಯೆಯು ಪದಾರ್ಥಗಳನ್ನು ಮುಚ್ಚುತ್ತದೆ. ಜ್ಞಾನವು ಆ (ಮರೆಯನ್ನು ) ತೆಗೆದುಹಾಕಿ (ಪದಾರ್ಥಗಳ ಸ್ವರೂಪವನ್ನು ) ತೋರಿಸುತ್ತದೆ. ಎಲ್ಲ ಪ್ರಮಾಣಗಳಿಗೂ ಕಾರಣವಾದುದು ಪ್ರತ್ಯಭಿಜ್ಞೆಯೇ.
ಈಶ್ವರನು ಬೇರೆ ನಾನು ಬೇರೆ ಎಂಬ ಭೇದವನ್ನುಂಟುಮಾಡುವ ಮಾಯೆಯನ್ನು ಜ್ಞಾನದಿಂದ ತೆಗೆದುಹಾಕಿ ನಾನೇ ಈಶ್ವರನು ಎಂಬ ಜ್ಞಾಪಕವೇ ಪ್ರತ್ಯಭಿಜ್ಞೆಯು.
ಮಾಯೆಯಿಂದ ಮುಚ್ಚಲ್ಪಟ್ಟ ಪರಮಾತ್ಮನು ಸ್ವಲ್ಪ ಪ್ರಕಾಶವುಳ್ಳವನಂತೆ ಕಂಡರೂ ಚೆನ್ನಾಗಿ ಮರೆಯನ್ನು ತೆಗೆದಾಗ ಸೂರ್ಯನಂತೆ (ಪರಿಪೂರ್ಣವಾದ ತೇಜಸ್ಸಿನಿಂದ ) ಪ್ರಕಾಶಿಸುತ್ತಾನೆ.
ಪ್ರತ್ಯಭಿಜ್ಞೆಯ ಸ್ವರೂಪ ಹಾಗೂ ಪ್ರಯೋಜನ:
ಪ್ರತ್ಯಭಿಜ್ಞೆಯು ಕಾರಣಗಳ ಕೆಲಸದಿಂದ ಉಂಟಾಗುವುದಿಲ್ಲ. (ಪ್ರತ್ಯಕ್ಷಾದಿ ) ಪ್ರಮಾಣಗಳ ವ್ಯಾಪಾರದಿಂದಲೂ ಅಲ್ಲ. ಆದರೆ ಅಜ್ಞಾನದ ನಿವಾರಣೆಯಿಂದ ಮಾತ್ರ ಆಗುವುದು.
ವ್ಯವಹಾರದ ನಡವಳಿಕೆಗಾಗಿ ಎಷ್ಟು ಪ್ರಮಾಣಗಳಿವೆಯೋ ಅವೆಲ್ಲಕ್ಕೂ ಅಜ್ಞಾನ ನಿವಾರಣೆಗಿಂತಲೂ ಬೇರೆಯಾದ ಕೆಲಸವು ಇರುವುದಿಲ್ಲ.
ಅಭ್ಯಾಸ ಅಥವಾ ಅಧ್ಯಾರೋಪ ಮತ್ತು ಅದರ ಅನಿರ್ವಚನೀಯತ್ವಗಳ ನಿರೂಪಣೆ:
ಹೇಗೆ ಮುತ್ತಿನ ಚಿಪ್ಪಿನಲ್ಲಿ ಬೆಳ್ಳಿಯೆಂಬ ಅಲ್ಲಿಲ್ಲದಿರುವ ವಸ್ತುವಿನ ಜ್ಞಾನದಿಂದ ಭ್ರಾಂತಿಯುಂಟಾಗುತ್ತದೆಯೋ ಹಾಗೆಯೇ ಅಚೇತನವೂ ಅಸತ್ಯವೂ ಮಿತವೂ ಆದ ದೇಹದ ದರ್ಮಗಳು ಆತ್ಮನಲ್ಲಿಯೂ ಸಚ್ಚಿದಾನಂದ ಸ್ವರೂಪವು ದೇಹದಲ್ಲಿಯೂ ಅಜ್ಞಾನದಿಂದ ಆರೋಪಿಸಲ್ಪಡುತ್ತದೆ.
(ಮುತ್ತಿನ ಚಿಪ್ಪಿನಲ್ಲಿ ಕಾಣುವ ) ಬೆಳ್ಳಿಯು ವಾಸ್ತವವಾಗಿಯೇ ಇದ್ದುಕೊಂಡು (ಅಲ್ಲಿ) ಕಾಣಿಸುವುದಾದರೆ ("ಇದು ಮುತ್ತಿನ ಚಿಪ್ಪು" ಎಂಬ ಯಥಾರ್ಥ ಜ್ಞಾನವುಂಟಾದಾಗ "ಇದು ಬೆಳ್ಳಿ "ಎಂಬ ಭ್ರಾಂತಿ ಜ್ಞಾನದ ) ನಾಶವಾಗುವುದಿಲ್ಲ.
ಭ್ರಾಂತಿ ಜ್ಞಾನ ವಿಷಯವಾದ ಬೆಳ್ಳಿಯು ಪೂರ್ತಿಯಾಗಿ ಇಲ್ಲದಿರುವುದಾದರೆ ಮನುಷ್ಯನ ಕೊಂಬೇ ಮುಂತಾದವುಗಳಂತೆ ಯಾವಾಗಲೂ ಕಾಣದೆಯೇ ಇರಬೇಕು. "ಇದು ಬೆಳ್ಳಿ " ಎಂಬ ಭ್ರಾಂತಿ ಜ್ಞಾನಕ್ಕೆ ಕಾರಣವು ನೆನಪಾದರೆ " ಹೆಂಗಸಿನ ಕೈಯೇ ಮುಂತಾದ ಸ್ಥಳಗಳಲ್ಲಿ ಕಂಡ ಬೆಳ್ಳಿಯು" ಎಂಬ ರೂಪವಾದ ವಿಶಿಷ್ಟ ಜ್ಞಾನವಾದೀತು.
"ಅದು ಇದಕ್ಕೆ ಸಮಾನ " ಎಂಬ ಹೋಲಿಕೆಯಿಂದ ಭ್ರಾಂತಿಯುಂಟಾಗುತ್ತದೆಂದು ಹೇಳುವುದಾದರೆ "ಶಂಖವು ಹಳದಿ ಬಣ್ಣವುಳ್ಳದ್ದು" " ಬೆಲ್ಲವು ಕಹಿಯಾಗಿದೆ" ಇವೇ ಮುಂತಾದ (ಇಂದ್ರಿಯ ದೋಷದಿಂದುಂಟಾದ) ಭ್ರಾಂತಿಯಲ್ಲಿ ಯಾವ ಹೋಲಿಕೆಯೂ ಕಾಣುವುದಿಲ್ಲ.
ಮುತ್ತಿನ ಚಿಪ್ಪು ಬೆಳ್ಳಿಯೇ ಆಗಿರುವ ಬೆಳ್ಳಿಯ ರೂಪದಿಂದ ಕಾಣುತ್ತದೆಂದು ಹೇಳುವುದಾದರೆ (ವಾಸ್ತವವಾಗಿ ಅಲ್ಲಿ ಬೆಳ್ಳಿ ಇಲ್ಲದಿರುವುದರಿಂದ) ಭ್ರಾಂತಿಗೆ ಆಧಾರವೇ ಇಲ್ಲವಾಗುವುದು ಮತ್ತು (ಯಥಾರ್ಥಜ್ಞಾನದಿಂದ) ಭ್ರಾಂತಿಗೆ ಬಾಧೆಯಾದಾಗ (ಯಥಾರ್ಥಜ್ಞಾನವಿಷಯವಾದ) ಅವಶಿಷ್ತವಸ್ತುವೂ ಕೂಡಾ ಇಲ್ಲವಾಗುವುದು.
ಭ್ರಾಂತಿಯಲ್ಲಿ ಬುದ್ಧಿಯಲ್ಲಿರುವ ಬೆಳ್ಳಿಯೇ ಹೊರಗಿರುವುದಾಗಿ ಕಾಣುತ್ತದೆಂದು ಹೇಳುವುದಾದರೆ ಗುಲಗಂಜಿಯಲ್ಲಿ ಬೆಂಕಿಯೆಂಬ ಭ್ರಾಂತಿಯುಂಟಾದಾಗ ದೇಹವು ಸುಡುವ ಪ್ರಸಂಗವೊದಗೀತು.
ಭ್ರಾಂತಿಯ ಅನಿರ್ವಚನೀಯತ್ವವನ್ನೂ ಹಾಗೂ ಅಧ್ಯಾಸದ ಅನೇಕ ಬಗೆಗಳನ್ನು ಗಮನಿಸೋಣ:
ಭ್ರಾಂತಿಯು ಯುಕ್ತಿಗೆ ಸಿಕ್ಕದಿರುವ ತೋರಿಕೆಯಾದುದರಿಂದ ಅದಕ್ಕೆ ನಿಷ್ಕರ್ಷಕವಾದ ಧರ್ಮವೇ ಇಲ್ಲ. ಯಾವುದಾದರೂ ಒಂದು ಲಕ್ಷಣವಿದೆಯೆಂದು ಹೇಳುವುದಾದರೆ ಅದು ಅಯಥಾರ್ಥಜ್ಞಾನವೆಂಬುದೇ ಸಿದ್ದಿಯಾಗುವುದಿಲ್ಲ.
ಭ್ರಾಂತಿಯಿಂದ ಹೇಗೆ ಒಬ್ಬನೇ ಆಗಿರುವ ಚಂದ್ರನು ನೀರಿನಲ್ಲಿ ಬಹುವಾಗಿಯೂ, ಭಯಕ್ಕೆ ಕಾರಣವಲ್ಲದ ಹಗ್ಗವು ಭಯೋತ್ಪಾದಕವಾದ ಹಾವಾಗಿಯೂ, ಕಾರಣವಾದ ಚಿನ್ನವು ಕಾರ್ಯವಾದ ಕಡಗವೇ ಮುಂತಾದುವಾಗಿಯೂ, ಇರುವ ಮುತ್ತಿನ ಚಿಪ್ಪು ಇಲ್ಲದ ಬೆಳ್ಳಿಯಾಗಿಯೂ, ಸರ್ವವ್ಯಾಪಿಯಾದ ಆಕಾಶವು ಏಕದೇಶವರ್ತಿಯಾದ ಯಕ್ಷನಗರವಾಗಿಯೂ, ನಿಷ್ಕ್ರಿಯವಾದ ಮೋಟು ಮರವು ಕ್ರಿಯಾವಿಷ್ಟನಾದ ಕಳ್ಳನಾಗಿಯೂ ಕಾಣುವವೋ ಹಾಗೆಯೇ ಸತ್ಸ್ವರೂಪನಾದ ಆತ್ಮನಲ್ಲಿ ಸತ್ತಾರಹಿತವಾದಂತೆ, ಮಿಥ್ಯೆಯಾಗಿ ಇರುವ ಈ ಜಗತ್ತು ಆರೋಪಿತವಾಗಿ (ಕಾಣುತ್ತದೆ).
ಪ್ರತ್ಯಭಿಜ್ಞೆಯಿಂದಾಗುವ ಬ್ರಹ್ಮಜ್ಞಾನವೆಂಬ ಪ್ರಯೋಜನ:
ಅಜ್ಞಾನವು ನಾಶವಾಗಲಾಗಿ ಮೊದಲಿನಂತೆಯೇ ತಾನೇ ಪ್ರಕಾಶಿಸುತ್ತಿರುವ ಇರುವಿಕೆಯೇ ಆದ, ಭ್ರಮೆ- ನಿವಾರಣೆ ಎರಡೂ ಇಲ್ಲದ ಪರಬ್ರಹ್ಮತತ್ವವು (ನಾನೇ ಅದು ಎಂದು) ಗುರುತು ಹಿಡಿಯಲ್ಪಡುತ್ತದೆ. ದೇಹವೇ ಮೊದಲಾದ ಉಪಾಧಿಗಳನ್ನು ತೊಲಗಿಸಿದಾಗ ಆತ್ಮನೇ ಪರಮೇಶ್ವರನಾಗುತ್ತಾನೆ.
ವೇದವಾಕ್ಯವು ಈ ಪ್ರತ್ಯಭಿಜ್ಞೆಯನ್ನು ಚೆನ್ನಾಗಿ ಸಾಧಿಸುವುದಕ್ಕಾಗಿಯೇ ಸ್ಮೃತಿಗಳು, ಸಾಕ್ಷಾತ್ಕಾರ, ಪರಂಪರಾಗತ ಉಪದೇಶ ಇವೇ ಮೊದಲಾದ ಇತರ ಪ್ರಮಾಣಗಳನ್ನೂ ಕೂಡಾ ಹೇಳಿದೆ.

ಶ್ಲೋಕ - 8 - ಸಂಸ್ಕೃತದಲ್ಲಿ
ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ
ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ |
ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ

ಕನ್ನಡದಲ್ಲಿ
ಕನಸು ಎಚ್ಚರಗಳಲಿ ಮಾಯೆಯಿಂ ಮನುಜನೊಲು ಮರುಳಾಗಿ
ಕಾರ್ಯಕಾರಣ ರೂಪದಲಿ ವಸ್ತು ಒಡೆಯ ಸಂಬಂಧದಲಿ
ಶಿಷ್ಯಗುರು ಪುತ್ರ ಪಿತೃವಿನೊಲಾರು ವಿಶ್ವವನು ಕಾಂಬನೊ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ವಿವರಣೆ:
ಯಾವ ಈ ಪರಮಾತ್ಮನೇ ಜಾಗ್ರತ್ಸ್ವಪ್ನಾವಸ್ಥೆಗಳಲ್ಲಿ ಮಾಯೆಯಿಂದಾದ ಭ್ರಾಂತಿಯ ದೆಸೆಯಿಂದ ಜಗತ್ತನ್ನು ಕಾರ್ಯಕಾರಣ, ಸ್ವಾಮಿ ಭೃತ್ಯ, ಶಿಷ್ಯ ಗುರು, ತಂದೆ ಮಗ ಮುಂತಾದ ರೂಪಗಳಿಂದ ತನಗಿಂತ ಬೇರೆಯಾಗಿರುವುದೆಂದು ತಿಳಿಯುತ್ತಾನೋ ಆ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.

ವ್ಯಾಖ್ಯಾನ
ಹಿಂದೆ ಏಳು ಶ್ಲೋಕಗಳಲ್ಲಿ ವಿವರಿಸಿದ ಅರ್ಥವನ್ನೇ ಸಂಗ್ರಹಿಸಿ ಈ ಶ್ಲೋಕದಲ್ಲಿ ಹೇಳಿದೆ.
ಪ್ರಪಂಚವೆಲ್ಲವೂ ನಾನಾತ್ವದಿಂದ ಅಥವಾ ಭೇದದಿಂದ ಕೂಡಿರುವುದೇ. ಇವುಗಳಲ್ಲಿ ಮೊದಲನೆಯದು "ನಾನು, ಇದು" ತಿಳಿದವನು, ತಿಳುವಳಿಕೆಯ ವಿಷಯ ಎಂಬ ಭೇದ. ಆ ವಿಷಯದಲ್ಲಿ, ಕಾರಣ ಕಾರ್ಯ, ಆಳು ಒಡೆಯ , ಶಿಷ್ಯ ಗುರು, ತಂದೆ ಮಗ, ಇಂಥ ಅನೇಕ ಭೇದಗಳು ಕಾಣಿಸುತ್ತಿವೆ. ಈ ಭೇದಗಳು ಕಾಣುತ್ತಿರುವುದು ಅಂತಃಕರಣವು ಕೆಲಸ ಮಾಡುತ್ತಿರುವ ಎಚ್ಚರ ಕನಸುಗಳೆಂಬ ಅದರ ಅವಸ್ಥೆಗಳಲ್ಲಿ. ಈ ತೋರಿಕೆಗೆ ಕಾರಣ ಮಾಯೆಯಿಂದುಂಟಾದ ಭ್ರಮೆ. (ಸುಷುಪ್ತಿಯಲ್ಲಿ ಅಂತಃಕರಣದ ಕೆಲಸ ನಿಂತಿರುವಾಗ ಭ್ರಮೆಯೂ ಇಲ್ಲ ಭೇದ ಕಾಣುವುದೂ ಇಲ್ಲ. )
ಹೀಗೆ ಭ್ರಮೆಗೆ ಸಿಕ್ಕಿಕೊಂಡಂತಿರುವಾಗ ಭೇದಗಳನ್ನು ನೋಡುತ್ತಿರುವವನೂ ಭ್ರಮೆಗೆ ಸಿಕ್ಕದಂತಿರುವಾಗ ಯಾವುದನ್ನೂನೋಡದಿರುವವನೂ ಪರತತ್ವವಾದ ಶ್ರೀ ಗುರುಸ್ವರೂಪನಾದ ದಕ್ಷಿಣಾಮೂರ್ತಿಯೇ.
ಪ್ರಕಾಶವೊಂದರ ಹೊರತು ಬೇರೆ ಯಾವ ಪದಾರ್ಥವೂ ಇಲ್ಲದಿರುವುದಾದರೆ ತತ್ವೋಪದೇಶದವರೆಗಿನ ವ್ಯವಹಾರವೆಲ್ಲವೂ ಹೇಗೆ ನಡೆಯುವುದು?
ಬಂಧವೂ ಮೋಕ್ಷವೂ ಯಾರಿಗೆ ? ಯಾವ ಕಾರಣದಿಂದ ಬಂಧವಾಗುವುದು ? ಮಾಯೆಯ ಲಕ್ಷಣವೇನು ? ಎಂಬ ಪ್ರಶ್ನೆಗೆ ಉತ್ತರವನ್ನು ಹೇಳುವುದಕ್ಕಾಗಿಯೂ ವಿಷಯವನ್ನು ಸುಲಭವಾಗಿ ತಿಳಿದುಕೊಳ್ಳುವುದಕ್ಕಾಗಿಯೂ ಹಿಂದಿನ ಏಳು ಶ್ಲೋಕಗಳಲ್ಲಿ ಹೇಳಿದ ವಿಷಯಗಳನ್ನೇ ಸಂಕ್ಷೇಪವಾಗಿ ಪುನಃ ಇಲ್ಲಿ ವಿವರಿಸಲಾಗಿದೆ.
ಈ ವಿಷಯದಲ್ಲಿ ಮಾತಿನಿಂದಾಗಲೀ ಅರ್ಥದಿಂದಾಗಲೀ ಹೇಳಿದುದನ್ನೇ ಹೇಳುವುದು ದೋಷವಾಗುವುದಿಲ್ಲ. ಪುನಃ ಪುನಃ ಹೇಳುವುದು ವಿಷಯದ ಹಿರಿಮೆಯನ್ನು ತೋರಿಸುತ್ತದೆ.
ತಾನಾಗಿಯೇ ಪ್ರಕಾಶಿಸುವ ಇರುವಿಕೆಯೇ ಆದ ಮತ್ತು ಒಬ್ಬನೇ ಆದ ಪರಮಾತ್ಮನಲ್ಲಿ ಕಾರ್ಯಕಾರಣಸಂಬಂಧವೇ ಮೊದಲಾದ ನಾನಾ ವಿಧವಾದ ಕಲ್ಪನೆಯು (ವಾಸ್ತವವಾಗಿ ) ಬೇರೆ ಬೇರೆ ವಸ್ತುಗಳು ಕಾಣದಿರುವ `ರಾಹುವಿನ ತಲೆ´ `ಆಕಾಶದ ರಂಧ್ರ´ `ನನ್ನ ಆತ್ಮಾ ´ `ಪ್ರತಿಮೆಯ ಶರೀರ ´ ಎಂಬುವೇ ಮೊದಲಾದ ಕಲ್ಪನೆಗಳಂತೆ.
ರಾಹುವಿನ ತಲೆ ಮುಂತಾದ ವಾಕ್ಯಗಳಲ್ಲಿ ಷಷ್ಥೀ ವಿಭಕ್ತಿಯಿಂದ ಸಂಬಂಧವನ್ನು ಹೇಳಿದ್ದರೂ ವಾಸ್ತವವಾಗಿ ಇರುವುದು ಒಂದೇ ಪದಾರ್ಥ. ಪ್ರಪಂಚದಲ್ಲಿಯೂ ನಾಮರೂಪಗಳಿಂದ ಭೇದ ತೋರುತ್ತಿದ್ದರೂ ಇರುವುದು ಒಂದೇ ಪದಾರ್ಥ
ಪರಮೇಶ್ವರನು ಉಪಾಸ್ಯೋಪಾಸಕಭಾವದಿಂದಲೂ ಗುರುಶಿಷ್ಯರೆಂಬ ರೀತಿಯಲ್ಲಿಯೂ ಒಡೆಯ ಆಳು ಎಂಬುದೇ ಮುಂತಾಗಿಯೂ ತನ್ನ ಇಚ್ಚೆಯಿಂದಲೇ ವಿಹರಿಸುತ್ತಾನೆ.
ತಂದೆಗೆ ಮಗನಾದವನೇ( ತನ್ನ ),ಮಗನಿಗೆ ತಂದೆಯು, ಒಬ್ಬನೇ ನಾಮಮಾತ್ರದ ಭೇದದಿಂದ ಅನೇಕರಂತೆ ಕಲ್ಪನೆಗೆ ಗೋಚರನಾಗುತ್ತಾನೆ
ಒಬ್ಬನ ತಂದೆಯು ಮತ್ತೊಬ್ಬನ ಮಗನಾಗಿರುವುದರಿಂದ, "ತಂದೆ , ಮಗ " ಎನ್ನುವ ಶಬ್ದಗಳ ಅರ್ಥಗಳು ಬೇರೆ ಬೇರೆಯಾಗಿ ಕಂಡರೂ ಅವುಗಳು ಹೇಳುವ ವ್ಯಕ್ತಿ ಒಬ್ಬನೇ ಆಗಿರಬಹುದು.
ಆದ್ದರಿಂದ ಪರಮಾರ್ಥವಿಚಾರವನ್ನು ಮಾಡುವಾಗ ಪ್ರಕಾಶವೊಂದೇ ಇರುವುದು. ಭೇದಜ್ಞಾನವು ಸುಳ್ಳೇ, ಪರಮಾತ್ಮನಲ್ಲಿ ಮಾಯೆಯಿಂದ ಕಲ್ಪಿತವಾದದ್ದು.
ಜ್ಞಾನಾಂತರದಿಂದ ನಿವಾರಣೆಗೆ ಒಳಗಾಗುವುದೇ ಅಸತ್ಯವು, ಮಿಥ್ಯೆಯಾಗಿರುವಿಕೆ. ಚೆನ್ನಾಗಿ ಜ್ಞಾನೋದಯವಾದ ಮೇಲೆ , ಶಿಷ್ಯ , ಗುರು , ಉಪದೇಶ ಮುಂತಾದ ಎಲ್ಲ ವ್ಯವಹಾರವೂ ಕನಸಿನಂತೆ ಕಾಣುತ್ತದೆ.
ವೇದಾಂತವು ಅಸತ್ಯವಾಗಿದ್ದರೂ ದೇವರ ವಿಗ್ರಹದಂತೆ, ಚಿತ್ರದಂತೆ ಮತ್ತು ಪ್ರತಿಬಿಂಬದಂತೆ ಸತ್ಯವಾದ ವಿಷಯವನ್ನೇ ತಿಳಿಸುತ್ತದೆ.
ಮಿಥ್ಯಾ ಪ್ರಪಂಚದಲ್ಲಿ ನಡೆಯುವ ಶಾಸ್ತ್ರದಿಂದ ಉಂಟಾಗುವ ಜ್ಞಾನವು ಸತ್ಯವಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ.
ಚಿತ್ರ ಚಿತ್ರಿತವಾದ ವ್ಯಕ್ತಿ ಅಥವಾ ವಸ್ತುವಲ್ಲ , ಪ್ರತಿಬಿಂಬವು ಬಿಂಬವಾದ ವಸ್ತು ಅಥವಾ ವ್ಯಕ್ತಿಯಲ್ಲ. ಆದರೂ ಇವು ನಿರ್ದಿಷ್ಟವಾಗಿದ್ದರೆ ಇವುಗಳಿಂದ ಉಂಟಾಗುವ ವ್ಯಕ್ತಿಯನ್ನು ಅಥವಾ ವಸ್ತುವನ್ನು ಕುರಿತ ಜ್ಞಾನ ಸತ್ಯವೇ.
ಈ ವ್ಯವಹಾರವೆಲ್ಲವೂ ಕೂಡಾ ಮಾಯೆಯ (ದೆಸೆಯಿಂದುಂಟಾದ ) ತೋರುವಿಕೆಯು. ನಿದ್ದೆಯಂತಿರುವ ಮಾಯೆಯು ಆತ್ನಜ್ಞಾನದಿಂದ ನಿವಾರಿಸಲ್ಪಡುತ್ತದೆ.
ಮಾಯೆಯೆಂಬುದು ವಿಚಾರಕ್ಕೆ ಸಿಕ್ಕದಿರುವ ತೋರುವಿಕೆಯ ಹೆಸರು. ಕಾಣಿಸುವುದರಿಂದ ಅದು ಇಲ್ಲದಿರುವುದಲ್ಲ. ನಿವಾರಿಸಲ್ಪಡುವುದರಿಂದ ಇರುವುದೂ ಅಲ್ಲ
ಈ ಮಾಯೆಯು ಕರಿಯ ನೆರಳು ಬೆಳಕಿನಿಂದ ಬೇರೆಯಾದಂತೆ ಪ್ರಕಾಶದಿಂದ ಬೇರೆಯಾದದ್ದು ಅಲ್ಲ ಅಚೇತನವಾದುದರಿಂದ ಬೇರೆಯಲ್ಲದ್ದೂ ಅಲ್ಲ. (ಈ ಎರಡು ಗುಣಗಳು ಪರಸ್ಪರ ವಿರೋಧವಾದುದರಿಂದ) ಎರಡರಿಂದಲೂ ಕೂಡಿದ್ದು ಅಲ್ಲ.
ತನಗೆ ಕಾರಣವಾದ ಅವಯವಗಳಿಲ್ಲದ್ದರಿಂದ ಈ ಮಾಯೆಯನ್ನು ಅವಯವಗಳಿಂದ ಕೂಡಿರುವುದೆಂದು ಹೇಳಲಾಗುವುದಿಲ್ಲ. ತನ್ನ ಕಾರ್ಯಗಳಲ್ಲಿ ಅವಯವಗಳಿರುವುದರಿಂದ ಇದನ್ನು ಅವಯವವಿಲ್ಲದ್ದೆಂದೂ ಹೇಳಲಾಗುವುದಿಲ್ಲ.
ಅಜ್ಞಾನಾವಸ್ತೆಯಲ್ಲಿ ಮಾತ್ರ ಕಾಣುವ ಈ ಮಾಯೆಯೆಂಬ ವಿಲಾಸದಿಂದ ಕೂಡಿದ ವೇಶ್ಯೆಯು ಅಸತ್ಯವಾದ ತನ್ನ ಲೀಲೆಗಳಿಂದ ಆತ್ಮನನ್ನು ಮೋಹಗೊಳಿಸುತ್ತಾಳೆ.
(ಸಾಮಾನ್ಯವಾಗಿ ) ಯಾರೂ ಆ ಮಾಯೆಯ ಬುಡ ಕಡಿಯುವಿಕೆಯನ್ನು ಬಯಸುವುದಿಲ್ಲ ಅವರ ಮತದಲ್ಲಿ ಮನಸ್ಸಿನಿಂದ ಬಿಡುಗಡೆಯು ಹೇಗೆ ಉಂಟಾಗುವುದು?
ಎಚ್ಚರ ಕನಸು ನಿದ್ದೆಗಳೆಂಬ ಮನಸ್ಸಿನ ಮೂರು ಅವಸ್ಥೆಗಳೂ ಭೇದವೆಂಬ ಅಜ್ಞಾನಕ್ಕೆ ಮುಖ್ಯ ಕಾರಣವಾಗಿ ಚಕ್ರದಂತೆ ತಿರುಗುತ್ತವೆ.
ಮನಸ್ಸು ಆ ಭ್ರಾಂತಿಗಳಿಂದ ಕೆಲಸಗಳನ್ನು ಮಾಡುತ್ತದೆ ಮತ್ತು ಅವುಗಳಿಂದಲೇ ಕಟ್ಟಲ್ಪಡುತ್ತದೆ. ಪರಮಾತ್ಮನು ಸೂರ್ಯನಂತೆ ಮನಸ್ಸಿನ ಯ್ಸವ ಸಂಬಂಧವೂ ಇಲ್ಲದೆ ನೋಡುವವನು ಮಾತ್ರ.
ಹೇಗೆ ಸೂರ್ಯನು ಪ್ರಾಣಿಗಳ ಕರ್ಮಗಳಿಂದ ಕಟ್ಟಲ್ಪಡುವುದಿಲ್ಲವೋ ಹಾಗೆಯೇ ಸಾಕ್ಷಿಮಾತ್ರನಾಗಿರುವುದರಿಂದ ಆತ್ಮನು ಮನಸ್ಸಿನ ಕೆಲಸದಿಂದ ಕಟ್ಟಲ್ಪಡುವುದಿಲ್ಲ.
ಆತ್ಮನು ಕೆಲಸಗಳನ್ನು ಮಾಡುತ್ತಾನೆ , ಅವುಗಳಿಂದ ಬಂಧವನ್ನೂ ಬಿಡುಗಡೆಯನ್ನೂ ಹೊಂದುತ್ತಾನೆಂಬ ಕಲ್ಪನೆಯು ವ್ಯವಹಾರಕ್ಕೆ ಮಾತ್ರ ಸೇರಿದ್ದು. (ನಿಜವಾಗಿ ಇಂಥಾ ಜ್ಞಾನವು ) ಬರಿಯ ಭ್ರಾಂತಿಯೇ.
ಹೇಗೆ ಸೂರ್ಯನು ಹೊಗೆ ಮೇಘ ಧೂಳು ಮಂಜುಗಳಿಂದ ಮುಚ್ಚಲ್ಪಡದವನಾದರೂ ಮುಚ್ಚಲ್ಪಟ್ಟವನಂತೆ ಕಾಣುತ್ತಾನೋ ಆತ್ಮನೂ ಕೂಡ ಮಾಯೆಯಿಂದ ಹಾಗೆಯೇ (ಮುಚ್ಚಲ್ಪಡದೇ ಇದ್ದವನಾದರೂ ಮುಚ್ಚಲ್ಪಟ್ಟವನಂತೆ ಇರುತ್ತಾನೆ. )
ಆಟಕ್ಕಾಗಿ ತಿರುಗುತ್ತಿರುವ ಹುಡುಗನು ಪ್ರಪಂಚವನ್ನು ತಿರುಗುತ್ತಿರುವಂತೆಯೂ ಮತ್ತು ಆಕಾಶದಲ್ಲಿ ನೂರು ಚಂದ್ರರಿರುವಂತೆಯೂ ಹೇಗೆ ನೋಡುತ್ತನೆಯೋ ಹಾಗೆಯೇ ಸಂಸ್ಕಾರದ ದೆಸೆಯಿಂದ ಭ್ರಾಂತಿಗೊಳಗಾದ ಜೀವನು ಈ ಪ್ರಪಂಚವನ್ನು ಅನೇಕರೂಪವಾಗಿಯೂ ತಿರುಗುತ್ತಿರುವುದಾಗಿಯೂ ಕಾಣುತ್ತಾನೆ.
ನೀರಿನಲ್ಲಿ ಪ್ರತಿಬಿಂಬಿತವಾದ ಸೂರ್ಯನು ಹೇಗೆ ಚಲಿಸುತ್ತಿರುವಂತೆಯೂ ಅನೇಕವಾಗಿರುವಂತೆಯೂ ಕಾಣುತ್ತಾನೋ ಹಾಗೆಯೇ ಮನಸ್ಸಿನ ಸಂಪರ್ಕದಿಂದ ಪರಮೇಶ್ವರನು ಸಂಸಾರಿಯಂತೆ ಕಾಣುತ್ತಾನೆ.
ಯಾರು ಯೋಗಾಭ್ಯಾಸದಿಂದ ಮನಸ್ಸನ್ನು ವೃತ್ತಿರಹಿತವಾದದ್ದನ್ನಾಗಿ ಮಾಡುತ್ತಾನೆಯೋ ಆ ಮನುಷ್ಯನು ಲೋಕವ್ಯವಹಾರದಿಂದ ನಿವೃತ್ತನಾಗಿ ಜೀವನ್ಮುಕ್ತನಾಗುತ್ತಾನೆ.
ಶಿವನು ಮಾಯೆಯಿಂದ ಒಟ್ಟಿಗೆ ಇರುವ ಎರಡು ಪಕ್ಷಿಗಳಾದನು. ಪ್ರಕೃತಿಯನ್ನು ಅನಭವಿಸುತ್ತಾ ಒಬ್ಬನೇ ಅನೇಕರಂತೆ ಆದನು ಎಂದು ವೇದವು ಹೇಳುತ್ತಿದೆ.

ಶ್ಲೋಕ - 9 - ಸಂಸ್ಕೃತದಲ್ಲಿ
ಭೂರಂಭಾಂಸ್ಯನಲೋsನಿಲೋsಂಬರಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ |
ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋಃ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ

ಕನ್ನಡದಲ್ಲಿ
ಆವ ಮಹಿಮನ ರೂಪು ನೆಲ ಜಲ ಗಾಳಿ ಬೆಂಕಿ ಗಗನ
ರವಿ ಶಶಿ ಆತ್ಮವೆಂಬೆಂಟು ಬಗೆ ಕಾಣುವುದೊ ವಿಚಾ -
ರಿಸಲು ಪರಮವೆಲ್ಲೆಡೆಯಿರುವುದದುಳಿದು ಬೇರಿಲ್ಲವೋ ಆ
ಗುರುಮೂರ್ತಿ ಶ್ರೀ ದಕ್ಷಿಣಾಮೂರ್ತಿಗೆ ವಂದಿಪೆ

ಅರ್ಥ ವಿವರಣೆ
ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಸೂರ್ಯಚಂದ್ರರು, ಪುರುಷ (ಅಥವಾ ಚೈತನ್ಯ) ಎಂದು ಕಾಣುವ ಈ ಜಗತ್ತು (ವಿಮರ್ಶಿಸುವವರಿಗೆ ) ಯಾರ ಅಷ್ಟಮೂರ್ತಿಗಳಾಗಿಯೇ ಪ್ರಕಾಶಿಸುತ್ತದೆಯೋ ವಿಮರ್ಶಿಸುವವರಿಗೆ ಅತ್ಯಂತ ಶ್ರೇಷ್ಟನೂ ಸರ್ವವ್ಯಾಪಿಯೂ ಆದ ಯಾರಿಗಿಂತಲೂ ಬೇರೆ ಯಾವುದೂ ಕಾಣಿಸುವುದಿಲ್ಲವೋ ಆ ಶ್ರೀ ಗುರುಸ್ವರೂಪನಾದ ಶ್ರೀ ದಕ್ಷಿಣಾಮೂರ್ತಿಗೆ ನಮಸ್ಕಾರವು.

ವ್ಯಾಖ್ಯಾನ
ಹಿಂದೆ ಎಂಟನೇ ಶ್ಲೋಕದಲ್ಲಿನ ವ್ಯಾಖ್ಯಾನ ಭಾಗದಲ್ಲಿ ಮಾಯೆಯನ್ನೂ ಅದರ ಕಾರ್ಯವನ್ನೂ ನಿರೂಪಿಸಿತ್ತು. ಅಂಥ ಮಾಯೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಅಷ್ಟಾಂಗ ಯೋಗದಿಂದ ಕೂಡಿದ ಉಪಾಸನೆಯನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.
ಈ ರೀತಿಯಾದ ಮಾಯೆಯು ಹೇಗೆ ಪರಿಹಾರವಾಗುವುದೆಂದು ಕೇಳಿದವರಿಗೆ ಈಶ್ವರಧ್ಯಾನರೂಪವಾದ ಮಾಯಾ ನಿವರ್ತನೆಯ ಸಾಧನವನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.
ಮೂವತ್ತಾರು ತತ್ವಗಳ ರೂಪವಾದ ಪರಮೇಶ್ವರನ ಮೂರ್ತಿಗಳಲ್ಲಿ ಎಂಟು ಮೂರ್ತಿಗಳು ಎಲ್ಲರಿಗೂ ಪ್ರತ್ಯಕ್ಷವಾಗಿಯೇ ತಿಳಿಯುತ್ತವೆ.
ಅಳತೆಗೆ ಸಿಕ್ಕದ ವಿಷಯಗಳನ್ನು ಬೇಗನೆ ಗ್ರಹಿಸುವುದಕ್ಕೆ ಮನಸ್ಸಿಗೆ ಅಸಾಧ್ಯವೆಂಬ ಕಾರಣದಿಂದ ಸರ್ವಾತ್ಮನಾದ ಈಶ್ವರನ ಅಷ್ಟಮೂರ್ತಿರೂಪವಾದ ಧ್ಯಾನವನ್ನು ಗುರುವು ಉಪದೇಶಿಸುತ್ತಾರೆ.
ಮಹೇಶ್ವರನ ಶರೀರವಾದ ಬ್ರಹ್ಮಾಂಡದಲ್ಲಿಯೂ ಪ್ರಾಣಿಗಳ ದೇಹದಲ್ಲಿಯೂ ಕೂಡಾ ಮೂವತ್ತಾರು ತತ್ವಗಳ ಸಮೂಹವು ಎಲ್ಲ ಕಡೆಯಲ್ಲಿಯೂ ಇದ್ದೇ ಇರುತ್ತದೆ.
ವ್ಯಷ್ಟಿಸ್ವರೂಪವಾದ ಮನಸ್ಸಿನ ವ್ಯಾಪ್ತಿಯು ಈ ವ್ಯಷ್ಟಿಶರೀರದಲ್ಲಿ (ಮಾತ್ರ). ಆದ್ದರಿಂದ ಈಶ್ವರಾತ್ಮಕವಾದ ಈ ಜಗತ್ತನ್ನೇ ತನ್ನ ಶರೀರವೆಂದು ಧ್ಯಾನಮಾಡತಕ್ಕದ್ದು.
ಜೀವನು ತನ್ನ ದೇಹದಲ್ಲಿರುವ ಈಶ್ವರನ ಧ್ಯಾನದಿಂದ ವಿಶ್ವವ್ಯಾಪಕಭಾವವನ್ನು ಹೊಂದುತ್ತಾನೆ. ಈ ಅರ್ಥವನ್ನೆ ವೇದವು "ಕೂಡಿಕೊಳ್ಳುತ್ತಾನೆ" ಎಂದು ಹತ್ತು ಸಲ ಉಪದೇಶ ಮಾಡಿದೆ.
ಭೂಲೋಕವೇ ಮೊದಲಾದ ಏಳು ಲೋಕಗಳು ಬ್ರಹ್ಮಾಂಡದಲ್ಲಿವೆಯೆಂದು ಹೇಳಿದೆ. ಅವೇ (ಪಿಂಡಾಂಡದಲ್ಲಿ ಕೂಡ) ಮೂಲಾಧಾರದಿಂದ ಬ್ರಹ್ಮರಂಧ್ರದವರೆಗಿರುವ ಏಳು ಚಕ್ರಗಳಲ್ಲಿ ಇವೆ.
ಬೆನ್ನುಮೂಳೆಯು ಮಹಾಮೇರುವೆಂದೂ ಮೂಳೆಗಳು ಕುಲಪರ್ವತಗಳೆಂದೂ ಪಿಂಗಳಾನಾಡಿಯು ಗಂಗೆಯೆಂದೂ ಇಡೆಯು ಯಮುನೆಯೆಂದೂ ಹೇಳಿದೆ.
ಸುಷುಮ್ನಾನಾಡಿಯು ಸರಸ್ವತಿಯೆಂದು ಹೇಳಿದೆ. ಇತರ ನಾಡಿಗಳು ಪುಣ್ಯನದಿಗಳೂ, ಏಳು ಧಾತುಗಳು (ಚರ್ಮ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜಾ, ಶುಕ್ರಗಳು) ದ್ವೀಪಗಳೂ, ಬೆವರು, ಕಣ್ಣೀರು ಮೊದಲಾದುವು ಸಮುದ್ರಗಳೂ ಆಗುತ್ತವೆ.
ಮೂಲಾಧಾರದಲ್ಲಿ ಕಾಲಾಗ್ನಿಯೂ ಅಸ್ಥಿಮಧ್ಯದಲ್ಲಿ ಬಡವಾಗ್ನಿಯೂ ಸುಷುಮ್ನಾನಾಡಿಯಲ್ಲಿ ವೈದ್ಯುತಾಗ್ನಿಯೂ ನಾಭಿಪ್ರದೇಶದಲ್ಲಿ ಪಾರ್ಥಿವಾಗ್ನಿಯೂ ಇರುತ್ತದೆ.
ಹೃದಯದಲ್ಲಿ ಸೂರ್ಯಾಗ್ನಿಯೂ ಕಪಾಲದಲ್ಲಿ ಚಂದ್ರಮಂಡಲವೂ ಇವೆ. ಕಣ್ಣೇ ಮೊದಲಾದ ಇಂದ್ರಿಯಗಳು ಇತರ ನಕ್ಷತ್ರಗಳೆಂದು ಹೇಳುತ್ತಾರೆ.
ಪ್ರವಹಣವೇ ಮೊದಲಾದ ವಾಯುಗಳಿಂದ ಲೋಕಗಳು ಹೇಗೆ ಧರಿಸಲ್ಪಟ್ಟಿವೆಯೋ ಹಾಗೆಯೇ ಪ್ರಾಣ ಮೊದಲಾದ ಹತ್ತು ಬಗೆಯ ವಾಯುಗಳಿಂದ ದೇಹವು ಧರಿಸಲ್ಪಟ್ಟಿದೆ.
ಪ್ರಾಣವು ಚಂದ್ರನಾಗಿ ಎಂಟು ಅಂಗುಲದಿಂದ ನಾಡಿಗಳ ಒಳಹೊಕ್ಕು ಸೂರ್ಯರೂಪದಿಂದ ಮೂಲಾಧಾರದಿಂದ ಇಡಾಪಿಂಗಳಗಳನ್ನು ಪ್ರವೇಶಿಸಿ ಮೂಗಿನಿಂದ ಹೊರಗೆ ಹೋಗಿ ಹನ್ನೆರಡು ಅಂಗುಲದಲ್ಲಿ ಲಯವಾಗುತ್ತದೆ.
ಅಪಾನವು ಮಲ ಮೂತ್ರ ವಾಯು ರೇತಸ್ಸುಗಳನ್ನು (ದೇಹದಿಂದ) ಹೊರಗೆ ಹಾಕುತ್ತದೆ.
ಉದಾನವು ಚಂದ್ರಾಗ್ನಿಗಳ ಒಂದಾದ ರೂಪವುಳ್ಳದ್ದಾಗಿ ಸುಷುಮ್ನಾನಾಡಿಯನ್ನು ಸೇರಿ ಬ್ರಹ್ಮರಂಧ್ರದವರೆಗೆ ಮೇಲೆ ಹೋಗುತ್ತಾ ತಾನಾಗಿಯೇ ಬೆಳೆಯುತ್ತದೆ.
ವ್ಯಾನವು ತಿಂದ ಆಹಾರದ ಸಾರವನ್ನು ದೇಹದಲ್ಲಿ ವ್ಯಾಪಿಸುವಂತೆಯೂ ಸಮಾನವು ದೇಹಾಗ್ನಿಯ ಉದ್ದೀಪನವನ್ನೂ ಯಾವಾಗಲೂ ಮಾಡುತ್ತದೆ.
ನಾಗವು ಬಿಕ್ಕಳಿಕೆಯನ್ನೂ ಕೂರ್ಮವು ಕಣ್ಣು ಮುಚ್ಚುವುದು ತೆರೆಯುವುದನ್ನೂ ಕೃಕರವು ಸೀನುವುದನ್ನೂ ದೇವದತ್ತವು ಆಕಳಿಕೆಯನ್ನೂ ಉಂಟುಮಾಡುತ್ತದೆ.
ಧನಂಜಯವು ದಪ್ಪವಾಗುವುದನ್ನು ಮಾಡುತ್ತದೆ. ಇದು ಸತ್ತವನನ್ನೂ ಬಿಡುವುದಿಲ್ಲ.
ಆಕಾಶವು (ದೇಹದ) ಹೊರಗೂ ಒಳಗೂ ಅವಕಾಶವನ್ನ (ಸ್ಥಳವನ್ನು) ಕೊಡುತ್ತದೆ.
ಕಾಲನಿಯಾಮಕರಾದ ಚಂದ್ರಸೂರ್ಯರು ದೇಹಿಗಳ ಪ್ರಾಣಾಪಾನಗಳು. ಈಶ್ವರನೇ ಸಾಕ್ಷಿಯಾದ ಜೀವನು. ಹೀಗೆ ಈ ಶರೀರವು ಅಷ್ಟಮೂರ್ತಿಗಳಿಂದ ಕೂಡಿದ್ದು.
ಹೀಗೆ ಮನಸ್ಸಿನಿಂದ ಕೂಡಿದ ಧ್ಯಾನವನ್ನು ಅಷ್ಟಾಂಗಯೋಗದಿಂದ ಕೂಡಿದವನಾಗಿ ಅಭ್ಯಾಸ ಮಾಡುವ ಯೋಗಿಯಾದವನು ಮನಸ್ಸನ್ನು ಮೀರಿದ ಪದವನ್ನು ಹೊಂದುತ್ತಾನೆ.
ಮನಸ್ಸಿನಿಂದ ಸಾಧಿಸಬಹುದಾದ ಮನಸ್ಸಿನ ಸ್ವಚ್ಛತೆ, ತೃಪ್ತಿ, ಮೌನ, ಇಂದ್ರಿಯನಿಗ್ರಹ, ದಯೆ, ದಾಕ್ಷಿಣ್ಯ, ನಂಬಿಕೆ, ಋಜುತ್ವ, ಮೃದುತ್ವ, ಸಹಿಷ್ಣುತೆ, ಶುದ್ಧವಾದ ಭಾವನೆಗಳಿಂದ ಕೂಡಿರುವುದು, ಅಹಿಂಸೆ, ಬ್ರಹ್ಮಚರ್ಯ, ಸ್ಮರಣೆ ಮತ್ತು ಧೈರ್ಯ - ಇವೇ ಮೊದಲಾದ ಮಾನಸಿಕ ಸಾಧನೆಗಳಿಗೆ ಯಮಗಳೆಂದು ಹೇಳಿದೆ.
ದೇಹದಿಂದ ಸಾಧಿಸಬಹುದಾದ ಸ್ನಾನ, ಶುಚಿತ್ವ, ಪೂಜೆ, ಸತ್ಯ, ಜಪ , ಹೋಮ, ತರ್ಪಣ, ತಪಸ್ಸು, ದಾನ, ದ್ವಂದ್ವಗಳನ್ನು ಸಹಿಸಿಕೊಳ್ಳುವುದು, ನಮಸ್ಕಾರ, ಪ್ರದಕ್ಷಿಣೆ, ವ್ರತ, ಉಪವಾಸವೇ ಮೊದಲಾದ ಇತರ ಸಾಧನೆಗಳಿಗೆ ನಿಯಮಗಳೆಂದು ಹೇಳುತ್ತಾರೆ.
ಸ್ವಸ್ತಿಕ, ಗೋಮುಖ, ಪದ್ಮ, ಹಂಸವೆಂಬ ಆಸನಗಳು ಬ್ರಾಹ್ಮ ; ನೃಸಿಂಹ, ಗಾರುಡ, ಕೂರ್ಮ, ನಾಗವೆಂಬ ಆಸನಗಳು ವೈಷ್ಣವ; ವೀರ, ಮಯೂರ, ವಜ್ರ, ಸಿದ್ಧಾಸನಗಳು ರೌದ್ರ ; ಯೋನ್ಯಾಸನವು ಶಾಕ್ತ ಮತ್ತು ಪಶ್ಚಿಮತಾನಕಾಸನವು ಶೈವವೆಂದು ತಿಳಿದಿದ್ದಾರೆ.
ನಿರಲಾಂಬನಯೋಗಕ್ಕೆ ಆಲಂಬನವಿಲ್ಲದಿದ್ದುದೇ ಆಸನ. ಆಲಂಬನರಹಿತವಾದುದೆಂದೇ ಧ್ಯಾನ. ಆಲಂಬರಹಿತನಾದವನು ಸದಾಶಿವನೇ - ಪರಬ್ರಹ್ಮನೇ.
ರೇಚಕ ಪೂರಕ ಕುಂಭಕಗಳು ಪ್ರಾಣಾಯಾಮಗಳು.
ವಿಷಯಗಳ ದೆಸೆಯಿಂದ ಎಲ್ಲ ಇಂದ್ರಿಯಗಳನ್ನೂ ತಡೆಯುವುದು ಪ್ರತ್ಯಾಹಾರವೆಂದು ಪ್ರತ್ಯಾಹಾರದ ಅರ್ಥ.
ಯಾವುದಾದರೂ ಒಂದು ವಿಷಯದಲ್ಲಿ ಮನಸ್ಸನ್ನು (ನಿಶ್ಚಲವಾಗಿ) ನಿಲ್ಲಿಸುವುದಕ್ಕೆ ಧಾರಣೆ ಎಂದು ಹೇಳುತ್ತಾರೆ.
ಬ್ರಹ್ಮ ವಿಷ್ಣು ಮಹೇಶ್ವರಾದಿಗಳ ವಿಷಯವಾದ ಯೋಚನೆಯು ಧ್ಯಾನವೆಂದು ಹೇಳಲ್ಪಟ್ಟಿದೆ.
ಧ್ಯಾನದಿಂದ ಬುದ್ಧಿಯು ಕದಲದೇ ನಿಂತಿರುವುದಕ್ಕೆ ಸಮಾಧಿ ಎಂದು ಹೆಸರು. ಎಲ್ಲ ಮನೋವ್ಯಾಪಾರವನ್ನೂ ಬಿಡುವುದು ಅಮನಸ್ಕಸಮಾಧಿಯು.
ಮನಸ್ಸು ಸ್ಥಿರವಾದರೆ ಪ್ರಾಣವೂ ನಿಶ್ಚಲವಾಗುತ್ತದೆ. ಮನಸ್ಸಿನ ಸ್ಥೈರ್ಯ (ವನ್ನು ಹೊಂದುವುದ) ಕ್ಕಾಗಿ ಧ್ಯಾನದಿಂದ ಕೂಡಿದ ಯೋಗವನ್ನು ಅಭ್ಯಾಸ ಮಾಡತಕ್ಕದ್ದು.
ಅಪಾನವನ್ನು ಕಿರಿದಾಗಿಸುವುದೂ ಪ್ರಾಣವನ್ನು ತಡೆಯುವುದೂ ನಾಲಗೆಯನ್ನು ಕಿರುನಾಲಗೆಯ ಮೇಲೆ ಇರಿಸುವುದೂ ಇವು ಯೋಗಕ್ಕೆ ಸಾಧನೆಗಳು.
ಮನಸ್ಸು ಸ್ಥಿರತ್ವವನ್ನು ಹೊಂದಲಾಗಿ ಪ್ರಾಣವು ಮಧ್ಯಮಾರ್ಗವನ್ನು ಸೇರಲಾಗಿ ಪಂಚಭೂತಗಳ ಜಯದಿಂದ ಬೇರೆಬೇರೆಯಾಗಿ ಈ ಲಕ್ಷಣಗಳು ಕಾಣುತ್ತವೆ.
ಮಲಮೂತ್ರಕಫಗಳು ಸ್ವಲ್ಪವಾಗಿರುವುದು, ಆರೋಗ್ಯ, ಶರೀರ ಹಗುರವಾಗಿ ಒಳ್ಳೆಯ ವಾಸನೆಯಿಂದಲೂ ಚಿನ್ನದ ಬಣ್ಣದಿಂದಲೂ ಕೂಡಿರುವುದು (ಇವು) ಯೋಗದ ಮೊದಲನೆಯ ಲಕ್ಷಣ.
ಮುಳ್ಳಿನ ಮೊನೆಯಲ್ಲಿ ಸಿಕ್ಕಿಕೊಳ್ಳದಿರುವುದು ನೀರು ಕೆಸರುಗಳಲ್ಲಿ ಮುಳುಗದಿರುವುದು ಹಸಿವು ಬಾಯಾರಿಕೆಗಳನ್ನು ಸಹಿಸಿಕೊಳ್ಳುವುದು - ಇವು ಯೋಗದ ಎರಡನೇ ಲಕ್ಷಣ.
ಹೆಚ್ಚಾಗಿ ಅನ್ನಪಾನಗಳನ್ನು ಸೇವಿಸುವುದು, ಬಿಸಿಲು ಬೆಂಕಿಗಳನ್ನು ಸಹಿಸುವುದು, ದೂರದಿಂದ ನೋಡುವುದೂ ಕೇಳುವುದೂ ಯೋಗದ ಮೂರನೇ ಲಕ್ಷಣ.
ನೆಲದ ಮೇಲೆ ಕಪ್ಪೆಯಂತೆ ಹಾರುವುದು, ಮರದ ಮೇಲೆ ಮಂಗನಂತೆ ನೆಗೆಯುವುದು, ಆಕಾಶದಲ್ಲಿ ಹೋಗುವುದು ಇವು ಯೋಗದ ನಾಲ್ಕನೆಯ ಲಕ್ಷಣ.
ತ್ರಿಕಾಲವಿಷಯಕವಾದ ಜ್ಞಾನವೂ ಅಣಿಮಾದಿ ಸಿದ್ದಿಗಳೂ ಅನಂತವಾದ ಶಕ್ತಿಯನ್ನು ಹೊಂದಿರುವುದೂ ಯೋಗದ ಐದನೇ ಲಕ್ಷಣಗಳು.
ಪ್ರಾಣವು ಸುಷುಮ್ನಾನಾಡಿಯನ್ನು ಸೇರಿದಾಗ ಒಳಗೆ ಘಂಟೆ ,ಭೇರಿ , ಶಂಖ, ಸಮುದ್ರ , ವೀಣೆ, ಕೊಳಲು, ತಾಳ ಇತ್ಯಾದಿಗಳಂತೆ ಎಂಟು ಬಗೆಯಾದ ನಾದವು ಕೇಳುತ್ತದೆ.
ಪ್ರಾಣವು ಬ್ರಹ್ಮ (ಸುಷುಮ್ನಾ ) ನಾಡಿಯನ್ನು ಸೇರಿದಾಗ ಅಗ್ನಿ, ಮಿಂಚು, ನಕ್ಷತ್ರ , ಚಂದ್ರ, ಸೂರ್ಯರಂತೆ ಹೊಳೆಯುವ (ಈಶ್ವರನ) ಬಿಂಬರೂಪವು ಗೋಚರವಾಗುತ್ತದೆ.
ಪ್ರತಿದಿವಸವೂ ಮನುಷ್ಯನ ಶ್ವಾಸಗಳು ಎಷ್ಟು ನಡೆಯುತ್ತವೆಯೋ ಪ್ರತಿ ಶ್ವಾಸದಲ್ಲಿಯೂ ಸೂರ್ಯನು ಅಷ್ಟೇ ಯೋಜನಗಳನ್ನು ಓಡುತ್ತಾನೆ.
ಆತ್ಮನು ಪ್ರತಿದಿನವೂ ಉಸಿರಿನ ಸಂಖ್ಯೆಯಾದ ಇಪ್ಪತ್ತೊಂದು ಸಾವಿರದ ಆರುನೂರು ಸಲ ("ಸೋsಹಂ") ಅವನು ನಾನು ಎಂಬ ಮಂತ್ರವನ್ನು ಉಚ್ಚರಿಸುತ್ತಾನೆ.
ಸಕಾರಹಕಾರಗಳನ್ನು ಲೋಪಮಾಡಿ ಪೂರ್ವರೂಪ ಸಂಧಿಯನ್ನು ಕೂಡಿಸಿದಾಗ (ಸೋsಹಂ ಎಂಬ ),ಇದು ಪ್ರಣವವಾಗುತ್ತದೆ.
ಅಕಾರ ಉಕಾರ ಮಕಾರ ಬಿಂದುನಾದಗಳೆಂಬ ಐದು ಅಕ್ಷರಗಳು ಪ್ರಣವದಲ್ಲಿವೆಯೆಂದು ಪಂಡಿತರು ಹೇಳುತ್ತಾರೆ.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರುಗಳು ಮೂವತ್ತಾರು ತತ್ವಗಳೊಡಗೂಡಿಕೊಂಡು ಆ ಐದು ಅಕ್ಷರಗಳಲ್ಲಿ ಇರುತ್ತಾರೆ.
ಗುರುಪ್ರಸಾದದಿಂದ ಅಷ್ಟಾಂಗಯೋಗವನ್ನೂ ಈಶ್ವರಾನುಗ್ರಹದಿಂದ ಶಾಶ್ವತವಾದ ಯೋಗಸಿದ್ಧಿಯನ್ನೂ ಪಡೆಯುತ್ತಾನೆ.
ಸಚ್ಚಿದಾನಂದಸ್ವರೂಪನಾದ, ಬಿಂದುನಾದಗಳ ಅಂತರಾತ್ಮನಾದ ಆದಿಮಧ್ಯಾಂತ ರಹಿತನಾದ ಗುರುಗಳ ಗುರುವಿಗೆ ನಮಸ್ಕಾರವು.
(ವಿ.ಸೂ. ಅಷ್ಟಾಂಗ ಯೋಗವನ್ನು ಇಲ್ಲಿ ಸಂಗ್ರಹವಾಗಿ ಪ್ರಸ್ತುತ ಪಡಿಸಿದ್ದರೂ ಅದನ್ನು ಅಭ್ಯಾಸ ಮಾಡಬಯಸುವವರು ಅದರಲ್ಲಿ ನಿಷ್ಣಾತರಾದ ಗುರುಗಳಿಂದಲೇ ಕಲಿಯಬೇಕು. ಗ್ರಂಥಗಳಿಂದ ತಿಳಿದು ಅಭ್ಯಾಸದಲ್ಲಿ ತೊಡಗುವುದು ಅಪಾಯಕರ ಎಂಬುದು ಅನುಭವಸಿದ್ಧವಾದ ಸಾಂಪ್ರದಾಯಿಕ ತಿಳಿವಳಿಕೆ.)

ಶ್ಲೋಕ - 10 - ಸಂಸ್ಕೃತದಲ್ಲಿ:
ಸರ್ವಾತ್ಮತ್ತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ
ತೇನಾಸ್ಯ ಶ್ರವಣಾತ್ತದರ್ಥಮನನಾ ಧ್ಯಾನಾಚ್ಚ ಸಂಕೀರ್ತನಾತ್
ಸರ್ವಾತ್ಮತ್ವ ಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಮ್

ಕನ್ನಡದಲ್ಲಿ
ಉತ್ತಮವಹೀ ಸ್ತವದಿ ಸರ್ವಾತ್ಮತತ್ತ್ವ ನಿಚ್ಚಳವಿರಲು
ಚಿತ್ತೈಸಿ ಕೇಳ್ದು ಅರ್ಥವ ನೆನೆದು ಧ್ಯಾನಿಸುತ ಕೀರ್ತಿಸುವ
ಸತ್ಪುರುಷರಿಗೆ ಪರತತ್ತ್ವದ ಮಹಿಮೆಗೂಡಿದೈಶ್ವರ್ಯ
ನಿತ್ಯವಹ ಅಣಿಮಾದಿ ಸಿದ್ಧಿಗಳು ಲಭಿಸುವುದು ನಿಶ್ಚಯವು.

ಅರ್ಥ ವಿವರಣೆ
ಈ ಸ್ತೋತ್ರದಲ್ಲಿ ( ಜೀವನ ) ಸರ್ವಾತ್ಮತ್ವವೆಂಬ ತತ್ವವನ್ನು ಸ್ಪಷ್ಟವಾಗಿ ಹೇಳಿರುವ ಕಾರಣದಿಂದ ಇದರ ಕೇಳುವುದರಿಂದಲೂ ಅರ್ಥಾನುಸಂಧಾನದಿಂದಲೂ, ಧ್ಯಾನದಿಂದಲೂ , ಕೀರ್ತನೆಯಿಂದಲೂ ಸರ್ವಾತ್ಮತ್ವವೆಂಬ ಮಹಾ ವಿಭೂತಿಯಿಂದ ಕೂಡಿದ ಪರಮೇಶ್ವರ ಭಾವವು ತಾನಾಗಿಯೇ ಆವಿರ್ಭವ್ಸುತ್ತದೆ ಮತ್ತು ( ಅಣಿಮಾದಿಗಳಾಗಿ ) ಎಂಟು ಬಗೆಯಾದ ಐಶ್ವರ್ಯವೂ ಕೂಡಾ ಸಿದ್ಧಿಸುತ್ತದೆ.

ಫಲಶ್ರುತಿ
ಸಹಜವಲ್ಲದ ಸಂಕುಚಿತವಾದ ಅಹಂಭಾವವನ್ನು ಬಿಟ್ಟು ಎಲ್ಲವೂ ನಾನೇ ಎಂಬ ಭಾವವನ್ನು ಹೊಂದುವುದೇ ಈ ಸ್ತೋತ್ರದ ಫಲವೆಂದು ಹೇಳಲ್ಪಟ್ಟಿದೆ.
ಸ್ವರ್ಗಪಾತಾಳಮರ್ತ್ಯಗಳಲ್ಲಿ ಮಕ್ಕಳು, ಮೊಮ್ಮಕ್ಕಳು, ಮನೆ, ಹೊಲ, ಹಣ, ದವಸ ಇವುಗಳಿಂದ ತುಂಬಿದ ಇಲ್ಲಿನ ಸುಖಗಳೂ ಸಿದ್ಧಿಸುತ್ತವೆ.
ಅಡಿಗೆ ಮಾಡುವಾಗ ಛಳಿ ಹೋಗುವಂತೆ ಈ ಸ್ತೋತ್ರದಿಂದ (ಆತ್ಮ ಸ್ವರೂಪವನ್ನು ತಿಳಿಯುವಾಗ) ಅನುದ್ದಿಷ್ಟವಾದ ಫಲಗಳೂ ಸಿಕ್ಕುತ್ತವೆ. .
ಐಶ್ವರ್ಯವೆಂಬುದು ಈಶ್ವರನ ಭಾವವೇ ಹೊರತು (ಈಶ್ವರನಿಂದ ) ಬೇರೆಯಾದ ಇರುವಿಕೆಯು ಅದಕ್ಕಿಲ್ಲ.
ಮನುಷ್ಯನು ಓಡುತ್ತಿರುವಾಗ ಅವನ ನೆರಳು ಅವನನ್ನು ಹಿಂಬಾಲಿಸಿಯೇ ಇರುವುದು.
ಅನಂತಶಕ್ತಿಯೇ ಈಶ್ವರತ್ವವು. ಅಣಿಮಾದಿಗಳು (ಅದರಿಂದ ಉದುರುವ ಅದರ) ಕಣಗಳು, ಆದ್ದರಿಂದ ಜೀವನ ಈಶ್ವರತ್ವವು ಸಿದ್ಧಿಯಾದಾಗ ಇವೂ ತಾವಾಗಿಯೇ (ಬೇರೆ ಯತ್ನವಿಲ್ಲದೆಯೇ) ಸಿದ್ಧಿಸುತ್ತವೆ.
ಯಾರ ಶಕ್ತಿಯ ಕಣಗಳಿಂದ ಬ್ರಹ್ಮ ವಿಷ್ಣು ಶಿವಾದಿಗಳು ಶಕ್ತಿವಂತರಾಗಿ (ಜಗತ್ತನ್ನು ) ಆಳುತ್ತಾರೋ ಆ ಸದಾಶಿವನೇ ಆತ್ಮನು.
ಹೂವ ತರುವವನಿಗೆ (ತನ್ನ) ಇಚ್ಛೆಯಿಲ್ಲದಿದ್ದರೂ (ಅದರ) ವಾಸನೆಯು ಹೇಗೆ ಸಿಗುತ್ತದೋ ಹಾಗೇ ಪೂರ್ಣಾಹಂಭಾವದಿಂದ ಕೂಡಿದವನಿಗೆ ಸಣ್ಣದಾದ ಐಶ್ವರ್ಯಗಳೂ (ಪ್ರಾಸಂಗಿಕವಾಗಿ ) ಸಿಗುತ್ತದೆ.
ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವವೆಂಬುವು ಎಂಟು ಸಿದ್ಧಿಗಳು.
ಸರ್ವವ್ಯಾಪಿಯಾದ ಪರಮೇಶ್ವರನು ಅತ್ಯಂತ ಸೂಕ್ಷ್ಮವಾದ ಪ್ರಾಣಿಗಳಲ್ಲಿ ಕೂಡಾ ಅವುಗಳ ಆತ್ಮವಾಗಿ ಪ್ರವೇಶಿಸುವುದು ಅಣಿಮಾ ಎಂಬ ಶಕ್ತಿಯು.
ಬ್ರಹ್ಮಾಂಡದಿಂದ ಶಿವತತ್ವದವರೆಗಿನ ಮೂವತ್ತಾರು ತತ್ವಗಳನ್ನು ಒಳಗೊಂಡು ಅವುಗಳ ಹೊರಗೂ ವ್ಯಾಪ್ತವಾಗಿರುವುದು ಮಹಿಮ ಎಂಬ ಶಕ್ತಿಯು.
ಮಹಾಮೇರುವಿಗೆ ಸಮಾನವಾದ ದೇಹವುಳ್ಳವನನ್ನು ಎತ್ತುವಾಗ ಹತ್ತಿಯಂತೆ ಹಗುರವಾಗಿರುವ ಶಕ್ತಿಯನ್ನು ಲಘಿಮಾ ಎಂದು ಪಂಡಿತರು ತಿಳಿಸುತ್ತಾರೆ.
ಪರಮಾಣುವಿಗೆ ಸಮಾನವಾದ ದೇಹವುಳ್ಳವನನ್ನು ಎತ್ತುವಾಗ ಮೇರುವಿನಂತೆ ಭಾರವಾಗಿರುವ ಶಕ್ತಿಯನ್ನು ಗರಿಮಾ ಎಂದು ಹೇಳುತ್ತಾರೆ.
ಪಾತಾಳದಲ್ಲಿರುವ ಮನುಷ್ಯನು ಬ್ರಹ್ಮಲೋಕವನ್ನು ನೋಡುವ ಪ್ರಾಪ್ತಿಯೆಂಬ ಮಹಾಶಕ್ತಿಯು ಯೋಗಿಗಳಲ್ಲದವರಿಂದ ಹೊಂದಲಸಾಧ್ಯವಾದುದು.
ತನ್ನ ಇಚ್ಛೆಯೊಂದರಿಂದಲೇ ಆಕಾಶಗಮನವೇ ಮೊದಲಾದ ಸಿದ್ಧಿ ಸಂಪತ್ತುಗಳ ಸಿದ್ಧಿಯು ಪ್ರಾಕಾಮ್ಯವೆಂದು ಕರೆಯಲ್ಪಡುತ್ತದೆ.
ಕೆಲವರು ತನ್ನ ಶರೀರದ ಬೆಳಕಿನಿಂದ ಎಲ್ಲ ವಿಷಯಗಳನ್ನೂ ಬೆಳಗುವ ಶಕ್ತಿಯನ್ನು ಪ್ರಾಕಾಶ್ಯವೆಂದು (ಪ್ರಾಕಾಮ್ಯದ ಬದಲು) ಹೇಳುತ್ತಾರೆ.
ತನ್ನಿಚ್ಛೆಯೊಂದರಿಂದಲೇ ಸೃಷ್ಟಿಸ್ಥಿತಿನಾಶಗಳನ್ನು ಮಾಡುವುದೂ ಸೂರ್ಯನೇ ಮೊದಲಾದವರ (ಮೇಲೆ) ಪ್ರಭುತ್ವವೂ ಈಶಿತ್ವವೆಂದು ಕರೆಯಲ್ಪಟ್ಟಿದೆ.
ಲೋಕಪಾಲಕರೊಡನೆ ಎಲ್ಲ ಲೋಕಗಳೂ ತನ್ನ ವಶದಲ್ಲಿರುವುದು ವಶಿತ್ವವೆಂಬ ಶಕ್ತಿಯು. ಅದು ಶಿವಯೋಗಿಗಳಿಗೆ ಸುಖವಾಗಿ ಸಿಗುವುದು.
ಇದನ್ನರಿತ ಬ್ರಹ್ಮಜ್ಞಾನಿಯ ವಶದಲ್ಲಿ ದೇವತೆಗಳು ಇರುತ್ತಾರೆ (ಎಂದ ಮೇಲೆ) ರಾಜರು , ಹುಲಿಗಳು, ಹಾವುಗಳು, ಸ್ತ್ರೀ ಪುರುಷರು ಮುಂತಾದವರ ಮಾತೇನು?
ಸರ್ವಾತ್ಮಭಾವದ ಸಾಮ್ರಾಜ್ಯವು ಅವಿಚ್ಛಿನ್ನವಾಗಿ ನಡೆಯುತ್ತಿರುವ ಮನಸ್ಸುಳ್ಳ ಸಮಾಧಿಯಲ್ಲಿ ಸಿದ್ಧಿಯನ್ನು ಪಡೆದವರಿಗೆ ಯಾವುದು ತಾನೇ ಸಿದ್ಧಿಸುವುದಿಲ್ಲ?
ಸ್ವರ್ಗಾದಿಗಳಿಂದುಂಟಾಗುವ ಇಲ್ಲಿನ ಫಲಗಳಲ್ಲಿ ಆಸೆಯನ್ನು ಬಿಟ್ಟು ಬುದ್ಧಿವಂತನು ಈ ಸ್ತೋತ್ರವನ್ನು ಓದತಕ್ಕದ್ದು ಮತ್ತು ತಾನೇ ಸರ್ವಾತ್ಮನೆಂದು ಧ್ಯಾನ ಮಾಡತಕ್ಕದ್ದು.
ಪಂಡಿತನು ಸ್ವರ್ಗಾದಿರಾಜ್ಯಗಳನ್ನು ಸಾಮ್ರಾಜ್ಯವೆಂದು ತಿಳಿಯುವುದೇ ಇಲ್ಲ. ತನ್ನಲ್ಲಿಯೇ (ಸರ್ವಾತ್ಮ ಭಾವನೆಯಿಂದ) ರಮಿಸುವುದೇ ಅವನ ಸಾಮ್ರಾಜ್ಯವು.
ಸರ್ವಾತ್ಮಭಾವನೆಯುಳ್ಳವನನ್ನು ಎಲ್ಲ ಸಿದ್ಧಿಗಳೂ ಸೇವಿಸುತ್ತವೆ. ಆದ್ದರಿಂದ ಮನಸ್ಸನ್ನು ನಿಗ್ರಹಿಸಿ ತನ್ನಲ್ಲಿಯೇ ಸಾಮ್ರಾಜ್ಯವನ್ನು ಮಾಡಬೇಕು.
ಯಾರಿಗೆ ಈಶ್ವರನಲ್ಲಿ ನಿರತಿಶಯವಾದ ಭಕ್ತಿಯೋ, ದೇವರಲ್ಲಿ ಹೇಗೋ ಗುರುವಿನಲ್ಲಿಯೂ ಹಾಗೆಯೇ (ಇರುತ್ತದೆಯೋ ) ಅಂಥಾ ಮಹಾತ್ಮನಿಗೆ ಈ ಹೇಳಿದ ಅರ್ಥಗಳು ಹೊಳೆಯುತ್ತವೆ.
ಪ್ರಕಾಶರೂಪವಾದ (ತನ್ನ) ಶಕ್ತಿಯಿಂದ ಎಲ್ಲ ಬೆಳಕುಗಳಿಗೂ ಬೆಳಕನ್ನು ಕೊಟ್ಟು ವಿಶ್ವವನ್ನೇ ಬೆಳಗುವ ಈ ಪ್ರಕಾಶವು (ತನ್ನಲ್ಲಿಯೇ ) ಪ್ರಕಾಶಿಸಲಿ. ಇವೆಲ್ಲಕ್ಕಿಂತ ಮುಖ್ಯವಾದ ಫಲವೆಂದರೆ ಸದಾಶಿವ - ಬ್ರಹ್ಮ - ಸ್ವರೂಪವಾದ ಆತ್ಮದ ಸಾಕ್ಷಾತ್ಕಾರ. ಉಳಿದದ್ದೆಲ್ಲಾ ಪ್ರಾಸಂಗಿಕ, ಮುಖ್ಯವಲ್ಲ.
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ।
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ।।
ಓಂ ಶಾಂತಿ ಶಾಂತಿ ಶಾಂತಿಃ

ಓಂ ಶ್ರೀ ಗುರುವೇ ನಮಃ.

ಹರಿಃ ಓಂ। ತತ್ಸತು ಬ್ರಹ್ಮಾರ್ಪಣಮಸ್ತು

ಲೇಖನದ ಮೂಲಗಳು:

1. ಟೀಚಿಂಗ್ಸ್ ಆಫ್ ಸ್ವಾಮಿ ತದಾತ್ಮಾನಂದ ಸರಸ್ವತಿ - ಎಂ.ಡಿ.ಭೀಸೆ - ಆಯ್ದಭಾಗಗಳುನ್ನು ಕನ್ನಡಕ್ಕೆ ಭಾಷಾಂತರಿಸಿದವರು ಗುರುಪ್ರಸಾದ್ ಹಾಲ್ಕುರಿಕೆ.
2. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮತ್ತು ಮಾನಸೋಲ್ಲಾಸ - ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು
3. ಸವಿಗನ್ನಡ ಸ್ತೋತ್ರಚಂದ್ರಿಕೆ - ಪ್ರಕಟಿಸಿದವರು ಕನ್ನಡ ಸ್ತೋತ್ರ ಚಂದ್ರ ಬಳಗ, ಬೆಂಗಳೂರು.

No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...