ಗಣೇಶ ಪಂಚರತ್ನ ಸ್ತೋತ್ರ
ಶ್ಲೋಕ - 1 - ಸಂಸ್ಕೃತದಲ್ಲಿ:
ಮುದಾ ಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಕಂ ವಿಲಾಸಲೋಕರಕ್ಷಕಮ್ ।
ಅನಾಯಾಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್
|
ಕನ್ನಡದಲ್ಲಿ :
ಮುದದಿ ಕಡುಬನೆತ್ತಿದಾತ ನಿತ್ಯ
ಮುಕ್ತಿದಾಯಕ
ಪೆರೆಯ ಶಿರದಿ ಧರಿಸಿ ಜಗವ ಲೀಲೆಯಿಂದ
ರಕ್ಷಿಪ
ಮೊರೆಯನಿಡುವ ದೀನರೊಡೆಯ ಗಜಾಸುರನ
ಸೀಳಿದ
ಶರಣರಶುಭ ನಾಶಕನನು ವಂದಿಪೆನು ಗಣೇಶ
ನ
|
ವಿವರಣೆ :
ಹಸ್ತದಲ್ಲಿ ಮೋದಕವನ್ನು ಹಿಡಿದಿರುವ, ಮುಕ್ತಿಯನ್ನು ದಯಪಾಲಿಸುವ, ತನ್ನ ಶಿರದಲ್ಲಿ
ಅರ್ಧ ಚಂದ್ರನನ್ನು ಧರಿಸಿರುವ, ವೈವಿಧ್ಯತೆಯ ಪ್ರಪಂಚವನ್ನು ಸಂರಕ್ಷಿಸುವ,
ನಾಯಕರಿಲ್ಲದ ದೀನರಿಗೆ ನಾಯಕನು, ಅಸುರರ ಸಂಹಾರಕ್ಕೆ
ಕಾರಣೀಭೂತನು, ಒಳ್ಳೆಯದಲ್ಲದ ಎಲ್ಲವನ್ನೂ ನಾಶಪಡಿಸುವವನಾದ, ವಿಘ್ನ ನಿವಾರಕನಿಗೆ ನನ್ನ ನಮಸ್ಕಾರಗಳು.
|
ಶ್ಲೋಕ - 2 - ಸಂಸ್ಕೃತದಲ್ಲಿ:
ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ
ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ
ನಿರಂತರಮ್
|
ಕನ್ನಡದಲ್ಲಿ :
ಅಶರಣರಿಗೆ ಭಯಂಕರನೆ ಉದಯರವಿಯ ತೇಜನೆ
ಸುರಾಸುರರ ಪೂಜೆಗೊಳುವ ದಲಿತಜನೋದ್ಧಾರನೆ
ಸುರೇಶ್ವರನೆ ನಿಧೀಶ್ವರಾ ಗಣಾಧಿಪತಿ
ವಿನಾಯಕ
ಮಹೇಶ ನಿನಗೆ ಶರಣೆಂಬೆನು ಪರಾತ್ಪರಾ
ನಿರಂತರ
|
ವಿವರಣೆ :
ಯಾರು ತನ್ನ ಭಕ್ತರ ಶತ್ರುಗಳ ಮನದಲ್ಲಿ ಭೀತಿಹುಟ್ಟಿಸುವರೋ, ಮುಂಜಾನೆಯ ಸೂರ್ಯೋದಯದಂತೆ
ಪ್ರಕಾಶಿಸುವರೋ, ಯಾರನ್ನು ದೆವಾಸುರರೂ ವಂದಿಸುವರೋ, ಯಾರು ತನ್ನ ಭಕ್ತರ ವಿಘ್ನಗಳನ್ನು ನಾಶಮಾಡುವರೋ, ಎಲ್ಲ ದೇವತೆಗಳಿಗೂ
ಪರಮ ದೈವವೋ, ಸರ್ವ ಸಂಪತ್ತಿಗೂ ಅಧಿದೈವವೋ, ಎಲ್ಲ ಗಜ ಸಮೂಹಕ್ಕೂ ಒಡೆಯನೋ, ಶಿವನ ಗಣಗಳಿಗೆ ನಾಯಕನೋ,
ಆ ಶಾಶ್ವತ ದೈವವಾದ ಮಹಾಗಣಪತಿಗೆ ಸಹಸ್ರ ನಮನಗಳು.
|
ಶ್ಲೋಕ - 3 - ಸಂಸ್ಕೃತದಲ್ಲಿ:
ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ
ಭಾಸ್ವರಮ್
|
ಕನ್ನಡದಲ್ಲಿ :
ಸಕಲ ಲೋಕ ಶುಭಕರನೇ ಗಜಾಸುರನ ಸವರಿದವನೇ
ಹಿರಿಯ ಒಡಲ ಗರಿಮ ಕರಿಯಮೊಗನೆ ನಾಶರಹಿತನೇ
ಕ್ಷಮಿಸಿ ಕೃಪೆಯ ತೋರಿ ಮುದವ ಯಶವನೀವ
ದೇವನೇ
ಶರಣ ಬಂಧು ಕರವ ಮುಗಿವೆ ಬೆಳಗಿ
ಹೊಳೆವ ಬೆನಕನ
|
ವಿವರಣೆ :
ಯಾರು ಸಮಸ್ತ ಲೋಕಗಳಲ್ಲಿ ಶಾಂತಿಯನ್ನು
ನೆಲಸುವಂತೆ ಮಾಡುತ್ತಾರೋ, ಗಜಮುಖಾಸುರನನ್ನು ಪ್ರಪಂಚದಿಂದ
ದೂರಮಾಡಿದರೋ, ಯಾರು ಅತಿದೊಡ್ಡ ಉದರವುಳ್ಳವರೋ, ಸದಾ ಮಂಗಳವನ್ನುಂಟು ಮಾಡುವ ಗಜಮುಖನೋ, ಯಾರು ಸದಾ ದಯಾಮಯನೋ,
ತಾಳ್ಮೆಯುಳ್ಳವನೋ, ಯಾರು ಸಂಪೂರ್ಣ ಅನುಗ್ರಹವನ್ನು ಸದಾ
ಕರುಣಿಸುವನೋ, ಯಾರು ಮಹಾ ಖ್ಯಾತಿಯನ್ನು ಭಕ್ತರ ಮೇಲೆ ಕರುಣಿಸುತ್ತಾರೋ,
ಆ ಸೂರ್ಯನಂತೆ ಪ್ರಕಾಶಿಸುವ ಗಜವಕ್ತ್ರನಿಗೆ ನನ್ನ ಅನಂತಾನಂತ ವಂದನೆಗಳು.
|
ಶ್ಲೋಕ - 4 - ಸಂಸ್ಕೃತದಲ್ಲಿ:
ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್
|
ಕನ್ನಡದಲ್ಲಿ :
ಶರಣ ದುಃಖ ಕಳೆಯುವವನ ವೇದ ಸೂಕ್ತಕೊಲಿಯುವವನ
ತ್ರಿಪುರನರಿಯ ಹಿರಿಯಸುತನ ಅಸುರ
ಗರ್ವ ಭಂಜಕನನು
ವಿಕಳರಿಗತಿ ಭಯಂಕರನ ಹುತವಹಾದಿ
ಸುಭೂಷಣನ
ಸುರಿವ ಮದದ ಜಲವೊರಸುವನಾದಿ ಗಜವ
ಭಜಿಪೆನು
|
ವಿವರಣೆ :
ಯಾರು ಹೊಂದಿಲ್ಲದವರ ಬೇಡಿಕೆಗಳನ್ನು
ಪೂರೈಸುವುದರ ಮೂಲಕ ಬೇಡಿಕೆಗಳನ್ನೆಲ್ಲಾ ನಾಶಪಡಿಸುವರೋ, ಅನಾದಿಕಾಲದಿಂದಲೂ ಆರಾಧಿಸಲ್ಪಡುವನೋ, ತ್ರಿಪುರ ನಾಶಕನಾದ ಶಿವನ
ಜ್ಯೇಷ್ಟ ಪುತ್ರನೋ, ದೇವತೆಗಳ ಶತ್ರುಗಳ ಅಹಂಕಾರವನ್ನು ನಾಶಮಾಡುವನೋ,
ಪ್ರಳಯದ ಅಂತಿಮ ಸಮಯದಲ್ಲಿ ಭವ್ಯವಾಗಿ ಕಾಣಿಸುವನೋ, ಧನಂಜಯನಂತೆ
ಸರ್ಪವನ್ನು ಒಡವೆಯಂತೆ ಧರಿಸುವನೋ, ಮದೋನ್ಮತ್ತ ಆನೆಯಂತೆ ಉಗ್ರನಾಗಿರುವ,
ಬಹು ಪುರಾತನ ಗಣಗಳ ಪತಿಗೆ ನನ್ನ ನಮನಗಳು.
|
ಶ್ಲೋಕ - 5 - ಸಂಸ್ಕೃತದಲ್ಲಿ:
ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್
|
ಕನ್ನಡದಲ್ಲಿ :
ಪೊಳೆವ ಚಲುವ ದಂತ ಕಾಂತಿ ಯಮನ ಗೆಲಿದ ಶಿವನ ಸುತನ
ಮನಕೆಟುಕದ ರೂಪಿ ಅಂತ್ಯರಹಿತ ವಿಘ್ನ
ನಾಶಕನನು
ಅಮಲ ಮುನಿಗಳೆದೆಗಳಾಳದೊಳಗೆ ನಿರುತ
ನೆಲೆಸಿದಾತ
ಮನದಿ ನೆನೆದು ನಮಿಪೆನೇಕದಂತ ನಿನ್ನ
ಸಂತತ
|
ವಿವರಣೆ :
ಯಾರು ಸದಾ ಮಿರಿಮಿರನೆ ಮಿಂಚುವ, ಹೊಳಪಿನ ದಂತವನ್ನು ಹೊಂದಿ ಮುದ್ದಾಗಿ ಕಾಣಿಸುವನೋ,
ಸಾವಿನ ದೇವತೆಯಾದ ಯಮನನ್ನು ನಾಶ ಗೈದ ದೇವಾದಿ ದೇವ ಮಹಾದೇವನ ಪುತ್ರನೋ,
ಕಲ್ಪನೆಗೂ ನಿಲುಕದ ರೂಪವುಳ್ಳವನೋ, ಯಾರು ಆದಿ ಅಂತ್ಯಗಳನ್ನು
ಮೀರಿರುವನೋ, ಯಾರು ಎಲ್ಲ ವಿಘ್ನಗಳನ್ನೂ ನಾಶಮಾಡುವನೋ, ಯಾರು ಯೋಗಿಗಳ ಹೃದಯದಲ್ಲಿ ಸದಾ ನೆಲಸಿರುವನೋ, ವಸಂತ ಋತುವಿನಂತೆ
ಕಂಗೊಳಿಸುವನೋ, ಆ ಏಕದಂತನನ್ನು ಸದಾ ಧ್ಯಾನಿಸುವೆ.
|
ಶ್ಲೋಕ - 6 - ಸಂಸ್ಕೃತದಲ್ಲಿ:
ಮಹಾಗಣೇಶಪಂಚರತ್ನಮಾದರೇಣ ಯೋsನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್
ಗಣೇಶ್ವರಮ್
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮೀಹಿತಾಯುರಷ್ಟಭೂತಿಮಭ್ಯುಪೈತಿ ಸೋsಚಿರಾತ್
|
ಕನ್ನಡದಲ್ಲಿ :
ಮಹಾಗಣೇಶ ಪಂಚರತ್ನವಿದನು ಭಕ್ತಿಯಿಂದ
ಕೂಡಿ
ನೇಮದಿಂದ ಬಿಡದೆ ನಿತ್ಯ ಪಾಡುವಂಥ
ಶರಣ ಜನರು
ತಾಮಸವನು ಕಳೆದು ಸಖರು ಸುತ ಕ್ಷೇಮವಾರೋಗ್ಯಗಳ
ಸಕಲ ವೈಭವವ ಪಡೆದು ಸುಖಿಪರನತಿ
ಕಾಲದಿ
|
ವಿವರಣೆ :
ಯಾರು ಪ್ರತಿದಿನ ಮುಂಜಾನೆ ಅತ್ಯಂತ
ಭಕ್ತಿಪೂರ್ವಕವಾಗಿ ಮಹಾಗಣಪತಿಯ ಈ ಐದು ರತ್ನಗಳ ಸ್ತೋತ್ರವನ್ನು ಪಠಿಸುವರೋ, ಹಾಗೂ ತಮ್ಮ ಹೃದಯಾಂತರಾಳದಿಂದ ಗಣಗಳ ಪತಿಯಾದ ಗಣಪತಿಯನ್ನು ಧ್ಯಾನಿಸುವರೋ,
ಅವರಿಗೆ ಶೀಘ್ರವಾಗಿ ಆಯುರಾರೋಗ್ಯ, ಸಮಸ್ಯೆಗಳಿಂದ ದೂರವಾಗುವ,
ಹಾಗೂ ಶಾಂತಿ, ನೆಮ್ಮದಿಗಳು, ಪುತ್ರ, ಪೌತ್ರರುಗಳು, ಮತ್ತು ದೀರ್ಘಾಯಸ್ಸು,
ಅಲ್ಲದೇ ಆಧ್ಯಾತ್ಮಿಕ ಮತ್ತು ದೈಹಿಕ ಸಂಪತ್ತುಗಳು ಲಭಿಸುವುದು.
|
ಲೇಖನದ ಮೂಲ :
ಸಂಸ್ಕೃತ ಶ್ಲೋಕಗಳು : www.celextel.org
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ
ವಿವರಣೆ : www.celextel.org ನಲ್ಲಿನ ಆಂಗ್ಲಭಾಷೆಯ ವಿವರಣೆಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತ : ಗುರುಪ್ರಸಾದ್ ಹಾಲ್ಕುರಿಕೆ.
|
No comments:
Post a Comment