Saturday, June 2, 2018

ಗುರು ಅಷ್ಟಕಮ್





ಗುರು ಅಷ್ಟಕಮ್

ಶ್ಲೋಕ - 1 - ಸಂಸ್ಕೃತದಲ್ಲಿ

ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್
ಕನ್ನಡದಲ್ಲಿ

ರೂಪುಳ್ಳ ದೇಹ ಚೆಲುವೆ ಸತಿಯು ಇರಲೇನು
ಪಸರಿಸಿದ ಕೀರ್ತಿ ಬಹು ಸಂಪದಗಳಿರಲೇನು
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ಅಂದವಾದ ಶರೀರವಿದ್ದರೂ, ಸುಂದರವಾದ ಪತ್ನಿಯಿದ್ದರೂ, ಸಮಾಜದಲ್ಲಿ ಸುಪ್ರಸಿದ್ದನಾಗಿ, ಪರ್ವತದಷ್ಟು ಅಗಾಧವಾದ ಸಂಪತ್ತಿದ್ದರೂ, ನಿನ್ನ ಮನಸ್ಸು ಗುರುವಿನ ಪಾದ ಪದ್ಮಗಳಿಗೆ ತಲೆಬಾಗಿಸದೇ ಇದ್ದಲ್ಲಿ, ಅವುಗಳಿಂದ ಏನು ಉಪಯೋಗ?

ಶ್ಲೋಕ  - 2 - ಸಂಸ್ಕೃತದಲ್ಲಿ

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್            
ಕನ್ನಡದಲ್ಲಿ

ಸತಿಯು ಧನ ಪುತ್ರ ಪೌತ್ರಾದಿಗಳು ಇರಲೇನು
ವಸತಿ ಬಾಂಧವರು ಶ್ರೇಷ್ಟ ಕುಲವಿದ್ದರೇನು
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ನಿನ್ನೊಡನೆ ಪತ್ನಿ, ಸಂಪತ್ತು, ಮಕ್ಕಳು, ಮೊಮ್ಮಕ್ಕಳು, ಗೃಹ, ಬಂಧು, ಬಾಂಧವರು ಹಾಗೂ ನೀನು ಉತ್ತಮ ಕುಲದಲ್ಲಿ ಜನಿಸಿದ್ದರೂ, ನಿನ್ನ ಮನಸ್ಸು ಗುರುವಿನ ಅಮೃತ ಪಾದಗಳಿಗೆ ಶರಣಾಗದಿದ್ದಲ್ಲಿ ಇವೆಲ್ಲ ಇದ್ದೂ ಏನು ಉಪಯೋಗ ?


ಶ್ಲೋಕ - 3 -  ಸಂಸ್ಕೃತದಲ್ಲಿ

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್             
ಕನ್ನಡದಲ್ಲಿ

ವೇದ ವೇದಾಂಗಶಾಸ್ತ್ರಗಳು ಜಿಹ್ವೆಯಲೆ
ಕೋದ ಸುಂದರ ಕಾವ್ಯ ಗದ್ಯ ಬರವಣಿಗೆ
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ನೀನು ವೇದಗಳ ಆರು ವೇದಾಂಗಗಳಲ್ಲಿಯೂ ನಿಷ್ಣಾತನಾಗಿದ್ದರೂ, ಪುರಾಣ ಗ್ರಂಥಗಳನ್ನು ಓದಿ ಕರತಲಾಮಲಕ ಮಾಡಿಕೊಂಡಿದ್ದರೂ, ಹಾಗೂ ಅನೇಕ ಸಾಹಿತ್ಯಗಳಲ್ಲಿ ತೀಕ್ಷ್ಣತೆಯನ್ನು ಹೊಂದಿದ್ದರೂ, ಮತ್ತು ನೀನು ಗದ್ಯ ಹಾಗೂ ಪದ್ಯಗಳನ್ನು ರಚಿಸುವ ಅಪಾರ ಶಕ್ತಿಯುಳ್ಳವನಾಗಿದ್ದರೂ, ನಿನ್ನ ಮನವು ಗುರುವಿನ ಪಾದಗಳಲ್ಲಿ ಲೀನವಾಗದಿದ್ದಲ್ಲಿ ಇವೆಲ್ಲವುಗಳಿಂದ ಏನು ಉಪಯೋಗ?

ವೇದಗಳು ಆರು ಅಂಗಗಳನ್ನು ಒಳಗೊಂಡಿವೆ. ಅವುಗಳೆಂದರೆ :
ಜ್ಯೋತಿಷ್ಯ  - (ಖಗೋಳ - ಜ್ಯೋತಿಷ್ಯ)
ಕಲ್ಪ  - (ಧರ್ಮಾಚರಣೆಯ ಕೈಪಿಡಿ)
ನಿರುಕ್ತ -   (ಶಬ್ದಕೋಶ, ವ್ಯುತ್ಪತ್ತಿಶಾಸ್ತ್ರ)
ಶಿಕ್ಷಾ - ( ಧ್ವನಿ ವಿಜ್ಞಾನ)
ವ್ಯಾಕರಣ ಹಾಗೂ
ಛಂದಸ್ -   (ಛಂದಃಶಾಸ್ತ್ರ)

ಇದೇ ರೀತಿ ವೇದಗಳ ಮತ್ತೊಂದು ವಿಧದ ಆರು ಅಂಗಗಳೆಂದರೆ - ಪಾದಗಳು, ಮುಖ, ಕೈಗಳು, ಕಣ್ಣುಗಳು, ಮೂಗು ಮತ್ತು ಕಿವಿಗಳು. ಇವುಗಳನ್ನು ಕ್ರಮವಾಗಿ ಮೇಲೆ ವಿವರಿಸಿರುವ ವೇದಾಂಗಗಳಿಗೆ ಜೋಡಣೆ ಮಾಡಿಛಂದಸ್ , ವ್ಯಾಕರಣ, ಕಲ್ಪ , ಜ್ಯೋತಿಷ್ಯ, ಶಿಕ್ಷಾ ಮತ್ತು ನಿರುಕ್ತ. ಈ ರೀತಿಯ ಷಡಂಗಗಳು ನಮ್ಮ ಜೀವನದಲ್ಲಿ ಯಾವುದು ಅತಿ ಪ್ರಾಮುಖ್ಯವಾದದ್ದು ಎಂಬುದರ ಬಗ್ಗೆ ಮಾರ್ಗದರ್ಶನವನ್ನು ನೀಡುತ್ತವೆ.

ಮುಂದುವರೆದುಷಡಂಗಗಳನ್ನು ವೇದಪುರುಷನಿಗೆ ಅನ್ವಯಿಸಿದಲ್ಲಿ ಶಿಕ್ಷಾವೇದಪುರುಷನ ಮೂಗುಗಳಿಗೂವ್ಯಾಕರಣವು - ಬಾಯಿಗೆ, ಕಲ್ಪವು - ಕೈಗಳಿಗೆ, ನಿರುಕ್ತವುಕಿವಿಗಳಿಗೆಛಂದಸ್ - ಪಾದಗಳಿಗೆ ಮತ್ತು ಜ್ಯೋತಿಷ್ಯವು - ವೇದಪುರುಷನ ಕಣ್ಣುಗಳಿಗೆ ಹೋಲಿಸಲಾಗಿದೆ. ಹೀಗೆ ವೇದಗಳ ಪ್ರತಿಯೊಂದು ಶಾಸ್ತ್ರಗಳನ್ನೂ ದೇಹದ ವಿವಿಧ ಭಾಗಗಳಿಗೆ ಹೋಲಿಸಿರುವುದರ ಕಾರಣವನ್ನು ವೇದಗಳ ಪ್ರತಿಯೊಂದು ಅಂಗಗಳನ್ನು ವಿವರವಾಗಿ ಅಭ್ಯಸಿಸಿದಾಗ ತಿಳಿದುಬರುವುದು.


ಶ್ಲೋಕ - 4 -  ಸಂಸ್ಕೃತದಲ್ಲಿ

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಜಾನ್ಯಃ|
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್             
ಕನ್ನಡದಲ್ಲಿ

ಹೊರದೇಶದೊಲು ಮಾನ್ಯ ದೇಶದಲು ಧನ್ಯ
ಪರರಿಗಾದರ್ಶವಹ ನಡೆನುಡಿಯ ಜಾಣ
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ಪರದೇಶದಲ್ಲಿ ನಿನ್ನನ್ನು ಗೌರವಿಸಿದರೂ, ನಿನ್ನ ಮಾತೃಭೂಮಿಯಲ್ಲಿ ಅಪಾರ ಆಸ್ತಿಗಳಿಸಿದ್ದರೂ, ಮತ್ತು ನೀನು ಸದ್ಗುಣ ಸಂಪನ್ನನೆಂದು ಸುಪ್ರಸಿದ್ದನಾಗಿದ್ದರೂ, ನಿನ್ನ ಮನವು ಗುರುವಿನ ಚರಣಗಳಲ್ಲಿ ಲೀನವಾಗದಿದ್ದಲ್ಲಿ ಇವುಗಳಿಂದ ಏನು ಉಪಯೋಗ?


ಶ್ಲೋಕ - 5 -  ಸಂಸ್ಕೃತದಲ್ಲಿ

ಕ್ಷಮಾಮಂಡಲೇ ಭೂಪಭೂಪಾಲಬೃಂದೈಃ
ಸದಾ ಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್            
ಕನ್ನಡದಲ್ಲಿ

ಬುವಿಯೆಲ್ಲ ಕೊಂಡಾಡಿ ಭೂಪತಿಗಳ ಗಡಣ
ಸವಿನಯದಿ ಸೇವೆಗೈಯಲಿ ನಿನ್ನ ಪಾದಗಳ
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ನೀನು ಅತಿ ಮಹತ್ತರವಾದ ಪ್ರದೇಶದ ರಾಜನಾಗಿದ್ದರೂ ಮತ್ತು ಯಾವಾಗಲೂ ಅನೇಕ ರಾಜರು, ಸಾಮಂತ ರಾಜರುಗಳಿಂದ ಸೇವಿಸಲ್ಪಡುತ್ತಿದ್ದರೂ, ನಿನ್ನ ಮನವು ಗುರುವಿನ ಚರಣಗಳಲ್ಲಿ ಲೀನವಾಗದಿದ್ದಲ್ಲಿ ಇವುಗಳೆಲ್ಲದರಿಂದ ಏನು ಫಲ?

ಶ್ಲೋಕ - 6 -  ಸಂಸ್ಕೃತದಲ್ಲಿ

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್             
ಕನ್ನಡದಲ್ಲಿ

ದಿಕ್ಕುಗಳ ಪಸರಿಸಿದ ಬಲ ದಾನಗಳ ಕೀರ್ತಿ
ಹಕ್ಕಿನೊಲು ಪಡೆವೆ ಬಯಸಿದ ವಸ್ತುವನು ಜಗದಿ
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ದಶ ದಿಕ್ಕುಗಳಿಗೂ ನಿನ್ನ ಖ್ಯಾತಿಯು ಹರಡಿದರೂ ಮತ್ತು ನಿನ್ನ ದಾನ, ಧರ್ಮ ಹಾಗೂ ಪ್ರಸಿದ್ದಿಯಿಂದಾಗಿ ಇಡೀ ಪ್ರಪಂಚವು ನಿನ್ನೊಡನಿದ್ದರೂ, ನಿನ್ನ ಮನಸ್ಸು ಗುರುವಿನ ಚರಣಗಳಲ್ಲಿ ಲೀನವಾಗದಿದ್ದಲ್ಲಿ ಇವೆಲ್ಲವುಗಳಿಂದ ಏನು ಉಪಯೋಗ ?


ಶ್ಲೋಕ - 7 -  ಸಂಸ್ಕೃತದಲ್ಲಿ

ನ ಭೋಗೇ ನ ಯೋಗೇ ನ ವಾ ವಾಜಿರಾಜೌ
ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್            
ಕನ್ನಡದಲ್ಲಿ

ಭೋಗಸಿರಿಯೊಲವಿಲ್ಲ ಯೋಗವೂ ಬೇಕಿಲ್ಲ
ರಾಗರಹಿತನು ನಾನು ಸತಿ ಧನಗಳೆನಗೇಕೆ
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ನಿನ್ನ ಮನಸ್ಸನ್ನು ಅನುರಾಗದಲ್ಲಿ, ಯೋಗದಲ್ಲಿ, ಯಜ್ಞ ಕಾರ್ಯಗಳಲ್ಲಿ ಅಥವಾ ಪತ್ನಿಯೊಂದಿಗಿನ ಸುಖಸಂತೋಷಗಳಲ್ಲಿ ಅಥವಾ ನಿನ್ನಲ್ಲಿರುವ ಅಪಾರ ಸಂಪತ್ತಿನ ವ್ಯವಹಾರಗಳಲ್ಲಿ ಕೇಂದ್ರೀಕೃತವಾಗದಿದ್ದರೂ ಪರವಾಗಿಲ್ಲ. ಆದರೆ ಗುರುವಿನ ಪಾದ ಪದ್ಮಗಳಲ್ಲಿ ನಿನ್ನ ಮನಸ್ಸು ಲೀನವಾಗದಿದ್ದಲ್ಲಿ ಏನು ಫಲ?

ಶ್ಲೋಕ - 8 -  ಸಂಸ್ಕೃತದಲ್ಲಿ

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್             
ಕನ್ನಡದಲ್ಲಿ

ವನದೆಡೆಗೆ ಮನವಿಲ್ಲ ಮನೆಕಾರ್ಯದೆಡೆಗಿಲ್ಲ
ತನುಮನ ಅನರ್ಘ್ಯ ವಸ್ತುಗಳ ಹಂಗೆನಗಿಲ್ಲ
ಗುರುಪಾದ ಪದ್ಮದಲಿ ಮನಲಗ್ನವಾಗದಿರೆ
ಅದರಲೇನದರಲೇನದರಲೇನು ಫಲವೋ

ವಿವರಣೆ :

ನಿನ್ನ ಮನಸ್ಸು ಕಾಡಿನೆಡೆಗೆ ಹರಿಯುತ್ತಿರಲೀ ಅಥವಾ ಮನೆಯೆಡೆಗಿರಲಿ ಇಲ್ಲವೇ ಕೆಲಸ ಕಾರ್ಯಗಳಲ್ಲಿ ಅಥವಾ ಒಳ್ಳೆಯ ಚಿಂತೆಗಳಲ್ಲಿ ಮಗ್ನವಾಗಿದ್ದರೂ ಗುರುವಿನ ಪಾದಗಳಲ್ಲಿ ಮಗ್ನವಾಗದಿದ್ದಲ್ಲಿ ಏನೂ ಉಪಯೋಗವಿಲ್ಲ.

ಶ್ಲೋಕ 8.1 - ಸಂಸ್ಕೃತದಲ್ಲಿ

ಅನರ್ಘ್ಯಾಣಿ ರತ್ನಾನಿ ಮುಕ್ತಾನಿ ಸಂಯಕ್
ಸಮಾಲಿಂಗಿತಾ ಕಾಮಿನೀ ಯಾಮಿನೀಷು
ಮನಶ್ಚೇನ ಲಗ್ನಂ ಗುರೋರಂಘ್ರಿ ಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್


ವಿವರಣೆ :

ನಿನ್ನಲ್ಲಿ ಅಪೂರ್ವವಾದ ಅನರ್ಘ್ಯ ರತ್ನಗಳಿದ್ದರೂ ಉತ್ಕಟವಾಗಿ ಪ್ರೀತಿಸುವ ಪತ್ನಿ ಇದ್ದರೂ ನಿನ್ನ ಮನವು ಗುರುವಿನ ಪಾದ ಪದ್ಮಗಳಲ್ಲಿ ಶರಣಾಗದಿದ್ದಲ್ಲಿ ಇವುಗಳಿಂದೇನು ಫಲ ?

ಶ್ಲೋಕ  - 9 - ಸಂಸ್ಕೃತದಲ್ಲಿ

ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ
ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ |
ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞ
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್
ಕನ್ನಡದಲ್ಲಿ

ಗುರುವಿನಷ್ಟಕವಿದನು ಪಠಿಸುವ ಪುಣ್ಯವಂತ
ವರಯತಿ ಗೃಹಸ್ಥ ಭೂಪತಿ ಬ್ರಹ್ಮಚಾರಿಗಳು
ಗುರುಪೇಳ್ದ ವಾಕ್ಯದಲಿ ಮನಲಗ್ನವಾಗಿಸಿರೆ
ಹಿರಿಪದವಿಯನು ಪರಮದರಿವ ಹೊಂದುವರು

ವಿವರಣೆ :

ಗುರುಅಷ್ಟಕವನ್ನು ಸತತವಾಗಿ ಪಠಿಸುವ ಪುಣ್ಯವಂತನಿಗೆ ಅವನು ಸಂನ್ಯಾಸಿಯಾಗಿರಲಿ ಗೃಹಸ್ಥನಾಗಿರಲೀ ರಾಜನಾಗಿರಲೀ ಅಥವಾ ಬ್ರಹ್ಮಚಾರಿಯಾಗಿರಲಿ ಅವನ ಮನವು ಗುರುವಿನ ಸಂದೇಶದಲ್ಲಿ ಲೀನವಾಗಿದ್ದಲ್ಲಿ ಅವನ ಕೋರಿಕೆಗಳೆಲ್ಲಾ ಈಡೇರಿ ಬ್ರಹ್ಮ ಪದವಿಯನ್ನು ಹೊಂದುವನು.

ಓಂ ಗುರು  ಓಂ ಗುರು  ಓಂ ಗುರು  ಓಂ ಗುರು |
ವೀಡಿಯೋ ವಿಕ್ಷನೆಗಾಗಿ ಇಲ್ಲಿ ಕ್ಲಿಕ್ ಮಾಡಿ : https://youtu.be/hZ_0J3n8ShU








No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...