Saturday, June 2, 2018

ಶ್ರೀಲಕ್ಷ್ಮೀನರಸಿಂಹ ಸ್ತೋತ್ರ





ಶ್ರೀಲಕ್ಷ್ಮೀನರಸಿಂಹ ಸ್ತೋತ್ರ

ಪ್ರಸ್ತಾವನೆ :

ಸರ್ವಜ್ಞ ಪೀಠವನ್ನಲಂಕರಿಸುವ ಮೊದಲು ಶ್ರೀ ಆದಿ ಶಂಕರ ಭಗವತ್ಪಾದರು ಸಮಕಾಲೀನ ಷಡ್ದರ್ಶನಗಳಲ್ಲಿ ( ಸಾಂಪ್ರದಾಯಿಕ ತತ್ವಜ್ಞಾನದ ಶಾಲೆಗಳು ) ನಿಷ್ಣಾತರಾದ ಪ್ರಮುಖ ವಿದ್ವಾಂಸರೊಂದಿಗೆ ವಾದದಲ್ಲಿ ಗೆಲ್ಲಬೇಕಿತ್ತು. ಈ ಸನ್ನಿವೇಶದಲ್ಲಿ ಅವರು ಅದ್ವೈತ ವೇದಾಂತದ ಶ್ರೇಷ್ಟತೆಯ ಬಗ್ಗೆ ಮಿಥಿಲಾ ನಗರದ ( ಈಗಿನ ನೇಪಾಳದಲ್ಲಿರುವ ಜನಕಪುರಿ ) ಶ್ರೀ ಮಂಡನ ಮಿಶ್ರರೊಂದಿಗೆ ವಾದವನ್ನು ಪ್ರಾರಂಬಿಸಿದರು. ಅನೇಕ ದಿನಗಳವರೆಗೂ ಅವರುಗಳು ಎಲ್ಲ ಶಾಸ್ತ್ರ ಹಾಗೂ ವೇದಾಂತಗಳ ಬಗ್ಗೆ ಚರ್ಚೆ ನಡೆಸಿದರು. ಮಂಡನ ಮಿಶ್ರರು ಶಂಕರರಿಂದ ಇನ್ನೇನು ಸೋಲಬೇಕು ಅಷ್ಟರಲ್ಲಿ ವಾದ ವಿವಾದಗಳ ತೀರ್ಪುಗಾರರಾದ ಅವರ ಪತ್ನಿ ಶ್ರೀಮತಿ ಉದಯ ಭಾರತಿಯು, " ಯಾರೇ ಆದರೂ ಗೆಲ್ಲ ಬೇಕಿದ್ದಲ್ಲಿ ಕೇವಲ ಪುರುಷ ವಾದಿಯೊಬ್ಬನನ್ನು ಸೋಲಿಸಿದರಷ್ಟೇ ಸಾಲದು, ಅವರು ವಾದಿಯ ಪತ್ನಿಯೊಡನೆಯೂ ವಾದದಲ್ಲಿ ಗೆಲ್ಲಲೇಬೇಕು, ಹಾಗಾದಲ್ಲಿ ಮಾತ್ರ ಅವರು ವಾದದಲ್ಲಿ ಸಂಪೂರ್ಣ ಜಯ ಸಾಧಿಸಿದಂತೆ" ಎಂದು ಶಂಕರರಿಗೆ ತನ್ನೊಡನೆ ವಾದಕ್ಕೆ ಆಹ್ವಾನಿಸಿದಳು. ಶ್ರೀಮತಿ ಭಾರತಿಯು ಮಹಾ ಜ್ಞಾನಿ ಹಾಗೂ ಜಾಣಾಕ್ಷಮತಿ. ಅವಳಿಗೆ ಶಂಕರರು ಬಾಲ ಸಂನ್ಯಾಸಿಯೆಂಬುದು ತಿಳಿದಿತ್ತು ಹಾಗಾಗಿ ಅವರಿಗೆ ದಾಂಪತ್ಯ ರಹಸ್ಯಗಳು, ಸಂಬಂಧಗಳು, ಹಾಗೂ ಕಟ್ಟುಪಾಡುಗಳ ಬಗೆಗೆ ಅರಿವಿಲ್ಲವೆಂದು ಗ್ರಹಿಸಿದಳು. ಈ ವಿಷಯಗಳ ಬಗೆಗೆ ಆಕೆಯು ಕೆಲವು ಪ್ರಶ್ನೆಗಳನ್ನು ಬಾಲ ಸಂನ್ಯಾಸಿಗೆ ಕೇಳಿದಳು. ಅವುಗಳಿಗೆ ಉತ್ತರಿಸಲಾಗದೇ ಶಂಕರಾಚಾರ್ಯರು ಕೆಲವು ದಿನಗಳ ಸಮಯವನ್ನು ಆಕೆಯಿಂದ ಪಡೆದು ಅಲ್ಲಿಂದ ನಿರ್ಗಮಿಸಿ ತನ್ನ ಶಿಷ್ಯರೊಂದಿಗೆ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಒಂದು ದಟ್ಟವಾದ ಕಾಡನ್ನು ಪ್ರವೇಶಿಸಿದರು. ಅದೇ ಸಮಯದಲ್ಲಿ ಆ ಪ್ರಾಂತ್ಯದ ರಾಜನಾದ ಅಮರುಕನು ಬೇಟೆಗಾಗಿ ಬಂದಿದ್ದನು. ಆ ರಾಜನು ನೋಡು ನೋಡುತ್ತಿದ್ದಂತೆ ತಃಕ್ಷಣವೇ ಕುಸಿದು ಬಿದ್ದು ಪ್ರಾಣವನ್ನು ಕಳೆದುಕೊಂಡನು. ರಾಜನೊಂದಿಗಿದ್ದ ಪರಿವಾರದವರು ದಿಗ್ಭ್ರಾಂತರಾಗಿ ಅಲ್ಲೇ ಇದ್ದ ಶಂಕರಾಚಾರ್ಯರ ಪಾದಗಳಿಗೆರಗಿ ತಮ್ಮ ರಾಜನಿಗೆ ಮರು ಜೀವವನ್ನು ಹೇಗಾದರೂ ಮಾಡಿ ಕರುಣಿಸಬೇಕೆಂದು ಪ್ರಾರ್ಥಿಸಿದರು. ಆದಿಶಂಕರರು ಉದಯ ಭಾರತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಸರಿಯಾದ ಅವಕಾಶ ದೊರಕಿದೆಯೆಂದು ಯೋಚಿಸಿ ತಾವು ಪರಕಾಯ ಪ್ರವೇಶ ಮಾಡಿ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕೆಲವೇ ದಿನಗಳಲ್ಲಿ ಕಂಡು ಕೊಂಡರು. ಈ ಮಧ್ಯೆ ಒಂದು ತಿಂಗಳು ಕಳೆಯಿತು. ಅಂತಃಪುರದಲ್ಲಿನ ಸ್ತ್ರೀ ವರ್ಗದವರೆಲ್ಲಾ ಆನಂದಿತರಾಗಿದ್ದರು ಹಾಗೂ ರಾಜ್ಯದಲ್ಲಿ ಸುಭಿಕ್ಷವುಂಟಾಯಿತು ಹಾಗೂ ಅನೇಕ ಪಟ್ಟು ಅಭ್ಯುದಯವುಂಟಾಗ ತೊಡಗಿತು. ರಾಜನ ಬುದ್ಧಿವಂತ ಮಂತ್ರಿಗೆ ಯಾವುದೋ ಮಹಾ ಯೋಗಿಯ ಆತ್ಮವು ತಮ್ಮ ಹಿಂದಿನ ರಾಜನ ಶರೀರವನ್ನು ಪ್ರವೇಶಿಸಿ
ರಬಹುದೆಂದು ಅನುಮಾನವುಂಟಾಗಿ ಹಾಗೂ ಇದು ರಾಜ್ಯದ ಜನತೆಯ ಅದೃಷ್ಟವೆಂದು ಭಾವಿಸಿದನು. ಯೋಗಿಯ ಆತ್ಮವು ತಮ್ಮ ರಾಜನ ಶರೀರದಲ್ಲಿ ಎಷ್ಟು ದಿನ ಸಾಧ್ಯವೋ ಅಷ್ಟು ದಿನಗಳು ಇರಲೆಂದು ಯೋಚಿಸಿ ಮಂತ್ರಿಯು ಸೈನಿಕರಿಗೆ ರಾಜ್ಯದಲ್ಲಿ ಯಾವುದೇ ಅನಾಥ ಶವಗಳು ಕಂಡುಬಂದಲ್ಲಿ ಅದನ್ನು ಕೂಡಲೇ ದಹನ ಮಾಡಬೇಕೆಂದು ಆಜ್ಞಾಪಿಸಿದನು. ಸೈನಿಕರು ಎಲ್ಲಾ ಕಡೆ ಹುಡುಕಿ ಕಡೆಗೆ ಒಂದು ಗುಹೆಯಲ್ಲಿದ್ದ ಆದಿ ಶಂಕರರ ದೇಹವನ್ನು ಕಂಡು ಅದನ್ನು ದಹಿಸಲು ಪ್ರಾರಂಬಿಸಿದರು.

ಆದಿ ಶಂಕರರ ಶಿಷ್ಯರುಗಳಲ್ಲಿ ಮುಖ್ಯರಾದ ಪದ್ಮ ಪಾದರು ಅರಮನೆಗೆ ಕೂಡಲೇ ಬಂದು ಅವರ ಪೂರ್ವ ಸ್ಥಿತಿಯನ್ನು ವಿವರಿಸಿ ಈ ಸಮಸ್ಯೆಯನ್ನು ಅವರಿಗೆ ಮಾತ್ರ ಪರಿಹರಿಸಿಕೊಳ್ಳಲು ಸಾಧ್ಯವೆಂದು ವಿವರಿಸಿದರು. ಅಷ್ಟರಲ್ಲಾಗಲೇ ಬೆಂಕಿಯು ಶಂಕರರ ಕಳೇಬರದ ಒಂದು ಭಾಗವನ್ನು ದಹಿಸಲು ಪ್ರಾರಂಬಿಸಿತ್ತು. ಆಗ ಶಂಕರರು ಶ್ರೀ ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸತೊಡಗಿದರು. ಆತನೊಬ್ಬನೇ ತನ್ನ ಭಕ್ತರನ್ನು ಯಾವುದೇ ಸಮಯ, ಸಂದರ್ಭದಲ್ಲೂ ರಕ್ಷಿಸುವನೆಂದು ಅರಿತಿದ್ದರಿಂದ ಶಂಕರರು ಅವನನ್ನೆ ಪ್ರಾರ್ಥಿಸಿದರು. ಶಂಕರರ ಪ್ರಾರ್ಥನೆಗೆ ಕೂಡಲೇ ಸ್ಪಂದಿಸಿದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಅವರೆದುರಿಗೆ ಪ್ರತ್ಯಕ್ಷನಾಗಿ ತನ್ನ ಭಕ್ತನ ಶರೀರವನ್ನು ದಹಿಸಲು ಪ್ರಾರಂಬಿಸಿದ್ದ ಅಗ್ನಿಯನ್ನು ಶಾಂತಗೊಳಿಸಿದನು. ಇದಕ್ಕೆ ಮುಂಚೆಯೂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯು ಶಂಕರರನ್ನು ಕಾಪಾಲಿಕನೊಬ್ಬನು ಅವರ ಶಿರವನ್ನು ಕತ್ತರಿಸಿ ದುಷ್ಟ ದೇವತೆಗೆ ಅರ್ಪಿಸಲು ತೊಡಗಿದ್ದಾಗ ರಕ್ಷಿಸಿದ್ದನು. ಅಂದಿನಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯು ಶಂಕರಾಚಾರ್ಯರ ಇಷ್ಟ ದೈವವಾದರು. ಶೃಂಗೇರಿಯಲ್ಲಿ ತುಂಗಭದ್ರಾ ನದಿಯ ದಡದಲ್ಲಿರುವ ಶಾರದಾ ಪೀಠದ ಆಚಾರ್ಯರು ನೆಲಸುವ ಸ್ಥಳವನ್ನು ನರಸಿಂಹ ವನವೆಂದೂ ಕರೆಯಲ್ಪಡುವುದು ಹಾಗೂ ಎಲ್ಲ ಆಚಾರ್ಯರೂ ತಮ್ಮ ಶ್ರೀಮುಖವನ್ನು ನಾರಾಯಣ ಸ್ಮೃತಿಯ ಮೂಲಕವೇ ಮುಕ್ತಾಯ ಮಾಡುತ್ತಾರೆ.

ಈ ಕರಾವಲಂಬ ಸ್ತೋತ್ರದಲ್ಲಿ ಹದಿನೇಳು ಶ್ಲೋಕಗಳಿವೆ. ಆದಿ ಶಂಕರಾಚಾರ್ಯರು ತಮ್ಮ ಶರೀರದ ಭಾಗವನ್ನು ದಹಿಸುತ್ತಿದ್ದ ಅಗ್ನಿಯನ್ನು ಶಾಂತಗೊಳಿಸೆಂದು ಈ ಸ್ತೋತ್ರದಲ್ಲಿ ನೇರವಾಗಿ ಪ್ರಾರ್ಥಿಸಿಲ್ಲ. ಬದಲಾಗಿ ಅವರು ಸಂಸಾರವನ್ನೇ ಉರಿಯುವ ದಾವಾನಲವೆಂದೂ, ಅಭೇದ್ಯವಾದ ಅರಣ್ಯವನ್ನು, ಪಾಳು ಭಾವಿಯನ್ನು, ಆಳವಾದ ಸಮುದ್ರ, ವಿಷಪೂರಿತ ಸರ್ಪ, ದುಃಖಕರವಾದ ಬಲೆಯೆಂದೂ ಮತ್ತು ತೀಕ್ಷ್ಣವಾದ ಸಂಸಾರದಿಂದ ಅನೇಕ ರೀತಿಯಲ್ಲಿ ತನ್ನನ್ನು ಆವರಿಸಿ ತೊಂದರೆಕೊಡುತ್ತಿರುವುದರಿಂದ ಬಿಡುಗಡೆಯನ್ನು ನೀಡುವಂತೆ ಪ್ರಾರ್ಥಿಸುತ್ತಾರೆ. ಎಲ್ಲ ದುಃಖಗಳಿಗೂ ಸಂಸಾರ ಬಂಧನವೇ ಮೂಲಕಾರಣ ಆದ್ದರಿಂದ ಆದಿ ಶಂಕರರು ಸಾಂಸಾರಿಕ ದುಃಖಗಳನ್ನು ನಾಶಮಾಡುವಂತೆ ಪ್ರಾರ್ಥಿಸುತ್ತಾರೆ.

ಈ ಸ್ತೋತ್ರವು ಇಂಪಾಗಿ ಮತ್ತು ಪ್ರಾಸಬದ್ಧವಾದ ಸರ್ವ ಶಕ್ತನಾದ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯನ್ನು ಹಾಡಿ ಹೊಗಳುವುದಾಗಿದೆ. ಇದು ಪವಿತ್ರವಾಗಿದ್ದು ಇದನ್ನು ಪಠಿಸುವವರಿಗೆ ಐಹಿಕ ಫಲಗಳು ದೊರಕಲೆಂದು ಆಶೀರ್ವದಿಸುತ್ತದೆ. ಆಸ್ತಿಕರಿಗೆ ಈ ಸ್ತೋತ್ರದ ಅರ್ಥವನ್ನು ಅರಿತಲ್ಲಿ ಇದು ಫಲಪ್ರದ. ಸುಮಾರು 45 ವರ್ಷಗಳ ಹಿಂದೆ ಹಿತಭಾಶಿನಿಯ ಸಂಪಾದಕರಾದ ತಂಜಾವೂರಿನ ಶ್ರೀ.ಮುತ್ತುಕೃಷ್ಣ ಶಾಸ್ತ್ರಿಗಳು ಆಂಗ್ಲ ಭಾಷೆಯಲ್ಲಿ ಈ ಸ್ತೋತ್ರಕ್ಕೆ ವ್ಯಾಖ್ಯಾನವನ್ನು ಬರೆದಿರುವರು. ಅದನ್ನು sadagopan.org ಯಲ್ಲಿ ಸ್ವಲ್ಪ ಮಾರ್ಪಾಡು ಗಳೊಂದಿಗೆ ಪ್ರಕಟಿಸಲಾಗಿದೆ. ಅದರ ಭಾವಾರ್ಥವನ್ನು ಕನ್ನಡದಲ್ಲಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಇದಲ್ಲದೇ ಮತ್ತೊಂದು 15 ಶ್ಲೋಕಗಳನ್ನೊಳಗೊಂಡ  ಶ್ರೀ ಲಕ್ಷ್ಮೀನರಸಿಂಹ ಪ್ರಪತ್ತಿ ಸ್ತೋತ್ರವನ್ನು 44 ನೇ ಪೀಠಾಧಿಪತಿಗಳಾದ ಶ್ರೀಮದ್ ಅಝಗೀಯ ಸಿಂಗರ - ಶ್ರೀ ಅಹೋಬಲ ಮಠ (ಮುಕ್ಕೂರ್ ಸ್ವಾಮಿ) ರಚಿಸಿದ್ದಾರೆ. ಅದನ್ನು ಪರಿಶೀಲಿಸಲು ಇಚ್ಚಿಸುವವರು http://www.srihayagrivan.org/html/ebook099.htm ನ್ನು ಸಂದರ್ಶಿಸಬಹುದು.

ಶ್ಲೋಕ - 1 - ಸಂಸ್ಕೃತದಲ್ಲಿ :

ಶ್ರೀಮತ್ಪಯೋನಿಧಿನಿಕೇತನಚಕ್ರಪಾಣೇ
ಭೋಗೀoದ್ರಭೋಗಮಣಿರಾಜಿತಪುಣ್ಯಮೂರ್ತೇ
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಹಾಲ್ಗಡಲ ನಿವಾಸಿ ಶ್ರೀವರನೆ ಚಕ್ರಪಾಣಿ
ಫಣಿರಾಜ ರತ್ನರಾಜಿತ ಪುಣ್ಯಮೂರ್ತಿ
ಯೋಗಿಗಳ ಶಾಶ್ವತಾಶ್ರಯ ಭವಾಬ್ಧಿದಿನೌಕೆ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಸಾಮಾನ್ಯವಾಗಿ ಪ್ರಪಂಚದಲ್ಲಿ ಯಾರಾದರೂ ಹರಿಯುವ ನದಿಯ ನೀರಿನ ಸುಳಿಯಲ್ಲಿ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದಾಗ ಅವನನ್ನು ಶಕ್ರಿಶಾಲಿಯೊಬ್ಬನು ಸಹಾಯ ಹಸ್ತವನ್ನು ನೀಡಿ ಆಪತ್ತಿನಿಂದ ಪಾರುಮಾಡುವನು. ಈ ಶ್ಲೋಕದಲ್ಲಿ ವಿವರಿಸಿರುವ ಸಂದರ್ಭವೇನೆಂದರೆ ಆದಿ ಶಂಕರರನ್ನು ಸಂಸಾರ ಚಕ್ರವೆಂಬ ಸಮುದ್ರದಲ್ಲಿನ ಪ್ರಬಲ ಸುಳಿಯು ಸುತ್ತಿಕೊಂಡು ತಮ್ಮ ಶಕ್ತಿಯನ್ನೆಲ್ಲವನ್ನೂ ಕಳೆದುಕೊಂಡು ಇನ್ನೇನು ಅದರಲ್ಲಿ ಮುಳುಗುವ ಸ್ಥಿತಿಯಲ್ಲಿರುವರು. ಈ ಸ್ಥಿತಿಯಲ್ಲಿ ಅವರು ಭಗವಾನ್ ಲಕ್ಷ್ಮೀ ನರಸಿಂಹ ಸ್ವಾಮಿಯು ಹಸ್ತದಿಂದ ತನ್ನನ್ನು ಅಪಾಯದಿಂದ ಪಾರುಮಾಡೆಂದು ಪ್ರಾರ್ಥಿಸುತ್ತಿದ್ದಾರೆ.

ಆದಿ ಶಂಕರರ ಈ ಸಂದರ್ಭದಲ್ಲಿನ ಪದಗಳ ಆಯ್ಕೆಯು ಮುಳುಗುತ್ತಿರುವವನ ಸಂದರ್ಭಕ್ಕೆ ಸೂಕ್ತವಾಗಿ ಹೊಂದುತ್ತದೆ. ಹಾಲ್ಗಡಲು ಮತ್ತು ವಿಷ್ಣುವು " ಶ್ರೀಮತ್  ಪಯೋನಿಧಿ ನಿಕೇತನ " ನಾದ್ದರಿಂದ ಜೀವಾತ್ಮನಿಗೆ ಅಮೃತದ ಮೂಲಕ ಜೀವವನ್ನು ನೀಡಿ ಹಾಗೂ ಅವನನ್ನು ಪುನರುಜ್ಜೀವಗೊಳಿಸುವ ಮೂಲಕ ಆಶೀರ್ವದಿಸುವನು. " ಚಕ್ರಪಾಣಿ " ಯಾಗಿ ವಿಷ್ಣುವು ತನ್ನಲ್ಲಿರುವ ಸುದರ್ಶನ ಚಕ್ರವನ್ನುಪಯೋಗಿಸಿ ಸಂತಪ್ತ ಸ್ಥಿತಿಯಲ್ಲಿರುವ ಜೀವನ ಶತ್ರುವನ್ನು ದೂರಮಾಡ ಬಹುದುಹಾಲ್ಗಡಲಲ್ಲಿ ಆದಿಶೇಷನ ಮೇಲೆ ಪವಡಿಸಿರುವ " ಭೋಗೀಂದ್ರ ಭೋಗಮಣಿ ರಂಜಿತ ಪುಣ್ಯಮೂರ್ತಿ " ಯಾಗಿ ವಿಷ್ಣುವು ಸಂಸಾರವೆಂಬ ವಿಷ ಸರ್ಪದ ವಿಷಪೂರಿತ ಕಡಿತದ ಭಯವನ್ನು ದೂರಮಾಡ ಬಹುದು. ವಿಷ್ಣುವು " ಯೋಗೀಷನ್ " ಮತ್ತು ಅವನು ಯೋಗ ಮಾಯೆಯನ್ನು ವಿಫಲಗೊಳಿಸಬಹುದು. ಅವನು ಆದಿ ಮಧ್ಯಾಂತರಹಿತಶಾಶ್ವತನು ಮತ್ತು ಯಾರು ಅವನಲ್ಲಿ ಶರಣಾಗತಿಯನ್ನು ಬಯಸಿ  ಬರುತ್ತಾರೋ ಅವರನ್ನು ರಕ್ಷಿಸಲು ಸದಾ ಸಿದ್ಧನಾಗಿ ಇರುವನು. " ಭವಾಬ್ದಿಪೋತನ " ನಾಗಿ ಅವನು ಶರಣಾಗತರನ್ನು ಸಂಸಾರ ಸಾಗರದಿಂದ ದಾಟಿಸುತ್ತಾನೆ. ಅನಿಯಮಿತ ಗುಣಗಳನ್ನು ಹೊಂದಿರುವ ಭಗವಂತನಲ್ಲಿ ಆದಿಶಂಕರರು ತಮ್ಮನ್ನು ಶರಣಾಗತ ರಕ್ಷಕನಾಗಿ ಉದ್ಧಾರಮಾಡೆಂದು ಬೇಡಿಕೊಳ್ಳುತ್ತಾರೆ.

ಶ್ಲೋಕ - 2 - ಸಂಸ್ಕೃತದಲ್ಲಿ :

ಬ್ರಹೇಂದ್ರರುದ್ರಮರುದರ್ಕಕಿರೀಟಕೋಟಿ-
ಸಂಘಟ್ಟಿತಾಂಘ್ರಿಕಮಲಾಮಲಕಾಂತಿಕಾಂತ
ಲಕ್ಷ್ಮೀಲಸತ್ ಕುಚಸರೋರುಹರಾಜಹಂಸ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಶಕ್ರ ರವಿ ಶಿವ ಸರಸಿಜರ ಮುಕುಟತಾಗಿ
ಅಮಲ ಕಾಂತಿಯಿಂ ಪೊಳೆಯುವ ಪಾದ ಪದ್ಮ
ಲಕುಮಿಕುಚಪದ್ಮದೆಡೆಯಿಹ ರಾಜಹಂಸ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ:

ಬ್ರಹ್ಮೇಂದ್ರ- ರುದ್ರ - ಮರುತ್ - ಅರ್ಕ - ಕಿರೀಟಕೋಟಿಸಂಘಟ್ಟಿತಾಂಘ್ರಿ ಕಮಲ = ಓ ದೇವನೇ! ಬ್ರಹ್ಮ, ಶಿವ, ಇಂದ್ರ, ಸೂರ್ಯ ಮತ್ತು ಮರುತ್ ಗಳು ತಮ್ಮ ಕಿರೀಟದ ತುದಿಗಳನ್ನು ನಿನ್ನ ಪಾದ ಪದ್ಮಗಳಿಗೆ ತಗಲುವಂತೆ ಸಾಷ್ಟ್ರಾಂಗ ನಮಸ್ಕಾರವನ್ನು ಮಾಡಿ ಮತ್ತು ಗಾಢವಾಗಿ ಹೊಳೆಯುವಂತೆ ಕಾಣಿಸುತ್ತಿದ್ದಾರೆ.

ಅಮಲಕಾಂತಿಕಾಂತ = ಓ ದೇವನೇ ! ಶುದ್ಧ ಸತ್ವಮಯ ದೇಹಕಾಂತಿಯಿಂದ ಕೂಡಿದವನು. (ಶುದ್ಧ ವಸ್ತುವಲ್ಲದ ಶರೀರ ಪ್ರಭೆ)

ಲಕ್ಷ್ಮೀ - ಲಸತ್ - ಕುಚ - ಸರೋರುಹರಾಜಹಂಸ  =
ಓ ದೇವನೇನೀನು ಮಹಾಲಕ್ಷ್ಮಿಯ ಮೃದು ಕುಚಗಳ ಮಧ್ಯೆ ರಾರಾಜಿಸುತ್ತಿರುವ ಹಂಸಗಳ ರಾಜನಂತೆ ಕಂಗೊಳಿಸುತ್ತಿರುವೆ.

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ = ಓ ಲಕ್ಷ್ಮೀನರಸಿಂಹ ಸ್ವಾಮಿಯೇ ದಯಮಾಡಿ ನಿನ್ನ ಶಕ್ತಿಯುತವಾದ ಕರಗಳಿಂದ ನನ್ನನ್ನು  ಸಂಸಾರ ಸಾಗರದಿಂದ ಹೊರಗೆಳೆದುಕೋ.

ವ್ಯಾಖ್ಯಾನ :

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಶ್ರೀಮನ್ನಾರಾಯಣನ ಅವತಾರ. ಶಾಸ್ತ್ರದ ಪ್ರಕಾರ ಶ್ರೀಮನ್ನಾರಾಯಣನು ಪರದೇವತೈ ಅಥವಾ ಪರಮೋಚ್ಚ ದೈವ ಎಂದು ನಾರಾಯಣುವಾಕಂ ಮತ್ತು ಮಹಾನಾರಾಯಣ ಉಪನಿಷತ್ತುಗಳಲ್ಲಿ ವರ್ಣಿಸಲಾಗಿದೆ. ಮೂಲ ಮಂತ್ರವೂ ಇದೇ ಸಿದ್ಧಾಂತವನ್ನು ಸ್ಪಷ್ಟೀಕರಿಸುತ್ತದೆ. ಹಾಗೇ ಅನಿರ್ಬುಧನ್ಯ ಸಂಹಿತೆಯೂ ಇದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಶ್ರೀಮನ್ನಾರಾಯಣನ ಮಾರ್ಗದರ್ಶನದಲ್ಲಿ ಬ್ರಹ್ಮನು ವಿಶ್ವದ ಸೃಷ್ಟಿಕರ್ತ ಪದವಿಯನ್ನು ಪಡೆಯಲು ಅನೇಕ ಸಂವತ್ಸರಗಳವರೆಗೂ ಆರಾಧನೆಯನ್ನು ಮಾಡಿದನು. ಬ್ರಹ್ಮ ಹಾಗೂ ಅನೇಕ ದೇವತೆಗಳು ಜ್ಞಾನವನ್ನು ಲಕ್ಷ್ಮೀನರಸಿಂಹನ ಕೈಂಕರ್ಯವನ್ನು ಮಾಡುವ ಮೂಲಕ ಪಡೆದರು. ಈ ದೇವತೆಗಳು ಲಕ್ಷ್ಮೀನರಸಿಂಹ ಪೆರುಮಾಳುವಿನ ಶರೀರ ( ಅಂಗನ್ಯಾನ್ಯ ದೇವತ ) ಮತ್ತು ಅವನೇ ಅವರ ಅಂತರಂಗದಲ್ಲಿ ಸದಾ ನೆಲೆಸಿರುವವನು ಹಾಗೂ ಅವರುಗಳಿಗೆ ಪೆರುಮಾಳ್ ವಹಿಸಿದ ಕರ್ತವ್ಯಗಳನ್ನು ಸರಿಯಾಗಿ ಮಾಡಲು ಆಜ್ಞಾಪಿಸುವನು. ಪೆರುಮಾಳ್ ಸಮಾಧಿಕ ದಾರಿದ್ರನ್ ( ಸರಿಸಮಾನರಾದವರು ಅಥವಾ ಉತ್ತಮರು ಇಲ್ಲದ ). ದೇವಾನು ದೇವತೆಗಳು ಪೆರುಮಾಳರ ಪಾದಗಳಿಗೆ ತಮ್ಮ ಶಿರದಲ್ಲಿ ಧರಿಸಿದ ಕಿರೀಟವು ಮುಟ್ಟುವಂತೆ ನಮಸ್ಕಾರವನ್ನು ಸಲ್ಲಿಸಿ ತಮ್ಮ ಮೇಲಿನ ಪೆರುಮಾಳುವಿನ ಅಧಿಕಾರವನ್ನು ಪ್ರದರ್ಶಿಸುವರು.

ಶ್ಲೋಕ - 3 - ಸಂಸ್ಕೃತದಲ್ಲಿ :

ಸಂಸಾರಘೋರಗಹನೇ ಚರತೋ ಮುರಾರೇ
ಮಾರೋಗ್ರಭೀಕರಮೃಗಪ್ರಚುರಾರ್ದಿತಸ್ಯ
ಆರ್ತಸ್ಯ ಮತ್ಸರನಿದಾಘಸುದುಃಖಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರ ಘೋರ ವನದೊಳಲದೆಂ ಮುರಾರಿ
ಕಾಮನೆಯ ಭೀಕರ ಮೃಗಕಂಜಿ ನಡುಗಿ
ಮತ್ಸರದ ಬೆಂಕಿಯಲಿ ಸಿಲುಕಿ ಬಲುನೊಂದೆ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ:

ಮುರಾರೆ = ಮುರ ಎಂಬ ಅಸುರನನ್ನು ಸಂಹಾರ ಮಾಡಿದ ಭಗವಂತ
ಸಂಸಾರಘೋರಗಹನೆ = ಭಯಾನಕ ಹಾಗೂ ಅಗಾಧವಾದ ಸಂಸಾರವೆಂಬ ಅರಣ್ಯ.
ಚರತೋ : ಮಾರೋಗ್ರ- ಭೀಕರಾಮೃಗ ಪ್ರವರಾರ್ದಿತಸ್ಯ = ಮನ್ಮಥನ ಹೆಸರಿನಉಗ್ರ ಹಾಗೂ ಭಯಾನಕ ಅಲೆದಾಡುತ್ತಿರುವ ಪಶುಗಳ ರಾಜನ ಆಕ್ರಮಣಕ್ಕೆ ನಾನು
ಒಳಗಾಗಿರುವೆ.
ಆರ್ತಸ್ಯ ಮತ್ಸರ ನಿದಾಘ ನಿಪೀಡಿತಸ್ಯ ಮಮ ಕರಾವಲಂಬಂ ದೇಹಿ = ಓ ದೇವನೇ ! ಮಾತ್ಸರ್ಯವೆಂಬ ಅಗ್ನಿಯ ತೀವ್ರವಾದ ತಾಪದಿಂದ ಬಳಲುತ್ತಿರುವ ಜಂತುವಿಗೆ ನಿನ್ನ ರಕ್ಷಿಸುವ ಹಸ್ತವನ್ನು ನೀಡು.

ವ್ಯಾಖ್ಯಾನ :

ಸಂಸಾರವೆಂಬ ಘೋರ ಅರಣ್ಯದಲ್ಲಿ ಅಸೂಯೆಯೆಂಬ ದಾವಾಗ್ನಿಯು ತೀವ್ರವಾಗಿ ದಹಿಸುತ್ತಿದೆ. ಕ್ರೂರ ಪ್ರಾಣಿಯಾದ ಕಾಮವು ( ಮನ್ಮಥನ್ ) ತನ್ನ ವಿಶಾಲವಾದ ಬಾಯಿಯಿಂದ ಎಲ್ಲವನ್ನೂ ನುಂಗುತ್ತಿದೆ. ಸಂಸಾರಿಯು ದಾವಾನಲ ಹಾಗೂ ಭಯಾನಕವಾದ ಪ್ರಾಣಿಯಿಂದ ತಪ್ಪಿಸಿಕೊಳ್ಳಲು ತನಗೆ ಸಾಧ್ಯವಾದಷ್ಟೂ  ವೇಗವಾಗಿ ಓಡುತ್ತಾ ಶ್ರೀ ಲಕ್ಷ್ಮೀನರಸಿಂಹನನ್ನು ರಕ್ಷಿಸೆಂದು ಪ್ರಾರ್ಥಿಸುತ್ತಿರುವನು.

ಶ್ಲೋಕ - 4 - ಸಂಸ್ಕೃತದಲ್ಲಿ :

ಸಂಸಾರಕೂಪಮತಿಘೋರಮಗಾಧಮೂಲo
ಸಂಪ್ರಾಪ್ಯ ದುಃಖಶತಸರ್ಪಸಮಾಕುಲಸ್ಯ
ದೀನಸ್ಯ ದೇವ ಕೃಪಯಾ ಪದಮಾಗತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರ ಕೂಪವತಿ ಘೊರವಗಾಧವಯ್ಯ
ಕಾಡಿಹವು ಹಾವ್ಗಳೊಲು ನೂರುದುಃಖಗಳು
ದೀನನಾಂ ಹೀನಗತಿಗಿಳಿದಿಹೆನೊ ದೇವ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಅತಿಘೋರಮ್ ಅಗಾಧಮೂಲಮ್ ಸಂಸಾರಕೂಪಮ್ ಸಂಪ್ರಾಪ್ಯ = ಭಯಾನಕ ಮತ್ತು ಆಳವಾದ ಸಂಸಾರವೆಂಬ ಬಾವಿಯಲ್ಲಿ ಬಿದ್ದನಂತರ.
ದುಃಖ ಶತಸರ್ಪ ಸಮಾಕುಲಸ್ಯ = ಅದರಲ್ಲಿ (ಬಾವಿಯಲ್ಲಿ) ಇರುವ ನೂರಾರು ವಿಷಪೂರಿತ ಸರ್ಪಗಳಿಂದ ಭಯಪೀಡಿತನಾದ.
ದೀನಸ್ಯ ದೇವ ಕೃಪಯಾ ಪದಮ್ ಆಗತಸ್ಯ ಮಮ ಕರಾವಲಂಬಂ ದೇಹಿಅಪಾಯ ಪರಿಸ್ಥಿತಿಯನ್ನನುಭವಿಸುತ್ತಿರುವ ಮತ್ತು ರಕ್ಷಣೆ ಇಲ್ಲದಿರುವ ಹೀನ ಪರಿಸ್ಥಿಯಿಂದ ನನ್ನನ್ನು ನಿನ್ನ ಶಕ್ತಿಯುತ ಹಸ್ತವನ್ನು ನೀಡುವ ಮೂಲಕ ದಯಮಾಡಿ ರಕ್ಷಿಸು.
ವ್ಯಾಖ್ಯಾನ :

ಸಂಸಾರವನ್ನು ಹಾಳುಭಾವಿಗೆ ಹೋಲಿಸಲಾಗಿದೆ. ಅದು ಎಷ್ಟು ಆಳವಿರುವುದೆಂಬುದು ಯಾರಿಗೂ ಅರಿಯದು. ಅದರೊಳಗೆ ಅನೇಕ ವಿಷಸರ್ಪಗಳು ವಾಸಿಸುತ್ತಿದ್ದು ಯಾರು ಈ ಬಾವಿಯಲ್ಲಿ ಬೀಳುವರೋ ಅವರನ್ನು ಬೆದರಿಸುತ್ತದೆ. ಅದರಲ್ಲಿ ಬಿದ್ದವನು ಸಂಪೂರ್ಣವಾಗಿ ಅಸಹಾಯಕನು. ಈ ನತದೃಷ್ಟ ಸಂಸಾರಿಯನ್ನು ವೈದ್ಯರುಗಳು ವೈದಿಕರು ಹಾಗೂ ಪ್ರಾಯಶ್ಚಿತ್ತಗಳು ಕೈಬಿಟ್ಟಿವೆ. ಈ ಸ್ಥಿತಿಯಲ್ಲಿರುವ ಸಂಸಾರಿಯನ್ನು ಪಾರುಮಾಡಲು ಶ್ರೀ ಲಕ್ಷ್ಮೀನರಸಿಂಹನೆಂಬ ಏಕೈಕ ವೈದ್ಯನಿಗೆ ಮಾತ್ರ ಸಾಧ್ಯ. (ವೈದ್ಯೋ ನಾರಾಯಣೋ ಹರಿಃ)

ಶ್ಲೋಕ - 5 - ಸಂಸ್ಕೃತದಲ್ಲಿ :

ಸಂಸಾರಸಾಗರವಿಶಾಲಕರಾಲಕಾಲ-
ನಕ್ರಗ್ರಹಗ್ರಸಿತನಿಗ್ರಹವಿಗ್ರಹಸ್ಯ
ವ್ಯಗ್ರಸ್ಯ ರಾಗನಿಚಯೋರ್ಮಿನಿಪೀಡಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರ ಸಾಗರ ವಿಶಾಲವದು ಘೋರ
ಕಾಲನಕ್ರನ ಹಿಡಿತಕೆ ಸಿಲುಕಿ ನೊಂದಿಹೆನೊ
ರಾಗದಲೆ ರಸನಾದಿ ಚಾಪಲ್ಯ ಪೀಡಿತನು
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಸಂಸಾರ - ಸಾಗರ - ವಿಶಾಲ - ಕರಾಳ - ಕಾಲ ನಕ್ರಗ್ರಹಗ್ರಸನ - ನಿಗ್ರಹ - ವಿಗ್ರಹಸ್ಯ = ಸಂಸಾರವೆಂಬ ಅಗಾಧ ಸಮುದ್ರದಲ್ಲಿ ಈಜುತ್ತಿರುವ ಕಾಲನೆಂಬ ಭಯಾನಕ ಮೊಸಳೆಯು ನನ್ನ ಶರೀರವನ್ನು ಹಿಡಿದು ನುಂಗುತ್ತಿದೆ ಹಾಗೂ ಈ ರೀತಿಯ ನೋವಿನ ಅನುಭವದಿಂದ ಪೀಡಿತನಾಗಿದ್ದೇನೆ.

ವ್ಯಾಗ್ರಸ್ಯ = ನನ್ನ ಬದುಕಿನ ಅನೇಕ ಚಿಂತೆಗಳ ಅಲೆಗಳಲ್ಲಿ ಸುತ್ತಿಕೊಂಡಿರುವ.

ರಾಗ ರಸನೋರ್ಮಿ ನಿಪೀಡಿತಸ್ಯ ಮಮ ಕರಾವಲಂಬಂ ದೇಹಿ = ಸಂಸಾರ ಸಾಗರದಲ್ಲಿನ ಇಂದ್ರಿಯ ಆಕರ್ಷಣೆಗಳ ಅನೇಕ ತೀವ್ರವಾದ ಅಲೆಗಳಲ್ಲಿ ಸುತ್ತುವರೆದಿರುವ ನನ್ನನ್ನು ಹೇ ದೇವಾ ! ನಿನ್ನ ಹಸ್ತವನ್ನು ನೀಡಿ ಪಾರುಮಾಡು.

ವ್ಯಾಖ್ಯಾನ :

ಸಮುದ್ರವನ್ನು ಇಲ್ಲಿ ಸಂಸಾರಕ್ಕೆ ಹೋಲಿಸಲಾಗಿದೆ. ಈ ಸಮುದ್ರದಲ್ಲಿ ಕಾಲನೆಂಬ ಭಯಾನಕ ಮೊಸಳೆಯು ಇದ್ದು ಅದು ತನ್ನ ಹಾದಿಯಲ್ಲಿ ಬರುವ ಎಲ್ಲವನ್ನೂ ನುಂಗುತ್ತದೆ. ಅದರ ಒಳಗೂ ಹಾಗೂ ಹೊರಗೂ ಬಾಗಿ ಚಾಚಿಕೊಂಡಿರುವ ಚೂಪಾದ ದಂತವನ್ನು ಹೊಂದಿದೆ. ಅದರೊಳಗೆ ಪ್ರವೇಶಿಸುವುದು ಹಾಗೂ ಹೊರಬರುವುದು ಅತ್ಯಂತ ನೋವಿನಿಂದ ಕೂಡಿರುವುದು. ಹೇಗೆ ಈ ಮೊಸಳೆಯ ಬಾಯಲ್ಲಿ ಸಿಲುಕಿರುವ ಕಪ್ಪೆಯು ತನ್ನ ನಾಲಗೆಯನ್ನು ಹತ್ತಿರದಲ್ಲಿ ಹಾರುತ್ತಿರುವ ಕೀಟದೆಡೆಗೆ ಚಾಚಿ ಅದನ್ನು ನುಂಗಲು ಪ್ರಯತ್ನಿಸುವುದೋ ಅದೇ ರೀತಿ ಸರ್ಪದಿಂದ ಹಿಡಿಯಲ್ಪಟ್ಟ ಸಂಸಾರಿಯು ಆಶಾ ಪಾಶಗಳೆಂಬ ಕಾಮನೆಗಳೆಡೆಗೆ ಆಕರ್ಷಿತನಾಗುತ್ತಾನೆ. ಈ ವಿಧದ ಸಂಸಾರಿಯು ಶ್ರೀ ಲಕ್ಷ್ಮೀನರಸಿಂಹನನ್ನು ಹೇಗೆ ಅವನು ಗಜೇಂದ್ರನನ್ನ ಮೊಸಳೆಯ ಬಾಯಿಂದ ರಕ್ಷಿಸಿದನೋ ಅದೇ ರೀತಿಯಲ್ಲಿ ರಕ್ಷಿಸುವಂತೆ ಪ್ರಾರ್ಥಿಸುತ್ತಾನೆ.


ಶ್ಲೋಕ - 6 - ಸಂಸ್ಕೃತದಲ್ಲಿ :

ಸಂಸಾರವೃಕ್ಷಮಘಬೀಜಮನಂತಕರ್ಮ-
ಶಾಖಾಯುತಂ ಕರಣಪತ್ರಮನಂಗಪುಷ್ಪಮ್
ಆರುಹ್ಯ ದುಃಖಫಲಿನಂ ಪತತೋ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್  
ಕನ್ನಡದಲ್ಲಿ :

ಪಾಪಬೀಜದಿನೊಗೆದ ಸಂಸಾರ ವೃಕ್ಷ
ವೇರಿಹೆನನಂತ ಕರ್ಮದ ಶಾಖೆ ನೂರದಕೆ
ಎಲೆಗಳದರವು ಎನ್ನ ದೇಹದಂಗಗಳು
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ:

ಅಘಬೀಜಮ್ = ಪಾಪಗಳ ಬೀಜಗಳಿಂದ ಮೊಳಕೆಯೊಡೆದ.
ಅನಂತ ಕರ್ಮ ಶಾಖಾ ಸತಮ್ = ಅನೇಕ ಕರ್ಮಗಳ ಎಣಿಸಲಾಗದಷ್ಟು ಶಾಖೆಗಳು.
ಕರ್ಣ ಪಾತ್ರಮ್ = ಇಂದ್ರಿಯಗಳನ್ನೇ ಮರದ ಎಲೆಗಳಾಗಿ.
ಅನಂಗ ಪುಷ್ಪಮ್ = ಕಾಮನೆಗಳನ್ನು ಪ್ರೇರೇಪಿಸುವ ಮನ್ಮಥನನ್ನೇ ಮರದಲ್ಲಿನ ಪುಷ್ಪವನ್ನಾಗಿ.
ದುಃಖ ಫಲಿತಂ = ದುಃಖವೇ ಮರದಲ್ಲಿನ ಫಲಗಳಾಗಿ.
ಸಂಸಾರ ವೃಕ್ಷಂ ಆರುಹ್ಯ ಪತಾತ = ನಾನು ಈ ಸಂಸಾರ ವೃಕ್ಷವನ್ನೇರಿ ಅದರಿಂದ ತಲೆಕೆಳಗಾಗಿ ಬಿದ್ದಿರುವೆ.
ಮಮ ಕರಾವಲಂಬಂ ದೇಹಿ = ಹೇ ಲಕ್ಷ್ಮೀ ನರಸಿಂಹನೇ ದಯಮಾಡಿ ನಿನ್ನ ಹಸ್ತವನ್ನು ನೀಡಿ ನನ್ನನ್ನು ಈ ತುಚ್ಛವಾದ ಸಂಸಾರ ವೃಕ್ಷದಿಂದ ಅನಿಯಂತ್ರಿತ ಅದಃಪತನದಿಂದ ರಕ್ಷಿಸು.

ವ್ಯಾಖ್ಯಾನ :

ಸಂಸಾರವನ್ನು ದೊಡ್ಡ ಮರಕ್ಕೆ ಹೋಲಿಸುವುದು ಸಾಂಪ್ರದಾಯಿಕವಾದದ್ದು. ಅರಣ್ಯಂ ಎಂಬುದನ್ನು "ಊರ್ಧ್ವಮೂಲಮವಾಕ್ಷಕಂ"ನ್ನು ಸೂಚಿಸುತ್ತದೆ. ಕಠೋಪನಿಷತ್ತಿನಲ್ಲಿ ಈ ಮರವನ್ನು ಊರ್ಧ್ವಮೂಲಾವಕ್ಷಕ ವೆಂದು ಬಣ್ಣಿಸಲಾಗಿದೆ. ಗೀತೋಪನಿಷತ್ತಿನಲ್ಲೂ ಸಂಸಾರವನ್ನು ಇದೇ ರೀತಿ ವಿವರಿಸಲಾಗಿದೆ.  (ಊರ್ಧ್ವಮೂಲಮಾಘ: ಶಾಖಾಮಶ್ವತ್ತಂ ಪ್ರಹೃರವ್ಯಂ). ಶ್ರೀಮದ್ ಭಾಗವತದಲ್ಲಿ ಈ ವೃಕ್ಷವನ್ನು "ಏಕಾಯನಾಸೌ - ದ್ವಿಫಲಾಸ - ತ್ರಿಮೂಲ".
ಸಾಂಸಾರಿಕ ವೃಕ್ಷವು ಪಾಪವೆಂಬ ಬೀಜದಿಂದ ಹುಟ್ಟಿ ವಿಷಪೂರಿತ ಫಲಗಳನ್ನು ಉತ್ಪತ್ತಿಮಾಡುತ್ತದೆ. ಈ ವೃಕ್ಷದಲ್ಲಿ ಪಾಪ ಹಾಗೂ ಪುಣ್ಯಗಳೆಂಬ ಎರಡು ವಿಧದ ಫಲಗಳು ಬಿಡುವುದು. ಎಲ್ಲ ಲೌಕೀಕ ಹಾಗೂ ವೈದಿಕ ಕರ್ಮಗಳು ಈ ವೃಕ್ಷದ ಶಾಖೆಗಳುಹನ್ನೊಂದು ಇಂದ್ರಿಯಗಳು ಈ ವೃಕ್ಷದ ಎಳೆಯ ಎಲೆಗಳು. ಆಸೆಗಳು (ಕಾಮನೆ) ಈ ವೃಕ್ಷದಲ್ಲಿನ ಹೂವುಗಳು. ಎಲ್ಲ ವಿಧದ ದುಃಖಗಳೂ ಈ ವೃಕ್ಷದಿಂದ ಜೋತು ಬಿದ್ದಿರುವ ಹಣ್ಣುಗಳು. ಸಂಸಾರಿಕನು ಈ ಅಪಾಯಕಾರಿ ವೃಕ್ಷವನ್ನೇರಲು ಪ್ರಯತ್ನಿಸಿ ಆಯತಪ್ಪಿ ಕೆಳಕ್ಕೆ ಬಿದ್ದು ಅಲ್ಲಿಂದ ನರಕ ಕೂಪದೆಡೆಗೆ ಜಾರುತ್ತಾನೆ. ಆದ್ದರಿಂದ ಪರಮ ದಯಾಳುವಾದ ಶ್ರೀಲಕ್ಷ್ಮೀನರಸಿಂಹನು ಬಂದು ಸಂಸಾರಿಯನ್ನು ರಕ್ಷಿಸಲೆಂದು ಪ್ರಾರ್ಥನೆ.

ಶ್ಲೋಕ - 7 - ಸಂಸ್ಕೃತದಲ್ಲಿ :

ಸಂಸಾರಸರ್ಪವಿಷದಗ್ಧಮಹೋಗ್ರತೀವ್ರ-
ದಂಷ್ಟ್ರಾಗ್ರಕೋಟಿ ಪರಿದಷ್ಟವಿನಷ್ಟಮೂರ್ತೇಃ
ನಾಗಾರಿವಾಹನ ಸುದಾಬ್ಧಿನಿವಾಸ ಶೌರೇ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :  

ಸಂಸಾರಸರ್ಪ ತೆರೆದಿಹುದು ಹಿರಿಬಾಯ
ಕೋರದಾಡೆಯ ಘೋರವಿಷದಿ ಬೆಂದಿಹೆನು
ಗರುಡವಾಹನ ಸುದಾಬ್ಧಿ ನಿವಾಸ ಶೌರಿ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ನಾಗರಿವಾಹನ = ಓ ಗರುಡವಾಹನನೇ
ಸುಧಾಬ್ದಿನಿವಾಸ = ಅಮೃತಸಾಗರದಲ್ಲಿರುವ ಓ ದೇವನೆ!
ಶೌರೆ = ವಸುದೇವನ ಪುತ್ರನಾಗಿ ಅವತರಿಸಿದ ಓ ದೇವನೆ!
"ಸಂಸಾರ - ಸರ್ಪ - ಗಹನವಕ್ತ್ರ - ಭಯೋಗ್ರತೀವ್ರ - ದಂಷ್ಟ್ರಕರಾಲ - ವಿಷ - ದಗ್ಧವಿನಷ್ಟಮೂರ್ತೇ" - ಸಂಸಾರವೆಂಬ ವಿಷಪೂರಿತ ಸರ್ಪದ ಕಡಿತದಿಂದ ನನ್ನ ಶರೀರವು ಉರಿಯತೊಡಗಿದೆಈ ಸರ್ಪದ ವಿಷಪೂರಿತ ಹಲ್ಲುಗಳಿಂದ ಉತ್ಪತ್ತಿಯಾದ ಭಯಾನಕ ಮತ್ತು ತೀವ್ರ ತಾಪವು ನನ್ನನ್ನು ಸುಡುತ್ತಿದೆ.
ಮಮ ಕರಾವಲಂಬಂ ದೇಹಿ = ಈ ಪರಿಯಾಗಿ ನರಳುತ್ತಿರುವ ನನ್ನನ್ನು ದಯಮಾಡಿ ನಿನ್ನ ತಂಪಾದ ಮತ್ತು ಸಾಂತ್ವನ ಹಸ್ತವನ್ನು ನೀಡಿ ಹಾಗೂ ಈ ಭಯಾನಕ ಸರ್ಪದಿಂದ ಹೊರಗೆಳೆದುಕೋ.

ವ್ಯಾಖ್ಯಾನ :

ಸಂಸಾರವನ್ನು ವಿಷಪೂರಿತ ಸರ್ಪವೆಂಬುದಾಗಿ ವರ್ಣಿಸುವುದು ಸಾಮಾನ್ಯ . ವಿಷ್ಣುವನ್ನು ಗರುಡವಾಹನನೆಂದು ಸ್ತುತಿಸುವರು. ಗರುಡನು ಸರ್ಪಗಳ ಶತ್ರು ಹಾಗಾಗಿ ಈ ಶ್ಲೋಕದಲ್ಲಿ " ಗರುಡ ನಾಗಾರಿ ವಾಹನ " ಎಂದು ಸ್ತುತಿಸಲಾಗಿದೆ. ಯಮುನಾ ನದಿಯ ಹಿನ್ನೀರಿನಲ್ಲಿ ಇದ್ದ ಜಂತುವು ತೀಕ್ಷ್ಣವಾದ ವಿಷಪೂರಿತ ಕಾಳಿಂಗ ಸರ್ಪ. ಈ ಸರ್ಪವು ತನ್ನ ತೀಕ್ಷ್ಣ ವಿಷದಿಂದ ಸುತ್ತ ಮುತ್ತಲಿನ ಎಲ್ಲ ಪ್ರಾಣಿ ಪಕ್ಷಿಗಳನ್ನು ಸುಡುತ್ತಿತ್ತು. ವಾಸುದೇವನ ಕಿರಿಯ ಮಗ ( ಶೌರಿ )ನು ಈ ಸರ್ಪದ ಹೆಡೆಯ ಮೇಲೇರಿ ನೃತ್ಯ ಮಾಡಿ ಸರ್ಪದ ಶಕ್ತಿಯನ್ನು ನಾಶ ಮಾಡಿದನು. ಅನಂತರ ಕಾಳಿಂಗ ಸರ್ಪವು ಬೇರೆಡೆಗೆ ಹೋಗಿ ಅಲ್ಲಿ ಯಾರಿಗೂ ತೊಂದರೆ ಕೊಡದೆ ತನ್ನ ಜೀವನವನ್ನು ಕಳೆಯಿತು. ಆದಿ ಶಂಕರರು ಶೌರಿ ಎಂಬ ಪದವನ್ನು ಇಲ್ಲಿ ಉಪಯೋಗಿಸಿ ಕಾಳಿಂಗನನ್ನು ಮರ್ಧಿಸಿದ ಶೂರ ಕಾರ್ಯವನ್ನು ಕೊಂಡಾಡಿದ್ದಾರೆ. ಈ ದೇವನನ್ನು ಸಂಸಾರವೆಂಬ ಸರ್ಪವನ್ನು ದೂರಮಾಡುವಂತೆ ಈ ಶ್ಲೋಕದಲ್ಲಿ ಪ್ರಾರ್ಥಿಸಲಾಗಿದೆ.

ಶ್ಲೋಕ - 8 - ಸಂಸ್ಕೃತದಲ್ಲಿ :

ಸಂಸಾರದಾವದಹನಾಕುಲಭೀಕರೋರು-
ಜ್ವಾಲಾವಲೀಭಿರತಿದಗ್ಧತನೂರುಹಸ್ಯ
ತ್ವತ್ಪಾದಪದ್ಮಸರಸೀರುಹಮಾಗತಸ್ಯ   
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರದಗ್ನಿಯುರಿದಿದೆ ಹರಡಿ ಜ್ವಾಲೆಗಳ
ರೋಮರೋಮವ ಬಿಡದೆ ದಹಿಸುತಿದೆಯಯ್ಯೋ
ನಿನ್ನಂಘ್ರಿ ಪದ್ಮಗಳನಾಶ್ರಯಿಸಿ ಬಂದೆ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ  :

ಸಂಸಾರದಾವ - ದಹನಾತುರಭೀಕರೋರು ಜ್ವಾಲಾ - ವಲೀಭಿ = ಅನೇಕ ಜ್ವಾಲೆಗಳಿಂದಾವೃತನಾಗಿ ಭೀತನಾಗಿರುವ ಜೀವನಿಗೆ ಸಂಸಾರ ಜ್ವಾಲೆಯು ಮತ್ತಷ್ಟು ಭಯವನ್ನು ಹುಟ್ಟಿಸುವುದು.

ಅತಿದಗ್ಧ - ತನೂರುಹಸ್ಯ = ಮತ್ತು ಸಂಸಾರ ಜ್ವಾಲೆಯ ತೀಕ್ಷ್ಣವಾದ ಶಾಖವು ಶರೀರದಲ್ಲಿನ ಕೂದಲುಗಳನ್ನು ಸುಡಲು ಕಾರಣವಾಗಿದೆ.

ತ್ವತ್ಪಾದಪದ್ಮಸರಸೀ - ಶರಣಾಗತಸ್ಯ = ತಂಪಾದ ಕೊಳದೊಳಗಿನ ನಿನ್ನ ಪವಿತ್ರ ಪಾದ ಪದ್ಮಗಳಲ್ಲಿ ನನ್ನ ಶರಣಾಗತಿಯನ್ನು ಅರ್ಪಿಸುತ್ತೇನೆ.

ವ್ಯಾಖ್ಯಾನ :

ಸಂಸಾರವೆಂಬ ಕಾಳ್ಗಿಚ್ಚು ತನ್ನ ಬೃಹತ್ತಾದ ಬೆಂಕಿಯ ನಾಲಗೆಯಿಂದ ತನ್ನ ಹಾದಿಯಲ್ಲಿ ಬರುವ ಎಲ್ಲವನ್ನೂ ಸುಡುತ್ತಿದೆ. ಈ ಭೀಕರ ಅಗ್ನಿಯಲ್ಲಿ ಸಂಸಾರಿಯು ಬೆಂದುಹೋಗುತ್ತಿದ್ದಾನೆ. ಸಂಸಾರಿಯು ಭಗವಂತನ ಪಾದದಡಿಯಲ್ಲಿರುವ ಶೀತಲ ಕೊಳದೆಡೆಗೆ ತನಗಂಟಿದ ಬೆಂಕಿಯನ್ನು ನಿವಾರಿಸಿಕೊಳ್ಳಲು ಹಾಗೂ ಅದರಿಂದ ಶಾಶ್ವತ ಪರಿಹಾರವನ್ನು ಪಡೆಯಲು ಧಾವಿಸುತ್ತಿದ್ದಾನೆ. ಸಂಸಾರಿಯು ಶ್ರೀ ಲಕ್ಷ್ಮೀನರಸಿಂಹನನ್ನು ತಿಕ್ಷ್ಣವಾದ ಬೆಂಕಿಯಿಂದ ಪಾರಾಗಿಸೆಂದು ಪ್ರಾರ್ಥಿಸುತ್ತಿದ್ದಾನೆ.

ಶ್ಲೋಕ - 9 - ಸಂಸ್ಕೃತದಲ್ಲಿ :

ಸಂಸಾರಜಾಲಪತಿತಸ್ಯ ಜಗನ್ನಿವಾಸ
ಸರ್ವೇಂದ್ರಿಯಾರ್ಥಬಡಿಶಾಗ್ರಝಷೋಪಮಸ್ಯ
ಪ್ರೋತ್ಕಂಪಿತಪ್ರಚುರತಾಲುಕಮಸ್ತಕಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರ ಬಲೆಗೆ ಬಿದ್ದೆ ಜಗನ್ನಿವಾಸ
ಸರ್ವಾಂಗ ಸಿಲುಕಿ ಕೊರಳಿಂದ ನೆತ್ತಿವರ
ಇಂದ್ರಿಯದ ಕೊಕ್ಕೆ ಶಿರತರಿದ ಮೇನಯ್ಯ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ :

ಜಗನ್ನಿವಾಸ = ಎಲ್ಲ ವಸ್ತುಗಳ ನೆಲೆಯಾದ ಓ ದೇವನೇ !
ಸಂಸಾರಜಾಲಪತಿತಸ್ಯ = ಸಂಸಾರ ಜಾಲದ ಬಲೆಯಲ್ಲಿ ಸಿಲುಕಿರುವೆ.
ಸರ್ವೇಂದ್ರಿಯಾರ್ಥ ಬಡಿಷಾರ್ಥಝಶೋಪಮಸ್ಯ = ಮೀನು ಹಿಡಿಯುವ ಬಲೆಯ ತುದಿಯಲ್ಲಿನ ಕೊಕ್ಕೆಗೆ ಸಿಲುಕಿರುವ ಮೀನು ಕೊಕ್ಕೆಗೆ ಸಿಕ್ಕಿಸಿರುವ ಮಾಂಸವನ್ನು ತಿನ್ನಲು ಉತ್ಸುಕನಾಗಿರುವುದನ್ನು ( ಶಬ್ದ - ರಸ - ಗಂಧಂ ) ಹೋಲುತ್ತದೆ.
ಪ್ರೋತ್ಕಂಪಿತಪ್ರಚುರತಾಲುಕಮಸ್ತಕಸ್ಯ = ಮತ್ತು ತನ್ನ ನಾಲಗೆ ಹಾಗೂ ಶಿರವನ್ನು ಕೊಕ್ಕೆಯ ತುದಿಯಲ್ಲಿರುವ ಮಾಂಸವನ್ನು ತಿನ್ನಲು ಹೋಗಿ ಕತ್ತರಿಸಿಕೊಂಡ ಆ ಮೀನಿನಂತೆ.

ವ್ಯಾಖ್ಯಾನ :

ಸಂಸಾರವೆಂಬುದು ಮೀನನ್ನು ಹಿಡಿಯಲು ಉಪಯೋಗಿ ಸುವ ಶಕ್ತಿಯುತ ಬಲೆಯಂತೆ. ಮನ್ಮಥನ ಬಳಿ ಮೀನು ಹಿಡಿಯಲು ಬಳಸುವ ಕೊಕ್ಕೆ ಇರುವುದು. ಆ ಕೊಕ್ಕೆಯ ತುದಿಗೆ ಪ್ರಲೋಭಿಸುವ ಮಾಂಸವನ್ನು ಸವರಿ ಮೀನನ್ನು ಆಕರ್ಷಿಸುತ್ತಿರುವನು. ಕೊಕ್ಕೆಯ ತುದಿಗೆ ಸವರಿರುವ ಆಹಾರವೇ ಇಂದ್ರಿಯಗಳ ಸಮೂಹ ( ಕಾಮೇಂದ್ರಿಯಮ್ - ಶಬ್ದ - ಸ್ಪರ್ಷ - ರೂಪ - ರಸ - ಗಂಧಮ್ ). ಮೀನು ( ಸಂಸಾರಿ ಅಥವಾ ಬದ್ಧ ಜೀವನ್) ಕೊಕ್ಕೆಯ ತುದಿಯಲ್ಲಿ ಅಂಟಿಸಿರುವ ಆಹಾರವನ್ನು ತಿನ್ನಲು ಹೋಗಿ ಕೊಕ್ಕೆಗೆ ಸಿಕ್ಕಿಹಾಕಿಕೊಳ್ಳುತ್ತದೆ. ಜೀವನು ಈ ಪ್ರಲೋಭನೆಯಿಂದಾಗಿ ಹೇಗೆ ಮೀನು ತನ್ನ ಕತ್ತನ್ನು ಕಡಿದುಕೊಳ್ಳುತ್ತದೋ ಹಾಗೇ ನರಳುತ್ತಾನೆ.

ಶ್ಲೋಕ - 10- ಸಂಸ್ಕೃತದಲ್ಲಿ :

ಸಂಸಾರಭೀಕರಕರೀಂದ್ರಕರಾಭಿಘಾತ-
ನಿಷ್ಪೀಡ್ಯಮಾನವಪುಷಃ ಸಕಲಾರ್ತಿನಾಶ
ಪ್ರಾಣಪ್ರಯಾಣಭವಭೀತಿಸಮಾಕುಲಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರವೆಂಬ ಗಜರಾಜ ಘಾತಿಸಿಹನು
ಮರ್ಮೇಂದ್ರಿಯಂಗಳನು ನುಗ್ಗಾಗಿಸಿಹನು
ಮರಣ ಭವಭೀತಿ ಬಹುನರಳಿಸಿದೆಯೆನ್ನ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ :

ಸಕಲಾರ್ಥಿನಾಶ ಲಕ್ಷ್ಮೀನೃಸಿಂಹ = ಎಲ್ಲ ವಿಧದ ದುಃಖಗಳನ್ನೂ ಹೊಡೆದೋಡಿಸುವ ಹೇ ಲಕ್ಷ್ಮೀನೃಸಿಂಹನೇ !
ಸಂಸಾರ ಭೀಕರ ಕರೀಂದ್ರ ಕರಾಭಿಘಾತ ನಿಷ್ಪಿಷ್ಟ ಮರ್ಮ ವಪುಷಃ = ಭಯಂಕರವಾದ ಹಾಗೂ ರಾಕ್ಷಸಾಕಾರದ ಆನೆಯು ತನ್ನ ದಂತದಿಂದ ನನ್ನ ಶರೀರವನ್ನು ಜಜ್ಜಿದ ಸ್ಥಿಯಲ್ಲಿರುವೆ.
ಪ್ರಾಣ ಪ್ರಯಾಣ ಭವಭೀತಿ ಸಮಾಕುಲಸ್ಯ = ವ್ಯಕ್ತಿಯೊಬ್ಬನು ತನ್ನ ಜೀವನದ ಕಡೇ ಕ್ಷಣದಲ್ಲಿ ಭೀತಿಯುತ ಸ್ಥಿಯಲ್ಲಿರುವವನಂತೆ ನಾನು ಗಡ ಗಡನೆ ನಡುಗುತ್ತಿರುವೆ.
ಮಮ ಕರಾವಲಂಬಂ ದೇಹಿ = ಆ ರೀತಿಯ ಭೀತಿಯಲ್ಲಿರುವ ನನಗೆ ದಯಮಾಡಿ ನಿನ್ನ ಹಸ್ತವನ್ನು ನೀಡಿ ನನ್ನನ್ನು ಈ ಭೀಕರ ಸಂಸಾರದಿಂದ ಪಾರುಮಾಡು.

ವ್ಯಾಖ್ಯಾನ :

ಸಂಸಾರವನ್ನು ಇಲ್ಲಿ ರಾಕ್ಷಸಾಕಾರದ ಆನೆಗೆ ಹೋಲಿಸಲಾಗಿದೆ. ಆನೆಯು ನಿರ್ದಯಿಯಾಗಿ ತನ್ನ ಮಾರ್ಗದಲ್ಲೆದುರಾಗುವ ಎಲ್ಲವನ್ನೂ ನಾಶ ಪಡಿಸುತ್ತದೆ. ಆ ರಾಕ್ಷಸ ಆನೆಯಿಂದ ಸಂಸಾರಿಯು ತುಳಿಯಲ್ಪಟ್ಟಿದ್ದಾನೆ. ಕೇವಲ ಸಿಂಹವು ಮಾತ್ರ ಈ ಆನೆಯನ್ನು ಹೊಡೆದೋಡಿಸಲು ಸಾಧ್ಯ. ಆದ್ದರಿಂದ ಶಂಕರ ಭಗವತ್ಪಾದರು ಮಾನವ - ಸಿಂಹ ರೂಪವುಳ್ಳ ಶ್ರೀ ನೃಸಿಂಹನನ್ನು ಮಧ್ಯೆ ಪ್ರವೇಶಿಸಿ ತನ್ನನ್ನು ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ.

ಶ್ಲೋಕ - 11 - ಸಂಸ್ಕೃತದಲ್ಲಿ :

ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ
ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈಃ
ಮೋಹಾಂಧಕಾರಕುಹರೇ ವಿನಿಪಾತಿತಸ್ಯ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಇಂದ್ರಿಯಂಗಳೆಂಬ ಹೆಸರಿನ ಚೋರರೆನ್ನ
ವಿವೇಕ ಮಹಾಧನವನೊಯ್ದಿಹರು, ನಾನು
ಮೋಹಾಂಧಕೂಪದಲಿ ಬಿದ್ದು ನರಳಿಹೆನು
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಇಂದ್ರಿಯಗಳೆಂಬ ಚೋರರು ನನ್ನ ಹೃದಯವನ್ನು ಪ್ರವೇಶಿಸಿ ವಿವೇಕವನ್ನು ಅಪಹರಿಸಿ ನಂತರ ನನ್ನನ್ನು ರಸ್ತೆಯ ಪಕ್ಕದಲ್ಲಿನ ಪಾಳುಭಾವಿಯಲ್ಲಿ ಕೊಳೆಯುವಂತೆ ದೂಡಿ ಹೋಗಿದ್ದಾರೆ. ಅಜ್ಞಾನವೆಂಬ ಪರದೆಯು ನನ್ನ ಚಕ್ಷುಗಳನ್ನು ಮುಚ್ಚಿವೆ. ಹೇ ಲಕ್ಷ್ಮೀನೃಸಿಂಹ ದೇವನೇ ! ದಯಮಾಡಿ ನನ್ನ ಕಣ್ಣುಗಳ ಮುಂದಿರುವ ಈ ಪರದೆಯನ್ನು ದೂರಸರಿಸಿ ನನ್ನನ್ನು ಮೋಹವೆಂಬ ಕೂಪದಿಂದ ಮೇಲೆತ್ತು.

ಪದಗಳ ಅರ್ಥಗಳು :

ಅಂಧಸ್ಯ = ಅಸಹಾಯಕ ಕುರುಡನಾಗಿರುವವ
ಬಲಿಭಿ : ಇಂದ್ರಿಯಾಣಾಮಧೇಯೈ : ಚೋರೈ : ಹೃತ - ವಿವೇಕ - ಮಹಾಧನಸ್ಯ = ಇಂದ್ರಿಯಂಗಳೆಂಬ ಚೋರರು ವಿವೇಕವೆಂಬ ಸಂಪತ್ತನ್ನು ಅಪಹರಿಸಿದ್ದಾರೆ.
ಮಹಾಂಧಕೂಪಕುಹರೆ ವಿನಿಪಾತಿತಸ್ಯ ಮಮ = ಮೋಹವೆಂಬ ಹಾಳುಭಾವಿಯಲ್ಲಿ ದೂಡಲ್ಪಟ್ಟವನು.

ವ್ಯಾಖ್ಯಾನ :

ಛಾಂದೋಗ್ಯೋಪನಿಷತ್ತಿನ ಆರನೇ ಅಧ್ಯಾಯ ಹದಿನಾಲ್ಕನೇ ಭಾಗದಲ್ಲಿ ಗಾಂಧಾರ ಪುರುಷನೊಬ್ಬನನ್ನು ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಅವನನ್ನು ದೃಷ್ಟಿ ಹೀನನನ್ನಾಗಿ ಮಾಡಿ ಅವನನ್ನು ದಟ್ಟವಾದ ಕಾಡಿನಲ್ಲಿ  ಬಿಡುವುದರ ಬಗೆಗೆ ವಿವರಿಸಲಾಗಿದೆ. ಅವನ ಅಳಲನ್ನು ಆಲಿಸಲು ಹಾಗೂ ಸಹಾಯ ಮಾಡಲು ಒಂದು ನರಪಿಳ್ಳೆಯೂ ಸಹ ಅಲ್ಲಿರುವುದಿಲ್ಲಕೊನೆಗೆ ಯಾರೋ ಒಬ್ಬ ದಾರಿಹೋಕನು ಅಂಧನ ಆಕ್ರಂದನವನ್ನು ಕೇಳಿಸಿಕೊಂಡು ಅವನ ಬಳಿ ಬಂದು ಅವನ ಕಣ್ಣಿಗೆ ಕಟ್ಟಿದ್ದ ವಸ್ತ್ರವನ್ನು ಬಿಚ್ಚುತ್ತಾನೆ ಹಾಗೂ ಗಾಂಧಾರ ದೇಶದೆಡಗಿನ ಮಾರ್ಗವನ್ನು ತಿಳಿಸುತ್ತಾನೆ. ಇಲ್ಲಿ ದಾರಿಹೋಕನು ಬೇರಾರೂ ಅಲ್ಲ. ಅವನೇ ಭಗವಂತ ಮತ್ತು ಅವನು ಜೀವನನ್ನು ಕರ್ಮ ಬಂಧನಗಳಿಂದ ಮುಕ್ತನಾಗಿಸಿ ಮೋಕ್ಷ ಮಾರ್ಗವನ್ನು ತೋರಿಸುತ್ತಾನೆ. ಅವನೇ ಶ್ರೀ ಲಕ್ಷ್ಮೀನರಸಿಂಹ.

ಶ್ಲೋಕ - 12- ಸಂಸ್ಕೃತದಲ್ಲಿ :

ಬದ್ಧ್ವಾ ಗಲೇ ಯಮಭಟಾ ಬಹು ತರ್ಜಯಂತಃ
ಕರ್ಷಂತಿ ಯತ್ರ ಭವಪಾಶ ಶತೈರ್ಯುತಂ ಮಾಮ್
ಏಕಾಕಿನಂ ಪರವಶಂ ಚಕಿತಂ ದಯಾಲೋ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಕುತ್ತಿಗೆಯ ಕಟ್ಟಿ ಬೆದರಿಪರು ಯಮಭಟರು
ಸಂಸಾರ ಪಾಶಗಳು ನೂರೆಳೆಯುತಿಹವು
ಏಕಾಕಿಯಸಹಾಯ ಭೀತ ನಾನು ದಯಾಳು
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಓ ಲಕ್ಷ್ಮೀ ನರಸಿಂಹ ! ಯಮಧರ್ಮ ರಾಜನ ಸೇವಕರು ನನ್ನ ಕುತ್ತಿಗೆಗೆ ನೇಣು ಹಗ್ಗವನ್ನು ಬಿಗಿದು ನನ್ನನ್ನು ನರಕದೆಡೆಗೆ ಎಳೆದೊಯ್ಯುತ್ತಿರುವರು. ನಾನು ಈಗಾಗಲೇ ಆಸೆ ಹಾಗೂ ವ್ಯಸನಗಳಿಂದ ಬಂಧಿತನಾಗಿರುವೆ ( ಆಶಾ - ಪಾಶಮ್ ). ನನ್ನನ್ನು ರಕ್ಷಿಸಲು ಯಾರೊಬ್ಬರೂ ಇಲ್ಲ ಹಾಗೂ ನಾನು ಮುಂದೇನಾಗುವುದೋ ಎಂಬ ಭೀತಿಯಿಂದ ನಡುಗುತ್ತಿರುವೆ. ಹೇ ದೇವನೇ ಅನಂತ ಕರುಣಾಸಾಗರನೇ ! ದಯಮಾಡಿ ನನ್ನನ್ನು ಈ ಪರಿಸ್ಥಿಯಿಂದ ರಕ್ಷಿಸು.

ಪದಗಳ ಅರ್ಥ :

ಯಮಭಟ : ಭವಪಾಶ ಶತಾಯೈ : ಯುತಮ್ = ಸಾವಿರಾರು ಆಶಾ ಪಾಶಗಳಿಂದ ಬಂಧಿಸಲ್ಪಟ್ಟ ನನ್ನನ್ನು ಈಗಾಗಲೇ ಯಮರಾಜನ ಸೇವಕರು ಎಳೆದೊಯ್ಯಲು ಬಂದಿದ್ದಾರೆ.
ಏಕಾಕಿನಂ ಪರವಶಂ ಚಕಿತಂ ಮಾಮ್ = ನಾನು ಒಬ್ಬಂಟಿಯಾಗಿ ಬೇರೆಯವರ ಪ್ರಭಾವಕ್ಕೊಳಗಾಗಿ ಏನು ಮಾಡಲೂ ತೋಚದೆ ನಡುಗುತ್ತಾ  ಮುಂದೇನಾಗು ವುದೋ ಎಂದು ಭಯಭೀತನಾಗಿರುವೆ.
ಯಮಭಟ : ಮಾಮ್ ಗಲೇ ಬದ್ಧ್ವ ಬಹು ತರ್ಜನ್ಯ : ಯತ್ರ ಕರ್ಶಂತಿ = ಯಮ ಧರ್ಮನ ಸೇವಕರು ತಮ್ಮಲ್ಲಿರುವ ಹಗ್ಗದಿಂದ ನನ್ನ ಕುತ್ತಿಗೆಯನ್ನು ಕಟ್ಟಿ ಜೋರಾಗಿ ಕಿರುಚುತ್ತಾ ನನ್ನನ್ನು ಎಲ್ಲಿಗೋ ಎಳೆದೊಯ್ಯುತ್ತಿರುವರು.
ದಯಾಳೋ ! ಲಕ್ಷ್ಮೀನೃಸಿಂಹ ! ಮಮ ಕರಾವಲಂಬಂ ದೇಹಿ = ಹೇ ಕರುಣಾಸಾಗರನೇ ಲಕ್ಷ್ಮೀನರಸಿಂಹನೇ ! ದಯಮಾಡಿ ನಿನ್ನ ಶಕ್ತಿಯುತವಾದ ಹಸ್ತವನ್ನು ನೀಡಿ ನನ್ನನ್ನು ಈ ಪರಿಸ್ಥಿತಿಯಿಂದ ರಕ್ಷಿಸು.

ವ್ಯಾಖ್ಯಾನ :

ಈ ಶ್ಲೋಕದಲ್ಲಿ ಶಂಕರಾಚಾರ್ಯರು ಬದ್ಧ ಜೀವಿಯ ಪರಿಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಹೇಗೆ ಜೀವಿಯೂ ಈಗಾಗಲೇ ಸಂಸಾರ ಮತ್ತು ಆಸ್ತಿ ಪಾಸ್ತಿಗಳಂಥಹ ಅನೇಕ ಪ್ರಾಪಂಚಿಕ ಆಶಾ ಪಾಶಗಳಿಂದ ಬಂಧಿತನಾಗಿರುವನು ಎಂಬುದನ್ನು ವಿವರಿಸುತ್ತಾರೆ. ಉರಿಯುವ ಗಾಯಕ್ಕೆ ತುಪ್ಪವನ್ನು ಸುರಿಯುವಂತೆ ಯಮ ಧರ್ಮ ರಾಜನ ಸೇವಕರು ಇನ್ನಷ್ಟು ಪಾಶಗಳಿಂದ ಜೀವಿಯ ಕೊರಳನ್ನು ಬಂಧಿಸಿ ಅವನ ಅನೇಕ ಪಾಪಕೃತ್ಯಗಳಿಗೆ ಶಿಕ್ಷಿಸಲು ನರಕದೆಡೆಗೆ ಎಳೆದೊಯ್ಯುತ್ತಿರುವರು. ಜೀವಿಯನ್ನು ಅಡ್ಡಾದಿಡ್ಡಿಯಾಗಿ ಎಳೆದಾಡುತ್ತಿರುವುದರಿಂದ ಅವನು ಕೆಳಗೆ ಬೀಳುವನು. ಆಗ ತಾಳ್ಮೆಯನ್ನು ಕಳೆದುಕೊಂಡ ಯಮಭಟರು ಜೀವಿಯನ್ನು ವಾಚಾಮಗೋಚರವಾಗಿ ಬಯ್ಯುತ್ತಾ ವೇಗದಿಂದ ನಡೆಯುವಂತೆ ಆಜ್ಞಾಪಿಸುತ್ತಿರುವರು. ಒಬ್ಬಂಟಿಯಾದ ಜೀವಿಯು ಪಶ್ಚಾತ್ತಾಪ ಪಡುತ್ತಿರುವನು. ಜೀವಿಯು ಅಸಾಹಯಕನಾಗಿ ಗೊಳೋ ಎಂದು ಆಕ್ರಂದಿಸುತ್ತಾ ಶ್ರೀ ಲಕ್ಷ್ಮೀನರಸಿಂಹನನ್ನು ತನ್ನ ಈ ಪರಿಸ್ಥಿಯಿಂದ ಪಾರುಮಾಡೆಂದು ಪ್ರಾರ್ಥಿಸುತ್ತಾನೆ.

ಶ್ಲೋಕ - 13- ಸಂಸ್ಕೃತದಲ್ಲಿ :

ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ
ಯಜ್ಞೇಶ ಯಜ್ಞ ಮಧುಸೂದನ ವಿಶ್ವರೂಪ
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಲಕ್ಷ್ಮೀಶ ಕಮಲನಾಭ ಸುರೇಶ ವಿಷ್ಣು
ವೈಕುಂಠ ಕೃಷ್ಣ ಮಧುವೈರಿ ಕಮಲಾಕ್ಷ
ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಈ ಶ್ಲೋಕವು ವಿಷ್ಣುವಿನ ಅನೇಕ ನಾಮಾವಳಿಗಳೊಂದಿಗೆ ಹಾಗೂ ರಕ್ಷಣೆಯನ್ನು ಬಯಸಿ ಪ್ರಾರ್ಥಿಸುವ ರೀತಿಯಲ್ಲಿ ಸುಂದರವಾಗಿ ರಚಿಸಲಾಗಿದೆ. ಆದಿ ಶಂಕರಾಚಾರ್ಯರು ಭಗವಂತನಿಗೆ ಜೀವಿಯನ್ನು ಎಲ್ಲ ರೀತಿಯಲ್ಲೂ ಉದ್ದಾರಮಾಡಲು ಶಕ್ತಿ ಉಂಟೆಂದು ಸೂಚಿಸುತ್ತಾರೆ. ಲಕ್ಷ್ಮೀಕಾಂತನಾಗಿ ಅವನು ಎಲ್ಲರನ್ನೂ ರಕ್ಷಿಸುತ್ತಾನೆ ಹಾಗೂ ಸಲಹುತ್ತಾನೆ. ಕಮಲನಾಭನಾಗಿ ಅವನು ಸೃಷ್ಟಿಸುತ್ತಾನೆ. ಕೃಷ್ಣನಾಗಿ ನಮ್ಮನ್ನು ಭವ ಬಂಧನದಿಂದ ಹಾಗೂ ಪಾಪಗಳ ಬಂಧನದಿಂದ ಮುಕ್ತಿಗೊಳಿಸುತ್ತಾನೆ ( ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ ). ವಾಸುದೇವನಾಗಿ ಅವನು ಸರ್ವಾಂತರ್ಯಾಮಿ ಮತ್ತು ರಕ್ಷಿಸಿ ಸಲಹುತ್ತಾನೆ. ದೇವೇಶನಾಗಿ ಅವನು ಇಂದ್ರಿಯಗಳನ್ನು ಸರಿಯಾದ ಹಾದಿಯಲ್ಲಿ ಕ್ರಮಿಸುವಂತೆ ಮಾರ್ಗದರ್ಶನವನ್ನು ಮಾಡುತ್ತಾನೆ. ಈ ಶ್ಲೋಕವು ಹಾಗೂ ಮೊದಲನೇ ಶ್ಲೋಕ ಮತ್ತು ಮುಂದಿನ ಶ್ಲೋಕಗಳಷ್ಟನ್ನೇ ಪ್ರತಿನಿತ್ಯ ಪಠಿಸಿದರೂ ಸಾಕು ಶ್ರೀ ಲಕ್ಷ್ಮೀ ನರಸಿಂಹನ ಅನುಗ್ರಹವನ್ನು ಪಡೆಯಲು.

ಶ್ಲೋಕ - 14 - ಸಂಸ್ಕೃತದಲ್ಲಿ :

ಏಕೇನ ಚಕ್ರಮಪರೇಣ ಕರೇಣ ಶಂಖಂ
ಅನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಒಂದು ಕೈಯೊಳು ಚಕ್ರ ಶಂಖವಿನ್ನೊಂದರಲಿ
ಮತ್ತೊಂದರಲಿ ಶರಧಿ ಸುತೆಯನಪ್ಪಿ ನಿಂತು
ಎಡಹಸ್ತ ಸೂಚಿಪುದು ಅಭಯ ವರಪದ್ಮ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ವಿವರಣೆ :

ಚತುರ್ಭುಜಧಾರಿ ಶ್ರೀ ಲಕ್ಷ್ಮೀನರಸಿಂಹ. ಮೇಲ್ಗಡೆಯ ಎರಡು ಕೈಗಳಲ್ಲಿ ಶಂಖ ಹಾಗೂ ಸುದರ್ಶನ ಚಕ್ರವಿದ್ದು ಚೆಂಚು ಲಕ್ಷ್ಮಿಯನ್ನು ಮೂರನೇ ಹಸ್ತದಿಂದ ಅಪ್ಪಿ ಹಿಡಿದುಕೊಂಡಿರುವುದರ ಜೊತೆಗೆ ಅಭಯ ತೋರುತ್ತಿರುವುದು. ನಾಲ್ಕನೇ ಹಸ್ತವು ವರದ ಮುದ್ರೆಯನ್ನು ತೋರುತ್ತಿದೆ. ಶಂಕರಾಚಾರ್ಯರು ಅಭಯ ಮುದ್ರೆಯನ್ನು ತೋರುತ್ತಿರುವ ಬಲಭಾಗದ ಕೈಯಿನ ಮೂಲಕ ತನ್ನನ್ನು ರಕ್ಷಿಸೆಂದು ಪ್ರಾರ್ಥಿಸುತ್ತಾರೆ.
ಪದಗಳ ಅರ್ಥ :

ವರದಾಭಯ - ಪದ್ಮ - ಚಿನ್ಹ = ವರದ ಲಾಂಛನ, ಅಭಯ ಮುದ್ರೆ ಮತ್ತು ಪದ್ಮ ಪುಷ್ಪವನ್ನು ಕೈಗಳಲ್ಲಿ ಹಿಡಿದಿರುವ ಓ ದೇವನೇ !
ಏಕೇನ ಕರೇಣ ಶಂಖಂ = ದಿವ್ಯ ಜ್ಞಾನವನ್ನು ಪ್ರತಿನಿಧಿಸುವ ಶಂಖವನ್ನು ನಿನ್ನ ಒಂದು ಕೈಗಳಲ್ಲಿ ಹಿಡಿದಿರುವೆ.
ಅನ್ಯೇನ ಸಿಂಧುತನಯಾಂ ಅವಲಂಬ್ಯ ತಿಷ್ಠನ್ = ಮತ್ತೊಂದು ಕೈಗಳಲ್ಲಿ ಸಾಗರ ಕುವರಿ - ಮಹಾಲಕ್ಷ್ಮಿಯನ್ನು ಅಪ್ಪಿ ಹಿಡಿದಿರುವ ಭಂಗಿಯಲ್ಲಿರುವೆ.
ವಾಮೇತರೇಣ ಮಮ ಕರಾವಲಂಬಂ ದೇಹಿ = ಭೀತಿ ಹುಟ್ಟಿಸುವ ಸಂಸಾರದಿಂದ ಪಾರುಮಾಡಲು ದಯಮಾಡಿ ನಿನ್ನ ಬಲ ಹಸ್ತವನ್ನು ನೀಡು.

ಶ್ಲೋಕ - 15 - ಸಂಸ್ಕೃತದಲ್ಲಿ :

ಸಂಸಾರಸಾಗರನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಮ್
ಪ್ರಹ್ಲಾದಖೇದಪರಿಹಾರಕೃತಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಸಂಸಾರ ಸಾಗರದಿ ಮುಳುಗಿರುವ ನನ್ನ
ದೀನನನು ನೋಡೊಡೆಯ ಕಾರುಣ್ಯನಿಧಿಯೆ
ಪ್ರಹ್ಲಾದನ ದುಃಖ ಕಳೆದ ಪರಾವತಾರ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ :

ಪ್ರಹ್ಲಾದಖೇದ - ಪರಿಹಾರ ಪರಾವತಾರ = ಪ್ರಹ್ಲಾದನ ದುಃಖವನ್ನು ನಾಶಮಾಡಲು ಅವತಾರವೆತ್ತಿದ ಓ ದೇವನೇ !
ಸಂಸಾರ - ಸಾಗರ - ನಿಮಜ್ಜನ - ಮುಹ್ಯಮಾನಂ ದೀನಂ ಮಾಂ ವಿಲೋಕಯಸಂಸಾರ ಸಾಗರದಲ್ಲಿ ಮುಳುಗಿ ಪ್ರಜ್ಞಾಹೀನನಾಗಿರುವ ಈ ನತದೃಷ್ಟನ ಮೇಲೆ ನಿನ್ನ ಕರುಣಾಪೂರಿತ ದೃಷ್ಟಿಯನ್ನು ಹರಿಸು.

ವಿವರಣೆ :

ಶ್ರೀ ಲಕ್ಷ್ಮೀನರಸಿಂಹನು ಹೇಗೆ ಪ್ರಹ್ಲಾದನನ್ನು ರಕ್ಷಿಸಿದನೋ ಅದೇ ರೀತಿ ತನ್ನ ಕರುಣಾಪೂರಿತ ದೃಷ್ಟಿಯನ್ನು ತನ್ನ ಮೇಲೆ ಹರಿಸಿ ಉದ್ದರಿಸೆಂದು ಶಂಕರ ಭಗವತ್ಪಾದರು ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ಶ್ಲೋಕ - 16 - ಸಂಸ್ಕೃತದಲ್ಲಿ :

ಪ್ರಹ್ಲಾದನಾರದಪರಾಶರಾಪುಂಡರೀಕ -
ವ್ಯಾಸಾದಿಭಾಗವತಪುಂಗವಹೃನ್ನಿವಾಸ
ಭಕ್ತಾನುರಕ್ತಪರಿಪಾಲನ ಪಾರಿಜಾತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್
ಕನ್ನಡದಲ್ಲಿ :

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾದಿ ಪರಮಭಕ್ತ ಹೃದಯ ನಿವಾಸ
ಭಕ್ತರನುರಕ್ತ ಪೋಷಕ ಕಲ್ಪವೃಕ್ಷ
ಲಕ್ಷ್ಮೀನರಸಿಂಹ ಎನಗೀಯೋ ಸಹಾಯಹಸ್ತ

ಪದಗಳ ಅರ್ಥ :

ಪ್ರಹ್ಲಾದ, ನಾರದ, ಪರಾಶರ, ಪುಂಡರೀಕ, ವ್ಯಾಸಾದಿ ಭಾಗವತಪುಂಗವ ಹೃನ್ನಿವಾಸ = ಭಾಗವತೋತ್ತಮರಾದ ಪ್ರಹ್ಲಾದ ನಾರದ ಪರಾಶರ (ವಿಷ್ಣು ಪುರಾಣದ ಕರ್ತೃ ) ಮತ್ತು ವ್ಯಾಸ ಮುನಿಗಳ ಹೃದಯ ಪದ್ಮಗಳಲ್ಲಿ ನೆಲೆಸಿರುವ ಓ ದೇವನೇ !
ಭಕ್ತಾನುರಕ್ತ ಪರಿಪಾಲನ ಪಾರಿಜಾತ = ನಿನ್ನಲ್ಲಿ ಬೇರ್ಪಡಿಸಲಾಗದಂತಿರುವ ಭಕ್ತರಿಗೆ ನೀನು ದೈವೀ ಪುಷ್ಪವಾದ ಪಾರಿಜಾತದಂತೆ ಇರುವೆ ಓ ದೇವನೇ !

ವ್ಯಾಖ್ಯಾನ :
ಈ ಶ್ಲೋಕದಲ್ಲಿ ಅಂತರ್ಯಾಮಿ ಬ್ರಹ್ಮಮ್ ಆದ ಶ್ರೀ ಲಕ್ಷ್ಮೀ ನರಸಿಂಹನು ತನ್ನ ನಾಲ್ಕು ವಿಧದ ಭಕ್ತರಾದ - ಅರ್ಥ, ಜಿಜ್ಞಾಸುಅರ್ಥಾರ್ಥಿ ಮತ್ತು ಜ್ಞಾನಿಗಳಿಗೆ ಆಶೀರ್ವದಿಸುವ ಅಂತರ್ಯಾಮಿ ಬ್ರಹ್ಮನ್ ಆದ ಶ್ರೀಲಕ್ಷ್ಮೀನರಸಿಂಹನನ್ನು ಕುರಿತು ಪ್ರಾರ್ಥನೆ ಮಾಡಲಾಗಿದೆಮೊದಲ ಮೂರು ವಿಧದ - ಅರ್ಥ,ಜಿಜ್ಞಾಸು ಹಾಗೂ ಅರ್ಥಾರ್ಥಿಗಳು, ಭಕ್ತರಾದರೆ ನಾಲ್ಕನೇ ವಿಧದವರು ಅನುರಕ್ತರು. ಭಗವಂತನು ತನ್ನ ಭಕ್ತರ ಹಾಗೂ ಅನುರಕ್ತರ ಕ್ಷೇಮವನ್ನು ನೋಡಿಕೊಳ್ಳುತ್ತಾನೆ (ತೇಷಾಂ ಯೋಗಕ್ಷೇಮಂ ವಹಾಮ್ಯಹಂ ). ಇಲ್ಲಿ ಭಾಗವತೋತ್ತಮರ ಮೇಲಿನ ಭಗವಂತನ ವಿಷೇಶವಾದ ಆಸಕ್ತಿಯನ್ನು ವೈಭವೀಕರಿಸಲಾಗಿದೆ.

ಶ್ಲೋಕ - 17 - ಸಂಸ್ಕೃತದಲ್ಲಿ :
ಲಕ್ಷ್ಮೀನೃಸಿಂಹಚರಣಾಬ್ಜಮಧುವ್ರತೇನ
ಸ್ತೋತ್ರಂ ಕೃತಂ ಶುಭಕರಂ ಭುವಿ ಶಂಕರೇಣ
ಯೇ ತತ್ಪಠಂತಿ ಮನುಜಾ ಹರಿಭಕ್ತಿಯುಕ್ತಾಃ
ತೇ ಯಾಂತಿ ತತ್ಪದಸರೋಜಮಖಂಡರೂಪಮ್
ಕನ್ನಡದಲ್ಲಿ :
ಲಕ್ಷ್ಮೀನರಸಿಂಹ ಪಾದಕಮಲ ಭೃಂಗ
ಲೋಕರಹಿತಕರ ಸ್ತೋತ್ರ ಪೇಳ್ದ ಶಂಕರನು
ಹರಿಭಕ್ತಿಯುಕ್ತರಿದ ಪೇಳ್ದ ಸಜ್ಜನರು
ಬ್ರಹ್ಮಪದಪದ್ಮದಖಂಡ ರೂಪ ಹೊಂದುವರು

ಪದಗಳ ಅರ್ಥ :
ಲಕ್ಷ್ಮೀನೃಸಿಂಹ ಚರಣಾಬ್ಜ - ಮಧುವ್ರತೇನ ಶಂಕರೇಣ = ಶಂಕರನೆಂಬ ನಾಮಧೇಯದ ಆಚಾರ್ಯರು ಒಂದು ದುಂಬಿಯಂತೆ ಶ್ರೀಲಕ್ಷ್ಮೀನರಸಿಂಹನ ಪಾದ ಪದ್ಮಗಳ ಸುತ್ತಾ ಹಾರಾಡುತ್ತಿರುವರು.
ಭುವಿ ಶುಭಕರಂ ಸ್ತೋತ್ರ ಕೃತಂ = ಲೋಕಕ್ಷೇಮದ ಸಲುವಾಗಿ ಈ ಸ್ತೋತ್ರವನ್ನು ರಚಿಸಲಾಗಿದೆ.
ಹರಿಭಕ್ತಿಯುಕ್ತ: ಯೇ ತತ್ ಪಠಂತಿ = ಯಾರು ಹರಿಯಲ್ಲಿ ಪರಮ ಭಕ್ತಿಯನ್ನು ತುಂಬಿಕೊಂಡು ಈ ಸ್ತೋತ್ರವನ್ನು ಪಠಿಸುವರೋ.
ತೇ ಅಖಂಡರೂಪಮ್ ತತ್ಪಾದಸರೋಜಂ ಯಾಂತಿ = ಅವರು ಪರಿಪೂರ್ಣಾನಂದದಿಂದ ಕೂಡಿದ ಪಾದ ಪದ್ಮಗಳಲ್ಲಿ ಲೀನವಾಗುವರು.

ವಿವರಣೆ :
ಆದಿ ಶಂಕರಾಚಾರ್ಯರು ಶ್ರೀಲಕ್ಷ್ಮೀನರಸಿಂಹ ಸ್ತೋತ್ರವನ್ನು ವಿಶ್ವದಲ್ಲಿರುವ ಎಲ್ಲರ ಒಳಿತಿಗಾಗಿ ರಚಿಸಿದ್ದಾರೆ ( ಲೋಕಕ್ಷೇಮಾರ್ಥಂ ). ಯಾರು ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವರೋ ಅವರು ತಪ್ಪದೇ ಬ್ರಹ್ಮಾನಂದ ಸಾಯುಜ್ಯವನ್ನು ಹೊಂದುವರು.

ಲೇಖನದ ಮೂಲ :
ಕನ್ನಡದಲ್ಲಿ ಶ್ಲೋಕಗಳು - ಸವಿಗನ್ನಡ ಸ್ತೋತ್ರಚಂದ್ರಿಕೆ.
ಪ್ರಸ್ತಾವನೆ, ಸಂಸ್ಕೃತ ಶ್ಲೋಕಗಳು ಹಾಗೂ ವಿವರಣೆಗಳು - www.scribd.com
ಆಂಗ್ಲ ಭಾಷೆಯಲ್ಲಿನ ಪ್ರಸ್ತಾವನೆ ಹಾಗೂ ವಿವರಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು - ಗುರುಪ್ರಸಾದ್ ಹಾಲ್ಕುರಿಕೆ

























                               



No comments:

Post a Comment

ಶಿವಾಪರಾಧ ಕ್ಷಮಾಪಣ ಸ್ತೋತ್ರ

ಶಿವಾಪರಾಧ ಕ್ಷಮಾಪಣ ಸ್ತೋತ್ರ ಪ್ರಸ್ತಾವನೆ : ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮ...