ಶಿವ ಪಂಚಾಕ್ಷರ ಸ್ತೋತ್ರಮ್
ಪ್ರಸ್ತಾವನೆ :
ಪಂಚಾಕ್ಷರ ಸ್ತೋತ್ರವು ಸುಪ್ರಸಿದ್ದವಾದ
ಭಕ್ತಿ ಕೃತಿ ಮತ್ತು ವೇದಕಾಲದ ಭಾರತೀಯ ಗ್ರಂಥಗಳಲ್ಲಿ ಅನುಸರಿಸುವ ಯಾವುದೇ ವಿಧವಾದ ಕಟ್ಟುನಿಟ್ಟಾದ
ನಿಯಮಗಳಿಗೆ ಬದ್ಧವಾಗದೇ ಅತಿ ಸರಳವಾಗಿ, ಶಂಕರ ಭಗವತ್ಪಾದರಿಂದ ರಚಿತವಾಗಿದೆ. ಸಂಸ್ಕೃತ ಸಾಹಿತ್ಯಗಳಲ್ಲಿ
ಭಗವಂತನನ್ನು ಕುರಿತು ಹಾಡಿ, ಹೊಗಳುವ ಕವಿತೆಗಳನ್ನು ಸ್ತೋತ್ರವೆಂದು ಕರೆಯಲ್ಪಡುತ್ತದೆ.
ಪಂಚಾಕ್ಷರ ಸ್ತೋತ್ರವು ಹೆಸರೇ ಸೂಚಿಸುವಂತೆ ಐದು ಅಕ್ಷರಗಳಾದ `ನ´ `ಮ´ `ಶಿ´ `ವಾ´ `ಯ´ ಗಳಿಂದ ಪೋಣಿಸಿದ ಸ್ತೋತ್ರ.
ಈ ಅಕ್ಷರಗಳು ಅದ್ಬುತವಾದ "ಓಂ ನಮಃ ಶಿವಾಯ"
ಮಂತ್ರದ ಭಾಗವಾಗಿದೆ. ಹಿಂದೂ ಸಂಪ್ರದಾಯದಂತೆ
ಮಾನವನ ಶರೀರವು ಪಂಚಭೂತಗಳಿಂದ ಸೃಷ್ಟಿಯಾಗಿರುವುದು ಮತ್ತು ಪಂಚಾಕ್ಷರಿ ಪವಿತ್ರ ಮಂತ್ರವು ಇವುಗಳನ್ನು
ಪ್ರತಿನಿಧಿಸುತ್ತವೆ.
"ನ" ಅಕ್ಷರವು ಪೃಥ್ವೀ ತತ್ವವನ್ನು ಸೂಚಿಸುತ್ತದೆ
"ಮ" ಅಕ್ಷರವು ಜಲ ತತ್ವವನ್ನು ಸೂಚಿಸುತ್ತದೆ
"ಶಿ" ಅಕ್ಷರವು ಅಗ್ನಿ ತತ್ವವನ್ನು ಸೂಚಿಸುತ್ತದೆ
"ವಾ" ಅಕ್ಷರವು ವಾಯು ತತ್ವವನ್ನು ಸೂಚಿಸಿದರೆ
"ಯ" ಅಕ್ಷರವು ಆಕಾಶ ತತ್ವವನ್ನು ಸೂಚಿಸುವುದು.
ಈ ಜನಪ್ರಿಯ ಸ್ತೋತ್ರದಲ್ಲಿ ಈ ಎಲ್ಲ
ಅಕ್ಷರಗಳೂ ಶಿವನನ್ನೇ ನಿರೂಪಿಸುತ್ತವೆ ಮತ್ತು ಶಿವನನ್ನು ಕುರಿತು ಸ್ತುತಿಸಲಾಗಿದೆ.
|
ಶ್ಲೋಕ -1
- ಸಂಸ್ಕೃತದಲ್ಲಿ :
ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ನಕಾರಾಯ ನಮಃ ಶಿವಾಯ
|
ಕನ್ನಡದಲ್ಲಿ :
ನಾಗೇಂದ್ರಹಾರನಿಗೆ ಮೂರು ಕಣ್ಣವಗೆ
ಭಸ್ಮಲೇಪಿತನಿಗೆ ಮಹದೇಶ್ವರಂಗೆ
ನಿತ್ಯನಿಗೆ ಶುದ್ಧನಿಗೆ ದಿಕ್ಕಹೊದ್ದವಗೆ
ನಕಾರನಿಗೆ ನಮಿಪೆನವಗೆ ಶಿವಗೆ
|
ವಿವರಣೆ :
ಸರ್ಪಗಳ ರಾಜ - ನಾಗೇಂದ್ರನನ್ನೇ ಹಾರವನ್ನಾಗಿ ಧರಿಸಿರುವ ಮತ್ತು ಮೂರು ಕಣ್ಣುಗಳುಳ್ಳವನು
ಹಾಗೂ ಇಡೀ ಶರೀರವನ್ನು ಪವಿತ್ರ ಭಸ್ಮದಿಂದ ಅಲಂಕೃತವಾದ ನಿತ್ಯ, ಸದಾ,
ಪರಿಶುದ್ಧ, ಶಾಶ್ವತನಾದ, ಪರಬ್ರಹ್ಮನಾದ
ಶಿವ. ನಾಲ್ಕು ದಿಕ್ಕುಗಳನ್ನೇ ತನ್ನ ವಸ್ತ್ರಗಳನ್ನಾಗಿಸಿ ಕೊಂಡಿರುವ
ಹಾಗೂ ಪಂಚಾಕ್ಷರ ಮಂತ್ರದ ಮೊದಲಕ್ಷರವಾದ " ನ
" ಕಾರ ಅಕ್ಷರದ ಮೂಲಕ ನಿರೂಪಿಸಲ್ಪಡುವ ಭಗವಾನ್ ಶಂಕರನಿಗೆ ಶಿರಸಾ ನಮನಗಳು.
|
ಶ್ಲೋಕ - 2 - ಸಂಸ್ಕೃತದಲ್ಲಿ :
ಮಂದಾಕಿನೀಸಲಿಲಚಂದನ ಚರ್ಚಿತಾಯ
ನಂದೀಶ್ವರಪ್ರಮಥನಾಥ ಮಹೇಶ್ವರಾಯ
ಮಂದಾರ ಮುಖ್ಯ ಬಹುಪುಷ್ಪ ಸುಪೂಜಿತಾಯ
ತಸ್ಮೈ ಮಕಾರಾಯ ನಮಃ ಶಿವಾಯ
|
ಕನ್ನಡದಲ್ಲಿ :
ಮಂದಾಕಿನೀ ಜಲ ಸುಗಂಧಾರ್ಚಿತಗೆ
ನಂದಿ ಪ್ರಮಥಗಳೊಡೆಯ ಮಹದೇಶ್ವರಂಗೆ
ಮಂದಾರ ತುಂಬೆ ಬಹುಪುಷ್ಪ ಪೂಜಿತಗೆ
ಮಕಾರನಿಗೆ ನಮಿಪೆನವಗೆ ಶಿವಗೆ
|
ವಿವರಣೆ :
ಯಾರನ್ನು ದೇವಲೋಕದಿಂದ ಧರೆಗಿಳಿದು
ಬಂದ ಮಂದಾಕಿನಿ ನದಿಯ ಪವಿತ್ರ ಜಲದಿಂದ ಅಭಿಷೇಕದ ಮೂಲಕ ಪೂಜಿಸಿ ಸುಗಂಧಪೂರಿತ ಲೇಪದಿಂದ ಅಲಂಕರಿಸಿರುತ್ತಾರೋ, ಯಾರು ನಂದಿಗೆ ಸ್ವಾಮಿಯೋ, ಹಾಗೂ ಉಳಿದ ಶಿವಗಣಗಳಿಗೆ
ಒಡೆಯನೋ, ಯಾರನ್ನು ಮಂದಾರ ಪುಷ್ಪ ಹಾಗೂ ಇತರ ಸುಗಂಧಭರಿತ ಪತ್ರ ಪುಷ್ಪಗಳಿಂದ
ಪೂಜಿಸುವರೋ, ಯಾರನ್ನು ಪಂಚಾಕ್ಷರ ಮಂತ್ರದ ಎರಡನೇ ಅಕ್ಷರವಾದ
"ಮ " ಕಾರದಿಂದ ನಿರೂಪಿಸಲ್ಪಡುವನೋ,
ಆ ದೇವ ದೇವ ಮಹಾದೇವನಿಗೆ ಸಾಷ್ಟ್ರಾಂಗ ನಮಸ್ಕಾರಗಳು.
|
ಶ್ಲೋಕ - 3 - ಸಂಸ್ಕೃತದಲ್ಲಿ :
ಶಿವಾಯ ಗೌರೀವದನಾಬ್ಜವೃಂದ-
ಸೂರ್ಯಾಯ ದಕ್ಷಾಧ್ವರನಾಶಕಾಯ
ಶ್ರೀ ನೀಲಕಂಠಾಯ ವೃಷಧ್ವಜಾಯ
ತಸ್ಮೈ ಶಿಕಾರಾಯ ನಮಃ ಶಿವಾಯ
|
ಕನ್ನಡದಲ್ಲಿ :
ಶಿವಗೆ ಗೌರೀಮುಖಕಮಲಗಣ -
ರವಿಗೆ, ದಕ್ಷಯಜ್ಞವ ಧ್ವಂಸಗೈದವಗೆ
ಸಿರಿನೀಲಕಂಠನಿಗೆ ಬಸವಧ್ವಜಂಗೆ
ಶಿಕಾರನಿಗೆ ನಮಿಪೆನವಗೆ ಶಿವಗೆ
|
ವಿವರಣೆ :
ಯಾರು ಪರಮ ಪವಿತ್ರನೋ ಮತ್ತು ಸೂರ್ಯನ
ಕಾಂತಿಯಿಂದ ಅರಳಿದ ಪದ್ಮ ಪುಷ್ಪದಂಥಹ ಯಾರ ವದನವನ್ನು ವೀಕ್ಷಿಸಿದಕೂಡಲೇ ಮಾತೆ ಗೌರಿಯ ಮುಖವು ಅರಳುವುದೋ, ಯಾರು ದಕ್ಷನ ದುರಹಂಕಾರವನ್ನು ನಾಶಮಾಡಿದನೋ, ಯಾರ ಕಂಠವು ಸಮುದ್ರ ಮಥನದಲ್ಲಿ ಉತ್ಪತ್ತಿಯಾದ ಹಾಲಾಹಲವನ್ನು ಜಗತ್ತಿನ ಒಳಿತಿಗಾಗಿ ಕುಡಿದು
ತನ್ನ ಕಂಠವನ್ನು ನೀಲಿಯನ್ನಾಗಿಸಿ ಕೊಂಡಿರುವನೋ, ಮತ್ತು ವೃಷಭವನ್ನು ತನ್ನ
ಚಿನ್ಹೆ ಯನ್ನಾಗಿಸಿಕೊಂಡಿರುವನೋ , ಯಾರು ಪಂಚಾಕ್ಷರದ ಮೂರನೇ ಅಕ್ಷರವಾದ
" ಶಿ " ಕಾರದಿಂದ ನಿರೂಪಿಸಲ್ಪಡುವನೋ,
ಆ ಭೋಲೇನಾಥ ಶಂಕರ ಭಗವಾನನಿಗೆ ಅನಂತಾನಂತ ವಂದನೆಗಳು.
|
ಶ್ಲೋಕ - 4 - ಸಂಸ್ಕೃತದಲ್ಲಿ :
ವಸಿಷ್ಠ ಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತಶೇಖರಾಯ
ಚಂದ್ರಾರ್ಕವೈಶ್ವಾನರಲೋಚನಾಯ
ತಸ್ಮೈ ವಕಾರಾಯ ನಮಃ ಶಿವಾಯ
|
ಕನ್ನಡದಲ್ಲಿ :
ವಸಿಷ್ಠ ಗೌತಮ ಅಗಸ್ತ್ಯ
ಮುನಿ ಸುರರು ಮಣಿದ ಶ್ರೇಷ್ಠನಿಗೆ
ಚಂದ್ರ ಸೂರ್ಯಾಗ್ನಿಗಳ ಕಂಗಳವಗೆ
ವಕಾರನಿಗೆ ನಮಿಪೆನವಗೆ ಶಿವಗೆ
|
ವಿವರಣೆ :
ಮೂರು ಲೋಕಗಳಲ್ಲೂ ಪೂಜಿಸಲ್ಪಡುವ
ಶ್ರೇಷ್ಟ ಋಷಿ ಮುನಿಗಳಾದ ವಸಿಷ್ಟ, ಅಗಸ್ತ್ಯ ಮತ್ತು
ಗೌತಮ ಮುನಿಗಳಿಂದ, ಹಾಗೂ ದೇವಾನು ದೇವತೆಗಳಿಂದ ಪೂಜಿಸಲ್ಪಡುವನೋ,
ಹಾಗೂ ಯಾರು ವಿಶ್ವದೊಡೆಯನೋ, ಮತ್ತು ಯಾರು ಚಂದ್ರ,
ಸೂರ್ಯ ಹಾಗೂ ಅಗ್ನಿಗಳನ್ನೇ ತನ್ನ ತ್ರಿನೇತ್ರವನ್ನಾಗಿಸಿಕೊಂಡಿ ರುವನೋ ಮತ್ತು
ಪಂಚಾಕ್ಷರದ ಮೂರನೇ ಅಕ್ಷರವಾದ " ವ " ಕಾರದಿಂದ ನಿರೂಪಿಸಲ್ಪಡುವನೋ, ಆ ಶಂಭೋ ಶಂಕರನಿಗೆ ಕೋಟಿ ನಮನಗಳು.
|
ಶ್ಲೋಕ - 5 - ಸಂಸ್ಕೃತದಲ್ಲಿ :
ಯಜ್ಞಸ್ವರೂಪಾಯ ಜಟಾಧರಾಯ
ಪಿನಾಕಹಸ್ತಾಯ ಸನಾತನಾಯ
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ ಯಕಾರಾಯ ನಮಃ ಶಿವಾಯ
|
ಕನ್ನಡದಲ್ಲಿ :
ಯಜ್ಞ ಸ್ವರೂಪನಿಗೆ ಜಟಾಧರಂಗೆ
ಪಿನಾಕ ಹಸ್ತನಿಗೆ ಸನಾತನಂಗೆ
ದಿವ್ಯನಿಗೆ ದೇವನಿಗೆ ದಿಗಂಬರಂಗೆ
ಯಕಾರನಿಗೆ ನಮಿಪೆನವಗೆ ಶಿವಗೆ
|
ವಿವರಣೆ :
ಯಾರು ಯಜ್ಞದ ಸಾಕಾರ ಅಥವಾ ಮೂರ್ತರೂಪನೋ, ಹಾಗೂ ಜಟೆಯಂತೆ ಕೂದಲುಳ್ಳವನೋ, ಯಾರ ಹಸ್ತದಲ್ಲಿ
ತ್ರಿಶೂಲವಿರುವುದೋ, ಮತ್ತು ಯಾರು ನಿತ್ಯ ಹಾಗೂ ಶಾಶ್ವತನೋ, ಯಾರು ಪ್ರಜ್ವಲಿಸುವ ಪ್ರಭೆಯುಳ್ಳವನೋ, ಮತ್ತು ನಾಲ್ಕು ದಿಕ್ಕುಗಳನ್ನೇ
ತನ್ನ ವಸ್ತ್ರವನ್ನಾಗಿಸಿಕೊಂಡಿರುವನೋ, ಯಾರು ಪಂಚಾಕ್ಷರಿಯ ಕಡೆಯ ಅಕ್ಷರವಾದ
" ಯ " ಕಾರದಿಂದ ನಿರೂಪಿಸಲ್ಪಡುವನೋ ಆ ಭಂ
ಭಂ ಭೋಲೆ ಶಂಕರನಿಗೆ ಸಹಸ್ರ ನಮಸ್ಕಾರಗಳು.
|
ಶಿವ ಪಂಚಾಕ್ಷರಿ ಮಂತ್ರದ ವೈಶಿಷ್ಟ್ಯವೇನು?
ಪವಿತ್ರವಾದ ಐದು ಅಕ್ಷರಗಳಾದ "ನಮಃ ಶಿವಾಯ" ವು ವೇದಗಳ ಸಾರವೇ
ಆಗಿದೆ. ವೇದಗಳಲ್ಲಿನ ಅತಿ ಮುಖ್ಯ ಭಾಗವಾದ "ಶತ ರುದ್ರೀಯಮ್ " ಅಥವಾ "ರುದ್ರ ಸೂಕ್ತದ" ಸಾರವೇ ಪಂಚಾಕ್ಷರಿ ಮಂತ್ರ.
ವೇದ ಸಂಹಿತದ ಈ ಪರಮೋಚ್ಚ ಮಂತ್ರವು ಶಿವನನ್ನು ವಿಶ್ವವಂದ್ಯನಾದ ದೈವವೆಂದು ಹೊಗಳುವುದಲ್ಲದೇ
ಶಿವನನ್ನು "ನಮಃ ಶಿವಾಯ ಚ ಶಿವತರಾಯ ಚ" ಎಂದು ನಮಸ್ಕರಿಸಲಾಗಿದೆ.
ಪುರಾಣ ಹಾಗೂ ವೇದ ಗ್ರಂಥಗಳಲ್ಲಿ
ಶಿವ ಪಂಚಾಕ್ಷರಿ ಮಂತ್ರದ ಬಗ್ಗೆ ಅತಿ ವಿವರವಾಗಿ ಹಾಗೂ ದೀರ್ಘವಾಗಿ ವರ್ಣಿಸಲಾಗಿದೆ. ಅದರ ಸಾರಾಂಶವನ್ನು ಈ ಕೆಳಗೆ ವಿವರಿಸಲು ಪ್ರಯತ್ನಿಸಲಾಗಿದೆ
ಶಿವ ಪಂಚಾಕ್ಷರಿ ಮಂತ್ರದ ಸೂಕ್ಷ್ಮ
ಅರ್ಥವೆಂದರೆ :
ನಮಃ = ನನ್ನದಲ್ಲ
ಶಿವಾಯ = ಶಿವನಿಗೆ ಸೇರಿದ್ದು
ಇದು ಅಹಂಕಾರವನ್ನು ನಿರಾಕರಿಸುವುದು
ಮತ್ತು ಪ್ರತಿಯೊಂದೂ ಭಗವಾನ್ ಶಂಕರನಿಗೇ ಸೇರಿದ್ದು ಎಂದು.
ಅನೇಕ ಪಂಚಾಕ್ಷರಗಳು ವಾಡಿಕೆಯಲ್ಲಿರುವುದು. ಅವುಗಳೆಂದರೆ :
ಪಂಚಾಕ್ಷರದಲ್ಲಿ ಐದು ಅಕ್ಷರಗಳಿವೆ
ಹಾಗೇ ಶಿವನಿಗೆ ಐದು ಮುಖಗಳಿವೆ. ಯಾವ ಅಕ್ಷರದಿಂದ
ಪಂಚಾಕ್ಷರವು ಪ್ರಾರಂಭವಾಗುವುದೋ ಅದನ್ನು ಅವಲಂಬಿಸಿ ಶಿವನ ಪ್ರತಿಯೊಂದು ಮುಖವೂ ಹೆಸರಿಸಲ್ಪಡುತ್ತದೆ.
ನಮಃ ಶಿವಾಯ = ಸದ್ಯೋಜಾತ ಪಂಚಾಕ್ಷರ
ಶಿವಾಯ ನಮಃ = ಅಘೋರ ಪಂಚಾಕ್ಷರ ಅಥವಾ ಅಘೋರ ಮಂತ್ರ.
ಇದೇರೀತಿ ಉಳಿದ ಮೂರೂ ಮುಖಗಳಿಗೆ
ಬೇರೆ ಬೇರೆ ಇರುವುದು.
ಪಂಚಾಕ್ಷರ - ನಮಃ ಶಿವಾಯ ವು ವೇದಗಳ ತಿರುಳಾದ್ದರಿಂದ ಇದನ್ನು ವೇದರೀತಿಯ ಪಂಚಾಕ್ಷರವೆಂದು
ಪರಿಗಣಿಸಲಾಗಿದೆ. ಶಿವಾಯ ನಮಃ ಪಂಚಾಕ್ಷರವನ್ನು ಆಗಮ ಶಾಸ್ತ್ರದಲ್ಲಿ ಶಿವನನ್ನು
ಪೂಜಿಸುವಾಗ ಉಪಯೋಗಿಸುವರು. ಹಾಗಾಗಿ ಇದನ್ನು ಆಗಮ ರೀತಿಯ ಪಂಚಾಕ್ಷರಿ
ಎನ್ನಲಾಗಿದೆ.
ಅನೇಕ ರೀತಿಯ ಪಂಚಾಕ್ಷರಗಳಿವೆ - ಸ್ಥೂಲ ಪಂಚಾಕ್ಷರ, ಸೂಕ್ಷ್ಮ ಪಂಚಾಕ್ಷರ,
ಅತಿ ಸೂಕ್ಷ್ಮ ಪಂಚಾಕ್ಷರ, ಕರಣ ಪಂಚಾಕ್ಷರ,
ಮಹಾಕರಣ ಪಂಚಾಕ್ಷರ, ಮಹಾಮನು ಅಥವಾ ಮುಕ್ತಿ ಪಂಚಾಕ್ಷರ.
ಪ್ರತಿಯೊಂದಕ್ಕೂ ವಿಶೇಷ ಪ್ರಾಮುಖ್ಯತೆ ಇರುವುದು. ಇದರ ಬಗೆಗೆ ಹೆಚ್ಚಿನ ವಿವರಗಳನ್ನು ತಾಂತ್ರಿಕ ಗ್ರಂಥವಾದ ತಿರುಮಂದಿರಮ್ ನಲ್ಲಿ ಅರಿಯಬಹುದು.
ನಮಃ ಎಂದರೆ ಸಾಷ್ಟ್ರಾಂಗವೆರಗು. ಶಿವಾಯ ನಮಃ ಎಂದರೆ ಶಿವನಿಗೆ ಸಾಷ್ಟ್ರಾಂಗವಾಗಿ ಎರಗು. ಮಾನವನ ಜೀವವು ಭಗವಾನ್ ಶಂಕರನ ದೇಹ - ದೃಷ್ಟಿಯ ಮೂಲಕ ಸೇವಕ.
"ನಮಃ" ಎಂಬುದು ಜೀವಾತ್ಮವನ್ನು,
"ಶಿವ" ಎಂಬುದು ಪರಮಾತ್ಮ,
"ಆಯ" ಎಂದರೆ ಐಕ್ಯಮ್ ಅಥವಾ ಜೀವಾತ್ಮ ಹಾಗೂ
ಪರಮಾತ್ಮಗಳ ಗುರುತು. ಹಾಗಾಗಿ ಶಿವಾಯ ನಮಃ ಎಂಬುದು ತತ್ ತ್ವಮ್ ಅಸಿ
(ಎಂದರೆ ವ್ಯಕ್ತಿ ಮತ್ತು ಪರಮಾತ್ಮಗಳ ನಡುವಿನ ಗುರುತು) ಎಂಬ ಮಹಾವಾಕ್ಯದಂತೆ.
ಪ್ರಣವವು ಭಗವಂತನ ( ಭತ್ತದ) ಹೊರ ಪದರ (ಹೊಟ್ಟು) ಮತ್ತು ಪಂಚಾಕ್ಷರವು ಭಗವಂತನ ಅಂತರಂಗ ಸ್ವರೂಪ
(ಅಕ್ಕಿ). ಪ್ರಣವ ಪಂಚಾಕ್ಷರ ಎರಡೂ ಒಂದೇ. ಐದು ಅಕ್ಷರವು, ಶಿವನ ಐದು ಕ್ರಿಯೆಗಳಾದ ಸೃಷ್ಟಿ ,
ಸ್ಥಿತಿ, ಸಂಹಾರ, ತಿರೋಧನ
ಮತ್ತು ಅನುಗ್ರಹಗಳನ್ನು ಸೂಚಿಸುತ್ತದೆ.
ಪಂಚ ಭೂತ ಸ್ಥಳಗಳು:
ನ = ಭೂಮಿ; ಮ = ನೀರು; ಶಿ = ಅಗ್ನಿ;
ವ = ವಾಯು ಹಾಗೂ ಯ = ಆಕಾಶ.
ದಕ್ಷಿಣ ಭಾರತದಲ್ಲಿ ಪಂಚಭೂತ ಸ್ಥಳಗಳು ಇರುವುದು :
1. ಭೂಮಿಗೆ - ಕಾಂಚೀಪುರಮ್ - ಏಕಾಂಬರೇಶ್ವರ ಮಂದಿರದಲ್ಲಿ ಶಿವನನ್ನು ಭೂ ಲಿಂಗವಾಗಿ
ಪೂಜಿಸುವರು.
ಪೌರಾಣಿಕ ಘಟನೆಯ ಪ್ರಕಾರ ಶಿವನು
ತನ್ನ ಕಾರ್ಯವಾದ ವಿಶ್ವದ ಸೃಷ್ಟಿ ಸ್ಥಿತಿ ಹಾಗೂ ವಿನಾಶಗಳಲ್ಲಿ ಮಗ್ನನಾಗಿದ್ದಾಗ ಪಾರ್ವತಿಯು ತಮಾಷೆಗೆಂದು
ತನ್ನ ಕೈಗಳಿಂದ ಶಿವನ ಕಣ್ಣುಗಳನ್ನು ಒಂದು ಕ್ಷಣ ಮುಚ್ಚಿದಳು. ಇದರಿಂದ ಶಿವನ ಕಾರ್ಯಕ್ಕೆ ಅಡ್ಡಿಯುಂಟಾಯಿತು. ಕೋಪಗೊಂಡ ಶಿವನು ಪಾರ್ವತಿಗೆ ತನ್ನ ತಪ್ಪಿಗೆ ದಂಡ ತೆರಲು ಭೂಲೋಕಕ್ಕೆ ಹೋಗೆಂದು ಶಾಪವನ್ನು
ಕೊಟ್ಟ. ಅದರಂತೆ ಪಾರ್ವತಿಯು ದಕ್ಷಿಣ ಭಾರತದ ಕಂಚಿ ನಗರದ ಕಂಪ ನದಿಯ ದಡದಲ್ಲಿದ್ದ
ಒಂಟಿ ಮಾವಿನ ಮರದೆಡೆಗೆ ಬಂದಳು. ಅಲ್ಲೇ ಮರಳಿನಿಂದ ಶಿವ ಲಿಂಗವನ್ನು ಮಾಡಿ
ಅದನ್ನು ಪೂಜಿಸುತ್ತಿರುವಾಗ ಶಿವನು ಪಾರ್ವತಿಯನ್ನು ಪರೀಕ್ಷಿಸಲು ಅವಳ ಪೂಜೆಗೆ ಅನೇಕ ವಿಘ್ನಗಳನ್ನು
ಒಡ್ಡಿದನು. ಪಾರ್ವತಿಯು ವಿಷ್ಣುವಿನ ಸಹಾಯದಿಂದ ಅವೆಲ್ಲವುಗಳನ್ನೂ ನಿವಾರೀಕೊಂಡಳು.
ಕಡೆಗೆ ಶಿವನು ತನ್ನ ಜಟೆಯಲ್ಲಿದ್ದ ಗಂಗೆಯನ್ನು ಮರಳಿನ ಲಿಂಗದೆಡೆಗೆ ಎರಚಿದನು.
ಆಗ ಪಾರ್ವತಿಯು ಶಿವಲಿಂಗವನ್ನು ಅಪ್ಪಿ ತನ್ನೆದೆಯಲ್ಲಿ ಸೇರಿಸಿಕೊಂಡು ನೀರಿನಿಂದ
ರಕ್ಷಿಸಿ ಕೊಂಡಳು. ಇದರಿಂದ ಸುಪ್ರೀತನಾದ ಶಿವನು ಮರಳಿ ಪಾರ್ವತಿಯನ್ನು
ತನ್ನ ಸಂಗಾತಿಯನ್ನಾಗಿ ಸ್ವೀಕರಿಸಿದನು. ಯಾವ ಸ್ಥಳದಲ್ಲಿ ಶಿವನು ಪಾರ್ವತಿಯನ್ನು
ಕ್ಷಮಿಸಿದನೋ ಅಲ್ಲೇ ಏಕಾಂಬರೇಶ್ವರ ಮಂದಿರವನ್ನು ನಿರ್ಮಿಸಲಾಗಿದೆ. ಈ
ಕ್ಷೇತ್ರದ ಮೊದಲಿನ ಹೆಸರು ಏಕಾಮ್ರನಾಥ ಎಂದಾಗಿತ್ತು. ಏಕ = ಒಂದು; ಅಮ್ರ = ಮಾವು ; ನಾಥ = ಭಗವಂತ ( ಈಶ್ವರ
). ಈಗಲೂ ಈ ಮಂದಿರದಲ್ಲಿನ ಪುರಾತನ ಮಾವಿನ ವೃಕ್ಷವನ್ನು ಪೂಜಿಸಲಾಗುತ್ತದೆ.
ಈ ಮರದಲ್ಲಿ ನಾಲ್ಕು ಶಾಖೆಗಳಿದ್ದು ಅವುಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತವೆ
ಹಾಗೂ ಪ್ರತಿ ಶಾಖೆಯಲ್ಲಿ ಬಿಡುವ ಮವಿನ ಹಣ್ಣುಗಳು ಬೇರೆ ಬೇರೆ ರುಚಿಯನ್ನು ನೀಡುತ್ತವೆ.
2. ನೀರಿಗೆ - ತಿರುಅನೈಕ್ಕವಲ್ - ಜಂಬುಕೇಶ್ವರ ಮಂದಿರ
3. ಅಗ್ನಿಗೆ -ತಿರುವಣ್ಣಾಮಲೈ
4. ವಾಯುವಿಗೆ - ಕಾಳಹಸ್ತಿ
5. ಆಕಾಶಕ್ಕೆ - ಚಿದಂಬರಮ್
ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ
ಆದ ಪೌರಾಣಿಕ ಕಥೆಗಳಿವೆ.
ಈ ಕ್ಷೇತ್ರಗಳಿಗೆ ಭೇಟಿಕೊಟ್ಟಾಗ
ಮಂದಿರಗಳಲ್ಲಿ ಶಿವ ಪಂಚಾಕ್ಷರಿ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದಲ್ಲಿ ಇಷ್ಟಾರ್ಥಗಳು ನೆರವೇರುವುದು.
ಓಂ ನಮಃ ಶಿವಾಯ ಓಂ ನಮಃ ಶಿವಾಯ !
|
ಮೂಲಗಳು :
ಸಂಸ್ಕೃತ
ಶ್ಲೋಕಗಳು : Sanskritdocuments.org
ಕನ್ನಡ
ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್
ಅವರ “ಸವಿಗನ್ನಡ ಸ್ತೋತ್ರ ಚಂದ್ರಿಕೆ”
ವಿವರಣೆಗಳು : templepurohit.com; - ಅಂಗ್ಲ ಭಾಷೆಯಯಲ್ಲಿನ ವಿವರಣೆಗಳ ಭಾವಾರ್ಥವನ್ನು
ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು ಗುರುಪ್ರಸಾದ್ ಹಾಲ್ಕುರಿಕೆ.
ಹಿಚ್ಸಿನ ವಿವರಣೆಗಳಿಗೆ ಇಲ್ಲಿ ಕ್ಲಿಕ್ ಮಾಡಿ : https://youtu.be/0W1F-io9l4c |
No comments:
Post a Comment