ಕಾಲಭೈರವಾಷ್ಟಕ ಸ್ತೋತ್ರ
ಪ್ರಸ್ತಾವನೆ :
ಕಾಲಭೈರವಸ್ವಾಮಿಯು ವಾರಣಾಸಿ ಕ್ಷೇತ್ರದ ರಕ್ಷಕ. ಈ ದೈವವು ಭಗವಾನ್ ಶಂಕರನ ಉಗ್ರರೂಪವೆಂದು ಬಣ್ಣಿಸಲಾಗಿದೆ. ಇದರ
ಬಗ್ಗೆ ಅನೇಕ ಪೌರಾಣಿಕ ಕಥನಗಳಿವೆ. ಅವುಗಳಲ್ಲಿ ಕೆಲವೆಂದರೆ
-
ಒಮ್ಮೆ ಬ್ರಹ್ಮನು ಶಂಕರ ಭಗವಾನನನ್ನು ಅವಮಾನಿಸಿದನು ಮತ್ತು
ಅವನ ಐದನೇ ತಲೆಯು ಶಿವನನ್ನು ಅಣಕಿಸಿ ನಕ್ಕಿತು. ಇದರಿಂದ ಕೋಪೋದ್ರಿಕ್ತನಾದ ಶಿವನು ತನ್ನ
ಉಗುರಿನಿಂದ ಕಪ್ಪು ಬಣ್ಣದ ಭೈರವನನ್ನು ಸೃಷ್ಟಿಮಾಡಿದನು. ಹೀಗೆ ಕಾಲಭೈರವನು
ಶಿವನ ಅವತಾರವಾಗಿ ಅಭಿವ್ಯಕ್ತಿಗೊಂಡು ತನ್ನ ಚೂಪಾದ ಉಗುರುಗಳಿಂದ ಬ್ರಹ್ಮನ ಐದನೇ ಶಿರವನ್ನು ಕತ್ತರಿಸಿದನು.
ನಂತರ ಬ್ರಹ್ಮನ ಕತ್ತರಿಸಿದ ಶಿರವು ( ಬ್ರಹ್ಮ ಕಪಾಲವು
) ಕಾಲಭೈರವನ ಹಸ್ತದಲ್ಲೇ ಅಂಟಿಕೊಂಡಿತು. ನಂತರ ವಿಷ್ಣುವಿನ
ಮಧ್ಯಸ್ತಿಕೆಯಿಂದಾಗಿ ಶಿವನು ಶಾಂತನಾಗಿ ಬ್ರಹ್ಮನನ್ನು ಕ್ಷಮಿಸಿದನು. ಆದರೆ ಬ್ರಹ್ಮನ ಶಿರವನ್ನು ಕಡಿದ ಪಾಪವು ಸ್ತ್ರೀ ರೂಪದಲ್ಲಿ ಕಾಲಭೈರವನನ್ನು ಅವನು ಎಲ್ಲಿ
ಹೋದರೂ ಅಲ್ಲಿ ಅಟ್ಟಿಸಿಕೊಂಡು ಬರತೊಡಗಿತು. ತಾನು ಮಾಡಿದ ಪಾಪ
ಹಾಗೂ ಶಿಕ್ಷೆಗಳು ತನ್ನನ್ನು ಅಟ್ಟಿಸಿಕೊಂಡುಬರುತ್ತಿರುವುದರಿಂದ ತಪ್ಪಿಸಿಕೊಳ್ಳಲು ಕಾಲಭೈರವನು
ವಾರಣಾಸಿಯನ್ನು ಪ್ರವೇಶಿಸಿದನು. ವಾರಣಾಸಿಯಲ್ಲಿ ಕಾಲಭೈರವನ ಸ್ತ್ರೀರೂಪದ
ಪಾಪವು ಹಾಗೂ ಶಿಕ್ಷೆಯು ಪ್ರವೇಶಿಸಲಾಗಲಿಲ್ಲ. ನಂತರ ಕಾಲಭೈರವನನ್ನು ವಾರಣಾಸಿಯ
ಕೊತ್ವಾಲನೆಂದು ಶಿವನು ನೇಮಿಸಿದನು. ಕಾಲಭೈರವನ ವಾಹನವು ಕಪ್ಪು ಬಣ್ಣದ
ಶ್ವಾನ. ಕಾಲಭೈರವನು ದಿಗಂಬರನು ಹಾಗೂ ಮಗುವಿನ ಮುಗ್ಧ ಮನಸ್ಸುಳ್ಳವನು.
ಕಾಲಭೈರವನು ಯಾಚಕನಂತೆ ಸಂಚರಿಸುವನು. ಯಾರೇ ವಾರಣಾಸಿಗೆ
ತೀರ್ಥಯಾತ್ರೆಯನ್ನು ಮಾಡಿದರೆ ಅದು ಸಂಪೂರ್ಣವಾಗುವುದು ಕಾಲಭೈರವನ ದರ್ಶನದ ನಂತರವೇ.
ಮತ್ತೊಂದು ಪೌರಾಣಿಕ ಕಥನದ ಪ್ರಕಾರ ದಕ್ಷ ಪ್ರಜಾಪತಿಯ ಶಿರವನ್ನು
ಕಡಿದ ವೀರಭದ್ರನನ್ನು ಕಾಲಭೈರವನೆಂದೂ ಗುರುತಿಸುತ್ತಾರೆ. ದಕ್ಷಯಜ್ಞದಲ್ಲಿ
ಬೆಂಕಿಗಾಹುತಿಯಾದ ಸತಿದೇವಿಯ ಶರೀರವನ್ನು ಶಿವನು ಹೊತ್ತು ರುದ್ರತಾಂಡವ ನೃತ್ಯಮಾಡತೊಡಗಿದಾಗ,
ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಅನೇಕ ಭಾಗಳಾಗಿ ತುಂಡರಿಸಿ
ನಂತರ ಈ ಶರೀರದ ಭಾಗಗಳು ಭೂಮಿಯ ಮೇಲೆ ಅನೇಕ ಕಡೆಗಳಲ್ಲಿ ಬಿದ್ದು ಈ ಸ್ಥಳಗಳು ಶಕ್ತಿಪೀಠವೆಂದು ಸುಪ್ರಸಿದ್ದವಾಯಿತು.
ಕಾಲಭೈರವನೇ ಎಲ್ಲ ಶಕ್ತಿಪೀಠಗಳನ್ನು ರಕ್ಷಿಸುತ್ತಾನೆ. ಹಾಗಾಗಿ ಕಾಲಭೈರವನನ್ನು ಭಾಟುಕ್ ಭೈರವ್ ಎಂದೂ ಕರೆಯುವರು. ಪ್ರತಿಯೊಂದು
ಶಕ್ತಿಪೀಠದ ಹೊರಗೂ ಕಾಲಭೈರವನ ಮಂದಿರವಿರುವುದು.
ಮತ್ತೊಂದು ಪೌರಾಣಿಕ ವ್ಯಾಖ್ಯಾನದ ಪ್ರಕಾರ ಕಾಲಭೈರವನು ಶಿವನ
ಒಂದು ರೂಪ ಹಾಗೂ ಕಾಲ ಅಂದರೆ ಸಮಯದ ಬೆಳವಣಿಗೆ ಮತ್ತು ನಿರ್ವಹಣೆಯನ್ನು ನಿಯಂತ್ರಿಸುವನು. ಯಾರೇ ಆದರೂ "ಸಮಯ " ಸಂಬಂಧಿಸಿದಂತೆ ಅದರ ನಿರ್ವಹಣೆ ಹಾಗೂ ಸರಿಯಾದ ರೀತಿಯಲ್ಲಿ ಅದರ ಉಪಯೋಗವನ್ನು ಮಾಡಿಕೊಳ್ಳಲಿಚ್ಚಿಸುವವರು
ಕಾಲಭೈರವನನ್ನು ಪ್ರಪ್ರಥವಾಗಿ ಪ್ರಾರ್ಥಿಸಬೇಕು.
ಕಾಲಭೈರವನನ್ನು ಎಲ್ಲ ಶಿವನ ಮಂದಿರಗಳ ರಕ್ಷಕನೆಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ಶಿವ ಮಂದಿರಗಳನ್ನು ರಾತ್ರಿ ವೇಳೆ ಮುಚ್ಚಿ ಬೀಗ ಹಾಕಿದ ನಂತರ ಅರ್ಚಕರು
ಕೀಲಿಯನ್ನು ಔಪಚಾರಿಕವಾಗಿ ಭೈರವನಿಗೆ ಅರ್ಪಿಸಿ ಮತ್ತೆ ಮರಳಿ ಅವನಿಂದ ಪಡೆಯುತ್ತಾರೆ.
ಶಂಕರ ಭಗವತ್ಪಾದರು ಈ ಸುಶ್ರಾವ್ಯ ಸ್ತೋತ್ರವನ್ನು ತಮ್ಮ ವಾರಣಾಸಿಯ
ಭೇಟಿಯ ಸಮಯದಲ್ಲಿ ರಚಿಸಿದರೆಂದು ತಿಳಿದುಬರುತ್ತದೆ. ಈಗಲೂ ವಾರಣಾಸಿಯಲ್ಲಿರುವ
ಕಾಲಭೈರವ ಮಂದಿರದ ಅರ್ಚಕರು ಭಕ್ತರನ್ನು ಆಶೀರ್ವದಿಸುವ ಮೊದಲು ಈ ಅಷ್ಟಕವನ್ನು ಪಠಿಸಿದ ನಂತರ ಕಾಲಭೈರವನ
ಬಳಿ ಇರುವ ಬೆತ್ತದಿಂದ ಭಕ್ತರ ಬೆನ್ನಿನ ಮೇಲೆ ತಟ್ಟುತ್ತಾರೆ. ನಂತರವೇ
ಆಶೀರ್ವದಿಸುವುದು.
ಕಾಲಭೈರವನ ಪೂಜಾವಿಧಿಗಳ ಬಗೆಗೆ ಸ್ತೋತ್ರದ ಕಡೆಯಲ್ಲಿ ವೀಕ್ಷಿಸಿ.
|
ಶ್ಲೋಕ - 1 - ಸಂಸ್ಕೃತದಲ್ಲಿ
:
ದೇವರಾಜಸೇವ್ಯಮಾನ ಪಾವನಾಂಘ್ರಿಪಂಕಜಂ
ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಂ
ನಾರದಾದಿಯೋಗಿಬೃಂದವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ದೇವರಾಜ ಸೇವೆಗೈವ ಪಾವನಾಂಘ್ರಿ ಪಂಕಜ
ಹಾವೆ ಯಜ್ಞಸೂತ್ರ ಚಂದ್ರಶೇಖರಾ ಕೃಪಾಕರ
ನಾರದಾದಿ ಋಷಿಗಳೆಲ್ಲ ವಂದಿಸುವ ದಿಗಂಬರ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರ ಕಮಲ ಪುಷ್ಪದಂತಿರುವ ಪಾದಗಳನ್ನು ದೇವೇಂದ್ರನು ಸೇವಿಸುವನೋ, ದಯಾಮಯನೋ, ಹಾಗೂ ಚಂದ್ರನನ್ನು ತನ್ನ ಲಲಾಟದಲ್ಲಿ ಧರಿಸಿರುವನೋ,
ಸರ್ಪವನ್ನೆ ಪವಿತ್ರ ದಾರ (ಜನಿವಾರ) ದಂತೆ ಧರಿಸಿರುವನೋ, ದಶ ದಿಕ್ಕುಗಳನ್ನೇ ವಸ್ತ್ರವನ್ನಾಗಿ ಧರಿಸಿರುವನೋ,
ನಾರದ ಮುನಿಗಳಿಂದ ಕೂಡ ಭಜಿಸಲ್ಪಡುವ, ಕಾಶೀ ಪಟ್ಟಣದ
ಪ್ರಭುವಾದ ಕಾಲಭೈರವನಿಗೆ ನನ್ನ ನಮಸ್ಕಾರಗಳು.
|
ಶ್ಲೋಕ - 2 - ಸಂಸ್ಕೃತದಲ್ಲಿ
:
ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ
ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಮ್
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ಕೋಟಿಸೂರ್ಯದೀಪ್ತ ನೀನು ಭವಸಮುದ್ರತಾರಕ
ನೀಲಕಂಠ ಬೇಡಿದುದನು ನೀಡುವ ತ್ರಿಲೋಚನ
ಯಮಗೆಯಮನು ಕಮಲನಯನ ಶೂಲಪಾಣಿ ಅಕ್ಷರ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರು ಅನಂತಕೋಟಿ ಸೂರ್ಯರಂತೆ ಪ್ರಜ್ವಲಿಸುವರೋ, ಶೋಚನೀಯ ಸಂಸಾರ ಸಾಗರವನ್ನು ದಾಟಲು ಸಹಾಯಮಾಡುತ್ತಾರೋ, ಪರಮೋಚ್ಚ
ದೈವ ಮತ್ತು ನೀಲಿ ಬಣ್ಣದ ಕೊರಳನ್ನುಳ್ಳವನೋ, ( ಸಮುದ್ರಮಥನದಲ್ಲಿ ಉತ್ಪತ್ತಿಯಾದ
ಹಾಲಾಹಲವನ್ನು ಕುಡಿದ ಕಾರಣ ಕಂಠವು ನೀಲಿ ಬಣ್ಣವಾಯಿತು) ಮುಕ್ಕಣ್ಣ
, ಹಾಗೂ ನಮ್ಮ ಆಸೆ ಆಕಾಂಕ್ಷೆಗಳನ್ನು ದಯಪಾಲಿಸುವವನೋ, ಕಾಲಯಮನಿಗೇ ಯಮನೋ, ಪದ್ಮ ಪುಷ್ಪದಂತಿರುವ ನೇತ್ರವುಳ್ಳವನೋ,
ಅಜೇಯವಾದ ತ್ರಿಶೂಲವನ್ನು ಧರಿಸಿರುವ, ಕಾಶೀ ನಗರದ ಅಧಿಪತಿಯಾದ
ಕಾಲಭೈರವನಿಗೆ ನನ್ನ ಭಕ್ತಿಪೂರ್ವಕ ನಮನಗಳು.
|
ಶ್ಲೋಕ - 3 - ಸಂಸ್ಕೃತದಲ್ಲಿ
:
ಶೂಲಟಂಕಪಾಶದಂಡಪಾಣಿಮಾದಿಕಾರಣಂ
ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಮ್
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ಪಾಶ ಶೂಲ ಪರಶು ದಂಡಹಸ್ತ ವಿಶ್ವಕಾರಣ
ಶ್ಯಾಮವರ್ಣನಾದಿದೇವ ಅಕ್ಷರ ನಿರಂಜನ
ಭೀಮಶಕ್ತ ವಿಜಯಿ ಪ್ರಭು ವಿಚಿತ್ರ ತಾಂಡವಪ್ರಿಯ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರು ಶೂಲ, ಪಾಶ, ದಂಡಹಸ್ತ,
ಪರಶುಗಳನ್ನು ಅಸ್ತ್ರವನ್ನಾಗಿ ಇರಿಸಿಕೊಂಡಿರುವನೋ, ಕಪ್ಪುಬಣ್ಣವುಳ್ಳ
ಮತ್ತು ಆದಿದೈವನೋ, ಆದಿ ಮಧ್ಯಾಂತರಹಿತನೋ, ಹಾಗೂ
ಮೂಲ ದೈವವೋ, ರೋಗ ರುಜಿನಗಳಿಂದ ಮುಕ್ತನೋ, ಮಹಾನ್
ನಾಯಕನೋ, ವಿಷೇಶವಾದ ತಾಂಡವ ನೃತ್ಯಪ್ರಿಯನೋ, ಹಾಗೂ ಕಾಶೀ ಪಟ್ಟಣದ ಅಧಿದೈವವಾದ ಕಾಲಭೈರವನಿಗೆ ನನ್ನ ಸಹಸ್ರ ಪ್ರಣಾಮಗಳು.
|
ಶ್ಲೋಕ - 4 - ಸಂಸ್ಕೃತದಲ್ಲಿ
:
ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಮ್
ನಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ಭೋಗ ಮೋಕ್ಷದಾಯಕನೇ ತೇಜಚಾರು ರೂಪನೇ
ಭಕ್ತವತ್ಸಲ ಸುಭದ್ರ ಸರ್ವಲೋಕ ನಾಯಕ
ಮಂಜುಳರವ ಮನಸೆಳೆಯುವ ಸ್ವರ್ಣಕಿಂಕಿಣೀಧರ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರು ನಮ್ಮ ಆಸೆಆಕಾಂಕ್ಷೆಗಳನ್ನು ಪೂರೈಸುವ ಹಾಗೂ ಮುಕ್ತಿಯನ್ನು
ಕರುಣಿಸುವನೋ , ಸುಂದರ ಹಾಗೂ ಮುದ್ದಾದ ಮುಖಭಾವವುಳ್ಳವನೋ, ಭಕ್ತಪ್ರಿಯ ಮತ್ತು ಸ್ಥಿರನೋ, ವಿಶ್ವದ ದೈವನೋ, ಅನೇಕ ರೂಪಗಳನ್ನು ಧರಿಸುವವನೋ, ಮಂಜುಳ ನಾದವನ್ನು ಸ್ಫುರಿಸುವ
ಘಂಟೆಗಳಿಂದ ಕೂಡಿದ ಬಂಗಾರದ ನಡುಪಟ್ಟಿಯನ್ನು ಧರಿಸಿರುವ, ಕಾಶೀನಗರದ ಸಂರಕ್ಷಕನಾದ
ಕಾಲಭೈರವನಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು.
|
ಶ್ಲೋಕ - 5 - ಸಂಸ್ಕೃತದಲ್ಲಿ
:
ಧರ್ಮಸೇತುಪಾಲಕಂತ್ವಧರ್ಮಮಾರ್ಗನಾಶಕಂ
ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಮ್
ಸ್ವರ್ಣವರ್ಣಕೇಶಪಾಶ ಶೋಭಿತಾಂಗನಿರ್ಮಲಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ಧರ್ಮಸೇತು ಪಾಲಕ ಅಧರ್ಮಮಾರ್ಗನಾಶಕ
ಕರ್ಮಪಾಶ ಮೋಚಕ ಪ್ರಶಾಂತಿದಾಯಕ ಪ್ರಭು
ಹೊನ್ನಬಣ್ಣ ಜಡೆಗಳಿಂದ ಶೋಭಿಸುವನೆ ನಿರ್ಮಲ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರು ಜೀವನದಲ್ಲಿನ ಧರ್ಮ ಮಾರ್ಗದ ಸೇತುವೆಯನ್ನು ಕಾಪಾಡುತ್ತಾರೋ,
ಅಧರ್ಮ ಮಾರ್ಗವನ್ನು ನಾಶಪಡಿಸುತ್ತಾರೋ , ಕರ್ಮ ಸಂಬಂಧಗಳಿಂದ
ರಕ್ಷಿಸುತ್ತಾರೋ, ಯಾರು ನಾವು ದುಷ್ಕೃತ್ಯವನ್ನು ಎಸಗಲು ತೊಡಗಿದಾಗ ನಮ್ಮನ್ನು
ನಾಚಿಕೆಗೀಡುಮಾಡುವರೋ, ಅಲ್ಲಲ್ಲಿ ಘಂಟೆಗಳನ್ನು ಕಟ್ಟಿರುವ ಬಂಗಾರದ
ಜಡೆಗಳಿಂದ ಹೊರಹೊಮ್ಮುವ ದಿವ್ಯಪ್ರಕಾಶದಿಂದ ಕೂಡಿದ ದೇಹವುಳ್ಳ, ಕಾಶೀ
ನಗರದ ರಕ್ಷಕನಾದ ಕಾಲಭೈರವನಿಗೆ ನನ್ನ ಅನಂತ ನಮಸ್ಕಾರಗಳು.
|
ಶ್ಲೋಕ - 6 - ಸಂಸ್ಕೃತದಲ್ಲಿ
:
ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಮ್
ಮೃತ್ಯುದರ್ಪನಾಶನಂ ಕರಾಲದಂಷ್ಟ್ರಭೂಷಣಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ರತ್ನಖಚಿತ ಪಾದುಕೆಗಳಲಿ ಹೊಳೆವ ಪಾದಯುಗ್ಮವು
ನಿತ್ಯ ಅದ್ವಿತೀಯ ಇಷ್ಟದೈವ ನೀ ವಿಶುದ್ಧನು
ಮೃತ್ಯುದರ್ಪ ನಾಶಕನೀ ಕರಾಳದಾಡೆಯಾತನೀ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರ ಪಾದದಲ್ಲಿ ಮುತ್ತು ರತ್ನಗಳಿಂದ ಶೋಭಿತವಾದ ಪಾದರಕ್ಷೆಗಳು
ಕಂಗೊಳಿಸುತ್ತಿವೆಯೋ , ಶಾಶ್ವತನು ಹಾಗೂ ಅದ್ವಿತೀಯನು,
ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಇಷ್ಟದೈವವೋ , ಭಕ್ತರ ಮನದಿಂದ ಸಾವಿನ ಬಗೆಗೆ ಇರುವ ಭಯವನ್ನು ತನ್ನ ಕರಾಳವಾದ ದಂತಗಳಿಂದ ಹೋಗಲಾಡಿಸಿ
ಮೋಕ್ಷವನ್ನು ಕರುಣಿಸುವನೋ , ಹಾಗೂ ಕಾಶೀ ನಗರದ ಅಧಿಪತಿಯಾದ ಕಾಲಭೈರವನಿಗೆ
ನನ್ನ ಭಕ್ತಿಪೂರ್ವಕ ಪ್ರಣಾಮಗಳು.
|
ಶ್ಲೋಕ - 7 - ಸಂಸ್ಕೃತದಲ್ಲಿ
:
ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ
ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಮ್
ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ಅಟ್ಟಹಾಸದಿಂದ ಸೃಷ್ಟಿ ಮಿಥ್ಯೆಯ ಪುಡಿಗೈವನೀ
ದಿಟ್ಟಿಸಿದೊಡೆ ಪಾಪಜಾಲ ನಷ್ಟಗೊಳಿಪ ಉಗ್ರನೀ
ಅಷ್ಟಸಿದ್ಧಿಯೀವೆನೀ ಕಪಾಲ ಮಾಲೆ ಕಂಠದಿ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಬ್ರಹ್ಮನು ಸೃಷ್ಟಿಸಿದ ಎಲ್ಲವನ್ನೂ ನಾಶಮಾಡಲು ಯಾರ ಒಂದು
ಭಯಂಕರವಾದ ಘರ್ಜನೆಯೇ ಸಾಕೋ, ಎಲ್ಲ ಪಾಪಗಳನ್ನೂ ನಾಶಮಾಡಲು
ಯಾರ ದೃಷ್ಟಿಯೇ ಸಾಕೋ , ಯಾರು ಎಂಟು ವಿಧದ ಅತೀಂದ್ರಿಯ ಶಕ್ತಿಗಳನ್ನು
ಕರುಣಿಸುವವನೋ, ಮತ್ತು ಯಾರು ಕಪಾಲಗಳ ಹಾರವನ್ನು ಧರಿಸಿರುವನೋ,
ಆ ಕಾಶೀ ಪಟ್ಟಣದ ರಕ್ಷಕನಾದ ಕಾಲಭೈರವನಿಗೆ ನನ್ನ ಭಕ್ತಿಪೂರ್ವಕ ನಮನಗಳು.
|
ಶ್ಲೋಕ - 8 - ಸಂಸ್ಕೃತದಲ್ಲಿ
:
ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ
ಕಾಶಿವಾಸಿಲೋಕಪುಣ್ಯಪಾಪಶೋಧಕಂ ವಿಭುಮ್
ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥಕಾಲಭೈರವಂ ಭಜೇ
|
ಕನ್ನಡದಲ್ಲಿ :
ಭೂತಗಣಕೆ ನಾಯಕ ಅಪಾರಕೀರ್ತಿದಾಯಕ
ಕಾಶಿವಾಸಿ ಲೋಕಪುಣ್ಯ-ಪಾಪ ಸೋಸುವ ಪ್ರಭು
ನೀತಿಮಾರ್ಗ ಕೋವಿದ ಅನಾದಿ ನೀ ಜಗತ್ಪತಿ
ಕಾಶಿಕಾಪುರದ ನಾಥ ಕಾಲಭೈರವಾ ನಮೋ
|
ವಿವರಣೆ :
ಯಾರು ಭೂತಗಣಗಳ ನಾಯಕನೋ , ಯಾರು ಅಪಾರವಾದ ಕೀರ್ತಿಯನ್ನು ಕರುಣಿಸುವನೋ, ಯಾರು ವಾರಣಾಸಿಯಲ್ಲಿ
ವಾಸಿಸುವವರ ಒಳ್ಳೆಯ ಹಾಗೂ ಕೆಟ್ಟಕರ್ಮಗಳನ್ನು ನಿರ್ಧರಿಸುವ ದೇವನೋ , ಯಾರು ಸನ್ಮಾರ್ಗದ ಬಗ್ಗೆ ನುರಿತವನೋ, ಯಾರು ಅತಿಪುರಾತನ ಮತ್ತು
ಜಗತ್ಪತಿಯೋ, ಆ ಕಾಶೀನಗರದ ಅಧಿಪತಿಯಾದ ಕಾಲಭೈರವನಿಗೆ ನನ್ನ ಪ್ರಣಾಮಗಳು.
|
ಶ್ಲೋಕ - 9 - ಸಂಸ್ಕೃತದಲ್ಲಿ
:
ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ
ಜ್ಞಾನಮುಕ್ತಿಸಾಧಕಂ ವಿಚಿತ್ರಪುಣ್ಯವರ್ಧನಮ್
ಶೋಕಮೋಹಲೋಭದೈನ್ಯಕೋಪತಾಪನಾಶನಂ
ತೇ ಪ್ರಯಾಂತಿ ಕಾಲಭೈರವಾಂಗ್ರಿಸನ್ನಿಧಿಂ ಧ್ರುವಮ್
|
ಕನ್ನಡದಲ್ಲಿ :
ಮನವ ಸೆಳೆವ ಕಾಲಭೈರವಾಷ್ಟಕವಿದ ಪಠಿಸಲು
ಜ್ಞಾನಮುಕ್ತಿ ದೊರೆಯುವುದು ಅನನ್ಯ ಪುಣ್ಯ ಬೆಳೆವುದು
ಶೋಕ ಮೋಹ ಲೋಭ ಕೋಪ ತಾಪ ನಾಶವಾಗುತ
ಕಾಲಭೈರವನ ಪಾದ ಸನ್ನಿಧಿಯನು ಪಡೆವರು
|
ವಿವರಣೆ :
ಯಾರು ಈ ಆಕರ್ಷಣೀಯವಾದ ಶಾಶ್ವತ ಜ್ಞಾನದ ಮೂಲವಾದ ಹಾಗೂ ಸತ್ಕಾರ್ಯಗಳಿಂದುಂಟಾಗುವ
ಪ್ರಭಾವವನ್ನು ಹೆಚ್ಚಿಸುವುದೋ, ಹಾಗೂ ಶೋಕ, ದುಃಖ, ಬಡತನ, ಕೋಪ ಮತ್ತು ಆಸೆಗಳನ್ನು
ನಾಶಗೈವುದೋ, ಆ ಕಾಲಭೈರವನ ಅಷ್ಟೋತ್ತರವನ್ನು ಪಠಿಸುತ್ತಾರೋ ಅವರು ಖಂಡಿತವಾಗಿಯೂ
ಕಾಲಭೈರವನ ದಿವ್ಯಸನ್ನಿಧಿಯನ್ನು ತಲುಪುತ್ತಾರೆ.
|
ಕಾಲಭೈರವ ಪೂಜಾವಿಧಾನ :
ಕಾಲಭೈರವನನ್ನು ಪೂಜಿಸಲು ಅತ್ಯಂತ ಪ್ರಶಸ್ತ ಹಾಗೂ ಮಂಗಳಕರ
ಸಮಯವು ಪ್ರತಿ ಭಾನುವಾರದ ರಾಹುಕಾಲ ( ಸಂಜೆ 4.30 ರಿಂದ 6.00 ). ಸಾಮಾನ್ಯವಾಗಿ ಭಕ್ತರು ಪೂಜೆಗೆ ಹಣ್ಣು,
ಕಾಯಿ, ಸಿಂಧೂರ, ಸಾಸಿವೆ ಎಣ್ಣೆ,
ಕರಿ ಎಳ್ಳು ಇತ್ಯಾದಿಗಳನ್ನು ಕಾಲಭೈರವನ ಪ್ರೀತ್ಯರ್ಥವಾಗಿ ಕೊಂಡೊಯ್ಯುವರು.
ತಂತ್ರದ ಒಂದು ಪಂಗಡ ಹಾಗೂ ಈ ಪಂಥದವರು ಅತಿಮಾನವ ಮತ್ತು ಅತೀಂದ್ರಿಯ
ಧರ್ಮಾಚರಣೆಗಳನ್ನು ಆಚರಿಸಲು ಮೀಸಲಾದ ಪಂಗಡ. ತಾಂತ್ರಿಕ ಪಂಗಡದವರಿಗೆ ಕಾಲಭೈರವನು ಆದ್ಯ ದೈವ. ಭಯವನ್ನು ಹೋಗಲಾಡಿಸಲು, ರೋಗರುಜಿನಗಳಿಂದ ಮುಕ್ತಿಪಡೆಯಲು,
ಶತ್ರುನಾಶ ಹಾಗೂ ಅಭ್ಯುದಯವನ್ನು ಹೊಂದಲು, ಕಾಲಭೈರವನನ್ನು
ಪೂಜಿಸಲು ಕೆಲವು ಗಮನ ಸೆಳೆಯುವ ಮಂತ್ರಗಳಿವೆ. ಅವುಗಳಲ್ಲಿ ಕೆಲವನ್ನು
ಈ ಕೆಳಗೆ ವಿವರಿಸಲು ಪ್ರಯತ್ನಿಸುತ್ತೇನೆ :
ಕಾಲ ಭೈರವ ಬೀಜಾಕ್ಷರಿ ಮಂತ್ರ :
" ಓಂ ಐಂ ಹ್ರಂ ಕ್ಲೀಂ ಶ್ರೀ ಬಾಟುಕಭೈರವಾಯ
" (ಓಂ ನಂತರದ ನಾಲ್ಕು ಉಚ್ಚಾರಗಳನ್ನು ಬೀಜಾಕ್ಷರಿ ಎಂದು ಕರೆಯಲಾಗಿದೆ).
ಈ ಬೀಜ ಮಂತ್ರವು ಕಾಲಭೈರವ ಸ್ವಾಮಿಯಿಂದ ಹೊರಬರುವ ಶಬ್ದ.
" ಓಂ ಹ್ರೀಂ ಬಂ ಬಾಟುಕಾಯ ಅಪದುದ್ದರಣಾಯ
ಕುರು ಕುರು ಬಾಟುಕಾಯ ಹ್ರೀಂ ಓಂ ನಮಃ ಶಿವಾಯ"
" ಓಂ ಹ್ರಂ ಹ್ರೀಂ ಹ್ರೂಂ ಹ್ರೈಂ
ಹ್ರೌಂ ಕ್ಷಂ ಕ್ಷೇತ್ರಪಾಲಾಯ ಕಾಲಭೈರವಾಯ ನಮಃ "
ಕಾಲಭೈರವ ಗಾಯತ್ರಿ ಮಂತ್ರ :
" ಓಂ ಕಾಲಕಾಲಾಯ ವಿದ್ಮಹೇ ಕಾಲಾತೀತಾಯ
ಧೀಮಹಿ ತನ್ನೋ ಕಾಲ ಭೈರವ ಪ್ರಚೋದಯಾತ್ "
ಕಾಲಭೈರವ ಪೂಜೆಯು ತೀವ್ರ ಹಾಗೂ ವಿಸ್ತಾರವಾದದ್ದು. ಪೂಜೆಯನ್ನು ತಾಮ್ರದ ತಗಡಿನ ಮೇಲೆ ಅತೀಂದ್ರಿಯ ರೇಖಾಚಿತ್ರ
ಅಥವಾ ಕಾಲಭೈರವ ಯಂತ್ರಕ್ಕೆ ಪೂಜೆಮಾಡುವರು. ಪೂಜೆಯೊಂದಿಗೆ ಕಾಲಭೈರವ ಮಂತ್ರವನ್ನು
1,25,000 ಬಾರಿ ಸ್ತುತಿಸುತ್ತಾರೆ.
ಕಾಲ ಭೈರವ ಮಂತ್ರವನ್ನು ಸತತ ಪಠಿಸುವವರಿಗೆ ಎಲ್ಲ ಆಸೆಗಳು
ಫಲಿಸಿ ಅಭ್ಯುದಯ ಉಂಟಾಗಿ ಕಡೆಗೆ ಮುಕ್ತಿಯು ದೊರಕುವುದೆಂದು ಫಲಶ್ರುತಿಯು ತಿಳಿಸುತ್ತದೆ.
ಉಜ್ಜೈನಿ ನಗರದ ಶಿಪ್ರಾ ನದಿಯ ದಡದಲ್ಲಿರುವ ಅತಿ ಪುರಾತನ
ಕಾಲಭೈರವ ಮಂದಿರದಲ್ಲಿ ಕಾಲಭೈರವನಿಗೆ ತಾಂತ್ರಿಕ ಪದ್ದತಿಯಂತೆ
ಮಧ್ಯವನ್ನು ಒಂದು ನೇವೇದ್ಯವಾಗಿ ನೀಡಲಾಗುವುದು. ಮದ್ಯವು
ಪಂಚಮಕಾರ ನೈವೇದ್ಯಗಳಲ್ಲಿ ಒಂದು.
ಕರ್ನಾಟಕದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಅತಿದೊಡ್ಡ ಕಾಲಭೈರವ
ಮಂದಿರವಿರುವುದು.
|
ಲೇಖನದ ಮೂಲಗಳು: -
1.
ಸಂಸ್ಕೃತ ಶ್ಲೋಕಗಳು – greenmesg.org , speakingtree.in
2.
ಕನ್ನಡ ಶ್ಲೋಕಗಳು – ಶ್ರೀ.ಬಿ.ಎಸ್,ಚಂದ್ರಶೇಖರ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
3.
ವಿವರಣೆಗಳು - greenmesg.org , speakingtree.in ಗಳಲ್ಲಿರುವ ಆಂಗ್ಲ
ಭಾಷೆಯಲ್ಲಿನ ವಿವರಣೆಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು – ಗುರುಪ್ರಸಾದ್
ಹಾಲ್ಕುರಿಕೆ
ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ --
|
No comments:
Post a Comment