ಲಿಂಗಾಷ್ಟಕ ಸ್ತೋತ್ರ
|
ಲಿಂಗಾಷ್ಟಕಮ್ ಸ್ತೋತ್ರದ ಕುರಿತು:
ಶಿವ ಲಿಂಗಾಷ್ಟಕಮ್ ಸ್ತೋತ್ರವು ಶಿವನಿಗೆ ಸಮರ್ಪಿಸಿದ ಸುಪ್ರಸಿದ್ದ ಭಜನೆ. ಈ ಸ್ತೋತ್ರದಲ್ಲಿ ಭಗವಾನ್ ಶಂಕರನ ಚಿನ್ಹೆಯಾದ ಲಿಂಗದ ಶ್ರೇಷ್ಟತೆಯನ್ನು ವೈಭವೀಕರಿಸಲಾಗಿದೆ. ಒಂದು ನಂಬಿಕೆಯ ಪ್ರಕಾರ ಭಗವಾನ್ ಶಂಕರನು ಆದಿ - ಅಂತ್ಯವಿಲ್ಲದ ಒಂದು ಅಗಾಧವಾದ ಬೆಂಕಿಯ ಕಂಭದ ರೂಪದಲ್ಲಿ ಕಾಣಿಸಿಕೊಂಡ ಎಂದು ವಿವರಿಸಲ್ಪಟ್ಟಿದೆ. ಲಿಂಗವು ನಿರಾಕಾರ ಶಿವನಿಗೆ ಒಂದು ಆಕಾರವನ್ನು ನೀಡುವ ಒಂದು ಪ್ರಯತ್ನ. ಹೇಗೆ ಶಂಖ, ಚಕ್ರಗಳು ವಿಷ್ಣುವಿನ ಚಿನ್ಹೆಯೋ ಹಾಗೇ ಲಿಂಗವೂ ಶಂಕರನ ಚಿನ್ಹೆ.
ಲಿಂಗವನ್ನು ಪುರುಷ ರೂಪದ ಚಿನ್ಹೆಯಾಗಿ, ಶಿವನು ಆದಿಪುರುಷನಾದ್ದರಿಂದ ಅವನ ಚಿನ್ಹೆಯಾಗಿರುವುದು. ಪರಬ್ರಹ್ಮನು, ನಿರ್ಗುಣನೆಂದು ಪರಿಗಣಿಸಿದರೂ, ಆ ಶಕ್ತಿಯು ಸಗುಣ ರೂಪದಲ್ಲಿ ಕಾಣಿಸಿಕೊಳ್ಳಬೇಕೆಂದು ನಿರ್ಧರಿಸಿದಾಗ (ಕಾರಣವು ಸಾಮಾನ್ಯ ಮಾನವನ ಕಲ್ಪನೆಗೆ ದೂರವಾದದ್ದು) ನಮಗೆ ಪುರುಷ ಮತ್ತು ಪ್ರಕೃತಿ (ಸ್ತ್ರೀ ) ರೂಪದಲ್ಲಿ ಕಂಡುಬರುವುದು ಮತ್ತು ಇದರೊಂದಿಗೆ ತ್ರಿಮೂರ್ತಿಗಳಾದ (ಸೃಷ್ಟಿ, ಸ್ಥಿತಿ ಹಾಗೂ ವಿನಾಶಗಳೂ) ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ದೇವಿಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು, ಕಂಡುಬರುವರು.
ಭೌತವಿಜ್ಞಾನಿಯ ದೃಷ್ಟಿಯಲ್ಲಿ ಪರಿಶುದ್ಧ ಶಕ್ತಿಯು ( ಒಂದೇ ಬಣ್ಣದ್ದಲ್ಲ, ಆದರೆ ಪರಿಪೂರ್ಣವಾದ Electromagnetic spectrum, ಅಂದರೆ, ಪರಿಶುದ್ಧವಾದ ಬಿಳೀ ಬೆಳಕು) ನಿರ್ಗುಣ ಪರಬ್ರಹ್ಮನಿಗೆ ಹತ್ತಿರವಾದದ್ದು. ಅದೇರೀತಿ ಭೌತವಸ್ತುವು, ಸಗುಣ ರೂಪದ್ದು. ಬಿಳಿ ಬೆಳಕು ವಿಭಜನೆಗೊಂಡು ಅನೇಕ ಬಣ್ಣಗಳಾದಾಗ ನಮಗೆ ದೊರಕುವುದು ಗುಣಗಳು. ಈ ವಿಧದ ಬಣ್ಣದ ಬೆಳಕಿನಲ್ಲಿ ಸಕಾರಾತ್ಮಕ ಕಣಗಳು (ಪುರುಷ ಎಂದು ಅರಿಯಬಹುದು), ನಕಾರಾತ್ಮಕ ಕಣಗಳು ( ಸ್ತ್ರೀ ಎಂದು ಭಾವಿಸಬಹುದು ) ಹಾಗೂ ಅಲಿಪ್ತ ಕಣಗಳು, ಪುರುಷ-ಪ್ರಕೃತಿಯ ಜೋಡಿ ಅಂದರೆ ಅರ್ಧನಾರೀಶ್ವರ ತತ್ವ.
ಶೈವ ಸಂಪ್ರದಾಯದಲ್ಲಿ ಶಿವನನ್ನು ಅತ್ಯುನ್ನತ ದೈವವೆಂದು ಪರಿಗಣಿಸಿ ಪೂಜಿಸಲ್ಪಡುತ್ತಾನೆ. ಸ್ಮಾರ್ತ ಸಂಪ್ರದಾಯದಲ್ಲಿ ಶಿವನು ದೈವದ ಐದು ರೂಪಗಳಲ್ಲೊಂದು. ಶಿವನನ್ನು ಸಾಮಾನ್ಯವಾಗಿ ತೀವ್ರ ಧ್ಯಾನಾಸಕ್ತ ನಾಗಿರುವಂತೆಯೋ ಅಥವಾ ಅಜ್ಞಾನವನ್ನು ಪ್ರತಿನಿಧಿಸುವ ಮಾಯ ದೈತ್ಯನ ಮೇಲೆ ನಿಂತು ನಟರಾಜ ಭಂಗಿಯಲ್ಲಿ ನಾಟ್ಯವಾಡುತ್ತಿರುವಂತೆಯೋ ಅನೇಕ ಮಂದಿರಗಳಲ್ಲಿ ತೋರ್ಪಟ್ಟರೂ ಅವನನ್ನು ಅಭಿಷೇಕ, ಪತ್ರ, ಪುಷ್ಪಗಳಿಂದ ಪೂಜಿಸುವುದು ಲಿಂಗರೂಪದಲ್ಲಿ ಮಾತ್ರ. ಹೆಸರೇ ಹೇಳುವಂತೆ ಈ ಸ್ತೋತ್ರವು ಎಂಟು ಶ್ಲೋಕಗಳಿಂದ ಕೂಡಿದ್ದು ಶಿವರಾತ್ರೆಯಂದು ಭಕ್ತಿಯಿಂದ ಭಜಿಸಿದಲ್ಲಿ ಮೋಕ್ಷ ಪ್ರಾಪ್ತಿಯಾಗುವುದೆಂಬ ನಂಬಿಕೆ.
|
ಶ್ಲೋಕ - 1 - ಸಂಸ್ಕೃತದಲ್ಲಿ:
ಬ್ರಹ್ಮಮುರಾರಿಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್
ಜನ್ಮಜ ದುಃಖವಿನಾಶಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಕಮಲಜ ಹರಿಸುರ ಪೂಜಿತ ಲಿಂಗಕೆ
ವಿಮಲತೆ ಬೆಳಗುತ ಶೋಭಿಪ ಲಿಂಗಕೆ
ಜನುಮದ ದುಃಖ ನಿವಾರಿಪ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ಬ್ರಹ್ಮ, ವಿಷ್ಣು ಹಾಗೂ ಎಲ್ಲ ದೇವಾನುದೇವತೆಗಳೂ ಪೂಜಿಸುವ ಹಾಗೂ ಪರಿಶುದ್ಧವಾದ, ಜಾಜ್ವಲ್ಯಮಾನವಾದ ಮತ್ತು ಜನನದ ನಂತರ ಎದುರಾಗುವ ಎಲ್ಲ ವ್ಯಸನಗಳನ್ನು ಸಂಪೂರ್ಣವಾಗಿ ನಾಶಮಾಡುವ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 2 - ಸಂಸ್ಕೃತದಲ್ಲಿ:
ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹಂ ಕರುಣಾಕರ ಲಿಂಗಮ್
ರಾವಣದರ್ಪವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಸುರಮುನಿ ಗಡಣವು ಪಾಡುವ ಲಿಂಗಕೆ
ಸ್ಮರಹರ ಕರುಣೆಯ ಹರಿಸುವ ಲಿಂಗಕೆ
ದಶಶಿರ ಗರ್ವವ ಮುರಿಸಿದ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ಎಲ್ಲ ಮಹರ್ಷಿಗಳು ಮತ್ತು ದೇವತೆಗಳು ಪೂಜಿಸುವ, ಪ್ರೇಮ - ದೇವತೆಯನ್ನು ನಾಶಪಡಿಸಿದ, ದಯೆ, ಕರುಣೆಗಳ ವರ್ಷಧಾರೆಯನ್ನೇ ಹರಿಸುವ, ದಶಕಂಠ ರಾವಣನ ಅಹಂಕಾರವನ್ನು ನಾಶಮಾಡಿದ, ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 3 - ಸಂಸ್ಕೃತದಲ್ಲಿ:
ಸರ್ವ ಸುಗಂಧಿ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಮ್
ಸಿದ್ಧಸುರಾಸುರ ವಂದಿತ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಎಲ್ಲ ಸುಗಂಧವ ಪೂಸಿದ ಲಿಂಗಕೆ
ಬುದ್ಧಿಯ ಬೆಳೆಸುವ ಕಾರಣ ಲಿಂಗಕೆ
ಸಿದ್ಧ ಸುರಾಸುರ ವಂದಿತ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ದಿವ್ಯ ಪರಿಮಳ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಲ್ಪಟ್ಟ ಹಾಗೂ ಜ್ಞಾನದ ಬೆಳವಣಿಗೆಗೆ ಕಾರಣವಾದ, ದೇವಾನುದೇವತೆಗಳು, ಋಷಿಮುನಿಗಳು, ಸಿದ್ಧ, ಗಂಧರ್ವ, ಕಿನ್ನರ ಹಾಗೂ ಕಿಂಪುರುಷರಿಂದ ಪೂಜಿಸಲ್ಪಡುವ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 4 - ಸಂಸ್ಕೃತದಲ್ಲಿ:
ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿವೇಷ್ಟಿತ ಶೋಭಿತ ಲಿಂಗಮ್
ದಕ್ಷಸುಯಜ್ಞ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಹೊನ್ನಲಿ ರನ್ನದಿ ಹೊಳೆಯುವ ಲಿಂಗಕೆ
ಪನ್ನಗ ಶಿರದಲಿ ನಲಿಯುವ ಲಿಂಗಕೆ
ದಕ್ಷನ ಯಜ್ಞವನಳಿಸಿದ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ
ಯಾರನ್ನು ಬಂಗಾರ ಮತ್ತು ವಜ್ರ , ವೈಢೂರ್ಯಗಳಿಂದ ಕೂಡಿದ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆಯೋ, ಯಾರ ಬಳಿ ಸರ್ಪವು ಪ್ರಜ್ವಲಿಸುತ್ತಿದೆಯೋ, ಹಾಗೂ ಯಾರು ದಕ್ಷನ ಯಜ್ಞವನ್ನು ನಾಶಮಾಡಿದನೋ ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 5 - ಸಂಸ್ಕೃತದಲ್ಲಿ:
ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜಹಾರ ಸುಶೋಭಿತ ಲಿಂಗಮ್
ಸಂಚಿತಪಾಪ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಕುಂಕುಮ ಚಂದನ ತಳೆದಿಹ ಲಿಂಗಕೆ
ಪಂಕಜ ಹಾರದಿ ಶೋಭಿಪ ಲಿಂಗಕೆ
ಸಂಚಿತ ಪಾಪವನುರಿಸುವ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ಯಾರನ್ನು ಸುಗಂಧ ಮತ್ತು ಕೇಸರಿಯಿಂದ ಅಲಂಕರಿಸಲ್ಪಟ್ಟಿದೆಯೋ, ಯಾರು ಪದ್ಮ ಪುಷ್ಪಗಳಿಂದ ಕೂಡಿದ ಸುಗಂಧ-ಪರಿಮಳಯುಕ್ತ ಮಾಲೆಯನ್ನು ಧರಿಸಿರುವನೋ, ಯಾರು ಸಂಚಿತ ಕರ್ಮಗಳನ್ನು ಸಂಪೂರ್ಣವಾಗಿ ನಾಶಮಾಡುವನೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 6 - ಸಂಸ್ಕೃತದಲ್ಲಿ:
ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಮ್
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಸುರಗಣ ಪೂಜೆಯ ಸಲ್ಲುವ ಲಿಂಗಕೆ
ಭಕುತಿಯ ಭಾವವ ಸ್ಫುರಿಸುವ ಲಿಂಗಕೆ
ಅಗಣಿತ ಸೂರ್ಯರ ಪ್ರಭೆಯಿಹ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ಯಾರು ದೇವತೆಗಳು ಶಿವಗಣಗಳು ಹಾಗೂ ಉಳಿದೆಲ್ಲರಿಂದ ಸೇವಿಸಲ್ಪಡುವನೋ, ಯಾರು ಭಕ್ತಿ, ಜ್ಞಾನ, ವೈರಾಗ್ಯಗಳಿಗೆ ಮಾರ್ಗದರ್ಶಕನೋ, ಯಾರು ಕೋಟಿ ಸೂರ್ಯರ ಬೆಳಕಿನಂತೆ ಪ್ರಜ್ವಲಿಸುವರೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 7 - ಸಂಸ್ಕೃತದಲ್ಲಿ:
ಅಷ್ಟದಲೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಮ್
ಅಷ್ಟದರಿದ್ರವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಎಂಟೆಸಳಿನ ಆವರಣದ ಲಿಂಗಕೆ
ಎಲ್ಲದರುಧ್ಬವ ಕಾರಣ ಲಿಂಗಕೆ
ಎಂಟು ದರಿದ್ರವ ತೊಲಗಿಪ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ಯಾರು ಎಂಟು ದಳ ಪುಷ್ಪಗಳಿಂದ ಸುತ್ತುವರಿದಿರುವರೋ, ಯಾರು ಎಲ್ಲ ಭೋಗ ಭಾಗ್ಯಗಳಿಗೆ ಪ್ರಮುಖ ಕಾರಣವೋ, ಯಾರು ತನ್ನ ಭಕ್ತರ ಎಂಟು ವಿಧದ ದಾರಿದ್ರ್ಯವನ್ನು ನಾಶಮಾಡುವರೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶ್ಲೋಕ - 8 - ಸಂಸ್ಕೃತದಲ್ಲಿ:
ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್
ಪರಮಪದಂತ್ಪರಂ ಪರಮಾತ್ಮಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಮ್
|
ಕನ್ನಡದಲ್ಲಿ :
ಸುರಗುರು ಸುರಗಣ ಪೂಜಿಪ ಲಿಂಗಕೆ
ಸುರವನ ಕುಸುಮದಲರ್ಚಿತ ಲಿಂಗಕೆ
ಪರಮನೆಲೆಯಹ ಪರಮಾತ್ಮ ಲಿಂಗಕೆ
ಎರಗುವೆನದಕೆ ಸದಾಶಿವ ಲಿಂಗಕೆ
|
ವಿವರಣೆ :
ಯಾರು ದೇವತೆಗಳ ಗುರುವಿನಿಂದ ಪೂಜಿಸಲ್ಪಡುತ್ತಾರೋ, ಯಾರು ದೇವೋತ್ತಮನಿಂದ ಪೂಜೆಗೊಳ್ಳುತ್ತಾರೋ, ಯಾರನ್ನು ಸದಾ ದೇವಲೋಕದ ಹೂ ತೋಟದಿಂದ ಆಯ್ದ ಪುಷ್ಪಗಳಿಂದಲೇ ಪೂಜಿಸುತ್ತಾರೋ, ಯಾರು ಪರಮ ಸತ್ಯವೋ, ಆ ಚಿರಂತನವಾದ ಲಿಂಗರೂಪಿ ಶಿವನಿಗೆ ನಾನು ಶಿರಸಾ ನಮಸ್ಕರಿಸುವೆ.
|
ಶಿವ ಮತ್ತು ಶಿವ ಲಿಂಗದ ವೈಶಿಷ್ಟ್ಯತೆ:
ಭಗವಾನ್ ಶಂಕರನು ಸತತವಾಗಿ ವಿಶ್ವದ ಸೃಷ್ಟಿ, ಸ್ಥಿತಿ, ವಿನಾಶ ಹಾಗೂ ಮರು-ಸೃಷ್ಟಿಯ ಆವರ್ತಕ ಪ್ರಕ್ರಿಯೆಗಳಲ್ಲಿ ತೊಡಗಿರುವ ಅತ್ಯುನ್ನತ ದೈವ.
ಬ್ರಹ್ಮಾಂಡದ ಸೃಷ್ಟಿ ಮತ್ತು ವಿಸರ್ಜನೆಯಲ್ಲಿ ತೊಡಗಿರುವ ಶಿವನಿಗೆ ಕೆಲವುಬಾರಿ ಇವನು ಕೇವಲ ವಿಶ್ವದ ವಿನಾಶವನ್ನು ಮಾತ್ರ ಮಾಡುವನೆಂದು ತಪ್ಪಾಗಿ ಅರ್ಥೈಸಲಾಗುವುದು. ಈ ತಪ್ಪು ಕಲ್ಪನೆಯು ಕೆಲವರಿಗೆ ಬ್ರಹ್ಮಾಂಡದ ಚಟುವಟಿಕೆಗಳ ಬಗ್ಗೆ ಶಿವನ ಪಾತ್ರದ ಸರಿಯಾದ ಕಲ್ಪನೆ ಇರುವುದಿಲ್ಲವಾದ್ದರಿಂದ. ವಿಶ್ವದ ಸೃಷ್ಟಿಯು ಒಳ್ಳೆಯ ಹಾಗೂ ಕೆಟ್ಟ ಶಕ್ತಿಗಳ ನಡುವಿನ ಸೂಕ್ಷ್ಮ ಸಮತೋಲನವು ಏರು ಪೇರುಗಳ ಆಧಾರದ ಮೇಲೆ ಅವಲಂಬಿಸಿರುತ್ತದೆ. ಈ ಸಮತೋಲನವು ಕದಡಿದಾಗ ಹಾಗೂ ಅದರಿಂದಾಗಿ ವಿಶ್ವದ ಪೋಷಣೆಯು ಅಸಾಧ್ಯವಾದಾಗ ಭಗವಾನ್ ಶಂಕರನು ವಿಶ್ವವನ್ನು ವಿಸರ್ಜಿಸಿ ಸೃಷ್ಟಿಯ ಮತ್ತೊಂದು ಆವೃತ್ತಿಯನ್ನು ಪ್ರಾರಂಬಿಸುತ್ತಾನೆ ಹಾಗೂ ಇದರಿಂದಾಗಿ ಮುಕ್ತಿಕಾಣದ ಅನೇಕ ಆತ್ಮಗಳಿಗೆ ಐಹಿಕ ಪ್ರಪಂಚದ ಬಂಧನದಿಂದ ಬಿಡುಗಡೆಯನ್ನು ಪಡೆಯಲು ಮತ್ತೊಂದು ಅವಕಾಶ ದೊರಕುತ್ತದೆ. ಹಾಗಾಗಿ ಭಗವಾನ್ ಶಂಕರನು ನಿಷ್ಕ್ರಿಯ ವಿಶ್ವದಿಂದಾಗಿ ಬಂಧನದಲ್ಲಿ ಸಿಲುಕಿರುವ ಆತ್ಮಗಳಿಗೆ ಉಂಟಾಗುವ ಯಾತನೆ ಹಾಗೂ ಬಳಲಿಕೆಗಳಿಂದ ರಕ್ಷಣೆಯನ್ನು ನೀಡುತ್ತಾನೆ. ಇದನ್ನೇ ಹೋಲುವ ಆವರ್ತನೆಯ ಪ್ರಕ್ರಿಯೆಯೆಂದರೆ ವಸಂತ ಕಾಲವು ಬರಬೇಕಿದ್ದರೆ ಶಿಶಿರ ಋತುವು ಬೇಕೇ ಬೇಕು ಹಾಗೇ ಹಗಲಿಗೆ ಮುಂಚೆ ರಾತ್ರೆ ಆಗಲೇಬೇಕು. ಇನ್ನಷ್ಟು ಸ್ಪಷ್ಟ ಪಡಿಸಬೇಕೆಂದರೆ ಹೇಗೆ ಅಕ್ಕಸಾಲಿಗನು ಹಳೇ ಬಂಗಾರದ ಒಡವೆಯನ್ನು ಕರಗಿಸಿ ಹೊಸ ಆಭರಣವನ್ನು ತಯಾರು ಮಾಡುವಾಗ ಬಂಗಾರವನ್ನು ನಾಶಮಾಡುವುದಿಲ್ಲವೋ ಹಾಗೇ ಸೃಷ್ಟಿ ಕ್ರಿಯೆಯೂ ಸಹ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
|
ಲೇಖನದ ಮೂಲಗಳು : -
ಸಂಸ್ಕೃತ ಶ್ಲೋಕಗಳು : saivisim.net
ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ “ಸವಿಗನ್ನಡ ಸ್ತೋತ್ರಚಂದ್ರಿಕೆ”
ವಿವರಣೆಗಳು : saivism.net
ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ : -
|
Very beautifully traslated meaning in Kannada. Its helps lot of People to chant with Bhakti & Bhava once we understand the meaning.
ReplyDeleteDeep Gratitude....